ಹೆಣ್ಣು ಭ್ರೂಣಹತ್ಯೆ: ಬದಲಾಗದ ಕಠೋರ ಸತ್ಯ

ಬಯಲಾಗಿರುವ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಆಘಾತಕಾರಿ. ಮಂಡ್ಯದ ಆಲೆಮನೆಯಲ್ಲೇ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ನಡೆಯುತ್ತಿತ್ತು ಎಂದರೆ ನಂಬಲಾಗುತ್ತಿಲ್ಲ. ಹೆಣ್ಣುಮಗು ಬೇಡವೆನ್ನುವ, ಕಣ್ಣುಬಿಡುವ ಮುನ್ನವೇ ಹೆಣ್ಣಿನ ಜೀವ ಚಿವುಟಿಹಾಕುವ ಕ್ರೌರ್ಯ ನಿಜಕ್ಕೂ ಭಯಾನಕ. ಕಾಲ ಬದಲಾದರೂ ಹೆಣ್ಣಿನ ವಿಚಾರದಲ್ಲಿನ ಭಾವನೆ ಮತ್ತು ಕ್ರೌರ್ಯ ಬದಲಾಗಿಲ್ಲ ಎಂಬುದು ಕಠೋರ ಸತ್ಯ.

Update: 2023-12-12 06:04 GMT
Editor : Ismail | Byline : ಆರ್.ಜೀವಿ

ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗುತ್ತಲೇ ಇರುವ ಪರಿಣಾಮವಾಗಿ, 2030ರ ವೇಳೆಗೆ ಭಾರತದಲ್ಲಿ ಜನಿಸಲಿರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ 68 ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳುತ್ತಿದೆ. ಸೌದಿ ಅರೇಬಿಯದ ಕಿಂಗ್ ಅಬ್ದುಲ್ಲಾ ಯುನಿವರ್ಸಿಟಿ ಆಫ್ ಸೈನ್ಸ್ ಟೆಕ್ನಾಲಜಿ (ಕೆಎಯುಎಸ್ಟಿ) ಹಾಗೂ ಫ್ರಾನ್ಸ್ ಮೂಲದ ಯನಿವರ್ಸಿಟಿ ಆಫ್ ಪ್ಯಾರಿಸ್ ಸಂಶೋಧಕರು ಜಂಟಿಯಾಗಿ ನಡೆಸಿರುವ ಅಧ್ಯಯನ ಈ ವಿಚಾರವನ್ನು ಉಲ್ಲೇಖಿಸಿದೆ. ಜನನ ಸಂದರ್ಭದ ಲಿಂಗಾನುಪಾತದಲ್ಲಿ 1970ರಿಂದಲೂ ಭಾರೀ ಅಸಮತೋಲನ ಕಂಡುಬಂದಿರುವುದರ ಜೊತೆಗೇ, ಜನನ ಪೂರ್ವ ಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ಪ್ರಕರಣಗಳೂ ಹೆಚ್ಚುತ್ತಿರುವುದು ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. ಇತರ ದೇಶಗಳಲ್ಲಿಯೂ ಇಂತಹ ಅಸಮತೋಲನ ಇದೆಯಾದರೂ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ಭಾರತದಲ್ಲಿನ ಈ ಅಸಮತೋಲನ ಭಿನ್ನ ಎಂದು ಅವರು ಪ್ರತಿಪಾದಿಸಿದ್ದಾರೆ. ಅಧ್ಯಯನಕ್ಕೆ ಒಳಪಡಿಸಲಾಗಿದ್ದ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿ ಗಂಡುಮಗುವಿಗೆ ಆದ್ಯತೆ ಇರುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ) 2020ರಲ್ಲಿ ಪ್ರಕಟಿಸಿದ್ದ ವಿಶ್ವ ಜನಸಂಖ್ಯಾ ಸ್ಥಿತಿ ವರದಿ ಪ್ರಕಾರ, 2020ರಲ್ಲಿ ಭಾರತದಲ್ಲಿ ಗಂಡು ಮಗುವೇ ಬೇಕೆಂಬ ಧೋರಣೆಗೆ ಬಲಿಯಾದ ಹೆಣ್ಣುಮಕ್ಕಳ ಸಂಖ್ಯೆ ಸುಮಾರು 4.6 ಕೋಟಿ. 2015ರಿಂದ 2020ರ ಅವಧಿಯಲ್ಲಿ ಪ್ರತೀ ವರ್ಷವೂ 5.9 ಲಕ್ಷ ಹೆಣ್ಣುಮಕ್ಕಳು ಭ್ರೂಣಹತ್ಯೆಯ ಕಾರಣದಿಂದಾಗಿ ಜನಿಸುವ ಮೊದಲೇ ಇಲ್ಲವಾಗಿದ್ದರೆ, ವರ್ಷವೂ ಸರಾಸರಿ 3.6 ಲಕ್ಷ ಹೆಣ್ಣುಮಕ್ಕಳ ಸಾವು ಜನನದ ನಂತರ ಆಗಿದೆ.

