ಮಿಶ್ರ ಕೃಷಿ ಪದ್ಧತಿ ಅಳವಡಿಸಿ ಮಾದರಿಯಾದ ದಂಪತಿ
ಮಡಿಕೇರಿ, ನ.13: ಕೃಷಿ ನಂಬಿ ನಡೆದರೆ ನೌಕರಿಗಿಂತಲೂ ಹೆಚ್ಚು ಆದಾಯಗಳಿಸಲು ಸಾಧ್ಯವಿದೆ ಎಂಬುದಕ್ಕೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಚಮ್ಮಂಡ ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ ಸಾಕ್ಷಿಯಾಗಿದ್ದಾರೆ.
ತಮ್ಮ ತೋಟದಲ್ಲಿ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಮಾದರಿ ಕೃಷಿ ಬದುಕು ರೂಪಿಸಿಕೊಂಡಿದ್ದಾರೆ. ಪುತ್ರ ಪೂಣಚ್ಚ ಕೂಡ ಪದವಿ ನಂತರ ಪಾಲಕರ ಜತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಚಮ್ಮಂಡ ಚಿಮ್ಮಿ ಕಾಲೇಜು ಕಲಿಕೆಯ ನಂತರ ಪಿತ್ರಾರ್ಜಿತವಾಗಿ ಬಂದ ಮೂರೂವರೆ ಎಕರೆ ಜಮೀನಿನಲ್ಲಿ ಕೃಷಿ ಕಾಯಕ, ವಿವಾಹದ ನಂತರ ಬಿಕಾಂ ಪದವಿಧರೆ ಪತ್ನಿ ಕಾವೇರಮ್ಮ ಅವರೂ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. 25 ವರ್ಷದಿಂದ ಕೃಷಿ ಕಾಯಕ ಮಾಡಿಕೊಂಡು ಬಂದಿದ್ದಾರೆ. ಜಮೀನಿನಲ್ಲಿ ಅರೆಬಿಕಾ, ರೋಬಸ್ಟಾ ಕಾಫಿ ಹಾಗೂ ಕಾಳು ಮೆಣಸು, ಅಡಿಕೆ, ತೆಂಗು, ಬಾಳೆ ಬೆಳೆಯಲಾಗಿದೆ. ಜೊತೆಗೆ ಜೇನು ಸಾಕಣೆಯನ್ನೂ ಮಾಡುತ್ತಿದ್ದಾರೆ.
ಹಸು-ಹಂದಿ ಸಾಕಣಿ: ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ ಮನೆ ಸಮೀಪದ ಜಮೀನಿನಲ್ಲಿ ಜೆರ್ಸಿ, ಸಿಂದಿ ತಳಿಯ ಹಸುಗಳ ಸಾಕಣೆ ಮಾಡುತ್ತಿದ್ದಾರೆ. ಪ್ರತಿದಿನ 8-10 ಲೀಟರ್ ಹಾಲು ಕರೆಯುತ್ತಿದ್ದು, ಲೀಟರ್‌ಗೆ 36ರೂ.ರಂತೆ ಸಮೀಪದ ಹೋಟೆಲ್ ಮನೆಗಳಿಗೆ ವಿತರಿಸುತ್ತಿದ್ದಾರೆ. ಇವುಗಳಿಂದ ಉತ್ಪತ್ತಿಯಾಗುವ ಗೊಬ್ಬರ ಮಾರಾಟದಿಂದ ವಾರ್ಷಿಕ 40-50 ಸಾವಿರ ರೂ.ಆದಾಯಗಳಿಸುತ್ತಿದ್ದಾರೆ. ತೋಟದ ಸಮೀಪದಲ್ಲಿ ಹಂದಿ ಸಾಕಣೆಯನ್ನೂ ಮಾಡುತ್ತಿದ್ದು, ವಾರ್ಷಿಕ 30 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.
