​ಏಮ್ಸ್ ನಲ್ಲಿ ಆಧ್ಯಾತ್ಮಿಕ ವಿಭಾಗ ಶುರು ಮಾಡಲು ಪ್ರಸ್ತಾವನೆ !

Update: 2023-10-16 10:08 GMT
Editor : Thouheed | By : ಆರ್. ಜೀವಿ

ಮಹಾರಾಷ್ಟ್ರದ ನಾಂದೇಡ್ ನಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೊನ್ನೆ 48 ಗಂಟೆಗಳ ಅವಧಿಯಲ್ಲಿ 35ಕ್ಕೂ ಹೆಚ್ಚು ​ ಅಮಾಯಕ ಜೀವಗಳು ಪ್ರಾಣ ಕಳಕೊಂಡವು. ಅದರಲ್ಲಿ ಸುಮಾರು ಅರ್ಧದಷ್ಟು ನವಜಾತ ಶಿಶುಗಳು. ಅದೇ ರಾಜ್ಯದ ನಾಗಪುರದ ಎರಡು ಸರಕಾರಿ ಆಸ್ಪತ್ರೆಗಳಲ್ಲಿ ಒಂದೇ ದಿನದಲ್ಲಿ 23 ಮಂದಿ ಬಲಿಯಾದರು. ಅದೇ ರಾಜ್ಯದ ಥಾಣೆಯಲ್ಲಿ ಆಗಸ್ಟ್ ತಿಂಗಳಲ್ಲಿ ಒಂದೇ ದಿನ 18 ಜನ ಜೀವ ಕಳಕೊಂಡರು. ಈಗ ಸಂಭಾಜಿ ನಗರ ಎಂದು ಬದಲಾಗಿರುವ ಔರಂಗಾಬಾದ್ ನ ಸರಕಾರಿ ಆಸ್ಪತ್ರೆಯಲ್ಲೂ ಹಲವರು ಪ್ರಾಣ ಕಳಕೊಂಡ ವರದಿ ಬಂದಿತ್ತು.

ಈ ಎಲ್ಲಾ ಸರಣಿ ಸಾವುಗಳಿಗೆ ಯಾವುದೊ ನಿಗೂಢ ಸಾಂಕ್ರಾಮಿಕ ರೋಗ ಕಾರಣವಲ್ಲ. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಹಾಗು ಔಷಧ ಸಿಗದೇ ಪ್ರಾಣ ಬಿಟ್ಟ ನ್ಯೂ ಇಂಡಿಯಾದ ಬಡವರು ಇವರು. ನಮ್ಮ ದೇಶದ ಸಾರ್ವಜನಿಕ ಅರೋಗ್ಯ ವ್ಯವಸ್ಥೆ ಅದೆಷ್ಟು ಅವ್ಯವಸ್ಥೆಯಿಂದ ನರಳುತ್ತಿದೆ ಎಂಬುದು ಕೊರೊನ ಕಾಲದಲ್ಲೇ ಜಗಜ್ಜಾಹೀರಾಗಿತ್ತು. ಅದಾಗಿ ಮೂರು ವರ್ಷ ಕಳೆದರೂ ವಿಶ್ವಗುರುವಿನ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಇವತ್ತಿಗೂ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳೂ ಸೇರಿದಂತೆ ಅಮಾಯಕ ಬಡವರು ಮಾಡದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರ ಅಪರಾಧ ಒಂದೇ. ಅವರಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ದುಬಾರಿ ಬೆಲೆ ತೆತ್ತು ಚಿಕಿತ್ಸೆ ಪಡೆಯುವ ಸಾಮರ್ಥ್ಯ ಇಲ್ಲ.

ಇಡೀ ಅರೋಗ್ಯ ವ್ಯವಸ್ಥೆ ಇಂತಹ ದುರವಸ್ಥೆಯಲ್ಲಿರುವ ದೇಶದ ರಾಜಧಾನಿಯಿಂದ ಈಗ ಹೊಸ ಸುದ್ದಿ ಬಂದಿದೆ. ವಿಶ್ವಗುರುವಿನ ಸರ್ಕಾರದಲ್ಲಿ ಯಾವುದು ನಿಜವಾಗಿಯೂ ಆಗಬೇಕೊ ಅದೊಂದು ಬಿಟ್ಟು ಬೇರೆಲ್ಲ ಆಗುತ್ತದೆ. ಆದರೆ ಆಗಲೇಬೇಕಿರುವುದರ ಕಡೆಗೆ ಯಾರಿಗೂ ಲಕ್ಷ್ಯವಿರುವುದಿಲ್ಲ. ಅಥವಾ ಅದು ಅವರಿಗೆ ಬೇಡ.

