ರಾಷ್ಟ್ರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾದ ಬಿಹಾರದ ಜಾತಿಗಣತಿ

► ಹಿಂದುತ್ವದ ಮಂತ್ರ ಸಾಲದು, ಹಿಂದುಳಿದವರಿಗೆ ನಿಜವಾದ ಪ್ರಾತಿನಿಧ್ಯ ಬೇಕು !

Update: 2023-10-13 08:34 GMT
Editor : Naufal | By : ಆರ್. ಜೀವಿ

ಸಾಂದರ್ಭಿಕ ಚಿತ್ರ (PTI)

ಲೋಕಸಭೆ ಚುನಾವಣೆ ಎದುರಿಗಿರುವಾಗಲೇ ಬಿಹಾರ ಸರ್ಕಾರದ ಮಹತ್ವದ ನಡೆಯೊಂದು​ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದೆ.ಈ ದೇಶದಲ್ಲಿ ಹಿಂದುತ್ವದ, ಅದರಲ್ಲೂ ಮೇಲ್ಜಾತಿಯ ರಾಜಕಾರಣದ ಮೂಲಕ ಆಟ ಆಡಹೊರಟಿರುವ ಬಿಜೆಪಿಗೆ ಆಘಾತವಾಗುವಂಥ​ ಕಟುಸತ್ಯಗಳನ್ನು ಬಿಹಾರ ಸರ್ಕಾರ ಹೊರಗೆಡವಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಈ ನಡೆ ರಾಜಕೀಯವಾಗಿ ಬಹಳ ಮಹತ್ವ ಪಡೆದಿದ್ದು, ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿರುವ ತಂತ್ರಗಾರಿಕೆಯಾಗಲಿದೆಯೆ ಎಂಬ ಕುತೂಹಲವೂ ಎದ್ದಿದೆ. ಬಿಹಾರ​ದ ಜಾತಿ ಜನಗಣತಿ ವಿವರವನ್ನು​ ನಿತೀಶ್ ಕುಮಾರ್ ಸರಕಾರ ಸೋಮವಾರ ಬಹಿರಂಗಪಡಿಸಿರುವುದು ಈಗ ಸಂಚಲನ ಮೂಡಿಸಿರುವ ವಿಚಾರ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯವೊಂದರ ಜಾತಿ ಜನಗಣತಿ ವಿವರ ಈಗ ಎಲ್ಲರ ಮುಂದಿದೆ.

ಯಾವುದನ್ನು ಕೇಂದ್ರ ಸರ್ಕಾರದ ನಿಲುವಿಗೆ ಪ್ರತಿಯಾಗಿ ಸವಾಲೆಂಬಂತೆ ತೆಗೆದುಕೊಂಡು ಬಿಹಾರ ಸರ್ಕಾರ ಮಾಡಿತ್ತೊ ಆ ಜಾತಿ ಜನಗಣತಿಯ ವಿವರಗಳು ಕೂಡ ಈಗ ಬಿಜೆಪಿಯ ಎದುರು ಹೊಸ​ ರಾಜಕೀಯ ಸವಾಲುಗಳನ್ನು ಇಡುವ ಹಾಗಿವೆ.​ ಬಾಯಲ್ಲಿ ಮಾತ್ರ ನಾವೆಲ್ಲ ಹಿಂದೂ ಹಿಂದೂ ಅಂತ ಹೇಳುತ್ತಾ ಮೇಲ್ಜಾತಿಯವರೇ ಎಲ್ಲವನ್ನೂ ನಿಯಂತ್ರಿಸುವಂತೆ ವ್ಯವಸ್ಥೆಯನ್ನು ಪಳಗಿಸಿಕೊಂಡಿರುವ ಬಿಜೆಪಿಗೆ ಈಗ ಜನಸಂಖ್ಯೆಗೆ ತಕ್ಕಂತೆ ಪ್ರಾತಿನಿಧ್ಯ ನೀಡಿ ಎಂಬ ಒಕ್ಕೊರಳ ಆಗ್ರಹವನ್ನು ನಿಭಾಯಿಸುವುದು ದೊಡ್ಡ ಸವಾಲಾಗಲಿದೆ.

