ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ

ಬಿಜೆಪಿ ಪಾಲಿಗೇ ವಿಪಕ್ಷ ನಾಯಕನಾದ ಯತ್ನಾಳ್ ► ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ► ಬಿಜೆಪಿ ಪಾಲಿಗೇ ವಿಪಕ್ಷ ನಾಯಕನಾದ ಯತ್ನಾಳ್

Update: 2023-12-13 09:56 GMT
Editor : Thouheed | Byline : ಆರ್. ಜೀವಿ

ಬಿಜೆಪಿ ಪಾಲಿಗೆ ಯತ್ನಾಳ್ ತಲೆನೋವು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯತ್ನಾಳ್ ಆಡಳಿತಾರೂಢ ಕಾಂಗ್ರೆಸ್ ಗಿಂತ ಜಾಸ್ತಿ ಬಿಜೆಪಿ ವಿರುದ್ಧವೇ ಹರಿಹಾಯುತ್ತಾ ಪಕ್ಷದ ಪಾಲಿಗೇ ವಿಪಕ್ಷ ನಾಯಕ ಆಗಿಬಿಟ್ಟಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕರ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಮತ್ತೆ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ವಿಜಯೇಂದ್ರ, ಆರ್. ಅಶೋಕ್ ನಾಯಕತ್ವವನ್ನು ತಾನೆಂದಿಗೂ ಒಪ್ಪಿಕೊಳ್ಳಲ್ಲ ಎಂಬ ಸಂದೇಶವನ್ನು ಮತ್ತೆ ಮತ್ತೆ ಹೇಳಿಕೆಗಳ ಮೂಲಕ ಕೊಡುತ್ತಿರೋದು ರಾಜ್ಯ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದಾಗಿರುವ ಆಘಾತದಿಂದ ಮೆಲ್ಲನೆ ಸುಧಾರಿಸುತ್ತಿದ್ದಂತೆಯೇ ರಾಜ್ಯ ಬಿಜೆಪಿ ಹಿರಿಯ ನಾಯಕರ ಹೇಳಿಕೆಗಳು ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ ಎನ್ನುವುದನ್ನು ಪದೇ ಪದೇ ಬಹಿರಂಗಪಡಿಸುತ್ತಿತ್ತು. ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಏನೆಲ್ಲಾ ಕಸರತ್ತು ನಡೆಸಿದರೂ ಆಕಾಂಕ್ಷಿಗಳಾಗಿದ್ದ ಯತ್ನಾಳ್, ಸೋಮಣ್ಣ ಸೇರಿದಂತೆ ಹಲವರನ್ನು ಬಿಜೆಪಿ ವರಿಷ್ಠರು ದೂರವಿಟ್ಟು, ಮತ್ತೆ ಯಡಿಯೂರಪ್ಪ ಗೆ ಮಣೆ ಹಾಕಿದ್ದರು. ಯಡಿಯೂರಪ್ಪ ಬೇಡಿಕೆ ಇಟ್ಟಂತೆಯೇ ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಆಪ್ತ ಅಶೋಕ್ ಗೆ ವಿಪಕ್ಷ ನಾಯಕನ ಸ್ಥಾನವನ್ನು ಕೊಡಲಾಗಿತ್ತು.

ಪಂಚರಾಜ್ಯ ಚುನಾವಣೆಯ ಫಲಿತಾಂಶಗಳ ಬಳಿಕ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಕರ್ನಾಟಕ ಬಿಜೆಪಿ ನಾಯಕರು ಮೈಕೊಡವಿ ಕೊಂಡು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಲು ತಯಾರಾಗಿ ಬೆಳಗಾವಿ ಅಧಿವೇಶನಕ್ಕೆ ಬಂದಿದ್ದರು. , ಆದರೆ ಅದೇ ಸಂದರ್ಭ ಯತ್ನಾಳ್ ಸದನದೊಳಗೇ ನೀಡಿದ ಶಾಕ್ ಬಿಜೆಪಿ ನಾಯಕರಿಗೆ ತೀವ್ರ ಕಿರಿಕಿರಿ ತಂದಿದೆ. ಈ ಹಿಂದಿನ ಅಧಿವೇಶನದಲ್ಲಿ ವಿಪಕ್ಷ ನಾಯಕನಿಲ್ಲದೆ ಬಂದಾಗಲೂ ಬಹುಶಃ ಬಿಜೆಪಿ ಇಂತಹ ಮುಜುಗರ ಎದುರಿಸಿರಲಿಕ್ಕಿಲ್ಲ.

