ಚುನಾವಣಾ ಬಾಂಡ್ ಎಂಬ ಮಹಾ ಹಗರಣಕ್ಕೆ ಕೊನೆ ?

Update: 2023-10-16 10:13 GMT
Editor : Thouheed | By : ಆರ್. ಜೀವಿ

ಬಿಜೆಪಿಯ ಜೇಬು ತುಂಬಿಸುವುದಕ್ಕೇ ತಂದಂತಿರುವ ಚುನಾವಣಾ ಬಾಂಡ್ ವ್ಯವಸ್ಥೆಯ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಇವೆ. ನಮ್ಮ ಇಡೀ ಚುನಾವಣಾ ಪ್ರಕ್ರಿಯೆ ಯನ್ನೇ ಹಳ್ಳ ಹಿಡಿಸುವ ಅಪಾಯವಿರುವ ಈ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಅದು ಕೊಡಲಿರುವ ತೀರ್ಪು ಈಗಿನ ಕುತೂಹಲವಾಗಿದೆ. ಇದೇ ಅಕ್ಟೋಬರ್ 31ಕ್ಕೆ ವಿಚಾರಣೆ ನಡೆಯಲಿದೆ.  

ಇದರ ನಡುವೆ ಬಿಜೆಪಿ ಚುನಾವಣಾ ಬಾಂಡ್ ಮೂಲಕ ಬೇಕಾದಷ್ಟು ಕಾಸು ಮಾಡಿಕೊಳ್ಳುತ್ತಲೇ ಇದೆ. ಇಲ್ಲಿಯವರೆಗೆ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಬಂದ ದುಡ್ಡಿನಲ್ಲಿ ಬಿಜೆಪಿಯದ್ದೇ ಸಿಂಹಪಾಲು. ಚುನಾವಣಾ ಬಾಂಡ್ ಪ್ರಶ್ನಿಸಿ, ಅದು ಬಂದಾಗಲೇ, ಅಂದರೆ 2017ರಲ್ಲಿಯೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ಸಿಪಿಐಎಂ ಮತ್ತಿತರ ದೂರುದಾರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 31ಕ್ಕೆ ನಿಗದಿಪಡಿಸಿದೆ.  

ದೇಶದ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಅಂತಿಮ ವಿಚಾರಣೆಗೆ ದಿನ ನಿಗದಿಪಡಿಸಿತು. ಬರುವ ಲೋಕಸಭೆ ಚುನಾವಣೆಗಾಗಿ ಚುನಾವಣಾ ಬಾಂಡ್ ಯೋಜನೆ ಆರಂಭವಾಗುವ ಮೊದಲೇ ಅರ್ಜಿ ವಿಚಾರಣೆ ನಡೆಸಬೇಕು ಎಂಬ ವಕೀಲ ಪ್ರಶಾಂತ್ ಭೂಷಣ್ ಅವರ ಮನವಿಯನ್ನು ಪೀಠ ಗಮನಕ್ಕೆ ತೆಗೆದುಕೊಂಡಿತು.  

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್, ಈ ವಿಷಯವನ್ನು ಶೀಘ್ರವಾಗಿ ಆಲಿಸುವ ಅಗತ್ಯವನ್ನು ಪ್ರತಿಪಾದಿಸಿ, ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳದ ಕಾರಣ, ವಿಧಾನಸಭೆ ಚುನಾವಣೆಗೆ ಮುನ್ನ ಬಾಂಡ್‌ಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮಧ್ಯಪ್ರವೇಶಿಸಿ, ಚುನಾವಣಾ ಬಾಂಡ್‌ಗಳ ವಿರುದ್ಧದ ಪ್ರಶ್ನೆಗಳಲ್ಲಿ ಒಂದು ವಿಚಾರ  ಅದನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಲಾಗಿದೆ ಎಂಬುದಾಗಿದ್ದು, ಅದು ಏಳು ನ್ಯಾಯಾಧೀಶರ ಪೀಠದ ಮುಂದಿದೆ ಎಂದರು.

