ದ್ವೇಷ ಕಾರುವ ರಾಜಾ ಸಿಂಗ್ ಅಮಾನತು ಹಿಂಪಡೆದು ಟಿಕೆಟ್ ಕೊಟ್ಟ ಬಿಜೆಪಿ
ಬಿಜೆಪಿಯಲ್ಲಿ ಎಂಥವರಿಗೆಲ್ಲ ಮಣೆ ಮತ್ತು ಮನ್ನಣೆ ಎಂದು ಕೇಳಿದರೆ ಸಾಮಾನ್ಯವಾಗಿ ಮನಸ್ಸಿನಲ್ಲಿ ಮೂಡುವ ಉತ್ತರಗಳು ಏನಿರಬಹುದು?.
ಅವರು ದ್ವೇಷಭಾಷಣದಲ್ಲಿ ಪಳಗಿರಬೇಕು. ಸಮುದಾಯಗಳ ನಡುವೆ ಕಿಡಿ ಹಚ್ಚುವುದು, ಸಮಾಜದಲ್ಲಿ ಒಡಕನ್ನುಂಟು ಮಾಡುವುದನ್ನೇ ಅಭ್ಯಾಸ ಮಾಡಿಕೊಂಡವರಾಗಿರಬೇಕು. ಮುಸ್ಲಿಮರ ವಿರುದ್ಧ ದ್ವೇಷ ಹರಡುವವರಾಗಿರಬೇಕು ಮತ್ತು ನಮಗೆ ಮುಸ್ಲಿಂ ಮತಗಳು ಬೇಕಿಲ್ಲ ಎನ್ನುವವರಾಗಿರಬೇಕು. ಗಾಂಧೀಜಿಯನ್ನು ದ್ವೇಷಿಸುವವರೂ, ಗೋಡ್ಸೆಯನ್ನು ಆರಾಧಿಸುವವರೂ ಆಗಿರಬೇಕು. ರಾಜಕೀಯ ಎದುರಾಳಿಗಳನ್ನು ಅವರ ಧರ್ಮದ ಆಧಾರದಲ್ಲಿ ನಿಂದಿಸುವವರಾಗಿರಬೇಕು.
ಬಿಜೆಪಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಥವರೇ ಸ್ಥಾನಮಾನಗಳನ್ನೂ, ಭಡ್ತಿಯನ್ನೂ ಪಡೆಯುತ್ತಾ ಬಂದಿದ್ದಾರೆ ಎಂಬುದು ಎದ್ದು ಕಾಣುತ್ತದೆ.
ಬಿಜೆಪಿಯಲ್ಲಿ ಹಿಂದೆ ಇಂಥವರು ಇರಲೇ ಇಲ್ಲ ಅಂತೇನೂ ಅಲ್ಲ. ಆದರೆ ಅವರು ಈ ಕಳೆದೊಂದು ದಶಕದಲ್ಲಿ ಪಡೆದಷ್ಟು ಪ್ರಾಮುಖ್ಯತೆ, ಮನ್ನಣೆ ಪಡೆಯುತ್ತಿರಲಿಲ್ಲ, ಅಷ್ಟೇ.
ಅಂಥವರ ಸಾಲಿಗೆ ಈಗ ಟಿ. ರಾಜಾ ಸಿಂಗ್ ಎಂಬ ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಕೂಡ ಹೊಸ ಸೇರ್ಪಡೆ. ಅಮಾನತಾಗಿದ್ದ ರಾಜಾ ಸಿಂಗ್ ಗೆ ಮತ್ತೆ ಬಿಜೆಪಿಯೊಳಗೆ ಮಾನವೂ, ಸಮ್ಮಾನವೂ ಸಿಕ್ಕಿದೆ. ಅಮಾನತು ಕ್ರಮವನ್ನು ಬಿಜೆಪಿ ಹಿಂತೆಗೆದುಕೊಂಡಿರುವುದಲ್ಲದೆ, ರಾಜಾ ಸಿಂಗ್ ಗೆ ತೆಲಂಗಾಣ ಅಸೆಂಬ್ಲಿ ಚುನಾವಣೆಗೆ ಟಿಕೆಟ್ ಅನ್ನೂ ಘೋಷಿಸಿದೆ. ನವೆಂಬರ್ 30ರಂದು ನಡೆಯಲಿರುವ ತೆಲಂಗಾಣ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ರಾಜಾ ಸಿಂಗ್ ಹೆಸರು ಇದೆ.
