ಉತ್ತರ ಪ್ರದೇಶ: ಬಿಜೆಪಿಯ ದಿಲ್ಲಿ ಗದ್ದುಗೆ ದಾರಿಗೆ ಸವಾಲು?

Update: 2024-05-14 05:47 GMT
Editor : Ismail | Byline : ಆರ್. ಜೀವಿ

ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶವನ್ನು ಗೆದ್ದರೆ ದಿಲ್ಲಿಯನ್ನು ಗೆದ್ದಂತೆ. ಯುಪಿ ಮೂಲಕವೇ ದಿಲ್ಲಿ ಗದ್ದುಗೆ ಹಿಡಿಯಬೇಕು. ಆದರೆ ಉತ್ತರ ಪ್ರದೇಶದಲ್ಲಿ ಈ ಬಾರಿ ಏನಾಗಲಿದೆ? ಬಿಜೆಪಿಗೆ ಈ ಬಾರಿ ಯುಪಿಯಲ್ಲಿ ಏನೇನು ಸವಾಲುಗಳಿವೆ? ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದ್ದರೆ, ಕಳೆದ ಬಾರಿಯಷ್ಟನ್ನು ಪಡೆಯುವುದೂ ಕಷ್ಟ ಎಂಬ ಚರ್ಚೆ ಜೋರಾಗಿದೆ.

ಅತಿ ಹೆಚ್ಚು, ಅಂದರೆ 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ದಿಲ್ಲಿ ಗದ್ದುಗೆ ಹಾದಿಯಲ್ಲಿ ಅಷ್ಟೇ ನಿರ್ಣಾಯಕವೂ ಹೌದು. ರಾಜ್ಯದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿನ 26 ಸ್ಥಾನಗಳಿಗೆ ಈಗಾಗಲೇ ಮೂರು ಹಂತಗಳಲ್ಲಿ ಮತದಾನ ಮುಗಿದಿದೆ. ಈ ಮೂರು ಹಂತಗಳ ರಾಜಕೀಯವನ್ನು ಗಮನಿಸಿದಾಗ, ಒಂದು ವಿಷಯ ಸ್ಪಷ್ಟವಾಗಿದೆ. ಎಲ್ಲಾ ಮೂರೂ ಪಕ್ಷಗಳು ಅತ್ಯಂತ ಹಿಂದುಳಿದ ಜಾತಿಗಳ ಓಲೈಕೆಗೆ ಗಮನ ಕೇಂದ್ರೀಕರಿಸಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಎದುರಾಳಿಗಳಾಗಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಇವೆ. ಎಸ್ಪಿ ಇಂಡಿಯಾ ಮೈತ್ರಿಕೂಟದ ಭಾಗವೂ ಹೌದು. ಎಸ್ಪಿ ಯಾದವೇತರ ಒಬಿಸಿಗಳನ್ನು ಮತ್ತು ಬಿಎಸ್ಪಿ ಜಾಟವೇತರ ದಲಿತರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಯಸಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲೂ ಆ ಸಮುದಾಯಗಳನ್ನು ವಿಶೇಷವಾಗಿ ಪರಿಗಣಿಸಿವೆ. ಬಿಜೆಪಿ ಒಂದು ದಶಕದಿಂದಲೂ ಅನುಸರಿಸುತ್ತಿರುವ ಮಾದರಿ ಇದಾಗಿದ್ದು, ಅದು ಇತರ ಅನೇಕ ಸಾಮಾಜಿಕ ಗುಂಪುಗಳ ನಡುವೆ ಸಮತೋಲನ ಸಾಧಿಸುತ್ತ ಬಂದಿದೆ.

ಪ್ರಬಲವಲ್ಲದ ಒಬಿಸಿ ಮತ್ತು ದಲಿತ ಸಮುದಾಯಗಳನ್ನು ಅಂದರೆ ಯಾದವೇತರ ಮತ್ತು ಜಾಟವೇತರ ಜಾತಿ ಗುಂಪುಗಳನ್ನು ಒಳಗೊಳ್ಳುವ ತಂತ್ರವನ್ನು ಬಿಜೆಪಿ ದಶಕದಿಂದಲೂ ಮಾಡಿಕೊಂಡು ಬಂದಿದೆ. ಯುಪಿಯಲ್ಲಿ ಎಸ್ಪಿ, ಬಿಎಸ್ಪಿ, ಆರ್ಎಲ್ಡಿ ಚುನಾವಣೆ ಗೆಲ್ಲಲು ತಮ್ಮ ಮೂಲ ವೋಟು ಬ್ಯಾಂಕ್ ಅನ್ನು ಹೆಚ್ಚು ಅವಲಂಬಿಸಿವೆ. ಅದರ ಜೊತೆಗೇ ಹೆಚ್ಚಿನ ಪಕ್ಷಗಳು ಇತರ ಜಾತಿಗಳನ್ನು ಹೆಚ್ಚುವರಿ ಮತಬ್ಯಾಂಕ್ ಎಂದು ಸೇರಿಸಿಕೊಳ್ಳುತ್ತವೆ.