ಅದಕ್ಕೆ ಪ್ರಶಾಂತ್ ಭೂಷಣ್, ಮನವಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳಲ್ಲಿ ಹಣಕಾಸು ಮಸೂದೆಯಿಂದ ಹೊರತಾಗಿ ನಿರ್ಧರಿಸಬೇಕಾದ ಇತರ ವಿಷಯಗಳೂ ಇವೆ ಎಂದು ಹೇಳಿದರು. ರಾಜಕೀಯ ಪಕ್ಷಗಳಿಗೆ ಹರಿದುಬರುವ ಅನಾಮಧೇಯ ದೇಣಿಗೆ ನಾಗರಿಕರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದಿಂದ ಕೆಲವು ಪ್ರಯೋಜನಗಳನ್ನು ಪಡೆದ ಕಂಪನಿಗಳು ಆಡಳಿತಾರೂಢ ಪಕ್ಷಗಳಿಗೆ ಹೆಸರು ಬಹಿರಂಗಗೊಳಿಸದೆ ದೇಣಿಗೆ ನೀಡಲು ಅವಕಾಶ ಮಾಡಿಕೊಟ್ಟಿರುವುದು ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಪ್ರಶಾಂತ್ ಭೂಷಣ್ ಅವರು ಎಡಿಆರ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಯಾರೇ ಆದರೂ ಎಷ್ಟೇ ದೊಡ್ಡ ಮೊತ್ತವನ್ನಾದರೂ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ, ಗುಟ್ಟಾಗಿ ದೇಣಿಗೆ ನೀಡಲು ಅವಕಾಶ ಮಾಡಿಕೊಡುವ ಚುನಾವಣಾ ಬಾಂಡ್ ವ್ಯವಸ್ಥೆಯನ್ನು 2017ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತು.

ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳು ನೀಡುವ ದೇಣಿಗೆ ಮೊತ್ತವು 20ಸಾವಿರ ರೂ.ಗಳಿಗಿಂತ ಕಡಿಮೆಯಿದ್ದಲ್ಲಿ ಅಂಥವರ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕಿಲ್ಲ. ಇದಕ್ಕಿಂತ ಹೆಚ್ಚಿನ ಮೊತ್ತವಿದ್ದಲ್ಲಿ ಹೆಸರು ಬಹಿರಂಗಪಡಿಸಬೇಕು. ಆದರೆ, ಹೀಗೆ ಮಾಹಿತಿಯನ್ನೇ ಬಹಿರಂಗಪಡಿಸದೆ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಬೇಕೆನಿಸಿದಷ್ಟು ದೊಡ್ಡ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಲು ಅವಕಾಶ ಮಾಡಿಕೊಟ್ಟಿರುವ ವ್ಯವಸ್ಥೆಯೇ ಚುನಾವಣಾ ಬಾಂಡ್.

2017ರಲ್ಲಿ ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1951 (RPA) ನ ಸೆಕ್ಷನ್ 29ಸಿ ಗೆ ತಿದ್ದುಪಡಿ ತರುವ ಮೂಲಕ, 2017ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಲಾಯಿತು. ಇದು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣವನ್ನು ದೇಣಿಗೆ ನೀಡಲು ಬಳಸುವ ವ್ಯವಸ್ಥೆ. ಇದರ ಮೂಲಕ ದೇಣಿಗೆ ನೀಡಿದರೆ ಖರೀದಿದಾರ ಅಥವಾ ಪಾವತಿಸುವವರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗುವುದಿಲ್ಲ.

