ರಾಜಕೀಯ ಮೇಲಾಟಕ್ಕೆ ಅಂಗಣವಾಗಿರುವ ಭಾರತೀಯ ಕ್ರೀಡಾ ಕ್ಷೇತ್ರ
ಜಗತ್ತಿನ ಕ್ರೀಡಾ ಪ್ರಿಯರ ಗಮನವೆಲ್ಲ ಜುಲೈ 26ರಿಂದ ಆರಂಭವಾಗಿರುವ ಪ್ಯಾರಿಸ್ ಒಲಿಂಪಿಕ್ಸ್ ಕಡೆಗೆ ಇದೆ. ಕಳೆದ ಒಲಿಂಪಿಕ್ಸ್‌ನಲ್ಲಿ ಈ ಹಿಂದಿನ ಇತರ ಒಲಿಂಪಿಕ್ಸ್ ಗಳಿಗಿಂತ ಉತ್ತಮ ಪ್ರದರ್ಶನ ತೋರಿದ್ದ ಭಾರತ ಈ ಬಾರಿ ಅದನ್ನು ಇನ್ನಷ್ಟು ಉತ್ತಮಗೊಳಿಸುವ ಇರಾದೆಯಲ್ಲಿದೆ. ಆದರೆ ಒಟ್ಟಾರೆ ದೇಶದ ಕ್ರೀಡಾ ರಂಗದ ಪರಿಸ್ಥಿತಿ ಹೇಗಿದೆ? ಭಾರತದ ಕ್ರೀಡಾ ಪಟುಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಎದುರಿಸುವ ಸವಾಲುಗಳು ಏನೇನು? ಗ್ರಾಮೀಣ ಕ್ರೀಡಾಪಟುಗಳು ಎದುರಿಸುವ ಜಾತಿ ತಾರತಮ್ಯ, ಸೌಲಭ್ಯ ಹಾಗೂ ಆರ್ಥಿಕ ಸವಾಲುಗಳಿಗೆ ಪರಿಹಾರ ಸಿಕ್ಕಿದೆಯೇ? ಕ್ರೀಡೆಯಲ್ಲಿ ರಾಜಕೀಯದ ಹಸ್ತಕ್ಷೇಪ ಈಗ ಎಷ್ಟಿದೆ? ಅದರ ಪರಿಣಾಮಗಳೇನೇನು?
ಶುಭ್ರವಾಗಿ ಕಣ್ಸೆಳೆಯುತ್ತಿರುವ ಸಾವಿರಾರು ವರ್ಷಗಳ ಇತಿಹಾಸವುಳ್ಳ ಪ್ಯಾರಿಸ್‌ನ ಸೀನ್ ನದಿಯ ಮೇಲೆ ಜುಲೈ 26ರಂದು ಉದ್ಘಾಟನೆಗೊಂಡ ಈ ಬಾರಿಯ ಒಲಿಂಪಿಕ್ಸ್ ಆಗಸ್ಟ್ 12ರಂದು ಸಮಾರೋಪಗೊಳ್ಳಲಿದೆ.
ಭಾರತದಿಂದ ಭಾಗವಹಿಸಿರುವ 117 ಕ್ರೀಡಾಪಟುಗಳಲ್ಲಿ ಪುರುಷ ಅತ್ಲೀಟ್‌ಗಳು 70 ಮತ್ತು ಮಹಿಳಾ ಅತ್ಲೀಟ್‌ಗಳು 47. ಒಟ್ಟು 69 ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ಭಾರತದಿಂದ ಭಾಗವಹಿಸುತ್ತಿರುವ ಅತಿ ಹಿರಿಯ ಅತ್ಲೀಟ್ 44 ವರ್ಷದ ರೋಹನ್ ಬೋಪಣ್ಣ. ಅತಿ ಕಿರಿಯ ಅತ್ಲೀಟ್ ಕರ್ನಾಟಕದ ಈಜುಗಾರ್ತಿ 14 ವರ್ಷದ ಧಿನಿಧಿ ದೇಸಿಂಗು. ಈವರೆಗೆ ಒಂದಕ್ಕಿಂತ ಹೆಚ್ಚು ಒಲಿಂಪಿಕ್ ಪದಕ ಗೆದ್ದ ಏಕೈಕ ಭಾರತೀಯ ಅತ್ಲೀಟ್ ಎಂದರೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು.
