‘ಇಂಡಿಯಾ’ ಬದಲು ‘ಭಾರತ’; ಈಗ ಶಾಲಾ ಪಠ್ಯಕ್ಕೆ ವಿಸ್ತರಿಸಿದ ರಾಜಕೀಯ

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂದು ಬಳಸಬೇಕೆಂಬ ಶಿಫಾರಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಮೊದಲ ರಾಜ್ಯ ಕೇರಳವಾಗಿದೆ. ಸಂವಿಧಾನದಲ್ಲಿ ಹೇಳಿರುವಂತೆ ‘ಇಂಡಿಯಾ’ ಅಥವಾ ‘ಭಾರತ’ ಎಂದು ಬಳಸುವ ಹಕ್ಕು ನಾಗರಿಕರಿಗೆ ಇದೆ. ಈಗ ‘ಭಾರತ’ ಎಂಬುದನ್ನು ಮಾತ್ರ ದೇಶದ ಹೆಸರಾಗಿ ಬಳಸಬೇಕೆಂದು ಹೇಳುತ್ತಿರುವುದು ಸಂಕುಚಿತ ರಾಜಕಾರಣ ಎಂದು ಕೇರಳದ ಶಿಕ್ಷಣ ಸಚಿವರು ಹೇಳಿದ್ದಾರೆ.

Update: 2023-10-31 04:12 GMT

Photo: PTI

ದೇಶದ ಹೆಸರು ಬದಲಿಸುವ ಯತ್ನ ಬೇರೆ ಬೇರೆ ರೂಪದಲ್ಲಿ ಮುಂದುವರಿದಿರುವಂತಿದೆ. ಈವರೆಗೆ ರಾಜಕೀಯ ನೆಲೆಯಲ್ಲಿದ್ದ ಅದನ್ನೀಗ ಶೈಕ್ಷಣಿಕ ವಲಯದಲ್ಲೂ ವಿಸ್ತರಿಸುವ ಪ್ರಯತ್ನಗಳು ಕಾಣಿಸತೊಡಗಿವೆ.

ಈ ಮೊದಲು ಜಿ20 ಶೃಂಗಸಭೆಗೆ ಸಂಬಂಧಿಸಿದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಕೇಂದ್ರ ಸರಕಾರ ಮುದ್ರಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅದರ ಬೆನ್ನಲ್ಲೇ, ಅದಕ್ಕೂ ಒಂದು ತಿಂಗಳ ಮೊದಲೇ ಪ್ರಧಾನಿ ಮೋದಿ ಗ್ರೀಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಎಲ್ಲಾ ಪ್ರೋಟೋಕಾಲ್ ಸರಕುಗಳಲ್ಲಿಯೂ ‘ಪ್ರೈಂ ಮಿನಿಸ್ಟರ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿರುವುದರ ಬಗ್ಗೆ ‘ದಿ ವೈರ್’ ವರದಿ ಮಾಡಿತ್ತು. ಸಿಬ್ಬಂದಿ ಹೇಳುವ ಪ್ರಕಾರ ‘ಭಾರತ್’ ಎಂದು ಬಳಸಲು ಮೌಖಿಕವಾಗಿ ಸೂಚಿಸಲಾಗಿತ್ತು ಎಂದು ಆ ವರದಿಯಲ್ಲಿ ಹೇಳಲಾಗಿತ್ತು.

ಇವೆಲ್ಲದರ ಬಳಿಕ ಈಗ ಒಂದರಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂಬ ಹೆಸರನ್ನು ಬಳಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಮಾಜ ವಿಜ್ಞಾನಗಳಿಗೆ ಸಂಬಂಧಿಸಿದಂತೆ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.