ಈಗ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ಭಯಂಕರ ಅಬ್ಬರ ಕೇಳಿಸುತ್ತಿರುವಾಗಲೇ, ವೈಜ್ಞಾನಿಕ ಸಂಸ್ಥೆಗಳನ್ನೆಲ್ಲ ಹಳ್ಳ ಹಿಡಿಸುವ ಕೆಲಸವೂ ಅಗುತ್ತಿದೆಯೆ ಎಂಬ ಅನುಮಾನವೂ ಏಳುವಂತಾಗಿದೆ. ದೇಶವನ್ನು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಒಯ್ಯುವ ಮೌಢ್ಯಗಳು, ಬುಲ್ ಬುಲ್ ಹಕ್ಕಿಯ ರೆಕ್ಕೆಯ ಮೇಲೆ ಕೂತು ಸಾವರ್ಕರ್ ಜೈಲು ಕೋಣೆಯಿಂದ ಬರುತಿದ್ದರು ಎಂಬ ಶಾಲಾ ಪಠ್ಯದಲ್ಲಿನ ಪಾಠಗಳು ಇಂಥವುಗಳ ಸಾಲಿಗೇ ಸೇರಬಹುದಾದ ಮತ್ತೊಂದು ವಿಚಾರ ಈಗ ಮುನ್ನೆಲೆಗೆ ಬರುತ್ತಿದೆ.

ಅದು, ​ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಂದ್ರೆ ಏಮ್ಸ್ ನಲ್ಲಿ ಆಧ್ಯಾತ್ಮಿಕ ವಿಭಾಗ ಶುರು ಮಾಡುವ ಪ್ರಸ್ತಾವನೆ.​ಇಂಥದೊಂದು ಪ್ರಸ್ತಾವನೆಯ ಬಗ್ಗೆ ಕೇಳಿಸಿಕೊಳ್ಳುತ್ತಿರುವಾಗ​ ಎಲ್ಲಿಗೆ ಹೋಗಲಿದೆ ಈ ದೇಶ ಎಂದು ಆತಂಕವಾಗುತ್ತದೆ. ರೋಗಿಗಳ ಪ್ರಾಣ ಉಳಿಸಬೇಕಾದ ಆಸ್ಪತ್ರೆಯಲ್ಲಿ ಅಗತ್ಯವಾಗಿ ಬೇಕಾದುದೇನು? ಅದರ ಬಗ್ಗೆ ಈ ಸರ್ಕಾರಕ್ಕೆ ಚಿಂತೆ ಇಲ್ಲ. ಆದರೆ ಆಧ್ಯಾತ್ಮಿಕ ವಿಭಾಗ ಬೇಕಂತೆ.

ಆಸ್ಪತ್ರೆಗಳಲ್ಲಿ ಇರಬೇಕಾದ ಆಕ್ಸಿಜನ್, ಔಷಧಿ​ ಸಾಕಷ್ಟು ದಾಸ್ತಾನು ಇಡುವ ಯೋಗ್ಯತೆ ಇಲ್ಲ. ಆದರೆ ಇಂಥದೊಂದು ಶೋಕಿಗೆ ಮಾತ್ರ ಕಡಿಮೆಯಿಲ್ಲ. ಆಸ್ಪತ್ರೆಯಲ್ಲಿ ಕನಿಷ್ಠ ಸ್ವಚ್ಛತೆ ಕಾಪಾಡಿಕೊಳ್ಳಲೂ ಆಗದ ಇವರ ಆಡಳಿತ, ಆಧ್ಯಾತ್ಮಿಕ ಕೇಂದ್ರ ತೆರೆದು ಅದೇನು ಮಾಡಲಿದೆಯೊ ಗೊತ್ತಿಲ್ಲ.

