ಮಾರಕ ರೇಬಿಸ್ ಬಗ್ಗೆ ಎಚ್ಚರವಿರಲಿ

Update: 2023-10-22 08:12 GMT

Photo: iStock

ರೇಬಿಸ್ ಅಥವಾ ಹುಚ್ಚುನಾಯಿ ರೋಗವು ವೈರಾಣುವಿನಿಂದ ಬರುವ ಮಾರಣಾಂತಿಕ ಪ್ರಾಣಿಜನ್ಯ ರೋಗ. ರೋಗ ಬಂದ ಮೇಲೆ ಚಿಕಿತ್ಸೆಯೇ ಇಲ್ಲ. ಸಾವು ಅನಿವಾರ್ಯ. ರೋಗಪೀಡಿತ ನಾಯಿಗಳು, ಬೆಕ್ಕುಗಳು ಮತ್ತಿತರ ಪ್ರಾಣಿಗಳು ಕಚ್ಚುವುದರಿಂದ ರೇಬಿಸ್ ರೋಗವು ಹರಡುತ್ತದೆ.

ಅಕ್ಟೋಬರ್ ತಿಂಗಳ ಪೂರ್ತಿ ರೇಬಿಸ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.

ಈ ಮಾರಕ ಕಾಯಿಲೆಯ ಗಂಭೀರತೆ ಯನ್ನು ಪರಿಗಣಿಸಿ ಭಾರತ ಸರಕಾರವು ನ್ಯಾಷನಲ್ ಆ್ಯಕ್ಷನ್ ಪ್ಲ್ಯಾನ್ ಫಾರ್ ಕೆನೈನ್ ಮೀಡಿಯೇಟೆಡ್ ರೇಬಿಸ್ ಎಲಿಮಿನೇಷನ್ (NAPRE)-2030 ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಅದರಂತೆ, ರೇಬಿಸ್ ನಿರ್ಮೂಲನೆಗೆ ರಾಜ್ಯವು ಸ್ಟೇಟ್ ಆ್ಯಕ್ಷನ್ ಪ್ಲ್ಯಾನ್ ಫಾರ್ ಕೆನೈನ್ ಮೀಡಿಯೇಟೆಡ್ ರೇಬಿಸ್ ಎಲಿಮಿನೇಷನ್ (SAPRE) ಎಂಬ ಕ್ರಿಯಾಯೋಜನೆಯನ್ನು ರೂಪಿಸಿದೆ.

ಈ ಎರಡೂ ಯೋಜನೆಗಳಲ್ಲಿನ ಪ್ರಮುಖ ಅಂಶಗಳೆಂದರೆ ರೇಬಿಸ್ ನಿಂದಾಗುವ ಮರಣಗಳ ತಡೆಯುವಿಕೆ, ಸಾರ್ವಜನಿಕರಲ್ಲಿ ಅರಿವು ಮೂಡಿಸುವಿಕೆ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ, ರೋಗಪತ್ತೆ ವಿಧಾನಗಳ ಬಲವರ್ಧನೆ ಮತ್ತು ರೇಬಿಸ್ ನಿಯಂತ್ರಣಕ್ಕಾಗಿ ಕಣ್ಗಾವಲು ಯೋಜನೆಯನ್ನು ರೂಪಿಸುವುದು.

ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರು ರೇಬಿಸ್ ನಿಂದ ಸಾಯುತ್ತಾರೆ. ಜಾಗತಿಕ ಸಾವುಗಳ ಪೈಕಿ ಭಾರತದ್ದು ಅಗ್ರಪಾಲು. ಇತ್ತೀಚೆಗೆ ಗೋವಾ ರಾಜ್ಯವನ್ನು ಮಾನವ ರೇಬಿಸ್ ಮುಕ್ತರಾಜ್ಯ ಎಂದು ಘೋಷಿಸಲಾಗಿದೆ. ಅಂಡಮಾನ್, ನಿಕೋಬಾರ್ ಹಾಗೂ ಲಕ್ಷದ್ವೀಪಗಳು ನಾಯಿ ರೇಬಿಸ್ ಮುಕ್ತವಾಗಿವೆ.

ನಗರ ಪ್ರದೇಶಗಳಲ್ಲಿ ರೇಬಿಸ್ ಹೆಚ್ಚಿನ ಪ್ರಮಾಣದಲ್ಲಿದೆ. ರೋಗ ಹರಡುವಿಕೆಯಲ್ಲಿ ಬೀದಿ ನಾಯಿಗಳದ್ದೇ ಪ್ರಮುಖ ಪಾತ್ರ. ಗ್ರಾಮೀಣ ಪ್ರದೇಶದಲ್ಲಿ ರೇಬಿಸ್ ಕಂಡುಬಂದರೂ ಹೆಚ್ಚಾಗಿ ವರದಿಯಾಗುವುದಿಲ್ಲ. ರೋಗಪತ್ತೆ ಮತ್ತು ನಿಯಂತ್ರಣ ಕ್ರಮಗಳು ಗ್ರಾಮೀಣ ಪ್ರದೇಶಕ್ಕೆ ತಲುಪದಿರುವುದೇ ಇದಕ್ಕೆ ಕಾರಣ.

