ಹಿಂದುತ್ವ ರಾಜಕಾರಣದ ವಿರುದ್ಧ ಪ್ರತಿತಂತ್ರ ಮಾದರಿಯಾಗಿ ಹೊರಹೊಮ್ಮಿರುವ ಬಿಹಾರ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ 28 ಪಕ್ಷಗಳನ್ನು ಒಗ್ಗೂಡಿಸುವುದಕ್ಕೆ ಮುಂಚೂಣಿಯಲ್ಲಿದ್ದರು. ನಂತರ ಅವರ ಸರಕಾರವು ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿತು. ಇದು ಈಗ ಚುನಾವಣೆಯಲ್ಲಿ ಬಿಜೆಪಿಯೆದುರು ಪ್ರಮುಖ ಅಸ್ತ್ರವಾಗಿದೆ. ನಿತೀಶ್ ಕುಮಾರ್ ರೂಪಿಸಿರುವ ತಂತ್ರವನ್ನು ಎದುರಿಸಲು 2014ರ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಹೆಣಗಾಡುತ್ತಿದೆ.
ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಬಿಹಾರ ಇಲ್ಲ. ಆದರೆ ಇದು ಬಿಜೆಪಿಯ ಧ್ರುವೀಕರಣ ರಾಜಕೀಯವನ್ನು ಎದುರಿಸಲು ಒಂದು ಮಾದರಿಯಾಗಿ ಹೊರಹೊಮ್ಮಿದೆ.
ಮೊದಲನೆಯದಾಗಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದ ಭಾಗವಾಗಿರುವ 28 ಪಕ್ಷಗಳನ್ನು ಒಗ್ಗೂಡಿಸುವುದಕ್ಕೆ ಮುಂಚೂಣಿಯಲ್ಲಿದ್ದರು. ನಂತರ, ಅವರ ಸರಕಾರವು ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿತು. ಇದು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಂಖ್ಯಾತ್ಮಕ ಪ್ರಾಬಲ್ಯವನ್ನು ತೋರಿಸಿದ್ದು, ವಿಧಾನಸಭೆ ಚುನಾವಣೆಯಿರುವ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದನ್ನು ತನ್ನ ಮುಖ್ಯ ವಿಷಯವನ್ನಾಗಿ ಎತ್ತಿಕೊಂಡಿದೆ.
ಈಗ ಬಿಹಾರ ಸರಕಾರವು ತನ್ನ ಸಾಧನೆಗಳನ್ನು ಜನರೆದುರು ಇಡುವ ಕೆಲಸ ಮಾಡುತ್ತಿದೆ. ಉದ್ಯೋಗಗಳನ್ನು ಒದಗಿಸುವಲ್ಲಿ ತನ್ನ ಯಶಸ್ಸನ್ನು ಪ್ರದರ್ಶಿಸತೊಡಗಿದೆ. ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷೆಗಳ ಮೂಲಕ ನೇಮಕಗೊಂಡ 1 ಲಕ್ಷ 20 ಸಾವಿರ ಶಿಕ್ಷಕರಿಗೆ ನೇಮಕಾತಿ ಪತ್ರಗಳನ್ನು ಕೊಡುವುದು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಚುನಾವಣೆಗೆ ಮುನ್ನ ಪ್ರತೀ ವರ್ಷ 1.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಸಂಪೂರ್ಣವಾಗಿ ವಿಫಲವಾದ ಹಿನ್ನೆಲೆಯಲ್ಲಿ ಬಿಹಾರ ಸರಕಾರ ಇಂಥದೊಂದು ಹೆಗ್ಗಳಿಕೆಯನ್ನು ಪ್ರದರ್ಶಿಸುತ್ತಿದೆ.
ರಾಜ್ಯದಲ್ಲಿನ ಮಹಾಘಟಬಂಧನ್ ಸರಕಾರದಲ್ಲಿನ ಬಿರುಕುಗಳ ಬಗ್ಗೆ ಮಾಧ್ಯಮಗಳು ಆಗಾಗ ವರದಿ ಮಾಡುತ್ತಿದ್ದರೂ, ಪಕ್ಷಗಳು ಮಾತ್ರ ಗಟ್ಟಿಯಾದ ಒಗ್ಗಟ್ಟನ್ನು ಪ್ರದರ್ಶಿಸಿವೆ.
