ಬಿಜೆಪಿ ಟಿಕೆಟ್ ಕೊಟ್ಟ 130 ಪಕ್ಷಾಂತರಿಗಳಲ್ಲಿ ಗೆದ್ದವರೆಷ್ಟು? ಸೋತವರೆಷ್ಟು?
ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷ ತೊರೆದು ಬಿಜೆಪಿ ಸೇರಿದ್ದ ಹಲವರಿಗೆ ಸಿಹಿ ಕಹಿ ಅನುಭವಾಗಿದೆ. ಬಿಜೆಪಿ ಟಿಕೆಟ್ ಪಡೆದ 441 ಅಭ್ಯರ್ಥಿಗಳಲ್ಲಿ ಶೇ.25% ರಷ್ಟು ಅಭ್ಯರ್ಥಿಗಳು ಹತ್ತು ವರ್ಷಗಳ ಮೋದಿ ಆಡಳಿತದ ಅವಧಿಯಲ್ಲಿ ಪಕ್ಷ ಬದಲಿಸಿದವರು. ಈಗ ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿಗೆ ಹಾರಿದ ಪಕ್ಷಾಂತರಿಗಳಲ್ಲಿ ಶೇ.62 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
2014ರ ನಂತರ ಬೇರೆ ಬೇರೆ ಪಕ್ಷಗಳಿಂದ ಬಿಜೆಪಿ ಸೇರಿದ 110 ಅಭ್ಯರ್ಥಿಗಳಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಇದರಲ್ಲಿ 69 ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸೋಲಾಗಿದೆ. 2014ರ ಮುಂಚೆ ಬಿಜೆಪಿಗೆ ಬಂದಂತಹ 14 ಮಂದಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿತ್ತು. ಅಲ್ಲದೇ ಮೈತ್ರಿ ಪಕ್ಷದ ಆರು ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿತ್ತು.
ಇದರಲ್ಲಿ 34 ಅಭ್ಯರ್ಥಿಗಳು ಕಳೆದ ಎರಡು ವರ್ಷದಲ್ಲಿ ಬಿಜೆಪಿ ಸೇರಿದವರು. 26 ಅಭ್ಯರ್ಥಿಗಳು 2024ರಲ್ಲೇ ಬಿಜೆಪಿ ಸೇರಿದ್ದರು. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸೇರಿದ 34 ಅಭ್ಯರ್ಥಿಗಳಲ್ಲಿ 27 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸೋಲುಕಂಡರು. ಈ ವರ್ಷ ಬಿಜೆಪಿ ಸೇರಿದಂತಹ 26 ಅಭ್ಯರ್ಥಿಗಳಲ್ಲಿ 21 ಅಭ್ಯರ್ಥಿಗಳಿಗೆ ಮತದಾರರು ಮಣೆ ಹಾಕಿಲ್ಲ.
ಸೋಲು ಕಂಡವರಲ್ಲಿ ಲುಧಿಯಾನದಿಂದ ರವ್ನೀತ್ ಬಿಟ್ಟು, ಫರೀದ್ಕೋಟ್ ನಿಂದ ಹನ್ಸ್ ರಾಜ್ ಹಂಸ್, ಜಲಂಧರ್ ನಿಂದ ಸುಶೀಲ್ ಕುಮಾರ್ ರಿಂಕು, ರೋಹ್ತಕ್ ನಿಂದ ಅರವಿಂದ್ ಕುಮಾರ್ ಶರ್ಮಾ, ನಾಗೌರ್ ನಿಂದ ಜ್ಯೋತಿ ಮಿರ್ಧ ಮತ್ತು ಪತ್ತನಂತಿಟ್ಟ ನಿಂದ ಅನಿಲ್ ಆಂಟನಿ ಪ್ರಮುಖರು.
ಸೋತವರಲ್ಲಿ ಗೋರಕ್ಪುರದಿಂದ ರವಿಕಿಶನ್, ಪಿಲಿ ಭೀತ್ ನಿಂದ ಜಿತಿನ್ ಪ್ರಸಾದ್, ಗುನಾ ಕ್ಷೇತ್ರದಿಂದ ಜ್ಯೋತಿರಾದಿತ್ಯ ಸಿಂಧಿಯ ಮತ್ತು ಕುರುಕ್ಷೇತ್ರದಿಂದ ನವೀನ್ ಜಿಂದಲ್ ಪ್ರಮುಖರು.
