‘ಬೆಂಗಳೂರು ಕೇಕ್ ಉತ್ಸವ’ ಪ್ರಚಲಿತ ವಿದ್ಯಮಾನಗಳ ಪ್ರತಿಬಿಂಬ

Update: 2023-12-18 05:35 GMT

ಬೆಂಗಳೂರು: ಪ್ರತಿವರ್ಷವೂ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಅಂಗವಾಗಿ ಸಾಂಪ್ರದಾಯಿಕ ರೀತಿಯಲ್ಲಿ ನಡೆದುಕೊಂಡು ಬರುತ್ತಿರುವ ‘ಬೆಂಗಳೂರು ಕೇಕ್ ಉತ್ಸವ’ವು ಈ ಬಾರಿ ಶಕ್ತಿ ಯೋಜನೆ, ಹೊಸ ಸಂಸತ್ತು ಹಾಗೂ ಚಂದ್ರಯಾನದಂತಹ ಹಲವು ವಿಶೇಷ ಆಕರ್ಷಣೆಗಳಿಗೆ ಸಾಕ್ಷಿಯಾಗಿದೆ.

ಐದು ದಶಕಗಳ ಹಿಂದೆ ಸಿ.ರಾಮಚಂದ್ರನ್ ಅವರ ‘ಚತುರ ಮನಸ್ಸು ಮತ್ತು ಪ್ರವರ್ತಕ ಖಾದ್ಯ’ ಮೇರುಕೃತಿಯಿಂದ ಹುಟ್ಟಿಕೊಂಡ ‘ಬೆಂಗಳೂರು ಕೇಕ್ ಉತ್ಸವ’ ಸಿಹಿ ತಿನಿಸಿನ ಕಲಾತ್ಮಕತೆಯ ಬೆರಗುಗೊಳಿಸುವ ಪ್ರದರ್ಶನವಾಗಿ ವಿಕಸನಗೊಂಡಿದೆ.

ಹೆಸರಾಂತ ನೀಲಗಿರಿ ಕುಟುಂಬದ ಎನ್ ಡೈರಿ ಫಾರ್ಮ್‌ನ ಸಿ.ರಾಮಚಂದ್ರನ್ ಅವರು ಆರಂಭಿಸಿದ ಈ ವಾರ್ಷಿಕ ಕೇಕ್ ಉತ್ಸವ ಕೇಕ್ ಉತ್ಸಾಹಿಗಳಿಗೆ ಮತ್ತು ರಸಿಕರಿಗೆ ಮೋಡಿಮಾಡುವ ಅನುಭವವನ್ನು ನೀಡಿದರೆ ಅಚ್ಚರಿಯಿಲ್ಲ.

ಈ ವರ್ಷ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್(ಐಬಿಸಿಎ) ಮತ್ತು ಮೈ ಬೇಕರ್ಸ್ ಮಾರ್ಟ್ ಸಹಯೋಗದೊಂದಿಗೆ ಕೇಕ್ ಪ್ರದರ್ಶನ ಆಯೋಜನೆಗೊಂಡಿದ್ದು, ಡಿ.15ರಿಂದ 2024ರ ಜನವರಿ 1ರ ವರೆಗೆ ಬೆಂಗಳೂರಿನ ಯುಬಿ ಸಿಟಿಯ ಸೈಂಟ್ ಜೋಸೆಫ್ ಹೈಸ್ಕೂಲ್ ಮೈದಾನ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಈ ಬಾರಿ ವಿಶೇಷವಾಗಿ ‘ಥಿಂಕ್ ಲೋಕಲ್- ಆ್ಯಕ್ಟ್ ಗ್ಲೋಬಲ್’ ಪರಿಕಲ್ಪನೆಯಲ್ಲಿ ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಉತ್ಸವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಆಕರ್ಷಣೆಯಿಂದ ಹಿಡಿದು ನೂತನ ಸಂಸತ್ ಭವನ, ಸಿಂಹಾಸನ ಏರಿದ ದುರ್ಗಾದೇವಿ, ಶಿವಾಜಿ ಮಹಾರಾಜ ಸೇರಿದಂತೆ ಬರೋಬ್ಬರಿ 25 ಬಗೆಯ ಕಲಾಕೃತಿಗಳನ್ನು ಒಂದೇ ಸೂರಿನಡಿ ವೀಕ್ಷಿಸಬಹುದಾಗಿದ್ದು, ನೋಡುಗರ ಕಣ್ಣಿಗೆ ಹಬ್ಬ, ಆತ್ಮಕ್ಕೆ ರಸದೌತಣವನ್ನು ನೀಡುವಂತಿದೆ.

