ಕಾರವಾರ ಕ್ರಿಮ್ಸ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಮಗು ಮೃತ್ಯು: ಕುಟುಂಬದವರಿಂದ ಪ್ರತಿಭಟನೆ

Update: 2023-07-20 15:09 GMT

ಕಾರವಾರ: ನಗರದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)ಯಲ್ಲಿ ಮೂರು ತಿಂಗಳ ಮಗು ಮೃತಪಟ್ಟ ಘಟನೆ ನಡೆಸಿದ್ದು ಆಕ್ರೋಶಗೊಂಡ ಪಾಲಕರು, ಕುಟುಂಬದವರು ಮಗುವಿನ ಮೃತದೇಹವನ್ನು ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕಿನ್ನರ ಮೂಲದ ರಾಜೇಶ ನಾಗೇಕರ್ ಅವರ ಮೂರು ತಿಂಗಳ ಗಂಡು ಮಗು ರಾಜನ್ ನಾಗೇಕರ್ ಗೆ ಕಫ ತುಂಬಿಕೊಂಡಿತ್ತು. ಮಕ್ಕಳ ವೆಂಟಿಲೇಟರ್ ಆಂಬುಲೆನ್ಸ್ ಇಲ್ಲದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಮಗುವಿನ ತಂದೆ ರಾಜೇಶ ನಾಗೇಕರ ಆರೋಪಿಸಿದ್ದಾರೆ.

ಮೂರು ದಿನಗಳಿಂದ ಇಲ್ಲಿನ ಮೆಡಿಕಲ್ ಕಾಲೇಜ್ ನ ಮಕ್ಕಳ ವಿಶೇಷ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒಳಪಡಿಸಲಾಗಿತ್ತು.ಕಳೆದ ಬುಧವಾರ ಮಗುವಿನ ಆರೋಗ್ಯ ಹದಗೆಟ್ಟ ಕಾರಣದಿಂದ ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯಲು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಶಿಫಾರಸು ಮಾಡಿದ್ದರು. ಆದರೆ, ಸರ್ಕಾರಿ ಮೆಡಿಕಲ್‌ ಕಾಲೇಜ್ ನಲ್ಲಿ ಮಕ್ಕಳ ವಿಶೇಷ ಆಂಬುಲೆನ್ಸ್ ಸೌಕರ್ಯ ಇಲ್ಲದ ಕಾರಣ ಉಡುಪಿಯಿಂದ ಆಂಬುಲೆನ್ಸ್ ತರಿಸಲಾಯಿತು. ಅಷ್ಟರಲ್ಲಿ ಮಗು ಮೃತಪಟ್ಟಿದೆ.

ಆಸ್ಪತ್ರೆಯಲ್ಲಿ ಮಕ್ಕಳ ಆಂಬುಲೆನ್ಸ್ ಸೌಲಭ್ಯ ಇಲ್ಲದಿರುವುದೇ ಮಗುವಿನ ಸಾವಿಗೆ ಕಾರಣ ಎಂದು ಪಾಲಕರು ಆಕ್ಷೇಪಿಸಿದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ಆರು ತಿಂಗಳ ಹಿಂದೆ ಕ್ರಿಮ್ಸ್ ನಲ್ಲಿ ಮಕ್ಕಳವಿಶೇಷ ತುರ್ತು ನಿಗಾ ಘಟಕ ಪ್ರಾರಂಭಿಸಲಾಗಿದೆ. ಇದರಿಂದ ಇಲ್ಲಿಯವರೆಗೆ ಸಾಕಷ್ಟು ಮಕ್ಕಳ ಜೀವ ಉಳಿಸಲಾಗಿದೆ. ಈ ಮಗುವಿಗೂ ಚಿಕಿತ್ಸೆ ನೀಡಿದರೂ ನಮ್ಮ ಕೈ ಮೀರಿತು. ನಮ್ಮಲ್ಲಿ ಮಕ್ಕಳ ವೆಂಟಿಲೇಟರ್ ಇರುವ ಆಂಬುಲೆನ್ಸ್ ಇಲ್ಲ. ಅದಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಕ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಮರೋಳ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News