ಅತಿ ಹೆಚ್ಚು ಪಕ್ಷಾಂತರಿಗಳು ಬಿಜೆಪಿ ಸೇರಿರುವುದು ಕಾಂಗ್ರೆಸ್ ಪಕ್ಷದಿಂದ. 2014 ರ ನಂತರ ಕಾಂಗ್ರೆಸ್ಸಿನಿಂದ ಬಿಜೆಪಿ ಗೆ ಸೇರಿದ 38 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಪೈಕಿ 20 ಅಭ್ಯರ್ಥಿಗಳು ಸೋತಿದ್ದಾರೆ.
ಬಿಎಸ್ಪಿ ಯಿಂದ ಬಿಜೆಪಿಗೆ ಬಂದ 11, ಬಿಆರ್ ಎಸ್ ಪಕ್ಷದಿಂದ 9, ಟಿಎಂಸಿ ಯಿಂದ 7, BJD ಯಿಂದ 6, ಎನ್ ಸಿಪಿ ಯಿಂದ 4, ಎಸ್ ಪಿ ಯಿಂದ 4 ಮತ್ತು ಐಡಿಎಡಿಎಂಕೆ ಯಿಂದ ಬಂದಿದ್ದ 4 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು.
ಪಕ್ಷಾಂತರಿಗಳಿಗೆ ಟಿಕೆಟ್ ನೀಡುವುದು ಬಿಜೆಪಿಯ ವ್ಯಾಪ್ತಿ ವಿಸ್ತಾರಗೊಳಿಸುವ ಯೋಜನೆಯ ಭಾಗವಾಗಿದೆ. ಯಾವ ರಾಜ್ಯಗಳಲ್ಲಿ ಬಿಜೆಪಿ ಅಷ್ಟು ಪ್ರಬಲವಿಲ್ಲವೊ ಆ ರಾಜ್ಯಗಳಲ್ಲಿ ಹೆಚ್ಚಾಗಿ ಬಿಜೆಪಿ ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದೆ.
ದುರ್ಬಲವಾಗಿರುವ ರಾಜ್ಯಗಳಲ್ಲಿ ಈ ರೀತಿ ಬೆಳೆಯುವ ತಂತ್ರ ಬಿಜೆಪಿಯದ್ದು. ಇದು ಬಿಜೆಪಿಯಲ್ಲಿ ಹಲವು ಒಳಜಗಳಗಳಿಗೂ ಕಾರಣವಾಗಿದೆ. ಗುಜರಾತ್ ನ ಸಾಬರಕಂತದಲ್ಲಿ ಮೊದಲು ಬಿಜೆಪಿ ನಾಯಕರಿಗೆ ಕೊಟ್ಟಿದ್ದ ಟಿಕೆಟ್ ಅನ್ನು ರದ್ದು ಮಾಡಿ ಕಾಂಗ್ರೆಸ್ ನಿಂದ ಬಂದ ಪಕ್ಷಾಂತರಿ ಮಾಜಿ ಶಾಸಕನ ಪತ್ನಿ ಶೋಭನಾ ಬರಯ್ಯ ಗೆ ಟಿಕೆಟ್ ಕೊಟ್ಟಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೂ ಶೋಭನಾ ಗೆದ್ದಿದ್ದಾರೆ.
ಪಕ್ಷಾಂತರಿಗೆ ಟಿಕೆಟ್ ನೀಡುವುದಕ್ಕೆ ಅವರು ಗೆಲ್ಲುವುದಕ್ಕಿರುವ ಸಾಧ್ಯತೆ ಕಾರಣ ಎಂದು ಬಿಜೆಪಿ ಹೇಳುತ್ತಾ ಬಂದಿದೆ. ಆದರೆ ಈ ಬಾರಿ ಬಿಜೆಪಿಯ ಸಂಸದರ ಸಂಖ್ಯೆ 303 ರಿಂದ 240ಕ್ಕೆ ಕುಸಿದಿರುವುದು, ಬಿಜೆಪಿಯ ಈ ವಾದವನ್ನು ಸಮರ್ಥಿಸುತ್ತಿಲ್ಲ.
