ದಲಿತ ವಿರೋಧಿ ಆದಿತ್ಯನಾಥ್ ಸರಕಾರ ಭೂ ಪಟ್ಟಾ ನೀಡುತ್ತದೆ ಎಂದರೆ ನಂಬುವ ಮಾತೇ?
ಕಳೆದ 6 ವರ್ಷಗಳ ದಾಖಲೆಯನ್ನು ನೋಡಿದರೆ, ಇಲ್ಲಿಯವರೆಗಿನ ಎಲ್ಲ ಸರಕಾರಗಳಿಗಿಂತ ಅತಿ ಹೆಚ್ಚು ದಲಿತ ವಿರೋಧಿಯಾಗಿರುವುದು ಆದಿತ್ಯನಾಥ್ ಸರಕಾರ. ಈ ಅವಧಿಯಲ್ಲಿ ದಲಿತರ ಮೇಲೆ ಹೆಚ್ಚಿನ ದೌರ್ಜನ್ಯಗಳು, ಹಾಥರಸ್ ಘಟನೆ ಮತ್ತು ಉಭಾ ಘಟನೆಗಳು ನಡೆದವು. ದಲಿತರಿಗೆ ಭೂ ಮಂಜೂರಾತಿಯಲ್ಲಿ ಅದು ಮಾಡಿರುವುದೂ ಅಷ್ಟರಲ್ಲೇ ಇದೆ. ಇಲ್ಲಿಯವರೆಗೆ ಆದಿತ್ಯನಾಥ್ ಸರಕಾರವು ದಲಿತರಿಗೆ ಭೂಮಿಯನ್ನು ಮಂಜೂರು ಮಾಡುವ ಬದಲು ಅವರಿಂದ ಭೂಮಿಯನ್ನು ಕಸಿದುಕೊಂಡಿದ್ದೇ ಹೆಚ್ಚು.
ಕಳೆದ ಹಲವು ತಿಂಗಳುಗಳಿಂದ ಉತ್ತರ ಪ್ರದೇಶದ ವಿವಿಧ ವಿಭಾಗಗಳಲ್ಲಿ ದಲಿತರನ್ನು ಓಲೈಸಲು ಆದಿತ್ಯನಾಥ್ ಸರಕಾರ ಸಭೆಗಳನ್ನು ಆಯೋಜಿಸುತ್ತಿದೆ ಮತ್ತು ಘೋಷಣೆಗಳನ್ನು ಮಾಡುತ್ತಿದೆ. ಇತ್ತೀಚೆಗೆ, ನವೆಂಬರ್ 3ರಂದು, ಗೋರಖ್‌ಪುರದಲ್ಲಿ ಪರಿಶಿಷ್ಟ ಜಾತಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಉತ್ತರ ಪ್ರದೇಶ ಸರಕಾರವು ಡಿಸೆಂಬರ್‌ನೊಳಗೆ ರಾಜ್ಯದ 1.25 ಕೋಟಿ ದಲಿತರಿಗೆ ಭೂ ಪಟ್ಟಾ ನೀಡಲಿದೆ ಎಂದು ಆದಿತ್ಯನಾಥ್ ಘೋಷಿಸಿದರು. ಅವರ ಭರವಸೆ ಕೇವಲ ಚುನಾವಣಾ ಭರವಸೆಯಂತೆ ಕಾಣುತ್ತದೆ. ಇದೇ ಗೋರಖ್‌ಪುರದಲ್ಲಿ ಕಳೆದ ತಿಂಗಳು ಅಕ್ಟೋಬರ್ 10ರಂದು ಕಮಿಷನರ್ ಕಚೇರಿಯಲ್ಲಿ ದಲಿತ ಮಹಿಳೆಯರು ಒಂದು ಎಕರೆ ಭೂಮಿಗೆ ಆಗ್ರಹಿಸಿ ನಡೆಸಿದ ಶಾಂತಿಯುತ ಪ್ರತಿಭಟನೆಯನ್ನು ಅಕ್ರಮ ಎಂದು ಘೋಷಿಸಿ 13 ಜನರ ಮೇಲೆ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಯಿತು ಮತ್ತು 10-15 ಆರೋಪಿಗಳನ್ನು ಅಪರಿಚಿತ ಆರೋಪಿಗಳನ್ನಾಗಿ ಮಾಡಲಾಯಿತು. ಅನುಮತಿಯಿಲ್ಲದೆ ಸಭೆ ನಡೆಸಿದ್ದು, ಸೆಕ್ಷನ್ 144 