ಜೆಡಿಎಸ್ ಇಂದಿನ ಸ್ಥಿತಿಗೆ ಮುಸ್ಲಿಮರು ಕಾರಣವೇ?

ಜಾತ್ಯತೀತ ಮನಸ್ಥಿತಿ ಇರುವ ಯಾರೂ ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ನಂಬುವುದಿಲ್ಲ, ಕಾರಣ ಇಷ್ಟೇ, ಅವರು ತಮ್ಮ ಪಕ್ಷದ ವಿರೋಧಿ ಯಾರು ಎನ್ನುವುದನ್ನು ಅರ್ಥ ಮಾಡಿಕೊಂಡಿಲ್ಲ, ರಣರಂಗದಲ್ಲಿ ನಿಂತು ವಿರೋಧಿ ಯಾರು ಎಂದು ಗೊತ್ತಿರದ ಸೇನಾನಿ ಏನು ಮಾಡಲು ಸಾಧ್ಯ? ಮತ್ತು ಅಂತಹ ಸೇನಾನಿಯನ್ನು ಯಾರು ನಂಬುತ್ತಾರೆ.?

Update: 2023-10-09 07:04 GMT

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಜೆಡಿಎಸ್ ಮತ್ತು ಬಿಜೆಪಿ ಸೇರಿಕೊಂಡು ಕಾಲು ಕೆರೆದು ಜಗಳ ಮಾಡುತ್ತಲೇ ಬಂದಿದೆ, ಇದಕ್ಕೆ ಬಹುಮುಖ್ಯ ಕಾರಣ ಎರಡೂ ಪಕ್ಷಗಳಿಗೆ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವುದು. ಅಷ್ಟಕ್ಕೂ ಕರ್ನಾಟಕದಲ್ಲಿ ಈ ಫಲಿತಾಂಶ ಬಂದಿರುವುದು ಬಿಜೆಪಿ ಆಡಳಿತದ ವಿರುದ್ಧ, ಆದರೆ ಎಚ್.ಡಿ. ಕುಮಾರಸ್ವಾಮಿ ಹತಾಶರಾಗಿರುವುದು ನೋಡಿದರೆ ಸೋಲು ಅರಗಿಸಿಕೊಳ್ಳುವ ಶಕ್ತಿ ಅವರಿಗಿಲ್ಲ ಎನ್ನುವುದು ಕಾಣುತ್ತಿದೆ. ಯಾಕೆಂದರೆ ಅವರೇನು ಹೋರಾಟ ಮಾಡಿ, ಸಂಘಟನೆ ಮಾಡಿ ಮುಖ್ಯಮಂತ್ರಿಯಾದವರು ಅಲ್ಲವಲ್ಲ. ಎಚ್.ಡಿ. ಕುಮಾರಸ್ವಾಮಿ ಮೊದಲ ಸಲ ಮುಖ್ಯಮಂತ್ರಿಯಾದಾಗ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಆದರೆ ಒಂದು ಸರಕಾರವನ್ನು ಆಯ್ಕೆ ಮಾಡುವಾಗ ಜನತೆ ಹಲವು ಆಯಾಮಗಳಲ್ಲಿ ವಿಚಾರ ಮಾಡುತ್ತಾರೆ. ಕೇವಲ ಅಭಿವೃದ್ಧಿ ಒಂದೇ ನೋಡಿ ಮತ ನೀಡುವುದಿಲ್ಲ, ಒಂದು ವೇಳೆ ಹಾಗಾಗಿದ್ದರೆ ಡಾ.ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ರಾಮಕೃಷ್ಣ ಹೆಗಡೆ ಅಂತಹವರು ಸೋಲಬಾರದಿತ್ತು. ಆದರೆ ಜನತೆ ಹತ್ತು ಹಲವು ವಿಚಾರಗಳ ಆಧಾರದ ಮೇಲೆ ಸರಕಾರವನ್ನು ಆಯ್ಕೆ ಮಾಡುತ್ತಾರೆ. ಇಷ್ಟು ಸಣ್ಣ ವಿಷಯ ಕುಮಾರಸ್ವಾಮಿಯವರು ಅರ್ಥ ಮಾಡಿಕೊಳ್ಳದೆ ಹೋದದ್ದು ದುರಂತವೇ ಸರಿ. ನೆಗಡಿಯಾಗಿದೆ ಎಂದು ಅವರು ಮೂಗು ಕತ್ತರಿಸಲು ಮುಂದಾಗಿದ್ದಾರೆ. ಕುಮಾರಸ್ವಾಮಿಯವರ ನಡವಳಿಕೆ ನೋಡಿದರೆ, ರಾಜ್ಯದ ಮುಸ್ಲಿಮರಿಗೆ ಬುದ್ಧಿ ಕಲಿಸಲೆಂದೇ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಂತಿದೆ.

ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಯಾಕೆ ಇಷ್ಟೊಂದು ಕೆಳಮಟ್ಟಕ್ಕೆ ಹೋಗಿದೆ ಎಂದು ಆತ್ಮಾವಲೋಕನ ಮಾಡಿಕೊಂಡು ಪಕ್ಷ ಕಟ್ಟಬೇಕಾದ ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಆ ಪಕ್ಷದ ಅಧಃಪತನಕ್ಕೆ ಕಾರಣವಾಗಲಿದೆ. ಕುಮಾರಸ್ವಾಮಿಯವರು ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಮತ ನೀಡಲಿಲ್ಲ ಎಂದು ಆರೋಪಿಸುತ್ತಾರೆ, ಆದರೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಸೋತಿದೆ, ಅಂದರೆ ಅಲ್ಲಿ ಕೇವಲ ಮುಸ್ಲಿಮ್ ಮತಗಳಿಂದ ಸೋತಿದ್ದಾರೆಯೇ? ಆ ಜಿಲ್ಲೆಯಲ್ಲಿ ಒಕ್ಕಲಿಗರೂ ಜೆಡಿಎಸ್ ಪಕ್ಷಕ್ಕೆ ಮತ ನೀಡಿಲ್ಲವಲ್ಲ, ಅವರ ಬಗ್ಗೆ ಕುಮಾರಸ್ವಾಮಿಯವರ ನಿಲುವೇನು? ಅಂದರೆ ಒಕ್ಕಲಿಗರೂ ಕುಮಾರಸ್ವಾಮಿಯವರನ್ನು ನಂಬುತ್ತಿಲ್ಲ. ಇದನ್ನು ಅರ್ಥ ಮಾಡಿಕೊಂಡು, ಅವರ ವಿಶ್ವಾಸಗಳಿಸಿಕೊಳ್ಳುವುದು ಬಿಟ್ಟು, ಬಿಜೆಪಿ ಜೊತೆ ಸೇರಿದರೆ ಅವರೆಲ್ಲ ಮತ ನೀಡುತ್ತಾರೆಯೇ? ಅಲ್ಲಿಯ ಮತದಾರರು ಬಿಜೆಪಿ ಪರವಾಗಿದ್ದು, ಅವರ ಜೊತೆಗೆ ಮೈತ್ರಿ ಬೆಳೆಸಿದರೆ ಜೆಡಿಎಸ್ ಉಳಿಯುತ್ತದೆ ಎನ್ನುವ ಹಾಗಿದ್ದರೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬದಲಾಗಿ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲಬೇಕಿತ್ತಲ್ಲ, ಅಂದರೆ ಒಕ್ಕಲಿಗರೂ ಬಿಜೆಪಿ ಪರವಾಗಿಲ್ಲ ಎಂದು ಅರ್ಥ.

ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಯಾಕೆ ಮತ ನೀಡಲಿಲ್ಲ ಎಂದು ಮುಸ್ಲಿಮರನ್ನು ಪ್ರಶ್ನೆ ಮಾಡುತ್ತಿರುವ ಕುಮಾರಸ್ವಾಮಿಯವರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡರೆ ಸಾಕಿತ್ತು, ಉತ್ತರ ಸಿಗುತ್ತಿತ್ತು, ಕುಮಾರಸ್ವಾಮಿಯವರು ಚುನಾವಣೆಯ ನಂತರ ಅವಕಾಶ ಸಿಕ್ಕರೆ ಈ ರೀತಿ ಬಿಜೆಪಿ ಜೊತೆಗೆ ಸಖ್ಯ ಬೆಳೆಸುತ್ತಾರೆ ಎನ್ನುವ ಅನುಮಾನದಿಂದಲೇ ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಮತ ನೀಡಲಿಲ್ಲ. ಯಾಕೆಂದರೆ ಕುಮಾರಸ್ವಾಮಿಯವರಿಗೆ ಒಂದು ಸೈದ್ಧಾಂತಿಕ ಬದ್ಧತೆ ಇಲ್ಲ. ಪಕ್ಷದ ಬೇರೆ ಬೇರೆ ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದು ಸಾಮಾನ್ಯ. ಆದರೆ ಪಕ್ಷದ ನೇತೃತ್ವ ವಹಿಸಿದ ನಾಯಕರೇ ಬೇರೆ ಪಕ್ಷದ ಸಖ್ಯ ಬೆಳೆಸಿದರೆ ಹೇಗೆ? ಕುಮಾರಸ್ವಾಮಿಯವರು 2006ರಲ್ಲಿ ಬಿಜೆಪಿ ಜೊತೆಗೆ ಸೇರಿ ಸರಕಾರ ರಚಿಸಿದಾಗಲೇ ಅವರ ಸೈದ್ಧಾಂತಿಕ ಪಾವಿತ್ರ್ಯತೆ ಹಾಳಾಗಿದೆ. ಅದನ್ನು ಮರು ಸ್ಥಾಪಿಸಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ, ಆದರೆ ಕುಮಾರಸ್ವಾಮಿಯವರು ಆ ವಿಷಯದಲ್ಲಿ ಪದೇ ಪದೇ ಸೋಲುತ್ತಿದ್ದಾರೆ. ಕಾರಣ ಕುಮಾರಸ್ವಾಮಿಯವರಿಗೆ ಸೈದ್ಧಾಂತಿಕ ಬದ್ಧತೆಯ ಬಗ್ಗೆ ಸ್ಪಷ್ಟತೆಯಿಲ್ಲ. ಅಂದು ಬಿಜೆಪಿ ಜೊತೆಗೆ ಸರಕಾರ ರಚಿಸಿದ ನಂತರ ಎಂದಾದರೂ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಾರೆಯೇ ಕುಮಾರಸ್ವಾಮಿ? ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅಖಿಲೇಶ್ ಯಾದವ್ ಇತ್ಯಾದಿ ನಾಯಕರ ಬಗ್ಗೆ, ‘‘ಅವರು ಬಿಜೆಪಿ ಜೊತೆ ಸರಕಾರ ಮಾಡಿರಲಿಲ್ಲವೇ?’’ ಎನ್ನುತ್ತಾರೆ ಕುಮಾರಸ್ವಾಮಿ. ಅವರು ಸರಕಾರ ಮಾಡಿದ್ದರು, ಆದರೆ ಹೊರ ಬಂದ ನಂತರ ಅವರು ಅದೇ ಬಿಜೆಪಿ ಜೊತೆಗೆ ತೀವ್ರ ಹೋರಾಟ ಮಾಡುತ್ತಿದ್ದಾರೆ, ಕುಮಾರಸ್ವಾಮಿಯವರ ಹಾಗೆ ಬಿಜೆಪಿಯ ದುರಾಡಳಿತದ ಬಗ್ಗೆ ಮೃದು ಧೋರಣೆ ತೋರಿದ್ದಾರೆಯೇ?.

ಜಾತ್ಯತೀತ ಮನಸ್ಥಿತಿ ಇರುವ ಯಾರೂ ರಾಜ್ಯದಲ್ಲಿ ಕುಮಾರಸ್ವಾಮಿಯವರನ್ನು ನಂಬುವುದಿಲ್ಲ, ಕಾರಣ ಇಷ್ಟೇ, ಅವರು ತಮ್ಮ ಪಕ್ಷದ ವಿರೋಧಿ ಯಾರು ಎನ್ನುವುದನ್ನು ಅರ್ಥ ಮಾಡಿಕೊಂಡಿಲ್ಲ, ರಣರಂಗದಲ್ಲಿ ನಿಂತು ವಿರೋಧಿ ಯಾರು ಎಂದು ಗೊತ್ತಿರದ ಸೇನಾನಿ ಏನು ಮಾಡಲು ಸಾಧ್ಯ? ಮತ್ತು ಅಂತಹ ಸೇನಾನಿಯನ್ನು ಯಾರು ನಂಬುತ್ತಾರೆ.? ಚುನಾವಣೆಗೂ ಮುಂಚೆ ಕುಮಾರಸ್ವಾಮಿಯವರು ಕೇಂದ್ರ ಸರಕಾರವನ್ನು ಹೊಗಳಿದ್ದಾರೆ, ಶೇ. 40 ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. ಬಿಜೆಪಿಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತ, ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ, ಪ್ರಧಾನಿಯವರ ವೈಫಲ್ಯಗಳ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ? ಆ ಸರಕಾರಗಳ ವಿರುದ್ಧ ಹೋರಾಟ ಮಾಡಿದ್ದಾರೆಯೇ? ಹಾಗಿದ್ದಲ್ಲಿ ಜನ ಅವರನ್ನು ಹೇಗೆ ನಂಬುವುದು.

