ಆರೋಪ ಮಾಧ್ಯಮ ಸಂಸ್ಥೆಯ ಮೇಲಿದ್ದರೂ ಪತ್ರಕರ್ತರನ್ನು ಅಪರಾಧಿಗಳಂತೆ ನಡೆಸಿಕೊಂಡ ಸರಕಾರ

ದೇಶದಲ್ಲಿ ಮಾಧ್ಯಮಗಳ ಮೇಲಿನ ದಬ್ಬಾಳಿಕೆಯ ಮುಂದುವರಿಕೆಯಾಗಿ, ‘ನ್ಯೂಸ್ ಕ್ಲಿಕ್’ ಸುದ್ದಿ ಪೋರ್ಟಲ್ ಮೇಲೆ ದಾಳಿಯಾಗಿದೆ. ಅದರ ಕಚೇರಿಗೆ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ. ‘ನ್ಯೂಸ್ ಕ್ಲಿಕ್’ ಮೇಲೆ ದಾಖಲಿಸಿರುವುದು ಉಗ್ರರ ವಿರುದ್ಧದ ಕೇಸ್. ಏನಿದರ ಹಿನ್ನೆಲೆ?

Update: 2023-10-10 06:24 GMT
Editor : Thouheed | By : ಆರ್. ಜೀವಿ

ಮಾಧ್ಯಮಗಳ ವಿರುದ್ಧ ಯುಎಪಿಎ ಅಡಿಯಲ್ಲಿಯೂ ಪ್ರಕರಣ ದಾಖಲಾಗಬಹುದು, ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರನ್ನು ಉಗ್ರರು ಎಂಬಂತೆ ಬಿಂಬಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ‘ನ್ಯೂಸ್ ಕ್ಲಿಕ್’ ಪ್ರಕರಣ ಸುದ್ದಿಯಲ್ಲಿದೆ. ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ, ಸಂಸ್ಥೆ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ದೇಶಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ, ‘ನ್ಯೂಸ್ ಕ್ಲಿಕ್’ ಮೇಲಿನ ದಾಳಿ ಮತ್ತು ಆನಂತರದ ಬೆಳವಣಿಗೆಗಳ ಬಗ್ಗೆ, ಅದರ ಹಿನ್ನೆಲೆಯ ಬಗ್ಗೆ ನೋಡುವ ಮೊದಲು, ಮೊನ್ನೆ ಮಂಗಳವಾರ ಅಕ್ಟೋಬರ್ 3ರಂದು ಏನೇನಾಯಿತು ಎಂಬುದನ್ನು ಒಮ್ಮೆ ಗಮನಿಸಬೇಕು.