ಉಲ್ಲಂಘಿಸಿ, ಸರಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿ, ಗಾಯಗೊಳಿಸಿ ಬೆದರಿಸಿ, ಸರಕಾರಿ ಆಸ್ತಿ ಹಾನಿ, ಪಿತೂರಿ, ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಯಿತು. ಅಷ್ಟೇ ಅಲ್ಲ, ನಂತರ ಜಾಮೀನು ಸಿಗದಂತೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿ ಎಲ್ಲರನ್ನೂ ರಾಜಕೀಯ ಕೈದಿಗಳ ಬದಲಿಗೆ ಅಪರಾಧಿಗಳೆಂದು ಪರಿಗಣಿಸಲಾಯಿತು ಮತ್ತು ಸಾಮಾನ್ಯ ಅಪರಾಧಿಗಳೊಂದಿಗೆ ಬ್ಯಾರಕ್‌ಗಳಲ್ಲಿ ಇರಿಸಲಾಯಿತು. ಅಂತಿಮವಾಗಿ, ಮೂರು ವಾರಗಳ ನಂತರ ಜಾಮೀನಿನ ಮೇಲೆ ಎಲ್ಲರೂ ಜೈಲಿನಿಂದ ಹೊರಬಂದರು. ದಲಿತರಿಗೆ ಭೂಮಿ ಗುತ್ತಿಗೆ ನೀಡಲು ಆದಿತ್ಯನಾಥ್ ಸರಕಾರ ಎಷ್ಟು ಬದ್ಧವಾಗಿದೆ ಎಂಬುದನ್ನು ಈ ಘಟನೆಯಿಂದಲೇ ಊಹಿಸಬಹುದು.
ಇಷ್ಟೇ ಅಲ್ಲ, ಕಳೆದ 6 ವರ್ಷಗಳ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗಿನ ಎಲ್ಲ ಸರಕಾರಗಳಿಗಿಂತ ಅತಿ ಹೆಚ್ಚು ದಲಿತ ವಿರೋಧಿಯಾಗಿರುವುದು ಆದಿತ್ಯನಾಥ್ ಸರಕಾರ. ಈ ಅವಧಿಯಲ್ಲಿ ದಲಿತರ ಮೇಲೆ ಹೆಚ್ಚಿನ ದೌರ್ಜನ್ಯಗಳು, ಹಾಥರಸ್ ಘಟನೆ ಮತ್ತು ಉಭಾ ಘಟನೆಗಳು ನಡೆದವು. ದಲಿತರಿಗೆ ಭೂ ಮಂಜೂರಾತಿಯಲ್ಲಿ ಅದು ಮಾಡಿರುವುದೇನು ಎಂದು ನೋಡಿಕೊಂಡರೆ, ಹೇಳಿಕೊಳ್ಳುವಂಥದ್ದೇನೂ ಇಲ್ಲ. ಇಲ್ಲಿಯವರೆಗೆ ಆದಿತ್ಯನಾಥ್ ಸರಕಾರವು ದಲಿತರಿಗೆ ಭೂಮಿಯನ್ನು ಮಂಜೂರು ಮಾಡುವ ಬದಲು ಅವರಿಂದ ಭೂಮಿಯನ್ನು ಕಸಿದುಕೊಂಡಿದೆ ಎಂದು ಈ ಕೆಳಗಿನ ವಿವರಗಳಿಂದ ಸ್ಪಷ್ಟವಾಗುತ್ತದೆ:
1. ದಲಿತರು ಮತ್ತು ಆದಿವಾಸಿಗಳನ್ನು ಅವರ ಭೂಮಿಯಿಂದ ಹೊರಹಾಕುವುದು