10 ಸಾವಿರದಿಂದ ಒಂದು ಕೋಟಿವರೆಗಿನ ಮೌಲ್ಯದಲ್ಲಿ ಈ ಬಾಂಡ್ಗಳು ಲಭ್ಯವಿರುತ್ತವೆ. ಯಾರೂ ಯಾವುದೇ ಪಕ್ಷಕ್ಕೂ ಗುಟ್ಟಾಗಿ ದೇಣಿಗೆ ಕೊಡಲು ಅವಕಾಶವಿರುತ್ತದೆ. ದೇಣಿಗೆ ನೀಡುವವರು ತಮ್ಮ ಆಯ್ಕೆಯ ಪಕ್ಷದ ಪರ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ನಂತರ ದಾನ ಮಾಡಬಹುದು. ಒಬ್ಬ ವ್ಯಕ್ತಿ ಅಥವಾ ಕಂಪನಿಯು ಖರೀದಿಸಬಹುದಾದ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ದೇಣಿಗೆ ನೀಡುವವರ ಮಾಹಿತಿ ಗೌಪ್ಯವಾಗಿರಿಸಲು ಅವಕಾಶವಿರುವುದೇ ಇಲ್ಲಿ ವಿವಾದದ ವಿಚಾರವಾಗಿದೆ. 2017ರ ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಗಳನ್ನು ಬಹಿರಂಗಪಡಿಸುವ ವಿಚಾರದಲ್ಲಿ ವಿನಾಯಿತಿ ನೀಡಿತು.

ಪ್ರತಿವರ್ಷ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸುವ ದೇಣಿಗೆ ವರದಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಯಾರಿಂದ ದೇಣಿಗೆ ಬಂದಿದೆ ಎಂಬುದನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸುವ ಅಗತ್ಯವೇ ಇಲ್ಲ. ಇದರಿಂದ ಯಾವ ವ್ಯಕ್ತಿ, ಕಂಪನಿ, ಅಥವಾ ಸಂಸ್ಥೆ ಯಾವ ಪಕ್ಷಕ್ಕೆ ಹಣ ನೀಡಿದೆ ಮತ್ತು ಎಷ್ಟು ಹಣ ನೀಡುತ್ತಿದೆ ಎಂಬುದು ಜನರಿಗೆ ತಿಳಿಯುವುದಿಲ್ಲ.

ಚುನಾವಣಾ ಬಾಂಡ್‌ಗಳನ್ನು ಪರಿಚಯಿಸುವ ಮೊದಲು, ರಾಜಕೀಯ ಪಕ್ಷಗಳು 20,000 ರೂ. ಗೂ ಹೆಚ್ಚು ದೇಣಿಗೆ ನೀಡುವ ಎಲ್ಲ ದಾನಿಗಳ ವಿವರಗಳನ್ನು ಬಹಿರಂಗಪಡಿಸಬೇಕಾಗಿತ್ತು. ಆದರೆ ತಿದ್ದುಪಡಿ ಬಳಿಕ ನಾಗರಿಕರ ಮಾಹಿತಿ ಹಕ್ಕು ಉಲ್ಲಂಘನೆ ಆಗಿದೆ ಮತ್ತು ರಾಜಕೀಯ ಪಕ್ಷಗಳು ಯಾವ ಮಿತಿಯೂ ಇಲ್ಲದೆ ಹಣ ತೆಗೆದುಕೊಳ್ಳಲು ಅನುಕೂಲಕರವಾಗಿದೆ ಎಂಬುದು ಚುನಾವಣಾ ಬಾಂಡ್ ವಿರುದ್ಧ ಎದ್ದಿರುವ ಮುಖ್ಯ ತಕರಾರು.

ಇದಲ್ಲದೆ, ಚುನಾವಣಾ ಬಾಂಡ್‌ಗಳು ನಾಗರಿಕರಿಗೆ ಯಾವುದೇ ವಿವರಗಳನ್ನು ನೀಡುವುದಿಲ್ಲ. ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ವಿವರಗಳನ್ನು ಪಡೆಯುವ ಅವಕಾಶವೇ ಈ ದೇಶದ ಜನತೆಗೆ ಇಲ್ಲ. ತೆರಿಗೆದಾರರಾಗಿರುವ ಜನರು ಈ ದೇಣಿಗೆಗಳ ಮೂಲ ತಿಳಿದುಕೊಳ್ಳದಂತೆ ಮಾಡಲಾಗಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚಿನ ಮೂಲ ಚುನಾವಣಾ ಬಾಂಡ್‌ಗಳ ದೇಣಿಗೆಯೇ ಆಗಿದೆ ಎಂಬುದು ಚುನಾವಣಾ ಬಾಂಡ್ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸಿರುವ ಎಡಿಆರ್ ವಾದ.

