ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ; ಸಾಹಿತ್ಯಾಸಕ್ತರಿಗೆ ಸಂತಸ

Update: 2024-01-29 04:21 GMT

ಕೋಲಾರ: ಪುಸ್ತಕ ಪ್ರೇಮಿ ಹರಿಹರಪ್ರಿಯ ಐದಾರು ದಶಕಗಳಿಂದ ಸಂಗ್ರಹಿಸಿದ್ದ ಸುಮಾರು ಐದು ಲಕ್ಷ ಪುಸ್ತಕಗಳಿದ್ದ ಪುಸ್ತಕ ಮನೆಯನ್ನು ಬೆಂಗಳೂರಿನಿಂದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರಿಸಲಾಗಿದೆ.

ಲಕ್ಷಾಂತರ ಸಂಖ್ಯೆಯ ಅಪರೂಪದ ಪುಸ್ತಕಗಳ ಸಂಗ್ರಹದ ಗಣಿ ಎಂದೇ ಖ್ಯಾತಿ ಪಡೆದಿರುವ ಹರಿಹರಪ್ರಿಯ ಪುಸ್ತಕ ಮನೆಯನ್ನು ರಾಜಧಾನಿ ಬೆಂಗಳೂರಿನಿಂದ ಕೋಲಾರ ಜಿಲ್ಲೆಯ ಮಾಲೂರಿಗೆ ಸ್ಥಳಾಂತರ ಮಾಡಿರುವುದು ಜಿಲ್ಲೆಯ ಓದುಗರಿಗೆ ಹಾಗೂ ಸಾಹಿತ್ಯಾಸಕ್ತರಿಗೆ ಸಂತಸದ ಸಂಗತಿಯಾಗಿದೆ.

ವಿದ್ಯಾಂಸ ಹರಿಹರಪ್ರಿಯ ಮೊದಲು ಬೆಂಗಳೂರಿನ ವಾಜರಹಳ್ಳಿಯ ತಮ್ಮ ನಿವಾಸದಲ್ಲಿ ಇರಿಸಿದ್ದರು. ಐದು ದಿನಗಳ ಹಿಂದೆ ಎಲ್ಲ ಪುಸ್ತಕಗಳನ್ನು ಆರು ಲಾರಿಗಳಲ್ಲಿ ಮಾಲೂರಿಗೆ ಸ್ಥಳಾಂತರಿಸಿದ್ದು, ರಾಜಧಾನಿಯ ಪುಸ್ತಕ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಟವನ್ನು ವ್ಯಕ್ತಪಡಿಸಿದ್ದಾರೆ. ಇದು ಬೆಂಗಳೂರಿನ ಓದುಗರಿಗೆ ನಷ್ಟ ಉಂಟು ಮಾಡಿದರೆ ಕೋಲಾರ ಜಿಲ್ಲೆಯ ಓದುಗ ಪ್ರಿಯರಿಗೆ ಖುಷಿಯ ವಿಚಾರವಾಗಿದೆ.

ಮಾಲೂರಿನ ಹೊರವಲಯದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ತಮ್ಮ ಪುತ್ರಿ ಜಾಗೃತಿಪ್ರಿಯ ಸಾತವಲ್ಲಿ ನಿವೇಶನದಲ್ಲಿ ನಿರ್ಮಿಸಿರುವ ಶೆಡ್ಡಿನಾಕಾರದ ಮನೆಯಲ್ಲಿ ಪುಸ್ತಕಗಳನ್ನು ಇರಿಸಿದ್ದಾರೆ. ಇನ್ನೂ ಜೋಡಿಸಬೇಕಾದ ಕೆಲಸ ಬಾಕಿ ಇದೆ.

ಪುಸ್ತಕ ಭಂಡಾರವು ವಿದ್ವಾಂಸರು, ಸಂಶೋಧಕರು, ಅಧ್ಯಯನಶೀಲರಿಗೆ ಆಕರ ಗ್ರಂಥಾಲಯವಾಗಿದೆ. ಇಲ್ಲಿಗೆ ಬಂದು ಓದಿ ಹೋಗಬಹುದು. ಕೇಳಿದ ಪುಸ್ತಕವನ್ನು ನಾನೇ ಖುದ್ದಾಗಿ ತೆಗೆದುಕೊಡುತ್ತೇನೆ. ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಪುಸ್ತಕಗಳಿವೆ. ಇದರಲ್ಲಿ ಶೇ.5ರಷ್ಟು ಪುಸ್ತಕಗಳು ಗೆಳೆಯರು ನೀಡಿದ್ದು. ಇನ್ನುಳಿದವನ್ನು ದುಡಿಮೆಯಿಂದ ಖರೀದಿಸಿದ್ದೇನೆ ಎಂದು ಹರಿಹರಪ್ರಿಯ ಹೇಳಿದರು.

ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿರುವ 72 ವಯಸ್ಸಿನ ಹರಿಹರಪ್ರಿಯ, 10ನೇ ವಯಸ್ಸಿನಿಂದಲೇ ಪುಸ್ತಕ ಸಂಗ್ರಹಿಸುತ್ತಿದ್ದಾರೆ. ಬರವಣಿಗೆ, ಉಪನ್ಯಾಸಗಳಲ್ಲಿ ತೊಡಗಿರುವ ಅವರು ಸುಮಾರು 110 ಕೃತಿ ಬರೆದಿದ್ದಾರೆ. ಸಾಹಿತ್ಯ ಕೃತಿಗಳು ಸೇರಿದಂತೆ ತಾವು ಸಂಗ್ರಹಿಸಿದ ಪುಸ್ತಕಗಳನ್ನು 1992ರಿಂದ ಸಾರ್ವಜನಿಕ ವೀಕ್ಷಣೆಗೆ, ಮಾಹಿತಿಗೆ ಮುಕ್ತಗೊಳಿಸಿದ್ದಾರೆ.

ಹಣ ತೆಗೆದುಕೊಂಡು ಬಾಷಣ ಮಾಡುತ್ತೇನೆ. ಅಷ್ಟನ್ನೂ ಪುಸ್ತಕ ಖರೀದಿಸಲು ಬಳಸುತ್ತೇನೆ. ಸರಕಾರದಿಂದ ಯಾವುದೇ ನೆರವು ಪಡೆದಿಲ್ಲ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವರು ನೆರವು ನೀಡಲು ಮುಂದೆ ಬಂದಿದ್ದಾರೆ. ಪುಸ್ತಕ ಜೋಡಿಸಿಡಲು 300 ಬೀರುಗಳ ಅಗತ್ಯವಿದೆ. ಇನ್ನೂ ಹೆಚ್ಚಿನ ಜಾಗದ ಅವಶ್ಯವಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸಿ.ವಿ.ನಾಗರಾಜ್. ಕೋಲಾರ

contributor

Similar News