ಬಾಬಾಬುಡಾನ್ ದರ್ಗಾ: ಸೌಹಾರ್ದದ ಇತಿಹಾಸ ಮತ್ತು ರಾಜಕೀಯದ ವರ್ತಮಾನ

Update: 2023-11-28 05:06 GMT
Editor : Thouheed | Byline : ಆರ್. ಜೀವಿ

ಸೋಲಿನ ನಂತರ ಮುಸ್ಲಿಮರ ವಿರುದ್ಧ ಸಿಟ್ಟಾಗಿರುವ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೂ ಆಗಿದೆ. ‘ಜಾತ್ಯತೀತ’ ಎಂಬ ಹೆಸರಿನೊಂದಿಗಿದ್ದ ಅವರ ಪಕ್ಷ ಅಸ್ತಿತ್ವಕ್ಕೆ ಬಂದಿದ್ದೇ ಎನ್‌ಡಿಎ ಜೊತೆ ಹೋಗದಿರುವ ನಿಲುವಿನಿಂದ. ಆದರೆ ಈಗ ಅದು ಎನ್‌ಡಿಎ ಭಾಗ. ಕುಮಾರಸ್ವಾಮಿಯವರ ಆಲೋಚನೆಗಳಂತೂ ಈಗ ಆರೆಸ್ಸೆಸ್ ಜೊತೆ ವಿಲೀನವಾಗಿಬಿಟ್ಟಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಇದೆಲ್ಲವೂ ಹೌದೆಂಬಂತೆ, ಕುಮಾರಸ್ವಾಮಿಯವರು ಈಗ ದತ್ತಮಾಲೆಯನ್ನೂ ಹಾಕುತ್ತೇನೆ ಎಂದು ಹೇಳಿದ್ದಾರೆ. ‘‘ದತ್ತಮಾಲೆ ಧರಿಸುವುದು ದೇವರ ಕೆಲಸ. ಇದು ಅಕ್ರಮವಲ್ಲ. ನಾನು ಯಾವುದೇ ಕಾನೂನು ಬಾಹಿರ ಕೆಲಸದಲ್ಲಿ ತೊಡಗುವುದಿಲ್ಲ. ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ’’ ಎಂದಿದ್ದಾರೆ.

ದತ್ತಮಾಲಾ ಧಾರಣೆಯನ್ನು ಯಾಕೆ ಮಾಡಬಾರದು ಎಂಬ ಎಚ್‌ಡಿಕೆ ಹೇಳಿಕೆಗೆ ಹಿಂದುತ್ವ ಸಂಘಟನೆಗಳ ಮುಖಂಡರು, ಬಜರಂಗದಳ, ವಿಶ್ವಹಿಂದೂ ಪರಿಷತ್ ಹರ್ಷ ವ್ಯಕ್ತಪಡಿಸಿದ್ದು, ಆಹ್ವಾನ ನೀಡುವ ಸಾಧ್ಯತೆಯಿದೆ. ಡಿಸೆಂಬರ್ 17ರಿಂದ 26ರವರೆಗೆ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಕುಮಾರಸ್ವಾಮಿ ದತ್ತಮಾಲಾಧಾರಿಯಾಗಿ ಪಾಲ್ಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಏನಿದು ದತ್ತಮಾಲೆ?:

ಚಿಕ್ಕಮಗಳೂರು ಜಿಲ್ಲೆಯಲ್ಲಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡಾನ್‌ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾ, ಇನಾಂ ದತ್ತಪೀಠ ಸಂಪೂರ್ಣ ಹಿಂದೂ ಪೀಠವಾಗಬೇಕೆಂದು ಆಗ್ರಹಿಸಿ ಪ್ರತೀ ವರ್ಷ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ದತ್ತಮಾಲೆ ಧರಿಸುತ್ತಾರೆ.

ಕುಮಾರಸ್ವಾಮಿ ಈ ಹಿಂದೆ

ಏನು ಹೇಳಿದ್ದರು?

2018ರ ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರ ಸಂಬಂಧ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿನ ಜೆಡಿಎಸ್ ಸಮಾವೇಶದ ವೇಳೆ ಅವರು ಹೇಳಿದ್ದು ಹೀಗಿತ್ತು:

‘‘ಇವರು ಶ್ರೀರಾಮನ ಹೆಸರಿನಲ್ಲಿ ಪ್ರತೀ ವರ್ಷ ಮಾಲೆ ಬೇರೆ ಹಾಕುತ್ತಾರೆ. ಮಾಲೆ ಹಾಕಿಕೊಂಡು ತಾಳ ಬಡಿದುಕೊಂಡು ಚಿಕ್ಕಮಗಳೂರಿನ ಬೀದಿಯಲ್ಲಿ ಹೋಗುತ್ತಾರೆ. ಅದನ್ನು ನೀವು ಮೆಚ್ಚಿಕೊಳ್ಳುತ್ತೀರಾ? ಭಿಕ್ಷೆ ಬೇರೆ ಬೇಡುತ್ತಾರೆ. ಅದೆಂತದೋ ದತ್ತಮಾಲೆ ಹಾಕೊಂಡು ಮನೆಮನೆಗೆ ಹೋಗಿ ಭಿಕ್ಷೆ ಬೇರೆ ಬೇಡುತ್ತಾರಂತೆ. ದೇವರೇ ಕಾಪಾಡಬೇಕು. ಕೈಜೋಡಿಸಿ ಮನವಿ ಮಾಡುತ್ತೇನೆ ಇದೆಲ್ಲ ಬೇಡ ನಮಗೆ. ಮೊದಲು ನೀವು ಉಳಿದರೆ ತಾನೇ ದೇವರನ್ನು ಉಳಿಸಲು ಸಾಧ್ಯ?’’

ಅಲ್ಲದೆ, ಆರೆಸ್ಸೆಸ್, ವಿಎಚ್‌ಪಿ ಮತ್ತು ಬಜರಂಗದಳದ ಮೇಲೆ ವಿವಿಧ ವಿಚಾರವಾಗಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಹಿಂದೂ ಕಾರ್ಯಕರ್ತರು ರಾಮ ಮಂದಿರದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದು, ಅದಕ್ಕೆ ಕೊಡುಗೆ ನೀಡದವರನ್ನು ಸೇಡು ತೀರಿಸಿಕೊಳ್ಳಲು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 2023ರ ಎಪ್ರಿಲ್‌ನಲ್ಲಿ, ‘ಹಲಾಲ್ ಕಟ್’ ವಿಷಯದ ಕುರಿತು ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ‘‘ಈ ಸಂಘಟನೆಗಳು ಸಮಾಜವನ್ನು ವಿಭಜಿಸುತ್ತಿವೆ’’ ಎಂದು ಆರೋಪಿಸಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಕೋಮು ರಾಜಕಾರಣದ ಭಾಗವಾಗಿ ಈ ಸೌಹಾರ್ದ ಕೇಂದ್ರವನ್ನು ಅಶಾಂತಿ ಮತ್ತು ಕೋಮುಗಲಭೆಯ ತಾಣವನ್ನಾಗಿ ಮಾಡಲು ಬಲಪಂಥೀಯ ಶಕ್ತಿಗಳು ಕಳೆದ ಮೂರು ದಶಕಗಳಿಂದ ಸತತ ಪ್ರಯತ್ನಗಳನ್ನು ನಡೆಸುತ್ತಿವೆ. ಅದರಲ್ಲೂ ೨೦೦೩ ರಲ್ಲಿ ಬಾಬಾಬುಡಾನ್ ದರ್ಗಾವನ್ನು ಕರ್ನಾಟಕದ ಅಯೋಧ್ಯೆಯನ್ನಾಗಿಯೂ ಮತ್ತು ಕರ್ನಾಟಕವನ್ನು ದಕ್ಷಿಣದ ಗುಜರಾತನ್ನಾಗಿಯೂ ಮಾಡುವುದಾಗಿ ಬಿಜೆಪಿಯು ಬಹಿರಂಗವಾಗಿ ಘೋಷಿಸಿತು. ಆನಂತರವಂತೂ ಬಲಪಂಥೀಯ ಸಂಘಟನೆಗಳು ತಮ್ಮ ಅಧಿಕಾರ, ಹಣ ಮತ್ತು ಜನಬಲವನ್ನು ಬಳಸಿಕೊಂಡು ಅತ್ಯಂತ ಯೋಜಿತವಾಗಿ ಇಲ್ಲಿನ ಮತೀಯ ಸೌಹಾರ್ದವನ್ನು ಹಾಳುಮಾಡುತ್ತಾ ಬರುತ್ತಿವೆ.

ಬಾಬಾಬುಡಾನ್ ದರ್ಗಾ ವಿವಾದದ ಇತಿಹಾಸ ಏನು?

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡಾನ್ ಗಿರಿಶ್ರೇಣಿಯಲ್ಲಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡಾನ್‌ಸ್ವಾಮಿ ದರ್ಗಾ ರಾಜ್ಯದ ಮಾತ್ರವಲ್ಲದೆ ದೇಶದ ಅತ್ಯುನ್ನತ ಕೋಮು ಸೌಹಾರ್ದ ಕೇಂದ್ರವಾಗಿತ್ತು. ಈ ದರ್ಗಾಕ್ಕೆ ನೂರಾರು ವರ್ಷಗಳಿಂದ ದೇಶದೆಲ್ಲೆಡೆಯಿಂದ ಮುಸ್ಲಿಮರು ಮತ್ತು ಹಿಂದೂ ಧರ್ಮದ ತಳಸಮುದಾಯದವರು ಭಕ್ತಿ ಶ್ರದ್ಧೆಗಳಿಂದ ನಡೆದುಕೊಂಡು ಬರುತ್ತಿದ್ದಾರೆ.