ಬಿಜೆಪಿ ಅನುಸರಿಸಿಕೊಂಡು ಬಂದಿರುವುದು ಇದೇ ತಂತ್ರವನ್ನು. ತನ್ನ ಎದುರಾಳಿ ಪಕ್ಷಗಳು ಮೂಲ ಮತದಾರರ ಕಡೆಗೆ ಗಮನ ಕೊಟ್ಟಿದ್ದ ಹೊತ್ತಿನಲ್ಲಿ ಅದು ಹಲವು ಸಣ್ಣ ಸಮುದಾಯಗಳನ್ನು ಒಟ್ಟುಗೂಡಿಸುತ್ತ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಇಂಥ ಮಾದರಿಯನ್ನು ರೂಪಿಸಿದೆ. ಈಗಿನ ಚುನಾವಣೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿಗಳು ಕೂಡ ಸ್ವಲ್ಪ ಮಟ್ಟಿಗೆ ಬಿಜೆಪಿಯ ಮಾದರಿಯನ್ನೇ ಅನುಸರಿಸುತ್ತಿವೆ.

ಎಸ್ಪಿ ಯಾದವ ಸಮುದಾಯದವರಿಗೆ ಕೇವಲ ಐದು ಟಿಕೆಟ್ಗಳನ್ನು ನೀಡಿದೆ ಮತ್ತು ಬಿಎಸ್ಪಿ ಜಾಟವ್ ಅಭ್ಯರ್ಥಿಗಳಿಗೆ ಕಡಿಮೆ ಟಿಕೆಟ್ ನೀಡಿದೆ. ಬಿಎಸ್ಪಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಶೇ.30ರಷ್ಟು ಟಿಕೆಟ್ ನೀಡಿದೆ. ಆದರೆ ಎಸ್ಪಿ ತನ್ನ ಹಿಂದಿನ ಮಾದರಿಯನ್ನು ಬದಲಾಯಿಸಿದ್ದು, ತನ್ನ ಎರಡನೇ ಪ್ರಮುಖ ಮತಬ್ಯಾಂಕ್ ಆಗಿರುವ ಮುಸ್ಲಿಮ್ ಸಮುದಾಯಕ್ಕೆ ಶೇ.7ರಷ್ಟು ಟಿಕೆಟ್ಗಳನ್ನು ಮಾತ್ರ ಕೊಟ್ಟಿದೆ. ಎರಡೂ ಪಕ್ಷಗಳು ತಮ್ಮ ತೆಕ್ಕೆಗೆ ತರಲು ಉದ್ದೇಶಿಸಿರುವ ಸಮುದಾಯದವರಿಗೆ ಟಿಕೆಟ್ ನೀಡಿವೆ. ಗಡೇರಿಯಾ ಸಮುದಾಯಕ್ಕೆ ಸೇರಿದ ಶ್ಯಾಮ್ಲಾಲ್ ಪಾಲ್ ಅವರನ್ನು ಯುಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಯಾದವೇತರ ಒಬಿಸಿಗಳನ್ನು ಓಲೈಸಲು ಎಸ್ಪಿ ಮುಂದಾಗಿದೆ. ಮುಸ್ಲಿಮರು ಮತ್ತು ಯಾದವರ ಹೊರತಾಗಿ ಪಕ್ಷ ಕುರ್ಮಿ, ಮೌರ್ಯ, ಶಾಕ್ಯ, ಸೈನಿ ಮತ್ತು ಕುಶ್ವಾಹ ಸಮುದಾಯಗಳತ್ತ ಗಮನ ಹರಿಸಿದೆ. ಈ ಸಮುದಾಯಗಳು ರಾಜ್ಯದ ಜನಸಂಖ್ಯೆಯ ಸುಮಾರು ಶೇ.6ರಿಂದ ಶೇ.8ರಷ್ಟಿವೆ. ಎಸ್ಪಿಯ 66 ಒಬಿಸಿ ಅಭ್ಯರ್ಥಿಗಳಲ್ಲಿ ಕೆಲವರಷ್ಟೇ ಯಾದವರಿದ್ದಾರೆ. ಅದು 31 ಎಸ್ಸಿ ಅಭ್ಯರ್ಥಿಗಳಿಗೂ ಟಿಕೆಟ್ ನೀಡಿದೆ. ಪ್ರಭಾವಶಾಲಿ ಸಂಖ್ಯೆಯಲ್ಲಿರುವ ಪ್ರಬಲವಲ್ಲದ ಒಬಿಸಿಗಳನ್ನು ಮೊದಲು ಪ್ರತ್ಯೇಕವಾಗಿ ಕಣಕ್ಕಿಳಿಸುವ ಕ್ರಮವಿತ್ತು. ಆದರೆ ಅವನ್ನು ಒಗ್ಗೂಡಿಸಿ ರಾಜಕೀಯ ಶಕ್ತಿಯಾಗಿಸುವ ಕ್ರಮ ಈಚಿನ ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿದೆ. ಎಸ್ಪಿ ಮತ್ತು ಬಿಎಸ್ಪಿಯಂತಹ ಪಕ್ಷಗಳು ಇದನ್ನು ಹೆಚ್ಚು ಗಂಭೀರವಾಗಿ ಅನುಸರಿಸಲು ಮುಂದಾಗಿರುವುದು ಈ ಚುನಾವಣೆಯಲ್ಲಿ ಬಿಜೆಪಿಗೆ ಕೆಲವು ಸವಾಲುಗಳನ್ನು ಒಡ್ಡುವ ಸಾಧ್ಯತೆಯಿದೆ.

ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ 62 ಕ್ಷೇತ್ರಗಳನ್ನು ಗೆದ್ದಿತ್ತು. ಈ ಸಲದ ಚುನಾವಣೆಯ ಮೂರು ಹಂತಗಳ ಮತದಾನ ಮುಗಿದಿದೆ. ಈವರೆಗೆ ಮತದಾನವಾಗಿರುವುದು ಹೋಲಿಕೆಯಲ್ಲಿ ಸಮೃದ್ಧವಾಗಿರುವ ಪಶ್ಚಿಮ ಪ್ರದೇಶಗಳಲ್ಲಿ.

ಮುಂದಿನ ಹಂತಗಳ ಮತದಾನ ಮಂಡಲ್ ಬೆಲ್ಟ್ ಪ್ರದೇಶಗಳಲ್ಲಿರುತ್ತದೆ. ನಿಜವಾದ ಅರ್ಥದಲ್ಲಿ ಬಿಜೆಪಿ ಪಾಲಿಗೆ ಸವಾಲಾಗಲಿರುವ ಪ್ರದೇಶಗಳು ಅವು. ಸರಕಾರದ ಬಗೆಗಿನ ಅಸಮಾಧಾನಗಳು ವ್ಯಕ್ತವಾಗುವುದು ಇಲ್ಲಿಯೇ ಜಾಸ್ತಿ.

