ಐಹೊಳೆ ಗ್ರಾಂಪ ಅಧ್ಯಕ್ಷ ಉಡುಪಿಯಲ್ಲಿ ಸ್ವಚ್ಛತಾ ರಾಯಭಾರಿ!

Update: 2023-12-05 09:21 GMT

ಉಡುಪಿ, ಡಿ.3: ಸರಿ ಸುಮಾರು 25ವರ್ಷಗಳ ಹಿಂದೆ ಉಡುಪಿಗೆ ಬಂದು ಗುಜರಿ ಹೆಕ್ಕಿ, ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡ ವಲಸೆ ಕಾರ್ಮಿಕ ರೊಬ್ಬರು ಇದೀಗ ತನ್ನೂರಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆಗೆರಿದ್ದಾರೆ. ಆದರೂ ಅವರು ತನ್ನ ಕರ್ಮಭೂಮಿಯಾಗಿರುವ ಉಡುಪಿಯಲ್ಲಿ ಈಗಲೂ ಮನೆಮನೆ ಕಸ ಸಂಗ್ರಹ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದು ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕಿನ ಐಹೊಳೆ ಗ್ರಾಪಂ ಅಧ್ಯಕ್ಷ ಹಾಗೂ ಉಡುಪಿ ತಾಲೂಕಿನ ಅಲೆವೂರು ಗ್ರಾಪಂನಲ್ಲಿ ಮನೆಮನೆ ಕಸ ಸಂಗ್ರಹಣೆ ಮಾಡುತ್ತಿರುವ ಹನುಮಂತ ಬಸಪ್ಪ ಆಡಿನ(43) ಅವರ ಸಾಧನೆಯ ಬದುಕಿನ ಕಥೆ. ವಲಸೆ ಕಾರ್ಮಿಕರಾಗಿ ಉಡುಪಿಗೆ ಬಂದ ಇವರು, ಹಲವು ನೋವುಗಳನ್ನು ಉಂಡು ಎತ್ತರಕ್ಕೆ ಬೆಳೆದರು. ಪ್ರಸ್ತುತ ಇವರು ಉಡುಪಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಅಂಗಡಿಗಳ ಎದುರು ವಾಸ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹನುಮಂತ, ತನ್ನ 18ನೇ ವಯಸ್ಸಿನಲ್ಲಿ ಕೂಲಿ ಕೆಲಸ ಅರಸಿಕೊಂಡು 1998ರಲ್ಲಿ ಉಡುಪಿಗೆ ಬಂದಿದ್ದರು. ಇಲ್ಲಿ ಮೆಸ್ತ್ರಿಗಳ ಜೊತೆ ಸಹಾಯಕರಾಗಿ ಹೋಗುತ್ತಿದ್ದ ಇವರು, ನಂತರ ರಸ್ತೆಬದಿ ಎಸೆದ ಗುಜರಿ ವಸ್ತುಗಳನ್ನು ಹೆಕ್ಕಿ ಜೀವನ ಸಾಗಿಸುತ್ತಿದ್ದರು. ಆಗ ದಿನಕ್ಕೆ 30-40ರೂ. ಕೂಲಿ ಗಳಿಸುತ್ತಿದ್ದ ಹನುಮಂತ, ರಾತ್ರಿ ವೇಳೆ ಕರಾವಳಿ ಬೈಪಾಸ್‌ನಲ್ಲಿರುವ ಗ್ಯಾರೇಜ್‌ನ ಎದುರು ಮಲಗಿ ದಿನ ದೂಡುತ್ತಿದ್ದರು.

2003ರಿಂದ 2010ರವರೆಗೆ ಉಡುಪಿ ನಗರದ ವಿವಿಧ ವಸತಿ ಸಮುಚ್ಚಯ ದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 2010ರಲ್ಲಿ ಟೆಂಪೊ ಚಾಲಕರಾಗಿ ದುಡಿಮೆ ಪ್ರಾರಂಭಿಸಿದ ಇವರು, ಕ್ರಮೇಣ ಸ್ವಂತ ವಾಹನ ಖರೀದಿಸಿದರು. ಇದೀಗ ಇವರು ಐದು ಗೂಡ್ಸ್ ಟೆಂಪೊಗಳ ಮಾಲಕರಾಗಿದ್ದಾರೆ. 2012ರಲ್ಲಿ ಬೀಡಿನಗುಡ್ಡೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ, ತನ್ನ ಊರಿನ ಕೂಲಿ ಕಾರ್ಮಿಕರಿಗೆ ನೆಲ ಬಾಡಿಗೆ ಮೂಲಕ ವಾಸಕ್ಕೆ ಅವಕಾಶ ನೀಡಿದ್ದಾರೆ. ಸದ್ಯ ಇವರು ಉಡುಪಿಯ ಬಾಡಿಗೆ ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬದವರೊಂದಿಗೆ ವಾಸವಾಗಿದ್ದಾರೆ.