ಯಾರು ಈ ಟಿ ರಾಜಾ ಸಿಂಗ್?
ರಾಜಾ ಸಿಂಗ್ ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ. ಪ್ರಖರ ಹಿಂದುತ್ವವಾದಿಯಾಗಿ ತೋರಿಸಿಕೊಂಡಿರುವ ಶಾಸಕ.
ಕಳೆದ ವರ್ಷ ಪ್ರವಾದಿ ಮೊಹಮ್ಮದ್‌ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿಯಿಂದ ಅಮಾನತಾಗಿದ್ದ ಸಿಂಗ್ ಹೈದರಾಬಾದ್ ಪೊಲೀಸರಿಂದ ಬಂಧನಕ್ಕೊಳಗಾಗಿ, ಅನಂತರ ಸುಮಾರು 3 ತಿಂಗಳ ಕಾಲ ಜೈಲುಶಿಕ್ಷೆಯೂ ಆಗಿತ್ತು.
ಇದೇ ರೀತಿಯಲ್ಲಿ ವಿವಾದಿತ ಹೇಳಿಕೆ ನೀಡಿ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಬಿಜೆಪಿಯ ದೆಹಲಿ ನಾಯಕ ನವೀನ್ ಕುಮಾರ್ ಜಿಂದಾಲ್ ಅಮಾನತಾದ ಬೆನ್ನಲ್ಲೇ ರಾಜಾ ಸಿಂಗ್ ಕೂಡ ಈ ವಿವಾದಾತ್ಮಕ ಹೇಳಿಕೆ ಕಾರಣಕ್ಕೆ ಅಮಾನತಿಗೆ ಒಳಗಾಗಬೇಕಾಗಿ ಬಂದಿತ್ತು. ರಾಜಾ ಸಿಂಗ್ ವಿರುದ್ಧ ಭಾರೀ ಪ್ರತಿಭಟನೆ ಕೂಡ ನಡೆದಿತ್ತು.
ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೆ ಹೈದರಾಬಾದ್‌ನಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದ್ದ ಬಿಆರ್ಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ರಾಜಾ ಸಿಂಗ್ ಕಡೆಯಿಂದ ಪ್ರವಾದಿ ಮುಹಮ್ಮದರ ಕುರಿತ ವಿವಾದಾತ್ಮಕ ಹೇಳಿಕೆ ಬಂದಿತ್ತು. ರಾಜಾ ಸಿಂಗ್ ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದ ವೀಡಿಯೊ ಭಾರೀ ವಿವಾದ ಸೃಷ್ಟಿಸಿತ್ತು. ಆ ವೀಡಿಯೊವನ್ನು ಕಡೆಗೆ ಇಂಟರ್‌ನೆಟ್‌ನಿಂದ ತೆಗೆಯಲಾಗಿತ್ತು.
