ಹಿಂದುಳಿದ ವರ್ಗಗಳ ಪಟ್ಟಿಯ ಮರುಪರಿಶೀಲನೆ ಅಗತ್ಯವಿದೆ
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅನುಷ್ಠಾನಕ್ಕೆ ಬಂದಿರುವಂತಹ ಈ ಕಾಯ್ದೆಯ ಪ್ರಕರಣದಲ್ಲಿ ಹೇಳಿರುವ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸದೆ ಉಪೇಕ್ಷೆ ಮಾಡಿದ್ದಲ್ಲಿ, ಅದು ಖಡಾ ಖಂಡಿತ ನ್ಯಾಯಾಲಯದ ನಿಂದನೆಯಾಗುತ್ತದೆ. ಹಾಗಿದ್ದರೂ ಅದನ್ನು ಕೇಳಲು ನ್ಯಾಯಾಲಯದ ಕಟಕಟೆ ಹತ್ತುವವರು ಯಾರೂ ಇಲ್ಲ!
ನಮ್ಮ ಸಂವಿಧಾನದ ಆಶಯದಂತೆ ಭಾರತೀಯ ನಾಗರಿಕರಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ರಾಜ್ಯವು ಯಾವುದೇ ವಿಶೇಷ ಉಪಬಂಧವನ್ನು ಮಾಡಲು ಶಕ್ಯವಾಗಿದೆ(ವಿಧಿ -15.4).
ಅಂತಹ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ಅನ್ವೇಷಣೆ ಮಾಡಲು ಮತ್ತು ಅಂತಹ ತೊಂದರೆಗಳನ್ನು ನಿವಾರಿಸಲು ಹಾಗೂ ಅವರ ಸ್ಥಿತಿಯನ್ನು ಉತ್ತಮಪಡಿಸಲು ಒಕ್ಕೂಟವಾಗಲಿ ಅಥವಾ ಯಾವುದೇ ರಾಜ್ಯವಾಗಲಿ ಆಯೋಗವನ್ನು ಅದು ಅನುಸರಿಸಬೇಕಾದ ಕಾರ್ಯವಿಧಾನವನ್ನು ಅಥವಾ ಪರಿಶೀಲನಾಂಶಗಳನ್ನು ಸ್ಪಷ್ಟಪಡಿಸಿ ನೇಮಿಸುವುದು.
ಸಂವಿಧಾನ ಜಾರಿಗೆ ಬಂದ ಸರಿ ಸುಮಾರು ಮೂರು ದಶಕಗಳ ನಂತರ ಸಂವಿಧಾನದ ವಿಧಿ 340ರ ಅಡಿಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ರಾಷ್ಟ್ರಪತಿಯವರು ರಚಿಸುತ್ತಾರೆ. ಈ ಆಯೋಗದಲ್ಲಿ ಕರ್ನಾಟಕದವರಾದ ಎಲ್. ಆರ್. ನಾಯಕ್ ಒಬ್ಬ ಸದಸ್ಯರಾಗಿದ್ದರು. ಎರಡು ವರ್ಷಗಳ ಅವಧಿಯಲ್ಲೇ ಆಯೋಗ ವರದಿಯನ್ನು ನೀಡುತ್ತದೆ.
ಕಾರಣವು ಏನೇ ಇರಲಿ ವರದಿ ಜಾರಿಗೆ ಬರಲು ಮಾತ್ರ ಹತ್ತು ವರ್ಷಗಳೇ ಕಳೆದು ಹೋದದ್ದು ಆ ವರ್ಗದ ಅದೃಷ್ಟ ಹೀನತೆ.
ಯಾವುದೋ ಅಡ್ಡಿ ಆತಂಕದ ನಡುವೆಯೂ 1990ರಲ್ಲಿ ಕೇಂದ್ರ ಸರಕಾರ ಮಂಡಲ್ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ಮುಂದಾಗುತ್ತದೆ. ಉತ್ತರ ಭಾರತದಾದ್ಯಂತ ವಿರೋಧದ ದಳ್ಳುರಿ ಭುಗಿಲೇಳುತ್ತದೆ. ಅದೂ ಅಲ್ಲದೆ ಬಹಳಷ್ಟು ವಿದ್ಯಾರ್ಥಿಗಳು ಆತ್ಮಾಹುತಿಗೂ ಶರಣಾಗುತ್ತಾರೆ. ಈ ನಡುವೆ ಮೀಸಲಾತಿಯನ್ನು ವಿರೋಧಿಸಿ ಮನವಿಗಳ ಮಹಾಪೂರವೇ ಸರ್ವೋಚ್ಚ ನ್ಯಾಯಾಲಯದ ಮುಂದೆ ಹರಿದುಬಂತು.