ಮನೆ ಮನೆ ಕಸ ಸಂಗ್ರಹ: ಆರೆಳು ವರ್ಷಗಳ ಹಿಂದೆ ಆಗಿನ ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಟೆಂಪೊ ಮೂಲಕ ಗ್ರಾಪಂ ವ್ಯಾಪ್ತಿಯ ಮನೆಮನೆಗಳಿಂದ ಕಸ ಸಂಗ್ರಹಿಸುವ ಜವಾಬ್ದಾರಿಯನ್ನು ಹನುಮಂತ ಅವರಿಗೆ ವಹಿಸಿಕೊಟ್ಟರು.

ಹೀಗೆ ಸುಮಾರು 200-300 ಮನೆಗಳಿಂದ ಆರಂಭಗೊಂಡ ಕಸ ಸಂಗ್ರಹ ಕಾರ್ಯ ಇದೀಗ 600-700 ಮನೆಗಳಿಗೆ ವಿಸ್ತರಗೊಂಡಿದೆ. ಏಳು ವರ್ಷ ಗಳ ಹಿಂದೆ ಒಂದು ಮನೆಯಿಂದ 30ರೂ. ಹಣ ಪಡೆದರೆ, ಈಗ ಅದನ್ನು 70 ರೂ.ಗೆ ಏರಿಸಲಾಗಿದೆ. ಪ್ರಸಕ್ತ ತಿಂಗಳಿಗೆ 45 ಸಾವಿರ ರೂ. ಸಂಗ್ರಹವಾಗುತ್ತದೆ. ಇದರಲ್ಲಿ ಪೆಟ್ರೋಲ್, ಕಾರ್ಮಿಕನ ಸಂಬಳ, ವಾಹನ ನಿರ್ವಹಣೆಯನ್ನು ಮಾಡಿ ಕೊಳ್ಳಬೇಕಾಗಿದೆ ಎಂದು ಹನುಮಂತ ಆಡಿನ ತಿಳಿಸಿದ್ದಾರೆ.

ಬೆಳಗ್ಗೆ 6ಕ್ಕೆ ಕಸ ಸಂಗ್ರಹ ಮಾಡಲು ಹೊರಟರೆ ರಾಂಪುರ, ಕೊರಂಗ್ರಪಾಡಿ, ಕೆಮ್ತೂರು, ಪಡು ಅಲೆವೂರು, ಗುಡ್ಡೆಯಂಗಡಿ, ಜೋಡುರಸ್ತೆ, ಮಾರ್ಪಳ್ಳಿ ಸೇರಿದಂತೆ ಹಲವು ಭಾಗಗಳ ಮನೆಗಳಿಂದ ಕಸ ಸಂಗ್ರಹಿಸುವಾಗ ಅಪರಾಹ್ನ 2 ಗಂಟೆ ಆಗುತ್ತದೆ. ಅದರ ನಂತರ ನಾನು ನನ್ನ ಬೇರೆ ಕೆಲಸಗಳನ್ನು ಮಾಡಿಕೊಂಡು ಇರುತ್ತೇನೆ ಎಂದು ಅವರು ಹೇಳಿದ್ದಾರೆ.

ಗ್ರಾಪಂ ಚುನಾವಣಾ ಕಣಕ್ಕೆ: ಹನುಮಂತ ಕಳೆದ 25 ವರ್ಷಗಳಿಂದ ಉಡುಪಿಯಲ್ಲಿಯೇ ಕೆಲಸ ಮಾಡಿ ಕೊಂಡಿದ್ದರೂ ತನ್ನ ಹುಟ್ಟೂರಿನ ಋಣವನ್ನು ಕಡಿದುಕೊಂಡಿರಲಿಲ್ಲ. ತನ್ನ ಆಧಾರ್ ಕಾರ್ಡ್, ಮತದಾರರ ಪಟ್ಟಿಯಲ್ಲಿನ ಹೆಸರು, ಗುರುತಿನ ಚೀಟಿ ಎಲ್ಲವೂ ಐಹೊಳೆ ಗ್ರಾಮದ ವಿಳಾಸದಲ್ಲಿಯೇ ಇದೆ.