ಕೆಲವು ಪ್ರಮುಖ ಅಂಶಗಳನ್ನು ಗಮನಿಸುವುದಾದರೆ, ಮೊದಲನೆಯದಾಗಿ, ‘ಪೆಹ್ಲೆ ಮತದಾನ್, ಫಿರ್ ಜಲಪಾನ್’, ಅಂದರೆ ಮೊದಲು ಮತದಾನ, ನಂತರ ಉಪಾಹಾರ ಎಂಬ ಮೋದಿ ನಾಟಕಗಳು, ನೌಟಂಕಿಗಳಿಗೆಲ್ಲ ಜನ ಸೊಪ್ಪು ಹಾಕುತ್ತಿಲ್ಲ. ಜನರು ಮತದಾನದ ಬಗ್ಗೆ ಉತ್ಸಾಹವನ್ನೇ ತೋರಿಸುತ್ತಿಲ್ಲ. 2019ರಲ್ಲಿ ದೊಡ್ಡ ಅಂತರದಿಂದ ಗೆದ್ದ ಅಭ್ಯರ್ಥಿಗಳು ಸಹ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಎರಡನೆಯದಾಗಿ, ಬಿಜೆಪಿಯ ಧ್ರುವೀಕರಣದ ಆಟ ಇಲ್ಲಿ ಅಷ್ಟಾಗಿ ನಡೆಯುತ್ತಿಲ್ಲ. ಬದಲಾಗಿ ಜೀವನೋಪಾಯ, ಬೆಲೆಯೇರಿಕೆ ಮತ್ತು ಮೀಸಲಾತಿ ಕುರಿತ ಪ್ರಶ್ನೆಗಳನ್ನು ಜನರು ಕೇಳುತ್ತಾರೆ. ಹೀಗಾಗಿ ಬಿಜೆಪಿಯ ಹಿಂದೂ -ಮುಸ್ಲಿಮ್ ಪಿಚ್ ಕೆಲಸ ಮಾಡುತ್ತಿಲ್ಲ. ತಮ್ಮನ್ನು ಕಾಡುತ್ತಿರುವ ನೈಜ ಸಮಸ್ಯೆಗಳ ವಿಚಾರದಲ್ಲಿ ಜನರು ಸಿಟ್ಟಾಗಿದ್ದಾರೆ. ಹಿಂದುತ್ವದ ಮತ್ತೊಂದು ಕೋಟೆಯಾಗಿರುವ ಮಥುರಾದಲ್ಲಿ ನಿರ್ಣಾಯಕವಾಗಿರುವ ಜಾಟ್ ಮತ್ತು ಧಂಗರ್ಗಳಂತಹ ಸಮುದಾಯಗಳ ಅರ್ಧಕ್ಕರ್ಧ ಮತದಾರರು ಮತದಾನದಿಂದ ದೂರವೇ ಇರುವುದು ಅವರ ಅಸಮಾಧಾನವನ್ನೇ ತೋರಿಸುತ್ತಿದೆ. ಮೂರನೆಯದಾಗಿ, ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದರೆ ಅದು ಮೀಸಲಾತಿಯನ್ನು ತೆಗೆದುಹಾಕಲಿದೆ ಎಂಬ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಪಕ್ಷಗಳು ಯಶಸ್ವಿಯಾಗಿವೆ. ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚುತ್ತಿರುವ ಖಾಸಗೀಕರಣ ಮತ್ತು ಸರಕಾರಿ ವಲಯದಲ್ಲಿ ಉದ್ಯೋಗಾವಕಾಶಗಳ ಕೊರತೆಯ ಬಗ್ಗೆ ವಿಪಕ್ಷಗಳು ಗಮನ ಸೆಳೆದಿವೆ. ನಾಲ್ಕನೆಯದಾಗಿ, ಎಸ್ಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವ ಪ್ರದೇಶಗಳಲ್ಲಿ ಮಾಯಾವತಿಯ ವೋಟ್ ಬ್ಯಾಂಕ್ ಎಸ್ಪಿ ಕಡೆ ವಾಲುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿರುವ ವರದಿಗಳಿವೆ. ಫಿರೋಜಾಬಾದ್ನಂತಹ ಕ್ಷೇತ್ರಗಳಲ್ಲಿ ಯಾದವ್ ಮತ್ತು ಜಾಟವ್ ಸಮುದಾಯಗಳು ತಮ್ಮ ನಡುವಿನ ವಿರೋಧ ಮರೆತು ಹತ್ತಿರವಾಗುತ್ತಿವೆ. ಬಹುಶಃ ಮೊದಲ ಬಾರಿಗೆ ಇಂತಹದೊಂದು ಬೆಳವಣಿಗೆ ಕಾಣಿಸುತ್ತಿದೆ. ಜಾಟವ್ ಸಮುದಾಯದ ಸುಶಿಕ್ಷಿತರು ತಮ್ಮ ಮೀಸಲಾತಿ ಉಳಿಸಿಕೊಳ್ಳಬೇಕೆಂಬ ಕಾರಣದಿಂದಾದರೂ ಈ ಬಾರಿ ಎಸ್ಪಿಗೆ ಮತ ಹಾಕುವ ಸಾಧ್ಯತೆ ಹೆಚ್ಚಿದೆ. ಬಿಎಸ್ಪಿ ಸಾಮಾನ್ಯವಾಗಿ ಎರಡನೇ ಸ್ಥಾನದಲ್ಲಿರುವ ಆಗ್ರಾ ಮತ್ತು ಹಾಥರಸ್ನಂಥ ಪ್ರದೇಶಗಳಲ್ಲಿ ಕೂಡ ಎಸ್ಪಿ ಕಣದಲ್ಲಿರುವುದು ಮತಗಳ ವರ್ಗಾವಣೆ ಬಗ್ಗೆ ಕುತೂಹಲ ಮೂಡಿಸಿದೆ. ಐದನೆಯದಾಗಿ, ಜನರನ್ನು ಹೆಚ್ಚಾಗಿ ಕಾಡುತ್ತಿರುವ ಬೆಲೆಯೇರಿಕೆ ಮುಖ್ಯ ಚುನಾವಣಾ ವಿಷಯವಾಗಿದೆ. ಮಂಗಲಸೂತ್ರ ಕಸಿಯಲಾಗುತ್ತದೆ ಎಂಬ ಮೋದಿ ಮಾತಿಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಬಂಗಾರ ಕೊಳ್ಳಲು ಹಣವಾದರೂ ಎಲ್ಲಿದೆ ಎಂಬುದು ಅವರನ್ನು ಕಾಡುತ್ತಿರುವ ಸಂಗತಿಯಾಗಿದೆ. ಹೆಚ್ಚಿನ ಮತದಾರರಿಗೆ ಸ್ಥಳೀಯ ಸಮಸ್ಯೆಗಳು ಮುಖ್ಯವಾಗಿವೆ. ದೇಶ ಮತ್ತು ಹಿಂದೂ ಧರ್ಮದ ವಿಚಾರಕ್ಕಾಗಿ ಅವರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಮರೆತು ಸುಮ್ಮನಿರಲು ತಯಾರಿಲ್ಲ. ಹೆದ್ದಾರಿ ಸುಂಕ, ಕೆಟ್ಟ ರಸ್ತೆಗಳು, ಕಳಪೆ ನೀರು ಸರಬರಾಜು, ಬೀಡಾಡಿ ದನಗಳ ಕಾಟ ಇವೆಲ್ಲವೂ ಮತದಾನದ ವೇಳೆ ಅವರ ತೀರ್ಮಾನದ ಮೇಲೆ ಪ್ರಭಾವ ಬೀರಲಿವೆ ಎಂದು ಹೇಳಲಾಗುತ್ತಿದೆ. ಆರನೆಯದಾಗಿ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆಯೂ ಅಸಮಾಧಾನಗಳಿವೆ. ಆವಾಸ್ ಯೋಜನೆಯಲ್ಲಿ ಸ್ಥಳೀಯ ಮಟ್ಟದಲ್ಲಿನ ಭ್ರಷ್ಟಾಚಾರ ಕುರಿತ ಆರೋಪಗಳು ಸಾಮಾನ್ಯವಾಗಿವೆ. ಭ್ರಷ್ಟಾಚಾರಿಗಳನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿರುವ ಬಗ್ಗೆಯೂ ಪಕ್ಷದ ಕಾರ್ಯಕರ್ತರಲ್ಲೇ ಅಸಮಾಧಾನ ಜೋರಾಗಿಯೇ ಇದೆ. ಏಳನೆಯದಾಗಿ, 2019ರಲ್ಲಿ ಬಿಜೆಪಿಯ ಉನ್ನತ ನಾಯಕರ ಬಗ್ಗೆ ಗೌರವ ಹೊಂದಿದ್ದವರೆಲ್ಲ ಈಗ ಮೋದಿ ಸೇರಿದಂತೆ ಎಲ್ಲರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಟೀಕಿಸತೊಡಗಿದ್ದಾರೆ. ಮಾಧ್ಯಮಗಳ ಮೋದಿ ಪರ ವೈಭವೀಕರಣದ ಬಗ್ಗೆ ಕೂಡ ಜನರಿಗೆ ಗೊತ್ತಾಗಿದೆ.