ಅಕ್ಟೋಬರ್ 3, 2023. ಬೆಳ್ಳಂಬೆಳಗ್ಗೆ ಕನಿಷ್ಠ 400 ಪೊಲೀಸರಿಂದ ದಿಲ್ಲಿ, ನೊಯ್ಡಾ, ಗುರುಗ್ರಾಮ್, ಮುಂಬೈ ಮತ್ತು ಗಾಝಿಯಾಬಾದ್‌ನಾದ್ಯಂತ ಸುಮಾರು 30 ಸ್ಥಳಗಳಲ್ಲಿ ದಾಳಿ. ‘ನ್ಯೂಸ್ ಕ್ಲಿಕ್’ ಸುದ್ದಿ ಪೋರ್ಟಲ್, ಅಲ್ಲಿ ಕೆಲಸ ಮಾಡುವ ಹಾಗೂ ಫ್ರೀ ಲ್ಯಾನ್ಸ್ ಪತ್ರಕರ್ತರಿಗೆ ಸೇರಿದ 30 ಸ್ಥಳಗಳಲ್ಲಿ ಶೋಧ. ಪೋರ್ಟಲ್‌ಗೆ ಸಂಬಂಧಿಸಿದ ಪತ್ರಕರ್ತರು, ಫ್ರೀಲ್ಯಾನ್ಸರ್‌ಗಳು, ಬರಹಗಾರರು ಮತ್ತು ವಿಡಂಬನಕಾರರು ಸೇರಿದಂತೆ 46 ಜನರ ವಿಚಾರಣೆ. ದಿಲ್ಲಿ ಪೊಲೀಸ್ ವಿಶೇಷ ಘಟಕದ ಕಚೇರಿಯಲ್ಲಿ ಒಟ್ಟು 37 ಪುರುಷರ ವಿಚಾರಣೆ. 9 ಮಹಿಳೆಯರನ್ನು ಅವರ ನಿವಾಸದಲ್ಲಿ ವಿಚಾರಣೆಗೆ ಒಳಪಡಿಸಿದ್ದಾಗಿ ಪೊಲೀಸರ ಹೇಳಿಕೆ. ಅಭಿಸಾರ್ ಶರ್ಮಾ, ಪರಂಜೊಯ್ ಗುಹಾ ಠಾಕುರ್ತಾ, ಭಾಷಾ ಸಿಂಗ್, ಸುಹೈಲ್ ಹಾಶ್ಮಿ, ಅದಿತಿ ನಿಗಮ್, ಊರ್ಮಿಳೇಶ್, ಸುಬೋಧ್ ವರ್ಮಾ, ಡಿ. ರಘುನಂದನ್, ಗೀತಾ ಹರಿಹರನ್ ಮೊದಲಾದವರನ್ನು ಸತತ ಎಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು. ದಾಖಲೆಗಳೊಂದಿಗೆ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳಂಥ ಡಿಜಿಟಲ್ ಸಾಧನಗಳ ವಶ. ಯಾವುದೇ ಮೆಮೊ ನೀಡದೆ ಡಿಜಿಟಲ್ ಸಾಧನಗಳ ವಶ. ಪೋರ್ಟಲ್ ಕಚೇರಿಗೆ ಪೊಲೀಸರಿಂದ ಬೀಗಮುದ್ರೆ.

ಇದೇ ವೇಳೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ನಿವಾಸದ ಮೇಲೆಯೂ ದಾಳಿ ನಡೆಸಲಾಯಿತು. ಮುಂಬೈನಲ್ಲಿ ನೆಲೆಸಿರುವ ಸೆಟಲ್ವಾಡ್ ಅವರನ್ನು ದಿಲ್ಲಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಗಳಿವೆ. ಇನ್ನೊಂದೆಡೆ, ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ ಅವರ ಅಧಿಕೃತ ನಿವಾಸದ ಮೇಲೆಯೂ ಮಂಗಳವಾರ ಬೆಳಗ್ಗೆ ದಾಳಿ ನಡೆಯಿತು.

ವಿಚಾರಣೆ ವೇಳೆ ಏನೇನಾಯಿತು?

ಕೋವಿಡ್-19, ದಿಲ್ಲಿ ಗಲಭೆ ಮತ್ತು ರೈತರ ಪ್ರತಿಭಟನೆಯ ಬಗ್ಗೆ ಲೇಖನಗಳನ್ನು ಬರೆದಿದ್ದೀರಾ? ಎಂದು ಪತ್ರಕರ್ತರಿಗೆ ಪ್ರಶ್ನಿಸಲಾಯಿತು. ಟ್ರಾವೆಲ್ ಹಿಸ್ಟರಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆಯೂ ಕೇಳಲಾಯಿತು. ಪಾಸ್‌ಬುಕ್‌ಗಳನ್ನು ತೋರಿಸಲು ಸೂಚಿಸಲಾಯಿತು. ಅವರು ವರದಿ ಮಾಡಲು ಬಳಸುವ ಟಿಪ್ಪಣಿ ಪುಸ್ತಕಗಳೂ ಸೇರಿದಂತೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಪೋರ್ಟಲ್‌ನ ಸಲಹೆಗಾರ್ತಿಯೊಬ್ಬರನ್ನು ಅವರ ಸ್ಟೋರಿಗಳ ಲಿಂಕ್‌ಗಳನ್ನು ತೆರೆಯುವಂತೆ ಕೇಳಿ, ಅದನ್ನು ಪರಿಶೀಲಿಸಲಾಯಿತು.

ದಾಳಿ ನಡೆದದ್ದರ ಹಿನ್ನೆಲೆ ಏನು?