ಯುಎನ್ಎಫ್ಪಿಎ ವರದಿ ಹೇಳುವ ಪ್ರಕಾರ, 2012ರಲ್ಲಿ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುವರಿ ಸ್ತ್ರೀ ಮರಣ ಸಂಭವಿಸಿದೆ. ವಿಶ್ವದ 1,000 ಮಹಿಳೆಯರ ಸಾವಿನಲ್ಲಿ ಭಾರತದ ಮಹಿಳೆಯರ ಹೆಚ್ಚುವರಿ ಸಾವಿನ ಪ್ರಮಾಣ 13.5 ಇತ್ತು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಒಟ್ಟು ಸಾವಿನಲ್ಲಿ ಸುಮಾರು ಶೇ.11.7ರಷ್ಟಿದ್ದ ಈ ಹೆಚ್ಚುವರಿ ಸಾವು, 9ರಲ್ಲಿ ಒಂದು ಮರಣ ಜನನ ನಂತರದಲ್ಲಿ ಹೆಣ್ಣುಮಗುವಿನ ಕುರಿತ ತಿರಸ್ಕಾರದಿಂದ ಆಗಿದ್ದನ್ನು ಸೂಚಿಸುತ್ತಿರುವುದಾಗಿ ವರದಿ ಹೇಳಿತ್ತು. ಪಿತೃಪ್ರಧಾನ ಮತ್ತು ಬಂಡವಾಳಶಾಹಿ ಮನಸ್ಥಿತಿ ಇದಕ್ಕೆ ಕಾರಣವಾಗಿದ್ದು, ಪೋಷಕರು, ವೈದ್ಯರು, ತಂತ್ರಜ್ಞರು ಸೇರಿದಂತೆ ಸುಶಿಕ್ಷಿತರೇ ಜನನ ಪೂರ್ವ ಮತ್ತು ಜನನದ ನಂತರ ಹೆಣ್ಣುಮಕ್ಕಳನ್ನು ಕೊಲ್ಲುವುದರಲ್ಲಿ ತೊಡಗಿರುವ ಕರಾಳತೆಯ ಬಗ್ಗೆ ತಜ್ಞರು ಹೇಳಿದ್ದರು. ಜಗತ್ತಿನಾದ್ಯಂತ ಹೀಗೆ ಇಲ್ಲವಾಗುವ ಒಟ್ಟು 14.26 ಕೋಟಿ ಹೆಣ್ಣುಮಕ್ಕಳಲ್ಲಿ ಭಾರತದ ಪಾಲು ಮೂರನೇ ಒಂದರಷ್ಟು ಅಂದರೆ ಶೇ. 32.1 ಆಗಿದ್ದು, ವಿಶ್ವದ ದೇಶಗಳಲ್ಲೇ ಭಾರತ ಎರಡನೇ ಸ್ಥಾನದಲ್ಲಿರುವುದನ್ನು ವರದಿ ಹೇಳಿತ್ತು. ಮೊದಲ ಸ್ಥಾನದಲ್ಲಿ ಚೀನಾ ಇದ್ದು, ಅಲ್ಲಿ ಇಲ್ಲವಾಗುವ ಹೆಣ್ಣುಮಕ್ಕಳ ಪ್ರಮಾಣ 7.2 ಕೋಟಿ ಅಂದರೆ, ಶೇ.50.7ರಷ್ಟು. ಈ ಪರಿಸ್ಥಿತಿಗೆ ಮುಖ್ಯ ಕಾರಣಗಳು ಗಂಡುಮಗುವಿನ ಆದ್ಯತೆ, ಲಿಂಗ ಅಸಮಾನತೆ ಮತ್ತು ತಂತ್ರಜ್ಞಾನದ ಸುಲಭ ಲಭ್ಯತೆ ಎಂದು ವರದಿ ಗುರುತಿಸಿತ್ತು.

