ತೆಂಗಿನ ಚಿಪ್ಪಿನಿಂದ ಅಲಂಕಾರಿಕ ವಸ್ತು ತಯಾರಿಸಿ ಬದುಕು ಕಟ್ಟಿಕೊಂಡ ಬಡಗಿ

Update: 2023-11-20 06:57 GMT

ಬೆಂಗಳೂರು, ನ.19: ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಉತ್ಪತ್ತಿಯಾಗುವ ವಸ್ತುಗಳ ಪೈಕಿ ತೆಂಗಿನ ಚಿಪ್ಪುಹೊರತು ಯಾವುದೇ ವಸ್ತು ವ್ಯರ್ಥವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದೇ ಕರೆಯುತ್ತೇವೆ. ಆದರೆ, ಇತ್ತೀಚೆಗೆ ತೆಂಗಿನ ಚಿಪ್ಪುಗಳನ್ನು ಬಳಕೆ ಮಾಡಿಕೊಂಡು ತಯಾರಿಸಿದ ಅಲಂಕಾರಿಕ ವಸ್ತುಗಳು ಜನರ ಗಮನ ಸೆಳೆಯುತ್ತಿದೆ.

ಬೆಂಗಳೂರಿನ ಹೊರವಲಯದ ಚಿಕ್ಕ ಬೊಮ್ಮಸಂದ್ರದಲ್ಲಿ ವಾಸವಾಗಿರುವ ಮುರಳಿ ತೆಂಗಿನ ಚಿಪ್ಪುಗಳನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳನ್ನು ತಯಾರಿಸಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಪೂರ್ಣ ಪ್ರಮಾಣದ ಉದ್ಯೋಗವೇನು ಅಲ್ಲ. ಅವರು ಒಬ್ಬ ಕಾರ್ಪೆಂಟರ್ ಆಗಿದ್ದಾರೆ. ಬಿಡುವಿನ ಸಮಯದಲ್ಲಿ ಮಂಡಿಯಿಂದ ತೆಂಗಿನ ಚಿಪ್ಪುಗಳನ್ನು ಖರೀದಿ ಮಾಡಿ ತಂದು ಅವುಗಳಿಂದ ವಿಭಿನ್ನ ಬಗೆಯ ಅಲಂಕಾರಿಕ ವಸ್ತುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಅವರು ತೆಂಗಿನ ಚಿಪ್ಪಿನಲ್ಲಿ ಮಾಡಿರುವ ಅಲಂಕಾರಿಕ ವಸ್ತುಗಳು ಎಂತಹವರನ್ನೂ ಮೂಕರನ್ನಾಗಿ ಮಾಡಿ ಬಿಡುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ತೆಂಗಿನ ಕಾಯಿಯನ್ನು ಬಳಸಿ ಚಿಪ್ಪುಗಳನ್ನು ಬಿಸಾಡುತ್ತೇವೆ. ದೇವಸ್ಥಾನಗಳಲ್ಲಿಯೂ ಇದೇ ಸ್ಥಿತಿಯಾಗಿದೆ. ಆದರೆ ಇಂತಹ ಚಿಪ್ಪುಗಳನ್ನು ಕಾರ್ಪೆಂಟರ್ ಮುರಳಿ ಬಳಿಗೆ ತೆಗೆದುಕೊಂಡು ಬಂದರೆ, ತಮಗೆ ಬೇಕಾದ ರೀತಿಯಲ್ಲಿ ಅಲಂಕಾರಿಕ ವಸ್ತುಗಳನ್ನು ಮಾಡಿಸಿಕೊಳ್ಳಬಹುದು.