3ಡಿ ಶುಗರ್ ಕೇಕ್ ವಿನ್ಯಾಸ ಈ ಬಾರಿಯ ಮತ್ತೊಂದು ಆಕರ್ಷಣೆಯಾಗಿದೆ. ಒಟ್ಟಾರೆ ಉತ್ಸವದಲ್ಲಿ 6,062 ಕೆಜಿಗೂ ಹೆಚ್ಚಿನ ಕೇಕ್‌ನಲ್ಲಿ ಮಾಡಿದ ಕಲಾಕೃತಿಗಳು ಗಮನಸೆಳೆಯುತ್ತವೆ.

ಯಾವೆಲ್ಲಾ ವಿಶೇಷ ಕೇಕ್ ಕಲಾಕೃತಿಗಳಿವೆ?: ಒಟ್ಟಾರೆ 20 ಸಾವಿರ ಚದರ ಅಡಿಗಳಷ್ಟು ವಿಸ್ತಾರವಾದ ಜಾಗದಲ್ಲಿ ಪ್ರಪಂಚದ ಅತಿ ದೊಡ್ಡ ಕೇಕ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. 210 ಕೆಜಿ ತೂಕದಲ್ಲಿ ಸಿದ್ಧಗೊಂಡ ವರ್ಣರಂಜಿತ ಶಾಪಿಂಗ್ ಕ್ಯಾಮೆಲ್ ಕೇಕ್, ಅಲಿಗೇಟರ್ ಇನ್ ಎ ಸ್ಟಾಂಪ್ ಕೇಕ್, 235 ಕೆ.ಜಿ.ಯ ದಿ ನೇಕೆಡ್ ರೆಡ್ ವೆಲ್ವೆಟ್ ಕೇಕ್, ಮಕ್ಕಳು ಹೆಚ್ಚಾಗಿ ಇಷ್ಟಪಡುವ ಗುಲಾಬಿ ಬಣ್ಣದ 320ಕೆ.ಜಿ ತೂಕವುಳ್ಳ ಡಾಲ್ ಕೇಕ್, ಮೊಸಳೆ, ಬೀಚ್, ಫ್ರೋಜನ್ ಕ್ಯಾಸಲ್ ಫ್ಯಾಂಟಸಿಯಂತಹ ಮೋಡಿ ಮಾಡುವ ಕಲಾಕೃತಿಗಳಿವೆ. ಕತ್ತಿ ಹಿಡಿದು ಕುದುರೆಯ ಮೇಲೆ ಕುಳಿತಿರುವ ಏಳು ಅಡಿ ಎತ್ತರದ 4ಸಾವಿರ ಕೆ.ಜಿ., ತೂಕದ ಶಿವಾಜಿ ಮಹಾರಾಜರ ಕೇಕ್, ಮೂರು ಅಡಿ ಎತ್ತರದ ಚಂದ್ರಯಾನ-3 ಕೇಕ್‌ನಲ್ಲಿ ನುರಿತ ಕಲಾವಿದರು ಲ್ಯಾಂಡರ್ ಮತ್ತು ರೋವರ‌್ನ ಸಕ್ಕರೆ ಪ್ರತಿಕೃತಿಯನ್ನು ನಿಖರವಾಗಿ ರಚಿಸಿರುವುದು ಗಮನಸೆಳೆಯುತ್ತದೆ, ಇನ್ನು 9 ಅಡಿ ಎತ್ತರದ ವೆಡ್ಡಿಂಗ್ ಕೇಕ್ ಸಾಗಾ, ಡಾಗ್ಸ್ ವೆಡ್ಡಿಂಗ್ ಕೇಕ್ ಸೇರಿದಂತೆ ಹಲವು ಬಗೆಯ ಕೇಕ್ ಮಾದರಿಗಳಿವೆ.