ಪಠ್ಯಕ್ರಮದಲ್ಲಿ ಪುರಾತನ ಇತಿಹಾಸದ ಬದಲಿಗೆ ಶಾಸ್ತ್ರೀಯ ಇತಿಹಾಸವನ್ನು ಅಳವಡಿಸಬೇಕು, ಎಲ್ಲ ವಿಷಯಗಳಲ್ಲಿಯೂ ಭಾರತೀಯ ಜ್ಞಾನ ವ್ಯವಸ್ಥೆಯನ್ನು (ಐಕೆಎಸ್) ಅಳವಡಿಸಬೇಕು ಎಂಬ ಶಿಫಾರಸು ಮಾಡಿರುವುದಾಗಿ ಮತ್ತಿದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವುದಾಗಿ ಸಮಿತಿಯ ಅಧ್ಯಕ್ಷ ಸಿ.ಐ. ಇಸಾಕ್ ಹೇಳಿದ್ದಾರೆ.

ಆದರೆ, ಸಮಿತಿಯ ಶಿಫಾರಸು ಆಧರಿಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಎನ್‌ಸಿಇಆರ್‌ಟಿ ಅಧ್ಯಕ್ಷ ದಿನೇಶ್ ಸಕ್ಲಾನಿ ಸ್ಪಷ್ಟಪಡಿಸಿರುವುದಾಗಿಯೂ ವರದಿಯಾಗಿದೆ.

ಭಾರತ ಎಂಬುದು ಬಹಳ ಹಳೆಯ ಹೆಸರು. ಪುರಾತನ ಪಠ್ಯಗಳಲ್ಲಿ ಭಾರತ ಎಂಬ ಪದವನ್ನು ಬಳಸಲಾಗಿದೆ ಎಂಬುದು ಇಸಾಕ್ ಸಮರ್ಥನೆ. ಅಲ್ಲದೆ, ಬೇರೆ ಬೇರೆ ಯುದ್ಧಗಳಲ್ಲಿನ ಹಿಂದೂ ವಿಜಯವನ್ನು ಪಠ್ಯಪುಸ್ತಕಗಳಲ್ಲಿ ಪ್ರಮುಖವಾಗಿ ಚಿತ್ರಿಸಬೇಕು ಎಂದೂ ಸಮಿತಿ ಶಿಫಾರಸು ಮಾಡಿರುವುದಾಗಿ ಅವರು ಹೇಳಿದ್ದಾರೆ. ಪಠ್ಯಪುಸ್ತಕಗಳಲ್ಲಿ ಈಗ ನಮ್ಮ ವೈಫಲ್ಯಗಳನ್ನು ಉಲ್ಲೇಖಿಸಲಾಗಿದೆ. ಆದರೆ ಮೊಗಲರು ಮತ್ತು ಸುಲ್ತಾನರ ವಿರುದ್ಧ ನಮ್ಮ ವಿಜಯವನ್ನು ಉಲ್ಲೇಖಿಸಿಲ್ಲ ಎಂಬುದು ಇಸಾಕ್ ಹೇಳಿಕೆ. ಇಸಾಕ್ ಅವರು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ತಿನ (ಐಸಿಎಚ್‌ಆರ್) ಸದಸ್ಯರೂ ಆಗಿದ್ದಾರೆ.