ನಿನ್ನೆ ಸೋಮವಾರ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್ ಅಶೋಕ್ ಅವರಿಗೆ ಅಭಿನಂದಿಸಲು ಸಭಾಧ್ಯಕ್ಷ ಯುಟಿ ಖಾದರ್ ಅವರು ಯತ್ನಾಳ್ ಹೆಸರು ಕರೆದಾಗ ಅವರು ಎದ್ದು ನಿಂತು ಮಾತಾಡುವ ಗೋಜಿಗೇ ಹೋಗಲಿಲ್ಲ. ಯತ್ನಾಳ್ ವರ್ತನೆಯಿಂದ ಕೇವಲ ಆರ್. ಅಶೋಕ್ ಮಾತ್ರವಲ್ಲ, ಬಿಜೆಪಿ ಸದಸ್ಯರಿಗೆಲ್ಲ ತೀವ್ರ ಮುಜುಗುರ ಉಂಟಾಗಿ ಮುಖ ಮುಖ ನೋಡಿಕೊಳ್ಳುವಂತಾಯಿತು.

ಎಸ್ ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದ ಬಳಿಕ ಸ್ಪೀಕರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಕೈಕ ಸದಸ್ಯ ಗಾಲಿ ಜನಾರ್ಧನರೆಡ್ಡಿ ಅವರ ಹೆಸರು ಕರೆದರು. ಅವರ ಬಳಿಕ ಜೆಡಿಎಸ್ ಪಕ್ಷದ ಬಾಲಕೃಷ್ಣ ಮಾತಾಡಿದರು. ಅವರಾದ ಮೇಲೆ ಯತ್ನಾಳ್ ಅವರೇ ಅಂತ ಸಭಾಧ್ಯಕ್ಷರು ಅವರ ಕಡೆ ನೋಡಿದಾಗ ಶಾಸಕ ಪ್ರತಿಕ್ರಿಯಿಸದೆ ಸುಮ್ಮನೆ ಕೂತು ಬಿಟ್ಟಿದ್ದಾರೆ.

ಅಲ್ಲದೆ, ಅದಕ್ಕೂ ಮೊದಲು ಸದನದೊಳಗೆ ಪ್ರವೇಶಿಸುವ ಹೊತ್ತಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯತ್ನಾಳ್,

ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕ ಭಾಗದ ನಾಯಕರ ಗುಲಾಮರಲ್ಲ. ಅಲ್ಲದೆ, ಉತ್ತರ ಕರ್ನಾಟಕದವರಿಗೆ ನಾಯಕತ್ವ ನೀಡಿ ನ್ಯಾಯ ಒದಗಿಸುವವರೆಗೂ ಪಕ್ಷದ ಶಾಸಕಾಂಗ ಸಭೆಗೂ ನಾನು ಹೋಗುವುದಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

"ಲೋಕಸಭೆ ಚುನಾವಣೆ ಬಳಿಕ ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ. ವಂಶ ರಾಜಕಾರಣವನ್ನು ಕೊನೆಗಣಿಸುವುದೇ ನಮ್ಮ ಗುರಿ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲೂ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ.