ಹೀಗಾಗಿ ಅವರು 2020ರಲ್ಲಿ ನಡೆದ ಗ್ರಾಪಂ ಚುನಾವಣೆಯಲ್ಲಿ ಒಂದನೇ ವಾರ್ಡ್‌ನಿಂದ ಕಾಂಗ್ರೆಸ್ ಬೆಂಬಲಿತರಾಗಿ ಕಣಕ್ಕೆ ಇಳಿದರು. ಆದರೆ ಗ್ರಾಮಸ್ಥರು ಇವರನ್ನು ರಾಜಕೀಯ ರಹಿತವಾಗಿ ಬೆಂಬಲಿಸಿ ಭಾರೀ ಅಂತರದಲ್ಲಿ ಗೆಲ್ಲಿಸಿ ಸದಸ್ಯರನ್ನಾಗಿ ಮಾಡಿದರು. ಈ ಮೂಲಕ ಮೊದಲ ಬಾರಿಗೆ ಇವರು ಗ್ರಾಪಂ ಸದಸ್ಯರಾಗಿ ಆಯ್ಕೆಯಾದರು.

ನಾಲ್ಕು ತಿಂಗಳ ಹಿಂದೆ ಪಂಚಾಯತ್‌ನ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹನುಮಂತ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದ್ಯ ಉಡುಪಿಯಲ್ಲಿ ದುಡಿಯುತ್ತಿರುವ ಇವರು, ರವಿವಾರ ರಾತ್ರಿ ಸುಮಾರು 450 ಕಿ.ಮೀ. ದೂರದಲ್ಲಿರುವ ಐಹೊಳೆ ಪ್ರಯಾಣ ಬೆಳೆಸಿ, ಸೋಮವಾರ ಬೆಳಗ್ಗೆ ಗ್ರಾಪಂ ಕಚೇರಿಯಲ್ಲಿ ಜನರ ಸೇವೆಗೆ ಸಿದ್ಧರಾಗಿರುತ್ತಾರೆ. ಹೀಗೆ ಶುಕ್ರವಾರದವರೆಗೆ ಅಲ್ಲೇ ಇದ್ದು, ಅದೇ ದಿನ ರಾತ್ರಿ ಮತ್ತೆ ಉಡುಪಿಗೆ ವಾಪಸು ಬರುತ್ತಾರೆ.

ಅಧಿಕಾರಕ್ಕೇರಿದರೂ ಬಿಡದ ಕಾಯಕ!

ಕಳೆದ ನಾಲ್ಕು ತಿಂಗಳಿನಿಂದ ಐಹೊಳೆ ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹನುಮಂತ ಆಡಿನ, ವಾರಾಂತ್ಯದ ಬಿಡುವಿನಲ್ಲಿ ಉಡುಪಿಗೆ ಬಂದು ಅಲೆವೂರು ಗ್ರಾಪಂನಲ್ಲಿ ಕಸ ಸಂಗ್ರಹಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ಇವರು ಐಹೊಳೆಯಲ್ಲಿರುವ ಸಂದರ್ಭ ಇಲ್ಲಿ ಹನುಮಂತ ಅವರ ಸಹೋದರ ಕಸ ಸಂಗ್ರಹದ ಕೆಲಸ ಮಾಡುತ್ತಾರೆ.

‘ಅಧ್ಯಕ್ಷನಾದರೂ ನಾನು ನನ್ನ ಕಾಯಕವನ್ನು ಇನ್ನೂ ಬಿಟ್ಟಿಲ್ಲ. ಶನಿವಾರ ಮತ್ತು ರವಿವಾರ ಅಲೆವೂರಿನಲ್ಲಿಯೇ ಇದ್ದು ಕಸ ಸಂಗ್ರಹಿಸುವ ಕೆಲಸ ಮಾಡುತ್ತೇನೆ. ಈ ವಾರ ಕೂಡ ನಾನೇ ಸ್ವತಃ ರಿಕ್ಷಾ ಚಲಾಯಿಸಿಕೊಂಡು ಹೋಗಿ ಕಸ ಸಂಗ್ರಹ ಮಾಡಿದ್ದೇನೆ. ನನಗೆ ಈ ಗ್ರಾಪಂ ಎಲ್ಲ ಪಕ್ಷದವರು ಕೂಡ ಬೆಂಬಲವಾಗಿ ನಿಂತಿದ್ದಾರೆ’ ಎನ್ನುತ್ತಾರೆ ಹನುಮಂತ ಬಸಪ್ಪ ಆಡಿನ.