ಕಳೆದ ಸಲಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ. ಎಲ್ಲ 80 ಸೀಟುಗಳನ್ನೂ ಗೆಲ್ಲುತ್ತೇವೆ ಎನ್ನುತ್ತಿರುವ ಬಿಜೆಪಿಯೆದುರು ಜಾತಿ ಸವಾಲು ಈ ಸಲ ಬೃಹದಾಕಾರದಲ್ಲಿ ಕಾಡುತ್ತಿದೆ. ಮೊದಲ ಎರಡು ಹಂತದ ಮತದಾನದ ನಂತರವಂತೂ ಈ ಸವಾಲು ಅದಕ್ಕೆ ಸ್ಪಷ್ಟವಾಗಿ ಎದುರಾಗಿದೆ. ಧಾರ್ಮಿಕ ಧ್ರುವೀಕರಣ ಮತ್ತು ಅಭಿವೃದ್ಧಿಯ ಭರವಸೆ ಮುಂದಿಟ್ಟುಕೊಂಡು 2014ರಲ್ಲಿ 71 ಹಾಗೂ 2019ರಲ್ಲಿ 62 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಅದರೆದುರಿನ ಹಾದಿ ಸುಲಭವಿಲ್ಲ. ಎಸ್ಪಿ ಹೊಸ ಚೈತನ್ಯ ಪಡೆದಂತೆ ಕಾಣುತ್ತಿದೆ. ಬಿಎಸ್ಪಿ ಈ ಚುನಾವಣೆಯನ್ನು ಅಸ್ತಿತ್ವದ ಉಳಿವಿನ ಯುದ್ಧವೆಂದು ಪರಿಗಣಿಸಿರುವ ಹಾಗಿದೆ. ಚಿತ್ರನಟಿ ಮತ್ತು ಎರಡು ಅವಧಿಯ ಬಿಜೆಪಿ ಸಂಸದೆ ಹೇಮಾ ಮಾಲಿನಿ ಹ್ಯಾಟ್ರಿಕ್ಗೆ ತಯಾರಾಗಿರುವ ಮಥುರಾದಂತಹ ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಗೆಲುವಿನ ಅಂತರ ತೀರಾ ಕಡಿಮೆಯಾಗುವ ಸಾಧ್ಯತೆಯಿದೆ. 2019ರಲ್ಲಿದ್ದ ಮೋದಿ ಅಲೆ ಗಮನಾರ್ಹವಾಗಿ ಇಲ್ಲವಾಗಿದೆ. ಕೃಷ್ಣ ಜನ್ಮಭೂಮಿ ವಿವಾದ ಮೇಲೆಬ್ಬಿಸುವ ಉದ್ದೇಶವಿದ್ದ ಬಿಜೆಪಿ ಮಥುರಾದಲ್ಲಿ ಜಾಟವ್, ನಿಶಾದ್, ಧಂಗರ್ ಮುಂತಾದ ಜಾತಿಗಳ ಓಲೈಕೆಗಾಗಿ ಬೆವರಿಳಿಸುತ್ತಿರುವುದು ಕಾಣಿಸಿದೆ.

ಇನ್ನೂ ಒಂದು ಬಗೆಯಲ್ಲಿ ಜಾತಿ ವಿಚಾರ ಬಿಜೆಪಿಯನ್ನು ಕಾಡುತ್ತಿದೆ. ಕ್ಷತ್ರಿಯ, ಅಂದರೆ ರಜಪೂತ ಸಮುದಾಯ ಚುನಾವಣೆಯಲ್ಲಿನ ತನ್ನ ಕಡಿಮೆ ಪ್ರಾತಿನಿಧ್ಯದ ಕಾರಣಕ್ಕಾಗಿ ಬಿಜೆಪಿ ವಿರುದ್ಧ ಅಸಮಾಧಾನ ತೋರಿಸುತ್ತಿದೆ.