ಮನವಿಗಳನ್ನು ವಿಚಾರಣೆಗೊಳಪಡಿಸಿದ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರದ ಮೀಸಲಾತಿ ಆದೇಶವನ್ನು ಎತ್ತಿ ಹಿಡಿಯುತ್ತದೆ ಮತ್ತು ಅತಿ ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾಲ್ಕು ತಿಂಗಳ ಅವಧಿಯೊಳಗೆ ಆಯೋಗಗಳನ್ನು ರಚಿಸಬೇಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ, ಅರ್ಹ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಲು ಹಾಗೂ ಅನರ್ಹತೆಗೆ ಒಳಪಡುವ ಜಾತಿಗಳನ್ನು ಪಟ್ಟಿಯಿಂದ ಹೊರಗಿಡುವ ಮಹತ್ತರವಾದ ಉದ್ದೇಶದಿಂದ ಆಯೋಗ ರಚಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.ಇದರ ಸಾರಾಂಶ: ಮಂಡಲ್ ವರದಿಯಲ್ಲಿ ನೀಡಿರುವ ಪಟ್ಟಿ ಶಾಶ್ವತವಲ್ಲ ಮತ್ತು ಅದನ್ನು ಪರಾಮರ್ಶಿಸುವ ಹಕ್ಕು ಸರಕಾರಕ್ಕಿದೆ. ಯಾವುದೇ ಸಮಯದಲ್ಲಾದರೂ ಪರಾಮರ್ಶಿಸಿ, ಯಾವುದೇ ಜಾತಿ ಕಪಟತನದಿಂದ ಅಥವಾ ನ್ಯಾಯ ಬಾಹಿರವಾಗಿ ಪಟ್ಟಿಯಲ್ಲಿ ಸೇರಿದ್ದಲ್ಲಿ ಅಂತಹದ್ದನ್ನು ಹೊರಗಿಡಬಹುದು ಅಥವಾ ಸಾಮಾಜಿಕವಾಗಿ ಹಿಂದುಳಿದು ತೊಂದರೆ ಅನುಭವಿಸುತ್ತಿದೆ ಎಂದು ಸರಕಾರ ಅಭಿಪ್ರಾಯಪಟ್ಟಲ್ಲಿ ಅಂತಹ ಯಾವುದೇ ಇತರ ಜಾತಿಯನ್ನೂ ಹಿಂದುಳಿದ ಪಟ್ಟಿಯಲ್ಲಿ ಸೇರ್ಪಡೆ ಮಾಡಬಹುದು. (ಪ್ಯಾರ-229-ಮಂಡಲ್ ಮೊಕದ್ದಮೆ)
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸಿ ಕೇಂದ್ರ ಮತ್ತು ರಾಜ್ಯಗಳು ಸೂಕ್ತ ಕಾಯ್ದೆಗಳನ್ನು ಜಾರಿಗೆ ತಂದವು. ಕೇಂದ್ರವು, ‘ಕೇಂದ್ರ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ,1993’ನ್ನು ಜಾರಿಗೆ ತಂದಿತು.ಅಂತೆಯೇ ಕರ್ನಾಟಕವೂ ಕೂಡ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ,1995’ ಅನ್ನು ಜಾರಿಗೊಳಿಸಿತು.