​ಆಸ್ಪತ್ರೆಗಳಿಗೆ ತುರ್ತಾಗಿ ಬೇಕಾದ ಪ್ರಾಥಮಿಕ ಅಗತ್ಯಗಳನ್ನು ಪೂರೈಸದೆ ಯಾಕೆ ಇಂಥ ​ ಮೂರ್ಖತನದ ಯೋಚನೆಗಳು ಎಂಬುದೇ ಅರ್ಥವಾಗದ ಸಂಗತಿ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಧ್ಯಾತ್ಮಿಕ ವಿಭಾಗ ​ಅಂದ್ರೆ ಸ್ಪಿರಿಚುವಲ್‌ ಮೆಡಿಸಿನ್ ಆರಂಭಿಸುವ ಪ್ರಸ್ತಾವವನ್ನು ಇಡಲಾಗಿದೆ.

​ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಸಾಕಷ್ಟು ಮೆಡಿಸಿನ್ ಇಲ್ಲದೆ ಜನ ಪ್ರಾಣ ಕಳಕೊಂಡರು ಎಂಬ ವರದಿ ಚರ್ಚೆಯಲ್ಲಿರುವಾಗಲೇ ಈ ಸ್ಪಿರಿಚುವಲ್ ಮೆಡಿಸಿನ್ ನ ಮಾತು ಶುರುವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಜಾರಿಯಾದ ಆಫೀಸ್‌ ಮೆಮೊರಾಂಡಂ ಮೂಲಕ ಈ ಪ್ರಸ್ತಾವನೆ ಇಡಲಾಗಿರುವುದು ಇನ್ನೂ ವಿಚಿತ್ರವಾಗಿದೆ.

ತಮಾಷೆಯೆಂದರೆ, ಈ ಪ್ರಸ್ತಾವಿತ ಹೊಸ ವಿಭಾಗದ ಕುರಿತು ಯಾವುದೇ ಸ್ಪಷ್ಟತೆಯಿಲ್ಲ. ಪಠ್ಯಕ್ರಮದ ಕುರಿತು ಯಾವುದೇ ಮಾಹಿತಿಯಿಲ್ಲ.

ವಾಸ್ತವವಾಗಿ, ಮೊದಲು ಈ ಪ್ರಸ್ತಾವನೆ ಮುಂದಿಟ್ಟ ವಿಭಾಗದಲ್ಲಿ ಈ ಕುರಿತು ಚರ್ಚೆ ನಡೆಯಬೇಕು. ನಂತರ ಎಲ್ಲಾ ಶಿಕ್ಷಕ ಸಿಬ್ಬಂದಿಯಿರುವ ಮಂಡಳಿ ಮುಂದೆ ಇರಿಸಬೇಕು. ಆದರೆ ಇದಾವುದೂ ಇಲ್ಲದೆ, ಹೊಸ ವಿಭಾಗ ರಚನೆಗೆ ನೇರ ಸಮಿತಿ ರಚನೆಗೆ ಮುಂದಾಗಿರುವುದಕ್ಕೆ ​ಅಲ್ಲಿನ ಹಿರಿಯ ಅಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದ್ದಕ್ಕಿದ್ದಂತೆ ಏಮ್ಸ್‌ ಆಡಳಿತ ಆಫೀಸ್‌ ಮೆಮೊರಾಂಡಂ ಜಾರಿಗೊಳಿಸಿ ಈ ಮೂಲಕ ಮೂರು ವಿಭಾಗಗಳ ರಚನೆಗೆ ರೂಪುರೇಷೆ ಸಮಿತಿ ರಚಿಸಲು ಮುಂದಾಗಿತ್ತು. ಈ ಮೂರು ವಿಭಾಗಗಳಲ್ಲಿ ಆಧ್ಯಾತ್ಮಿಕ ವಿಭಾಗವೂ ಒಂದು. ಉಳಿದೆರಡು ವಿಭಾಗಗಳೆಂದರೆ, ಟ್ರಾನ್ಸ್ಪ್ಲಾಂಟ್‌ ಮೆಡಿಸಿನ್‌ ಮತ್ತು ಮೆಡಿಕಲ್‌ ಎಜುಕೇಶನ್‌.