ಮೊದಲು, ಬಿಹಾರ ಜಾತಿ ಜನಗಣತಿಯ ಕುತೂಹಲಕಾರಿ ವಿವರಗಳೇನು ಎನ್ನುವುದನ್ನು ಗಮನಿಸೋಣ.

ಬಿಹಾರದ ಈಗಿನ ಒಟ್ಟು ಜನಸಂಖ್ಯೆ - 13.07 ಕೋಟಿ.

ಅದರಲ್ಲಿ ಇತರೆ ಹಿಂದುಳಿದ ವರ್ಗಗಳ ​ಅಂದ್ರೆ ಒಬಿಸಿ ಹಾಗೂ ​ಆರ್ಥಿಕವಾಗಿ​ ಅಥವಾ ಅತ್ಯಂತ ಹಿಂದುಳಿದ ವರ್ಗಗಳ​ ಅಂದ್ರೆ ಇಬಿಸಿ ಜನರೇ ಶೇ. 63ರಷ್ಟು ಇದ್ದಾರೆ ಎಂಬುದು​ ಅತ್ಯಂತ ಮಹತ್ವದ ಅಂಶ.​ ಇದು ಈವರೆಗೂ ಮುಚ್ಚಿಡಲಾಗಿದ್ದ ಬಹುದೊಡ್ಡ ವಾಸ್ತವ. ಈವರೆಗೆ ಪ್ರಚಾರದಲ್ಲಿದ್ದ ಜನಸಂಖ್ಯೆಗೂ ಈ ಸತ್ಯಕ್ಕೂ ಅಜಗಜಾಂತರವಿದೆ.

​ಜಾತಿಗಣತಿ ಪ್ರಕಾರ ಬಿಹಾರದ

ಒಬಿಸಿ ಜನಸಂಖ್ಯೆ – 3.54 ಕೋಟಿ, ಅಂದರೆ ಶೇ.27.12

ಇಬಿಸಿ ಜನಸಂಖ್ಯೆ – 4.70 ಕೋಟಿ, ಅಂದರೆ ಶೇ.36.01

ಎಸ್ಸಿ ಜನಸಂಖ್ಯೆ – 2.56 ಕೋಟಿ, ಅಂದರೆ ಶೇ.19.65

ಎಸ್ಟಿ ಜನಸಂಖ್ಯೆ – 21.99 ಲಕ್ಷ, ಅಂದರೆ ಶೇ.1.68​

ಸಾಮಾನ್ಯ ವರ್ಗ – 2.02 ಕೋಟಿ, ಅಂದರೆ ಶೇ.15.52

​ಅಂದ್ರೆ ಅತ್ಯಂತ ಹಿಂದುಳಿದ ವರ್ಗ ಇಬಿಸಿ ಈಗ ಬಿಹಾರದ ಅತಿದೊಡ್ಡ ಜನಸಂಖ್ಯಾ ವರ್ಗ. ​ಇನ್ನು ಕೆಲವು ಜಾತಿಗಳ ಜನಸಂಖ್ಯೆಯನ್ನು ಇನ್ನೂ ವಿವರವಾಗಿ ನೋಡುವುದಾದರೆ, ಒಬಿಸಿಯಲ್ಲಿ ಬರುವ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಯಾದವ ಸಮುದಾಯದ ಜನಸಂಖ್ಯೆಯೇ ಅತಿ ಹೆಚ್ಚಾಗಿದ್ದು, ಆ ಸಮುದಾಯದ ಪ್ರಮಾಣ - ಶೇ.14.27

ಇನ್ನು, ಭೂಮಿಹಾರ್ ಜನಸಂಖ್ಯೆ – ಶೇ.2.86

ಬ್ರಾಹ್ಮಣರು – ಶೇ.3.66

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕುರ್ಮಿ ಸಮುದಾಯದ ಜನಸಂಖ್ಯೆ – ಶೇ.2.87