ಹೂವು, ತರಕಾರಿ ಬೆಳೆ: ತೋಟದ ಮಧ್ಯೆ ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. ಮೂರು ತೊಟ್ಟಿಗಳನ್ನು ನಿರ್ಮಿಸಿದ್ದು, ಒಂದು ತೊಟ್ಟಿಯಿಂದ ವಾರ್ಷಿಕ ಮೂರು ಬಾರಿ ಗೊಬ್ಬರ ತೆಗೆಯಲಾಗುತ್ತಿದೆ. ತಮ್ಮ ಜಮೀನಿನ ಬೆಳೆಗಳಿಗೆ ಬಳಸಿ ನಂತರ ಇತರರಿಗೆ ಮಾರಾಟವನ್ನು ಮಾಡುತ್ತಿದ್ದಾರೆ. ಎರೆ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯ ಜತೆಗೆ ಉತ್ತಮ ಇಳುವರಿಯೂ ಬರುತ್ತದೆ ಎನ್ನುತ್ತಾರೆ ಚಿಮ್ಮಿ ಹಾಗೂ ಕಾವೇರಮ್ಮ ದಂಪತಿ, 6 ಅಡಿ ಉದ್ದ ಹಾಗೂ 4 ಅಡಿ ಎತ್ತರದ ತೊಟ್ಟಿಗಳನ್ನು ನಿರ್ಮಿಸಿ ವಿವಿಧ ಹಂತಗಳಲ್ಲಿ ತ್ಯಾಜ್ಯ ತುಂಬಲಾಗುತ್ತದೆ. ಮೊದಲ ಹಂತದಲ್ಲಿ ಘನ ತ್ಯಾಜ್ಯ, ಎರಡನೇ ಹಂತದಲ್ಲಿ ಸಗಣಿ, ಮೂರನೇ ಹಂತದಲ್ಲಿ ಸಸ್ಯ ತ್ಯಾಜ್ಯಗಳನ್ನು ತೊಟ್ಟಿಗೆ ತುಂಬಿಸಲಾಗುತ್ತದೆ. ಪಿರಿಯಾಪಟ್ಟಣ ತಾಲೂಕಿನಿಂದ ಎರೆಹುಳುವನ್ನು ಕೆ.ಜಿ.ಗೆ 20 ರೂ.ಯಂತೆ ತಂದು ಬಿಡಲಾಗಿದೆ. ನಂತರ 60 ದಿನಗಳ ನಿರ್ವಹಣೆ ನಂತರ ಎರೆ ಗೊಬ್ಬರ ಬಳಕೆಗೆ ಲಭ್ಯವಾಗಿದೆ.
ಹೂವು, ತರಕಾರಿ ಬೆಳೆ: ಮನೆಯ ಸುತ್ತ ವಿವಿಧ ಜಾತಿಯ ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ವಾಸ್ತು ಗಿಡ, ಅಂಥೋರಿಯಂ, ತಾವರೆ, ಚಟ್ಟಿ, ದಾಸವಾಳ, ಮಲ್ಲಿಗೆ, ಲಿಲ್ಲಿ, ಚೆಂಡು ಹೂ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ಬೆಳೆಸಲಾಗಿದೆ. ಅಗತ್ಯಕ್ಕೆ ಬೇಕಾಗುವಷ್ಟು ತರಕಾರಿಗಳನ್ನು ಮನೆಯಲ್ಲೇ ಬೆಳೆಯಲಾಗುತ್ತಿದೆ. ಬೀನ್ಸ್, ಎಲೆ ಕೋಸು, ಬೆಂಡೆ, ಟೊಮಾಟೊ, ಶುಂಠಿ, ಸೌತೆಕಾಯಿ, ಬದನೆ, ಮೆಣಸು, ಅರಿಶಿಣ, ಬೂದು ಕುಂಬಳ ಹಾಗೂ ಸೊಪ್ಪುಗಳನ್ನು ಮನೆ ಅಂಗಳದಲ್ಲೇ ಬೆಳೆಯಲಾಗುತ್ತಿದೆ.
ವಿವಿಧ ಬಗೆಯ ಹಣ್ಣು: ಮನೆಯ ಸುತ್ತ ವಿವಿಧ ಬಗೆಯ ಹಣ್ಣುಗಳನ್ನು ಬೆಳೆಯಲಾಗಿದೆ. ಸ್ಟ್ರಾಬೆರಿ, ಮೂಸಂಬಿ, ಹೈಬ್ರಿಡ್ ನಿಂಬೆ, ಗೋವಾ ಸೀಬೆ, ಕಪ್ಪು, ಹಳದಿ, ಹಸಿರು, ಗ್ರೇ, ತಳೆಯ ಬಟರ್ ಫೂಟ್‌ಗಳನ್ನು ಬೆಳೆಯಲಾಗಿದೆ. ಹಲಸು, ಹೈಬ್ರಿಡ್ ಸಪೋಟಿ, ಪಪ್ಪಾಯ, ಚಕ್ಕೋಡಾ, ಕಿತ್ತಳೆ, ನೇರಳೆ, ನೆಲ್ಲಿಕಾಯಿ ಹಾಗೂ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯಲಾಗಿದ್ದು, ಇವುಗಳೆಂದಲೂ ಉತ್ತಮ ಆದಾಯ ಗಳಿಸಲಾಗುತ್ತಿದೆ.
25 ವರ್ಷದಿಂದ ನಾನು ಮತ್ತು ನನ್ನ ಪತಿ ಮಿಶ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಇದರಿಂದ ಉತ್ತಮ ಆದಾಯವನ್ನು ಕೂಡ ಪಡೆದಿದ್ದೇವೆ. ನಮ್ಮಲ್ಲೇ ಉತ್ಪತ್ತಿಯಾಗುವ ಎಲೆ ಹಾಗೂ ಸಗಣಿ ಗೊಬ್ಬರಗಳನ್ನು ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಕೂಡ ಹೆಚ್ಚಾಗುವ ಮೂಲಕ ಉತ್ತಮ ಇಳುವರಿ ಲಭ್ಯವಾಗಿದೆ.
ಕಾವೇರಮ್ಮ ರೈತ ಮಹಿಳೆ