ಸಕ್ಕರೆಯ ಸ್ವರಮೇಳದಲ್ಲಿ ಸಂಸತ್ತಿನ ಸೊಬಗು: ಇತ್ತೀಚೆಗೆ ದಿಲ್ಲಿಯಲ್ಲಿ ಉದ್ಘಾಟನೆಗೊಂಡ ಹೊಸ ಸಂಸತ್ ಭವನವು ಮನೋಹರ ವಾಸ್ತುಶಿಲ್ಪದ ವಿನ್ಯಾಸ ಮತ್ತು ಆಕರ್ಷಕ ಒಳಾಂಗಣಗಳನ್ನು ಹೊಂದಿದೆ. ಈ ಭವನವನ್ನು ಕೇಕ್ ಉತ್ಸವದಲ್ಲಿ ಸಕ್ಕರೆ ಮತ್ತು ಆಹಾರ ಬಣ್ಣವನ್ನು ಬಳಸಿಕೊಂಡು ಅಷ್ಟೇ ಪ್ರಭಾವಶಾಲಿಯಾದ ರೂಪದಲ್ಲಿ ಎರಡೂವರೆ ತಿಂಗಳುಗಳ ಸಮಯಾವಕಾಶ ತೆಗೆದುಕೊಂಡು 1,120 ಕೆ.ಜಿ.ಯಷ್ಟು ತೂಕದಲ್ಲಿ ಈ ಸಾಂಪ್ರದಾಯಿಕ ರಚನೆಯನ್ನು ಮೃರುಸೃಷ್ಠಿಸುವ ಸವಾಲನ್ನು ಬೇಕರಿಯ ಕಲಾವಿದರು ತೆಗೆದುಕೊಂಡು ಅದ್ಬುತವಾಗಿ ನಿರ್ಮಿಸಿರುವುದು ಪ್ರಶಂಸನೀಯವಾಗಿದೆ. ಬೇಕರಿಯ ಕಲಾವಿದರಾದ ಮಹೇಶ್, ಅರುಣ್, ಸಂತನು, ಮೋಹಿತ್ ಹಾಗೂ ಪ್ರಮೋದ್ ಎಂಬುವವರು ನಾಲ್ಕು ತಿಂಗಳ ಮುಂಚಿತವಾಗಿ ಈ ಮಹತ್ವಾಕಾಂಕ್ಷೆಯ ಸಂಸತ್ ಭವನ ಪ್ರತಿಕೃತಿ ನಿರ್ಮಿಸುವ ಯೋಜನೆಯನ್ನು ಪ್ರಾರಂಭಿಸಿದ್ದರು.

‘ಶಕ್ತಿ’ ಯೋಜನೆಯ ಬಿಂಬಿಸುವ ಕೇಕ್: ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಲ್ಲೊಂದಾದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆ ಹೆಚ್ಚು ಪ್ರಸಿದ್ಧಿಯಾಗಿದೆ. ಕೋಟ್ಯಂತರ ಮಹಿಳೆಯರು ಈ ಯೋಜನೆಯ ಲಾಭವನ್ನೂ ಪಡೆದಿದ್ದಾರೆ. ಹೀಗಾಗಿ, ಬಸ್ ಹಾಗೂ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ಕುಳಿತು ಪ್ರಯಾಣಿಸುವ ಕೇಕ್‌ನ ಮಾದರಿ ತಯಾರಿಸಲಾಗಿದ್ದು, 4 ಅಡಿ ಎತ್ತರದ ಈ ‘ಶಕ್ತಿ ಯೋಜನೆ’ಯ ಪ್ರತಿಕೃತಿಯು ಕೇಕ್ ಉತ್ಸವದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಕೇಕ್ ಉತ್ಸವದ ಸಮಯ: ಪ್ರತಿನಿತ್ಯ ಬೆಳಗ್ಗೆ 11ರಿಂದ ರಾತ್ರಿ 9 ಗಂಟೆಯ ವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ. ಪ್ರತಿ ವ್ಯಕ್ತಿಗೆ 100 ರೂ.ಪ್ರವೇಶ ದರ ನಿಗದಿಪಡಿಸಲಾಗಿದೆ.

ಈ ವರ್ಷದ ಬೆಂಗಳೂರು ಕೇಕ್ ಉತ್ಸವವು ಶಕ್ತಿ ಯೋಜನೆ, ಚಂದ್ರಯಾನದಂತಹ ಹಲವು ವಿಶೇಷತೆಗಳಿಗೆ ಹೆಸರಾಗಿದೆ. ಉತ್ಸವವು ನೋಡುಗರಿಗೆ ಬೆರಗುಗೊಳಿಸುವ ಮತ್ತು ಭಾವನಾತ್ಮಕವಾಗಿ ಪ್ರತಿಧ್ವನಿಸುವಂತಹ ಅನುಭವವನ್ನು ನೀಡುತ್ತದೆ. ಐತಿಹಾಸಿಕ ಪರಂಪರೆ ಮತ್ತು ಜಾಗತಿಕ ಆವಿಷ್ಕಾರಗಳನ್ನೊಳಗೊಂಡ ಹಲವು ಪ್ರಯೋಗಗಳ ಮೂಲಕ ಈ ಉತ್ಸವದಲ್ಲಿ ಅದ್ಬುತ ಕಲಾ ಜಗತ್ತು ಸೃಷ್ಠಿಯಾಗಿದೆ. ಈ ವಾರ್ಷಿಕ ಪ್ರಯತ್ನವು ಕಲಾವಿದರ ಕೌಶಲ್ಯಗಳನ್ನು ಹೆಚ್ಚಿಸಿ, ನೋಡುಗರ ಮನತಣಿಸುತ್ತದೆ.

► ಹುಸೈನ್ ವಿ.ಎ. ಶನಿವಾರ ಸಂತೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಯೋಗೇಶ್ ಮಲ್ಲೂರು

contributor

Similar News