ಕೊರೋನ ಸಂದರ್ಭದಲ್ಲಿ ಜನ ಕಸ ಸಂಗ್ರಹಿಸುವವರನ್ನು ನೋಡಿದರೆ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಯಾರು ಕೂಡ ಹೊರಗಡೆ ಬಾರದ ಸಂದರ್ಭದಲ್ಲಿ ನಾನು ಮನೆ ಮನೆ ಹೋಗಿ ಕಸ ಸಂಗ್ರಹಿಸಿದ್ದೇವು. ಆದರೆ ಜನ ನಮ್ಮನ್ನು ನೋಡಿ ದೂರದಲ್ಲೇ ಒಳಗೆ ಹೋಗುತ್ತಿದ್ದರು. ಇಂತಹ ಸಂದರ್ಭದಲ್ಲೂ ನೋವು ಉಂಡು ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಐಹೊಳೆಯಲ್ಲಿ ಗ್ರಾಪಂ ಸ್ಥಾನದಲ್ಲಿ ಕುಳಿತು ಜನರ ಸೇವೆ ಮಾಡಿದರೆ, ಇಲ್ಲಿ ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ಮೂಲಕ ಜನರ ಕೆಲಸ ಮಾಡುತ್ತಿದ್ದೇನೆ. ಎರಡೂ ಕೆಲಸದಲ್ಲಿಯೂ ನನಗೆ ಸಂತೃಪ್ತಿ ಇದೆ. ನನ್ನ ಊರಿನವರು ನನಗೆ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಅದಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಇದರ ಜೊತೆ ಊರನಲ್ಲಿರುವ ನಮ್ಮ ಎರಡು ಎಕರೆ ಭೂಮಿಯಲ್ಲಿ ಕೃಷಿ ಕೂಡ ಮಾಡಿಕೊಂಡಿದ್ದೇನೆ.

| ಹನುಮಂತ ಆಡಿನ,

ಅಧ್ಯಕ್ಷರು, ಐಹೊಳೆ ಗ್ರಾಪಂ

ಹನುಮಂತ ಆಡಿನ ಕಳೆದ ಏಳೆಂಟು ವರ್ಷಗಳಿಂದ ನಮ್ಮ ಗ್ರಾಪಂನಲ್ಲಿ ಕಸ ಸಂಗ್ರಹ ಕೆಲಸ ಮಾಡುತ್ತಿದ್ದಾರೆ. ಐಹೊಳೆ ಗ್ರಾಪಂ ಅಧ್ಯಕ್ಷರಾದರೂ ಇಲ್ಲಿನ ಕೆಲಸಕ್ಕೆ ಯಾವುದೇ ರೀತಿಯ ಕುಂದು ಬಾರದಂತೆ ನೋಡಿಕೊಳ್ಳುತ್ತಿ ದ್ದಾರೆ. ಕೆಲವೊಮ್ಮೆ ಅವರೇ ಖುದ್ದು ಮನೆಮನೆಗೆ ಹೋಗಿ ಕಸ ಸಂಗ್ರಹಿಸುತ್ತಾರೆ. ಯಾವುದೇ ಸಮಸ್ಯೆಯಾದರೂ ಊರಿನಲ್ಲಿದ್ದರೂ ಕೂಡಲೇ ಸ್ಪಂದಿಸಿ ಮರು ದಿನವೇ ಇಲ್ಲಿಗೆ ಆಗಮಿಸಿ ಪರಿಹರಿಸುತ್ತಾರೆ.

| ಯತೀಶ್ ಕುಮಾರ್,

ಅಧ್ಯಕ್ಷರು, ಅಲೆವೂರು ಗ್ರಾಪಂ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ನಝೀರ್ ಪೊಲ್ಯ

contributor

Similar News