 

ಇದೇ ಅಂಶವನ್ನು ಖಚಿತಪಡಿಸುವ ಇನ್ನೆರಡು ಸಂಶೋಧನೆಗಳನ್ನು ಗಮನಿಸೋಣ. ಪ್ಯೂ ರಿಸರ್ಚ್ ಸೆಂಟರ್ ಸಿದ್ಧಪಡಿಸಿದ ಹೊಸ ಸಂಶೋಧನಾ ವರದಿ ಒಂದು ಮಹತ್ವದ ವಿಚಾರ ಬಹಿರಂಗಪಡಿಸಿದೆ. ಅದರಂತೆ, ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹೆಣ್ಣು ಭ್ರೂಣಹತ್ಯೆಯ ಕಾರಣದಿಂದ ಕಾಣೆಯಾದ ಹೆಣ್ಣುಮಕ್ಕಳ ಸಂಖ್ಯೆ ಹಿಂದೂಗಳಲ್ಲಿಯೇ ಹೆಚ್ಚಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್ಎಫ್ಎಚ್ಎಸ್) ಇತ್ತೀಚಿನ ಮೂರು ವರದಿಗಳಿಂದ ಪಡೆದಿರುವ ಅಂಕಿಅಂಶಗಳ ಆಧಾರದ ಮೇಲೆ ಪ್ಯೂ ಈ ಈ ಅಂಶವನ್ನು ಕಂಡುಕೊಂಡಿದೆ.

ವಾಶಿಂಗ್ಟನ್ ಮೂಲದ ಪ್ಯೂ ರಿಸರ್ಚ್ ಸೆಂಟರ್ ವಿಶ್ಲೇಷಣೆಯ ಪ್ರಕಾರ, 2000ದಿಂದ 2019ರ ಅವಧಿಯಲ್ಲಿ ಹೆಣ್ಣು ಭ್ರೂಣಹತ್ಯೆಯ ಪರಿಣಾಮವಾಗಿ ಭಾರತದಲ್ಲಿ ಕನಿಷ್ಠ 90 ಲಕ್ಷ ಹೆಣ್ಣುಮಕ್ಕಳು ಇಲ್ಲವಾಗಿದ್ದಾರೆ. ಪ್ರಸವಪೂರ್ವ ಲಿಂಗಪತ್ತೆ ಪರೀಕ್ಷೆಯನ್ನು ಭಾರತ 1994ರಲ್ಲಿಯೇ ನಿಷೇಧಿಸಿದೆ. ಹಾಗಿದ್ದೂ, ಅಲ್ಟ್ರಾಸೌಂಡ್ ಸೌಲಭ್ಯಗಳ ರಹಸ್ಯ ಬಳಕೆಯ ಪರಿಣಾಮವಾಗಿ, ಹೆಣ್ಣು ಭ್ರೂಣಹತ್ಯೆ ಅವ್ಯಾಹತವಾಗಿ ಮುಂದುವರಿದೇ ಇದೆ.

