ಗುಲ್ವಾಡಿಯ ಗುಜರಿಯಂಗಡಿಯಲ್ಲೊಂದು ಪುಟ್ಟ ಲೈಬ್ರರಿ

Update: 2023-12-25 07:36 GMT

ಕೋಟೇಶ್ವರ ಯುವ ಮೆರಿಡಿಯನ್ ಆವರಣದಲ್ಲಿರಿಸಲಾದ ಯಾಕೂಬ್ ಅವರ ಪಾರಂಪರಿಕ ವಸ್ತುಗಳ ಸಂಗ್ರಹ

ಕುಂದಾಪುರ, ಡಿ.25: ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಸೈಕಲ್, ಹಳೆ ಟಿವಿ ಸಹಿತ ವಿವಿಧ ಗುಜರಿ ಪರಿಕರಗಳಿರುವ ಸ್ಥಳದಲ್ಲಿ ಪುಟ್ಟ ಲೈಬ್ರರಿ ಸಿದ್ಧವಾಗಿದೆ. ಗುಜರಿಯಂಗಡಿಗೆ ಬರುವವರು ಹಾಗೂ ದಾರಿಯಲ್ಲಿ ಸಾಗುವವರಿಗೆ ‘ಮಿನಿ ಲೈಬ್ರರಿ’ ವಿಭಿನ್ನವಾಗಿ, ಆಕರ್ಷಣೀಯವಾಗಿ ಕಾಣುತ್ತಿದೆ.

ಗುಜರಿ ಅಂಗಡಿ ನಡೆಸುವ ಮೂಲಕ ಬದುಕು ಕಟ್ಟಿಕೊಂಡಿರುವ ಕುಂದಾಪುರ ತಾಲೂಕಿನ ಗುಲ್ವಾಡಿಯ ಯಾಕೂಬ್ ಖಾದರ್ ಅವರು ಗುಲ್ವಾಡಿ ಟಾಕೀಸ್ ಸಂಸ್ಥೆ ಮೂಲಕ ಇಂತಹದ್ದೊಂದು ವಿಭಿನ್ನ ಯೋಚನೆಯಡಿ ಪುಟ್ಟ ಗ್ರಂಥಾಲಯ ಮಾಡಿ ಸಾಹಿತ್ಯಾಸಕ್ತಿ ಮೆರೆದಿದ್ದಾರೆ.

ಯಾಕೂಬ್ ‘ರಿಸರ್ವೇಶನ್’ ಎಂಬ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಹಾಗೂ 2022ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ, ಸಿನೆಮಾ, ಸಂಸ್ಕೃತಿ, ಭಾಷೆ, ಬರವಣಿಗೆ, ಸಮಾಜ ಸೇವೆ, ಸಂಘಟನೆ, ಪ್ರಾಚ್ಯ ವಸ್ತು ಸಂಗ್ರಹ, ಅಭಿನಯ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಸ್ಥೆ ಯಾದ ಗುಲ್ವಾಡಿ ಟಾಕೀಸ್ ಸಂಸ್ಥೆ ಮೂಲಕ ಪ್ರತಿ ವರ್ಷ ಕನ್ನಡದ ಮೊದಲ ಸಾಮಾಜಿಕ ಕಾದಂಬರಿಕಾರ ಗುಲ್ವಾಡಿ ವೆಂಕಟರಾವ್, ಖ್ಯಾತ ಪತ್ರಕರ್ತ ಸಂತೋಷ್ ಕು ಮಾರ್ ಗುಲ್ವಾಡಿ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ 2 ಬಾರಿ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಗುಜರಿಯಂಗಡಿ ಕಾಯಕವೇ ಪ್ರೇರಣೆ..!: 6ನೇ ತರಗತಿ ಓದಿದ್ದ ಯಾಕೂಬ್ ಅವರ ಸಾಹಿತ್ಯದ ದೂರದೃಷ್ಟಿ ಕಲ್ಪನೆಯ ಈ ವ್ಯವಸ್ಥೆಗೆ ‘ಉಚಿತ ಪುಟಾಣಿ ಗ್ರಂಥಾಲಯ’ ಎಂದು ಹೆಸರಿಡಲಾಗಿದೆ. ಸಾಲಾಗಿ ಜೋಡಿಸಿಟ್ಟ ನೂರಾರು ಹಳೆ ಟಿವಿಗಳ ಎದುರು ಕಬ್ಬಿಣದ ಕಂಬವನ್ನು ಆಧರಿಸಿ ನಿಲ್ಲಿಸಿದ ಪುಟ್ಟ ಮೇಲ್ಮಾಡಿನ ಗೂಡೊಂದರಲ್ಲಿ ಜೋಡಿಸಿಟ್ಟ ಪುಸ್ತಕಗಳ ಭಂಡಾರ ಹಾಗೂ ಪಕ್ಕದ ಹಳೆಯ ಸೈಕಲ್ ಹಾದಿ ಹೋಕರ ಕಣ್ಸೆಳೆಯುತ್ತವೆ.