ಉದಾಹರಣೆಗೆ ರಾಜ್ಯ ಪತ್ರಗಾರದಲ್ಲಿನ ಆಡಳಿತಾತ್ಮಕ ದಾಖಲೆಯೊಂದು 1904-05ರಲ್ಲಿ ಈ ದರ್ಗಾಕ್ಕೆ ಭೇಟಿ ನೀಡಿದ ಭಕ್ತರ ಪಟ್ಟಿಯೊಂದನ್ನು ನೀಡುತ್ತದೆ. ಅದರ ಪ್ರಕಾರ ಆ ವರ್ಷ ಒಟ್ಟು 9,788 ಭಕ್ತರು ದರ್ಗಾಕ್ಕೆ ಭೇಟಿ ನೀಡಿದ್ದರು. ಅವರಲ್ಲಿ 7,237 ಜನರು ಮುಸ್ಲಿಮರು, 638 ಹಿಂದೂಗಳು, ಅದರಲ್ಲೂ 83 ಬ್ರಾಹ್ಮಣರು, 140 ಗೋಸಯಿಗಳು, 984 ಫಕೀರರು ಮತ್ತು 706 ಪರಯ್ಯಾಗಳು ಇದ್ದರು. ಹೇಗೆ ಈ ಸ್ಥಳ ಎರಡೂ ಧರ್ಮಗಳ ತಳಸಮುದಾಯಗಳ ಶ್ರದ್ಧಾ ಕೇಂದ್ರವಾಗಿತ್ತೆಂಬುದಕ್ಕೆ ಇದು ನಿದರ್ಶನ.

ಹಲವು ನೂರು ವರ್ಷಗಳಿಂದ ಸೂಫಿ ಧರ್ಮಗುರುಗಳು ಅದರ ಶಾಖಾದ್ರಿಗಳಾಗಿ ದರ್ಗಾದ ಧಾರ್ಮಿಕ ಮತ್ತು ಆಡಳಿತಾತ್ಮಕ ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಎಲ್ಲಾ ಐತಿಹಾಸಿಕ ದಾಖಲೆಗಳು, ಆಡಳಿತಾತ್ಮಕ ಸನ್ನದುಗಳು, ಬ್ರಿಟಿಷ್ ಮತ್ತು ಸ್ವತಂತ್ರ ಭಾರತದ ಕಾನೂನು ದಾಖಲೆಗಳು ಸಾಬೀತು ಮಾಡುತ್ತವೆ. ವಾಸ್ತವವೆಂದರೆ, ಪ್ರಕರಣವೊಂದರಲ್ಲಿ ಹೈಕೋರ್ಟಿನ ಆದೇಶದನ್ವಯ ದರ್ಗಾದ ರೀತಿ ರಿವಾಜುಗಳ ಬಗ್ಗೆ ತನಿಖೆ ನಡೆಸಿದ ಮುಜರಾಯಿ ಆಯುಕ್ತರು ತಮ್ಮ 1989ರ ಫೆಬ್ರವರಿ 25ರ ಆದೇಶದಲ್ಲೂ ಈ ವಾಸ್ತವವನ್ನೇ ಸೂತ್ರೀಕರಿಸಿದ್ದಾರೆ. ಈ ಸತ್ಯವನ್ನು ಇತ್ತೀಚಿನವರೆಗೆ ಬಲಪಂಥೀಯ ಸಂಘಟನೆಗಳೂ ಪ್ರಶ್ನಿಸಿರಲಿಲ್ಲ.

ಬಾಬಾಬುಡಾನ್‌ಗಿರಿ ಪರಿಸರದಲ್ಲಿನ ಸಾರ್ವಜನಿಕ ಆಚರಣೆಯೆಂದರೆ ಅದು ಉರೂಸ್ ಮಾತ್ರವಾಗಿತ್ತು. ಹಿಂದೂ ಮುಸ್ಲಿಮರಿಬ್ಬರೂ ಅದರಲ್ಲಿ ಭಾಗವಹಿಸುತ್ತಿದ್ದರು. ಆದರೆ, ಧರ್ಮವನ್ನು ಮೀರಿ ಹಿಂದೂ-ಮುಸ್ಲಿಮರು ಒಟ್ಟಿಗೆ ಪೂಜಿಸುವ ಬಾಬಾ ಬುಡಾನ್‌ಗಿರಿಯನ್ನು ದತ್ತಪೀಠ ಮಾಡಲು ಸಂಘ ಪರಿವಾರ 1990ರ ದಶಕದಿಂದಲೂ ಹವಣಿಸುತ್ತಿವೆ. ಹಲವಾರು ವರ್ಷಗಳಿಂದ ಬಾಬಾ ಬುಡಾನ್‌ಗಿರಿ ವಿಚಾರ ವಿವಾದದಲ್ಲಿದೆ.