2017ರ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಬಂದರೆ ಎಲ್ಲಾ ಅಕ್ರಮ ಭೂ ಒತ್ತುವರಿಯನ್ನು (ಗ್ರಾಮ ಸಭೆ ಮತ್ತು ಅರಣ್ಯ ಭೂಮಿ) ತೆರವು ಮಾಡಲಾಗುವುದು ಎಂದು ಹೇಳಿಕೊಂಡಿತ್ತೆಂಬುದು ಎಲ್ಲರಿಗೂ ತಿಳಿದೇ ಇದೆ. ಮಾರ್ಚ್ 2017ರಲ್ಲಿ ಸರಕಾರ ರಚಿಸಿದ ನಂತರ, ಆದಿತ್ಯನಾಥ್ ಸರಕಾರವು ತಕ್ಷಣವೇ ಈ ಬಗ್ಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಮತ್ತು ಇದನ್ನು ಅನುಸರಿಸಿ, ಜಮೀನು ಹೊಂದಿರುವ ಆದರೆ ಅವರ ಹೆಸರಿನಲ್ಲಿ ಪಟ್ಟಾ ಹೊಂದಿರದ ಜನರನ್ನು ಗ್ರಾಮ ಸಮುದಾಯ ಭೂಮಿ ಮತ್ತು ಅರಣ್ಯ ಭೂಮಿಯಿಂದ ಹೊರಹಾಕಲು ಪ್ರಾರಂಭಿಸಿತು. ಇದರಲ್ಲಿ ಹೆಚ್ಚಿನವರು ದಲಿತರು ಮತ್ತು ಆದಿವಾಸಿಗಳೇ ಇದ್ದರು. ಈ ಆದೇಶದ ಪ್ರಕಾರ, 13 ಜಿಲ್ಲೆಗಳಿಂದ 74,701 ತಿರಸ್ಕೃತ ಅರಣ್ಯ ಹಕ್ಕುದಾರರನ್ನು ಸಹ ಹೊರಹಾಕಬೇಕು. ಆದಿತ್ಯನಾಥ್ ಸರಕಾರವು ಉಚ್ಚಾಟನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದಾಗ, ಆಲ್ ಇಂಡಿಯಾ ಪೀಪಲ್ಸ್ ಫ್ರಂಟ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಉಚ್ಚಾಟನೆ ಪ್ರಕ್ರಿಯೆಗಳನ್ನು ನಿಲ್ಲಿಸಲು ಮತ್ತು ಎಲ್ಲಾ ಹಕ್ಕುಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡುವ ಮೂಲಕ ಪ್ರತಿಭಟಿಸಿತು. ಅದರ ಕೋರಿಕೆಯ ಮೇರೆಗೆ, ಅಲಹಾಬಾದ್ ಹೈಕೋರ್ಟ್ ಉಚ್ಚಾಟನೆ ಪ್ರಕ್ರಿಯೆಗೆ ತಡೆ ನೀಡಲು ಒಂದು ತಿಂಗಳ ಕಾಲಾವಕಾಶವನ್ನು ನೀಡಿತು. ಎಲ್ಲಾ ಹಕ್ಕುದಾರರು ತಮ್ಮ ಕೈತಪ್ಪಿದ ಹಕ್ಕುಗಳ ಬಗ್ಗೆ ಹೇಳಿಕೊಳ್ಳಲು ಮತ್ತು ಹಳೆಯ ಹಕ್ಕುಗಳ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ, ಮೂರು ತಿಂಗಳೊಳಗೆ ಅವೆಲ್ಲವನ್ನೂ ಮರುಪರಿಶೀಲಿಸಲು ಮತ್ತು ವಿಲೇವಾರಿ ಮಾಡಲು ಸರಕಾರಕ್ಕೆ ಸೂಚಿಸಿತು. ಆದರೆ ಹೇಳಿದ ಅವಧಿ ಮುಗಿದರೂ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಆದಿತ್ಯನಾಥ್ ಸರಕಾರದ ದಲಿತ ಪ್ರೀತಿ ಎಂಥದು ಎಂಬುದನ್ನು ತೋರಿಸುತ್ತದೆ.
