ಆತಂಕದಲ್ಲೇ ಜೀವನ ನಡೆಸುತ್ತಿರುವ ಬುಟ್ಟಿ ಮಾರಾಟಗಾರರು
ಸಕಲೇಶಪುರ, ಡಿ,19: ಸುಮಾರು 25 ವರ್ಷಗಳಿಂದ ಪಟ್ಟಣದ ಹೇಮಾವತಿ ಸೇತುವೆ ಬಳಿ ಬುಟ್ಟಿ ಸಾಮಾಗ್ರಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಜನರು ಪುರಸಭೆಯ ನಿರಂತರ ಕಿರುಕುಳದಿಂದ ಬೇಸತ್ತು ಹೋಗಿದ್ದಾರೆ.
ರಸ್ತೆ ಬದಿಯಲ್ಲಿ ಬಿದಿರಿನಿಂದ ತಯಾರಿಸಿರುವ ಕುಕ್ಕೆ, ಬುಟ್ಟಿ, ಮರ, ಏಣಿ ಹಾಗೂ ಇತರ ಸಾಮಾಗ್ರಿ ಮಾರಾಟ ಮಾಡಿ ಜೀವನ ಸಾಗಿಸುವ ಕುಟುಂಬಗಳಿಗೆ ಸಕಲೇಶಪುರ ಪುರಸಭೆಯ ಅಧಿಕಾರಿಗಳು ನಗರದ ಸೌಂದರ್ಯಕ್ಕೆ ಧಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಹಾಗೂ ಜಿಲ್ಲಾಧಿಕಾರಿಯ ಆದೇಶವಿದೆ ಎಂದು ಕಿರುಕುಳ ನೀಡಿ ವ್ಯಾಪಾರ ಮಾಡದಂತೆ ತಡೆಯುತ್ತಿದ್ದಾರೆ ಬುಟ್ಟಿ ಮಾರಾಟಗಾರರ ಆರೋಪವಾಗಿದೆ.
ಪಟ್ಟಣದ ಹೆದ್ದಾರಿಯಲ್ಲಿರುವ ಮೋರ್ ಸೂಪರ್ ಮಾರ್ಕೇಟ್ ಎದುರಿನ ರಸ್ತೆ ಬದಿಯಲ್ಲಿ ಬುಟ್ಟಿ ಮಾರಾಟಗಾರರು ಮಳೆ- ಬಿಸಿಲಿನ ರಕ್ಷಣೆಗಾಗಿ ಹಾಕಿಕೊಂಡಿರುವ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಗಳನ್ನು ಬಲವಂತದಿಂದ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ 16ಕುಟುಂಬಗಳು ನಗರದ ಹೇಮಾವತಿ ಸೇತುವೆಯಿಂದ ಸುಮಾರು 300 ಮೀಟರ್ ಹಾಗೂ ಹೆದ್ದಾರಿಯಿಂದ 50 ಮೀಟರ್ ದೂರದಲ್ಲಿ ಗುಡಿಸಲು ನಿರ್ಮಿಸಿಕೊಂಡು ಸುಮಾರು 25 ವರ್ಷಗಳಿಂದ ಬಿದಿರಿನಿಂದ ತಯಾರಿಸಿರುವ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಈ ಸ್ಥಳದ ಹಿಂಭಾಗದಲ್ಲಿ ಕಲ್ಯಾಣ ಮಂಟಪ ಪ್ರಾರಂಭವಾದ ನಂತರ ಇದರ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಅಂದಿನ ಪುರಸಭೆ ಸಿಬ್ಬಂದಿ ಮತ್ತು ಕೆಲವು ಸದ್ಯಸರು ಲಂಚ ಪಡೆದು 16 ಕುಟುಂಬಗಳ ಗುಡಿಸಿಲುಗಳನ್ನು ಕಿತ್ತುಹಾಕಲಾಯಿತು. ಇದನ್ನು ಪ್ರಶ್ನಿಸಿದ ಹೋರಾಟಗಾರರ ಮೇಲೆ ಕೇಸು ದಾಖಲು ಮಾಡಲಾಯಿತು ಎಂದು ಬುಟ್ಟಿ ಮಾರಾಟಗಾರರ ಆರೋಪವಾಗಿದೆ.