ಈ ದಾಳಿಗೆ ‘ನ್ಯೂಯಾರ್ಕ್ ಟೈಮ್ಸ್’ ವರದಿ ಕಾರಣ ಎಂದು ಹೇಳಲಾಗುತ್ತಿದೆ. ಚೀನಾ ಪರ ಪ್ರಚಾರಕ್ಕಾಗಿ ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ನ್ಯೂಸ್ ಕ್ಲಿಕ್ ವೆಬ್ ಸೈಟ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನು (ಯುಎಪಿಎ) ಅಡಿಯಲ್ಲಿ ಪ್ರಕರಣವನ್ನು ಆಗಸ್ಟ್ 17ರಂದು ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದು ಭಯೋತ್ಪಾದಕ ಕೃತ್ಯಗಳಿಗೆ ಮತ್ತು ಅದಕ್ಕಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಇಂಥದೊಂದು ಪ್ರಕರಣ ನ್ಯೂಸ್ ಕ್ಲಿಕ್ ಮೇಲೆ ದಾಖಲಾಗಿರುವುದು ಪತ್ರಕರ್ತರ ಮನೆಗಳ ಮೇಲೆ ಮಂಗಳವಾರ ದಾಳಿ ನಡೆದಾಗಲೇ ಬೆಳಕಿಗೆ ಬಂದಿದೆ.

ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿರುವುದೇನು?

ಚೀನಾ ಪರ ಪ್ರಚಾರಕ್ಕಾಗಿ ಶಾಂಘೈ ಮೂಲದ ಅಮೆರಿಕದ ಉದ್ಯಮಿ ನೆವಿಲ್ ರಾಯ್ ಸಿಂಘಮ್ ಅವರಿಂದ ಪೋರ್ಟಲ್ ಹಣ ಪಡೆಯುತ್ತಿದೆ ಎಂಬುದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿನ ಆರೋಪ. ಚೀನಾ ಸರಕಾರ ನಡೆಸುವ ಮಾಧ್ಯಮ ಸಂಸ್ಥೆಗಳ ಜೊತೆ ಸಹಯೋಗ ಹೊಂದಿರುವ ಸಿಂಘಮ್ ‘ನ್ಯೂಸ್ ಕ್ಲಿಕ್’ಗೆ ಹಣ ಹೂಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ‘ನ್ಯೂಸ್‌ಕ್ಲಿಕ್’ನೊಂದಿಗಿನ ಸಿಂಘಮ್ ಹಣಕಾಸಿನ ವ್ಯವಹಾರಗಳು ಇಂಥದೇ ಕಾರಣಕ್ಕೆ ಎಂದು ವರದಿ ನಿರ್ದಿಷ್ಟಪಡಿಸದಿದ್ದರೂ, ಚೀನಾ ಸರಕಾರದ ಪರ ನಿಲುವನ್ನು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿದೆ.

ಚೀನಾದ ಮಾವೋವಾದಿ ಕ್ರಾಂತಿಯ 70 ವರ್ಷಗಳ ನೆನಪಿಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ವೀಡಿಯೊವನ್ನು ಅದು ಉಲ್ಲೇಖಿಸಿದೆ.

ಈ ವರ್ಷದ ಆಗಸ್ಟ್‌ನಲ್ಲಿ ವರದಿ ಪ್ರಕಟವಾಗಿತ್ತು. ಅದಾಗಿ ಎರಡು ತಿಂಗಳ ನಂತರ ದಿಲ್ಲಿ ಪೊಲೀಸರ ಈ ದಾಳಿ ಮತ್ತು ಬಂಧನ ನಡೆದಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಯ ನಂತರ, ಕೇಂದ್ರ ಸಚಿವೆ ಸ್ಮತಿ ಇರಾನಿ ‘ನ್ಯೂಸ್‌ಕ್ಲಿಕ್’ಗೆ ಚೀನಾದ ಹಣದ ಆರೋಪದ ಮೇಲೆ ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ವಾಗ್ದಾಳಿ ನಡೆಸಿದ್ದರು. ಭಾರತದ ವಿರುದ್ಧದ ಸುದ್ದಿಗಳನ್ನು ಹೇಗೆ ಪ್ರಸಾರ ಮಾಡಬೇಕು ಎಂಬ ಬಗ್ಗೆ ಭಾರತದ ಪತ್ರಕರ್ತರಿಗೆ ಸಿಂಘಮ್ ಪತ್ರ ಬರೆದಿದ್ದಾರೆ ಎಂದು ಇರಾನಿ ಆರೋಪಿಸಿದ್ದರು.