ರಾಜಾ ಸಿಂಗ್ ಹೇಳಿಕೆ ಬಿಜೆಪಿಗೆ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿತ್ತು ಮತ್ತು ಆ ಹಿನ್ನೆಲೆಯಲ್ಲಿಯೇ ಅಮಾನತು ಮಾಡಲಾಗಿತ್ತು. ರಾಜಾ ಸಿಂಗ್ ಅಮಾನತು ಕ್ರಮವನ್ನು ಈಗ ಹಿಂತೆಗೆದುಕೊಳ್ಳಲಾಗಿದೆ. ಈಗ ಎಂಎಲ್ಎ ಆಗಿರುವ ಗೋಶಾಮಹಲ್ ಕ್ಷೇತ್ರದಿಂದಲೇ ಮತ್ತೆ ಪಕ್ಷದಿಂದ ಟಿಕೆಟ್ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ತೆಲಂಗಾಣ ಬಿಜೆಪಿ ಮುಖ್ಯಸ್ಥ ಕಿಶನ್ ರೆಡ್ಡಿ, ಪಕ್ಷ ನೀಡಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಯಾಗಿ ರಾಜಾ ಸಿಂಗ್ ನೀಡಿರುವ ವಿವರಣೆಯನ್ನು ಪರಿಗಣಿಸಿ ಅಮಾನತನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ, ತೆಲಂಗಾಣ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಕರೆಸಿಕೊಳ್ಳುವ ರಾಜಾ ಸಿಂಗ್ ಗೆ ಬಿಜೆಪಿ ಮತ್ತೆ ಮಣೆ ಹಾಕಿದ್ದು, ಚುನಾವಣೆಗೆ ಅದು ಅನುಸರಿಸುವ ದ್ವೇಷಭಾಷಣಕ್ಕೆ ವೇದಿಕೆ ಸಿದ್ಧ ಮಾಡುವ ಸೂಚನೆಗಳು ಸಿಕ್ಕಂತಾಗಿದೆ.
ಇಲ್ಲಿ ಫೈರ್ ಬ್ರ್ಯಾಂಡ್ ಅಂದ್ರೆ ಬೇರೇನೂ ಅಲ್ಲ. ಸಮಾಜದಲ್ಲಿ ಕೋಮು ದ್ವೇಷದ ಬೆಂಕಿ ಹಚ್ಚೋದು ಅಷ್ಟೇ. ದ್ವೇಷ ಕಾರುವವರನ್ನೇ ಮೇಲೇರಿಸಿ ಕೂರಿಸುವುದು ಬಿಜೆಪಿಯಲ್ಲಿ ನಿರಂತರ ನಡೆದುಕೊಂಡೇ ಬಂದಿರುವ ಸಂಪ್ರದಾಯ. ತೋರಿಕೆಗೊಂದು ಸಣ್ಣ ದನಿಯ ವಾರ್ನಿಂಗ್, ಅಥವಾ ಬೇಸರ ವ್ಯಕ್ತಪಡಿಸುವ ನಾಟಕ. ಅಬ್ಬಬ್ಬಾ ಎಂದರೆ ಅಮಾನತು. ಕಡೆಗೆ ಸಮಯ ನೋಡಿಕೊಂಡು ಅಮಾನತು ಹಿಂತೆಗೆದುಕೊಳ್ಳುವುದು. ಈಗ ರಾಜಾ ಸಿಂಗ್ ವಿಚಾರದಲ್ಲಿಯೂ ಅದನ್ನೇ ಬಿಜೆಪಿ ಮಾಡಿದೆ.
ಬಿಜೆಪಿಯಂಥ ಬಲಿಷ್ಠ ಪಕ್ಷಕ್ಕೆ ಮನಸ್ಸು ಮಾಡಿದ್ದರೆ ರಾಜಾ ಸಿಂಗ್ ಬದಲು ಯಾರಾದರೂ ಸಮರ್ಥ ಅಭ್ಯರ್ಥಿ ಸಿಕ್ಕೇ ಸಿಗುತ್ತಿದ್ದರು. ಆದರೆ ಹಾಗೆ ಮಾಡಲು ಬಿಜೆಪಿಗೆ ಮನಸ್ಸು ಬೇಕಲ್ವಾ ?. ಚುನಾವಣೆಗೆ ರಾಜಾ ಸಿಂಗ್ ಥರದವರನ್ನೇ ಹುಡುಕಿ ಹುಡುಕಿ ಕಣಕ್ಕಿಳಿಸುತ್ತದೆ ಬಿಜೆಪಿ.