ಹೀಗೆ, ವೈಜ್ಞಾನಿಕವಾದುದರ ನಡುವೆಯೇ ಮೌಢ್ಯವನ್ನು ಬೆರೆಸಿ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದರ ಉದ್ದೇಶವೇನು? ಆಧ್ಯಾತ್ಮ ವಿಭಾಗದಿಂದ ​ಈಗ ಆಗಬೇಕಾದುದೇನು ಎಂಬುದೇ ನಿಗೂಢ. ಆದರೆ ಇಂಥದೊಂದು ಪ್ರಸ್ತಾವನೆಗೆ ಏಮ್ಸ್ನ ಎಲ್ಲಾ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸಂಸ್ಥೆಯ ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಮಾತ್ರವಲ್ಲದೆ, ಆಫೀಸ್‌ ಮೆಮೊರಾಂಡಂ ಮೂಲಕ ಈ ಪ್ರಸ್ತಾವನೆ ಮುಂದಿಟ್ಟಿರುವುದನ್ನೂ ಹಲವರು ಪ್ರಶ್ನಿಸಿದ್ದಾರೆ. ಇದು ಕಾರ್ಯಗತಗೊಳ್ಳುವುದು ಅಷ್ಟು ಸುಲಭವೇನೂ ಇಲ್ಲ. ಇದಕ್ಕೆ ಹಲವು ಅನುಮೋದನೆಗಳ ಅಗತ್ಯವಿದೆ. ಮೊದಲು ಸ್ಟಾಫ್‌ ಕೌನ್ಸಿಲ್‌ ಅನುಮೋದನೆ ದೊರೆಯಬೇಕು. ಅದಾದ ಬಳಿಕವೇ ಡೀನ್ಸ್‌ ಸಮಿತಿ ಹಾಗು ನಂತರ ಶೈಕ್ಷಣಿಕ ಸಮಿತಿ ಮುಂದೆ ಹೋಗಲಿದೆ.

ಅದಾದ ಬಳಿಕ ಹಣಕಾಸು ಸ್ಥಾಯಿ ಸಮಿತಿಯ ಅನುಮೋದನೆ ಬೇಕಿದೆ. ಈ ಎಲ್ಲಾ ಸಮಿತಿಗಳ ಅನುಮೋದನೆ ಪಡೆಯುವುದು ಕಷ್ಟಕರ ಎಂದೇ ಹೇಳಲಾಗುತ್ತಿದೆ. ಆದರೆ ಆತಂಕವಿರುವುದು, ದೇಶದ ಹೆಸರನ್ನೇ ಯಾವ ಚರ್ಚೆಯಿಲ್ಲದೆ ಬದಲಿಸಲು ಹೊರಡುವವರು, ಹಳೆಯ ಸಂವಿಧಾನದ ಪ್ರತಿಯನ್ನು ಈಗಿನದೆಂಬಂತೆ ಹಂಚಿ ಯಾವುದೋ ಉದ್ದೇಶ ಸಾಧಿಸಲು ಬಯಸುವವರು ಏನನ್ನೂ ಮಾಡಿಬಿಡಬಲ್ಲರು ಎಂಬುದು.

ಇನ್ನೊಂದೆಡೆ, ಏಮ್ಸ್ನಂಥ ಈ ದೇಶದ ಹೆಮ್ಮೆಯ ಸಂಸ್ಥೆಯೊಳಗೂ ಯಾಕೆ ಮೌಢ್ಯವನ್ನು ತುಂಬಲು ಇವರು ಹೊರಟಿದ್ದಾರೆ ಎಂಬುದು ತೀರಾ ಅಚ್ಚರಿಯ ವಿಷಯವಾಗಿಯೇನೂ ಕಾಣಿಸುವುದಿಲ್ಲ. ನೆಹರೂ ಕಟ್ಟಿದ್ದ ಇಸ್ರೋ​ದಂತಹ ಸಂಸ್ಥೆಗೆ ಸಾರಥ್ಯ ವಹಿಸಿರುವವರು ​ಜ್ಯೋತಿಷಿಗಳ ಮೊರೆ ಹೋಗುತ್ತಿರುವುದನ್ನು ನೋಡಿದರೆ, ಅದು ಅವರ ಖಾಸಗಿ ನಂಬಿಕೆಯೊ ಅಥವಾ ಈ ದೇಶದ ವೈಜ್ಞಾನಿಕ ಘನತೆಯನ್ನು ಕುಂದಿಸುವ ನಡೆಯೊ ಎಂಬುದನ್ನು ಯೋಚಿಸಬೇಕು.