30 ವರ್ಷಗಳ ಹಿಂದೆ (1990) ಗುಜರಿ ಅಂಗಡಿ ಆರಂಭಿಸಿದಾಗ ಅಲ್ಲಿಗೆ ಬರುತ್ತಿದ್ದ ಪುಸ್ತಕಗಳನ್ನು ಆಸಕ್ತಿಯಿಂದ ಓದುತಿದ್ದುದೇ ಇವರು ಅಕ್ಷರ ಕ್ಷೇತ್ರದತ್ತ ಬರಲು ಪ್ರೇರಣೆ. ಓದುವುದರಿಂದಲೇ ಸಾಧನೆ ಸಾಧ್ಯ ಎಂಬುದನ್ನು ಮನಗಂಡ ಯಾಕೂಬ್ ಸಿನೆಮಾ, ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ‘ದೇಶ ಸುತ್ತಿ ನೋಡು..ಕೋಶ ಓದಿ ನೋಡು’ ಎಂಬಂತೆ ಕಾರ್ಯ ನಿರ್ವಹಿಸುತ್ತಿದ್ದು 15-16 ದೇಶಗಳನ್ನು ಈಗಾಗಲೇ 40 ಬಾರಿ ಸುತ್ತಿ ಬಂದಿದ್ದಾರೆ. ಇವರ ಈ ಕಾರ್ಯಕ್ಕೆ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಗುಲ್ವಾಡಿಯ ತನ್ನ ಗುಜರಿಯಂಗಡಿ ಯಲ್ಲಿರುವ ‘ಪುಟಾಣಿ ಗ್ರಂಥಾಲಯ’