ರೇಬಿಸ್ ರೋಗಲಕ್ಷಣಗಳು

ಪ್ರಾಣಿಗಳ ನಡವಳಿಕೆಯಲ್ಲಿ ಬದಲಾವಣೆ, ಗುರಿಯಿಲ್ಲದೆ ಓಡುವುದು, ಪ್ರಚೋದನೆಯಿಲ್ಲದೆ ಆಕ್ರಮಣ ಮಾಡುವುದು, ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕಚ್ಚುವುದು, ಮಂಕಾಗಿರುವುದು, ಅತಿಯಾಗಿ ಜೊಲ್ಲು ಸುರಿಸುವುದು, ದವಡೆ ಮುಚ್ಚದಿರುವುದು, ನಾಯಿಗಳ ಬೊಗಳುವ ಧ್ವನಿಯಲ್ಲಿ ಬದಲಾವಣೆ, ಆಹಾರ ತ್ಯಜಿಸುವಿಕೆ ಮತ್ತು ಕಲ್ಲು, ಪೇಪರ್, ಮರ, ಲೋಹದ ಪದಾರ್ಥಗಳನ್ನು ಕಚ್ಚುವುದು. ರೋಗ ಲಕ್ಷಣಗಳು ಕಂಡುಬಂದ ನಂತರ ಸುಮಾರು 10 ದಿನಗಳೊಳಗೆ ಸಾವು ಸಂಭವಿಸುತ್ತದೆ.

ನಾಯಿಗಳಿಂದ ಕಚ್ಚಿಸಿಕೊಳ್ಳದಿರಲು ಹಲವು ಎಚ್ಚರಿಕೆಯ ಕ್ರಮಗಳಿವೆ. ಅವೆಂದರೆ, ನಾಯಿಗಳನ್ನು ಕೆಣಕಬಾರದು, ಕಲ್ಲುಗಳಿಂದ ಹೊಡೆಯಬಾರದು, ಅಟ್ಟಿಸಿಕೊಂಡು ಹೋಗಬಾರದು, ಅವು ಆಹಾರ ಸೇವಿಸುವಾಗ, ವಿಶ್ರಾಂತಿ ಪಡೆಯುತ್ತಿರುವಾಗ, ಮರಿಗಳಿಗೆ ಹಾಲುಣಿಸುವಾಗ ತೊಂದರೆ ಕೊಡಬಾರದು. ನಾಯಿಗಳು ಬೆನ್ನಟ್ಟಿದಾಗ ಓಡದೇ ಅಲ್ಲೆ ನಿಲ್ಲಬೇಕು. ನಾಯಿಗಳಿಗೆ ಮುತ್ತನ್ನು ಕೊಡಬಾರದು. ಏಕೆಂದರೆ ರೋಗಲಕ್ಷಣಗಳನ್ನು ಪ್ರದರ್ಶಿಸುವ ಮೊದಲೇ ಅದರ ಎಂಜಲಿನಲ್ಲಿ ರೇಬಿಸ್ ವೈರಾಣು ಇರಬಹುದಾದ ಸಾಧ್ಯತೆಗಳಿವೆ. ನಾಯಿಗಳಿಗೆ ಅತಿಯಾದ ಶಿಕ್ಷೆ ಕೊಡಬಾರದು, ಇದರಿಂದ ಕಚ್ಚುವ ಸಾಧ್ಯತೆ ಹೆಚ್ಚು. ನಾಯಿಯು ಅಸಹಜವಾಗಿ ವರ್ತಿಸುತ್ತಿದ್ದರೆ ತಕ್ಷಣ ಪಶುವೈದ್ಯರ ಗಮನಕ್ಕೆ ತರಬೇಕು.