ಬ್ರಿಟಿಷರು ಭಾರತದ ಇತಿಹಾಸವನ್ನು ಪುರಾತನ, ಮಧ್ಯಯುಗ ಮತ್ತು ಆಧುನಿಕ ಎಂದು ಮೂರು ಭಾಗಗಳಲ್ಲಿ ವಿಭಜಿಸಿದ್ದರು. ಭಾರತಕ್ಕೆ ವೈಜ್ಞಾನಿಕ ಪ್ರಗತಿಯ ಅರಿವಿರಲಿಲ್ಲವೆಂದೂ ನಂತರದಲ್ಲಿ ಪ್ರಗತಿ ಕಂಡಿತು ಎಂದೂ ಈ ಮೂರೂ ಭಾಗಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಭಾರತೀಯ ಇತಿಹಾಸದ ಶಾಸ್ತ್ರೀಯ ಕಾಲಘಟ್ಟವನ್ನು ಮಧ್ಯಯುಗ ಹಾಗೂ ಆಧುನಿಕ ಯುಗದ ಜೊತೆಯಲ್ಲಿ ಶಾಲೆಗಳಲ್ಲಿ ಬೋಧಿಸಬೇಕು ಎಂದು ಸಲಹೆ ನೀಡಲಾಗಿದೆ ಎಂದಿದ್ದಾರೆ ಇಸಾಕ್.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ಕ್ಕೆ ಅನುಗುಣವಾಗಿ ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸುತ್ತಿದೆ. ಕಲಿಕಾ ಪರಿಕರಗಳು, ಪಠ್ಯಪುಸ್ತಕ ಹಾಗೂ ಪಠ್ಯಕ್ರಮವನ್ನು ಅಂತಿಮಗೊಳಿಸಲು ಮಂಡಳಿ 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಶಿಕ್ಷಣ ಕಲಿಕಾ ಪರಿಕರ ಸಮಿತಿಯನ್ನು ರಚಿಸಿದೆ. ಐಸಿಎಚ್‌ಆರ್ ಅಧ್ಯಕ್ಷ ರಘುವೇಂದ್ರ ತನ್ವರ್, ಜೆಎನ್‌ಯು ಪ್ರಾಧ್ಯಾಪಕಿ ವಂದನಾ ಮಿಶ್ರಾ, ಡೆಕ್ಕನ್ ಕಾಲೇಜ್ (ಡೀಮ್ಡ್) ವಿವಿ ವಿಶ್ರಾಂತ ಕುಲಪತಿ ವಸಂತ್ ಶಿಂಧೆ, ಹರ್ಯಾಣದ ಸರಕಾರಿ ಶಾಲೆಯೊಂದರಲ್ಲಿ ಸಮಾಜಶಾಸ್ತ್ರ ಬೋಧಿಸುವ ಮಮತಾ ಯಾದವ್ ಮೊದಲಾದವರು ಈ ಸಮಿತಿಯಲ್ಲಿದ್ದಾರೆ.

ಈ ಸಮಿತಿಯ ಅಧ್ಯಕ್ಷರಾಗಿರುವ ಇಸಾಕ್ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿರುವ ‘ಭಾರತೀಯ ವಿಚಾರ ಕೇಂದ್ರಂ’ನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 1970ರ ದಶಕದಿಂದಲೂ ಅವರು ಎಬಿವಿಪಿ ಜೊತೆಗೂ ಗುರುತಿಸಿಕೊಂಡವರು. ಪದ್ಮಶ್ರೀ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ.

ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಎಂಬ ಹೆಸರಿನ ಬದಲು ‘ಭಾರತ’ ಎಂದು ಬಳಸಬೇಕೆಂಬ ಶಿಫಾರಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ ಮೊದಲ ರಾಜ್ಯ ಕೇರಳವಾಗಿದೆ. ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಈ ಕುರಿತು ಪ್ರತಿಕ್ರಿಯಿಸಿದ್ದು, ಸಂವಿಧಾನದಲ್ಲಿ ಹೇಳಿರುವಂತೆ ‘ಇಂಡಿಯಾ’ ಅಥವಾ ‘ಭಾರತ’ ಎಂದು ಬಳಸುವ ಹಕ್ಕು ನಾಗರಿಕರಿಗೆ ಇದೆ. ಈಗ ‘ಭಾರತ’ ಎಂಬುದನ್ನು ಮಾತ್ರ ದೇಶದ ಹೆಸರಾಗಿ ಬಳಸಬೇಕೆಂದು ಹೇಳುತ್ತಿರುವುದು ಸಂಕುಚಿತ ರಾಜಕಾರಣ. ಕೇರಳ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಐತಿಹಾಸಿಕ ಸತ್ಯಗಳನ್ನು ತಿರುಚುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮತ್ತೊಂದು ನಡೆ ಇದೆಂದು ಶಿವನ್‌ಕುಟ್ಟಿ ಟೀಕಿಸಿದ್ದಾರೆ.