ದೇಣಿಗೆ ನೀಡುವವರ ಅನಾಮಧೇಯತೆ ವಿಚಾರದಲ್ಲಿ ಮತ್ತೂ ಒಂದು ಅಪಾಯಕಾರಿ ಸಂಗತಿಯಿದೆ. ಏನೆಂದರೆ, ದೇಣಿಗೆ ಯಾರಿಂದ ಬಂತೆಂಬುದು ಯಾರಿಗೂ ಗೊತ್ತೇ ಆಗುವುದಿಲ್ಲ ಎಂದುಕೊಂಡರೆ ಅದು ತಪ್ಪು. ಯಾರು ಬಾಂಡ್ ಖರೀದಿಸಿದರು ಮತ್ತು ಆ ಹಣ ಯಾವ ಪಕ್ಷಕ್ಕೆ ಹೋಗುತ್ತದೆ ಎಂಬುದನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನೂ ಸರ್ಕಾರ ತನಗೆ ಬೇಕಾಗಿ ಮಾಡಿಕೊಂಡಿದೆ.

ಅಂದರೆ, ವಿರೋಧ ಪಕ್ಷಕ್ಕೆ ಯಾರು ಎಷ್ಟು ಕೊಟ್ಟರು ಎಂಬುದನ್ನು ಸರ್ಕಾರ ತಿಳಿದುಕೊಳ್ಳಲು ಅವಕಾಶ ಇದೆ. ಮತ್ತು ಅಪಾಯ ಇರುವುದೇ ಇಲ್ಲಿ.

ಈಗ ಚುನಾವಣಾ ಬಾಂಡ್ ವ್ಯವಸ್ಥೆಯಿಂದ ಭರ್ಜರಿಯಾಗಿ ಜೇಬು ತುಂಬಿಸಿಕೊಳ್ಳುತ್ತಿರುವುದು ಆಡಳಿತಾರೂಢ ಬಿಜೆಪಿ. ಮಾರ್ಚ್ 2018 ರಿಂದ 2022 ರವರೆಗೆ ಮಾರಾಟವಾದ ಎಲೆಕ್ಟೋರಲ್ ಬಾಂಡ್ ಗಳಲ್ಲಿ ಒಟ್ಟು ಮೊತ್ತ 9,208 ಕೋಟಿ. ಅದರಲ್ಲಿ ಬಿಜೆಪಿಗೆ ಹೋಗಿದ್ದು 5,270 ಕೋಟಿ ರೂಪಾಯಿ. ಅಂದರೆ ಅರ್ಧಕ್ಕಿಂತ ಹೆಚ್ಚನ್ನು ಬಿಜೆಪಿಯೇ ಬಾಚಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಗೆ ಸಿಕ್ಕಿದ್ದು ಕೇವಲ 964 ಕೋಟಿ ರೂಪಾಯಿ ಅಂದ್ರೆ ಕೇವಲ 10%.

ಹಾಗಾದರೆ ಅದ್ಯಾವ ಪರಿ ಬಿಜೆಪಿ ಈ electoral ಬಾಂಡ್ ಗಳಿಂದ ಹಣ ಬಾಚುತ್ತಿದೆ ಎಂದು ಊಹಿಸಿ ನೋಡಿ. ಆದರೆ, ಇದೇ ವೇಳೆ ತನ್ನ ವಿರೋಧಿ ಪಕ್ಷಗಳ ಜೇಬಿನ ಮೇಲೆಯೂ ಅದು ಕಣ್ಣಿಡುತ್ತದೆ. ಯಾವುದೇ ಉದ್ಯಮಿಗಳು ಕಾಂಗ್ರೆಸ್ ಮತ್ತಿತರ ಪಕ್ಷಗಳಿಗೆ ದೇಣಿಗೆ ಕೊಟ್ಟರೆ, ಅದರ ಬೆನ್ನುಹತ್ತುವ ಸರ್ಕಾರ, ಅಂಥವರನ್ನು ಟಾರ್ಗೆಟ್ ಮಾಡಬಲ್ಲದು.