 ನೂರಾರು ಪುಸ್ತಕ, ಸಾವಿರಾರು ಪ್ರಾಚ್ಯ ವಸ್ತುಗಳ ಸಂಗ್ರಹ 

ಯಾಕೂಬ್ ಖಾದರ್ ಅವರ ಸಂಗ್ರಹದಲ್ಲಿ ನೂರಾರು ಸಾಹಿತಿಗಳ, ಲೇಖಕರ ವಿವಿಧ ವಿಷಯಗಳ ಪುಸ್ತಕಗಳಿವೆ. ಪೂರ್ಣಚಂದ್ರ ತೇಜಸ್ವಿ, ನಾಗತಿಹಳ್ಳಿ ಚಂದ್ರಶೇಖರ್, ಲಂಕೇಶ್, ನೇಮಿಚಂದ್ರ ಸಹಿತ ಹಲವರ ಪುಸ್ತಕಗಳು ಗುಲ್ವಾಡಿ ಅವರ ಪುಟಾಣಿ ಗ್ರಂಥಾಲಯದಲ್ಲಿವೆ. ಇದರೊಂದಿಗೆ ಅವರು ಹಳೆಯ, ಪ್ರಾಚ್ಯ ವಸ್ತುಗಳ ಸಂಗ್ರಹಕ ಸಹ. ಅವರ ಬಳಿ ನೇಗಿಲು-ನೊಗ, ಎತ್ತಿನ ಗಾಡಿ, ಗ್ರಾಮಫೋನ್, ಸ್ಕೂಟರ್, ಹಳೆ ಕಾಲದ ಮರದ ಸಾಮಾಗ್ರಿಗಳು, ಗಡಿಯಾರ, ಚಿಮಣಿ, ರೇಡಿಯೋ, ಫೋನುಗಳು, ನಾಣ್ಯ-ನೋಟುಗಳು, ಕ್ಯಾಮೆರಾಗಳು, ಮೈಕ್, ದಾನ್ಯ ದಾಸ್ತಾನು ಪೆಟ್ಟಿಗೆ ಸಹಿತ ನಿತ್ಯ ಬಳಕೆಯಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳಿವೆ. ಸಾವಿರಾರು ನಮೂನೆಯ ತರಹೇವಾರಿ ವಸ್ತುಗಳನ್ನು ಯಾಕೂಬ್ ಸಂಗ್ರಹಿಸಿದ್ದು ಜನರ ವೀಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವುಗಳನ್ನೆಲ್ಲಾ ಒಪ್ಪವಾಗಿ ಕೋಟೇಶ್ವರದ ಯುವ ಮೆರಿಡಿಯನ್ ಸಂಸ್ಥೆಯ ಆವರಣದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಯಾಕೂಬ್ ಖಾದರ್ ಗುಲ್ವಾಡಿಯವರ ಸಾಹಿತ್ಯಾಸಕ್ತಿ, ವಿವಿಧ ರೀತಿಯ ಪುರಾತನ ವಸ್ತುಗಳ ಸಂಗ್ರಹದ ಬಗ್ಗೆ ತಿಳಿದು ಅವರಿಗೆ ಪ್ರೋತ್ಸಾಹಿಸುವ ಜೊತೆಗೆ ಅವರ ಸಂಗ್ರಹಣೆಗಳು ಜನರಿಗೆ ತಲುಪಬೇಕು ಮತ್ತು ಪಾರಂಪರಿಕ ವಸ್ತುಗಳ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಬೇಕು ಎನ್ನುವ ನಿಟ್ಟಿನಲ್ಲಿ ಯುವ ಮೆರಿಡಿಯನ್ ಸಂಸ್ಥೆಯ ಆವರಣದಲ್ಲಿ, ಮಿನಿ ಲೈಬ್ರರಿ ಹಾಗೂ ವಸ್ತು ಸಂಗ್ರಹಾಲಯಕ್ಕೆ ಬೇಕಾದ ಸ್ಥಳವಕಾಶ ಕಲ್ಪಿಸಿಕೊಡಲಾಗಿದೆ. ಪ್ರವಾಸಿಗರು, ಗ್ರಾಹಕರು ಇದರ ಸದುಪಯೋಗ ಪಡೆಯಲಿ ಎಂಬ ಸದುದ್ದೇಶ ನಮ್ಮದು.

-ಉದಯ್‌ ಕುಮಾರ್ ಶೆಟ್ಟಿ ಬೈಲೂರು (ಕೋಟೇಶ್ವರ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರರು)