ಪಕ್ಷಾಂತರಿಗಳಲ್ಲಿ 68 ಅಭ್ಯರ್ಥಿಗಳು ಚುನಾವಣಾ ವರ್ಷದಲ್ಲೇ ಪಕ್ಷಕ್ಕೆ ಬಂದವರು. ಅಂದರೆ 2014, 2019 ಮತ್ತು 2024ರಲ್ಲಿ ಬಿಜೆಪಿ ಸೇರಿದವರು. ಇದರಲ್ಲೂ 41 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಸೋತವರಲ್ಲಿ 2014 ರಲ್ಲಿ ಆರ್ಜೆಡಿಯಿಂದ ಬಿಜೆಪಿ ಸೇರಿದ ಪಾಟಲಿಪುತ್ರದ ರಾಮ್ ಕೃಪಾಲ್ ಯಾದವ್ , 20224ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ ಪಟಿಯಾಲದ ಪ್ರನೀತ್ ಕೌರ್, ಬಲಿಯದ ನೀರಜ್ ಶೇಖರ್ ಪ್ರಮುಖರು.
ನವೀನ್ ಜಿಂದಾಲ್, ಸೀತಾ ಸೋರೆನ್, ಅಶೋಕ್ ತನ್ವರ್ ಸೇರಿ 34 ಅಭ್ಯರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸೇರಿದ್ದರು. ಇದರಲ್ಲಿ ಕೇವಲ ಏಳು ಅಭ್ಯರ್ಥಿಗಳಿಗೆ ಮಾತ್ರ ಗೆಲುವಿನ ಸಿಹಿ ಸಿಕ್ಕಿದೆ. ಈ 34 ಕ್ಷೇತ್ರಗಳಲ್ಲಿ ಬಹು ಪಾಲು ಕ್ಷೇತ್ರಗಳಲ್ಲಿ ಸ್ಪಷ್ಟದ ನಿಷ್ಠಾವಂತ ನಾಯಕರು ಅಥವಾ ಕಾರ್ಯಕರ್ತರಿಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಪಕ್ಷಾಂತರಿಗಳಿಗೆ ಮಣೆ ಹಾಕಿತ್ತು.
2013 ರ ಮುಂಚೆ ಬಿಜೆಪಿಗೆ ಸೇರಿದಂತಹ ಕನಿಷ್ಠ 10 ಹಿರಿಯ ನಾಯಕರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದರು. ಇದರಲ್ಲಿ ಸೋತವರಲ್ಲಿ 9 ಬಾರಿ ಸಂಸದರಾಗಿ ಚುನಾಯಿತರಾಗಿದ್ದ ಮೇನಕಾ ಗಾಂಧಿ ಕೂಡ ಓರ್ವರು. ಎಸ್ ಎಸ್ ಅಹ್ಲುವಾಲಿಯಾ , ವಿಜಯ್ ಬಾಘೇಲ್ , ರಾಮದಾಸ್ ತಡಾಸ್ ಸೋತ ಕೆಲವು ಪ್ರಮುಖರು.
ರಾಜ್ಯವಾರು ಅಂಕಿಅಂಶಗಳನ್ನು ನೋಡಿದರೆ, ತೆಲಂಗಾಣ , ತಮಿಳು ನಾಡು ಮತ್ತು ಒಡಿಶಾದಿಂದ 28 ಪಕ್ಷಾಂತರಿ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಲ್ಲಿ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ 15 ಅಭ್ಯರ್ಥಿಗಳು ಸೋತಿದ್ದಾರೆ. ತೆಲಂಗಾಣದಲ್ಲಿ ಏಳು ಮತ್ತು ತಮಿಳುನಾಡಿನಲ್ಲಿ ಎಲ್ಲಾ ಎಂಟು ಅಭ್ಯರ್ಥಿಗಳಿಗೆ ಸೋಲಿನ ಕಹಿ ಸಿಕ್ಕಿದೆ. ಆದರೆ ಒಡಿಶಾದಲ್ಲಿ ಬಿಜೆಪಿಯ ಎಲ್ಲಾ ಎಂಟು ಪಕ್ಷಾಂತರಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಬಿಜೆಪಿಯ ಆರು ಅಭ್ಯರ್ಥಿಗಳಲ್ಲಿ ಐದು ಅಭ್ಯರ್ಥಿಗಳು ಪಕ್ಷಾಂತರಿಗಳು. ಇದರಲ್ಲಿ ಮೂವರು ಸೋತರು. ಜಯಗಳಿಸಿದ ಇಬ್ಬರಲ್ಲಿ ಒಬ್ಬರು ಬಿಜೆಪಿಯ ಮೈತ್ರಿ ಪಕ್ಷ ಟಿಡಿಪಿಯಿಂದ ಬಿಜೆಪಿಗೆ ಬಂದಿದ್ದ ಸಿ ಎಂ ರಮೇಶ್. ಬಂಗಾಳದಲ್ಲೂ ಬಿಜೆಪಿ ಟಿಕೆಟ್ ನೀಡಿದ್ದ 8 ಪಕ್ಷಾಂತರರಲ್ಲಿ ಐದು ಅಭ್ಯರ್ಥಿಗಳು ಸೋತಿದ್ದಾರೆ.