ಮುಸ್ಲಿಮರು ಮತ್ತು ಒಬಿಸಿಗಳ ನಂತರದ ಅತಿದೊಡ್ಡ ಸಮುದಾಯವಾಗಿ ರಜಪೂತರಿರುವ ಪ್ರದೇಶಗಳಲ್ಲಿ ಇದು ಬಿಜೆಪಿಗೆ ಸವಾಲಾಗಿದೆ. ಕಳೆದೆರಡೂ ಚುನಾವಣೆಗಳಲ್ಲಿ ಘಾಜಿಯಾಬಾದ್ನಿಂದ ಗೆದ್ದಿದ್ದ ವಿ.ಕೆ. ಸಿಂಗ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಬಿಎಸ್ಪಿ ಈ ಸನ್ನಿವೇಶವನ್ನು ಸರಿಯಾಗಿಯೇ ಬಳಸಿಕೊಳ್ಳಲು ಮುಂದಾಗಿದೆ. ಬಿಜೆಪಿ ರಜಪೂತರನ್ನು ದೂರವಿಡುತ್ತಿರುವ ವಿಚಾರವನ್ನು ಮಾಯಾವತಿ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಕೆಲ ಕ್ಷೇತ್ರಗಳಲ್ಲಿ ಒಂದೆಡೆಯಿಂದ ಬಿಎಸ್ಪಿ ರಜಪೂತ್ ಅಭ್ಯರ್ಥಿಗಳನ್ನು ಎದುರಾಳಿಗಳನ್ನಾಗಿ ಮಾಡುತ್ತಿದ್ದರೆ, ಇನ್ನೊಂದೆಡೆಯಿಂದ ಆರ್ಎಲ್ಡಿ ಜೊತೆಗಿನ ಬಿಜೆಪಿ ಮೈತ್ರಿಯ ಹೊರತಾಗಿಯೂ ಜಾಟ್ ಸಮುದಾಯದ ವಿರೋಧ ವ್ಯಕ್ತವಾಗಿರುವ ವರದಿಗಳಿವೆ. ಮೀರತ್ನಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಮೂರು ಅವಧಿಯ ಸಂಸದ ರಾಜೇಂದ್ರ ಅಗರವಾಲ್ ಬದಲಿಗೆ ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ, ಹಿಂದೂ ಭಾವನೆಗಳ ಲಾಭ ಪಡೆಯುವ ಯತ್ನದಲ್ಲಿದೆ. 2019ರಲ್ಲಿ ಅಗರವಾಲ್ ಗೆಲುವಿನ ಅಂತರ 5,000 ಮತಗಳಿಗಿಂತ ಕಡಿಮೆಯಿತ್ತು. ಅರುಣ್ ಗೋವಿಲ್ ಎದುರಾಳಿಯಾಗಿ ಎಸ್ಪಿ ಪರಿಶಿಷ್ಟ ಜಾತಿಯ ಅಭ್ಯರ್ಥಿ ಸುನೀತಾ ವರ್ಮಾ ಅವರನ್ನು ಕಣಕ್ಕಿಳಿಸಿದ್ದು, ಭಾರೀ ಬೆಂಬಲ ಸಿಗುತ್ತಿರುವ ವರದಿಗಳಿವೆ.