 

ಹೀಗೆ ಜನನ ಪೂರ್ವವೇ ಇಲ್ಲವಾಗಿ ಹೋಗಿರುವ ಹೆಣ್ಣುಮಕ್ಕಳ ಒಟ್ಟು ಪ್ರಮಾಣದ ಶೇ.86.7ರಷ್ಟು ಪಾಲು, ದೇಶದ ಜನಸಂಖ್ಯೆಯ ಶೇ.79.8ರಷ್ಟಿರುವ ಹಿಂದೂ ಸಮುದಾಯದ್ದೇ ಆಗಿದೆ. ಅಂದರೆ, ವರದಿಯ ಪ್ರಕಾರ 78 ಲಕ್ಷ ಹೆಣ್ಣುಮಕ್ಕಳು ಹಿಂದೂ ಸಮುದಾಯವೊಂದರಲ್ಲಿಯೇ ಇಲ್ಲವಾಗಿದ್ದಾರೆ. ನಂತರದ ಸ್ಥಾನದಲ್ಲಿ ಸಿಖ್ ಸಮುದಾಯವಿದ್ದು, ದೇಶದ ಜನಸಂಖ್ಯೆಯ ಕೇವಲ ಶೇ.1.7ರಷ್ಟಿರುವ ಅವರಲ್ಲಿ ಭ್ರೂಣಹತ್ಯೆಯಿಂದ ಇಲ್ಲವಾಗಿರುವ ಹೆಣ್ಣುಮಕ್ಕಳು ಶೇ.4.9 ಅಂದರೆ ಸುಮಾರು 4.4 ಲಕ್ಷ. ದೇಶದ ಜನಸಂಖ್ಯೆಯ ಶೇ.14ರಷ್ಟಿರುವ ಮುಸ್ಲಿಮ್ ಸಮುದಾಯದಲ್ಲಿ ಭ್ರೂಣಹತ್ಯೆಗೆ ಬಲಿಯಾಗಿರುವ ಹೆಣ್ಣುಮಕ್ಕಳ ಸಂಖ್ಯೆ ಶೇ.6.6 ಅಂದರೆ 5.9 ಲಕ್ಷ. ಇನ್ನು, ಜನಸಂಖ್ಯೆಯ ಶೇ.2.3ರಷ್ಟಿರುವ ಕ್ರಿಶ್ಚಿಯನ್ನರಲ್ಲಿ ಭ್ರೂಣಹತ್ಯೆಯಿಂದ ಇಲ್ಲವಾಗಿರುವ ಹೆಣ್ಣುಮಕ್ಕಳ ಪ್ರಮಾಣ ಶೇ.0.6 ಅಂದರೆ 50 ಸಾವಿರ.

 

ಹೆಣ್ಣುಮಕ್ಕಳು ಹೀಗೆ ಜನನಕ್ಕೆ ಮೊದಲೇ ಇಲ್ಲವಾಗುವುದರಿಂದ ಸಾಮಾನ್ಯ ಜನಸಂಖ್ಯೆಯಲ್ಲಿ ಗಂಡು-ಹೆಣ್ಣಿನ ಅನುಪಾತದಲ್ಲಿ ತೀವ್ರ ಅಸಮತೋಲನ ಉಂಟಾಗುತ್ತದೆ. ಎನ್ಎಫ್ಎಚ್ಎಸ್ ಅಂಕಿಅಂಶವು ಹೆಣ್ಣು ಭ್ರೂಣಹತ್ಯೆಯ ಪರಿಣಾಮವಾಗಿ ಇಲ್ಲವಾದ ಹೆಣ್ಣುಮಕ್ಕಳ ಸಂಖ್ಯೆಯನ್ನು ಖಚಿತವಾಗಿ ಕೊಡುವುದಿಲ್ಲ. ನಿರೀಕ್ಷಿತ ಹೆಣ್ಣು ಜನನ ಪ್ರಮಾಣ ಮತ್ತು ಆಗಿರುವ ಹೆಣ್ಣು ಜನನಗಳ ಹೋಲಿಕೆ ಮೂಲಕ ಸಂಶೋಧಕರು ಈ ಸಂಖ್ಯೆಗಳನ್ನು ನಿರ್ಧರಿಸಿದ್ದಾರೆ. ಅಲ್ಲದೆ, ನಿರ್ದಿಷ್ಟ ಅವಧಿಯಲ್ಲಿ ಭಾರತದ ಲಿಂಗಾನುಪಾತವನ್ನು ಅನ್ವಯಿಸುವ ಮೂಲಕ ನಿರೀಕ್ಷಿತ ಸಂಖ್ಯೆಯ ಹೆಣ್ಣು ಜನನಗಳು ಎಷ್ಟಿರಬೇಕಿತ್ತು ಎಂದು ಲೆಕ್ಕ ಹಾಕಿದ್ದಾರೆ.