ಮುಸಾಹರ್ ಜನಸಂಖ್ಯೆ – ಶೇ.3

ಇಷ್ಟು ಸ್ಪಷ್ಟವಾಗಿ ಜಾತಿವಾರು ಜನಸಂಖ್ಯೆಯ ವಿವರಗಳು ಹೊರಬಿದ್ದ ನಂತರದ ರಾಜಕೀಯ ಪರಿಣಾಮಗಳು ಏನಿರಬಹುದು ಎಂಬುದು ಈಗಿನ ಕುತೂಹಲ. ಅದನ್ನು ನೊಡುವ ಮೊದಲು, ಬಿಹಾರ ಸರ್ಕಾರ ಜಾತಿ ಜನಗಣತಿಗೆ ಯಾವ ಸಂದರ್ಭದಲ್ಲಿ ಆದೇಶಿಸಿತು ಮತ್ತು ಅದಕ್ಕೆ ಹೇಗೆ ತೊಡಕುಗಳು ಎದುರಾದವು, ಕಡೆಗೆ ನ್ಯಾಯಾಲಯವೇ ಹೇಗೆ ಅದನ್ನು ಎತ್ತಿಹಿಡಿಯಿತು ಎಂಬುದನ್ನು ಗಮನಿಸಬೇಕು.

ಕಳೆದ ವರ್ಷ ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಇತರ ಜಾತಿಗಳ ಎಣಿಕೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರ ಸರ್ಕಾರ ಜಾತಿ ಜನಗಣತಿಗೆ ಆದೇಶಿಸಿತ್ತು. ಅದು ಭಾರೀ ಚರ್ಚೆಗೆ ಕಾರಣವಾಯಿತಲ್ಲದೆ, ಹಲವು ತೊಡಕುಗಳನ್ನೂ ಎದುರಿಸಬೇಕಾಯಿತು. ನ್ಯಾಯಾಲಯದಲ್ಲಿಯೂ ಅದನ್ನು ಪ್ರಶ್ನಿಸಲಾಯಿತು. ಒಂದು ಹಂತದಲ್ಲಿ ಸಮೀಕ್ಷೆಗೆ ಕೋರ್ಟ್ ತಡೆಯನ್ನೂ ಕೊಟ್ಟಿತ್ತು.

ಜಾತಿ ಜನಗಣತಿಯನ್ನು ಕೋರ್ಟ್ನಲ್ಲಿ ಪ್ರಶ್ನಿಸುವಾಗ ಎರಡು ಆಧಾರಗಳನ್ನು ಮುಂದಿಡಲಾಗಿತ್ತು. ಒಂದು, ಅದು ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಎರಡು, ಅಂಥ ಸಮೀಕ್ಷೆಯನ್ನು ಕೈಗೊಳ್ಳಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂಬ ವಾದ. ಆದರೆ, ಬಿಹಾರ ಸರ್ಕಾರದ ಅಫಿಡವಿಟ್ ಅಂಗೀಕರಿಸಿದ ನ್ಯಾಯಾಲಯ, ಯಾವುದೇ ಬಗೆಯಲ್ಲಿ ಡೇಟಾ ಸೋರಿಕೆಗೆ ಅವಕಾಶವಿಲ್ಲದ ಕಾರ್ಯವಿಧಾನವನ್ನು ಈ ಸಮೀಕ್ಷೆ ಹೊಂದಿದೆ ಎಂಬುದನ್ನು ಮನಗಂಡಿತು.

