2019ರ ಲೋಕಸಭಾ ಚುನಾವಣೆ ತಿರುಚಲಾಗಿತ್ತೆ ?
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದಿನ ಹಕೀಕತ್ತು ಬೇರೆಯೇ ಇದೆಯೆ?. ಮತ ಗಳಿಕೆಯ ಹಿಂದೆ ಬಿಜೆಪಿಯ ಕೈವಾಡ ನಡೆದಿತ್ತೆ?. ತಿರುಚುವಿಕೆಯ ಪರಿಣಾಮವಾಗಿ ಬಿಜೆಪಿ ಗೆಲುವು ಸಾಧ್ಯವಾಗಿತ್ತೆ?. ಇಂಥ ಅನುಮಾನಗಳು ಏಳುತ್ತಿರುವುದಕ್ಕೆ ಕಾರಣವಾಗಿರೋದು, ದೆಹಲಿಯ ಅಶೋಕ ವಿವಿಯಲ್ಲಿ ಪ್ರೊಫೆಸರ್ ಆಗಿರುವ ಸಬ್ಯಸಾಚಿ ದಾಸ್ ಅವರ ಪ್ರಬಂಧ.
Democratic Backsliding in the World’s Largest Democracy ಎಂಬ ಹೆಸರಿನ ಸಂಶೋಧನಾ ಪ್ರಬಂಧ ಈಗ ವಿವಾದ ಸೃಷ್ಟಿಸಿದ್ದು, ದೊಡ್ಡ ಮಟ್ಟದಲ್ಲಿ ಚರ್ಚೆಯಲ್ಲಿದೆ. ಬಿಜೆಪಿ ವಿರುದ್ಧ ಚುನಾವಣಾ ಅಕ್ರಮ ಮತ್ತು ಇವಿಎಂ ತಿರುಚುವಿಕೆ ಆರೋಪಗಳು ಪ್ರತಿಪಕ್ಷಗಳಿಂದ ಈ ಹಿಂದೆ ಹಲವಾರು ಬಾರಿ ಕೇಳಿಬಂದಿದ್ದವು. ಆದರೆ, ಸಬ್ಯಸಾಚಿ ದಾಸ್ ಅವರ ಪ್ರಬಂಧ ಇವಿಎಂ ತಿರುಚುವಿಕೆಗೆ ಹೊರತಾದ ವಿಚಾರಗಳತ್ತ ಬೆರಳು ಮಾಡಿದೆ. ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿಯೇ ಅದರ ಅನುಮಾನಾಸ್ಪದ ಗೆಲುವಿನ ಪ್ರಕರಣಗಳು ಹೆಚ್ಚಿದ್ದುದನ್ನು ದಾಸ್ ಎತ್ತಿ ತೋರಿಸಿದ್ದಾರೆ ಅನ್ನೋದು ಗಮನಾರ್ಹ.
ಚುನಾವಣಾ ವೇಳಾಪಟ್ಟಿಯಲ್ಲಿ ಪಕ್ಷಪಾತ ಮತ್ತು ನೋಂದಾಯಿತ ಮುಸ್ಲಿಂ ಮತದಾರರ ಹೆಸರನ್ನು ಅಳಿಸಿದ ಆರೋಪಗಳ ಕಾರಣದಿಂದ ಕೇಂದ್ರ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಎರಡೂ ಅಂಶಗಳು ಬಿಜೆಪಿಗೆ ಅನುಕೂಲಕರ ಎನ್ನುವಂತಿದ್ದವು. ಈ ಹಿನ್ನೆಲೆಯಲ್ಲಿ ದಾಸ್ ಅವರ ಸಂಶೋಧನೆ ಗಮನ ಸೆಳೆದಿದೆ.
ದಾಸ್ ಪ್ರಬಂಧದಲ್ಲಿ ಇರೋ ಕಳವಳಕಾರಿ ವಿಚಾರಗಳು ಏನು?.
1. ಚುನಾವಣಾ ಡೇಟಾದಲ್ಲಿ ದೊಡ್ಡ ಮಟ್ಟದ ಅಕ್ರಮಗಳು ಕಾಣಿಸಿವೆ. ಬಿಜೆಪಿ ಅಭ್ಯರ್ಥಿ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿ ನಡುವೆ ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದೊಂದಿಗೆ ಬಿಜೆಪಿ ಗೆಲುವು ಅನುಮಾನಾಸ್ಪದವಾಗಿದೆ.
2. ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಅಥವಾ 2019ರ ಸಾರ್ವತ್ರಿಕ ಚುನಾವಣೆಯ ಜೊತೆಜೊತೆಗೇ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ನಂತರದ ಚುನಾವಣೆಗಳಲ್ಲಿ ಈ ಥರದ ವ್ಯತ್ಯಾಸಗಳು ಕಂಡಿರಲಿಲ್ಲ. ಅಲ್ಲದೆ, ನಿಕಟ ಸ್ಪರ್ಧೆಯಿದ್ದ ಕ್ಷೇತ್ರಗಳಲ್ಲಿನ ಬಿಜೆಪಿಯ ಅಲ್ಪ ಅಂತರದ ಗೆಲುವು ಆಗ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿಯೇ ಹೆಚ್ಚಾಗಿ ಕಂಡುಬಂದಿದೆ.
3. ಚುನಾವಣಾ ತಿರುಚುವಿಕೆ ಮತದಾರರ ನೋಂದಣಿ ಹಂತದಲ್ಲಿ ನಡೆಯಬಹುದು. ಇಲ್ಲವೆ, ಮತದಾನ ಅಥವಾ ಮತ ಎಣಿಕೆ ಸಮಯದಲ್ಲಿ ಆಗಬಹುದು. ಬಿಜೆಪಿ ಗೆಲುವಿನ ಅಂತರ ಶೇ.5ಕ್ಕಿಂತ ಕಡಿಮೆ ಇದ್ದ ಸುಮಾರು 11 ಲೋಕಸಭಾ ಕ್ಷೇತ್ರಗಳನ್ನು ಪ್ರಬಂಧ ವಿಶೇಷವಾಗಿ ಗಮನಿಸಿದೆ.
ಚುನಾವಣಾ ತಿರುಚುವಿಕೆ ಪ್ರಮಾಣ ಚಿಕ್ಕದಾಗಿದ್ದರೂ, ಅದು ತರುವ ಫಲಿತಾಂಶಗಳು ದೇಶದ ಪ್ರಜಾಪ್ರಭುತ್ವದ ಭವಿಷ್ಯದಲ್ಲಿ ಆತಂಕಕಾರಿ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಕಡಿವಾಣವಿಲ್ಲದ ತಾಂತ್ರಿಕತೆ ಕಾರಣದಿಂದ 2024ರಲ್ಲಿ ಇಂಥ ತಿರುಚುವಿಕೆ ಗಣನೀಯವಾಗಿ ಹೆಚ್ಚುವುದು ಖಚಿತ ಎಂದೂ ಅವರು ಎಚ್ಚರಿಸಿದ್ದಾರೆ.
ಆದರೂ, ದಾಸ್ ಇಲ್ಲಿ ಇವಿಎಂ ತಿರುಚುವಿಕೆ ಸಾಧ್ಯತೆಯನ್ನು ಪರಿಗಣಿಸಿಲ್ಲ ಎಂಬುದು ಅಚ್ಚರಿ ಮೂಡಿಸುವಂತಿದೆ. ಅವು ಉತ್ತಮ ತಂತ್ರಜ್ಞಾನ ಹೊಂದಿದ್ದು, ದೊಡ್ಡ ಪ್ರಮಾಣದ ಹಸ್ತಕ್ಷೇಪಕ್ಕೆ ಅವಕಾಶ ಕಷ್ಟ ಎಂದಿದ್ದಾರೆ.