ಕಳೆದ ಬಾರಿ 7 ಪದಕಗಳನ್ನು ಗೆದ್ದು ಒಲಿಂಪಿಕ್ಸ್ ನಲ್ಲಿ ಈವರೆಗಿನ ಅತ್ಯುತ್ತಮ ಸಾಧನೆ ತೋರಿದ್ದ ಭಾರತ ಈ ಬಾರಿ 7ನ್ನು ದಾಟುವುದೇ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಸಲದ ಮೊದಲ ಪದಕವು ಮನು ಭಾಕರ್‌ರಿಂದ ಶೂಟಿಂಗ್‌ನಲ್ಲಿ ಬಂದಿದೆ. 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಭಾರತಕ್ಕೆ ಕಂಚಿನ ಪದಕ ದೊರಕಿಸಿಕೊಟ್ಟಿದ್ದಾರೆ.
ಒಲಿಂಪಿಕ್ಸ್‌ನಲ್ಲಿ 1996ರ ನಂತರ ಭಾರತೀಯ ಅತ್ಲೀಟ್‌ಗಳು ಟೆನಿಸ್, ಬ್ಯಾಡ್ಮಿಂಟನ್, ಶೂಟಿಂಗ್, ಕುಸ್ತಿ ಮತ್ತು ಬಾಕ್ಸಿಂಗ್ ಮೊದಲಾದ ವಿಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳಾ ಅತ್ಲೀಟ್‌ಗಳೇ ಮೇಲುಗೈ ಸಾಧಿಸಿರುವುದನ್ನೂ ಗಮನಿಸಬಹುದು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕ ತಂದವರೆಂದರೆ ಪಿ.ವಿ. ಸಿಂಧು ಮತ್ತು ಸಾಕ್ಷಿ ಮಲಿಕ್.
ಹಾಗಿದ್ದೂ ಭಾರತದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ, ಸೌಲಭ್ಯ ನಿಜವಾಗಿಯೂ ಸಿಗುತ್ತಿದೆಯೇ ಅಥವಾ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಪಾಲಿಗೆ ಅದೊಂದು ವೈಯಕ್ತಿಕ ಹೋರಾಟದ ಅನುಭವ ಮಾತ್ರವಾಗುತ್ತಿದೆಯೇ?
1990ರ ದಶಕದ ಆರಂಭದಿಂದಲೂ ಕ್ರೀಡೆಗಳಿಗೆ ಗಣನೀಯ ಮಟ್ಟದ ಪ್ರಾಯೋಜಕತ್ವ ಸಿಗುತ್ತದೆ. ಆದರೆ ಹೆಚ್ಚಿನ ಪ್ರಾಯೋಜಕತ್ವದ ಹಣ ಕ್ರಿಕೆಟ್‌ಗೇ ಹೋಗುತ್ತದೆ ಎಂಬುದು ಕೂಡ ಅಷ್ಟೇ ಸತ್ಯ. ಹಾಗಿದ್ದೂ ಏಶ್ಯಾಡ್‌ನಂತಹ ಪ್ರಾದೇಶಿಕ ಆಟಗಳಲ್ಲಿ ಭಾರತದ ಈಚಿನ ಸಾಧನೆ ಸಣ್ಣದಲ್ಲ. ಮೊಟ್ಟಮೊದಲ ಏಶ್ಯನ್ ಕ್ರೀಡಾಕೂಟ 1951ರಲ್ಲಿ ಹೊಸದಿಲ್ಲಿಯಲ್ಲಿ ನಡೆದಾಗ, 11 ದೇಶಗಳ ಒಟ್ಟು 489 ಕ್ರೀಡಾಪಟುಗಳು 57 ಸ್ಪರ್ಧೆಗಳಲ್ಲಿದ್ದರು. 