ಕೆಲವು ವರ್ಷಗಳ ಹಿಂದೆ, ಅರಣ್ಯ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಭಾರತೀಯ ವನ್ಯಜೀವಿ ಟ್ರಸ್ಟ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ತಿರಸ್ಕರಿಸಿದ ಹಕ್ಕುಗಳಿಗೆ ಸಂಬಂಧಿಸಿದ ಭೂಮಿಯನ್ನು ತೆರವು ಮಾಡಲು ಎಲ್ಲಾ ರಾಜ್ಯ ಸರಕಾರಗಳಿಗೆ ಆದೇಶ ನೀಡುವಂತೆ ವಿನಂತಿಸಿತು. ಮೋದಿ ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ಆದಿವಾಸಿಗಳು/ಅರಣ್ಯವಾಸಿಗಳ ಪರವಾಗಿ ವಾದ ಮಂಡಿಸಲಿಲ್ಲ. ಪರಿಣಾಮವಾಗಿ, ಸುಪ್ರೀಂ ಕೋರ್ಟ್, 2019ರ ಫೆಬ್ರವರಿ 2ರಂದು, ಎಲ್ಲಾ ತಿರಸ್ಕರಿಸಿದ ಅರಣ್ಯ ಹಕ್ಕುಗಳ ಭೂಮಿಯನ್ನು 2019ರ ಜುಲೈ 24ರೊಳಗೆ ಖಾಲಿ ಮಾಡುವಂತೆ ಆದೇಶಿಸಿತು. ಇಡೀ ದೇಶದಲ್ಲಿ ಇದರಿಂದ ಸಂತ್ರಸ್ತರಾದ ಕುಟುಂಬಗಳ ಸಂಖ್ಯೆ 20 ಲಕ್ಷ. ಅದರಲ್ಲಿ 74,701 ಕುಟುಂಬಗಳು ಉತ್ತರ ಪ್ರದೇಶದವೇ ಆಗಿವೆ. ಈ ಆದೇಶದ ವಿರುದ್ಧ, ಮತ್ತೊಮ್ಮೆ ಆದಿವಾಸಿ ವನವಾಸಿ ಮಹಾಸಭಾದ ಮೂಲಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು. ಅದರಲ್ಲಿ ಉಚ್ಚಾಟನೆ ಆದೇಶವನ್ನು ತಡೆಹಿಡಿಯಲು ಮತ್ತು ಎಲ್ಲಾ ಹಕ್ಕುಗಳನ್ನು ಮರುಪರಿಶೀಲಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಲು ವಿನಂತಿಸಲಾಯಿತು. ಸುಪ್ರೀಂ ಕೋರ್ಟ್ ಮನವಿಯನ್ನು ಸ್ವೀಕರಿಸಿ, 2019ರ ಜುಲೈ 10ರವರೆಗೆ ಉಚ್ಚಾಟನೆಗೆ ತಡೆಯಾಜ್ಞೆ ನೀಡಿತು ಮತ್ತು ಎಲ್ಲಾ ರಾಜ್ಯಗಳಿಗೆ ಎಲ್ಲಾ ಹಕ್ಕುಗಳ ಮರು ವಿಚಾರಣೆಗೆ ಆದೇಶಿಸಿತು. ಆದರೆ 4 ವರ್ಷಗಳು ಕಳೆದರೂ ಈ ಬಗ್ಗೆ ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಲಕ್ಷಾಂತರ ದಲಿತರು, ಆದಿವಾಸಿಗಳು ಮತ್ತು ಅರಣ್ಯವಾಸಿಗಳ ಮೇಲೆ ಅತಂತ್ರತೆಯ ಕತ್ತಿ ತೂಗಾಡುತ್ತಿದೆ.
2. ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ದಲಿತರ ಜಮೀನು ಮಾರಾಟಕ್ಕೆ ಆದೇಶ
ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರವು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜಮೀನು ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಈಗ ಎಸ್‌ಸಿ/ಎಸ್‌ಟಿ ಜಮೀನು ಖರೀದಿಸುವ ಮೊದಲು ಜಿಲ್ಲೆಯ ಜಿಲ್ಲಾಧಿಕಾರಿಯ ಅನುಮತಿ ಪಡೆಯುವ ಅಗತ್ಯವಿಲ್ಲ. ಯುಪಿ ಸರಕಾರವು ಟೌನ್‌ಶಿಪ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹಿಂದೆ, ಎಸ್‌ಸಿ/ಎಸ್‌ಟಿ ಭೂ ಕಾಯ್ದೆಯ ಪ್ರಕಾರ, ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ವ್ಯಕ್ತಿ ಮಾತ್ರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯ ಭೂಮಿಯನ್ನು ಖರೀದಿಸಬಹುದಾಗಿತ್ತು. ಇದಕ್ಕಾಗಿ ದಲಿತೇತರರು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಿತ್ತು. ಆದರೆ ಈಗ ಯುಪಿ ಸರಕಾರ ಅದಕ್ಕೆ ತಿದ್ದುಪಡಿ ತಂದಿದೆ. ಜಿಲ್ಲಾಧಿಕಾರಿಯ ಅನುಮತಿಯಿಲ್ಲದೆ ಜನರು ಈಗ ಎಸ್‌ಸಿ/ಎಸ್‌ಟಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಬಲವುಳ್ಳವರು ಬೆದರಿಸಿ ಅಥವಾ ಒಕ್ಕಲೆಬ್ಬಿಸಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಸುಲಭವಾಗಿದೆ.
3. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಮಾಣ ರಾಷ್ಟ್ರೀಯ ದರಕ್ಕಿಂತ ಹೆಚ್ಚು:
ಎನ್‌ಸಿಆರ್‌ಬಿ ನೀಡಿದ 2020ರ ಅಪರಾಧ ಅಂಕಿಅಂಶಗಳು ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿನ ಅಪರಾಧ ಪ್ರಮಾಣಕ್ಕಿಂತ ಹೆಚ್ಚು ಎಂದು ತೋರಿಸುತ್ತವೆ. ಉತ್ತರ ಪ್ರದೇಶದಲ್ಲಿ ದಲಿತರ ಜನಸಂಖ್ಯೆಯು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.21ರಷ್ಟಿದೆ ಎಂದು ತಿಳಿದಿದೆ. ಆದರೆ ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯದ ಅಪರಾಧವು ರಾಷ್ಟ್ರೀಯ ದರ (1 ಲಕ್ಷ ಜನಸಂಖ್ಯೆಗೆ) 25.4ಕ್ಕೆ ಹೋಲಿಸಿದರೆ 30.7 ಆಗಿದೆ. ಅಂದಹಾಗೆ, ಉತ್ತರ ಪ್ರದೇಶದಲ್ಲಿ ದಲಿತರ ವಿರುದ್ಧ ನಡೆದ ಒಟ್ಟು ಅಪರಾಧವು ರಾಷ್ಟ್ರಮಟ್ಟದಲ್ಲಿ ದಲಿತರ ವಿರುದ್ಧ ನಡೆದ ಒಟ್ಟು ಅಪರಾಧದ ಶೇ.25.3 ಎಂದು ವರದಿಗಳಿವೆ. ಅಂದರೆ ಇದು ದೇಶದಲ್ಲಿ ದಲಿತರ ವಿರುದ್ಧ ನಡೆದ ಅಪರಾಧಗಳ ನಾಲ್ಕನೇ ಒಂದು ಭಾಗವಾಗಿದೆ.
