ಬೆಳ್ತಂಗಡಿ: ತಾಲೂಕಿನಾದ್ಯಂತ ಕಾಡಾನೆ ಹಾವಳಿ

Update: 2023-11-13 07:49 GMT

ಬೆಳ್ತಂಗಡಿ, ನ.12: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರಿದಿದೆ. ಪ್ರತಿದಿನ ಒಂದಲ್ಲ ಒಂದು ಗ್ರಾಮದಲ್ಲಿ ಕಾಡಾನೆಗಳು ಕೃಷಿಗೆ ಹಾನಿಯುಂಟು ಮಾಡುತ್ತಿದ್ದು, ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಕೃಷಿಕರಲ್ಲಿ ಆತಂಕ ಹೆಚ್ಚಾಗಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಧರ್ಮಸ್ಥಳ ಮಲವಂತಿಗೆ, ಇಂದಬೆಟ್ಟು, ನಾವೂರು, ನೆರಿಯ, ಚಾರ್ಮಾಡಿ, ಶಿಶಿಲ, ಶಿಬಾಜೆ, ಹತ್ಯಡ್ಕ, ಪಟ್ರಮೆ, ಕೊಕ್ಕಡ, ನಿಡ್ಲೆ, ತೋಟತ್ತಾಡಿ, ಚಿಬಿದ್ರೆ ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳ ಹಲವು ಹಿಂಡುಗಳು ತಿರುಗಾಟ ನಡೆಸಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ.

ಸ್ಥಳೀಯರಿಂದ ಲಭಿಸುವ ಮಾಹಿತಿಗಳಂತೆ ಮಿತ್ತಬಾಗಿಲು ಪರಿಸರದಲ್ಲಿ ಮರಿಯಾನೆ ಸಹಿತ ಐದು ಆನೆಗಳಿರುವ ಒಂದು ಹಿಂಡು ಓಡಾಟ ನಡೆಸಿ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಧರ್ಮಸ್ಥಳ ಮುಂಡಾಜೆ ಪರಿಸರದಲ್ಲಿ ಮರಿಯಾನೆ ಸಹಿತ ಮೂರು ಆನೆಗಳ ಹಿಂಡು ಓಡಾಟ ನಡೆಸುತ್ತಿದ್ದು, ಕೃಷಿ ಹಾನಿ ಉಂಟು ಮಾಡುತ್ತಿವೆ ಇದರ ಜತೆ ಎರಡರಿಂದ ಮೂರು ಒಂಟಿ ಸಲಗಗಳು ತಾಲೂಕಿನಲ್ಲಿ ನಿರಂತರವಾಗಿ ಓಡಾಟ ನಡೆಸುತ್ತಿವೆ.

ಒಂದು ವಾರದ ಅವಧಿಯಲ್ಲಿ ನೇರ್ತನೆ, ಕಲ್ಮಂಜ ಭಾಗಗಳಲ್ಲಿ ಕೃಷಿಹಾನಿ ಮಾಡಿದ ಕಾಡಾನೆಗಳ ಹಿಂಡು ಇದೀಗ ತೋಟತ್ತಾಡಿ ಪರಿಸರದಲ್ಲಿ ಬೀಡು ಬಿಟ್ಟಿದೆ. ಒಂದು ಮರಿಯಾನೆ ಸಹಿತ ಮೂರು ಕಾಡಾನೆಗಳಿರುವ ಈ ಹಿಂಡು ಅಲ್ಲಲ್ಲಿ ಕೃಷಿಹಾನಿ ಮಾಡುತ್ತಾ ಮುಂದುವರಿಯುತ್ತಿದೆ.

ಕಳೆದ ಎರಡು ದಿನಗಳಿಂದ ಒಂಟಿ ಸಲಗವೊಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡಿದೆ. ಅದು ಮನ ಬಂದಂತೆ ಜನವಸತಿ ಪ್ರದೇಶಗಳ ನಡುವೆ ಓಡಾಡುತ್ತಿದ್ದು, ಜನರ ಆತಂಕ ಹೆಚ್ಚಾಗಲು ಕಾರಣವಾಗಿದೆ.

ತಾಲೂಕಿನಲ್ಲಿ ಆನೆ ದಾಳಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿದ್ದು ಈ ವರ್ಷವಂತೂ ತೀರಾ ಹೆಚ್ಚಾಗಿದೆ. ಅರಣ್ಯ ಇಲಾಖೆ ಕೈಗೊಳ್ಳುವ ಮುನ್ನೆಚ್ಚರಿಕೆಗಳು, ಕಾರ್ಯಾಚರಣೆಗಳು ಸೀಮಿತ ಅವಧಿಗೆ ಮಾತ್ರ ಪರಿಣಾಮ ಬೀರುತ್ತವೆ. ಬಳಿಕ ಸಮಸ್ಯೆ ಯಥಾಪ್ರಕಾರ ಮುಂದುವರಿಯುತ್ತಿದೆ. ನಾಗರಹೊಳೆಯ ಆನೆಕಾವಾಡಿಗರ ತಂಡ ತಾಲೂಕಿನ ಹಲವು ಕಡೆಗಳಲ್ಲಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಿದೆ. ಮೆಣಸಿನ ಹೊಗೆ ಮೂಲಕ ಆನೆ ಬಾರದಂತೆ ತಡೆಯುವ ಕ್ರಮದ ಕುರಿತು ಪ್ರಾತ್ಯಕ್ಷಿಕೆಗಳು ನಡೆದಿವೆ. ಇಲಾಖೆಯ ಸಿಬ್ಬಂದಿ ಸಾಕಷ್ಟು ಗಸ್ತು ಕಾರ್ಯಾಚರಣೆ ಸ್ಥಳೀಯರ ಸಹಕಾರದಲ್ಲಿ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದ್ದಾರೆ.

ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಪಟಾಕಿ ಕೊರತೆ, ಅಗತ್ಯ ವಾಹನ, ಶಸ್ತ್ರಗಳ ಕೊರತೆಯಿಂದಾಗಿ ಆನೆಗಳನ್ನು ಕಾಡಿಗಟ್ಟುವ ಕೆಲಸ ಕಬ್ಬಿಣದ ಕಡಲೆಯಾಗಿದೆ.

ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಆನೆ ಹಾವಳಿ ಪ್ರದೇಶದ ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಯೋಜನಕ್ಕೆ ಬಾರದ ಆನೆ ಕಂದಕ

ತೋಟತ್ತಾಡಿ ಗ್ರಾಮದ ಬಾರೆ ಎಂಬಲ್ಲಿ ಇಲಾಖೆ ವತಿಯಿಂದ ಆನೆ ಕಂದಕ ಕಾಮಗಾರಿ ಪ್ರಗತಿಯಲ್ಲಿದೆ. ಆನೆ ಕಂದಕ ಸಮೀಪವೇ ಕಾಡಾನೆ ಕೃಷಿಗೆ ಹಾನಿ ಉಂಟುಮಾಡಿದೆ. ಆನೆ ಕಂದಕ ನಿರ್ಮಾಣಗೊಂಡಿರುವ ಸ್ಥಳದಲ್ಲಿ ನೀರು ಹರಿದು ಹೋಗಲು ಬಿಟ್ಟಿರುವ ತೋಡಿನ ಮೂಲಕ ಕಾಡಾನೆಗಳು ಪ್ರವೇಶಿಸಿ ಅಲ್ಲಿಂದಲೇ ವಾಪಸಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆ ಕಂದಕ ನಿರ್ಮಿಸಿದರೂ ಕಾಡಾನೆಗಳ ಹಾವಳಿಯನ್ನು ತಡೆಯಲು ಸಾಧ್ಯವಾಗದಿರುವುದರಿಂದ ಇನ್ನೇನು ಮಾಡಬೇಕು ಎಂಬ ಚಿಂತೆ ಕೃಷಿಕರಲ್ಲಿ ಮೂಡಿದೆ. ಕಂದಕಗಳ ನಡುವೆ ನೀರು ಹರಿಯಲು ಬಿಡುವ ತೋಡುಗಳ ಜಾಗದಲ್ಲಿ ತಡೆಗೋಡೆಯನ್ನು ನಿರ್ಮಿಸಬೇಕು. ಅಗತ್ಯ ಕಡೆಗಳಲ್ಲಿ ತಡೆಗೋಡೆ ನಿರ್ಮಿಸಿದರೆ ಮಾತ್ರ ಕಂದಕಗಳು ಪರಿಣಾಮ ಬೀರಲು ಸಾಧ್ಯ. ಆದರೆ ಅದಕ್ಕೆ ಸೂಕ್ತ ಅನುದಾನವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.

ತೋಟತ್ತಾಡಿಯಲ್ಲಿ ವ್ಯಾಪಕ ಹಾನಿ

ಶನಿವಾರ ತಡರಾತ್ರಿ ತೋಟತ್ತಾಡಿ ಗ್ರಾಮದ ಬಾರೆ ಎಂಬಲ್ಲಿ ಮೋಹನ ಗೌಡ ಹಾಗೂ ಉಮೇಶಗೌಡ ಎಂಬವರ ತೋಟಗಳಿಗೆ ನುಗ್ಗಿದ ಕಾಡಾನೆಗಳು ೩೦ ತೆಂಗಿನ ಮರ, ಅಡಿಕೆ ಗಿಡಗಳನ್ನು ಧ್ವಂಸಗೈದಿವೆ.

ಇಲ್ಲಿನ ತೋಟಗಳಲ್ಲಿ ಕಾಡಾನೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಬಾಳೆ ಗಿಡಗಳನ್ನು ಕಡಿದು ಹಾಕಲಾಗಿದೆ. ಕಡಿದು ಹಾಕಿರುವ ಬಾಳೆಗಳಲ್ಲಿ ಮೂಡಿರುವ ಚಿಗುರುಗಳನ್ನು ಆನೆಗಳು ತಿಂದು ಹಾಕಿವೆ. ಕಾಡಾನೆ ಬಾರದಂತೆ ನಿರ್ಮಿಸಿರುವ ಆನೆ ಕಂದಕದ ಕಾಮಗಾರಿ ನಡೆಯುತ್ತಿರುವಾಗಲೇ ಆನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದೆ. ಮಾಹಿತಿ ತಿಳಿದು ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ಮೋಹನ್ ಕುಮಾರ್ ಬಿ.ಜಿ. ಅವರ ನಿರ್ದೇಶನದಂತೆ ಡಿಆರ್‌ಎಫ್‌ಒ ಭವಾನಿ ಶಂಕರ್, ಬೀಟ್ ಫಾರೆಸ್ಟ್ ಪಾಂಡುರಂಗ ಕಮತಿ, ಸಹಾಯಕರಾದ ಕಿಟ್ಟು, ವಿನಯ ಚಂದ್ರ, ಗೋಪಾಲ ಪೂಜಾರಿ ಹಾಗೂ ಸ್ಥಳೀಯರು ಪರಿಸರದ ಸುಮಾರು ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದು, ಕಾಡಾನೆಗಳು ಕಾಡಿನ ಒಳಭಾಗದತ್ತ ಹೋಗಿರುವ ಕುರುಹುಗಳು ಕಂಡುಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News