24 ಚಿನ್ನದ ಪದಕಗಳು ಮತ್ತು ಒಟ್ಟಾರೆ 60 ಪದಕಗಳೊಂದಿಗೆ ಜಪಾನ್ ಅಗ್ರ ತಂಡವಾಗಿದ್ದರೆ, 15 ಚಿನ್ನದ ಪದಕಗಳೂ ಸೇರಿ 51 ಪದಕಗಳೊಂದಿಗೆ ಭಾರತ ನಂತರದ ಸ್ಥಾನದಲ್ಲಿತ್ತು. 1982ರಲ್ಲಿ ಏಶ್ಯನ್ ಕ್ರೀಡಾಕೂಟ ಮತ್ತೊಮ್ಮೆ ಹೊಸದಿಲ್ಲಿಯಲ್ಲಿ ನಡೆದಾಗ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಂತರ ಭಾರತ ಐದನೇ ಸ್ಥಾನದಲ್ಲಿತ್ತು. ಆದರೂ, ಇತರ ದೇಶಗಳ ಸಾಧನೆ ಗಮನಿಸಿದರೆ ಭಾರತ ಹಿಂದುಳಿಯಲು ಕಾರಣವೇನು ಎಂಬುದರ ಬಗ್ಗೆ ಯೋಚಿಸುವುದು ಅಗತ್ಯ.
ಒಲಂಪಿಕ್ಸ್‌ನಲ್ಲೂ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಮೊದಲ ಮೂರು ಏಶ್ಯದ ರಾಷ್ಟ್ರಗಳಾಗಿವೆ. ಇಂಡೋನೇಶ್ಯ, ಉಜ್ಬೇಕಿಸ್ತಾನ್, ಇರಾನ್ ಮತ್ತು ಚೈನೀಸ್ ತೈಪೆಯಂತಹ ದೇಶಗಳು, ಕ್ರೀಡಾ ಸಾಧನೆಯಲ್ಲಿ ಭಾರತಕ್ಕಿಂತ ಮುಂದಿವೆ.
ಜಾಗತಿಕ ಮಟ್ಟದಲ್ಲಿ ಇಂಥ ಹಿನ್ನಡೆ ಏಕಾಗುತ್ತಿದೆ?
1. ಭಾರತದಲ್ಲಿ ಯುವ ಪ್ರತಿಭೆಗಳನ್ನು ಪೋಷಿಸುವಲ್ಲಿ ಅನೇಕ ಸವಾಲುಗಳಿವೆ, ಸಾಮಾಜಿಕ-ಆರ್ಥಿಕ, ಭಾಷಿಕ, ಧಾರ್ಮಿಕ, ಸಾಂಸ್ಕೃತಿಕ ಅಂಶಗಳಲ್ಲದೆ, ಆಹಾರ ಪದ್ಧತಿ, ಸಾಮಾಜಿಕ ನಿಷೇಧ, ಲಿಂಗ ತಾರತಮ್ಯ ಇತ್ಯಾದಿಗಳಿವೆ.
2. ಅಸಮರ್ಪಕ ಮೂಲಸೌಕರ್ಯ ಅಥವಾ ಪೌಷ್ಟಿಕಾಂಶ ಕೊರತೆಯಂಥವು ಕೂಡ ಭಾರತದ ಹಿನ್ನಡೆಗೆ ಕಾರಣ ಎನ್ನಲಾಗುತ್ತದೆ. ಆದರೆ ಮೂಲಸೌಕರ್ಯ ಕೊರತೆಯೊಂದೇ ಕಾರಣವಲ್ಲ ಎಂಬ ವಾದವೂ ಇದೆ. 22 ವಿಶ್ವಕಪ್‌ಗಳಲ್ಲಿ 10ನ್ನು ದಕ್ಷಿಣ ಅಮೆರಿಕದ ದೇಶಗಳಾದ ಬ್ರೆಝಿಲ್ ಮತ್ತು ಉರುಗ್ವೆ ಗೆದ್ದಿವೆ, ಅಲ್ಲಿ ನಿಜವಾದ ಮೂಲಸೌಕರ್ಯ ಇಲ್ಲ. ಬ್ರೆಝಿಲ್‌ನ ಅನೇಕ ಫುಟ್ಬಾಲ್ ಆಟಗಾರರು ರಿಯೊದ ಸ್ಲಮ್‌ಗಳಿಂದ ಬಂದವರಾಗಿದ್ದಾರೆ.