ದಲಿತರ ಮೇಲಿನ ದೌರ್ಜನ್ಯ/ಅಪರಾಧಗಳ ದತ್ತಾಂಶಗಳ ವಿಶ್ಲೇಷಣೆಯಿಂದ ಸ್ಪಷ್ಟವಾಗಿ ಗೊತ್ತಾಗುವುದೇನೆಂದರೆ, ಉತ್ತರ ಪ್ರದೇಶದಲ್ಲಿ ದಲಿತರು ಮತ್ತು ದಲಿತ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ ದಲಿತರ ವಿರುದ್ಧದ ಅಪರಾಧಗಳ ಪ್ರಮಾಣಕ್ಕಿಂತ ಹೆಚ್ಚು. ಇದರೊಂದಿಗೆ ಆದಿತ್ಯನಾಥ್ ಸರಕಾರವು ಅಪರಾಧ ನಿಯಂತ್ರಣದ ಕುರಿತು ಹೇಳುತ್ತಿರುವುದು ಸುಳ್ಳಾಗುತ್ತದೆ. ಸರಕಾರದ ಅಂಕಿಅಂಶಗಳು ಸರಿಯಾದ ಚಿತ್ರವನ್ನು ಕೊಡುವುದಿಲ್ಲ. ಏಕೆಂದರೆ ಅಪರಾಧಗಳಿಗೆ ಬಲಿಯಾದ ಅನೇಕರು ಪೊಲೀಸ್ ಠಾಣೆಗೆ ಹೋಗುವುದಿಲ್ಲ ಅಥವಾ ಅವರು ಹೋದರೂ ಅಪರಾಧಗಳು ದಾಖಲಾಗುವುದಿಲ್ಲ ಎಂಬುದು ಕೂಡ ಗೊತ್ತಿರುವ ವಿಚಾರವೇ ಆಗಿದೆ. ಇದಕ್ಕೆ ಪೊಲೀಸರ ದಲಿತ ವಿರೋಧಿ ಧೋರಣೆಯೂ ಅಡ್ಡಿಯಾಗಿದೆ. ಆದರೆ ಇದರ ಹೊರತಾಗಿಯೂ ಸರಕಾರ ಪ್ರಕಟಿಸಿರುವ ಅಂಕಿ-ಅಂಶಗಳು ಉತ್ತರ ಪ್ರದೇಶದಲ್ಲಿ ದಲಿತರ ದಯನೀಯ ಸ್ಥಿತಿಯನ್ನು ತೋರಿಸುತ್ತಿದ್ದು, ಆದಿತ್ಯನಾಥ್ ಸರಕಾರ ದಲಿತ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ.
ದಲಿತರ ಬಗ್ಗೆ ಯೋಗಿ ಸರಕಾರದ ಸಂವೇದನಾಶೀಲತೆ ಯಾವ ಬಗೆಯದ್ದು ಎಂಬುದಕ್ಕೆ ದೊಡ್ಡ ಉದಾಹರಣೆಯೆಂದರೆ ಹಾಥರಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ದಲಿತ ಹುಡುಗಿಯನ್ನು ಆಕೆಯ ಕುಟುಂಬದ ಅನುಮತಿಯಿಲ್ಲದೆ ರಾತ್ರೋ ರಾತ್ರಿ ಸುಟ್ಟುಹಾಕಿದ್ದು.