ದೇಶದಲ್ಲಿ ಹೆಚ್ಚುತ್ತಿರುವ ಕೋಮು ರಾಜಕಾರಣದ ಭಾಗವಾಗಿ ಈ ಸೌಹಾರ್ದ ಕೇಂದ್ರವನ್ನು ಅಶಾಂತಿ ಮತ್ತು ಕೋಮುಗಲಭೆಯ ತಾಣವನ್ನಾಗಿ ಮಾಡಲು ಬಲಪಂಥೀಯ ಶಕ್ತಿಗಳು ಕಳೆದ ಮೂರು ದಶಕಗಳಿಂದ ಸತತ ಪ್ರಯತ್ನಗಳನ್ನು ನಡೆಸುತ್ತಿವೆ. ಅದರಲ್ಲೂ 2003 ರಲ್ಲಿ ಬಾಬಾಬುಡಾನ್ ದರ್ಗಾವನ್ನು ಕರ್ನಾಟಕದ ಅಯೋಧ್ಯೆಯನ್ನಾಗಿಯೂ ಮತ್ತು ಕರ್ನಾಟಕವನ್ನು ದಕ್ಷಿಣದ ಗುಜರಾತನ್ನಾಗಿಯೂ ಮಾಡುವುದಾಗಿ ಬಿಜೆಪಿಯು ಬಹಿರಂಗವಾಗಿ ಘೋಷಿಸಿತು. ಆನಂತರವಂತೂ ಬಲಪಂಥೀಯ ಸಂಘಟನೆಗಳು ತಮ್ಮ ಅಧಿಕಾರ, ಹಣ ಮತ್ತು ಜನಬಲವನ್ನು ಬಳಸಿಕೊಂಡು ಅತ್ಯಂತ ಯೋಜಿತವಾಗಿ ಇಲ್ಲಿನ ಮತೀಯ ಸೌಹಾರ್ದವನ್ನು ಹಾಳುಮಾಡುತ್ತಾ ಬರುತ್ತಿವೆ.

ಅದರ ಭಾಗವಾಗಿಯೇ 2003ರಲ್ಲಿ ಹೈಕೋರ್ಟಿನಲ್ಲಿ ದಾವೆಯೊಂದನ್ನು ಹೂಡಿ ಈ ಶ್ರದ್ಧಾ ಕೇಂದ್ರ ಮೂಲತಃ ಒಂದು ದತ್ತಾತ್ರೇಯ ದೇವಸ್ಥಾನವಾಗಿತ್ತೆಂದೂ, ಹೈದರಲಿಯ ಆಡಳಿತಾವಧಿಯಲ್ಲಿ ಇದು ದರ್ಗಾ ಆಗಿ ಬದಲಾಗಿ ಮುಸ್ಲಿಮರ ವಶಕ್ಕೆ ಹೋಯಿತೆಂಬ ಸುಳ್ಳು ಕಥನವನ್ನು ಕಟ್ಟಲಾಯಿತು. ಮಾತ್ರವಲ್ಲ, ಇದನ್ನು ಹಿಂದೂಗಳ ಸುಪರ್ದಿಗೆ ಕೊಡಬೇಕೆಂದೂ, ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆಗಳನ್ನು ನೆರವೇರಿಸಲು ಅರ್ಚಕರನ್ನೂ ನೇಮಕ ಮಾಡಬೇಕೆಂದೂ ಮನವಿ ಸಲ್ಲಿಸಲಾಯಿತು.

ಈ ಬಗ್ಗೆ 2007ರಲ್ಲಿ ತೀರ್ಪು ನೀಡಿದ ಹೈಕೋರ್ಟ್, ಈ ವಾದದ ಯಥಾರ್ಥತೆಯನ್ನು ಪರೀಶೀಲಿಸಬೇಕೆಂದು ಮುಜರಾಯಿ ಆಯುಕ್ತರಿಗೆ ಆದೇಶ ನೀಡಿತಲ್ಲದೆ, ಅದನ್ನು ದರ್ಗಾ ಎಂದು ಘೋಷಿಸಿದ್ದ 1989ರ ಮುಜರಾಯಿ ಆಯುಕ್ತರ ಆದೇಶವನ್ನು ರದ್ದುಪಡಿಸಿತು. ಅದಕ್ಕೆ 2008ರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ 1989ರಲ್ಲಿ ಸೂತ್ರೀಕರಿಸಿದ ರೀತಿಯಲ್ಲೇ ಯಥಾಸ್ಥಿತಿಯನ್ನು ಕಾಯ್ದಿರಿಸಿಕೊಂಡು ಬರಲು ಸೂಚಿಸಿತು. ಅಲ್ಲದೆ, ಆಯುಕ್ತರಿಗೆ ದರ್ಗಾದ ಧಾರ್ಮಿಕ ಸ್ವರೂಪದ ಬಗ್ಗೆ ಸಾರ್ವಜನಿಕ ವಿಚಾರಣೆ ನಡೆಸಿ ಅದರ ಬಗ್ಗೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕೆಂದು ಆದೇಶಿಸಿತು. ಅದರಂತೆ ಧಾರ್ಮಿಕ ಆಯುಕ್ತರು ಸಾರ್ವಜನಿಕ ವಿಚಾರಣೆ ನಡೆಸಿ ತಮ್ಮ ವರದಿಯನ್ನು 2010ರಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದರು.