3. ಪರಿಣಿತರು ಗುರುತಿಸುವ ಒಂದು ಮುಖ್ಯ ಕಾರಣವೆಂದರೆ, ಸ್ಥಳೀಯ ಕ್ರೀಡಾ ಸಂಸ್ಕೃತಿಯ ಕೊರತೆ. ಭಾರತದಲ್ಲಿ ಕ್ರೀಡೆಯಲ್ಲಿ ಸ್ಥಳೀಯ ಸಮುದಾಯದ ಹೂಡಿಕೆ ಇಲ್ಲ. ಅವರು ಪಂದ್ಯಗಳನ್ನು ವೀಕ್ಷಿಸುವುದಿಲ್ಲ; ಅವರು ತಮ್ಮ ಮಕ್ಕಳನ್ನು ಹುರಿದುಂಬಿಸುವುದಿಲ್ಲ. ಅಮೆರಿಕದಲ್ಲಿ ಇದಕ್ಕೆ ಪೂರ್ತಿ ವಿರುದ್ಧವಾದ ಸನ್ನಿವೇಶವಿದೆ.
ಕ್ರೀಡೆಗಳಲ್ಲಿ ವ್ಯಾಪಕ ಸಾಮೂಹಿಕ ಭಾಗವಹಿಸುವಿಕೆ ಬೇಕಿದೆ. ಚಿಕ್ಕ ವಯಸ್ಸಿನಲ್ಲಿ ಸಂಭಾವ್ಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಮತ್ತು ಬೆಳೆಸಲು ಶಾಲೆಗಳು ಅನುಕೂಲಕರ ವಾತಾವರಣ ಒದಗಿಸುವಂತಾಗಬೇಕು.
ಶಿಕ್ಷಕರು, ಪೋಷಕರು ಮತ್ತು ಸಮುದಾಯಗಳು ಒಗ್ಗೂಡಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅವರು ಕ್ರೀಡೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳುವಂತಾಗಬೇಕು.
ಲೀಗ್‌ಗಳು ಕ್ರೀಡಾಪಟುಗಳಿಗೆ ಅತ್ಯುತ್ತಮ ಅಂತರ್‌ರಾಷ್ಟ್ರೀಯ ಆಟಗಾರರೊಂದಿಗೆ ಪೈಪೋಟಿಗೆ ನಿಲ್ಲುವ ಅತ್ಯುತ್ತಮ ಅವಕಾಶ ಒದಗಿಸುತ್ತವೆ.
ಜೊತೆಗೆ ಭಾರತದಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಸಾಕಷ್ಟು ಸೂಕ್ತ ಪೌಷ್ಟಿಕ ಆಹಾರ ಸಿಗದೇ ಇರುವುದೂ ಅವರಲ್ಲಿ ಕ್ರೀಡೆಗೆ ಬೇಕಾದ ದೈಹಿಕ ಕ್ಷಮತೆ ಬೆಳೆಸಲು ಸಮಸ್ಯೆಯಾಗುತ್ತಿದೆ ಎಂಬ ದೂರಿದೆ.
ಕ್ರೀಡೆಯನ್ನು ಬೆಂಬಲಿಸಲು ಇರುವ ರಾಷ್ಟ್ರಿಯ ನೀತಿಗಳೇನು?