ಹಿಂದಿ ಹೃದಯ ಭೂಮಿಯಲ್ಲೂ ಬಿಜೆಪಿ ಪಕ್ಷಾಂತರಿಗಳ ಮೇಲೆ ತುಂಬಾ ಭರವಸೆ ಇಟ್ಟಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿ ಟಿಕೆಟ್ ನೀಡಿದ 76 ಅಭ್ಯರ್ಥಿಗಳಲ್ಲಿ 22 ಅಭ್ಯರ್ಥಿಗಳು ಪಕ್ಷಾಂತರಿಗಳು. ಹರಿಯಾಣದಲ್ಲಿ ಬಿಜೆಪಿಯ 10 ಅಭ್ಯರ್ಥಿಗಳಲ್ಲಿ ಆರು ಮಂದಿ ಕಾಂಗ್ರೆಸ್ ನಿಂದ ಬಂದವರು. ಇದರಲ್ಲಿ ಮೂವರು ಸೋತಿದ್ದಾರೆ. ಜಾರ್ಖಂಡ್ ನಲ್ಲಿ ಬಿಜೆಪಿಯ 13ರಲ್ಲಿ ಐದು ಅಭ್ಯರ್ಥಿಗಳು ಪಕ್ಷಾಂತರ ಮಾಡಿದವರು. ಖೊಡರ್ಮಾ ಮತ್ತು ಧನ್ಬಾದ್ ಕ್ಷೇತ್ರಗಳನ್ನು ಬಿಟ್ಟರೆ ಬೇರೆ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ.
ಬಿಜೆಪಿಗೆ ದೊಡ್ಡ ನಷ್ಟವಾದ ಮಹಾರಾಷ್ಟ್ರದಲ್ಲಿ ಪಕ್ಷವು 28 ರಲ್ಲಿ 8 ಕ್ಷೇತ್ರಗಳಲ್ಲಿ ಪಕ್ಷಾಂತರಗಳಿಗೆ ಟಿಕೆಟ್ ನೀಡಿತ್ತು. ಈ ಎಲ್ಲಾ ಎಂಟು ಅಭ್ಯರ್ಥಿಗಳು ಸೋತರು.
ಈ ಬಾರಿ ಆರು ಮಿತ್ರ ಪಕ್ಷದ ನಾಯಕರು ಬಿಜೆಪಿ ಟಿಕೆಟ್ ನಲ್ಲಿ ಚುನಾವಣೆ ಎದುರಿಸಿದ್ದರು. ಇದರಲ್ಲಿ 5 ಅಭ್ಯರ್ಥಿಗಳು ಸೋಲು ಕಂಡರು. ಈ 124 ಪಕ್ಷಾಂತರಿಗಳಲ್ಲದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳ ಆರು ಅಭ್ಯರ್ಥಿಗಳು ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಉತ್ತರಪ್ರದೇಶದ ಬದೋಹಿ ಯಿಂದ ನಿಶಾದ್ ಪಾರ್ಟಿಯ ವಿನೋದ್ ಕುಮಾರ್ ಬಿಂದ್ ಒಬ್ಬರನ್ನು ಬಿಟ್ಟು ಉಳಿದ ಐದು ಅಭ್ಯರ್ಥಿಗಳು ಸೋತಿದ್ದಾರೆ.
ಮಾಹಿತಿ ಕೃಪೆ : Amogh Rohmetra , The Print
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.