ಈ ಮಧ್ಯೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರ ದರ್ಗಾದಲ್ಲಿ ದತ್ತಾತ್ರೇಯ ಮೂರ್ತಿಯನ್ನು ಸ್ಥಾಪಿಸಲು ಮತ್ತು ಮಳೆಯಿಂದ ಹಾನಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡು ಇಡೀ ದರ್ಗಾವನ್ನೇ ಕೆಡವಿಹಾಕಲು ಮುಂದಾಗಿತ್ತು. ಅದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿ ಅದರ ಪ್ರಯತ್ನಗಳಿಗೆ ತಡೆಯೊಡ್ಡಿತು. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಲಾದ ಧಾರ್ಮಿಕ ಆಯುಕ್ತರ ವರದಿ ಏಕಪಕ್ಷೀಯವಾಗಿತ್ತು. ಅದು ಹಿಂದಿನಿಂದಲೂ ದರ್ಗಾ ಆಗಿತ್ತು ಎಂದು ಸಾಬೀತು ಮಾಡಲು ಒದಗಿಸಲಾಗಿದ್ದ ಹತ್ತಾರು ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಬದಲಿಗೆ ಕೇವಲ ಬಲಪಂಥೀಯ ಅಹವಾಲುದಾರರ ನಂಬಿಕೆಯನ್ನಾಧರಿಸಿದ ನಿಲುವನ್ನು ಒಪ್ಪಿಕೊಂಡಿತು. ಅದನ್ನೇ ಆಧರಿಸಿ, ಅರ್ಚಕರನ್ನು ನೇಮಕ ಮಾಡಲು ಶಿಫಾರಸು ಮಾಡಿತು.

ಸುಪ್ರೀಂ ಕೋರ್ಟ್ ಈ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಆದರೆ, ಅದರ ಯಥಾರ್ಥತೆಯನ್ನು ಪರಿಶೀಲಿಸಿ ವಿವಾದವನ್ನು ಇತ್ಯರ್ಥಗೊಳಿಸಲೂ ಇಲ್ಲ. ಇದರ ಬಗ್ಗೆ ಕರ್ನಾಟಕ ಸರಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದೂ, ಯಾವುದೇ ತೀರ್ಮಾನಕ್ಕೆ ಬರುವ ಮುಂಚೆ ಎರಡೂ ಪಕ್ಷಗಳ ಅಹವಾಲನ್ನು ಆಲಿಸಬೇಕೆಂದೂ 2015ರ ಸೆಪ್ಟಂಬರ್ 3ರಂದು ಆದೇಶ ನೀಡಿತು.

ಈ ವಿಚಾರವಾಗಿ ಸೂಕ್ತ ಸಲಹೆ ನೀಡಲು ನ್ಯಾ. ನಾಗಮೋಹನ್‌ದಾಸ್, ವಿದ್ವಾಂಸರಾದ ಷ. ಶೆಟ್ಟರ್ ಮತ್ತು ಪ್ರೊ. ರಹಮತ್ ತರೀಕೆರೆ ಅವರ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು 2017ರ ಆಗಸ್ಟ್‌ನಲ್ಲಿ ಅಂದಿನ ಸರಕಾರ ನೇಮಿಸಿತು. ಆ ಸಮಿತಿ ಎರಡು ಸುತ್ತು ಸಾರ್ವಜನಿಕ ವಿಚಾರಣೆ ನಡೆಸಿ, ಎರಡೂ ಪಕ್ಷಗಳು ಮಂಡಿಸಿದ ದಾಖಲೆಯನ್ನೆಲ್ಲ ಪರಿಶೀಲಿಸಿ 2017ರ ಡಿಸೆಂಬರ್‌ನಲ್ಲಿ ಕಂಡುಕೊಂಡ ಅಂಶಗಳು ಹೀಗಿದ್ದವು:

1947ರ ಆಗಸ್ಟ್ 15ರಂದು ಇಲ್ಲಿ ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆ ನಡೆಯುತ್ತಿರಲಿಲ್ಲ ಮತ್ತು ಅರ್ಚಕರೂ ಇರಲಿಲ್ಲವೆಂಬುದನ್ನು ದಾಖಲೆಗಳು ಸಾಬೀತು ಮಾಡುತ್ತವೆ. ಇದು ಹೈದರಲಿ ಕಾಲಾವಧಿಗೆ ಮುನ್ನ ದತ್ತಾತ್ರೇಯ ದೇವಸ್ಥಾನವಾಗಿತ್ತೆಂದು ಪ್ರತಿಪಾದನೆ ಮಾಡುತ್ತಿರುವವರು ಕೂಡ 1947ರ ಆಗಸ್ಟ್ 15ರಂದು ಒಂದು ದರ್ಗಾ ಆಗಿತ್ತೇ ಹೊರತು ದೇವಸ್ಥಾನವಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಯಾವುದಾದರೂ ಕಾಲಘಟ್ಟದಲ್ಲಿ ಇದು ದೇವಸ್ಥಾನ ಆಗಿತ್ತೆಂಬ ಬಗ್ಗೆ ಅಥವಾ ಹಿಂದೂ ಅರ್ಚಕರು ಹಿಂದೂ ಆಗಮ ಪದ್ಧತಿಯಲ್ಲಿ ಪೂಜೆ ಮಾಡುತ್ತಿದ್ದರೆಂಬ ಬಗ್ಗೆ ಯಾವ ಪುರಾವೆ ಅಥವಾ ಸಾಕ್ಷ್ಯಗಳನ್ನು ಯಾರೂ ಒದಗಿಸಿಲ್ಲ. ಹೀಗಾಗಿ ಈಗ ಹಿಂದೂ ಆಗಮ ಪದ್ಧತಿಗೂ ಮತ್ತು ಅರ್ಚಕರ ನೇಮಕಾತಿಗೂ ಅವಕಾಶ ಮಾಡಿಕೊಡುವ ಕ್ರಮ ಈ ಸಂಸ್ಥೆಯ ಧಾರ್ಮಿಕ ಸ್ವರೂಪ ಬದಲು ಮಾಡಿದಂಥ ಅಪರಾಧವಾಗುತ್ತದೆ. ಆದ್ದರಿಂದ ದರ್ಗಾದಲ್ಲಿ ಅಂಥಾ ಯಾವುದೇ ಬದಲಾವಣೆಗೆ ಅವಕಾಶ ಮಾಡಿಕೊಡಕೂಡದು.

ಸಮಿತಿಯ ಈ ಶಿಫಾರಸನ್ನು ಆಧರಿಸಿ ಕರ್ನಾಟಕ ಸರಕಾರ 2018ರ ಮಾರ್ಚ್ 19ರಂದು ಅಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬರಲು ಆದೇಶ ನೀಡಿತು. ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ 2018ರ ಜೂನ್‌ನಲ್ಲೇ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿತು. ಅದರಲ್ಲಿ ಸರಕಾರದ ಆದೇಶವನ್ನು ರದ್ದುಪಡಿಸಿ ಹಿಂದೂ ಅರ್ಚಕರನ್ನು ನೇಮಕ ಮಾಡಲು ಕೋರಲಾಗಿತ್ತು. ಸರಕಾರವನ್ನು ಮತ್ತು ದರ್ಗಾದ ಆಡಳಿತಾಧಿಕಾರಿಯಾಗಿರುವ ಶಾಖಾದ್ರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

2008-15ರವರೆಗೆ ಸುಪ್ರೀಂ ಕೋರ್ಟಿನಲ್ಲಿ ಇದೇ ಪ್ರಕರಣದಲ್ಲಿ ಅಹವಾಲುದಾರರಾಗಿದ್ದ ಇತರರಿಗೆ ಕೋರ್ಟ್ ಪ್ರತ್ಯೇಕ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ 2019ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ನೇಮಕ ಮಾಡಿದ ಬಹುಪಾಲು ಸರಕಾರಿ ವಕೀಲರು ಆರೆಸ್ಸೆಸ್ ಅಥವಾ ಬಿಜೆಪಿ ಬೆಂಬಲಿಗರೇ ಆಗಿದ್ದರು. ಈ ಪ್ರಕರಣದಲ್ಲಿ ಸರಕಾರಿ ವಕೀಲರು ಸರಕಾರದ ನಿರ್ಧಾರದ ಹಿಂದಿನ ತರ್ಕ ಮತ್ತು ಪುರಾವೆಗಳನ್ನು ಕೋರ್ಟಿನ ಗಮನಕ್ಕೆ ತರದೆ, ದತ್ತಾತ್ರೇಯ ಸಂವರ್ಧನ ಸಮಿತಿಯ ವಾದಗಳನ್ನೇ ಸಮರ್ಥಿಸಿದರು. ಹೀಗಾಗಿ ಪ್ರತಿವಾದಿಗಳ ತರ್ಕ ಮತ್ತು ಪುರಾವೆಗಳೇ ನ್ಯಾಯಾಧೀಶರ ಗಮನಕ್ಕೆ ಬಾರದಂತಾಯಿತು. ಹೀಗಾಗಿ ಸೆಪ್ಟಂಬರ್ 28ರ ಆದೇಶವೂ ಅಂತಿಮವಾಗಿ ಸರಕಾರ ಮತ್ತೊಮ್ಮೆ ಮರುಪರಿಶೀಲನೆ ಮಾಡಬೇಕೆಂದು ಸೂಚಿಸಿತು.