ಕುತೂಹಲಕ್ಕಾಗಿ, ಈ ಪ್ಯೂ ಸಂಸ್ಥೆಯ ಸಂಶೋಧನೆಗಿಂತ 10 ವರ್ಷಗಳ ಮುಂಚಿನ ಮತ್ತೊಂದು ಸಂಶೋಧನೆ ಏನು ಹೇಳಿದೆ ಎಂಬುದನ್ನು ಗಮನಿಸೋಣ. ಜರ್ಮನ್ ಮೂಲದ ‘ಇನ್ಸ್ಟಿಟ್ಯೂಟ್ ಫಾರ್ ಲೇಬರ್ ಇಕನಾಮಿಕ್ಸ್’ನ ಸಂಶೋಧಕರು 2010ರಲ್ಲಿ ಸಿದ್ಧಪಡಿಸಿದ ಪ್ರಬಂಧದ ಪ್ರಕಾರ, 1995ರಿಂದ 2005ರವರೆಗೆ ಭಾರತದಲ್ಲಿ ಪ್ರತೀ ವರ್ಷವೂ ಜನನಕ್ಕೆ ಮೊದಲೇ ಇಲ್ಲವಾದ ಹೆಣ್ಣುಮಕ್ಕಳ ಸಂಖ್ಯೆ 4 ಲಕ್ಷ 80 ಸಾವಿರ. ಈ ಅವಧಿಯಲ್ಲಿ ಕೂಡ ಶ್ರೀಮಂತ ಮತ್ತು ವಿದ್ಯಾವಂತ ಹಿಂದೂ ಕುಟುಂಬಗಳೇ ಹೆಚ್ಚು ಪ್ರಮಾಣದಲ್ಲಿ ಲಿಂಗ ಪತ್ತೆ ಮತ್ತು ಹತ್ಯೆಗೆ ಕಾರಣವಾಗಿದ್ದವು.

ಆ ವರದಿ ಗುರುತಿಸಿದ ಪ್ರಕಾರ ಹೆಣ್ಣು ಭ್ರೂಣಹತ್ಯೆಗೆ ಮೂರು ಮುಖ್ಯ ಕಾರಣಗಳೆಂದರೆ, ಜಾತಿ, ಸಂಪತ್ತು ಮತ್ತು ಶಿಕ್ಷಣ. ಮೇಲ್ಜಾತಿಯ ಮತ್ತು ಭೂ ಒಡೆತನವುಳ್ಳ ವರ್ಗದಲ್ಲಿ ಹೆಣ್ಣುಮಕ್ಕಳನ್ನು ಪಡೆಯುವುದರ ಬಗೆಗೆ ತಾತ್ಸಾರ. ಲಿಂಗಪತ್ತೆ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಮೇಲ್ಜಾತಿ ಮಹಿಳೆಯರು ಕೆಳಜಾತಿಯವರಿಗಿಂತ ಎರಡು ಪಟ್ಟು ಜಾಸ್ತಿ. ಇದರೊಂದಿಗೆ, ಶಿಕ್ಷಣ ಮತ್ತು ನಗರ ಪ್ರದೇಶದ ವಾಸ ಕೂಡ ಲಿಂಗಪತ್ತೆ ಪರೀಕ್ಷೆಗೆ ಒಳಪಡುವ ಸಾಧ್ಯತೆಯನ್ನು ಹೆಚ್ಚಿಸುವ ಅಪಾಯವಿದೆ ಎಂದೂ ಸಂಶೋಧಕರು ಎಚ್ಚರಿಸುತ್ತಾರೆ.