ಅಕ್ಟೋಬರ್ 26ರಂದು, ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀ ಕೃಷ್ಣ ಸಿನ್ಹಾ ಅವರ 136ನೇ ಜನ್ಮ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರನ್ನು ಕಾಂಗ್ರೆಸ್ ಆಹ್ವಾನಿಸಿತು. ಸಮಾರಂಭದಲ್ಲಿ ಸಾಂಕೇತಿಕತೆ ಸ್ಪಷ್ಟವಾಗಿತ್ತು: ಲಾಲು ಪ್ರಸಾದ್ ಯಾದವ್ ಹಿಂದುತ್ವವನ್ನು ವಿರೋಧಿಸುವಲ್ಲಿ ಕೇಂದ್ರ ಶಕ್ತಿಯಾಗಿ ಮುಂದುವರಿದಿದ್ದಾರೆ. ಈ ಕಾರ್ಯಕ್ರಮದ ಮೂಲಕ, ಕಾಂಗ್ರೆಸ್ ಅವರನ್ನು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ನಾಯಕ ಎಂದು ತಾನು ಗೌರವಿಸುವುದನ್ನು ತೋರಿಸಿಕೊಂಡಿದೆ.
ಸೋನಿಯಾ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಖಿಲೇಶ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದು ತಮ್ಮ ಸಲಹೆಯ ಮೇರೆಗೆ ಎಂಬ ವಿಚಾರವನ್ನು ಲಾಲು ಬಹಿರಂಗಪಡಿಸಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಅವರ ದರ್ಬಾರಿಗೆ ತೆರೆ ಎಳೆಯಲು ಇಂಡಿಯಾ ಒಕ್ಕೂಟದ ಪಕ್ಷಗಳು ‘‘ಭಾಜಪಾ ಹಠಾವೋ, ದೇಶ್ ಬಚಾವೋ’’ (ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕಿ; ದೇಶವನ್ನು ಉಳಿಸಿ) ರ್ಯಾಲಿಯನ್ನು ಆಯೋಜಿಸಲಿವೆ ಎಂದು ಲಾಲು ಘೋಷಿಸಿದ್ದಾರೆ. 2024ರ ಚುನಾವಣೆಯಲ್ಲಿ ವಿಭಜಕ ಶಕ್ತಿಗಳ ವಿರುದ್ಧದ ಹೋರಾಟದ ನಾಯಕತ್ವ ವಹಿಸುವಂತೆ ಕಾಂಗ್ರೆಸ್ ಹಿರಿಯ ನಾಯಕರು ಲಾಲು ಅವರನ್ನು ಕೇಳಿಕೊಂಡಿದ್ದಾರೆ.
ಅಂಬೇಡ್ಕರ್ ಮತ್ತು ಲೋಹಿಯಾ
ಬಿಜೆಪಿಯ ಪ್ರಚಾರ ಯಂತ್ರದ ಮುಂಚೂಣಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಛತ್ತೀಸ್‌ಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಡೆದ ರ್ಯಾಲಿಗಳಲ್ಲಿ ಹಿಂದೂ ಯುವಕನ ಹತ್ಯೆ, ಫೆಲೆಸ್ತೀನ್-ಇಸ್ರೇಲ್ ಸಂಘರ್ಷ, ಅಯೋಧ್ಯೆಯಲ್ಲಿ ರಾಮಮಂದಿರ ಮತ್ತು ಮೊಗಲರು ಈ ಥರದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಈ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್, ಜಾತಿ ಸಮೀಕ್ಷೆ ಮತ್ತು ಒಬಿಸಿಗಳು ಮತ್ತು ಇತರ ಅಂಚಿನಲ್ಲಿರುವ ವರ್ಗಗಳಿಗೆ ಅನುಪಾತದ ಪ್ರಾತಿನಿಧ್ಯದ ಭರವಸೆ ನೀಡುವ ಮೂಲಕ ಶಾ ಅವರನ್ನು ಎದುರಿಸುತ್ತಿದೆ.
ಚುನಾವಣೆಗೆ ಹೋಗುತ್ತಿರುವ ರಾಜ್ಯಗಳಲ್ಲಿ ಹಿಂದುತ್ವ ವಿಚಾರವನ್ನು ಎದುರಿಸಲು ಬಿಹಾರವು ಪ್ರಬಲ ಕಾರ್ಯಕ್ಷಮತೆ ಮತ್ತು ಅಷ್ಟೇ ಗಟ್ಟಿ ತಳಹದಿಯ ಆಧಾರದ ಮೇಲೆ ರಾಜಕೀಯವಾಗಿ ಸೂಕ್ತವಾದ ನಿರೂಪಣೆಯನ್ನು ಇಟ್ಟಿದೆ. 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ, ಲಾಲು, ತೇಜಸ್ವಿ ಹಾಗೂ ಕಾಂಗ್ರೆಸ್ ಮತ್ತು ಎಡಪಕ್ಷಗಳಂತಹ ಮಿತ್ರಪಕ್ಷಗಳ ಬೆಂಬಲದೊಂದಿಗೆ ನಿತೀಶ್ ಕುಮಾರ್ ರೂಪಿಸಿರುವ ತಂತ್ರವನ್ನು ಎದುರಿಸಲು ಬಿಜೆಪಿ ಹೆಣಗಾಡುತ್ತಿದೆ.