ಅದಕ್ಕೆ ಆಧಾರವಾಗಿರುವ ಸುಳ್ಳು ವಾದಗಳು

ಹಾಗೂ ಹುಸಿ ತರ್ಕಗಳು ಏನು?

ಮೊದಲನೇ ಸುಳ್ಳು, ಬಾಬಾಬುಡಾನ್ ದರ್ಗಾ ಇರುವುದು ನಾಗೇನಹಳ್ಳಿಯಲ್ಲಿ, ದತ್ತಾತ್ರೇಯ ಪೀಠದಲ್ಲಲ್ಲ ಎಂಬುದು. ಸತ್ಯವೇನೆಂದರೆ, ಇಂಥ ವಾದವನ್ನು ತೀರಾ ಇತ್ತೀಚಿನವರೆಗೆ ಸಂಘಪರಿವಾರದವರೇ ಮುಂದಿಟ್ಟಿರಲಿಲ್ಲ. ಎರಡನೆಯದು, 1818ರ ಖೇತುವಾರು ದಾಖಲೆಯಲ್ಲೂ ಸಂಸ್ಥೆಯ ಹೆಸರು ದತ್ತಾತ್ರೇಯ ದೇವಸ್ಥಾನ ಎಂದಿದೆ ಎಂಬ ವಾದ. ನಿಜವೇನೆಂದರೆ, ಮೈಸೂರು ಸಂಸ್ಥಾನದಲ್ಲಿ ಮೊದಲ ಖೇತುವಾರು ದಾಖಲೆ ತಯಾರಾದದ್ದೇ 1886ರಲ್ಲಿ. ಹಾಗಾಗಿ, 1818ರಲ್ಲಿ ಖೇತುವಾರು ದಾಖಲೆಯಿತ್ತೆಂಬುದಾಗಲೀ, ಅದರಲ್ಲಿ ದತ್ತಾತ್ರೇಯ ದೇವಸ್ಥಾನ ಎಂದು ದಾಖಲಿಸಲಾಗಿದೆ ಎಂಬುದಾಗಲೀ ಸುಳ್ಳು. ಮೂರನೇ ಸುಳ್ಳು, ಕಾಲಿನ್ ಮೆಕೆಂಜಿ ದಾಖಲೆಗಳಲ್ಲೂ ಇದು ದೇವಸ್ಥಾನವಾಗಿತ್ತೆಂಬ ಉಲ್ಲೇಖಗಳಿವೆ ಎಂಬುದು. ಆದರೆ, ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡಲಾಗಿದ್ದ ಮೆಕೆಂಜಿ ದಾಖಲೆಗಳನ್ನು ಟಿ.ವಿ. ಮಹಾಲಿಂಗಂ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ‘ಕರ್ನಾಟಕದ ಕೈಫಿಯತ್ತುಗಳು’ ಎಂಬ ಹೆಸರಿನ ಒಂದು ಸಂಪುಟದಲ್ಲಿ ಸಂಪಾದಿಸಿದ್ದಾರೆ. ಎಲ್ಲಿಯೂ, ಬಾಬಾಬುಡಾನ್ ದರ್ಗಾದ ಬಗ್ಗೆಯಾಗಲೀ, ದತ್ತಪೀಠದ ಬಗ್ಗೆಯಾಗಲೀ ಪ್ರಸ್ತಾಪವೇ ಇಲ್ಲ. ನಾಲ್ಕನೇ ಸುಳ್ಳು, ಹಿಂದಿನ ಸರಕಾರ ನೇಮಿಸಿದ್ದ ಪರಿಣಿತರ ಉನ್ನತ ಸಮಿತಿ ಪಕ್ಷಪಾತಿಯಾಗಿದೆ ಮತ್ತು ಸುಪ್ರೀಂ ಕೋರ್ಟಿನ ಆದೇಶದಂತೆ ಸರಕಾರ ತಾನು ನಿರ್ಧಾರವನ್ನು ತೆಗೆದುಕೊಳ್ಳದೆ ಪರಿಣಿತರ ಸಮಿತಿಗೆ ವಹಿಸಿದೆ ಎಂಬುದು. ಆದರೆ, ಈ ಉನ್ನತ ಸಮಿತಿ ಶಿಫಾರಸುಗಳನ್ನು ನೀಡುವ ಸಮಿತಿಯೇ ಹೊರತು ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಿತಿಯಲ್ಲ. ಅದರ ಶಿಫಾರಸುಗಳನ್ನು ಗಮನಿಸಿ, ಸಂಪುಟ ಉಪ ಸಮಿತಿ ತನ್ನ ವಿವೇಚನೆ ಬಳಸಿ ತನ್ನ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದಕ್ಕೆ ಬೇಕಿರುವ ಪರಿಣಿತರ ಸಹಾಯವನ್ನು ಪಡೆದುಕೊಂಡಿದೆ. ಇದು ಸುಪ್ರೀಂ ಕೋರ್ಟಿನ ಆದೇಶದ ಉಲ್ಲಂಘನೆ ಹೇಗಾದೀತು? ಐದನೇ ಸುಳ್ಳು, 1991ರ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ ಎಂಬುದು. ಆದರೆ, ಸಂಘ ಪರಿವಾರದವರು ಮುಂದಿಡುತ್ತಿರುವ ವಾದದ ಸತ್ಯಾಸತ್ಯತೆಗಳೇನೇ ಇದ್ದರೂ, ಅವರೂ 1947ರ ಆಗಸ್ಟ್ 15ರಂದು ಈ ಧಾರ್ಮಿಕ ಕೇಂದ್ರ ಒಂದು ದರ್ಗಾ ಆಗಿತ್ತೆಂಬುದನ್ನು ಒಪ್ಪಿಕೊಳ್ಳುತ್ತಾರೆ.