ಈ ಎರಡೂ ಶೋಧಗಳ ನಡುವೆ ದಶಕದ ಅಂತರವಿದ್ದರೂ, ಎನ್ಎಫ್ಎಚ್ಎಸ್ ಮತ್ತು ಮಾದರಿ ನೋಂದಣಿ ವ್ಯವಸ್ಥೆಯ (ಎಸ್ಆರ್ಎಸ್) ದತ್ತಾಂಶಗಳು ಗಂಡುಮಕ್ಕಳೇ ಬೇಕೆಂಬ ಮನೋಭಾವ ಕಡಿಮೆಯಾಗುತ್ತಿದೆ ಎಂದು ಸೂಚಿಸುತ್ತಿದ್ದರೂ, ಹೆಣ್ಣು ಭ್ರೂಣಹತ್ಯೆ ಎಂಬ ಕಟು ವಾಸ್ತವ ಆಗಲೂ ಇತ್ತು, ಈಗಲೂ ಮುಂದುವರಿದೇ ಇದೆ. ಪ್ರಮಾಣ ಕೊಂಚ ತಗ್ಗಿರಬಹುದಾದರೂ, ಅದು ದೇಶದ ಆರ್ಥಿಕತೆ ಮತ್ತು ಸಾಕ್ಷರತೆ ಬೆಳವಣಿಗೆಯ ದರಕ್ಕೆ ಅನುಗುಣವಾಗಿದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ.

ಇನ್ನು ಲಿಂಗಾನುಪಾತ ವಿಚಾರಕ್ಕೆ ಬರುವುದಾದರೆ, ಸಾಮಾನ್ಯವಾಗಿ ಲಿಂಗಾನುಪಾತವನ್ನು ಒಂದು ಪ್ರದೇಶದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಸಂಖ್ಯೆ ಎಷ್ಟು ಮತ್ತು ಮಹಿಳೆಯರ ಸಂಖ್ಯೆ ಎಷ್ಟು ಎಂಬುದರ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ರಾಜ್ಯ, ದೇಶ ಹೀಗೆ ನಿರ್ದಿಷ್ಟ ಪ್ರದೇಶದ 1,000 ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಎಷ್ಟು ಎಂಬುದನ್ನು ಅದು ಸೂಚಿಸುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಜನಿಸಿದ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳ ಸಂಖ್ಯೆಯನ್ನು ಲೆಕ್ಕ ಹಾಕಿ ಲಿಂಗಾನುಪಾತವನ್ನು ನಿರ್ಧರಿಸಲಾಗುತ್ತದೆ. ಇದು ಹೆಣ್ಣುಮಕ್ಕಳ ಜನನ ಹೆಚ್ಚುತ್ತಿದೆಯೇ, ತಗ್ಗುತ್ತಿದೆಯೇ, ಹುಟ್ಟುವ ಮೊದಲೇ ಭ್ರೂಣಹತ್ಯೆಯ ಪರಿಣಾಮವಾಗಿ ಇಲ್ಲವಾಗುವ ಹೆಣ್ಣು ಮಕ್ಕಳೆಷ್ಟು ಎಂಬುದನ್ನು ಸೂಚಿಸುತ್ತದೆ.