ಕುಟುಂಬ ರಾಜಕಾರಣವನ್ನು ತೆಲಂಗಾಣದಲ್ಲಿ ಕಿತ್ತು ಹಾಕಲಾಗಿದೆ. ಇಡೀ ದೇಶದಲ್ಲಿ ಕುಟುಂಬ ರಾಜಕಾರಣ ಕಿತ್ತು ಹಾಕಲಾಗುವುದು ಎಂದರು. ಪ್ರಾಮಾಣಿಕರು, ಹಿಂದೂ ವಿಚಾರಧಾರೆಯನ್ನು ಹೊಂದಿರುವವರು ಆಡಳಿತ ನಡೆಸಬೇಕು. ವಂಶವಾದ ನಿರ್ಮೂಲನೆ ಮಾಡುವುದೇ ನಮ್ಮ ಗುರಿ. ಇನ್ನು ಮೇಲೆ ಬದಲಾವಣೆ ಆಗಲಿದೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ಬದಲಾವಣೆ ಆಗಲಿದೆ ಎಂದು ವಿಜಯೇಂದ್ರ ಆಯ್ಕೆಗೆ ಮತ್ತೊಮ್ಮೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಹೊತ್ತಲ್ಲಿ ನಮಲ್ಲೇ ಇರುವ ಕೆಲ ವೈರಿಗಳನ್ನು ನನ್ನ ವಿರುದ್ಧ ನಿಲ್ಲಿಸಲಾಯಿತಲ್ಲದೆ, ನನ್ನನ್ನು ಸೋಲಿಸಲು ವಿವಿಧಡೆಯಿಂದ ಸಾಕಷ್ಟು ಹಣ ಹರಿದು ಬಂತು. ಇನ್ನು, ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದರು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಇದೇ ವೇಳೆ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿ ವೈ ವಿಜಯೇಂದ್ರ, ಯತ್ನಾಳ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದು ಸಂತೋಷ. ಅವರಿಗೆ ನಾನು ಉತ್ತರ ಕೊಡಲ್ಲ, ನಡ್ಡಾ ಜಿ ಸೇರಿದಂತೆ ಇತರೆ ರಾಷ್ಟ್ರೀಯ ನಾಯಕರೇ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ವಿಜಯೇಂದ್ರ ಬಗ್ಗೆ ಈ ಹಿಂದೆಯೇ ತನ್ನ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದ ಯತ್ನಾಳ್ ವಾಗ್ದಾಳಿ ನಡೆಸಿದ್ದರು.

ಯಾರೇ ಒಪ್ಪಿಕೊಂಡರೂ ವಿಜಯೇಂದ್ರ ಸಾರಥ್ಯವನ್ನು ತಾನು ಒಪ್ಪಿಕೊಳ್ಳಲ್ಲ ಎಂಬ ರೀತಿಯಲ್ಲಿ ಯತ್ನಾಳ್ ಹೇಳಿಕೆ ಕೊಟ್ಟಿದ್ದರು. ವಿಜಯೇಂದ್ರ ಬಂದು ನನ್ನ ಭೇಟಿ ಆಗುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ಮೊದಲು ಏನೇನು ನನಗೆ ಅಡೆತಡೆ ಮಡಿದ್ದಾರೆ ಎಂದು ಗೊತ್ತಿದೆ ಎಂದು ಹೇಳಿದ್ದರು.

ಯತ್ನಾಳ್ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಅವರ ಮನೆ ಬಾಗಿಲಿಗೆ ಯಾರು ಹೋಗಿದ್ರು? ʻಯತ್ನಾಳ್ ಮನೆಗೆ ಹೋಗ್ತೀವಿ ಅಂದೋರು ಯಾರು ಎಂದು ಕೇಳಿದ್ದರು.

ಇನ್ನು, ಅಸಮಾಧಾನ ಗೊಂಡಿದ್ದ ಮತ್ತೋರ್ವ ಹಿರಿಯ ನಾಯಕ ಮಾಜಿ ಸಚಿವ ವಿ ಸೋಮಣ್ಣ ಅವರ ಬಗ್ಗೆ ಮಾತನಾಡಿದ ಬಿ ಎಸ್ ವೈ , ಅವರನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಬರಲಿಲ್ಲ ಅಂದರೆ ಏನು ಮಾಡಲು ಆಗುತ್ತದೆ ಎಂದು ಸೋಮಣ್ಣ ಅವರು ಪಕ್ಷ ಬಿಡಲು ಮನಸ್ಸು ಮಾಡಿದ್ದಾರೆ ಎಂಬ ಸುಳಿವನ್ನು ಯಡಿಯೂರಪ್ಪ ನೀಡಿದ್ದರು. ಸೋಮಣ್ಣ ನಾಳೆ ಅಂದ್ರೆ ಡಿಸೆಂಬರ್ 6 ಕ್ಕೆ ಗಡುವು ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News