ಇನ್ನು ಇತರ ಪಕ್ಷಗಳ ವಿಚಾರ ನೋಡುವುದಾದರೆ, ಎಸ್ಪಿಯ ಡಿಂಪಲ್ ಯಾದವ್ ಸ್ಪರ್ಧಿಸುತ್ತಿರುವ ಮೈನ್ಪುರಿಯಲ್ಲಿ ಬಿಎಸ್ಪಿ ತನ್ನ ಅಭ್ಯರ್ಥಿ ಗುಲ್ಶನ್ ಶಾಕ್ಯಾ ಅವರನ್ನು ಬದಲಿಸಿ ಶಿವಪ್ರಸಾದ್ ಯಾದವ್ ಅವರನ್ನು ಕಣಕ್ಕಿಳಿಸಿದ ನಂತರ, ಯಾದವ್ ಮತಗಳ ವಿಭಜನೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಅಸಮಾಧಾನಗೊಂಡಿರುವ ಗುಲ್ಶನ್ ಶಾಕ್ಯಾ ಎಸ್ಪಿ ಸೇರಿದ್ದಾರೆ. ಸೇಡು ತೀರಿಸಿಕೊಳ್ಳುವ ಮಾತಾಡಿದ್ದಾರೆ. ಯಾದವರ ನಂತರ ಶಾಕ್ಯರು ಅಥವಾ ಕುಶ್ವಾಹರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರ ಎಸ್ಪಿ ಭದ್ರಕೋಟೆ. 1996ರಿಂದ ಇಲ್ಲಿಯ ಎಲ್ಲಾ 10 ಚುನಾವಣೆಗಳಲ್ಲಿ ಎಸ್ಪಿ ಗೆದ್ದಿದೆ. 2014 ಮತ್ತು 2019ರ ಮೋದಿ ಅಲೆಯ ಹೊತ್ತಿನಲ್ಲೂ ಈ ಕ್ಷೇತ್ರವನ್ನು ಎಸ್ಪಿ ಅನಾಯಾಸವಾಗಿಯೇ ಗೆದ್ದಿತ್ತು. ಮೀರತ್ನಲ್ಲಿ ಆರು ಲಕ್ಷಕ್ಕೂ ಹೆಚ್ಚು ಮುಸ್ಲಿಮ್ ಮತದಾರರಿದ್ದರೂ, ಯಾವುದೇ ಪ್ರಮುಖ ಪಕ್ಷ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಿಎಸ್ಪಿಯ ಮುಹಮ್ಮದ್ ಅಖ್ಲಾಕ್ ಅವರು 2004ರಲ್ಲಿ ಮೀರತ್ನಿಂದ ಕೊನೆಯ ಮುಸ್ಲಿಮ್ ಸಂಸದರಾಗಿದ್ದರು. ಈ ಬಾರಿ ಬಿಎಸ್ಪಿ ದೇವವ್ರತ್ ತ್ಯಾಗಿ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಮೀರತ್ನಲ್ಲಿಯೂ ಅಸಮಾಧಾನ ದೊಡ್ಡ ಮಟ್ಟದಲ್ಲಿದೆ. ಹೆಚ್ಚಿನ ಯುವಕರು ಗಲ್ಫ್ಗೆ ಹೋಗುವುದು ಬಾಗ್ಪತ್ನಿಂದ. ಇಲ್ಲಿ ಆರ್ಎಲ್ಡಿಯ ರಾಜ್ಕುಮಾರ್ ಸಾಂಗ್ವಾನ್ ಮತ್ತು ಎಸ್ಪಿಯ ಅಮರ್ಪಾಲ್ ಶರ್ಮಾ ನಡುವೆ ಪೈಪೋಟಿ ಇದೆ. ಬಿಎಸ್ಪಿ ಗುಜ್ಜರ್ ಅಭ್ಯರ್ಥಿ ಪ್ರವೀಣ್ ಬೈನ್ಸ್ಲಾ ಅವರನ್ನು ಕಣಕ್ಕಿಳಿಸಿದೆ. ಮಾಜಿ ಉಪಪ್ರಧಾನಿ ಮತ್ತು ಆರ್ಎಲ್ಡಿ ಸಂಸ್ಥಾಪಕ ಚರಣ್ ಸಿಂಗ್ ಒಂದು ಕಾಲದಲ್ಲಿ ಪ್ರತಿನಿಧಿಸುತ್ತಿದ್ದ ಬಾಗ್ಪತ್ನಲ್ಲಿ ಜಾಟ್ ಪ್ರಾಬಲ್ಯ ಮಾತ್ರವಲ್ಲ, ಆರ್ಎಲ್ಡಿ ಬಲವೂ ಮಂಕಾದಂತಿದೆ.

ಇನ್ನು, ಯಾದವ ನೆಲ ಎನ್ನಲಾಗುವ ಇಟಾವಾದಲ್ಲಿ ಎಸ್ಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಇಟಾವಾ 1999ರಿಂದ 2009ರವರೆಗೆ ಸತತವಾಗಿ ಮೂರು ಬಾರಿಯ ಗೆಲುವಿನೊಂದಿಗೆ ಎಸ್ಪಿಯ ಭದ್ರಕೋಟೆ ಎನ್ನಿಸಿದ್ದ ಕ್ಷೇತ್ರ. 2014ರಲ್ಲಿ ಅದನ್ನು ಬಿಜೆಪಿ ಕಸಿದುಕೊಂಡಿತ್ತು. 2019ರಲ್ಲಿ ಎಸ್ಪಿ ಮತ್ತೊಮ್ಮೆ ಇಟಾವಾದಲ್ಲಿ ಗೆದ್ದು ಬೀಗಿತ್ತು. ಇಟಾವಾ, ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ತವರು ನೆಲ. 2009ರಲ್ಲಿ ಮೀಸಲು ಕ್ಷೇತ್ರವಾಗಿ ಬದಲಾದ ಇಟಾವಾದಲ್ಲಿ ಶೇ.27ರಷ್ಟು ದಲಿತ ಮತದಾರರಿದ್ದಾರೆ. 1991ರಲ್ಲಿ ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಂ ಕೂಡ ಇಲ್ಲಿಂದ ಗೆದ್ದಿದ್ದರು. ಆದರೆ ಆ ನಂತರ ಕ್ಷೇತ್ರದಲ್ಲಿ ಬಿಎಸ್ಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕ್ಷೇತ್ರದಲ್ಲಿ ಸುಮಾರು 2 ಲಕ್ಷದಷ್ಟಿರುವ ಯಾದವರು ಮತ್ತು ಸುಮಾರು ಒಂದು ಲಕ್ಷದಷ್ಟಿರುವ ಮುಸ್ಲಿಮರ ಬೆಂಬಲ ಎಸ್ಪಿಗೆ ಇದೆ ಎನ್ನಲಾಗಿದೆ. ಬಿಎಸ್ಪಿ 4 ಲಕ್ಷ ದಲಿತರ ದೊಡ್ಡ ಬೆಂಬಲದ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಬಿಜೆಪಿ 2.5 ಲಕ್ಷದಷ್ಟಿರುವ ಬ್ರಾಹ್ಮಣರು ಮತ್ತು 1.5 ಲಕ್ಷದಷ್ಟಿರುವ ಠಾಕೂರ್ಗಳ ಬೆಂಬಲದ ವಿಶ್ವಾಸ ಹೊಂದಿದೆ. ಜಾತಿ ಸಮೀಕರಣಗಳನ್ನು ಗಮನಿಸಿದರೆ, ದಲಿತರು ಮತ್ತು ಒಬಿಸಿಯ ಶಾಕ್ಯ ಸಮುದಾಯ ಇಲ್ಲಿ ನಿರ್ಣಾಯಕ.