ಕುಮಾರಸ್ವಾಮಿಯವರು ಪದೇ ಪದೇ ಮುಸ್ಲಿಮರನ್ನು ತಮ್ಮ ಸೋಲಿಗೆ ಆಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನ ಪಡುತ್ತಿರುವುದು ಹಾಸ್ಯಾಸ್ಪದವಾಗಿದೆ, ಜೆಡಿಎಸ್ ಪಕ್ಷ ಈ ರಾಜ್ಯದಲ್ಲಿ ಎಂದೂ ಬಹುಮತದಲ್ಲಿ ಗೆದ್ದಿಲ್ಲ, ಆ ಪಕ್ಷ ಸ್ಥಾಪನೆಯಾದ ನಂತರ ಗೆದ್ದಿರುವ ಅತೀ ಹೆಚ್ಚು ಸೀಟುಗಳು 58, ಅದು 2004ರಲ್ಲಿ, ಅದಕ್ಕೂ ಮೊದಲು 28 ಸೀಟುಗಳು, ಅದರ ನಂತರ ಹೆಚ್ಚೆಂದರೆ 40 ಸೀಟುಗಳು ಮಾತ್ರ, ಈಗ 19ಕ್ಕೆ ಕುಸಿದಿದೆ. ಕೋಮುವಾದಿ ಬಿಜೆಪಿಯನ್ನು ವಿರೋಧಿಸುವವರು ಕೇವಲ ಮುಸ್ಲಿಮರು ಮಾತ್ರವಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿಲ್ಲ. ಇಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿಗೆ ಮತ ನೀಡಿರುವವರ ಸಂಖ್ಯೆ ಕೇವಲ ಶೇ. 36ರಷ್ಟು, ಅಂದರೆ ಇನ್ನುಳಿದ ಶೇ. 64ರಷ್ಟು ಮತಗಳು ಕೋಮುವಾದಿ ಬಿಜೆಪಿ ವಿರುದ್ಧವಿದೆ, ಅಂತಹ ಮತಗಳನ್ನು ಒಗ್ಗೂಡಿಸುವ ಶಕ್ತಿ ಇಲ್ಲದ ಕುಮಾರಸ್ವಾಮಿಯವರು ಕೇವಲ ಮುಸ್ಲಿಮರನ್ನು ಟಾರ್ಗೆಟ್ ಮಾಡುವುದರಲ್ಲಿ ಯಾವ ಅರ್ಥವಿದೆಯೇ?

ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಸೇರಿ ‘‘ಮುಸ್ಲಿಮರನ್ನು ನಾನೇ ಕಾಪಾಡಬೇಕು, ಯಾರು ಬರುತ್ತಾರೆ?’’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪದೇ ಪದೇ ಕುಮಾರಸ್ವಾಮಿಯವರು ಮುಸ್ಲಿಮರನ್ನು ನಾನು ಕಾಪಾಡುತ್ತೇನೆ ಎಂದು ಹೇಳುತ್ತಿರುವುದು ಅವರ ಘನತೆಗೆ ತಕ್ಕುದಾದ ವಿಷಯವಲ್ಲ. ಮುಸ್ಲಿಮರನ್ನು ಕಾಪಾಡಲು ಈ ದೇಶದ ಸಂವಿಧಾನವಿದೆ, ಕಾನೂನು ಇದೆ, ಪೋಲಿಸ್ ವ್ಯವಸ್ಥೆ ಇದೆ, ನ್ಯಾಯಾಲಯಗಳು ಇವೆ. ಕುಮಾರಸ್ವಾಮಿಯವರು ಮುಸ್ಲಿಮರನ್ನು ಎಷ್ಟು ಅಸಡ್ಡೆ ಮಾಡುತ್ತಾರೆ ಎನ್ನುವುದು ಅವರ 2018ರ ಸರಕಾರದಲ್ಲಿಯೇ ಗೊತ್ತಾಗಿದೆ. ಆ ಸರಕಾರದಲ್ಲಿ ಸಚಿವ ಸ್ಥಾನ ಖಾಲಿ ಇದ್ದರೂ ಜೆಡಿಎಸ್ ಪಕ್ಷ ಮುಸ್ಲಿಮ್ ಸಮುದಾಯದಿಂದ ಒಬ್ಬರನ್ನೂ ಸಚಿವರನ್ನಾಗಿ ಮಾಡಲಿಲ್ಲ, ಅವರ ಸರಕಾರದಲ್ಲಿಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಕಡಿತಗೊಳಿಸಲಾಗಿದೆ. ಅದನ್ನು ಅಂದಿನ ಶಾಸಕರಾದ ಎಚ್.ಕೆ. ಪಾಟೀಲ್‌ರವರು ಸದನದಲ್ಲಿ ಪ್ರಶ್ನಿಸಿದ್ದಾರೆ. ಬೇಕಿದ್ದರೆ ಅವರು ವಿಧಾನಸಭಾ ಕಲಾಪಗಳ ಕಡತ ತೆಗೆದು ನೋಡಲಿ.

ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಹೋಗುವುದಿದ್ದರೆ ಹೋಗಲಿ, ಆದರೆ ಹೋಗುವಾಗ ಒಂದು ಸಮುದಾಯವನ್ನು ಹೊಣೆ ಮಾಡುವುದು ಎಷ್ಟು ಸರಿ? ಪದೇ ಪದೇ ಎಚ್.ಡಿ.ದೇವೇಗೌಡರು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಿದ್ದಾರೆ, ಮುಸ್ಲಿಮರು ಅದನ್ನು ಮರೆತಿದ್ದಾರೆ ಎಂದು ಋಣಭಾರದ ರೀತಿ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರ ಗಮನಕ್ಕೆ: ಮುಸ್ಲಿಮರಿಗೆ ರಾಜ್ಯದಲ್ಲಿ ಶೇ. 4 ಮೀಸಲಾತಿ ನೀಡಿದ್ದು ಎಚ್.ಡಿ.ದೇವೆಗೌಡರು ಎನ್ನುವುದು ಸತ್ಯವಲ್ಲ, ನ್ಯಾ.ಚಿನ್ನಪ್ಪರೆಡ್ಡಿ ಆಯೋಗವು 1990ರಲ್ಲಿ ಮೂರನೇ ಹಿಂದುಳಿದ ವರ್ಗಗಳ ಆಯೋಗದ ವರದಿ ನೀಡಿದೆ. ಅದರ ಆಧಾರದಲ್ಲಿ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಜುಲೈ 25, 1994ರಲ್ಲಿ ಮುಸ್ಲಿಮರಿಗೆ ಶೇ. 6ರಷ್ಟು ಮೀಸಲಾತಿ ನೀಡಿ ಆದೇಶಿಸಲಾಗಿತ್ತು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ. 50ಕ್ಕಿಂತ ಹೆಚ್ಚಾಗಿರುವುದರಿಂದ ಸದರಿ ವಿಷಯ ಸುಪ್ರೀಂ ಕೋರ್ಟಿಗೆ ಹೋಗಿರುವ ಕಾರಣ ತಡವಾಗಿ ಜಾರಿಗೆ ಬಂದಿದೆ. ಅದು ಜಾರಿಗೆ ಬರುವಾಗ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿರುವುದು ಕಾಕತಾಳೀಯವೇ ಹೊರತು ಅವರೇ ಮೀಸಲಾತಿ ನೀಡಿದ್ದಾರೆ ಎನ್ನುವುದು ತಪ್ಪು ಮತ್ತು ಮೀಸಲಾತಿ ಪ್ರಮಾಣ ಶೇ. 50 ಮೀರಬಾರದೆನ್ನುವ ಕಾರಣಕ್ಕೆ ಅದು ಶೇ. 4ಕ್ಕೆ ನಿಗದಿಗೊಳಿಸಲಾಗಿದೆ. ಅನಗತ್ಯವಾಗಿ ಕುಮಾರಸ್ವಾಮಿಯವರು ರಾಜ್ಯದ ಜನರಿಗೆ ಅರ್ಧ ಸತ್ಯ ಹೇಳುವುದನ್ನು ಬಿಡುವುದು ಒಳ್ಳೆಯದು ಮತ್ತು ಅವರು ಕರ್ನಾಟಕದ ಮೀಸಲಾತಿ ಇತಿಹಾಸ ಓದಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ.ರಝಾಕ್ ಉಸ್ತಾದ, ರಾಯಚೂರು

contributor

Similar News