ಇದೇ ರೀತಿಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿರುವ ಮತ್ತು ಪಟ್ಟಿಗಳನ್ನು ಸಿದ್ಧಪಡಿಸಿರುವ ಬಹುತೇಕ ಎಲ್ಲಾ ಆಯೋಗಗಳು ಹಿಂದುಳಿದ ವರ್ಗಗಳಾಗಿರುವಂತಹ ಸ್ಥಿತಿಯನ್ನು ದಾಟಿರುವಂತಹ ವರ್ಗಗಳನ್ನು ಅಂತಹ ಪಟ್ಟಿಗಳಿಂದ ತೆಗೆದುಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಗಳಲ್ಲಿ ಸೇರಿಸುವ ದೃಷ್ಟಿಯಿಂದ ಆ ಆಯೋಗಗಳ ಪಟ್ಟಿಗಳನ್ನು ನಿಯತ ಕಾಲಿಕವಾಗಿ ಪರಿಷ್ಕರಿಸುತ್ತಿರಬೇಕು ಎಂಬುದಾಗಿಯೂ ಹೇಳಿವೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸಿ, ಕೇಂದ್ರ ಸರಕಾರ ರಚಿಸಿ ಉದ್ಘೋಷಿಸಿರುವ ಕಾಯ್ದೆ, 1993ರ ಕುರಿತು ಮೇಲೆ ಹೇಳಲಾಗಿದೆ. ಆ ಕಾಯ್ದೆಯ 11ನೇ ಪ್ರಕರಣವು ಹೀಗೆ ಹೇಳುತ್ತದೆ:
11(1) ‘‘ಕೇಂದ್ರ ಸರಕಾರವು ಕಾಲಕಾಲಕ್ಕೆ ಮತ್ತು ಈ ಕಾಯ್ದೆಯು ಜಾರಿಗೆ ಬಂದ ದಿನಾಂಕದಿಂದ 10 ವರ್ಷಗಳ ಅವಧಿಯ ಕೊನೆಯಲ್ಲಿ ಮತ್ತು ಆನಂತರ ಪ್ರತೀ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳಾಗಿರುವಂತಹ ಸ್ಥಿತಿಯನ್ನು ದಾಟಿರುವಂತಹ ವರ್ಗಗಳನ್ನು ಅಂತಹ ಪಟ್ಟಿಗಳಿಂದ ತೆಗೆದು ಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಗಳಲ್ಲಿ ಸೇರಿಸುವ ಉದ್ದೇಶದಿಂದ ಪಟ್ಟಿಗಳ ಮರುಪರಿಶೀಲನೆಯನ್ನು ಕೈಗೆತ್ತಿಕೊಳ್ಳತಕ್ಕದ್ದು.’’
(2) ‘‘ಕೇಂದ್ರ ಸರಕಾರವು (1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಲಾದ ಯಾವುದೇ ಮರು ಪರಿಶೀಲನೆಯನ್ನು ಕೈಗೆತ್ತಿಕೊಳ್ಳುವಾಗ ಆಯೋಗದೊಂದಿಗೆ ಸಮಾಲೋಚಿಸತಕ್ಕದ್ದು’’.....
ಅಂತೆಯೇ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆ, 1995ರ ಮೇರೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದೆ. ಈ ಕಾಯ್ದೆಯ 11ನೆಯ ಪ್ರಕರಣವು ಕೇಂದ್ರ ಕಾಯ್ದೆಯ ಮೇಲೆ ಉಲ್ಲೇಖಿಸಲಾದ ಉಪಬಂಧಕ್ಕೆ ಅನುಗುಣವಾಗಿದೆ. ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಿರುವ ಎಲ್ಲಾ ರಾಜ್ಯ ಕಾಯ್ದೆಗಳಲ್ಲಿಯೂ ಅದೇ ರೀತಿಯ ಉಪಬಂಧಗಳು ಇವೆ ಎಂಬುದನ್ನು ನಾವು ಮನಗಾಣಬಹುದು.