ಇದೆಲ್ಲ ಸಮೀಕರಣ ಒಂದೆಡೆಗಾದರೆ, ರಾಜಕೀಯ ಆಟಗಳು ಮತ್ತೊಂದೆಡೆ ನಡೆದಿವೆ. ಚುನಾವಣೆ ನ್ಯಾಯಯುತ ರೀತಿಯಲ್ಲಿ ನಡೆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿರುವುದು ವರದಿಯಾಗಿದೆ. ಆದರೆ ಇದೇ ಮಾಯಾವತಿಯವರು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಹುದ್ದೆಗೆ ನೇಮಿಸಲಾಗಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ವಜಾಗೊಳಿಸಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಜೊತೆಗಿನ ಅವರ ಒಳ ಬಾಂಧವ್ಯ, ಬಿಜೆಪಿಯ ಒತ್ತಡದ ಮುಂದೆ ಮಾಯಾವತಿ ಮಣಿದಿರುವುದರ ಪರಿಣಾಮ ಇದು ಎಂದು ಹೇಳಲಾಗುತ್ತಿದೆ. ಬಿಎಸ್ಪಿಯನ್ನು ಅನಾಯಾಸವಾಗಿ ಆಟವಾಡಿಸುವಷ್ಟು ಮಟ್ಟಿಗೆ ಈಗ ಅದರ ಸೂತ್ರ ಬಿಜೆಪಿ ಕೈಯಲ್ಲಿದೆ ಎಂಬ ಮಾತುಗಳೂ ಇವೆ. ಆದರೆ, ಉತ್ತರ ಪ್ರದೇಶದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ನೇರ ಪೈಪೋಟಿಯೇನಿದ್ದರೂ ಎಸ್ಪಿ-ಕಾಂಗ್ರೆಸ್ ಇರುವ ‘ಇಂಡಿಯಾ’ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಎನ್ನುವುದು ಸ್ಪಷ್ಟ. ಕೆಲವೆಡೆ ಮಾತ್ರವೇ ಬಿಎಸ್ಪಿ ಪ್ರಾಬಲ್ಯದ ಕಾರಣದಿಂದಾಗಿ ತ್ರಿಕೋನ ಸ್ಪರ್ಧೆಯಿದೆ.

ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿನ ಸಾಮಾನ್ಯ ಮತದಾರರನ್ನು ಮಾತನಾಡಿಸಿದ ಬಳಿಕ ಅವರು ಇಂತಹದ್ದೊಂದು ಸಾಧ್ಯತೆಯನ್ನು ಊಹಿಸಿದ್ದಾರೆ. ಅದು ಬಿಜೆಪಿ ವಿರುದ್ಧದ ಗಾಳಿ ಎನ್ನಲಾಗದಿದ್ದರೂ, ಮೋದಿ ಮೇಲಿನ ಅಂಧಭಕ್ತಿ ಕಡಿಮೆಯಾಗಿರುವುದಂತೂ ನಿಜ. ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಮೋದಿಗಿಂತ ಆದಿತ್ಯನಾಥ್ ಜನಪ್ರಿಯತೆ ಹೆಚ್ಚಿರುವುದನ್ನೂ ಯೋಗೇಂದ್ರ ಯಾದವ್ ಗಮನಿಸಿದ್ದಾರೆ. ಆದರೆ ಆದಿತ್ಯನಾಥ್ ಕೂಡ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ ಅವರಂತೆಯೇ ಪಕ್ಷದಲ್ಲಿ ಮೂಲೆಗುಂಪಾಗುವ ಸಾಧ್ಯತೆಯೂ ಕಾಣಿಸತೊಡಗಿದೆ. ಬಿಜೆಪಿಯ ಮತಗಳು ಚದುರಿಹೋಗಲಿದ್ದು, 60 ಸ್ಥಾನಗಳನ್ನು ಉಳಿಸಿಕೊಳ್ಳುವುದೂ ಕಷ್ಟವಾಗಬಹುದು, 50ನ್ನು ಮುಟ್ಟುವುದೂ ಅದಕ್ಕೆ ಕಷ್ಟವಾಗಲಿದೆ ಎನ್ನುತ್ತಾರೆ ಅವರು.

ಮುಂದಿನ ಹಂತಗಳಲ್ಲಿನ ಆಟ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಣೆಬರಹವನ್ನು ಹೇಗೆ ಬರೆಯಲಿದೆ ಎಂಬುದರ ಮೇಲೆ ಅದರ ದಿಲ್ಲಿ ಗದ್ದುಗೆಯ ಹಣೆಬರಹ ಕೂಡ ನಿಶ್ಚಯವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News