ನರಹಂತಕ ‘ವೀರಪ್ಪನ್’ ತವರೂರು ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ದಿ.ಶ್ರೀನಿವಾಸ್ ಹೆಸರಿನಲ್ಲಿ ಸಫಾರಿ!

Update: 2023-11-20 06:52 GMT

ಚಾಮರಾಜನಗರ: ಮೂರು ದಶಕಗಳ ಕಾಲ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಸಿಂಹಸ್ವಪ್ನವಾಗಿದ್ದ ನರಹಂತಕ ವೀರಪ್ಪನ್ನ ಹುಟ್ಟೂರಿನಲ್ಲಿ, ಕೀರ್ತಿ ಚಕ್ರ ಪುರಸ್ಕೃತ ಅರಣ್ಯಾಧಿಕಾರಿ ದಿ.ಪಿ.ಶ್ರೀನಿವಾಸ್ ಹೆಸರಿನಲ್ಲಿ ಅರಣ್ಯದ ರಮಣೀಯ ಸೌಂದರ್ಯ ಸವಿಯಲು ಸಫಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಕಾಡುಗಳ್ಳ ವೀರಪ್ಪನ್ ಹುಟ್ಟೂರು ಎಂಬ ಕುಖ್ಯಾತಿಯಿಂದ ಹೊರಬಂದಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗೋಪಿನಾಥಂನಲ್ಲಿ ಈಗ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ನರಹಂತಕ ವೀಪರಪ್ಪನ್ನಿಂದ ಹತ್ಯೆಗೀಡಾಗಿದ್ದ ‘ಕೀರ್ತಿಚಕ್ರ’ ದಿ.ಪಿ.ಶ್ರೀನಿವಾಸನ್ ಹೆಸರಿನಲ್ಲಿ ಸ್ಥಾಪನೆಯಾಗಿರುವ ಕೇಂದ್ರದಲ್ಲಿ ಪ್ರಾಯೋಗಿಕ ಸಫಾರಿ ಆರಂಭಗೊಂಡಿದೆ.

ಚಾಮರಾಜನಗರ ಹನೂರು ತಾಲೂಕಿನ ಗೋಪಿನಾಥಂ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದೆ. ಗ್ರಾಮದಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರೇ ಕೀರ್ತಿಚಕ್ರ ದಿ.ಪಿ.ಶ್ರೀನಿವಾಸನ್ ಸಫಾರಿ ಕೇಂದ್ರ ಸ್ಥಾಪನೆಯಾಗಿದೆ. ಇಲ್ಲಿ 2023 ಆಗಸ್ಟ್ ನಿಂದ ಪ್ರಾಯೋಗಿಕವಾಗಿ ಸಫಾರಿಯನ್ನು ಆರಂಭಿಸಲಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಡಿಸಿದ ಕೊನೆಯ ಬಜೆಟ್ನಲ್ಲಿ ಗೋಪಿನಾಥಂನಲ್ಲಿ ವನ್ಯಜೀವಿ ಸಫಾರಿಯನ್ನೊಳಗೊಂಡ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ೫ ಕೋಟಿ ರೂ. ಘೋಷಣೆ ಮಾಡಿದ್ದರು. ಈ ಅನುದಾನ ಬಳಕೆ ಮಾಡಿಕೊಂಡು ಸಫಾರಿ ಕೇಂದ್ರ ಸ್ಥಾಪನೆಯಾ