ಅದೇ ವರದಿಯನ್ನು ಉಲ್ಲೇಖಿಸಿ, ಬಿಜೆಪಿ ನಾಯಕ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಕೂಡ ಚೀನಾ, ‘ನ್ಯೂಸ್‌ಕ್ಲಿಕ್’ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಪರಸ್ಪರ ಸಂಬಂಧ ಹೊಂದಿವೆ ಎಂದು ಆರೋಪಿಸಿದ್ದರು. ಸುಳ್ಳು ಸುದ್ದಿಗಳನ್ನು ಪ್ರಕಟಿಸಲಾಗುತ್ತಿದ್ದು, ಕಾಂಗ್ರೆಸ್ ಮತ್ತಿತರ ಪಕ್ಷಗಳು ಅದಕ್ಕೆ ಬೆಂಬಲ ನೀಡುತ್ತಿವೆ ಎಂದು ಠಾಕೂರ್ ತಕರಾರು ಎತ್ತಿದ್ದರು. ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಕೂಡ ಲೋಕಸಭೆಯಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಬಗ್ಗೆ ಪ್ರಸ್ತಾಪಿಸಿ, ನ್ಯೂಸ್‌ಕ್ಲಿಕ್ ಚೀನಾದ ಸಂಸ್ಥೆಗಳಿಂದ ಹಣ ಪಡೆದಿದೆ ಮತ್ತು ಭಾರತ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಈ ಹಣ ಬಳಕೆಯಾಗಿದೆ ಎಂದು ಆರೋಪಿಸಿದ್ದರು.

ಆದರೆ, ನ್ಯೂಸ್ ಕ್ಲಿಕ್ ಮೇಲಿನ ದಾಳಿಗೆ ನ್ಯೂಯಾರ್ಕ್ ಟೈಮ್ಸ್ ವರದಿ ಒಂದು ನೆಪ ಮಾತ್ರ ಎಂಬ ಮಾತುಗಳೂ ಇವೆ. ಸಿಂಘಮ್ ಸಂಬಂಧದ ಆರೋಪ, ನ್ಯೂಯಾರ್ಕ್ ಟೈಮ್ಸ್ ವರದಿಗೂ ಮೊದಲಿಂದಲೇ ನ್ಯೂಸ್ ಕ್ಲಿಕ್ ಮೇಲೆ ಪೊಲೀಸರ ದಾಳಿ, ಪ್ರಕರಣ ದಾಖಲಿಸುವುದು ನಡೆದೇ ಇತ್ತು.

ನ್ಯೂಸ್‌ಕ್ಲಿಕ್ ಮತ್ತು ಅದರ ಪತ್ರಕರ್ತರ ಮೇಲಿನ ಈಗಿನ ದಾಳಿಗಳು ಪೋರ್ಟಲ್‌ನಲ್ಲಿ ‘ನ್ಯೂಯಾರ್ಕ್ ಟೈಮ್ಸ್’ ವರದಿಯ ಎರಡು ತಿಂಗಳ ನಂತರ ನಡೆದಿದ್ದರೂ, ದಿಲ್ಲಿ ಪೊಲೀಸರ ತನಿಖೆ ಆಗಸ್ಟ್ 2020ರಲ್ಲಿಯೇ, ಆರ್ಥಿಕ ಅಪರಾಧ ವಿಭಾಗವು ವೆಬ್‌ಸೈಟ್ ವಿರುದ್ಧ ಪ್ರಕರಣ ದಾಖಲಿಸುವುದರೊಂದಿಗೆ ಶುರುವಾಗಿತ್ತು. ಕಂಪೆನಿಯು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಫೆಬ್ರವರಿ 2021ರಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.), ದಿಲ್ಲಿ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ತನಿಖೆ ಪ್ರಾರಂಭಿಸಿತು. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈ.ಡಿ. ಪ್ರಕರಣ ದಾಖಲಿಸಿತು.