ತನಗೆ ದೇಣಿಗೆ ನೀಡದೆ, ಬೇರೆಯವರಿಗೆ ನೀಡುವ ಅಂಥವರಿಗೆ ಕಿರುಕುಳ ಕೊಡಬಲ್ಲದು. ಅಂಥವರ ವಿರುದ್ಧ ಐಟಿ ದಾಳಿ, ಇ.ಡಿ ದಾಳಿ, ಸಿಬಿಐ ದಾಳಿಗಳೆಲ್ಲ ಆಗಬಹುದು. ಬಿಜೆಪಿ ಬಳಿ ತನಿಖಾ ಏಜನ್ಸಿಗಳಿವೆ, ಪ್ರಚಾರ ತಂತ್ರಗಾರಿಕೆ ಇದೆ, ಮಡಿಲ ಮೀಡಿಯಾ ಇದೆ, ಹಾಗಾಗಿ ವಿಪಕ್ಷಗಳನ್ನು ಸರ್ಕಾರ ನಿರಾಯಾಸವಾಗಿ ಟಾರ್ಗೆಟ್ ಮಾಡಬಲ್ಲದು.

ಚುನಾವಣಾ ಬಾಂಡ್ ಪ್ರಸ್ತಾವನೆ ಹಂತದಲ್ಲಿಯೇ ಅದನ್ನು ಆರ್ಬಿಐ ಮತ್ತು ಚುನಾವಣಾ ಆಯೋಗ ಕೂಡ ವಿರೋಧಿಸಿದ್ದವು. ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದವು. ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದಿರುವುದರಿಂದ ದೇಣಿಗೆಯ ಮೂಲವೇ ಗೊತ್ತಾಗುವುದಿಲ್ಲ. ಅದು ಕಪ್ಪುಹಣ ವ್ಯವಹಾರಕ್ಕೆ ಉತ್ತೇಜನ ನೀಡಿದಂತೆ ಎಂಬ ಆಕ್ಷೇಪ ಎದ್ದಿತ್ತು.

ರಾಜಕೀಯ ಪಕ್ಷಗಳು ಸಂಗ್ರಹಿಸುವ ಒಟ್ಟು ದೇಣಿಗೆಯಲ್ಲಿ ದೊಡ್ಡ ಮೊತ್ತ ಈ ನಿಗೂಢ ಚುನಾವಣಾ ಬಾಂಡ್ಗಳಿಂದಲೇ ಸಂಗ್ರಹವಾಗುತ್ತದೆ. ಮತ್ತು ಆ ಹಣವೇ ಕುದುರೆ ವ್ಯಾಪಾರಕ್ಕೂ ಬಳಕೆಯಾಗುವುದು ಎಂಬ ಆರೋಪಗಳೂ ಇವೆ. ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್ಗೆ ಸಮವೆಂಬ ವಾದಗಳೂ ಇವೆ. ಇದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ಹೇಳಲಾಗುತ್ತದೆ.

ದೇಣಿಗೆ ನೀಡುವವರ ಈ ಅನಾಮಧೇಯತೆ ಪ್ರಜಾಪ್ರಭುತ್ವಕ್ಕೇ ಮಾರಕವಾಗಲೂಬಹುದು ಎಂಬ ಆತಂಕವೂ ಈ ಎಲ್ಲ ವಾದಗಳ ಹಿಂದಿದೆ. ಅವತ್ತು ಚುನಾವಣಾ ಆಯೋಗವೂ ಸರ್ಕಾರದ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿತ್ತು. ಇವತ್ತು ಚುನಾವಣಾ ಆಯೋಗ ಯಾವ ಹಂತ ಮುಟ್ಟಿದೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ ಆಗ, ಸರ್ಕಾರವನ್ನು ಪ್ರಶ್ನಿಸಬಲ್ಲ ತಾಕತ್ತು ಉಳಿಸಿಕೊಂಡಿದ್ದ ಕಾಲದಲ್ಲಿ ಅದು, ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಅಪಾಯಕಾರಿ ಎಂದಿತ್ತು. ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಿದೆ ಎಂದಿತ್ತು.

ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಇರದಂತೆ ಮಾಡುವ ವ್ಯವಸ್ಥೆ ಇದಾಗಿದೆ ಎಂದು ಸುಪ್ರೀಂ ಕೋರ್ಟ್ಗೂ ಚುನಾವಣಾ ಆಯೋಗ ಹೇಳಿತ್ತು. ತಿದ್ದುಪಡಿ ಮರುಪರಿಶೀಲಿಸುವುದಕ್ಕೆ ಸರ್ಕಾರಕ್ಕೂ ಪತ್ರ ಬರೆದಿತ್ತು. ಎಲ್ಲ ಬಗೆಯಿಂದಲೂ ವಿಪಕ್ಷಗಳಿಗೆ ನಷ್ಟ ಉಂಟುಮಾಡುವ, ಎಲ್ಲ ಹಣವೂ ಆಡಳಿತ ಪಕ್ಷದ ಜೇಬು ಸೇರುವುದಕ್ಕೆ ದಾರಿ ಮಾಡಿಕೊಡುವ, ಚುನಾವಣೆಯಲ್ಲಿ ಪಾರದರ್ಶಕತೆ ಇಲ್ಲವಾಗಿಸುವ, ಪ್ರಜಾತಂತ್ರಕ್ಕೆ ಮಾರಕವಾದ ಚುನಾವಣಾ ಬಾಂಡ್ ವಿರುದ್ಧ ಪ್ರಶ್ನೆಯೆತ್ತಲೇಬೇಕಿತ್ತು, ಮತ್ತು ಅಂಥ ಪ್ರಶ್ನೆಗಳನ್ನು ಈಗ ಸುಪ್ರೀಂ ಕೋರ್ಟ್ ಮುಂದೆ ಇಡಲಾಗಿದೆ.

ಇವತ್ತು ಬಿಜೆಪಿಯಿದೆ. ದುಡ್ಡು ಅದರ ಖಜಾನೆಗೆ ಹರಿದುಬರುತ್ತಿದೆ. ನಾಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಹಣ ಅದರ ಜೇಬು ಸೇರುತ್ತದೆ. ವ್ಯವಸ್ಥೆಯಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ನರಳುವುದು ಪ್ರಜಾತಂತ್ರ ಮಾತ್ರ. ಚುನಾವಣೆಗಳು ಆಳುವವರ ಆದೇಶದಂತೆ ನಡೆಯುವ ಸ್ಥಿತಿ ತಲೆದೋರಿರುವ ಹೊತ್ತಿನಲ್ಲಿ, ದುಡ್ಡಿನ ಬಲದ ರಾಜಕಾರಣ ಮಾತ್ರ ಅವ್ಯಾಹತವಾಗಿರುವ ಹೊತ್ತಿನಲ್ಲಿ, ಎಲ್ಲೆಲ್ಲೂ ಕುರುಡು ಕಾಂಚಾಣವೇ ಕುಣಿಯುತ್ತಿರುವ ಹೊತ್ತಿನಲ್ಲಿ ಚುನಾವಣಾ ಬಾಂಡ್ ಮೂಲಕ ಆಗಬಹುದಾದ ಅನಾಹುತ ಎಂಥದು ಎಂಬುದನ್ನು ಗ್ರಹಿಸುವುದು ಕಷ್ಟವಲ್ಲ. ಹಾಗಾಗಿಯೇ ಅದನ್ನು ವಿರೋಧಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ, ಈಗ ಸುಪ್ರೀಂ ಕೊರ್ಟ್ನಲ್ಲಿ ಅದು ವಿಚಾರಣೆಗೆ ಬರಲಿರುವುದು ಕುತೂಹಲ ಹುಟ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News