ಮೇಲ್ನೋಟಕ್ಕೆ ಕಾಣುವ ಸಾಮಾನ್ಯ ಲಿಂಗಾನುಪಾತಕ್ಕೂ ನಿರ್ದಿಷ್ಟವಾಗಿ ಐದು ವರ್ಷದಲ್ಲಿ ಜನಿಸಿದವರ ಲಿಂಗಾನುಪಾತಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಭಾರತದ ಒಟ್ಟು ಜನಸಂಖ್ಯೆಯ ಲಿಂಗಾನುಪಾತವು 1,000 ಪುರುಷರಿಗೆ 1,020 ಮಹಿಳೆಯರು. ಹೀಗೆ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ ಎಂಬ ಭಾವನೆ ಬರುತ್ತದೆ. ಆದರೆ 2016ರಿಂದ 2020ರ ಅವಧಿಯಲ್ಲಿ ದೇಶದಲ್ಲಿ ಜನಿಸಿದವರ ಲಿಂಗಾನುಪಾತ 1,000 ಗಂಡು ಮಕ್ಕಳಿಗೆ 929 ಹೆಣ್ಣುಮಕ್ಕಳು. ಇದು ಲಿಂಗಾನುಪಾತದ ಅಸಮತೋಲನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಎನ್ಎಫ್ಎಚ್ಎಸ್-5 ವರದಿ ಪ್ರಕಾರ, ಭಾರತ ಲಿಂಗಾನುಪಾತ 2023 ಪ್ರತೀ 1,000 ಪುರುಷರಿಗೆ 1,020 ಮಹಿಳೆಯರು. ಗ್ರಾಮೀಣ ಪ್ರದೇಶಗಳಲ್ಲಿ, ಲಿಂಗಾನುಪಾತವು 1,000 ಪುರುಷರಿಗೆ 1,037 ಮಹಿಳೆಯರು. ನಗರ ಪ್ರದೇಶಗಳಲ್ಲಿ ಇದು ಈ ಪ್ರಮಾಣ 985. ಜನನ ಸಮಯದ ಲಿಂಗಾನುಪಾತ ನಿರೀಕ್ಷೆಗಿಂತ ಕಡಿಮೆ.

ವಿಶ್ವಾದ್ಯಂತ 5 ಲಕ್ಷ ಕೋವಿಡ್ ಸಾವುಗಳು ಕೋಲಾಹಲವನ್ನೇ ಉಂಟುಮಾಡುತ್ತಿರುವಾಗ, ದೇಶದಲ್ಲಿ 4.6 ಕೋಟಿ ಹೆಣ್ಣುಮಕ್ಕಳ ಸಾವಿನ ಬಗ್ಗೆ ಬೀದಿಗಳಿಂದ ಸಂಸತ್ತಿನವರೆಗೆ ಒಂದು ಮಾತೂ ಇಲ್ಲ ಮತ್ತಿದು ಉದ್ದೇಶಪೂರ್ವಕವಾಗಿದೆ ಎಂದು ಸಾಮಾಜಿಕ ವಿಜ್ಞಾನಿ ಮತ್ತು ಅಭಿವೃದ್ಧಿ ಸ್ತ್ರೀವಾದಿ ಹೋರಾಟಗಾರ್ತಿ ಕಮಲಾ ಭಾಸಿನ್ ಹೇಳಿದ್ದನ್ನು, ವಿಶ್ವಸಂಸ್ಥೆ ವರದಿ ಬಗ್ಗೆ ಬರೆಯುತ್ತ ‘ದಿ ವೀಕ್’ ಮ್ಯಾಗಝಿನ್ ಉಲ್ಲೇಖಿಸಿತ್ತು.

