20 ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ನೇಮಕ: ಅನುಮೋದನೆ ನಿರಾಕರಿಸಿದ ಆರ್ಥಿಕ ಇಲಾಖೆ
ಬೆಂಗಳೂರು, ಅ.5: ರಾಜ್ಯದ ಅಡ್ವೋಕೇಟ್ ಜನರಲ್ ಅವರ ಕಚೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್‌ರ ಅನುಮೋದನೆಯಿಲ್ಲದೆಯೇ ಹೊಸದಾಗಿ ಕಾನೂನು ಅಧಿಕಾರಿಗಳ ಹುದ್ದೆಗಳನ್ನು ಸೃಜಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದ ಅಡ್ವೊಕೇಟ್ ಜನರಲ್ ಕಚೇರಿಗೆ 20 ಜನ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ನೇಮಕ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಅನುಮೋದನೆಯಿಲ್ಲದೆಯೇ ಕಾನೂನು ಅಧಿಕಾರಿಗಳನ್ನು ಸೃಜಿಸಿರುವುದು ಮುನ್ನೆಲೆಗೆ ಬಂದಿದೆ.
ಅನುಮೋದನೆಯಿಲ್ಲದೆಯೇ ಕಾನೂನು ಅಧಿಕಾರಿಗಳ ಹುದ್ದೆ ಸೃಜಿಸಿದ್ದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಆರ್ಥಿಕ ಇಲಾಖೆಯಿಂದ ಘಟನೋತ್ತರ ಅನುಮೋದನೆ ಕೋರಿತ್ತು. ಈ ಸಂಬಂಧ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಅನುಮೋದನೆ ಪಡೆದು ನಂತರ ಪರಿಶೀಲನೆಗೆ ಸಲ್ಲಿಸಿ ಎಂದು ಕಡತವನ್ನು (ಸಂಖ್ಯೆ; ಆಇ 315 ವೆಚ್ಚ-10/2023 (ಇ) No LAW 20 LAG 023 (E) ಹಿಂದಿರುಗಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆ ಯು ಬರೆದಿರುವ ಪತ್ರವು "the-file.in'ಗೆ ಲಭ್ಯವಾಗಿದೆ.
ಆರ್ಥಿಕ ಇಲಾಖೆಯ ಪತ್ರದಲ್ಲೇನಿದೆ?
ಕಾನೂನು ಅಧಿಕಾರಿಗಳ ಹುದ್ದೆಗಳನ್ನು ಹೊಸದಾಗಿ ಸೃಜಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡುವ ಪ್ರಸ್ತಾವವನ್ನು ಪರಿಶೀಲಿಸಲಾಗಿದೆ. ಅಡ್ವೊಕೇಟ್ ಜನರಲ್ ಅವರ ಕಚೇರಿಗೆ 04 ಕಾನೂನು ಅಧಿಕಾರಿಗಳ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವಕ್ಕೆ ಮೊದಲಿಗೆ ಕಾನೂನು ಸಚಿವರ ಹಾಗೂ ಮುಖ್ಯಮಂತ್ರಿಯ ಅನುಮೋದನೆ ಪಡೆದು ನಂತರ ಪ್ರಸ್ತಾವವನ್ನು ಆರ್ಥಿಕ ಇಲಾಖೆಯ ಪರಿಶೀಲನೆಗೆ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯು 2023ರ ಸೆ.12ರಂದು ಕಡತ ಹಿಂದಿರಿಗಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಮೊದಲು ಒಬ್ಬರು ಇಬ್ಬರು ಅಥವಾ ಮೂವರು ಇಲ್ಲವೇ 5 ಜನ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ನೇಮಕ ಮಾಡುವ ಪರಿಪಾಠ ಜಾರಿಯಲ್ಲಿತ್ತು. ಆದರೆ, ರಾಜ್ಯ ಕಾಂಗ್ರೆಸ್ ಸರಕಾರವು 20 ಜನ (15 ಜನ ಹೈಕೋರ್ಟ್, 5 ಜನ ಸುಪ್ರೀಂ ಕೋರ್ಟ್) ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳನ್ನು ನೇಮಿಸಿತ್ತು. ಇದು ನ್ಯಾಯಾಂಗದ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು.
ಕರ್ನಾಟಕದ ಅಡ್ವೊಕೇಟ್ ಜನರಲ್ ಅವರು ಎಲ್ಲ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರವನ್ನು ಹೊಂದಿದ್ದಾರೆ. ಏಕೆಂದರೆ ಅವರು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರಿಗೆ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಮಾಡಬಹುದು. ಹೆಚ್ಚುವರಿ ಅಡ್ವೊಕೇಟ್ ಜನರಲ್ ಸರಕಾರಿ ವಕೀಲರು, ರಾಜ್ಯ ಸಾರ್ವಜನಿಕ ಅಭಿಯೋಜಕರು, ಹೆಚ್ಚುವರಿ ರಾಜ್ಯ ಸರಕಾರಿ ಅಭಿಯೋಜಕರು, ಹೆಚ್ಚುವರಿ ಸರಕಾರಿ ವಕೀಲರು ಮತ್ತು ಹೈಕೋರ್ಟ್ ಸರಕಾರಿ ವಕೀಲರಂತಹ ಕಾನೂನು ಅಧಿಕಾರಿಗಳ ತಂಡವನ್ನು ಒಳಗೊಂಡಿದೆ.
ಹರ್ಯಾಣದಲ್ಲಿ ಕಾನೂನು ಅಧಿಕಾರಿಗಳ ಆಯ್ಕೆಯಲ್ಲಿನ ಸ್ವಜನಪಕ್ಷಪಾತ ಮತ್ತು ಅಕ್ರಮಗಳ ವಿರುದ್ಧ ವಿವರವಾದ ದೂರನ್ನು ಸಲ್ಲಿಸಲಾಗಿತ್ತು. ಆದರೆ, ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನರೈನ್‌ಘರ್‌ನ ಗುರುದೇವ್ ಸಿಂಗ್ ಮನವಿ ಸಲ್ಲಿಸಿದ್ದರು. ಸಲ್ಲಿಸಿದ ಮನವಿಯಲ್ಲಿ ನ್ಯಾಯಮೂರ್ತಿ ವಿನೋದ್ ಎಸ್.ಭಾರದ್ವಾಜ್ ಅವರಲ್ಲಿ ಹೈಕೋರ್ಟ್ ಜನವರಿ 24 ರೊಳಗೆ ಪ್ರತಿಕ್ರಿಯೆ ಕೇಳಿತ್ತು.
ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮಗಳು/ಸ್ವಜನಪಕ್ಷಪಾತದ ಆರೋಪದ ಕುರಿತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (ಎಚ್‌ಸಿ) ಕೇಂದ್ರ ಮತ್ತು ಹರಿಯಾಣ ಸರಕಾರದಿಂದ ಪ್ರತಿಕ್ರಿಯೆ ಕೇಳಿರುವುದನ್ನು ಸ್ಮರಿಸಬಹುದು.