ಗಿದ್ದು, ಅರಣ್ಯ ಇಲಾಖೆ ಶೀಘ್ರದಲ್ಲೇ ಅಧಿಕೃತವಾಗಿ ಸಫಾರಿ ಕೇಂದ್ರವನ್ನು ಉದ್ಘಾಟನೆ ಮಾಡಲಿದೆ. ಅಲ್ಲಿಯವರೆಗೂ ಪ್ರವಾಸಿಗರು ಪ್ರಾಯೋಗಿಕ ಸಫಾರಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿಆರ್ಟಿ ಪ್ರಮುಖವಾದವು. ಬಂಡೀಪುರ ಕಾಡಿನಲ್ಲಿ ಸಫಾರಿಗೆ ಹೋಗಲು ಕೇರಳ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಪ್ರವಾಸಿಗರು ಬರುತ್ತಾರೆ. ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕೆ.ಗುಡಿಯಲ್ಲಿ ವನ್ಯಜೀವಿ ಪ್ರೇಮಿಗಳಿಗೆ ಸಫಾರಿ ಸೌಲಭ್ಯವಿದೆ. ಇಲ್ಲಿಗೂ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಏನಿಲ್ಲ. ಜಿಲ್ಲೆಯಲ್ಲಿ ಒಟ್ಟು ಎರಡು ಸಫಾರಿ ಕೇಂದ್ರಗಳಿರುವ ಹೆಗ್ಗಳಿಕೆಯ ನಡುವೆ, ಇದೀಗ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯ ಗೋಪಿನಾಥಂನಲ್ಲಿ ಅರಣ್ಯ ಇಲಾಖೆ ಪ್ರಾಯೋಗಿಕವಾಗಿ ಸಫಾರಿ ಆರಂಭಿಸಿದೆ.

ಕಾಡು ಪ್ರಾಣಿಗಳ ದರ್ಶನ: ರಜೆ ದಿನಗಳಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಾಯೋಗಿಕ ಸಫಾರಿಯನ್ನು ಆರಂಬಿಸಿದೆ. ಈಗಾಗಲೇ ಪ್ರವಾಸಿಗರು ಸಫಾರಿಗೆ ಬರುತ್ತಿದ್ದಾರೆ. ಗೋಪಿನಾಥಂನಲ್ಲಿ ಜಂಗಲ್ ಲಾಡ್ಜಸ್, ರೆಸಾರ್ಟ್ನ ಮಿಸ್ಟ್ರಿ ಟ್ರೇಲ್ ಕ್ಯಾಂಪ್ ಇದ್ದು, ಈ ಕ್ಯಾಂಪ್ನವರು ಆಗಸ್ಟ್ನಿಂದ ಸಫಾರಿ ಸೌಲಭ್ಯ ನೀಡುತ್ತಿದ್ದು, ಇದೀಗ ಅರಣ್ಯ ಇಲಾಖೆಯೂ ಸಫಾರಿ ಆರಂಭಿಸಿದೆ. ಸಫಾರಿಗೆ ಒಬ್ಬರಿಗೆ ೫೦೦ ರೂ. ಶುಲ್ಕ ನಿಗದಿ ಮಾಡಲಾಗಿದೆ. ೬ ವರ್ಷದೊಳಗಿನ ಮಕ್ಕಳಿಗೆ ಉಚಿತವಿದೆ. ಬೆಳಗ್ಗೆ ೬ ರಿಂದ ೯:೩೦ ಮತ್ತು ಸಂಜೆ 4ರಿಂದ 6:30 ರವರೆಗೆ ಸಫಾರಿ ಸೌಲಭ್ಯವಿದೆ. ಅರಣ್ಯ ಇಲಾಖೆ ತಿಳಿಸಿರುವ ಪ್ರಕಾರ ಸಫಾರಿಗೆ ಪ್ರವಾಸಿಗರು ಬರುತ್ತಿದ್ದು, ಇವರಿಗೆ ಚಿರತೆ, ಆನೆ, ಕರಡಿ ಮತ್ತು ಇತರ ಪ್ರಾಣಿಗಳ ದರ್ಶನವಾಗಿದೆ.

