ಕೇಂದ್ರದ 7,997 ಕೋ.ರೂ. ಅನುದಾನ ಖರ್ಚು ಮಾಡದ ಬಿಜೆಪಿ ಸರಕಾರ

Update: 2023-12-18 03:47 GMT
Editor : Safwan | Byline : ಜಿ.ಮಹಾಂತೇಶ್

ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಅಂತ್ಯಕ್ಕೆ ಬಿಡುಗಡೆಯಾದ ಅನುದಾನದಲ್ಲೇ ಹಿಂದಿನ ಬಿಜೆಪಿ ಸರಕಾರವು ಖರ್ಚು ಮಾಡದೇ 7,997 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

ಕೇಂದ್ರ ಸರಕಾರವು ಮಾರ್ಚ್ ತಿಂಗಳ ಅಂತ್ಯದಲ್ಲಿ ಸುಮಾರು 4,156 ಕೋಟಿ ರೂ. ಅನುದಾನವನ್ನು ಯೋಜನೆಗಳಿಗೆ ಬಿಡುಗಡೆ ಮಾಡಿತ್ತು. ಆದ್ದರಿಂದ 2022-23ರ ಅಂತ್ಯಕ್ಕೆ ಖರ್ಚಾಗದೇ ಉಳಿದ ಅನುದಾನದ ಮೊತ್ತವೇ ಹೆಚ್ಚಾಗಿರುತ್ತದೆ ಎಂದು ರಾಜ್ಯ ಕಾಂಗ್ರೆಸ್ ಸರಕಾರವು ಸದನಕ್ಕೆ ಉತ್ತರ ಒದಗಿಸಿದೆ.

2022-23ರಲ್ಲಿ ಕೇಂದ್ರ ಯೋಜನೆಗಳಿಗೆ ಭಾರತ ಸರಕಾರವು ನೇರವಾಗಿ ಅನುಷ್ಠಾನ ಇಲಾಖೆಗಳಿಗೆ 6,739 ಕೋಟಿ ರೂ. ಜಮೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಹೊರತುಪಡಿಸಿ 2022-23ರಲ್ಲಿ ಕೇಂದ್ರದಿಂದ ಹಣಕಾಸು ಆಯೋಗದ ಅನುದಾನ ಹಾಗೂ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ಗೆ ಒಟ್ಟು 4,435 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಿದ್ದರಾಮಯ್ಯ ಅವರು ವಿಧಾನಪರಿಷತ್ನಲ್ಲಿ ಯು.ಬಿ. ವೆಂಕಟೇಶ್ ಅವರಿಗೆ ಉತ್ತರ ಒದಗಿಸಿದ್ದಾರೆ.

ಕೇಂದ್ರ ಸರಕಾರವು ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಖರ್ಚಾಗದೇ ಉಳಿದ ಮೊತ್ತವು ಮುಂದಿನ ಆರ್ಥಿಕ ವರ್ಷದ ಆರಂಭಿಕ ಶುಲ್ಕವಾಗಲಿದೆ. ಈ ಮೊತ್ತವನ್ನು ಕೇಂದ್ರ ಸರಕಾರವು ಹಿಂಪಡೆಯುವುದಿಲ್ಲ. ಬದಲಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದ್ರದ ಯೋಜನೆಗಳಿಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ಒದಗಿಸಿದೆ.

ಕೇಂದ್ರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ವತಿಯಿಂದ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಯವರು ಇಲಾಖೆಗಳೊಂದಿಗೆ ನಿರಂತರ ಸಭೆಗಳನ್ನು ಮಾಡಿ ಅನುದಾನವನ್ನು ತ್ವರಿತವಾಗಿ ಉಪಯೋಗಿಸಿಕೊಳ್ಳಲು ಸೂಚಿಸಿದೆ.

2023-24ನೇ ಸಾಲಿನಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ ನವೆಂಬರ್ ಅಂತ್ಯಕ್ಕೆ 10,337 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಶೂನ್ಯ ಬಿಡುಗಡೆ ಮಾಡಿದೆ.

ಭಾರತ ಸರಕಾರವು ನೇರವಾಗಿ ಅನುಷ್ಠಾನ ಇಲಾಖೆಗಳ ಖಾತೆಗೆ 4,191 ಕೋಟಿ ರೂ.ಗಳನ್ನು ಜಮೆ ಮಾಡಿದೆ.

2018-19ರಲ್ಲಿ 30,406 ಕೋಟಿ ರೂ. (ಕೇಂದ್ರ ಮತ್ತು ರಾಜ್ಯದ ಪಾಲು) 2019-20ರಲ್ಲಿ 30,041 ಕೋಟಿ ರೂ., 2020-21ರಲ್ಲಿ 30,202 ಕೋಟಿ ರೂ., 2021-22ರಲ್ಲಿ 36,956 ಕೋಟಿ ರೂ., 2022-23ರಲ್ಲಿ 30,965 ಕೋಟಿ ರೂ. ಖರ್ಚು ಮಾಡಿದೆ.

2018-19ರಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ 9,872 ಕೋಟಿ ರೂ., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರೂ. ಅನುದಾನ ನೀಡಿತ್ತು. 2019-20ರಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ 11,868 ಕೋಟಿ ರೂ., ಸಾಮಾಜಿಕ ಭದ್ರತಾ ಯೋಜನೆಗಳಿಗೆ 522 ಕೋಟಿ ರೂ., 2020-21ರಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ 9,375 ಕೋಟಿ ರೂ., ಸಾಮಾಜಿಕ ಭದ್ರತಾ ಯೋಜನೆಗಳಿಗೆ 665 ಕೋಟಿ ರೂ., 2021-22ರಲ್ಲಿ ಕೇಂದ್ರ ಸರಕಾರದ 12,176 ಕೋಟಿ ರೂ., ಸಾಮಾಜಿಕ ಭದ್ರತಾ ಯೋಜನೆಗಳಿಗೆ 494 ಕೋಟಿ ರೂ., 2022-23ರಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ 17,960 ಕೋಟಿ ರೂ., ಸಾಮಾಜಿಕ ಭದ್ರತಾ ಯೋಜನೆಗಳಿಗೆ 447 ಕೋಟಿ ರೂ. ನೀಡಿದೆ. ಕೇಂದ್ರ ಸರಕಾರವು ಯೋಜನೆಗಳಿಗೆ ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡಲು ಸಂಬಂಧಿಸಿದ ಯೋಜನೆಗಳ ಎಸ್ಎನ್ಎ ಖಾತೆಗಳಲ್ಲಿ ಉಳಿದಿರುವ ಬಾಕಿಯನ್ನು ಖರ್ಚು ಮಾಡುವಂತೆ ಆಡಳಿತ ಇಲಾಖೆಗಳಿಗೆ ಸೂಚಿಸಲಾಗಿದೆ. ಅಲ್ಲದೇ ಆರ್ಥಿಕ ಇಲಾಖೆಯಿಂದ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಡಳಿತ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಜಿ.ಮಹಾಂತೇಶ್

contributor

Similar News