ಯುದ್ಧ ವಿಮಾನಕ್ಕೆ ಲಿಂಬೆಹಣ್ಣು ಕಟ್ಟುವ ನಾಯಕರು​ ಜನರ ಕಣ್ಣಿಗೆ ಮಣ್ಣೆರೆಚಲು ​ಏನು ಬೇಕಾದರೂ ಮಾಡಿಬಿಡಬಲ್ಲರು ಎಂಬುದು ತೀರಾ ಅನಿರೀಕ್ಷಿತ ಎಂದೇನೂ ಅನ್ನಿಸುವುದಿಲ್ಲ. ಆದರೆ, ಇಂಥವರಿಗೆ ಕೇಳಬೇಕಾಗಿರುವುದು, ಆಕ್ಸಿಜನ್ನು ಬೇಕಿರುವಲ್ಲಿ ಅಧ್ಯಾತ್ಮ ಇಡಲು ಹೊರಟಿದ್ದೀರಾ ಎಂಬಂಥ ಪ್ರಶ್ನೆಗಳನ್ನು. ನೋಡುತ್ತಲೇ ಇದ್ದೇವೆ, ಅದೆಷ್ಟು ಆಸ್ಪತ್ರೆ ದುರಂತಗಳು ಈ ಸರ್ಕಾರದ ಹೊಣೆಗೇಡಿತನದಿಂದಾಗಿ, ಈ ಸರ್ಕಾರದ ನೀತಿಗಳ ಕಾರಣದಿಂದಾಗಿ ಘಟಿಸುತ್ತಿವೆ ಎಂಬುದು ಗೊತ್ತಿದೆ. ಅದೆಷ್ಟು ಜೀವಗಳು ಇವರ ಮೂರ್ಖ ತೀರ್ಮಾನಗಳಿಂದಾಗಿ, ಬೇಜವಾಬ್ದಾರಿತನದಿಂದಾಗಿ, ನಿರ್ಲಕ್ಷ್ಯದಿಂದಾಗಿ ಬಲಿಯಾಗಿವೆ ಎಂಬುದನ್ನು ಕಾಣುತ್ತಿದ್ದೇವೆ.

ಜೀವ ಉಳಿಸಬೇಕಿರುವ ಆಸ್ಪತ್ರೆಗಳೊಳಗೇ ಬರೀ ಇವರ ಅಲಕ್ಷ್ಯದ ಕಾರಣದಿಂದಾಗಿ ರೋಗಿಗಳು, ಕಡೆಗೆ ನವಜಾತ ಶಿಶುಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಮೊನ್ನೆಮೊನ್ನೆಯದೇ ಘಟನೆ ನೆನಪಿಸಿಕೊಳ್ಳುವುದಾದರೆ, ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 16 ನವಜಾತ ಶಿಶುಗಳೂ​ 35ಕ್ಕೂ ಹೆಚ್ಚು ರೋಗಿಗಳು ಸಾವಿಗೀಡಾದರು.

ಕಾರಣವೇನು? ಆಸ್ಪತ್ರೆಯಲ್ಲಿ ಬೇಕಾದ ಔಷಧಗಳೇ ಇರಲಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದು ಇಂಥ ದುರವಸ್ಥೆಯಲ್ಲಿರುತ್ತದೆ ಎಂದರೆ ಏನರ್ಥ?. ಆ ಸರ್ಕಾರಿ ಆಸ್ಪತ್ರೆಯಿರುವ ಪ್ರದೇಶದಲ್ಲಿ ಸುತ್ತಮತ್ತ ಇತರ ಪ್ರಮುಖ ಚಿಕಿತ್ಸಾ ಕೇಂದ್ರಗಳೇ ಇಲ್ಲ.

ಹೋಗಲಿ, ಊರಿಗೊಂದೇ ಎಂಬಂತಿರುವ ಆ ಆಸ್ಪತ್ರೆಯಲ್ಲಾದರೂ ಎಲ್ಲವೂ ಸುಸಜ್ಜಿತವಾಗಿದೆಯೆ ಎಂದರೆ ಅದರದ್ದೂ ದರಿದ್ರ ಅವಸ್ಥೆ.