2018ರಲ್ಲಿ ಪ್ರಾರಂಭವಾದ ಸಮಗ್ರ ಶಿಕ್ಷಾ ಅಭಿಯಾನ, ಶಾಲಾ ಕ್ರೀಡೆಗಳನ್ನು ಬೆಂಬಲಿಸುವ ನಾಲ್ಕು ಪ್ರಮುಖ ವಿಧಾನಗಳನ್ನು ಒಳಗೊಂಡಿದೆ:
1.ಎಲ್ಲಾ ಶಾಲೆಗಳಿಗೆ ಕ್ರೀಡಾ ಸಲಕರಣೆಗಳನ್ನು ಒದಗಿಸುವುದು.
2.ಕ್ರೀಡಾ ಶಿಕ್ಷಣ ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿರಬೇಕು.
3.ಶಾಲೆಯ ಪಠ್ಯಕ್ರಮದಲ್ಲಿ ಕ್ರೀಡೆಯ ಪ್ರಸ್ತುತತೆ ಒತ್ತಿಹೇಳಲು ಈ ಯೋಜನೆಯಡಿ ಕ್ರೀಡಾ ಸಲಕರಣೆಗಳ ಪೂರೈಕೆ
4.ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲ.
ಏಕೆಂದರೆ ಖೇಲೋ ಇಂಡಿಯಾ ಕಾರ್ಯಕ್ರಮ ಕ್ರೀಡೆಯ ಅಭಿವೃದ್ಧಿಗೆ ಮೀಸಲಾದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ (ಕೆಐವೈಜಿ), ಬಹುಶಿಸ್ತೀಯ ತಳಮಟ್ಟದ ಆಟಗಳ ಯೋಜನೆ.
ಇದಲ್ಲದೆ, ಕ್ರೀಡೆಯನ್ನು ಪ್ರೋತ್ಸಾಹಿಸಲು ಫಿಟ್ ಇಂಡಿಯಾ ಮೂವ್‌ಮೆಂಟ್ ಮತ್ತು ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಸ್ಕೀಮ್ ಇದೆ. ಈ ಇತ್ತೀಚಿನ ನೀತಿಗಳ ಪ್ರಮುಖ ಗುರಿ ತಳಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಕೆಐವೈಜಿ ಮತ್ತು ಅಂಥದೇ ಇತರ ಕಾರ್ಯಕ್ರಮಗಳ ಮೂಲಕ ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವುದಾಗಿದೆ.
ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹೇಳುವ ಪ್ರಕಾರ,
1. ಭಾರತದಲ್ಲಿ ಪ್ರತಿಭೆ ಅಥವಾ ಸಾಮರ್ಥ್ಯದ ಕೊರತೆ ದೊಡ್ಡ ಸವಾಲು ಅಲ್ಲ, ಬದಲಾಗಿ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ತರಬೇತುದಾರರನ್ನು ಕರೆತರುವುದು ಮತ್ತು ತರಬೇತಿ ನೀಡಲು ಮತ್ತು ಯುವ ಕ್ರೀಡಾಪಟುಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸುವುದು ಸವಾಲಿದ್ದಾಗಿದೆ.
2. ದೇಶದ ಹೆಚ್ಚಿನ ಪ್ರತಿಭೆಗಳು ಪತ್ತೆಯಾಗದೇ ಉಳಿದಿರುವುದು ಕೂಡ ಒಂದು ಸಮಸ್ಯೆ.
3. ಸರಕಾರವು ಆರ್ಥಿಕ ಮತ್ತು ಭಾವನಾತ್ಮಕ ಎರಡೂ ರೀತಿಯಲ್ಲಿ ಸಹಾಯ ಒದಗಿಸುವ ಅಗತ್ಯವಿದೆ.
4. ಕಷ್ಟದಲ್ಲಿರುವ ಅಥವಾ ಕ್ರೀಡೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳಬಯಸುವ ಕ್ರೀಡಾಪಟುಗಳಿಗೆ ಈ ಬೇಷರತ್ತಾದ ಬೆಂಬಲ ಬೇಕು. ಇಲ್ಲದೆ ಹೋದಲ್ಲಿ ಪ್ರತಿಭಾವಂತರು ಮತ್ತೆ ಕ್ರೀಡೆಗೆ ಮರಳುವ ಅವಕಾಶವೇ ಇಲ್ಲದಂತಾಗಿ ನೇಪಥ್ಯಕ್ಕೆ ಸರಿದುಹೋಗುತ್ತಾರೆ.