‘ನ್ಯೂಸ್‌ಕ್ಲಿಕ್’ ಸಂಸ್ಥಾಪಕ ಪುರಕಾಯಸ್ಥ, ಯಾವುದೇ ಕ್ರಮದಿಂದ ರಕ್ಷಣೆಗಾಗಿ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಜೂನ್ 2021ರಲ್ಲಿ ದಿಲ್ಲಿ ಹೈಕೋರ್ಟ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜುಲೈ 5ರವರೆಗೆ ‘ನ್ಯೂಸ್‌ಕ್ಲಿಕ್’ ಮತ್ತು ಪುರಕಾಯಸ್ಥ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಈ.ಡಿ.ಗೆ ನಿರ್ದೇಶನ ನೀಡಿತು. ಹಲವಾರು ವಿಚಾರಣೆಗಳ ನಂತರ ರಕ್ಷಣೆಯನ್ನು ಸೆಪ್ಟಂಬರ್ 2ರವರೆಗೆ ವಿಸ್ತರಿಸಲಾಗಿತ್ತು.

ಅದೇ ವರ್ಷ ಜುಲೈನಲ್ಲಿ, 2018 ಮತ್ತು 2021ರ ನಡುವೆ ಪಿಪಿಕೆ ಸ್ಟುಡಿಯೊ ಪ್ರೈವೇಟ್ ಲಿಮಿಟೆಡ್‌ಗೆ ಸಿಂಘಮ್ 38 ಕೋಟಿ ರೂ. ವರ್ಗಾಯಿಸಿರುವುದು ಪತ್ತೆಯಾಗಿದೆ ಎಂದು ಈ.ಡಿ. ಹೇಳಿತು. ಸ್ವೀಕರಿಸಿದ ಹಣವು ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾ ಅವರಿಗೂ ಹೋಗಿದೆ ಎಂದು ಆರೋಪಿಸಿತು. ನ್ಯೂಸ್‌ಕ್ಲಿಕ್ ಸಂಸ್ಥಾಪಕರೊಂದಿಗೆ ನವ್ಲಾಖಾ ಸಂಬಂಧದ ಬಗ್ಗೆ ಈಡಿ ಅವರನ್ನು ಜೈಲಿನಲ್ಲಿ ಪ್ರಶ್ನಿಸಿತು.

ತನಿಖೆಯ ವೇಳೆ ‘ನ್ಯೂಸ್‌ಕ್ಲಿಕ್’ನ ಕ್ಯಾಶ್‌ಬುಕ್‌ನಲ್ಲಿ ಹಲವು ಅಕ್ರಮಗಳು ಪತ್ತೆಯಾಗಿವೆ ಎಂಬುದು ತನಿಖಾಧಿಕಾರಿಗಳ ಆರೋಪ. ‘ನ್ಯೂಸ್‌ಕ್ಲಿಕ್’ ತನ್ನ ಸೇವೆಗಳಿಗಾಗಿ ಕೋಟಿಗಟ್ಟಲೆ ಹಣವನ್ನು ಸ್ವೀಕರಿಸಿದೆ. ಅದರಲ್ಲಿ 1.55 ಕೋಟಿ ರೂ.ಗಳನ್ನು ಇಲೆಕ್ಟ್ರಿಷಿಯನ್‌ಗೆ ಪಾವತಿಸಲಾಗಿದೆ. ಅಲ್ಲದೆ, ಪುರಕಾಯಸ್ಥ ಮತ್ತು ಗೌತಮ್ ನವ್ಲಾಖಾ ಅವರು ಅಮೆರಿಕದ ರಕ್ಷಣಾ ಪೂರೈಕೆದಾರ ಕಂಪೆನಿಯೊಂದಿಗೆ ಸಂಸ್ಥೆಯನ್ನು ಸಹ ಸಂಯೋಜಿಸಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಕೆಡಿಸುವ ಉದ್ದೇಶದಿಂದ ಪುರಕಾಯಸ್ಥ ಮತ್ತು ನೆವಿಲ್ ರಾಯ್ ಸಿಂಘಮ್ ನಡುವೆ ವಿನಿಮಯವಾಗಿರುವ ಕೆಲವು ಇ-ಮೇಲ್‌ಗಳನ್ನು ಪತ್ತೆ ಮಾಡಿದ್ದೇವೆ ಎಂದು ಪೊಲೀಸರು ಆರೋಪಿಸುತ್ತಿದ್ದಾರೆ.