2019ರ ಸಂಸತ್ ಚುನಾವಣೆಗೆ ಎಲ್ಲಾ ಇವಿಎಂಗಳನ್ನು ವಿವಿಪ್ಯಾಟ್ಗೆ ಹೊಂದಿಕೊಂಡಿರುವಂತೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿತ್ತು. ಇದು ಇವಿಎಂ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದರು. ಹಾಕಿದ ಮತ ಸರಿಯಾಗಿದೆಯೆ ಎಂದು ಮತದಾರ ನೋಡಿಕೊಳ್ಳಲೆಂದು ಸಣ್ಣ ಕಾಗದದ ಸ್ಲಿಪ್ ತೋರಿಸುವ ವ್ಯವಸ್ಥೆಯೇ ಈ ವಿವಿಪ್ಯಾಟ್. ಆದರೆ ಈ ಸ್ಲಿಪ್ ಹೆಸರಿಗಷ್ಟೇ, ಏಳು ಸೆಕೆಂಡ್ ಕಾಣಿಸಿಕೊಂಡು ಕಣ್ಮರೆಯಾಗುತ್ತದೆ. ಇದನ್ನು ನೋಡಿ ಖಚಿತಪಡಿಸಿಕೊಳ್ಳೋದು ಅಷ್ಟರಲ್ಲೇ ಇದೆ. ಮತದಾರರ ಪಾಲಿಗೆ ಇದೊಂದು ದೊಡ್ಡ ವಂಚನೆ ಎಂದೇ ಹೇಳಲಾಗುತ್ತದೆ.
2019ರ ಚುನಾವಣೆಯಲ್ಲಿ, ಇವಿಎಂ ಮತ ಎಣಿಕೆ ಪೂರ್ತಿಗೊಳಿಸಿ ಫಲಿತಾಂಶ ಪ್ರಕಟಿಸುವ ಮೊದಲು ಒಂದೇ ಒಂದು ವಿವಿಪ್ಯಾಟ್ ಸ್ಲಿಪ್ ಅನ್ನು ಸಹ ಎಣಿಸಲಿಲ್ಲ. ಮತ್ತು ತಾಳೆ ಮಾಡಲಿಲ್ಲ ಎಂಬ ಆರೋಪಗಳಿವೆ. ಇದು ಮತದಾನ ಮತ್ತು ಎಣಿಕೆ ತಿರುಚುವಿಕೆಯ ಸಾಧ್ಯತೆಗೆ ಕಾರಣವಾಯಿತು ಎನ್ನಲಾಗುತ್ತದೆ.
ಬಹಳಷ್ಟು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕೂ ಇವಿಎಂನಲ್ಲಿ ಎಣಿಕೆಯಾದ ಮತಕ್ಕೂ ತಾಳೆ ಆಗದೇ ಇದ್ದ ಬಗ್ಗೆ ಆಗ ದಿ ಕ್ವಿಂಟ್ ವರದಿ ಮಾಡಿತ್ತು. ಅದಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿತ್ತು. ಇದು ಕೊನೆಗೆ ಸುಪ್ರೀಂ ಕೋರ್ಟ್ ಗೂ ತಲುಪಿತ್ತು.
ಚುನಾವಣೆಗೆ ಬಳಸಿದ ವಿವಿಪ್ಯಾಟ್ ಸ್ಲಿಪ್ಗಳನ್ನು ಒಂದು ವರ್ಷ ಇಟ್ಟುಕೊಳ್ಳಬೇಕು. ಆ ಬಳಿಕವೇ ಅವುಗಳನ್ನು ನಾಶ ಮಾಡಬೇಕು ಎಂಬ ನಿಯಮವಿದೆ. ಹಾಗಿದ್ದೂ, 2019ರ ಲೋಕಸಭಾ ಚುನಾವಣೆ ಮುಗಿದ ನಾಲ್ಕೇ ತಿಂಗಳೊಳಗೆ ಚುನಾವಣಾ ಆಯೋಗ ಅಲ್ಲಿ ಬಳಸಿದ ವಿವಿಪ್ಯಾಟ್ ಸ್ಲಿಪ್ಗಳನ್ನು ನಾಶ ಮಾಡಿದ್ದನ್ನೂ ದಿ ಕ್ವಿಂಟ್ ಬಯಲಿಗೆಳೆದಿತ್ತು. ಎಲ್ಲ ಪಾರದರ್ಶಕವಾಗಿ ನಡೆದಿದ್ದರೆ ಅಷ್ಟು ತುರ್ತಿನಲ್ಲಿ ವಿವಿಪ್ಯಾಟ್ ಸ್ಲಿಪ್ಗಳನ್ನು ಏಕೆ ನಾಶ ಮಾಡಬೇಕಿತ್ತು ಎಂಬ ಪ್ರಶ್ನೆ ಎದ್ದಿತ್ತು.
