ಸಾಲ ವಸೂಲಿಗೆ ಬಂದ ಮ್ಯಾನೇಜರ್ ನನ್ನು ನೋಡಿ ಜೀವ ಕಳಕೊಂಡ ರೈತ
► ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ 1,219 ರೈತರು ಆತ್ಮಹತ್ಯೆಗೆ ಶರಣು ► ಸಾವಿರಾರು ಕೋಟಿ ವಂಚಿಸುವವರಿಗೆ ವಿದೇಶಿ ಪೌರತ್ವ ಒಂದೆರಡು ಲಕ್ಷ ಬಾಕಿ ಇಟ್ಟವರಿಗೆ ಸಾವಿನ ದಾರಿ
ಮೆಹುಲ್ ಚೋಕ್ಸಿ. ಈ ದೇಶದಲ್ಲಿ ಒಂದೆರಡಲ್ಲ, ಹದಿನಾಲ್ಕು ಸಾವಿರ ಕೋಟಿ ರೂಪಾಯಿಯನ್ನು ಬ್ಯಾಂಕ್ ಗಳಿಗೆ ವಂಚಿಸಿ ಈಗ ದೇಶ ಬಿಟ್ಟುವಿದೇಶದಲ್ಲಿ ಹಾಯಾಗಿರುವ ಉದ್ಯಮಿ. ಈತ ದೇಶ ಬಿಡುವ ಮೂರು ವರ್ಷ ಮೊದಲು ಈ ದೇಶದ ಪ್ರಧಾನಿ ಮೋದಿ ಅವರ ದಿಲ್ಲಿಯ ಅಧಿಕೃತ ನಿವಾಸದಲ್ಲಿ ಪ್ರಧಾನಿಯ ಅತಿಥಿಯಾಗಿ ಭಾಗವಹಿಸಿದ್ದ. ಆತನನ್ನು ಪ್ರಧಾನಿಗಳೇ "ಮೆಹುಲ್ ಭಾಯ್ " ಅಂತ ಬಾಯ್ತುಂಬ ಪ್ರೀತಿಯಿಂದ ಭಾಷಣದಲ್ಲೇ ಎಲ್ಲರೆದುರು ಕರೆದು ಮಾತಾಡಿದ್ದರು.
ನ ಖಾವೂಂಗಾ ನ ಖಾನೇ ದೂಂಗಾ ಎಂದು ಭಾಷಣ ಬಿಗಿಯುವ ಮೋದೀಜಿ ಅವರ ಮೂಗಿನಡಿಯಲ್ಲೇ 2018 ರಲ್ಲಿ ಈತ ಈ ದೇಶದ ಬ್ಯಾಂಕ್ ಗಳಿಗೆ 14 ಸಾವಿರ ಕೋಟಿ ರೂಪಾಯಿ ಬಾಕಿ ಇಟ್ಟು ದೇಶ ಬಿಟ್ಟು ಪರಾರಿಯಾದ. ಈಗ ಆಂಟಿಗುವದಲ್ಲಿ ಅಲ್ಲಿನ ನಾಗರೀಕತೆ ಪಡೆದು ಆರಾಮವಾಗಿ ಬದುಕುತ್ತಿದ್ದಾನೆ.
ಈತನಿಂದ ಪಂಗನಾಮ ಹಾಕಿಸಿಕೊಂಡ ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಇಲ್ಲಿನ ಲಕ್ಷಾಂತರ ಜನರು ಕಂಗಾಲಾಗಿದ್ದಾರೆ. ಮೋದೀಜಿ ಎಂದಿನಂತೆ ಭಾಷಣ ಮಾಡುತ್ತಾ ತಿರುಗಾಡುತ್ತಿದ್ದಾರೆ.