ಅಚ್ಚರಿಯ ಕಾಡು

ಗೋಪಿನಾಥಂ ಸಫಾರಿ ಕೇವಲ ವನ್ಯಜೀವಿಗಳ ದರ್ಶನಕ್ಕಷ್ಟೇ ಮಹತ್ವವನ್ನು ಪಡೆದುಕೊಂಡಿಲ್ಲ. ಕಾಡುಗಳ್ಳ, ನರಹಂತಕ ವೀರಪ್ಪನ್ನ ಅಡಗುತಾಣವಾಗಿದ್ದ ಕಾಡಿದು. ವೀರಪ್ಪನ್ ಬದುಕಿದ್ದಾಗ ಜನರು ಈ ಕಾಡಿನಲ್ಲಿ ಸಂಚರಿಸಲು ಸಾಧ್ಯವಿರಲಿಲ್ಲ. ಎಸ್ಟಿಎಫ್ ಪಡೆ ವೀರಪ್ಪನ್ನನ್ನು ಹಿಡಿಯಲು ಈ ಅರಣ್ಯದ ಸುತ್ತಮುತ್ತ ನಿತ್ಯ ಹುಡುಕಾಟ ನಡೆಸುತ್ತಿತ್ತು. ವೀರಪ್ಪನ್ ಮೃತಪಟ್ಟ ಎಷ್ಟೋ ವರ್ಷಗಳ ಬಳಿಕ ಗೋಪಿನಾಥಂನಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೊಂಡು, ಪ್ರಾಯೋಗಿಕ ಸಫಾರಿ ಆರಂಭವಾಗಿದೆ. ಈ ಕಾರಣ್ಕಕಾಗಿ ವನ್ಯಜೀವಿಗಳ ದರ್ಶನ ಮಾತ್ರವಲ್ಲದೆ, ವೀರಪ್ಪನ್ ಕಾರಣಕ್ಕೂ ಕಾಡಿನ ದರ್ಶನ ಕೌತುಕ ಮತ್ತು ಅಚ್ಚರಿ ಎನಿಸಲಿದೆ.

ಸ್ಥಳೀಯರಿಗೆ ಉದ್ಯೋಗದ ಆಶಾಭಾವ

ಗೋಪಿನಾಥಂನಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ, ಸಫಾರಿ ಆರಂಭದಿಂದ ಸ್ಥಳೀಯರಿಗೆ ಉದ್ಯೋಗ ಸಿಗುವ ಆಶಾಭಾವ ಮೂಡಿದೆ. ಸಮೀಪದಲ್ಲೇ ಇರುವ ಹೊಗೇನಕಲ್ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅಂತೆಯೇ, ಅವರು ಗೋಪಿನಾಥಂನಲ್ಲಿ ಸಫಾರಿಗೂ ಬಂದು ಅದ್ಭುತವಾಗಿರುವ ಅರಣ್ಯ ಪ್ರವೇಶವನ್ನೂ ನೋಡಬಹುದು. ಇದರಿಂದ ಸ್ಥಳೀಯರ ವ್ಯಾಪಾರ-ವಹಿವಾಟು ಚುರುಕಾಗುವ ಸಾಧ್ಯತೆಗಳಿವೆ.

ದೀಪಾವಳಿ ಹಬ್ಬದ ರಜೆ ಇರುವ ಕಾರಣ ಪ್ರವಾಸಿಗರನ್ನು ಸೆಳೆಯಬಹುದೆಂದು ಪ್ರಾಯೋಗಿಕವಾಗಿ ಸಫಾರಿಯನ್ನು ಆರಂಭಿಸಿದ್ದೇವೆ. ರಜೆ ದಿನಗಳಲ್ಲಿ ಅರಿವು ಮೂಡಿಸಿದರೆ ಪರಿಣಾಮಕಾರಿಯಾಗಿರಲಿದೆ. ಮೇಲಧಿಕಾರಿಗಳ ತೀರ್ಮಾನದ ಬಳಿಕ ಅಧಿಕೃತವಾಗಿ ಸಫಾರಿ ಕೇಂದ್ರ ಉದ್ಘಾಟನೆಯಾಗಲಿದ್ದು, ಪ್ರಾಯೋಗಿಕ ಸಫಾರಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಸಂಪತ್, ಗೋಪಿನಾಥಂ ಕಾವೇರಿ ವನ್ಯಜೀವಿ ಧಾಮದ ವಲಯಾರಣ್ಯಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ನಾ.ಅಶ್ವಥ್ ಕುಮಾರ್

contributor

Similar News