ಚಲಾವಣೆಯಾದ ಮತಗಳು ಮತ್ತು ಎಣಿಕೆ ಮಾಡಿದ ಮತಗಳ ನಡುವಿನ ಭಾರೀ ವ್ಯತ್ಯಾಸಗಳ ಬಗ್ಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಎಡಿಆರ್ ಮತ್ತು ಕಾಮನ್ ಕಾಸ್ ಸಂಸ್ಥೆಗಳು ಗಮನಿಸಿದ್ದ ಅಂಶಗಳು ಹೀಗಿದ್ದವು:
347 ಸ್ಥಾನಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅದು ಅತಿ ಕಡಿಮೆ ಅಂದರೆ 1 ಮತದಿಂದ, ಅತಿ ಹೆಚ್ಚು, ಅಂದರೆ 1,01,323 ಮತಗಳವರೆಗೂ ದಾಖಲಾಗಿದೆ. ಗೆಲುವಿನ ಅಂತರಕ್ಕಿಂತ ಮತಗಳ ವ್ಯತ್ಯಾಸ ಹೆಚ್ಚಿರುವ 6 ಸ್ಥಾನಗಳಿವೆ. ಒಟ್ಟು ವ್ಯತ್ಯಾಸವಾಗಿರುವ ಮತಗಳು 7,39,104.
ಚುನಾವಣೆ ಮತ್ತು ಅದರ ಫಲಿತಾಂಶಗಳನ್ನು ಇನ್ನೂ ಕೆಲವು ಆಧಾರಗಳ ಮೇಲೆಯೂ ಪ್ರಶ್ನಿಸಲಾಗಿತ್ತು. ಚುನಾವಣಾ ಫಲಿತಾಂಶಗಳು ನಿಖರವಾಗಿರುವುದಷ್ಟೇ ಅಲ್ಲ, ಅವು ನಿಖರವಾಗಿವೆ ಎಂಬುದು ಸಾರ್ವಜನಿಕರಿಗೂ ತಿಳಿಯಬೇಕು. ಚುನಾವಣೆಗಳು ವಿಶ್ವಾಸಾರ್ಹವಾಗಿಲ್ಲದಿದ್ದರೆ ಇಡೀ ಚುನಾವಣಾ ಪ್ರಕ್ರಿಯೆಗೆ ಧಕ್ಕೆಯಾಗುತ್ತದೆ.
2019ರ ಲೋಕಸಭಾ ಚುನಾವಣೆಯಲ್ಲಿ ನಿಜವಾದ ಮತದಾನದ ಪ್ರಮಾಣ ಮತ್ತು ತಾತ್ಕಾಲಿಕ ದತ್ತಾಂಶಗಳ ನಡುವೆ ವ್ಯತ್ಯಾಸ ಬಹುಪಾಲು ಲೋಕಸಭಾ ಕ್ಷೇತ್ರಗಳಲ್ಲಿ ಕಂಡುಬಂದಿರುವುದು, ಸಮಾಧಾನಕರ ತೀರ್ಮಾನವಿಲ್ಲದೆ ಬದಿಗೆ ಸರಿಸುವ ವಿಚಾರವಲ್ಲ. ನಿಖರತೆ ಮತ್ತು ಸಮಗ್ರತೆಯನ್ನು ಬಲಿ ಕೊಟ್ಟು, ತ್ವರಿತವಾಗಿ ಚುನಾವಣಾ ಫಲಿತಾಂಶ ಘೋಷಿಸುವುದು ಆದ್ಯತೆಯಾಗಿರಬಾರದು. ಆ ಧಾವಂತದಲ್ಲಿ ಎಣಿಕೆ ಪ್ರಕ್ರಿಯೆಯಲ್ಲಿನ ಹಲವಾರು ಗಂಭೀರ ಲೋಪಗಳು ಗಮನಕ್ಕೆ ಬರದೇ ಹೋಗಬಹುದು. ಕೇವಲ ಊಹೆಗಳ ಮೇಲೆ ಎಣಿಕೆಯ ಪ್ರಕ್ರಿಯೆ ಮುಕ್ತಾಯಗೊಳಿಸುವ ರೀತಿ ದೋಷಪೂರಿತ ಪರಿಕಲ್ಪನೆ. ಅದನ್ನು ಬಗೆಹರಿಸುವ ಅಗತ್ಯವಿದೆ.