ನಿತೀಶ್ ಮತ್ತೆ ಕೇಸರಿ ಪಾಳಯಕ್ಕೆ ಮರಳುತ್ತಾರೆ ಎಂಬ ಗುಸುಗುಸು ಹರಡುತ್ತಿದ್ದಂತೆ ಅದಕ್ಕೆ ತೀಕ್ಷ್ಣವಾಗಿಯೇ ಉತ್ತರಿಸಿರುವ ಅವರು, ‘‘ಬಿಜೆಪಿ ನಾಯಕರು ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಮೂಲಸೌಕರ್ಯಗಳನ್ನು ಒದಗಿಸುವಲ್ಲಿ, ಮಹಿಳೆಯರು ಮತ್ತು ಅಂಚಿನಲ್ಲಿರುವ ವರ್ಗಗಳ ಸಬಲೀಕರಣದಲ್ಲಿ ಮತ್ತು ಬಿಹಾರದಲ್ಲಿ ಉದ್ಯೋಗವನ್ನು ಒದಗಿಸುವಲ್ಲಿ ನಾವು ಮಾಡಿದ ಕೆಲಸವನ್ನು ಪ್ರತಿಯೊಬ್ಬರೂ ನೋಡಬೇಕಾಗಿದೆ’’ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟ ಮತ್ತು ಭಾರತ ನಿರ್ಮಾಣದಲ್ಲಿ ತನ್ನದೇ ಆದ ಐಕಾನ್‌ಗಳಿಲ್ಲದ ಬಿಜೆಪಿ, ರಾಮ್ ಮನೋಹರ ಲೋಹಿಯಾ ಮತ್ತು ಬಿ.ಆರ್. ಅಂಬೇಡ್ಕರ್ ಪರಂಪರೆಯನ್ನು ತನ್ನ ಲಾಭಕ್ಕೋಸ್ಕರ ಬಳಸಲು ಯತ್ನಿಸುತ್ತಲೇ ಇದೆ. ಆದರೆ ನಿತೀಶ್ ಕುಮಾರ್ ಬಿಜೆಪಿಯಿಂದ ದೂರವಾದ ನಂತರ, ಅವರನ್ನು ಹೇಗಾದರೂ ಮರಳಿ ಕರೆಯಿಸಿಕೊಳ್ಳಲು ಇಂತಹ ತಂತ್ರದಲ್ಲಿ ತೊಡಗಿದೆ.
‘‘ಲೋಹಿಯಾ ಮತ್ತು ಅಂಬೇಡ್ಕರ್ ಅವರು ಕ್ರಮವಾಗಿ ಹಿಂದುಳಿದ ವರ್ಗಗಳು ಮತ್ತು ದಲಿತರಿಗೆ ರಾಜಕೀಯ ಅವಕಾಶ ಮತ್ತು ಆಡಳಿತದಲ್ಲಿ ಸೂಕ್ತ ಪಾಲಿಗಾಗಿ ಹೋರಾಡಿದವರು. ಗಾಂಧೀಜಿ, ಲೋಹಿಯಾ ಮತ್ತು ಅಂಬೇಡ್ಕರ್ ಅವರ ತತ್ವಗಳು ನಮ್ಮ (ಆರ್‌ಜೆಡಿ ಮತ್ತು ಜೆಡಿಯು) ಕೆಲಸಗಳ ಮತ್ತು ನೀತಿಗಳ ಕೇಂದ್ರವಾಗಿವೆ. ಆದರೆ ಬಿಜೆಪಿಯು ಲೋಹಿಯಾ ಮತ್ತು ಅಂಬೇಡ್ಕರ್ ಅವರನ್ನು ಮತ ಸೆಳೆಯಲು ಬಳಸಿಕೊಳ್ಳುತ್ತಿದೆ’’ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಮನೋಜ್ ಝಾ ಹೇಳಿದ್ದಾರೆ.