ರೇಬಿಸ್ ಮತ್ತು ಸಾಮಾಜಿಕ ಬದ್ಧೆ

ಪುರಸಭೆ, ನಗರಸಭೆ ಅಥವಾ ನಗರಪಾಲಿಕೆಯ ಝೀರೊ ರೇಬಿಸ್ ಸಹಾಯವಾಣಿಗೆ ಕರೆಮಾಡಿ ಹುಚ್ಚುನಾಯಿಗಳ ಉಪಟಳದ ಬಗ್ಗೆ ತಿಳಿಸಬೇಕು. ಸಾಧ್ಯವಾದಲ್ಲಿ ಕಚ್ಚಿದ ನಾಯಿಯನ್ನು ಕೂಡಿಹಾಕಿ 10 ದಿನಗಳವರೆಗೆ ಅದನ್ನು ಗಮನಿಸುತ್ತಿರಬೇಕು. ಮಕ್ಕಳೇನಾದರೂ ನಾಯಿಯಿಂದ ಕಚ್ಚಿಸಿಕೊಂಡರೆ ತಕ್ಷಣವೇ ಹಿರಿಯರ ಗಮನಕ್ಕೆ ತರಬೇಕು. ನಾಯಿ ಕಚ್ಚಿದ ನಂತರ ಹಾಕುವ ಲಸಿಕೆ ಕೊಡಿಸಬೇಕು. ಹಲವಾರು ಸಂದರ್ಭಗಳಲ್ಲಿ ಮಕ್ಕಳು ರೇಬಿಸ್ ಪೀಡಿತ ನಾಯಿಗಳಿಂದ ಕಚ್ಚಿಸಿಕೊಂಡು, ಮನೆಯಲ್ಲಿ ಹಿರಿಯರಿಗೆ ಹೆದರಿ ಹೇಳದೆ ಇರುವುದರಿಂದ, ಅಂತಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗದಿರುವುದರಿಂದ ಸಾವಿಗೀಡಾದ ಉದಾಹರಣೆಗಳಿವೆ. ಶೇ. 70 ರಷ್ಟು ನಾಯಿಗಳಿಗೆ ರೇಬಿಸ್ ಚುಚ್ಚುಮದ್ದನ್ನು ನೀಡುತ್ತಿದ್ದರೆ ರೇಬಿಸ್ ನಿಯಂತ್ರಣ ಸಾಧ್ಯವೆಂಬ ಅಭಿಪ್ರಾಯವಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ.

ನಾಯಿ ಕಚ್ಚಿದ ಜಾಗದ ಗಾಯಕ್ಕೆ ಬ್ಯಾಂಡೇಜ್ ಕಟ್ಟುವುದು ಬೇಡ. ಗಾಯವನ್ನು ಹೊಲಿಯುವುದು ಬೇಡ. ಗಾಯಕ್ಕೆ ಮೆಣಸಿನಪುಡಿ, ನಿಂಬೆ, ಕಾಫಿಪುಡಿ ಹಾಗೂ ಇತರ ಉರಿಯುಂಟು ಮಾಡುವಂತಹ ಪದಾರ್ಥಗಳನ್ನು ಲೇಪಿಸುವುದು ಬೇಡ, ಮೂಢನಂಬಿಕೆಗಳಿಗೆ ಈಡಾಗುವುದು ಬೇಡ.

ನಾಯಿ ಮತ್ತು ಬೆಕ್ಕುಗಳನ್ನು ಸಾಕುವಾಗ ಹಲವು ಜಾಗರೂಕ ಕ್ರಮಗಳನ್ನು ಅನುಸರಿಸಬೇಕು. ಪಶುವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ನಾಯಿಗಳಿಗೆ ಚುಚ್ಚುಮದ್ದನ್ನು ಹಾಕಿಸಿ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಅವುಗಳನ್ನು ಮುಟ್ಟಿದ ನಂತರ ಸಾಬೂನಿನಿಂದ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಅವು ಜನರನ್ನು ನೆಕ್ಕಬಾರದು. ಕಾಲಿನ ಉಗುರುಗಳನ್ನು ಆಗಾಗ ಕತ್ತರಿಸುತ್ತಿರಬೇಕು. ಇದರಿಂದ ತರಚುಗಾಯಗಳನ್ನು ನಿಯಂತ್ರಿಸಬಹುದು. ಅವುಗಳ ವಾಸಸ್ಥಳದ ಜಾಗವನ್ನು ಸೋಂಕು ನಿವಾರಕಗಳಿಂದ ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು. ತ್ಯಾಜ್ಯಗಳನ್ನು ಸೂಕ್ತ ಕ್ರಮದಲ್ಲಿ ವಿಲೇವಾರಿ ಮಾಡಬೇಕು. ಮನೆಯ ಹೊರಗೆ ನಾಯಿಗಳನ್ನು ಕರೆದೊಯ್ಯುವಾಗ ಅವುಗಳಿಗೆ ಕುತ್ತಿಗೆಪಟ್ಟಿ ಹಾಕಿ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಬೇರೆಯವರ ಮನೆಯ ಮುಂದೆ ಅಥವಾ ಸಾರ್ವಜನಿಕ ರಸ್ತೆ, ಸ್ಥಳ, ಉದ್ಯಾನಗಳಲ್ಲಿ ಮಲವಿಸರ್ಜನೆ ಮಾಡಿದರೆ ಅದನ್ನು ಸ್ವಚ್ಛಗೊಳಿಸಬೇಕು.