2019ರ ಚುನಾವಣೆ ಫಲಿತಾಂಶ ಘೋಷಣೆ ಸಂದರ್ಭದಲ್ಲಿನ ಮತ್ತೂ ಒಂದು ಅಂಶದ ಬಗ್ಗೆಯೂ ಆ ಅರ್ಜಿಯಲ್ಲಿ ಗಮನ ಸೆಳೆಯಲಾಗಿತ್ತು. ಮೇ 23, 2019ರಂದು ಆಯೋಗ ಎಲ್ಲಾ ಕ್ಷೇತ್ರಗಳ ಫಲಿತಾಂಶಗಳನ್ನು ಘೋಷಿಸಿದ್ದರೂ ಸಹ, ಆಯೋಗವೇ ಒಪ್ಪಿಕೊಂಡಿದ್ದಂತೆ, ಜೂನ್ 1, 2019ರ ತನಕವೂ ಎಲ್ಲಾ 542 ಲೋಕಸಭಾ ಕ್ಷೇತ್ರಗಳ ಡೇಟಾ ಸೂಚ್ಯಂಕ ನಮೂನೆಗಳು ಚುನಾವಣಾ ಅಧಿಕಾರಿಗಳಿಂದ ಆಯೋಗದ ಕೈಗೆ ಸೇರಿರಲಿಲ್ಲ. ಅಂದರೆ. ಫಲಿತಾಂಶಗಳ ಘೋಷಣೆ ಚುನಾವಣಾ ಅಧಿಕಾರಿಗಳು ದಾಖಲಿಸಿದ ಡೇಟಾವನ್ನು ಆಧರಿಸಿಲ್ಲ ಎಂಬುದನ್ನು ಆಯೋಗವೇ ಒಪ್ಪಿಕೊಂಡಿತ್ತು. ಇದು ಆಘಾತಕಾರಿ ದೋಷವಾಗಿದ್ದು, ಚುನಾವಣೆಯ ಸಮಗ್ರತೆಯನ್ನು ಮಾತ್ರವಲ್ಲ, ಸಂಸತ್ತಿನ ಕಾನೂನುಬದ್ಧತೆಯನ್ನೇ ಪ್ರಶ್ನಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಅರ್ಜಿಯ ಹಿನ್ನೆಲೆಯಲ್ಲಿ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆದರೆ, ಸುಮಾರು ನಾಲ್ಕೂವರೆ ವರ್ಷಗಳ ನಂತರವೂ ಆಯೋಗ ಇವಿಎಂ ಮತ್ತು ವಿವಿಪ್ಯಾಟ್ ಎಣಿಕೆಗಳ ಲೆಕ್ಕವನ್ನು ನೀಡದಿರುವುದು ಆಘಾತಕಾರಿ. ಹಾಗಾದರೆ, 2019ರ ಲೋಕಸಭೆ ಚುನಾವಣೆಯಲ್ಲಿ ನಿಜವಾಗಿಯೂ ತಿರುಚುವಿಕೆ ನಡೆದಿದೆಯೆ? ಈ ಅನುಮಾನ ಇನ್ನಷ್ಟು ಜಾಸ್ತಿಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮುಖ್ಯ ತಳಹದಿಯಾದ ಚುನಾವಣಾ ಪ್ರಕ್ರಿಯೆಯನ್ನು ಇಂಥ ದುರವಸ್ಥೆಗೆ ತಂದಿಟ್ಟವರು ಯಾರು?. ಮತ್ತು ಚುನಾವಣಾ ವ್ಯವಸ್ಥೆಯನ್ನು ಈ ಸ್ಥಿತಿಗೆ ತಳ್ಳಿ, ಗೆಲುವನ್ನು ಬರೆದುಕೊಳ್ಳುವ ರಾಜಕಾರಣ ಈ ದೇಶವನ್ನು ಎಂಥ ಅಪಾಯಕ್ಕೆ ತಳ್ಳಲಿದೆ ಎಂಬುದನ್ನು ಊಹಿಸಿದರೇ ದಿಗಿಲಾಗುತ್ತದೆ, ಅಲ್ಲವೆ?