ಅಂತೆಯೇ ಸೋನ್‌ಭದ್ರಾ ಜಿಲ್ಲೆಯ ಉಭಾ ಗ್ರಾಮದಲ್ಲಿ 10 ಬುಡಕಟ್ಟು ಜನಾಂಗದವರ ಭೂಮಿಯನ್ನು ರೌಡಿಗಳು ಕಬಳಿಸಲು ಸರಕಾರವೇ ಶಾಮೀಲಾಗಿತ್ತು ಎಂಬುದು ಆದಿತ್ಯನಾಥ್ ಸರಕಾರವು ಆದಿವಾಸಿಗಳ ಬಗೆಗೆ ಹೊಂದಿರುವ ಧೋರಣೆಗೆ ಮತ್ತೂ ಒಂದು ಉದಾಹರಣೆ.
ಡಿಸೆಂಬರ್‌ನೊಳಗೆ 1.25 ಕೋಟಿ ಪಟ್ಟಾಗಳನ್ನು ವಿತರಿಸುವುದಾಗಿ ಆದಿತ್ಯನಾಥ್ ಸರಕಾರ ಘೋಷಿಸಿರುವುದು ಕೇವಲ ಬೊಗಳೆ ಮತ್ತು ಮುಂಬರುವ ಚುನಾವಣೆಯನ್ನು ಎದುರಿಸಲೆಂದೇ ಹೂಡಿರುವ ತಂತ್ರ ಎಂಬುದು ಮೇಲಿನ ವಿವರಗಳಿಂದ ಸ್ಪಷ್ಟವಾಗಿದೆ. ಆದರೆ ದಲಿತರು ಮತ್ತು ಆದಿವಾಸಿಗಳು ಈ ಮೋಸಕ್ಕೆ ಬಲಿಯಾಗಲಾರರು. ಭೂ ಮಂಜೂರಾತಿಗೆ ಆಗ್ರಹಿಸಿ ಅವರು ಆರಂಭಿಸಿರುವ ಆಂದೋಲನ ನಿಲ್ಲುತ್ತಿಲ್ಲ. ಅದು ಶೀಘ್ರವೇ ವ್ಯಾಪಕವಾಗಬಹುದು. ಆಲ್ ಇಂಡಿಯಾ ಪೀಪಲ್ಸ್ ಫ್ರಂಟ್ ಈ ಆಂದೋಲನಕ್ಕೆ ಸಂಬಂಧಿಸಿದ ಸಂಘಟನೆಗಳು ಮತ್ತು ಪಕ್ಷಗಳನ್ನು ಸಂಪರ್ಕಿಸಿ ಅವರನ್ನು ಒಂದು ವೇದಿಕೆಗೆ ತರಲು ಪ್ರಯತ್ನಿಸುತ್ತಿದೆ. ಆಲ್ ಇಂಡಿಯಾ ಪೀಪಲ್ಸ್ ಫ್ರಂಟ್ ಯಾವಾಗಲೂ ತನ್ನ ಕಾರ್ಯಸೂಚಿಯಲ್ಲಿ ಭೂಸುಧಾರಣೆಗಳು ಮತ್ತು ಭೂ ಹಂಚಿಕೆಗೆ ಪ್ರಮುಖ ಸ್ಥಾನವನ್ನು ನೀಡಿದೆ ಮತ್ತು ಅದಕ್ಕಾಗಿ ಹೋರಾಡಿದೆ. ಉತ್ತರ ಪ್ರದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕಾಗಿ 2024ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಸೂಚಿಯಲ್ಲಿ ಭೂಸುಧಾರಣೆ ಮತ್ತು ಭೂ ಹಂಚಿಕೆಯನ್ನು ಸೇರಿಸಬೇಕಿದೆ. ಎಲ್ಲಾ ದಲಿತ/ಬುಡಕಟ್ಟು ಸ್ನೇಹಿ ಸಂಘಟನೆಗಳು ಮತ್ತು ದಲಿತ/ದಲಿತೇತರ ರಾಜಕೀಯ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕಿದೆ.
(ಕೃಪೆ:countercurrents.org)