5. ಇನ್ನು ಎನ್‌ಜಿಒಗಳಿಗೆ ತಳಮಟ್ಟದ ಪ್ರದೇಶಗಳ ಬಗ್ಗೆ ಗೊತ್ತಿರುವುದರಿಂದ, ಅವು ಪ್ರತಿಭೆಯನ್ನು ಹುಡುಕಲು ಆಸಕ್ತಿ ಹೊಂದಿರುವ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಬಹುದು, ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಬಹುದು ಮತ್ತು ಆ ಪ್ರದೇಶಗಳಲ್ಲಿ ಅಕಾಡಮಿಗಳನ್ನು ಸ್ಥಾಪಿಸಬಹುದು. ಅರ್ಹ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಇದರಿಂದ ಸಾಧ್ಯವಾಗಲಿದೆ.
ಇದೆಲ್ಲವೂ ಒಂದೆಡೆಯಾದರೆ, ಭಾರತದಲ್ಲಿ ಕ್ರೀಡೆ ಮತ್ತು ರಾಜಕೀಯ ಒಂದರಿಂದ ಇನ್ನೊಂದು ಬಿಡಿಸಲಾರದಂತೆ ಹೆಣೆದುಕೊಂಡಿರುವುದು ಏಕೆ ಮತ್ತು ಹೇಗೆ ಎಂಬ ಪ್ರಶ್ನೆ ಇನ್ನೊಂದೆಡೆಗಿದೆ. ಏಕೆ ನಮ್ಮಲ್ಲಿನ ಅನೇಕ ಕ್ರೀಡಾ ಸಂಸ್ಥೆಗಳು ರಾಜಕಾರಣಿಗಳ ನಿಯಂತ್ರಣದಲ್ಲಿಯೇ ಇವೆ? ಭಾರತ ಒಲಿಂಪಿಕ್ ಪದಕಗಳನ್ನು ಗೆದ್ದ ಎಂಟು ಕ್ರೀಡೆಗಳಲ್ಲಿ ನಾಲ್ಕು ಕ್ರೀಡೆಗಳೆಂದರೆ ಹಾಕಿ, ಶೂಟಿಂಗ್, ಬ್ಯಾಡ್ಮಿಂಟನ್ ಮತ್ತು ಟೆನಿಸ್. ಇವೆಲ್ಲವೂ ರಾಜಕಾರಣಿಗಳ ನೇತೃತ್ವದಲ್ಲಿದೆ. ಭಾರತೀಯ ಕುಸ್ತಿ ಫೆಡರೇಷನ್ ನೇತೃತ್ವ ವಹಿಸಿದ್ದವರು ಏನೆಲ್ಲ ಅವಾಂತರಕ್ಕೆ ಕಾರಣರಾದರು ಎಂಬುದನ್ನು ನೋಡಿದ್ದೇವೆ.
ಕ್ರೀಡೆಗಳು ರಾಜಕಾರಣಿಗಳಿಗೆ ಅಂತಿಮವಾಗಿ ಪ್ರಚಾರದ ಸರಕು. ಕ್ರೀಡಾಪಟುವಿನ ಯಶಸ್ಸನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಬಳಸುತ್ತಾರೆ. ಭಾರತದಂತಹ ಸಂಪನ್ಮೂಲ ಕೊರತೆಯಿರುವ ದೇಶದಲ್ಲಿ, ಕ್ರೀಡೆಗಳ ಅಭಿವೃದ್ಧಿಗೆ ಅಗತ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ರಾಜಕಾರಣಿಗಳಿಂದ ಸಾಧ್ಯವಿದೆ.