ಅಲ್ಲದೆ, ಜಾತಿ ಜನಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕೆಂಬ ವಾದವನ್ನೂ ಕೋರ್ಟ್ ತಳ್ಳಿಹಾಕಿತು. ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಜಾತಿ ಜನಗಣತಿಗೆ ಬಿಹಾರ ಸರ್ಕಾರ ಮುಂದಾದಾಗ ನೀಡಿದ್ದ ಕಾರಣಗಳನ್ನು ಗುರುತಿಸಬಹುದಾದರೆ,

1.ಪ್ರಸ್ತುತ ಇರುವ ಮೀಸಲು ಕೋಟಾಗಳು ಹಿಂದುಳಿದ ವರ್ಗಗಳ ಈಗಿನ ಜನಸಂಖ್ಯೆಗೆ ಅನುಗುಣವಾಗಿಲ್ಲ

2.ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ನೀಡುವುದಕ್ಕಾಗಿ ಜಾತಿ ಜನಗಣತಿ

3.ಜಾತಿ ಸಮೀಕ್ಷೆಯಿಂದ ಬಡವರ ಸಮಗ್ರ ಸಾಮಾಜಿಕ, ಆರ್ಥಿಕ ದತ್ತಾಂಶವನ್ನು ಸಂಗ್ರಹಿಸಬಹುದು

4.ಜಾತಿ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲು ಅನುಕೂಲವಾಗುತ್ತದೆ

5.ಒಬಿಸಿಗಳು ಮತ್ತು ಇತರ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ, ಅವರಿಗೆ ನಿರ್ದಿಷ್ಟ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸುವುದು ಕಷ್ಟಕರವಾಗಿದೆ

6.ಜಾತಿ ಸಮೀಕ್ಷೆ ವಿವಿಧ ಜಾತಿಗಳ ಸಮಾನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ

ಇದೆಲ್ಲದರ ಜೊತೆಗೇ, ಬಿಜೆಪಿಗೆ ರಾಜಕೀಯವಾಗಿ ಸವಾಲಾಗುವ ಉದ್ದೇಶವೂ ನಿತೀಶ್ ಅವರ ನಡೆಯ ಹಿಂದಿತ್ತು. ರಾಜಕೀಯ ಲಾಭಕ್ಕಾಗಿಯೇ ಬಿಹಾರ ಸರ್ಕಾರ ಈ ಸಮೀಕ್ಷೆಯನ್ನು ಮಾಡಿಸುತ್ತಿದೆ ಎಂಬ ವಾದಗಳೇ ಆಗ ಎದ್ದಿದ್ದವು. ಮತ್ತು ಈಗಲೂ ಅದು ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ರಾಜಕೀಯ ಲಾಭವಾಗಿ ಇದು ಒದಗಲಿದೆ ಎಂದು ಹೇಳಲಾಗುತ್ತಿದೆ.

ಈವರೆಗೆ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಳಲ್ಲಿದ್ದ ಶೇ.27ರಷ್ಟು ಮೀಸಲಾತಿಗೆ ತೀರಾ ವಿರುದ್ಧವಾಗಿ ಈ ಜಾತಿ ಜನಗಣತಿಯ ಅಂಕಿಅಂಶಗಳಿದ್ದು, ಒಬಿಸಿಗಳಿಗೆ ಕೋಟಾವನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಈಗ ಹೆಚ್ಚಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಈ ಜಾತಿಗಣತಿಯ ವಿವರಗಳಿಂದ ಬಿಹಾರದಲ್ಲಿ ಒಬಿಸಿಗಳ ಪ್ರಾಬಲ್ಯವೇ ಹೆಚ್ಚಿರುವುದು ಬಹಿರಂಗವಾಗಿದೆ. ಮಾತ್ರವಲ್ಲ, ಆ ವರ್ಗ ಚುನಾವಣೆಯಲ್ಲಿ ಬೀರುವ ಪ್ರಭಾವವೆಂಥದು ಎಂಬುದನ್ನೂ ಸ್ಪಷ್ಟಪಡಿಸಿದೆ.