ಎಲ್ಲ ಆರೋಪಗಳನ್ನು ‘ನ್ಯೂಸ್ ಕ್ಲಿಕ್’ ಅಲ್ಲಗಳೆದಿದೆ. ಚೀನಾ ಪರ ಪ್ರಚಾರಾಂದೋಲನವನ್ನು ತಾನು ನಡೆಸುತ್ತಿಲ್ಲ ಎಂದು ಅದು ಹೇಳಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರ ಟೀಕೆಗಳನ್ನು ದೇಶದ್ರೋಹ ಅಥವಾ ರಾಷ್ಟ್ರವಿರೋಧಿ ಕೃತ್ಯವೆಂಬಂತೆ ಕಾಣುತ್ತಿದೆ ಎಂದು ಅದು ಟೀಕಿಸಿದೆ. ಸುದ್ದಿತಾಣದಲ್ಲಿನ ವಸ್ತು ವಿಷಯ ಏನಿರಬೇಕು ಎಂಬುದರ ಬಗ್ಗೆ ನೆವಿಲ್ ರಾಯ್ ಸಿಂಘಮ್ ಅವರಿಂದ ಯಾವುದೇ ಸೂಚನೆಗಳನ್ನು ಪಡೆಯುತ್ತಿಲ್ಲ ಎಂದೂ, ಪ್ರಕಟಿಸಬೇಕಾದ ವಿಚಾರದ ಬಗ್ಗೆ ಪತ್ರಿಕೋದ್ಯಮದ ಅತ್ಯುನ್ನತ ಮಾನದಂಡಗಳನ್ನು ಪಾಲಿಸುತ್ತಿರುವುದಾಗಿಯೂ ಅದು ಸ್ಪಷ್ಟಪಡಿಸಿದೆ.

ತಾನು ಪಡೆದಿರುವ ಹಣಕಾಸು ನೆರವು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಬಂದಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ‘ನ್ಯೂಸ್ ಕ್ಲಿಕ್’ ಹೇಳಿದೆ.

ಈ ಮೊದಲು ಕೂಡ ಈ.ಡಿ., ದಿಲ್ಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ, ಆದಾಯ ತೆರಿಗೆ ಅಧಿಕಾರಿಗಳು ನ್ಯೂಸ್ ಕ್ಲಿಕ್ ಮೇಲೆ ದಾಳಿ ನಡೆಸಿದ್ದು, ಕೆಲವು ಡಿಜಿಟಲ್ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಬಿಟ್ಟರೆ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ಅದು ಹೇಳಿದೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಧ್ಯಮಗಳ ಟೀಕೆಯನ್ನು ಸಹಿಸದೆ, ನಮ್ಮ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತಿದೆ. ಇದಕ್ಕಾಗಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಮುದ್ರಿತ ಬೋಗಸ್ ವರದಿಯನ್ನು ಆಧಾರವಾಗಿ ಇರಿಸಿಕೊಳ್ಳಲಾಗಿದೆ ಎಂದು ಪ್ರಬೀರ್ ಪುರಕಾಯಸ್ಥ ಆರೋಪಿಸಿದ್ದಾರೆ.

‘ನ್ಯೂಸ್ ಕ್ಲಿಕ್’ ಮೇಲಿನ ದಾಳಿಗೆ ವ್ಯಾಪಕ ಖಂಡನೆ, ಪ್ರತಿಭಟನೆಗಳು ವ್ಯಕ್ತವಾಗಿವೆ. ಅದು ಉದ್ದೇಶಪೂರ್ವಕ ದಾಳಿ ಎಂದು ಹಲವಾರು ಮಾಧ್ಯಮ ಸಂಘಟನೆಗಳು ಟೀಕಿಸಿವೆ. ‘ಪ್ರೆಸ್ ಅಸೋಸಿಯೇಷನ್’, ‘ಪ್ರೆಸ್ ಕ್ಲಬ್ ಆಫ್ ಇಂಡಿಯಾ’, ‘ದಿಲ್ಲಿ ಪತ್ರಕರ್ತರ ಸಂಘ’ ಮತ್ತು ‘ಇಂಡಿಯನ್ ವಿಮೆನ್ ಪ್ರೆಸ್ ಕಾರ್ಪ್ಸ್’ ಹೊರಡಿಸಿರುವ ಪ್ರಕಟಣೆಯಲ್ಲಿ, ಆರೋಪಗಳು ಆಧಾರರಹಿತ ಮತ್ತು ಖಂಡನಾರ್ಹ ಎಂದು ಹೇಳಲಾಗಿದೆ.