ಇದು ಸಾವಿರ ಸಾವಿರ ಕೋಟಿ ಸಾಲ ಪಡೆದ ಒಬ್ಬ ದೊಡ್ಡ ಶ್ರೀಮಂತ ಸಾಲಗಾರನ ಸಂಕ್ಷಿಪ್ತ ಕತೆ. ಹುಬ್ಬಳ್ಳಿಯಿಂದ ನಿನ್ನೆ ಇನ್ನೊಬ್ಬ ಸಾಲಗಾರನ ಕತೆ ಸುದ್ದಿಯಾಗಿ ಬಂದಿದೆ. ಹುಬ್ಬಳ್ಳಿಯ ಮೊರಬ ವ್ಯಾಪ್ತಿಯ ಗುಮ್ಮಗೋಳದ ಫಕೀರಪ್ಪ ಜಾವೂರ್ ಎಂಬ 75 ವರ್ಷದ ರೈತ ಆತ.
ಆತ ತೆಗೊಂಡಿದ್ದು 14 ಲಕ್ಷದ 50 ಸಾವಿರ ಸಾಲ. ಒಂದಿಷ್ಟು ಮರು ಪಾವತಿಯೂ ಮಾಡಿದ್ದಾನೆ. ಆದರೆ ಕಳೆದ ಕೆಲವು ವರ್ಷಗಳಿಂದ ಮರುಪಾವತಿ ಮಾಡಲಾಗದೆ ಕಂಗಾಲಾಗಿದ್ದ. ಆತನಿಂದ ಸಾಲ ವಸೂಲಿಗೆ ಮೊರಬದ ಬ್ಯಾಂಕ್ ಮ್ಯಾನೇಜರ್ ಹಿಂದೆ ಬಿದ್ದಿದ್ದ. ಮ್ಯಾನೇಜರ್ ನ ಕಿರುಕುಳ ತಡೆಯಲಾರದೆ ಈ ಬಾರಿ ಮತ್ತೆ ಮ್ಯಾನೇಜರ್ ಮನೆ ಬಾಗಿಲಿಗೆ ಬಂದಾಗ ಫಕೀರಪ್ಪ ಹೋಗಿ ಜೀವವನ್ನೇ ಕಳಕೊಂಡಿದ್ದಾನೆ.
ಇದು ಈ ದೇಶದ ಅನ್ನದಾತ, ಸಾಲಗಾರನಾದರೆ ಕೊನೆಗೆ ಆಗುವ ಕತೆ. ಮೆಹುಲ್ ಚೋಕ್ಸಿ ಹಾಗು ಕೋಟಿ ಕೋಟಿ ಇಲ್ಲಿನ ಬ್ಯಾಂಕುಗಳಿಂದ ಬಾಚಿಕೊಂಡು ವಿದೇಶಕ್ಕೆ ಪರಾರಿಯಾದ ಅಂತಹ ಇನ್ನೂ ಹಲವರದ್ದೇ ಒಂದು ಕತೆ. ಈ ರೈತರದ್ದೇ ಒಂದು ಕತೆ.
ಹೊರಗಿನಿಂದ ನೋಡುವವರಿಗೆ ಇದೊಂದು ಲೆಕ್ಕಕ್ಕಿಲ್ಲದ ಘಟನೆಯಾಗಿಯೂ ತೋರಬಹುದು. ಆದರೆ, ರೈತನೊಬ್ಬನ ಸಂಕಟ, ಆತನ ಕುಟುಂಬದ ತಳಮಳ, ಆತ್ಮಹತ್ಯೆಯಂಥ ಅತಿರೇಕದ ತೀರ್ಮಾನಕ್ಕೆ ಮನಸ್ಸು ಮಾಡುವ ಮಟ್ಟಕ್ಕೆ ಹೋಗುವಾಗಿನ ಆತನ ತಲ್ಲಣಗಳು, ನಿಟ್ಟುಸಿರು ಬಹುಶಃ ಯಾರನ್ನೂ ಯಾವ ಸರ್ಕಾರವನ್ನೂ ತಾಕುವುದೇ ಇಲ್ಲ.