ಆದರೆ ವಾಸ್ತವದಲ್ಲಿ ಅದೆಲ್ಲವೂ ಆಗುತ್ತಿದೆಯೇ ಎಂಬ ಪ್ರಶ್ನೆಯೂ ಇದೆ. ಆಡಳಿತಾತ್ಮಕ ವಿಷಯಗಳಿಗೆ ರಾಜಕಾರಣಿಗಳು ಮತ್ತು ಕ್ರೀಡಾ ವಿಷಯಗಳಲ್ಲಿ ಮಾರ್ಗದರ್ಶನ ನೀಡಲು ಕ್ರೀಡಾಪಟುಗಳ ಸಮತೂಕದ ಸಂಯೋಜನೆ ಅಗತ್ಯವಿದೆ ಎನ್ನುವವರೂ ಇದ್ದಾರೆ. ಆದರೆ ಇಂಥ ವ್ಯವಸ್ಥೆ ಕ್ರೀಡಾಪಟುಗಳನ್ನು ರಕ್ಷಿಸುವಂತಿರಬೇಕು. ಅವರ ಸಾಧನೆಯನ್ನು ತಮ್ಮದೆಂದು ಅಧಿಕಾರಿಗಳು, ಆಡಳಿತಾರೂಢರು ತೋರಿಸಿಕೊಳ್ಳುವ ಹಾಗಾಗಬಾರದು.
ಇವತ್ತು ಕ್ರಿಕೆಟ್ ಮಾತ್ರವಲ್ಲ ಇಡೀ ಕ್ರೀಡಾ ಕ್ಷೇತ್ರವೇ ರಾಜಕೀಯ ಮೇಲಾಟಕ್ಕೆ ಅಂಗಣವಾಗಿಬಿಟ್ಟಿದೆ. ಅದರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಆದರೆ, ರಾಜಕೀಯ ಮೇಲಾಟದಲ್ಲಿ ನಿಜವಾದ ಆಟ ಬಡವಾಗು ವುದು, ಕ್ರೀಡಾ ಪ್ರತಿಭೆಗಳು ಪ್ರಾಮಾಣಿಕ ಪ್ರೋತ್ಸಾಹದ ಕೊರತೆಯಿಂದ ನಲುಗುವುದು ಆಗಕೂಡದು.
ಸ್ಪರ್ಧಾ ಕಣದಲ್ಲಿರುವ
7 ಮಂದಿ ಕನ್ನಡಿಗರು
ಕೊಡಗಿನ ರೋಹನ್ ಬೋಪಣ್ಣ -ಟೆನಿಸ್ ಪುರುಷರ ಡಬಲ್ಸ್
ಕೊಡಗಿನ ಅಶ್ವಿನಿ ಪೊನ್ನಪ್ಪ-ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್
ಬೆಂಗಳೂರಿನ ಅದಿತಿ ಅಶೋಕ್-ಗಾಲ್ಫ್
ಮಂಗಳೂರಿನ ಎಂ.ಆರ್. ಪೂವಮ್ಮ-ಮಹಿಳೆಯರ ರಿಲೇ ತಂಡ
ಬೆಂಗಳೂರಿನ ಶ್ರೀಹರಿ ನಟರಾಜ್-100 ಮೀ. ಬ್ಯಾಕ್‌ಸ್ಟ್ರೋಕ್
ಬೆಂಗಳೂರಿನ ಧಿನಿಧಿ ದೇಸಿಂಗು-ಮಹಿಳೆಯರ 200 ಮೀ. ಫ್ರೀಸ್ಟೈಲ್
ಬೆಂಗಳೂರಿನ ಅರ್ಚನಾ ಕಾಮತ್-ಮಹಿಳೆಯರ ಟೇಬಲ್ ಟೆನಿಸ್ ತಂಡ
ಇವರ ಜೊತೆ ಹರ್ಯಾಣದ ನಿಶಾಂತ್ ದೇವ್ ಹಾಗೂ ಕೇರಳದ ಮಿಜೋ ಚಾಕೋ ಅವರೂ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.