ಶಾಸಕರಿಗೆ ‘ನಿದ್ರಾ’ ಮಾದರಿಯ ಹಾಸಿಗೆ, ದಿಂಬು ಖರೀದಿಗೆ ಹೆಚ್ಚುವರಿ ಅನುದಾನ
ಬೆಂಗಳೂರು: ಶಾಸಕರಿಗೆ ದೇಹಾರೋಗ್ಯ ಮತ್ತು ಆರಾಮದಾಯಕವಾಗಿದೆ ಎಂದು ಹೇಳಲಾಗಿರುವ ’ನಿದ್ರಾ’ ಮಾದರಿಯ ಹಾಸಿಗೆ, ದಿಂಬು, ತಲೆದಿಂಬು, ಸೋಫಾ, ಡೋರ್ ಫುಟ್ ಮ್ಯಾಟ್, ಟರ್ಕಿ ಟವಲ್, ಉಲ್ಲನ್ ಬೆಡ್‌ಶೀಟ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು 1.60 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸರಕಾರವು ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದೆ.
ವಿಶೇಷವೆಂದರೆ ಶಾಸಕರ ಭವನಕ್ಕೆ 2012ರಿಂದ 2023ರವರೆಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ ಸಿಂಗಲ್ ಬೆಡ್, ಡಬಲ್ ಬೆಡ್ , ಸೋಫಾ ಲೂಸ್ ಕುಷನ್, ತಲೆದಿಂಬು, ಡೋರ್ ಫುಟ್ ಮ್ಯಾಟ್‌ಗಳನ್ನು ಸಾರ್ವಜನಿಕ ಉದ್ದಿಮೆಯಾದ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ ಹಾಸಿಗೆಗಳನ್ನು ಖರೀದಿಸಲಾಗುತ್ತಿತ್ತು.
ಆದರೆ ಇವುಗಳು ಸರಿ ಇಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಕ್ಷೇಮ ವನದಲ್ಲಿ ಬಳಸಿದ್ದ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಕೊಯಮತ್ತೂರಿನ ಖಾಸಗಿ ಕಂಪೆನಿಯಿಂದ ಖರೀದಿಸಲು ಮುಂದಾಗಿದೆ.
ಶಾಸಕರ ಕೊಠಡಿಗಳಿಗೆ ಅಗತ್ಯವಿರುವ ಸಿಂಗಲ್, ಡಬಲ್ ಹಾಸಿಗೆ, ದಿಂಬು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿದೆ. ಈ ಸಂಬಂಧ "the -file.in" ಆರ್‌ಟಿಐ ಅಡಿಯಲ್ಲಿ ದಾಖಲೆಗಳನ್ನು ಪಡೆದಿದೆ.
ಹಾಸಿಗೆ ಹಾಗೂ ಇನ್ನಿತರ ವಸ್ತುಗಳನ್ನು ಕೂಡಲೇ ಬದಲಾಯಿಸಿ ಹೊಸದಾದ ಹಾಸಿಗಗಳನ್ನು ನೀಡಬೇಕು ಎಂದು ಶಾಸಕರ ಒತ್ತಡಕ್ಕೆ ಮಣಿದಿರುವ ವಿಧಾನಸಭೆ ಸಚಿವಾಲಯವು, ಆರ್ಥಿಕ ಇಲಾಖೆಗೆ 4(ಜಿ) ವಿನಾಯಿತಿಗಾಗಿ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಪ್ರಸ್ತಾವಕ್ಕೆ ಅನುಮೋದನೆ ನೀಡಿರುವುದು ತಿಳಿದು ಬಂದಿದೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದನೆ ನೀಡಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಆಯುರ್ವೇದಿಕ್ ಕ್ಷೇಮ ವನದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ನೀಡಿದ್ದ ನಿದ್ರಾ ಮಾದರಿ ಹಾಸಿಗೆಗಳನ್ನೇ ಒದಗಿಸಬೇಕು ಎಂದು ಶಾಸಕರು ಬೇಡಿಕೆ ಇರಿಸಿದ್ದರು. ಹೀಗಾಗಿ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಖರೀದಿಸಲು ವಿಧಾನಸಭೆ ಸಚಿವಾಲಯವು ದರ ಪಟ್ಟಿ ಪಡೆದಿತ್ತು.
ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರಿಗೆ ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚೋರಪತಿ ಆಯುರ್ವೇದಿಕ್ ಸೆಂಟರ್‌ನ ಕ್ಷೇಮ ವನದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಸೇರಿದಂತೆ ಶಾಸಕರು ಹಾಗೂ ಸಚಿವಾಲಯದ ಅಧಿಕಾರಿಗಳು ಅಲ್ಲಿ ಬಳಕೆ ಮಾಡುತ್ತಿರುವ ಹಾಸಿಗೆಗಳನ್ನು ಪರಿಶೀಲಿಸಿದ್ದರು.
ಈ ಹಾಸಿಗೆಗಳು ದೇಹಾರೋಗ್ಯಕ್ಕೆ ಸೂಕ್ತವಾದಂತಹ ಮತ್ತು ಆರಾಮದಾಯಕವಾಗಿರುವಂತಹ ನಿದ್ರಾ ಮಾದರಿಯ ಹಾಸಿಗೆಗಳೆಂದು ತಿಳಿದು ಬಂದಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಆರ್ಥಿಕ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಪ್ರಸ್ತಾವದಲ್ಲಿ ವಿವರಿಸಿದ್ದರು.
300 ಸಂಖ್ಯೆಯ ಸಿಂಗಲ್ ಹಾಸಿಗೆ, 150 ಸಂಖ್ಯೆಯ ಡಬಲ್ ಹಾಸಿಗೆ ಹಾಗೂ 1,250 ಸಂಖ್ಯೆಯ ದಿಂಬು, 50 ಸೆಟ್ ಸೋಫಾ ಲೂಸ್ ಕುಷನ್, 200 ಸಂಖ್ಯೆಯ ಡೋರ್ ಫುಟ್ ಮ್ಯಾಟ್, 1,000 ಸಂಖ್ಯೆಯ ರಬ್ಬರ್ ಫುಟ್ ಮ್ಯಾಟ್, 1,250 ಸಂಖ್ಯೆಯ ಸಿಂಗಲ್ ಬೆಡ್‌ಶೀಟ್, 600 ಸಂಖ್ಯೆಯ ಡಬಲ್ ಬೆಡ್‌ಶೀಟ್, 250 ಸಂಖ್ಯೆ ಟರ್ಕಿ ಟವಲ್, 600 ಸಂಖ್ಯೆಯ ಉಲ್ಲನ್ ಬೆಡ್ ಶೀಟ್, ಬ್ಲಾಂಕೇಟ್‌ಗಳನ್ನು ಕೊಯಮತ್ತೂರಿನ ರಿಪೋಸ್ ಮ್ಯಾಟ್ರಸ್ ಪ್ರೈವೈಟ್ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಪ್ರಸ್ತಾವದಲ್ಲಿ ಕೋರಿದ್ದರು ಎಂಬುದು ತಿಳಿದು ಬಂದಿದೆ.
ರೆಸ್ಟೋಲೆಕ್ಸ್, ಬೆಂಗಳೂರಿನ ಸದಾಶಿವನಗರದಲ್ಲಿರುವ ಜತ್ತಿ ಟ್ರಾಕ್ಸ್ ಎಲ್‌ಎಲ್ಪಿನಿಂದ ದರ ಪಟ್ಟಿ ಪಡೆದಿತ್ತು. ಈ ಪೈಕಿ ರಿಪೋಸ್ ಮ್ಯಾಟ್ರಸ್ ಪ್ರೈವೈಟ್ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿದೆ ಎಂಬುದು ಗೊತ್ತಾಗಿದೆ.