ಕೋಟ್ಯಧಿಪತಿಗಳ ಸಾಲದ ಖಾತೆಯನ್ನೇ ಕ್ಲೋಸ್ ಮಾಡುವ ಬ್ಯಾಂಕುಗಳು, ರೈತನನ್ನು ಮಾತ್ರ ಬೆಂಬಿಡದೆ ಕಾಡುತ್ತವೆ, ಕಿರುಕುಳ ಕೊಡುತ್ತವೆ, ಭಯಬೀಳಿಸುತ್ತವೆ. ಮಾಡಿಕೊಂಡ ಸಾಲದ ಹೊರೆ ಒಂದೆಡೆ ಬಾಧಿಸುತ್ತಿರುವಾಗಲೇ, ಬ್ಯಾಂಕ್ಗಳು ನೀಡುವ ಇಂಥ ಮಾನಸಿಕ ಕಿರುಕುಳ ಒಬ್ಬ ಮರ್ಯಾದಸ್ತ ಬಡ ರೈತನ ಎದೆಗುಂದುವಂತೆ ಮಾಡುತ್ತವೆ. ಬದುಕು ಇನ್ನು ಸಾಕು ಎನ್ನಿಸುವಂತೆ ಮಾಡಿಬಿಡುತ್ತವೆ.
ಇದು ಒಬ್ಬ ರೈತನ ಕಥೆಯಲ್ಲ. ಇದು ಈ ದೇಶದ ಆತ್ಮವನ್ನೇ ಚುಚ್ಚುವಂಥ ಸಂಕಟ. ವರದಿಗಳ ಪ್ರಕಾರ, ಕಳೆದ ಒಂದೂವರೆ ವರ್ಷದಲ್ಲಿ ಕರ್ನಾಟಕದಲ್ಲಿ 1,219 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2022-23 ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 43, ಧಾರವಾಡದಲ್ಲಿ 78, ಹಾವೇರಿಯಲ್ಲಿ 122, ಬೆಳಗಾವಿಯಲ್ಲಿ 81, ಬೀದರ್ನಲ್ಲಿ 36, ಚಿಕ್ಕಮಗಳೂರಿನಲ್ಲಿ 53, ಕಲಬುರಗಿಯಲ್ಲಿ 50, ಮೈಸೂರಿನಲ್ಲಿ 83, ಯಾದಗಿರಿಯಲ್ಲಿ 56 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಕಳೆದ ಐದು ತಿಂಗಳಲ್ಲೇ 174 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ಮುಖ್ಯವಾಗಿ ಹಾವೇರಿಯಲ್ಲಿ 38, ಚಿಕ್ಕಮಗಳೂರಿನಲ್ಲಿ 15, ಬೆಳಗಾವಿಯಲ್ಲಿ 29, ವಿಜಯಪುರದಲ್ಲಿ 12, ಯಾದಗಿರಿಯಲ್ಲಿ 19, ಬೀದರ್ನಲ್ಲಿ 7, ಕಲಬುರಗಿಯಲ್ಲಿ 11, ಗದಗದಲ್ಲಿ 4 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಹಳೆಯ ಕೆಲವು ಅಂಕಿಅಂಶಗಳನ್ನು ಗಮನಿಸಿದರೂ ಗೊತ್ತಾಗುವ ಒಂದು ಸತ್ಯವೇನೆಂದರೆ, ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಬರ ಮತ್ತು ಕೃಷಿ ವೈಫಲ್ಯದಿಂದ ಕಂಗೆಟ್ಟಿದ್ದವರೇ ಹೆಚ್ಚು. ಸಾಮಾನ್ಯವಾಗಿ ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುವುದು ಮಹಾರಾಷ್ಟ್ರದಲ್ಲಿ. ನಂತರದ ಸ್ಥಾನದಲ್ಲಿ ಕರ್ನಾಟಕ ಮತ್ತು ಆಂದ್ರಪ್ರದೇಶ ಬರುತ್ತವೆ.
ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕೃಷಿ ವಲಯದಲ್ಲಿ ಪ್ರತಿದಿನ ಸುಮಾರು 30 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ಮಾಹಿತಿಗಳಿವೆ. ಬೆಳೆ ವೈಫಲ್ಯ, ಹೆಚ್ಚುತ್ತಿರುವ ವೆಚ್ಚ, ಮತ್ತು ಕಡಿಮೆ ಮಾರುಕಟ್ಟೆ ಬೆಲೆಗಳು ರೈತರನ್ನು ಸಾಲದ ಚಕ್ರದಲ್ಲಿ ಸಿಲುಕಿಸುತ್ತವೆ. ಈ ದೇಶದ ಮೇಲೆ ಹೇರಲಾದ ಅವೈಜ್ಞಾನಿಕ ಲಾಕ್‌ಡೌನ್‌ನಿಂದ ಅತಿ ಶೋಚನೀಯ ಸ್ಥಿತಿ ಮುಟ್ಟಿದ್ದ ರೈತರಂತೂ ಇನ್ನೂ ಸರಿಯಾಗಿ ಚೇತರಿಸಿಕೊಂಡೇ ಇಲ್ಲ.
ಕರ್ನಾಟಕದಲ್ಲಿಯೂ ಮಳೆ ಕೊರತೆ, ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲಾಗಿಸುವ ವಿಚಾರಗಳಾಗಿವೆ.
ಅನಿಶ್ಚಿತ ಮಳೆ ರೈತರಿಗೆ ದೊಡ್ಡ ಹೊಡೆತ ಕೊಡುವ ಅಂಶವಾಗಿದೆ. ಹಾವೇರಿ, ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಪ್ರಾಣ ಕಳೆದುಕೊಂಡಿದ್ದಾರೆ.
ಎಷ್ಟೋ ಸಲ ಕೈಗೆ ಬರುವ ಫಸಲು ಖರ್ಚಿನ ಮೊತ್ತಕ್ಕೂ ಸರಿಯಾಗುವುದಿಲ್ಲ. ಬಹುದೊಡ್ಡ ನಷ್ಟವನ್ನು ರೈತ ಎದುರಿಸುವಂತಾಗುತ್ತದೆ. ಮಾಡಿಕೊಂಡ ಸಾಲ ಶೂಲವಾಗಿಬಿಡುತ್ತದೆ. ಇಂಥ ಸನ್ನಿವೇಶದಲ್ಲಿ ರೈತನನ್ನು, ಅವನ ಪರಿಸ್ಥಿತಿಯನ್ನು ಮಾನವೀಯ ನೆಲೆಯಿಂದ ಅರ್ಥ ಮಾಡಿಕೊಂಡು ಸಹಕರಿಸಲಾರದ ಮನಃಸ್ಥಿತಿ ಬ್ಯಾಂಕ್ಗಳದ್ದು. ಅಲ್ಲಿ ಸಾವಿರ ಸಾವಿರ ಕೋಟಿ ಸುಲಿಯುವ ಮೆಹುಲ್ ಚೋಕ್ಸಿಗೆ, ಲಲಿತ್ ಮೋದಿಗೆ, ವಿಜಯ್ ಮಲ್ಯಗೆ, ನಿತಿನ್ ಸಂದೇಸರಗೆ ಸಿಗುವ ಪರಾರಿ ಭಾಗ್ಯ ಬಡ ರೈತನಿಗೆ ಸಿಗೋದಿಲ್ಲ. ಆತನಿಗೆ ಏನಿದ್ದರೂ ಆತ್ಮಹತ್ಯೆ ಅವಕಾಶ ಮಾತ್ರ ಲಭ್ಯ. ಎಲ್ಲರಿಗೂ ಅನ್ನ ಕೊಡುವ ರೈತ ತಾನು ನೆಮ್ಮದಿಯಿಂದ ಉಣ್ಣುವ ಸ್ಥಿತಿಯಲ್ಲಿಲ್ಲ ಎಂಬುದೇ ನಮ್ಮ ದೇಶದ ಎದೆ ನಡುಗಿಸುವ ಕಟು ವಾಸ್ತವ.