ಪರಿಷ್ಕರಿಸುವ ವಿಧಾನವನ್ನು ಪ್ರೊ.ರವಿವರ್ಮ ಕುಮಾರ್ ಆಯೋಗ ಸ್ಪಷ್ಟಪಡಿಸಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿರುವ ಪ್ರತಿಯೊಂದು ಜಾತಿಯ ಬಗ್ಗೆ ಸಮಗ್ರ ಅಂಕಿ ಅಂಶಗಳನ್ನು ಪಡೆದುಕೊಳ್ಳಬೇಕು. ಅಂತಹ ಅಂಕಿ ಅಂಶಗಳು ಪ್ರತಿಯೊಂದು ಜಾತಿಯ ಜನಸಂಖ್ಯೆ, ಪ್ರತಿಯೊಂದು ಜಾತಿಯ ಶೈಕ್ಷಣಿಕ ಸಾಧನೆ ಮತ್ತು ರಾಜ್ಯದ ಸೇವೆಯಲ್ಲಿ ಅಂತಹ ಜಾತಿಗಳ ಸದಸ್ಯರು ಗಳಿಸಿರುವ ಪ್ರಾತಿನಿಧ್ಯ ಇವುಗಳನ್ನು ಪ್ರತಿಬಿಂಬಿಸುವಂತಿರಬೇಕು. ಈ ಅಂಕಿ ಅಂಶಗಳನ್ನು ದಶವಾರ್ಷಿಕ ಜನಗಣತಿಯ ಮೂಲಕ ಮಾತ್ರವೇ ರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಳ್ಳಬಹುದು. ಅಂತಹ ಅಂಕಿ ಅಂಶಗಳಿಲ್ಲದೆ ಹಿಂದುಳಿದ ವರ್ಗಗಳಾಗಿರುವ ಹಂತವನ್ನು ದಾಟಿರುವಂತಹ ಯಾವುದೇ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕುವುದು ಸಾಧ್ಯವಿಲ್ಲ. ಆದ್ದರಿಂದ ಈಗ ಪಟ್ಟಿಯ ನಿಯತಕಾಲಿಕ ಪರಿಷ್ಕರಣೆಯನ್ನು ನಡೆಸುವ ಶಾಸನಬದ್ಧ ಪ್ರಕಾರ್ಯವನ್ನು ನಿರ್ವಹಿಸುವುದಕ್ಕೆ ಅಂತಹ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಪೂರ್ವ ಷರತ್ತಾಗಿದೆ.
ಯಾವುದೇ ಜಾತಿಯ ಸಮಗ್ರ ಅಂಕಿ ಅಂಶಗಳು ಇಲ್ಲದೆ, ಪರಿಷ್ಕರಣೆ ಅಸಾಧ್ಯ ಎಂದು ಆಯೋಗ ಹೇಳುತ್ತದೆ. ಆದರೆ, ಕೇಂದ್ರ ಸರಕಾರ ಸ್ವಾತಂತ್ರ್ಯ ಬಂದಂದಿನಿಂದಲೂ ತನ್ನ ದಶವಾರ್ಷಿಕ ಜನಗಣತಿಯಲ್ಲಿ ಜಾತಿಯನ್ನು ಪರಿಗಣಿಸುತ್ತಿಲ್ಲ. ಅಂದಮೇಲೆ ಸದ್ಯ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಸಂಭವ ಇಲ್ಲವೇ ಇಲ್ಲ. ಒಂದು ಕಡೆ ಕಾಯ್ದೆಯಲ್ಲಿ ಕಡ್ಡಾಯವಾಗಿ ಸರಕಾರ ಪರಿಷ್ಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದಿದ್ದರೂ ಅಂಕಿ ಅಂಶಗಳ ಅಲಭ್ಯತೆಯಿಂದ ಅದು ಅಸಾಧ್ಯ ಎಂಬುದು ದೃಢಪಟ್ಟಿದೆ. ಭಾಜಪದ ನೇರ ನಿಯಂತ್ರಣದಲ್ಲಿರುವ ಕೇಂದ್ರ ಸರಕಾರ ಈ ಕುರಿತು ತಲೆ ಕೆಡಿಸಿಕೊಳ್ಳುವುದೂ ಅನುಮಾನ. ಅದೂ ಅಲ್ಲದೆ ಸಂವಿಧಾನದ 102ನೇ ತಿದ್ದುಪಡಿ1993ರ ಕಾಯ್ದೆಯನ್ನೇ ಕಸಿದುಕೊಂಡಿದೆ. ಹೀಗಿರುವಲ್ಲಿ ಕೇಂದ್ರ ಸರಕಾರ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಮಾತೆಲ್ಲಿ ಬಂತು?