ಅಲ್ಲಿ ಅಗತ್ಯ ವೈದ್ಯರು, ಅರೆವೈದ್ಯರು, ನರ್ಸ್ಗಳ ಕೊರತೆ. ಅಷ್ಟು ಮಾತ್ರವಲ್ಲದೆ ಔಷಧಗಳೂ ಇರದ ಸ್ಥಿತಿ. ಔಷಧ ಬೇಕೆಂದರೆ ಖಾಸಗಿ ಔಷಧಾಲಯಗಳಿಗೆ ಹೋಗಬೇಕಾದ ಪರಿಸ್ಥಿತಿ. ಸಿಟಿ ಸ್ಕ್ಯಾನ್‌ಗಳಂಥ ಕೆಲವು ರೋಗನಿರ್ಣಯ ಯಂತ್ರಗಳು ಕೂಡ ನಿರ್ವಹಣೆ ಕೊರತೆಯಿಂದಾಗಿ ನಿಷ್ಕ್ರಿಯವಾಗಿದ್ದುದು ಕೂಡ ಅದೇ ಆಸ್ಪತ್ರೆಯಲ್ಲಿ. ಇಷ್ಟೆಲ್ಲ ಕೊರತೆಗಳು ಮತ್ತು ಅವಾಂತರಗಳ ಜೊತೆಗೇ ಕೊಳಕುತನ ಬೇರೆ. ಆಸ್ಪತ್ರೆ ಆವರಣದ ತುಂಬ ಕಣ್ಣಿಗೆ ರಾಚುವಂಥ ಗಲೀಜು. ಗಬ್ಬು ನಾರುವ ಶೌಚಾಲಯಗಳು. ಆಸ್ಪತ್ರೆ ಕ್ಯಾಂಟೀನ್ ಪಕ್ಕವೇ ಓಡಾಡಿಕೊಂಡಿರುವ ಹಂದಿಗಳು.

ಬರೀ ಎರಡೇ ತಿಂಗಳುಗಳ ಹಿಂದೆ ಇದೇ ರಾಜ್ಯದ ಥಾಣೆ ಜಿಲ್ಲೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿಯಲ್ಲಿ 18 ರೋಗಿಗಳು ಸಾವನ್ನಪ್ಪಿದ್ದರು. ಅಂಥದೊಂದು ದುರದೃಷ್ಟಕರ ಘಟನೆಯ ಬಳಿಕವೂ ಎಚ್ಚೆತ್ತುಕೊಳ್ಳದ, ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಅಂಥದೇ ಆಘಾತಕಾರಿ ಘಟನೆ.

ಅಂದರೆ ಬಿಜೆಪಿಯ ಮಂದಿಗೆ ಜನರ ಜೀವಗಳೆಂದರೆ ಲೆಕ್ಕವೇ ಇಲ್ಲ. ಮುಖ್ಯವಾಗಿ ಔಷಧಿ ಖರೀದಿ ವಿಚಾರದಲ್ಲಿನ ಸರ್ಕಾರದ ನೀತಿಯಿಂದಾಗಿ ತಲೆದೋರಿದ ಔಷಧ ಕೊರತೆ ಅಷ್ಟೊಂದು ಜೀವಗಳ ಬಲಿ ಪಡೆಯಿತು. ಆದರೆ ಸರ್ಕಾರ ಮಾತ್ರ, ಹಾಗಲ್ಲ ಹೀಗಲ್ಲ ಎಂದು ಏನೇನೂ ಕಥೆ ಹೇಳುತ್ತ ಕೂತಿತ್ತು. 2017ರ ಆಗಸ್ಟ್ನಲ್ಲಿ ಉತ್ತರ ಪ್ರದೇಶದ ಗೋರಖ್ಪುರದ ಆಸ್ಪತ್ರೆಯಲ್ಲಿ ಏನಾಯಿತು ಎಂಬುದು ಇನ್ನೂ ಎದೆ ನಡುಗಿಸುತ್ತಲೇ ಇರುವ ಸಂಗತಿಯಾಗಿದೆ.

ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದ ಗೋರಖ್‌ಪುರದ ಸರ್ಕಾರಿ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 63 ಮಕ್ಕಳು ಸಾವನ್ನಪ್ಪಿದ್ದರು. ಕಾರಣವೇನು? ಆಕ್ಸಿಜನ್ ಪೂರೈಕೆ ಇಲ್ಲದೇ ಇದ್ದುದು. ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಇದ್ದುದರಿಂದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿತ್ತು. ಅದರ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದುದರ ಬಗ್ಗೆಯೂ ವರದಿಯಾಗಿತ್ತು.