ಈಗ, 2023ರ ಮಾರ್ಚ್‌ನಲ್ಲಿ ಕರ್ನಾಟಕ ಹೈಕೋರ್ಟ್, ದತ್ತಪೀಠದಲ್ಲಿ ಮುಜಾವರ್‌ಗಳಿಗೆ ಮಾತ್ರ ಪೂಜೆಗೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ತಳ್ಳಿಹಾಕಿದೆ. ಇದರೊಂದಿಗೆ, ಎರಡೂ ಧರ್ಮಗಳ ಸಂಪ್ರದಾಯದ ಪ್ರಕಾರ ಮುಜಾವರ್ ಹಾಗೂ ಅರ್ಚಕರಿಂದ ಪೂಜಾ ವಿಧಿಗೆ ಅವಕಾಶ ನೀಡಿದ್ದ 2022ರ ಕೋರ್ಟ್ ಆದೇಶವೇ ಮುಂದುವರಿಯುವಂತಾಗಿದೆ ಎಂಬ ವರದಿಗಳಿವೆ.

ಈಗ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್ ತಲುಪಿದ್ದು ಡಿಸೆಂಬರ್ 1ಕ್ಕೆ ವಿಚಾರಣೆಯಿದೆ. ಈಗ ಕಾಂಗ್ರೆಸ್ ಸರಕಾರ ಏನು ನಿಲುವು ತೆಗೆದುಕೊಳ್ಳಬಹುದು? ದರ್ಗಾ ಸ್ವರೂಪದ ಸತ್ಯವನ್ನು ಎತ್ತಿ ಹಿಡಿಯುವುದೇ? ಅಥವಾ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕಿ ಮೌನವಹಿಸಿ ಹಿಂದುತ್ವವಾದಿಗಳನ್ನು ತುಷ್ಟೀಕರಿಸುವುದೇ? ಕಾದು ನೋಡಬೇಕು.

ಬಾಬಾಬುಡಾನ್ ದರ್ಗಾಕ್ಕೆ ಮೊದಲಿನಿಂದಲೂ ನಡೆದುಕೊಳ್ಳುತ್ತಿದ್ದವರು ಬಡ ಮುಸ್ಲಿಮರು ಮತ್ತು ದಲಿತ-ಶೂದ್ರ ಹಿನ್ನೆಲೆಯ ಬಡ ಅಬ್ರಾಹ್ಮಣ ಹಿಂದೂಗಳು. ಬಾಬಾಬುಡಾನ್ ದರ್ಗಾವನ್ನು ನಾಶಮಾಡಲು ದತ್ತಾತ್ರೇಯ ದೇವಸ್ಥಾನವೆಂದು ಕಥೆ ಕಟ್ಟುವುದು ಸಂಘಪರಿವಾರದ ಧಾರ್ಮಿಕ ಧ್ರುವೀಕರಣ ಯೋಜನೆಯ ಭಾಗ ಎನ್ನಲಾಗುತ್ತದೆ. ಮುಜಾವರರನ್ನು ದರ್ಗಾದಿಂದ ಹೊರತಳ್ಳುವ ಅವರ ಯೋಜನೆ ಮುಸ್ಲಿಮರ ಕುರಿತ ನಿರಾಕರಣೆಯನ್ನೇ ಸಾಂಕೇತಿಸುತ್ತದೆ ಎಂದು ಹೇಳಲಾಗುತ್ತದೆ.

ಹೀಗಾಗಿ, ದರ್ಗಾ ಉಳಿಸುವ ಹೋರಾಟಕ್ಕೆ, ಸೌಹಾರ್ದದ ಇತಿಹಾಸ ಹಾಗೂ ನೆಮ್ಮದಿಯ ಭವಿಷ್ಯವನ್ನು ಖಾತರಿಪಡಿಸಿಕೊಳ್ಳುವ ಆಯಾಮವಿದೆ. ಇವತ್ತಿನ ರಾಜಕಾರಣದಲ್ಲಿ ಇವೆೆಲ್ಲವೂ ಎಲ್ಲಿಗೆ ಮುಟ್ಟಲಿದೆಯೋ ಗೊತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News