ಪತ್ರಕರ್ತರಿಂದ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವಾಗ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಯಾವುದೇ ಭರವಸೆ ಕೊಡದೆ, ಮೆಮೊಗಳಿಲ್ಲದೆ ವಶಪಡಿಸಿಕೊಂಡಿರುವುದನ್ನೂ ಟೀಕಿಸಲಾಗಿದೆ.

ಸುದ್ದಿ ಸಂಸ್ಥೆ ವಿರುದ್ಧ ಆರೋಪ ಇದ್ದರೂ, ಆ ಸಂಸ್ಥೆಗೆ ಫ್ರೀ ಲ್ಯಾನ್ಸ್ ಆಗಿ ಸೇವೆ ಸಲ್ಲಿಸುವ ಪತ್ರಕರ್ತರ ಮನೆಗಳಿಗೆ ಬೆಳ್ಳಂಬೆಳಗ್ಗೆ ಪೊಲೀಸರು ನುಗ್ಗಿ ಅವರನ್ನು ಅಪರಾಧಿಗಳಂತೆ ನಡೆಸಿಕೊಂಡಿರುವ ಬಗ್ಗೆಯೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮಾಧ್ಯಮಗಳ ಮೇಲೆ ಹೆಚ್ಚುತ್ತಿರುವ ದಬ್ಬಾಳಿಕೆ

2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಸರಕಾರವನ್ನು ಪ್ರಶ್ನಿಸುವ ಪತ್ರಕರ್ತರು ಮತ್ತು ಹೋರಾಟಗಾರರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಕಳೆದ ವರ್ಷ 150ನೇ ಸ್ಥಾನದಿಂದ 161ನೇ ಸ್ಥಾನಕ್ಕೆ ಕುಸಿದಿದ್ದು, ಇದು ಅತ್ಯಂತ ಕಳಪೆ ಮಟ್ಟವಾಗಿದೆ. ಇತ್ತೀಚಿನ ಹಲವಾರು ವಿದ್ಯಮಾನಗಳು, ಪ್ರಜಾಪ್ರಭುತ್ವದ 4ನೇ ಸ್ತಂಭ ಪೂರ್ತಿ ದುರವಸ್ಥೆ ಮುಟ್ಟಿರುವುದನ್ನು ಹೇಳುತ್ತಿವೆ. ಸರಕಾರ ಮತ್ತು ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಹಲವು ಪತ್ರಕರ್ತರು, ಹೋರಾಟಗಾರರನ್ನು ಜೈಲಿಗೆ ಹಾಕಲಾಗಿದೆ. ಕಿರುಕುಳ ನೀಡುವುದು ಮತ್ತು ಕಣ್ಗಾವಲು ಇಡುವುದು ನಡೆಯುತ್ತಿದೆ.

ಕಳೆದ ಒಂಭತ್ತು ವರ್ಷಗಳಲ್ಲಿ ಸರಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮಾಧ್ಯಮಗಳಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದೆ ಮತ್ತು ಹತ್ತಿಕ್ಕಿದೆ. ಮೋದಿ ಸರಕಾರಕ್ಕೆ ಅಪಥ್ಯವಾಗುವ ಸತ್ಯಗಳನ್ನು ಹೇಳುವ ಪತ್ರಕರ್ತರು ಮಾತ್ರವೇ ಟಾರ್ಗೆಟ್ ಆಗಿದ್ದಾರೆ ಎಂದು 28 ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಮೈತ್ರಿಕೂಟ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News