ಆದರೆ ಸರ್ಕಾರ ಏನು ಮಾಡಿತು ಎಂಬುದು ಕಣ್ಣೆದುರೇ ಇರುವ ಸತ್ಯ. ಅದರ ಬೇಜವಾಬ್ದಾರಿತನಕ್ಕೆ 63 ಮಕ್ಕಳು ಬಲಿಯಾದರು. ಮಕ್ಕಳ ಜೀವ ಉಳಿಸಿಲು ತಮ್ಮದೇ ಹಣ ಖರ್ಚು ಮಾಡಿ ಆಕ್ಸಿಜನ್ ಸಿಲಿಂಡರ್ ಹೊಂದಿಸಲು ಹೋರಾಡಿದ್ದ ವೈದ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಜೈಲಿಗೆ ಕಳಿಸಿತ್ತು ಇದೇ ಬಿಜೆಪಿ ಸರ್ಕಾರ. ಇನ್ನು, ಕೋವಿಡ್ ಸಮಯದಲ್ಲಿ ನಮ್ಮದೇ ರಾಜ್ಯದಲ್ಲಿ ಇದೇ ಬಿಜೆಪಿಯವರ ಸರ್ಕಾರದ ಅಲಕ್ಷ್ಯಕ್ಕೆ, ಹೊಣೆಗೇಡಿತನಕ್ಕೆ​ 36 ರೋಗಿಗಳು ಪ್ರಾಣ ಕಳೆದುಕೊಳ್ಳುವಂತಾಯಿತು.

ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ 36 ರೋಗಿಗಳು ಬಲಿಯಾಗಿ ಹೋಗಿದ್ದರು. ಇದು ಎಲ್ಲರನ್ನೂ ಕಂಗೆಡಿಸುವ ವಾಸ್ತವ. ಪ್ರಾಣ ಕಾಪಾಡಬಲ್ಲ ಆಮ್ಲಜನಕ, ಔಷಧಗಳು ಇರಬೇಕಾದಲ್ಲಿ ಮತ್ತೇನೇನೋ ಬಂದರೆ ಹೀಗೇ ಆಗುವುದು. ಗೋಮೂತ್ರ ಕುಡಿಯಿರಿ ಎನ್ನುವವರು, ಮೈಗೆ ಸಗಣಿ ಬಳಿದುಕೊಳ್ಳಿ ಎನ್ನುವವರು ಸರ್ಕಾರ ನಡೆಸಲು ಕೂತರೆ ಇಂಥದೇ ದುರಂತಗಳು ಸಂಭವಿಸುವುದು.

ಹಾಗಾಗಿಯೇ ಈಗಿರುವ ಆತಂಕವೆಂದರೆ, ಆಸ್ಪತ್ರೆಗಳು ಆಧ್ಯಾತ್ಮಿಕ ಕೇಂದ್ರಗಳಾಗಿಬಿಟ್ಟರೆ ಏನು ಗತಿ ಎಂಬುದು. ಹಾಗಾಗದಂತೆ ತಡೆಯಬೇಕಿರುವುದು, ಅಂಥಲ್ಲಿ ಇರುವ ವೈಜ್ಞಾನಿಕ ತಿಳುವಳಿಕೆಯ ಜನರು. ಮೌಢ್ಯಗಳನ್ನು ವಿರೋಧಿಸಿ ನಿಲ್ಲಬೇಕಿರುವುದು, ವೈಜ್ಞಾನಿಕ ಮನೋಭಾವವನ್ನು ದಿಟ್ಟತನದಿಂದ ತೋರಬೇಕಿರುವುದು ಅವರ ಜವಾಬ್ದಾರಿ.

ಇಲ್ಲದೆ ಹೋದರೆ, ನೆಹರೂ ಕಟ್ಟಿದ ಏಮ್ಸ್ ಈ ದೇಶಕ್ಕೆ ಅಗತ್ಯವಿಲ್ಲ, ಅವನ್ನೆಲ್ಲ ಆಧ್ಯಾತ್ಮಿಕ ಕೇಂದ್ರಗಳನ್ನಾಗಿ ಬದಲಿಸೋಣ ಎಂದೇ ಇವರೆಲ್ಲ ಹೇಳತೊಡಗಿದರೂ ಅಚ್ಚರಿಯಿಲ್ಲ. ಹೋಗಿ ಹೋಗಿ, ಹೆಸರು ಬದಲಿಸುತ್ತಲೇ ಒಂಭತ್ತು ವರ್ಷ ಕಳೆದವರು ಇವರು. ತಮಾಷೆಯಲ್ಲ, ಇದು ಈ ದೇಶವನ್ನೀಗ ಕಾಡುತ್ತಿರುವ ದೊಡ್ಡ ಆತಂಕ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News