ವೃತ್ತಿಯಲ್ಲಿ ಮೂಲತಃ ಬಡಗಿ (ಕಾರ್ಪೆಂಟರ್) ಆಗಿರುವ ಅವರು ಚಿಪ್ಪುಗಳಲ್ಲಿ ಅಲಂಕಾರಿಕ ವಸ್ತು ತಯಾರಿಸುವುದು ದೊಡ್ಡ ವಿಷಯವೇನು ಅಲ್ಲ. ಏಕೆಂದರೆ ಅವರಿಗೆ ಮರದಲ್ಲಿ ಅಲಂಕಾರಿಕ ವಸ್ತುಗಳನ್ನು ಮಾಡುವುದು ಕರತಲ ಮಲಕವಾಗಿರುತ್ತದೆ. ಆದರೆ, ಗ್ರಾಹಕರು ತಾವು ಇಚ್ಚಿಸಿದ ಬಗೆಯಲ್ಲಿ ತೆಂಗಿನ ಚಿಪ್ಪುಗಳನ್ನು ಬಳಸಿ ಅಲಂಕಾರಿಕ ವಸ್ತು ಮಾಡಿಸುವುದು ಎಂತಹ ಕಾರ್ಪೆಂಟರ್‌ಗೂ ಕಷ್ಟವೇ ಎನಿಸುತ್ತದೆ. ಮುರಳಿ ಸ್ವಲ್ಪ ಕಾಲಾವಕಾಶದಲ್ಲಿಯೇ ಎಂತಹ ಅಲಂಕಾರಿಕ ವಸ್ತುವನ್ನೂ ಮಾಡಬಲ್ಲೆ ಎಂದು ಹೇಳುತ್ತಾರೆ.

ತೆಂಗಿನ ಚಿಪ್ಪು, ಗಮ್ ಮತ್ತು ಯಂತ್ರಗಳ ಸಹಾಯದಿಂದ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡಲಾಗುತ್ತದೆ. ಇದಕ್ಕೆ ಗರಿಷ್ಠ 150 ರೂ. ಖರ್ಚಾಗುತ್ತದೆ. ಈ ರೀತಿ ತಯಾರಾದ ವಸ್ತುಗಳನ್ನು ಗ್ರಾಹಕರು 650 ರೂ.ಗಳಿಂದ 700 ರೂ.ಗಳನ್ನು ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಎರಡು ತಿಂಗಳಿನಿಂದ ಈ ವ್ಯವಹಾರವನ್ನು ಮಾಡುತ್ತಿರುವುದಾಗಿ ಮುರಳಿ ಹೇಳುತ್ತಿದ್ದಾರೆ.

ಕಾರ್ಪೆಂಟರ್ ಕೆಲಸದೊಂದಿಗೆ, ಈ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಅವರು ಮಾರಾಟ ಮಾಡುತ್ತಿದ್ದಾರೆ. ಹೆಚ್ಚಾಗಿ ಶ್ರೀಮಂತರು, ಐಟಿ, ಬಿಟಿ ವೃತ್ತಿಪರರು ವಸ್ತುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಕೇವಲ ತೆಂಗಿನ ಚಿಪ್ಪಿನ ಅಲಂಕಾರಿಕ ವಸ್ತುಗಳ ಮಾರಾಟದಿಂದ ತಿಂಗಳಿಗೆ 10 ಸಾವಿರ ರೂ.ಯಿಂದ

12 ಸಾವಿರ ರೂ.ವರೆಗೆ ಸಂಪಾದನೆ ಮಾಡುತ್ತಿದ್ದಾರೆ.

ಇದು ಒಂದು ಬಗೆಯ ಸ್ಟಾರ್ಟ್ ಅಪ್ (ನವೋದ್ಯಮ) ಆಗಿದ್ದು, ಸರಕಾರ ಇದನ್ನು ಗುರುತಿಸಬೇಕು. ಸರಕಾರವು ಇಂತಹವರಿಗೆ ಸಹಾಯಧನವನ್ನು ನೀಡಿದರೆ ಇದು ಒಂದು ಉದ್ಯಮವಾಗಿ ಬೆಳೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅನಿಲ್ ಕುಮಾರ್

contributor

Similar News