ಬಿಜೆಪಿ ಹಲವು ಬಗೆಯಲ್ಲಿ ಅಡ್ಡಿಪಡಿಸಿದ್ದರ ಹೊರತಾಗಿಯೂ ಜಾತಿ ಜನಗಣತಿ ನಡೆದು, ಅಂತಿಮವಾಗಿ ಅದರ ವಿವರಗಳು ಬಹಿರಂಗವಾಗಿರುವುದು ಬಿಜೆಪಿಯ ಜಾತಿ ರಾಜಕಾರಣದ ಆಟಕ್ಕೆ ದೊಡ್ಡ ಸವಾಲಾಗಲಿದೆ ಎಂಬುದೂ ನಿಜ. ​ಈವರೆಗೆ ಹಿಂದುತ್ವವನ್ನು ತೋರಿಸಿ ನರೇಂದ್ರ ಮೋದಿ ಒಬಿಸಿ ವರ್ಗದಿಂದ ಬಂದಿರುವ ನಾಯಕ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯುತ್ತಿದ್ದ ಬಿಜೆಪಿಗೆ ಈಗ ಒಬಿಸಿ ವರ್ಗಗಳಿಗೆ ಇಷ್ಟು ಮಾಡಿದರೆ ಏನೇನು ಸಾಲದು ಎಂಬಂತಹ ಪರಿಸ್ಥಿತಿ ಬಂದೊದಗಿದೆ. ಮತದಾರರಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಅವರೇ ಇದ್ದಾರೆ ಎಂದು ಅಂಕಿ ಸಂಖ್ಯೆಗಳು ತೋರಿಸುತ್ತಿರುವಾಗ ಅವರ ಪ್ರಾತಿನಿಧ್ಯ ಹೆಚ್ಚಿಸಲು ದೊಡ್ಡ ಕ್ರಮ ಕೈಗೊಳ್ಳುವ ಒತ್ತಡಕ್ಕೆ ಬಿಜೆಪಿ ಸಿಲುಕಲಿದೆ. ಇನ್ನು ಕೇವಲ ಹಿಂದುತ್ವದ ಮಾತು ನಡೆಯದು.

ಈ ಹಿಂದೆ ದೇಶದಲ್ಲಿ ಜಾತಿ ಗಣತಿ ನಡೆದಿದ್ದು 1931 ರಲ್ಲಿ. ಈಗ ರಾಷ್ಟ್ರೀಯ ಜಾತಿ ಜನಗಣತಿ ನಡೆಸುವುದಕ್ಕೂ ಒತ್ತಾಯಗಳು ಸಹಜವಾಗಿಯೇ ತೀವ್ರಗೊಳ್ಳುತ್ತವೆ. ಬಿಹಾರ ಜಾತಿ ಜನಗಣತಿ ವರದಿಯನ್ನು ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾ ಸ್ವಾಗತಿಸಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಬಿಹಾರದ ಜಾತಿ ಗಣತಿ ಅನ್ವಯ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ಶೇ.84ರಷ್ಟು ಇದ್ದಾರೆ ಎಂಬುದು ಬಹಿರಂಗವಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ 3 ಮಂದಿ ಮಾತ್ರ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ನಿಭಾಯಿಸುವುದು ಭಾರತದ ಬಜೆಟ್‌ನ ಶೇ. 5ರಷ್ಟನ್ನು ಮಾತ್ರ. ಹಾಗಾಗಿ, ​ಇಡೀ ದೇಶದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಾಸ್ತ​ವವಾಗಿ ಜಾತಿಗಣತಿಯನ್ನು ಪೂರ್ಣಗೊಳಿಸಿತ್ತು. ಆದರೆ ಅದರ ಫಲಿತಾಂಶಗಳನ್ನು ಮೋದಿ ಸರ್ಕಾರ ಪ್ರಕಟಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್, ನೊಂದ ಸಮಾಜಗಳ ಸಬಲೀಕರಣಕ್ಕೆ ಜಾತಿಗಣತಿ ಅತ್ಯವಶ್ಯಕ ಎಂದಿದ್ದಾರೆ. ಜಾತಿಜನಗಣತಿ ಮಾಡಲು ಮನಸ್ಸಿಲ್ಲದ ಬಿಜೆಪಿ ಸರ್ಕಾರ ನೆಪಗಳನ್ನು ಹೇಳುತ್ತಲೇ, ಅದನ್ನು ಮುಂದೆ ತಳ್ಳುತ್ತಿದೆ. ಮುಂಬರುವ ಚುನಾವಣೆಯನ್ನೂ ಅದು ಈ ಯಾವ ಸವಾಲುಗಳಿಲ್ಲದೆಯೆ ದಾಟಲು ಯೋಚಿಸಿತ್ತು.