ಇತ್ತೀಚೆಗೆ, ಪ್ರಧಾನಿ ಮೋದಿ ಅವರು ರಾಮಭದ್ರಾಚಾರ್ಯ ಎಂಬ ಸಂತರನ್ನು ಭೇಟಿಯಾಗಿ ಕೊಂಡಾಡಿದರು ಮತ್ತು ಅವರ ಆದರ್ಶಗಳಿಗೆ ಬದ್ಧರಾಗಿರಲು ಜನರನ್ನು ಉತ್ತೇಜಿಸಿದರು. ಆದರೆ ಆರ್‌ಜೆಡಿಯ ಬುದ್ಧಿವಂತ ಕಾರ್ಯಕರ್ತರು, ‘‘ಮರೇ ಮುಲಾಯಂ ಕಾನ್ಶಿರಾಮ್, ಪ್ರೇಮ್ ಸೆ ಬೋಲೋ ಜೈ ಶ್ರೀರಾಮ್’’ (ಸತ್ತಿದ್ದಾರೆ ಮುಲಾಯಂ ಮತ್ತು ಕಾನ್ಶಿರಾಮ್, ಸಂತೋಷದಿಂದ ಹೇಳಿ ಜೈ ಶ್ರೀರಾಮ್) ಎಂಬ ಆ ಸಂತನ ಘೋಷಣೆ ವೈರಲ್ ಆಗುವಂತೆ ಮಾಡಿ, ಹಿಂದುತ್ವ ರಾಜಕಾರಣದ ಜೊತೆಗಿನ ಅವರ ಸಂಬಂಧವನ್ನು ಬಯಲು ಮಾಡಿದರು.
ಬಿಹಾರ: ಕ್ರಾಂತಿಯ ನಾಡು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರವನ್ನು ರಾಜಕೀಯ ಬದಲಾವಣೆಗಳ ನಾಡು ಎಂದು ಬಣ್ಣಿಸಿದ್ದಾರೆ. ಜೂನ್ 23ರಂದು ವಿರೋಧ ಪಕ್ಷಗಳ ಮೊದಲ ಸಭೆಗೆ ಪಾಟ್ನಾವೇ ಸೂಕ್ತ ಎಂದವರೂ ಅವರೇ. ಅದು ಕೇವಲ ಮಾತಿಗಾಗಿ ಅಲ್ಲ. ಬಿಹಾರ ಹಲವಾರು ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. 1977ರಲ್ಲಿ ಕೇಂದ್ರದಲ್ಲಿ ಮೊದಲ ಕಾಂಗ್ರೆಸೇತರ ಸರಕಾರ ರಚನೆಗೆ ದಾರಿ ಮಾಡಿಕೊಟ್ಟ ಜಯಪ್ರಕಾಶ್ ನಾರಾಯಣ್ ನೇತೃತ್ವದ ಬಿಹಾರ ಚಳವಳಿ ಬಿಹಾರದಲ್ಲಿ ಆರಂಭವಾಯಿತು.
1960ರ ದಶಕದ ಉತ್ತರಾರ್ಧದಲ್ಲಿ ಬಂಗಾಳದ ನಕ್ಸಲ್ಬರಿ ಪ್ರದೇಶದಲ್ಲಿ ಹುಟ್ಟಿಕೊಂಡ ನಕ್ಸಲೈಟ್ ಚಳವಳಿಯು ಬಿಹಾರದಲ್ಲಿ ಸುದೀರ್ಘ ಪ್ರಭಾವವನ್ನು ಬೀರಿದೆ. ಸಿಪಿಐ ಎಂಎಲ್-ಲಿಬರೇಶನ್-ಬಿಹಾರದಲ್ಲಿ ತಳಮಟ್ಟದಲ್ಲಿ ಪ್ರಬಲ ಎಡ ಪಕ್ಷ - ನಕ್ಸಲೈಟ್ ಚಳವಳಿಯ ಫಲವಾಗಿದ್ದು, ರಾಜ್ಯದಲ್ಲಿನ ಮಹಾಘಟಬಂಧನ್ ಸರಕಾರದ ಭಾಗವಾಗಿದೆ.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಬಿಹಾರವು ಪ್ರಮುಖ ಪಾತ್ರವನ್ನು ವಹಿಸಿತ್ತು. ವೀರ್ ಕುಯರ್ ಸಿಂಗ್ ಪ್ರಬಲ ಬ್ರಿಟಿಷ್ ಮಿಲಿಟರಿಗೆ ಸವಾಲು ಹಾಕಿದ್ದ ಹೊತ್ತು ಅದು. ಇವೆಲ್ಲದರ ಹಿನ್ನೆಲೆಯುಳ್ಳ ಬಿಹಾರವು ಈಗ ರಾಷ್ಟ್ರೀಯ ಮಟ್ಟದಲ್ಲಿ ಹಿಂದುತ್ವ ರಾಜಕಾರಣವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವಂತೆ ಕಾಣಿಸುತ್ತಿದೆ.
(ಕೃಪೆ:thewire.in)