ಬೀದಿನಾಯಿಗಳ ಸಂತಾನ ಹರಣ ಮತ್ತು ಲಸಿಕಾ ಚಿಕಿತ್ಸೆಗಳಿಗಾಗಿ ಸ್ಥಳೀಯ ಪ್ರಾಣಿದಯಾ ಸಂಘಗಳನ್ನು ಸಂಪರ್ಕಿಸಬೇಕು.

ರೇಬಿಸ್ ರೋಗಪತ್ತೆ ಪ್ರಯೋಗಾಲಯ

ರೇಬಿಸ್ ರೋಗ ನಿರ್ಧಾರ ಮತ್ತು ನಿಯಂತ್ರಣ ಮಾಡುವಲ್ಲಿ ಪ್ರಯೋಗಾಲಯದ ಪಾತ್ರ ಅತಿಮುಖ್ಯ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಇಂತಹ ಪ್ರಯೋಗಾಲಯವಿದೆ. ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ - ಕಾಮನ್‌ವೆಲ್ತ್ ಪಶುವೈದ್ಯಕೀಯ ಸಂಘದ ರೇಬಿಸ್ ರೋಗಪತ್ತೆ ಪ್ರಯೋಗಾಲಯ (KVAFSU-CVA Rabies Diagnostic Laboratory) ಎಂದು ಇದನ್ನು ಕರೆಯಲಾಗಿದೆ. ಸೂಕ್ಷ್ಮಜೀವಾಣು ವಿಜ್ಞಾನ ವಿಭಾಗದ ಸುಪರ್ದಿಯಲ್ಲಿರುವ ಪ್ರಯೋಗಾಲಯಕ್ಕೆ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ 12ನೆಯ ಅಂತರ್‌ರಾಷ್ಟ್ರೀಯ ಪ್ರಯೋಗಾಲಯ ಎಂಬ ಹೆಗ್ಗಳಿಕೆಯಿದೆ. ಐಎಸ್‌ಒ ಮಾನ್ಯತೆಯನ್ನೂ ಪಡೆದಿದೆ. ದಕ್ಷಿಣ ಏಶ್ಯ ಮತ್ತು ಸಾರ್ಕ್ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲನೆಯ ಹಾಗೂ ಏಕೈಕ ಪ್ರಯೋಗಾಲಯವಾಗಿದೆ, ರಾಜ್ಯ ಹಾಗೂ ರಾಷ್ಟ್ರದ ಮುಕುಟಮಣಿಯಾಗಿದೆ.

ರೇಬಿಸ್ ಪ್ರಯೋಗಾಲಯದಲ್ಲಿ ಡೈರೆಕ್ಟ್ ಫ್ಲೋರೊಸೆಂಟ್ ಆ್ಯಂಟಿಬಾಡಿ ಟೆಸ್ಟ್ (ಡಿಎಫ್‌ಎ) ಪರೀಕ್ಷೆಯ ಮೂಲಕ ಖಚಿತ ರೋಗನಿರ್ಧಾರ ಮಾಡಲಾಗುತ್ತಿದೆ. ನಮ್ಮ ದೇಶದ ಹಲವು ರಾಜ್ಯಗಳ ಹಾಗೂ ದಕ್ಷಿಣ ಏಶ್ಯದ ವಿಜ್ಞಾನಿಗಳಿಗೆ ಇಲ್ಲಿ ರೇಬಿಸ್ ಪತ್ತೆಪರೀಕ್ಷೆ ಕೈಗೊಳ್ಳುವ ತಜ್ಞತೆಯ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತಹ ತರಬೇತಿ ಪಡೆದವರು ಹಲವು ದೇಶಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದಾರೆ. ರೇಬಿಸ್ ಅನ್ನು ನಿರಂತರವಾಗಿ ನಿಗ್ರಹಿಸಲಾಗುತ್ತಿದೆ. ಇದಕ್ಕಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯ.

(ಡಾ. ಶ್ರೀಕೃಷ್ಣ ಇಸಳೂರ ಅವರು ರೇಬಿಸ್ ತಜ್ಞರು, ಡಾ. ಎಂ. ನಾರಾಯಣ ಸ್ವಾಮಿಯವರು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡೀನ್ ಹಾಗೂ ವಿಜ್ಞಾನ ಬರಹಗಾರರು)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ಶ್ರೀಕೃಷ್ಣ ಇಸಳೂರ

contributor

Contributor - ಡಾ. ಎಂ. ನಾರಾಯಣ ಸ್ವಾಮಿ

contributor

Similar News