90ರ ದಶಕದಲ್ಲಿ ಹೊಟ್ಟೆಪಾಡಿಗಾಗಿ ಆರಂಭಿಸಿದ ಗುಜರಿ ಅಂಗಡಿಯಲ್ಲಿ ಸಿಗುತ್ತಿದ್ದ ಪುಸ್ತಕಗಳೇ ಓದಲು ಪ್ರೇರಣೆ. ಓದಿನ ಮೂಲಕ ಸಾಹಿತ್ಯ -ಸಿನೆಮಾಸಕ್ತಿ ಬೆಳೆದಿತ್ತು. ಅಮೇರಿಕಾ, ಲಂಡನ್ ಮೊದಲಾದೆಡೆ ಭೇಟಿ ನೀಡಿದಾಗ ಅಲ್ಲಿನ ಪಾರ್ಕ್, ಪ್ರಮುಖ ರಸ್ತೆಯಲ್ಲಿ ಉಚಿತ ಕಿರು ಗ್ರಂಥಾಲಯಗಳ ಮೂಲಕ ಓದುಗರಿಗೆ ಅನುಕೂಲ ಕಲ್ಪಿಸುವುದನ್ನು ನೋಡಿದ್ದೆ. ಓದುವುದರಿಂದ ಸಾಮಾಜಿಕ ತಿಳುವಳಿಕೆ ಸಾಧ್ಯ ಎಂಬುದನ್ನು ಮನಗಂಡು ಈ ಉಚಿತ ಪುಟಾಣಿ ಗ್ರಂಥಾಲಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ‘ತಿಂಗಳ ಓದು’ ಎಂಬ ಕಾರ್ಯಕ್ರಮದಡಿ ಗುಲ್ವಾಡಿಯಲ್ಲಿ ತಿಂಗಳ ಕೊನೆಯ ಭಾನುವಾರದಂದು ಒಂದು ಗಂಟೆ ಅವಧಿಯಲ್ಲಿ ಸಮಾನ ಮನಸ್ಕರ ಜೊತೆ, ಓದುವ ಬಗೆಗಿನ ವಿಮರ್ಶೆ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆಯಿದೆ.

- ಯಾಕೂಬ್ ಖಾದರ್ ಗುಲ್ವಾಡಿ (ಪುಟಾಣಿ ಗ್ರಂಥಾಲಯ ನಿರ್ಮಾತೃ).

ಪುಟ್ಟ ಗ್ರಂಥಾಲಯದ ಪರಿಕಲ್ಪನೆ ಬೆರಗು ಮೂಡಿಸಿದೆ. ಊರೂರಲ್ಲಿ ಇಂತಹ ಬೀದಿ ಗ್ರಂಥಾಲಯಗಳ ಸ್ಥಾಪನೆಗೆ ಇದೊಂದು ಸ್ಪೂರ್ತಿ. ಇಂತಹ ನೂರಾರು ಬೀದಿ ಗ್ರಂಥಾಲಯಗಳು ಮತ್ತವುಗಳ ನಡುವೆ ಕೊಂಡು ಕೊಳ್ಳುವಿಕೆಗಾಗಿ ಒಕ್ಕೂಟ ರಚನೆಯಾದರೆ ಓದಿನ ಸಂಸ್ಕೃತಿ ಬೆಳೆಯಲಿದೆ. ಯಾಕೂಬ್ ಅವರ ಪ್ರಾಚ್ಯ ವಸ್ತು ಸಂಗ್ರಹದಲ್ಲಿ ಸ್ವಾತಂತ್ರ್ಯ ಹೋರಾಟ ಸೇರಿದಂತೆ ಹಲವು ಐತಿಹಾಸಿಕ ಮಹತ್ವದ ವಸ್ತುಗಳಿವೆ. ಗುಜರಿ ವ್ಯಾಪಾರಿ ಯೊಬ್ಬ ಎಚ್ಚರ ವಹಿಸಿದರೆ ಇತಿಹಾಸವನ್ನು ಮರುಕಟ್ಟಲು ಬೇಕಾದಂತಹ ಹಲವು ಆಕರಗಳನ್ನು ಒದಗಿಸಬಲ್ಲ ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದು ಈ ಸಂಗ್ರಹವನ್ನು ಇತಿಹಾಸ ತಜ್ಞರು ಅಧ್ಯಯನಕ್ಕೆ ಬಳಸಿಕೊಳ್ಳಬೇಕಿದೆ.

- ತಿಮ್ಮಪ್ಪ ಗುಲ್ವಾಡಿ (ಸಾಹಿತ್ಯಾಸಕ್ತರು, ಪುಸ್ತಕ ವ್ಯಾಪಾರಿ)

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಯೋಗೀಶ್ ಕುಂಭಾಶಿ

contributor

Similar News