ಬಳಿಕ ಹಲವು ಕುಟುಂಬಗಳು ಬೀದಿ ಪಾಲಾಗಿ ಈಗ 5 ಕುಟುಂಬಗಳು ಮಾತ್ರ ಇಲ್ಲಿಯೇ ಉಳಿದುಕೊಂಡು ರಸ್ತೆ ಬದಿಯಲ್ಲಿ ಬುಟ್ಟಿ ಬಿದಿರು ಸಾಮಾಗ್ರಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಪುರಸಭೆಗೆ ಮುಖ್ಯ ಅಧಿಕಾರಿಯಾಗಿ ಬಂದಿರುವ ರಮೇಶ ಎಂಬವರು ಇಲ್ಲಿ ವ್ಯಾಪಾರ ಮಾಡದಂತೆ ಎಚ್ಚರಿಸಿದ್ದಾರೆ. ಇದರಿಂದಾಗಿ ಇಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವ ನಾವುಗಳು ಆತಂಕದಿಂದಲೇ ವ್ಯಾಪಾರ ನಡೆಸುವಂತಾಗಿದೆ ಎಂದು ಬುಟ್ಟಿ ಮಾರಾಟ ಮಾಡುವ ಸ್ವಾಮಿ, ನಾಗಮ್ಮ, ನೇತ್ರಾ ಸೇರಿದಂತೆ ಮತ್ತಿತರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬುಟ್ಟಿ ಮಾರಾಟ ಮಾಡುವ ರೇಣುಕ ಎಂಬವರ ಪರಿಸ್ಥಿತಿ: ಬುಟ್ಟಿ ವ್ಯಾಪಾರಿ ರೇಣುಕ ಎಂಬವರಿಗೆ ಪತ್ನಿ ಹಾಗೂ ಎರಡು ಮಕ್ಕಳಿವೆ. ಓರ್ವ ಮಗ ಪಿಯುಸಿ ಹಾಗೂ ಇನ್ನೋರ್ವ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈತ ವಿಶೇಷಚೇತನ ಈತನಿಗೆ ಶ್ರವಣ ಹಾಗು ವಾಕ್ ತೊಂದರೆ ಇದೆ. ದೈಹಿಕವಾಗಿಯೂ ಅಷ್ಟು ಶಕ್ತನಾಗಿಲ್ಲ. ದುಡಿದು ತಿನ್ನುವ ಗಟ್ಟಿಮನಸ್ಸು ಈತನದು. ಈತ ತನ್ನ ನೋವನ್ನು ಈತನ ಮೂಖ ಭಾಷೆಯಲ್ಲಿ ಹೇಳಿಕೊಳ್ಳುತ್ತಾನೆ. ಇದು ತಾಯಿ ಮನಸ್ಸಿನ ಎಲ್ಲರಿಗೂ ಅರ್ಥವಾಗುತ್ತದೆ ಆದರೆ ಕಠಿಣ ಮನಸ್ಸಿನ ಪುರಸಭೆ ಅಧಿಕಾರಿಗಳಿಗೆ ಅರ್ಥವಾಗಿಲ್ಲ.
ಅನಾರೋಗ್ಯಪೀಡಿತ ಪತಿಯನ್ನು ಆರೈಕೆ ಮಾಡಬೇಕು ಹಾಗೂ ಎರಡು ಮಕ್ಕಳನ್ನು ಸಾಕುವ ಜವಾಬ್ದಾರಿಯಿದ್ದು, ಈ ದುಬಾರಿ ಯುಗದಲ್ಲಿ ಜೀವನ ಸಾಗಿಸುವುದು ಎಷ್ಟು ಕಷ್ಟ ಎಂದು ಅಧಿಕಾರಿಗಳಿಗೆ ತಿಳಿಯುತ್ತ್ತಿಲ್ಲ
-ಶೈಲಾ, ಬುಟ್ಟಿ ವ್ಯಾಪಾರಿ
ಬಿದಿರು ಬುಟ್ಟಿ ಮಾರುವವರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾಹಾನದ ಬಾಗಿಲು ತೆರೆಯಲು ಅಡಚಣೆ ಯಾಗುತ್ತದೆ. ಇವರು ಅಡುಗೆ ಮಾಡಲು ಸ್ಟವ್ ಇತರ ವಸ್ತುಗಳನ್ನು ಬಳಸುತ್ತಾರೆ. ಇದು ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರ ದೂರು ನೀಡಿದ್ದು, ಜಿಲ್ಲಾಧಿಕಾರಿಯ ಮೌಕಿಕ ಆದೇಶವಿದೆ. ಅದುದ್ದರಿಂದ ಸದರಿ ಜಾಗದಲ್ಲಿ ವ್ಯಾಪಾರ ನಡೆಸದಂತೆ ಸೂಚಿಸಲಾಗಿದೆ.
-ರಮೇಶ್, ಮುಖ್ಯಾಧಿಕಾರಿ, ಪುರಸಭೆ ಸಕಲೇಶಪುರ