ಸಂವಿಧಾನದ 102ನೇ ತಿದ್ದುಪಡಿಯಿಂದಾಗಿ ರಾಜ್ಯಗಳ ಹಿಂದುಳಿದ ವರ್ಗಗಳ ಕಾಯ್ದೆಗಳಿಗೆ ಯಾವುದೇ ಸಂಚಕಾರ ಉಂಟಾಗಿಲ್ಲವಾದ್ದರಿಂದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಕಾಯ್ದೆ ಪ್ರಕಾರ ಪರಿಷ್ಕರಣೆಗೆ ಅವುಗಳಿಗೆ ಅವಕಾಶವಿದೆ. ಚಾಲ್ತಿಯಲ್ಲಿರುವ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1995’ರ 11ನೇ ಪ್ರಕರಣ ಇಂತಿದೆ:
11(1) ‘‘ರಾಜ್ಯ ಸರಕಾರವು ಯಾವುದೇ ಸಮಯದಲ್ಲಿ ಮತ್ತು ಈ ಕಾಯ್ದೆಯು ಜಾರಿಗೆ ಬಂದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೂ ಮುಕ್ತಾಯವಾದಾಗ ಮತ್ತು ಅದರ ನಂತರ ಬರುವ 10 ವರ್ಷಗಳ ಅವಧಿ ಮುಕ್ತಾಯವಾಗುವಾಗ ಹಿಂದುಳಿದ ವರ್ಗಗಳಾಗಿರುವುದು ನಿಂತು ಹೋಗಿರುವ ವರ್ಗಗಳನ್ನು ತೆಗೆದುಹಾಕುವ ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಅಂತಹ ಪಟ್ಟಿಯಲ್ಲಿ ಸೇರಿಸುವುದನ್ನು ಗಮನದಲ್ಲಿರಿಸಿಕೊಂಡು ಪಟ್ಟಿಗಳನ್ನು ಪರಿಶೀಲಿಸ ತಕ್ಕದ್ದು. (2) ರಾಜ್ಯ ಸರಕಾರವು (1)ನೇ ಉಪಕರಣದಲ್ಲಿ ಉಲ್ಲೇಖಿಸಿದ ಪರಿಶೀಲನೆಯನ್ನು ಕೈಗೊಳ್ಳುವಾಗ ಆಯೋಗದ ಸಲಹೆಯನ್ನು ಪಡೆಯ ತಕ್ಕದ್ದು.’’
ಇದು ಶಾಸನಾತ್ಮಕವಾಗಿ ಸರಕಾರಕ್ಕೆ ವಿಧಿಸಿರುವ ಕಟ್ಟಪ್ಪಣೆ. ಪತೀ 10 ವರ್ಷಗಳಿಗೊಮ್ಮೆ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮರುಪರಿಶೀಲನೆಗೆ ಒಳಪಡಿಸಲೇಬೇಕು. ಅಂತಹ ಸಮಯದಲ್ಲಿ ಆಯೋಗದ ಸಲಹೆಯನ್ನೂ ಪಡೆಯಲೇಬೇಕು ಎಂದಿದೆ. ನಿಜಸ್ಥಿತಿ ಇದಾದರೂ ಸರಕಾರ ಯಾವುದೇ ಇರಲಿ ಈ ಕುರಿತು ಉಡಾಫೆ ಹೊಡೆದು ಕೊಂಡೇ ಅವು ಬಂದಿವೆ. ಸದ್ಯ ಕರ್ನಾಟಕದಲ್ಲಿ ಶೇ.96ರಿಂದ ಶೇ.97ರಷ್ಟು ಜಾತಿ-ಸಮುದಾಯಗಳು ಸರಕಾರದ ಅಸಡ್ಡೆಯೋ ಅಥವಾ ‘ಉದಾರನೀತಿಯೋ’ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿ ಹೋಗಿವೆ. ಪ್ರಸಕ್ತ ಪಟ್ಟಿಯಲ್ಲಿ ಪ್ರವರ್ಗ-3 ಎ ಮತ್ತು ಪ್ರವರ್ಗ-3ಬಿ ಯಲ್ಲಿ ಸ್ಥಾನ ಪಡೆದುಕೊಂಡಿರುವ ಒಟ್ಟು ಒಂಭತ್ತು ಜಾತಿಗಳು ಮತ್ತು ಅವುಗಳ ಉಪಜಾತಿಗಳು, ಆಯೋಗದ ಶಿಫಾರಸಿಲ್ಲದೆ ಸರಕಾರ ಏಕಮುಖವಾಗಿ ಮತ ರಾಜಕೀಯ ಕಾರಣದಿಂದ 1994ರಲ್ಲಿ ಪಟ್ಟಿಯಲ್ಲಿ ಸೇರಿಸಿ ಬಿಟ್ಟಿತು. ಸರಕಾರದ ಈ ‘ಕೃತ್ಯ’ವನ್ನು ಯಾವ ನಾಗರಿಕನೂ ಪ್ರಶ್ನಿಸುವ ಗೊಡವೆಗೆ ಹೋಗಲೇ ಇಲ್ಲ. ಇದು ಬಡಪಾಯಿ ಹಿಂದುಳಿದ ವರ್ಗಗಳಿಗೆ ಆಗಿ ಹೋಗಿರುವ ದುರಂತ ಕರಾಳ ಭೀಕರ ಚಿತ್ರ.