ಮೊದಲು, ಎನ್‌ಸಿಇಆರ್‌ಟಿ ಕೆಲ ಭಾಗಗಳನ್ನು ತೆಗೆದುಹಾಕಿದ ನಂತರ ನಾವು ಅವುಗಳನ್ನು ಹೆಚ್ಚುವರಿ ಪಠ್ಯಪುಸ್ತಕಗಳ ಮೂಲಕ ರಾಜ್ಯದಲ್ಲಿ ಕಲಿಸುವ ಪಠ್ಯಕ್ರಮದಲ್ಲಿ ಸೇರಿಸಿದ್ದೇವೆ ಎಂದು ವಿ. ಶಿವನ್‌ಕುಟ್ಟಿ ಹೇಳಿದ್ದಾರೆ. ಎನ್‌ಸಿಇಆರ್‌ಟಿ ಮಕ್ಕಳಿಗೆ ಅಸಾಂವಿಧಾನಿಕ, ಅವೈಜ್ಞಾನಿಕ ಮತ್ತು ತಿರುಚಿದ ಇತಿಹಾಸದ ವಿಷಯಗಳನ್ನು ಕಲಿಸಲು ಬಯಸಿದರೆ, ಕೇರಳ ಅದನ್ನು ವಿರೋಧಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಸಕ್ತ ಬಳಸುತ್ತಿರುವ 44 ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕೆಲಸದ ಕುರಿತು ವಿವರವಾಗಿ ಚರ್ಚಿಸಲು ಕೇರಳ ಸರಕಾರ ರಾಜ್ಯ ಪಠ್ಯಕ್ರಮ ಸಮಿತಿಯನ್ನು ಕರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಎನ್‌ಸಿಇಆರ್‌ಟಿಯ ಉಪಸಮಿತಿಯ ಮುಖ್ಯಸ್ಥ ಸಿ.ಐ. ಇಸಾಕ್ ಹೇಳಿಕೆ ಹಿನ್ನೆಲೆಯಲ್ಲಿ ಶಿವನ್‌ಕುಟ್ಟಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಇಸಾಕ್ ನೇತೃತ್ವದ ಸಮಿತಿಯ ಶಿಫಾರಸುಗಳು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.

ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾವನ್ನು ಭಾರತ ಎಂದು ಬದಲಿಸುವ ಪ್ರಸ್ತಾಪ ಸ್ವೀಕಾರಾರ್ಹವಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಹೇಳಿದ್ದಾರೆ.

ಪ್ರತಿಪಕ್ಷ ಒಕ್ಕೂಟ ‘ಇಂಡಿಯಾ’ ಎಂಬ ಹೆಸರಿಟ್ಟಿಕೊಂಡಾಗಿನಿಂದ, ಮೋದಿ ಮತ್ತು ಬಿಜೆಪಿ ಒಂದು ಬಗೆಯ ತಲ್ಲಣಕ್ಕೆ ಒಳಗಾದಂತಿದೆ. ಜಿ20 ಆಹ್ವಾನ ಪತ್ರಿಕೆಯಲ್ಲಿ ‘ಇಂಡಿಯಾ’ ಬದಲು ಭಾರತ ಎಂದು ಬಳಸಿದ್ದು ಕೂಡ ಬಹುಶಃ ಅದೇ ಕಾರಣದಿಂದ ಮತ್ತು ಆ ಕ್ರಮ ತೀವ್ರ ಟೀಕೆಗೂ ತುತ್ತಾಯಿತು.

ಭಾರತದ ಸಂವಿಧಾನದ 1ನೇ ವಿಧಿಯಲ್ಲಿ, ಇಂಡಿಯಾ, ಅಂದರೆ ಭಾರತ ಎಂದೇ ಇದೆ. ಎರಡೂ ಹೆಸರುಗಳನ್ನು ಬಳಸುತ್ತ ಬರಲಾಗಿದೆ.