ಆದರೆ ಈಗ ಬಿಹಾರ ಸರ್ಕಾರ ಜಾತಿಗಣತಿ ವಿವರ ಬಹಿರಂಗಪಡಿಸಿರುವುದರಿಂದ, ಜಾತಿಗಣತಿಯೇನಾದರೂ ದೇಶಾದ್ಯಂತ ನಡೆದರೆ ದೇಶದ ಒಟ್ಟಾರೆ ಜಾತಿವಾರು ಜನಸಂಖ್ಯೆಯ ಚಿತ್ರ ಹೇಗಿರಬಹುದು ಎಂಬ ಸುಳಿವು​ ಈಗಾಗಲೇ ಸಿಕ್ಕಂತಾಗಿದೆ. ಇದು ನಿಜವಾಗಿಯೂ ಬಿಜೆಪಿಯ ಆತಂಕವನ್ನು ದುಪ್ಪಟ್ಟು ಮಾಡದೆ ಇಲ್ಲ.

ಹೀಗಾಗಿಯೇ, ಜಾತಿ ಹೆಸರಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ಇದು ಎಂದು ​ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈ ಹೇಳಿಕೆಯ ಹಿಂದಿರುವುದು ಖಂಡಿತವಾಗಿಯೂ ಎಲ್ಲಿ ತಮ್ಮ ರಾಜಕೀಯ ಆಟಕ್ಕೆ ಸೋಲಾದೀತೊ ಎಂಬ ಭಯ ಎಂಬುದು ಸ್ಪಷ್ಟ.​ ಸುಳ್ಳು, ದ್ವೇಷ ಹರಡುವ ಮೂಲಕ ನಿಜವಾದ ವಿಭಜನೆಯ ಕೆಲಸ ಇಲ್ಲಿ ಯಾರು ಮಾಡ್ತಾ ಇದ್ದಾರೆ ಎಂಬುದನ್ನು ದೇಶವೇ ನೋಡುತ್ತಿದೆ.

ಹಾಗಾಗಿ, ದೇಶ ವಿಭಜನೆ ಯತ್ನ ಎಂದು ಮೋದಿ ಇನ್ನಾರನ್ನೋ ಗುರಿಯಾಗಿಸಿ ಆರೋಪಿಸುತ್ತಿರುವುದೇ ಹಾಸ್ಯಾಸ್ಪದ ಮತ್ತು ದೊಡ್ಡ ವಿಪರ್ಯಾಸ.​ಈಗ ಬಿಜೆಪಿಗೆ ಜಾತಿಗಣತಿಯ ಅಗ್ನಿ ಪರೀಕ್ಷೆ ಎದುರಾಗಿದೆ. ಅದನ್ನದು ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಕರ್ನಾಟಕದಲ್ಲಿ 2015ರಲ್ಲಿ ಸಿದ್ದರಾಮಯ್ಯ ಸರಕಾರ ಜಾತಿ ಗಣತಿ ನಡೆಸಿತ್ತು. ಆದರೆ ಅದರ ವರದಿ ಈವರೆಗೂ ಬಿಡುಗಡೆಯಾಗಿಲ್ಲ. ಈಗ ಆ ವರದಿ ಬಿಡುಗಡೆಗೂ ಆಗ್ರಹ ಕೇಳಿ ಬಂದಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬಿಹಾರದ ಜಾತಿ ಗಣತಿಯನ್ನು ನಡೆಸಿವೆ. ಅದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೆಚ್ಚಿಕೊಂಡಿದ್ದಾರೆ. ಈಗ ಕರ್ನಾಟಕ ಸರಕಾರ ಇಲ್ಲಿನ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಜೀವಿ

contributor

Similar News