ಪ್ರಸಕ್ತ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ನ್ಯಾಯಮೂರ್ತಿ ಒ.ಚಿನ್ನಪ್ಪ ರೆಡ್ಡಿ ಅವರ ವರದಿ ಆಧರಿಸಿ ಸಿದ್ಧಪಡಿಸಿರುವಂಥದ್ದು. ನ್ಯಾ. ಚಿನ್ನಪ್ಪ ರೆಡ್ಡಿಯವರು ನೀಡಿದ ಪಟ್ಟಿಯಲ್ಲಿ, ಮೇಲೆ ಹೇಳಿರುವ ಪ್ರವರ್ಗ-3 ಎ ಮತ್ತು ಬಿ ಯಲ್ಲಿರುವ ಜಾತಿ -ಉಪಜಾತಿಗಳು ಇರಲಿಲ್ಲ ಎಂಬುದೂ ಸತ್ಯ.
ಹಿಂದುಳಿದ ವರ್ಗಗಳ ಸದ್ಯ ಚಾಲ್ತಿಯಲ್ಲಿರುವ ಪಟ್ಟಿಯೂ ಎಪ್ರಿಲ್, 1994ರಿಂದ ಜಾರಿಯಲ್ಲಿ ಬಂದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ, 1995 ಪ್ರಕರಣ 11ರಂತೆ, ಸದ್ಯ ಇರುವ ಪಟ್ಟಿಯನ್ನು ಈ ತನಕ ಕನಿಷ್ಠ ಮೂರು ಬಾರಿಯಾದರೂ ಮರುಪರಿಶೀಲನೆಗೆ ಕಡ್ಡಾಯವಾಗಿ ಒಳಪಡಿಸಬೇಕಾಗಿತ್ತು. ಬಹುಶಃ ಸರಕಾರ ಪಟ್ಟಿಯಲ್ಲಿ ಅನರ್ಹತೆಗೆ ಒಳಪಡುವ ಜಾತಿಗಳನ್ನು ಕೈಬಿಟ್ಟಲ್ಲಿ ರಾಜಕೀಯ ವಿಪ್ಲವಕ್ಕೆ ಸಿಲುಕ ಬಹುದೆಂಬ ಅಪಾಯದ ಮುನ್ಸೂಚನೆಯೇ ಕಾರಣ. ಇಂತಹ ಮನೋಭಾವ ಹೊಂದಿರುವ ಕರುಣೆಯೇ ಇಲ್ಲದ ಸರಕಾರಗಳು ಸಾಮಾಜಿಕ ನ್ಯಾಯದ ತತ್ವವನ್ನು ಎತ್ತಿ ಹಿಡಿದು ಸರ್ವರಿಗೂ ಸಮಪಾಲು -ಸಮ ಬಾಳನ್ನು ನೀಡುತ್ತವೆ ಎಂಬ ಭ್ರಮೆಯಲ್ಲಿರುವ ನಾಗರಿಕನನ್ನು ಕೇಳುವವರಾರು? ಅದರಿಂದ ಭ್ರಮನಿರಸನವೇ ಹೊರತು ಮತ್ತೇನಿಲ್ಲ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅನುಷ್ಠಾನಕ್ಕೆ ಬಂದಿರುವಂತಹ ಈ ಕಾಯ್ದೆಯ ಪ್ರಕರಣದಲ್ಲಿ ಹೇಳಿರುವ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸದೆ ಉಪೇಕ್ಷೆ ಮಾಡಿದ್ದಲ್ಲಿ, ಅದು ಖಡಾ ಖಂಡಿತ ನ್ಯಾಯಾಲಯದ ನಿಂದನೆಯಾಗುತ್ತದೆ. ಹಾಗಿದ್ದರೂ ಅದನ್ನು ಕೇಳಲು ನ್ಯಾಯಾಲಯದ ಕಟಕಟೆ ಹತ್ತುವವರು ಯಾರೂ ಇಲ್ಲ!