ಆದರೆ ಯಾವಾಗ ‘ಇಂಡಿಯಾ’ ಎಂದು ಪ್ರತಿಪಕ್ಷ ಮೈತ್ರಿ ತನ್ನ ಹೆಸರನ್ನು ಪ್ರಕಟಿಸಿತೋ ಆಗಿನಿಂದಲೂ ಮೋದಿ ಭಯಗೊಂಡಂತಿದೆ. ಇಂಡಿಯನ್ ಮುಜಾಹಿದೀನ್, ಪಿಎಫ್‌ಐನಲ್ಲಿಯೂ ಇಂಡಿಯಾ ಇದೆ ಎಂದೆಲ್ಲ ವಿಚಿತ್ರ ಹೇಳಿಕೆಗಳನ್ನು ಅವರು ಕೊಟ್ಟಿದ್ದೂ ಆಯಿತು. ಎನ್‌ಡಿಎ ಎಂಬುದರಲ್ಲಿ ಡೆಮಾಕ್ರಟಿಕ್ ಎಂದು ಸೂಚಿಸುವ ‘ಆ’ ಎಂಬುದು ಡೆವಲಪ್‌ಮೆಂಟ್ ಎಂಬುದರ ಸೂಚಕ ಎಂದೆಲ್ಲ ಹೇಳುವವರೆಗೂ ಅವರು ಹೋಗಿದ್ದರು.

ಹೀಗೆಲ್ಲ ಇರುವಾಗಲೇ ಇಸಾಕ್ ನೇತೃತ್ವದ ಸಮಿತಿ ‘ಭಾರತ’ ಎಂದು ಪಠ್ಯಪುಸ್ತಕಗಳಲ್ಲಿ ಬಳಸಲು, ಹಿಂದೂ ವಿಜಯಗಳನ್ನು ಪ್ರಮುಖವಾಗಿ ಚಿತ್ರಿಸಲು ಶಿಫಾರಸು ಮಾಡಿದೆ. ಇದು ವಿವಾದಕ್ಕೆಡೆ ಮಾಡುತ್ತಿದ್ದಂತೆ ಅವರು ತಮ್ಮ ಆರೆಸ್ಸೆಸ್ ಮತ್ತು ಎಬಿವಿಪಿ ಹಿನ್ನೆಲೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

‘‘ನಾನು ಆರೆಸ್ಸೆಸ್ ಅಲ್ಲ, ನಾನು ಕ್ರಿಶ್ಚಿಯನ್. ನಾನು ಆರೆಸ್ಸೆಸ್ ಎಂದು ನಿಮಗೆ ಯಾರು ಹೇಳಿದರು? ನಾನು ಬ್ರಾಹ್ಮಣನಲ್ಲ. ನನ್ನದು 500 ವರ್ಷಗಳಷ್ಟು ಹಳೆಯದಾದ ಕ್ರಿಶ್ಚಿಯನ್ ಕುಟುಂಬ. ನನಗೆ ಆರೆಸ್ಸೆಸ್‌ನೊಂದಿಗೆ ಸಂಬಂಧವಿದೆ. ಆದರೆ ಈ ವಿಚಾರದಲ್ಲಿ ಆರೆಸ್ಸೆಸನ್ನು ಎಳೆದು ತರಬೇಕಿಲ್ಲ. ಅದು ಈ ವಿಚಾರಗಳನ್ನು ನಿರ್ಧರಿಸುವುದಿಲ್ಲ’’ ಎಂದಿದ್ದಾರೆ ಎಂದು ‘ದಿ ವೈರ್’ ವರದಿ ಮಾಡಿದೆ.