‘‘ಕೇಂದ್ರ ಸರಕಾರದ ‘ಬೇಟಿ ಬಚಾವೋ’ ಘೋಷಣೆಯೇ ನಾಚಿಕೆಗೇಡು. ನಮ್ಮ ಹೆಣ್ಣು ಮಕ್ಕಳನ್ನು ಚೀನಾ ಅಥವಾ ಪಾಕಿಸ್ತಾನದಿಂದ ರಕ್ಷಿಸುವುದಲ್ಲ, ಆ ಹೆಣ್ಣು ಮಕ್ಕಳ ಹೆತ್ತವರಿಂದಲೇ ರಕ್ಷಿಸಬೇಕು ಎಂದು ಆ ಘೋಷಣೆ ಸೂಚಿಸಿದಂತಿದೆ’’ ಎಂದಿದ್ದರು ಕಮಲಾ ಭಾಸಿನ್.

ಶಿಕ್ಷಣ ಸಿಗುತ್ತ ಹೋದ ಹಾಗೆ ಎಲ್ಲವೂ ಬದಲಾಗುತ್ತದೆ ಎಂಬ ಭಾವನೆ ಇತ್ತು. ಆದರೆ ಈಗ ಹೆಚ್ಚು ವಿದ್ಯಾವಂತರು ಮತ್ತು ಹೆಚ್ಚು ಶ್ರೀಮಂತರೇ ಹೆಣ್ಣು ಭ್ರೂಣಹತ್ಯೆಯಲ್ಲಿ ಮತ್ತು ಜನನ ನಂತರದ ಹತ್ಯೆಯಲ್ಲಿ ತೊಡಗಿದ್ದಾರೆ. ವರದಕ್ಷಿಣೆ ಇತ್ಯಾದಿ ನೆಪಗಳನ್ನು ಮುಂದೆ ಮಾಡಿ ಹೆಣ್ಣುಮಗು ಹೊರೆ ಎಂದು ಭಾವಿಸುವುದು ಈಗಲೂ ಮುಂದುವರಿದಿದೆ. ಕೇರಳದಂತಹ ಅತಿ ಹೆಚ್ಚು ಸಾಕ್ಷರರಿರುವ ರಾಜ್ಯದಲ್ಲೇ ಮೊನ್ನೆ ಮೊನ್ನೆ ವರದಕ್ಷಿಣೆ ಪಿಡುಗಿಗೆ ಯುವ ವೈದ್ಯೆಯೊಬ್ಬರು ಬಲಿಯಾಗಿದ್ದು ಸುದ್ದಿಯಾಗಿತ್ತು. ಇದಕ್ಕೆ ವಿರುದ್ಧವಾಗಿ, ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಹೊರೆಯೆಂಬ ಭಾವನೆಯಿಲ್ಲ. ಹಾಗಾಗಿ ಅವರಲ್ಲಿ ಲಿಂಗಾನುಪಾತ ಸಮತೋಲಿತವಾಗಿದೆ.

ವೈದ್ಯರು ಮತ್ತು ತಂತ್ರಜ್ಞರು ಕೇವಲ ಹಣಕ್ಕಾಗಿ ಲಿಂಗಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣಹತ್ಯೆಯಲ್ಲಿ ಕಾನೂನುಬಾಹಿರವಾಗಿ ತೊಡಗುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಲಿಂಗಪತ್ತೆ ಕೇಂದ್ರಗಳು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಅದಕ್ಕೆ ಸಾಕ್ಷಿಯೆಂಬಂತೆ ಕರ್ನಾಟಕದಲ್ಲಿ ಈಗ ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಬೆಚ್ಚಿಬೀಳಿಸುವಂತಿವೆ.

ಹೆಣ್ಣನ್ನು ಸತತವಾಗಿ ಎಲ್ಲ ರೀತಿಯಿಂದಲೂ ಕೊಲ್ಲುತ್ತಲೇ ಬಂದಿರುವ ಈ ಸಮಾಜ ಇನ್ನೂ ಬದಲಾಗಿಲ್ಲ. ಇನ್ನೂ ಯಾವ ಕಾಲದಲ್ಲಿದ್ದೇವೆ ನಾವೆಲ್ಲ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಜೀವಿ

contributor

Similar News