ಪ್ರೊ.ರವಿವರ್ಮ ಕುಮಾರ್ ಆಯೋಗ ಹೇಳಿರುವಂತೆ, ಹಿಂದುಳಿದ ವರ್ಗಗಳ ಪಟ್ಟಿ ಪರಿಶೀಲನೆ ಮಾಡಲು ಅಗತ್ಯ ಅಂಕಿ ಅಂಶಗಳ ಅವಶ್ಯಕತೆ ಇದೆ. ಎರಡು ರೀತಿಯ ಅಂಕಿ ಅಂಶಗಳು ಬೇಕು. ಸಮೀಕ್ಷೆ ಮೂಲಕ ಎಲ್ಲಾ ಜಾತಿಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಆ ಜಾತಿಗಳು ಯಾವ ಸ್ಥಿತಿಯಲ್ಲಿ ಇವೆ ಎಂಬುದು ಮುಖ್ಯ ಮತ್ತು ದ್ವಿತೀಯ ಮೂಲದ ಮಾಹಿತಿ ಅಂದರೆ ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳಲ್ಲಿ ಯಾವ ಜಾತಿಯವರು ಎಷ್ಟು ಸಂಖ್ಯೆಯ ಉದ್ಯೋಗಗಳನ್ನು ಹೊಂದಿರುವರು ಎಂಬ ಅಂಕಿ ಅಂಶವೂ ಅವಶ್ಯಕತೆ ಇದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಎಚ್. ಕಾಂತರಾಜ್ ಆಯೋಗ ಮಾಡಿ ಎಲ್ಲಾ ಜಾತಿಯ ಅಂಕಿ ಅಂಶಗಳನ್ನು ಸಂಗ್ರಹಿಸಿದೆ ಮತ್ತು ದ್ವಿತೀಯ ಮೂಲದ ಮಾಹಿತಿಗಳು ಕೂಡ ಅಷ್ಟೇ ಮುಖ್ಯ. ಅವು ಆಯೋಗದಲ್ಲಿವೆ. ಇವುಗಳ ಪ್ರಯೋಜನ ಪಡೆದು ಮರುಪರಿಶೀಲನಾ ಕಾರ್ಯವನ್ನು ಆಯೋಗ ನಡೆಸಬಹುದು. ಈ ಪ್ರಕಾರ್ಯಕ್ಕೆ ಸರಕಾರದ ನಿರ್ದೇಶನ ಬೇಕು. ಆದರೆ ಸರಕಾರ ಮಾತ್ರ ಮೂರು ದಶಕಗಳಿಂದಲೂ ಈ ಶಾಸನಾತ್ಮಕ ಕೆಲಸ ನಿರ್ವಹಿಸುವಲ್ಲಿ ಉಡಾಫೆ ಮನಸ್ಥಿತಿಯನ್ನು ಹೊಂದಿ ಅದನ್ನು ಮುಂದೂಡುತ್ತಾ ಬಂದಿರುವುದು ಸರಕಾರದ ಬಲಹೀನತೆಯನ್ನೋ ಅಥವಾ ಇಬ್ಬಂದಿತನವನ್ನೋ ಎತ್ತಿ ತೋರಿಸುತ್ತದೆ. ಅದೂ ಅಲ್ಲದೆ, ಪ್ರಭುತ್ವದ ದುರುದ್ದೇಶಪೂರಿತ ಈ ಕೃತ್ಯವೂ ಕ್ಷಮಾರ್ಹವೂ ಅಲ್ಲ ಹಾಗೂ ಪ್ರಜಾಸತ್ತಾತ್ಮಕವೂ ಅಲ್ಲ.