ಹೆಸರಿನ ಬದಲಾವಣೆಯನ್ನು 7ರಿಂದ 12ನೇ ತರಗತಿಯವರೆಗೆ ಕಲಿಸಬೇಕು ಎಂದು ಇಸಾಕ್ ಹೇಳುತ್ತಾರೆ. 7ನೇ ತರಗತಿಯವರೆಗೆ, ಇಂಡಿಯಾ ಅಥವಾ ಭಾರತ ಎಂಬುದರಲ್ಲಿ ಯಾವುದನ್ನಾದರೂ ಕಲಿಸಬಹುದು. ಆದರೆ 7ನೇ ತರಗತಿಯಿಂದ ಮತ್ತು 12ನೇ ತರಗತಿಯವರೆಗೆ ಅದನ್ನು ಭಾರತ ಎಂದು ಕರೆಯಬೇಕು ಎಂಬುದು ಅವರ ನಿಲುವು.

‘‘ನಾನು ಇದನ್ನು ಸಾರ್ವಜನಿಕ ಹಿತಾಸಕ್ತಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ರಾಷ್ಟ್ರದ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ. 1868ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಆಡಳಿತ ಕಾಲದಲ್ಲಿ ‘ಭಾರತ’ ಎಂಬ ಹೆಸರನ್ನು ಮೊದಲ ಬಾರಿಗೆ ಬಳಸಲಾಯಿತು. ಆದರೆ ಭಾರತ ಎಂಬ ಹೆಸರು 7,000 ವರ್ಷಗಳಿಂದ ಬಳಕೆಯಲ್ಲಿದೆ. ಕಾಳಿದಾಸ ಬಳಸಿದ್ದಾನೆ. ಠಾಗೋರ್ ‘ಜನ ಗಣ ಮನ’ದಲ್ಲಿ ಬಳಸಿದ್ದಾರೆ. ಇಲ್ಲಿಯವರೆಗೆ ಯಾವುದೇ ವಿವಾದಗಳಿಲ್ಲ. ಹೆಸರುಗಳು ಬದಲಾಗುತ್ತಲೇ ಇರುತ್ತವೆ. ಬಾಂಬೆ ಹೆಸರನ್ನು ಮುಂಬೈ, ಅಲಹಾಬಾದ್ ಅನ್ನು ಪ್ರಜ್ಞಾರಾಜ್ ಎಂದು ಬದಲಾಯಿಸಿದರು. ಇದೀಗ ವಿವಾದಗಳು ಪ್ರಾರಂಭವಾಗಿವೆ. ನಾನೊಬ್ಬ ವಿದ್ವಾಂಸ ಮತ್ತು ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಐಸಿಎಚ್‌ಆರ್‌ನಲ್ಲಿನ ನನ್ನ ಕೆಲಸಗಳ ಹಿನ್ನೆಲೆಯಲ್ಲಿ ನನ್ನನ್ನು ಈ ಸಮಿತಿಗೆ ನೇಮಿಸಲಾಯಿತು’’ ಎಂದು ಅವರು ಹೇಳಿರುವುದಾಗಿ ‘ದಿ ವೈರ್’ ವರದಿಯಲ್ಲಿದೆ.

‘‘ನನ್ನ ಪೂರ್ವಜರು ಕೂಡ ಹಿಂದೂಗಳು. ಆದರೆ ಅವರು 500 ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಅವರಿಗೆ ಹಿಂದೂ ಹೆಸರುಗಳಿದ್ದವು ಆದರೆ ಈಗ ನನಗೆ ಕ್ರಿಶ್ಚಿಯನ್ ಹೆಸರು ಇದೆ’’ ಎಂದು ಅವರು ಹೇಳಿದ್ದಾರೆ.

ಆದರೆ, ಈ ಶಿಫಾರಸುಗಳು ಮಾತ್ರ ತೀವ್ರ ಟೀಕೆಗೆ ಒಳಗಾಗಿವೆ. ರಾಜಕೀಯ ಪಕ್ಷಗಳ ನಡುವೆಯೂ ವಾಗ್ದಾಳಿಗೆ ಇದು ಎಡೆ ಮಾಡಿಕೊಟ್ಟಿದೆ. ಶಿಕ್ಷಣ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರು ಮುಂದಿನ ಸಭೆಯಲ್ಲಿ ಇದನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸಿಪಿಐ(ಎಂ) ರಾಜ್ಯಸಭಾ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ, ಇಂತಹ ಶಿಫಾರಸುಗಳು ಭಾರತೀಯ ಏಕತೆಗೆ ಧಕ್ಕೆ ತರುತ್ತವೆ. ಈ ಹೆಸರನ್ನು ಬ್ರಿಟಿಷರು ನೀಡಿಲ್ಲ, ಇದು ತಪ್ಪು ಗ್ರಹಿಕೆ ಮತ್ತು ಇದನ್ನು ಈಗಾಗಲೇ ಸಂವಿಧಾನ ಸಭೆಯಲ್ಲಿ ಚರ್ಚಿಸಲಾಗಿದೆ. ‘ಭಾರತ’ ಎಂದು ಮತ್ತೊಂದು ಹೆಸರಿನಿಂದ ಕರೆಯಬಹುದು. ಇದು ಒಂದು ಪಂಥ, ಒಂದು ಊಳಿಗಮಾನ್ಯ ಸಂಸ್ಕೃತಿಯಿಂದ ಹುಟ್ಟುತ್ತದೆ. ಆದರೆ ‘ಇಂಡಿಯಾ’ ಎಂಬ ಹೆಸರು ಆಧುನಿಕ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಕೇಂದ್ರವು ಜನರನ್ನು ಗೊಂದಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘‘ನಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಮತ್ತು ಇಂಡಿಯನ್ ಫಾರಿನ್ ಸರ್ವೀಸ್ ಎಂದು ಏಕೆ ಕರೆಯುತ್ತಿದ್ದೇವೆ? ನಮ್ಮ ಪಾಸ್‌ಪೋರ್ಟ್‌ಗಳಲ್ಲಿ ‘ರಿಪಬ್ಲಿಕ್ ಆಫ್ ಇಂಡಿಯಾ’ ಎಂದೇ ಇದೆ. ಅವರು ಭಾರತೀಯರ ಮನಸ್ಸನ್ನು ಏಕೆ ಗೊಂದಲಗೊಳಿಸುತ್ತಿದ್ದಾರೆ? ಅವರು ತೆಗೆದುಕೊಂಡ ಯಾವುದೇ ನಿಲುವು ಸಂಪೂರ್ಣವಾಗಿ ಜನವಿರೋಧಿ, ಇಂಡಿಯಾ ವಿರೋಧಿ ಮತ್ತು ಭಾರತ ವಿರೋಧಿ. ಎನ್‌ಸಿಇಆರ್‌ಟಿ ಮೇಲೆ ಎನ್‌ಡಿಎ ಬಲವಂತ ಮಾಡುತ್ತಿದೆ. ಇದು ಸಂಪೂರ್ಣವಾಗಿ ತಪ್ಪು. ಭಾರತದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಕರ್ನಾಟಕ ಮೊದಲಿನಂತೆಯೇ ಮುಂದುವರಿಯುತ್ತದೆ.’’ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ವರದಿಯಾಗಿದೆ.

ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ, ಹರ್ಯಾಣದ ಶಾಲೆಯೊಂದರಲ್ಲಿ ಬೋಧನೆ ಮಾಡುತ್ತಿರುವ ಮಮತಾ ಯಾದವ್, ‘‘ವರದಿಯನ್ನು ನೀಡುವಂತೆ ಕೇಳಿದ್ದರಿಂದ ನಾವು ನೀಡಿದ್ದೇವೆ. ಮುಂದೆ ಏನಾಗುತ್ತದೆ’ ಎಂಬುದರ ಕುರಿತು ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದನ್ನು ‘ದಿ ವೈರ್’ ಉಲ್ಲೇಖಿಸಿದೆ.

(ಆಧಾರ: ದಿ ವೈರ್ ಮತ್ತು ಇತರ ವರದಿಗಳು)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ವಿನಯ್ ಕೆ.

contributor

Similar News