ಹೆಚ್ಚು ಸಮಯವಾಗಲಿಲ್ಲ. ಮೊನ್ನೆ ಮೊನ್ನೆಯಷ್ಟೇ ಮತ್ತೊಬ್ಬ ಬಿಜೆಪಿ ನಾಯಕನಿಗೆ ಇಂಥದೇ ಕಾರಣಕ್ಕಾಗಿ ಭಡ್ತಿ ನೀಡಲಾಗಿತ್ತು.
ಬಿಎಸ್ಪಿ ಸಂಸದ ದಾನಿಶ್ ಅಲಿಯನ್ನು ಲೋಕಸಭೆಯಲ್ಲಿ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಬಹುಮಾನವಾಗಿ ಚುನಾವಣೆಯ ಹೊಣೆಗಾರಿಕೆ ನೀಡಲಾಗಿತ್ತು. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಜಿಲ್ಲೆಯೊಂದರ ಜವಾಬ್ದಾರಿಯನ್ನೇ ವಹಿಸುವ ಮೂಲಕ ರಮೇಶ್ ಬಿಧುರಿಯ ದ್ವೇಷ ಕಾರುವ ಶೈಲಿಗೆ ಬಿಜೆಪಿ ಬೆನ್ನು ತಟ್ಟಿದಂತಿತ್ತು.
ಬಿಜೆಪಿಯಲ್ಲಿ ಎತ್ತರಕ್ಕೇರುವ ಬಹಳಷ್ಟು ನಾಯಕರು ಇಂಥವರೇ ಆಗಿರುತ್ತಾರೆ. ಬಿಜೆಪಿಗೆ ಭಯೋತ್ಪಾದಕ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ , ಗಾಂಧೀಜಿ ಹಂತಕ ಗೋಡ್ಸೆಯನ್ನು ಪ್ರೀತಿಸುವ ಗಿರಿರಾಜ್ ಸಿಂಗ್ ಥರದವರೇ ಬೇಕು. ಪ್ರಜ್ಞಾ ಸಿಂಗ್, ಗಾಂಧೀಜಿ ಹಂತಕ ಗೋಡ್ಸೆಯನ್ನು ಪ್ರಶಂಸಿಸಿ ಮಾತಾಡಿದಾಗ ಸ್ವತಃ ಪ್ರಧಾನಿ ಮೋದಿ ಹೇಳಿದ್ದೇನು ? " ಆಕೆ ಕ್ಷಮೆ ಯಾಚಿಸಿದ್ದಾರೆ, ಆದರೂ ನಾನು ಆಕೆಯನ್ನು ಕ್ಷಮಿಸುವುದಿಲ್ಲ." ಆದರೆ ಆದದ್ದೇನು ? ಏನೂ ಇಲ್ಲ.
ಪ್ರಜ್ಞಾ ಸಿಂಗ್ ಇಂದಿಗೂ ಬಿಜೆಪಿ ಸಂಸದರಾಗಿಯೇ ಇದ್ದಾರೆ. ಇಂದಿಗೂ ಅದೇ ಧಾಟಿಯಲ್ಲಿ ಮಾತಾಡುತ್ತಲೇ ಇದ್ದಾರೆ. ಕೆಲವೇ ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದ ಅದೇ ಪ್ರಜ್ಞಾ ಸಿಂಗ್ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ ಎಂದು ಭಾಷಣ ಮಾಡಿ ಹೋಗಿದ್ದಾರೆ.
ಭಾರತದಲ್ಲಿ " ಗಲಭೆಕೋರರನ್ನು ಅವರ ಉಡುಪುಗಳಿಂದಲೇ ಗುರುತಿಸಬಹುದು " ಎಂದು ಭಾಷಣ ಬಿಗಿಯುವ ಪ್ರಧಾನಿ ಅಮೇರಿಕಾಕ್ಕೆ ಹೋಗಿ "ಭಾರತದಲ್ಲಿ ಧಾರ್ಮಿಕ ತಾರತಮ್ಯ ಎಂಬುದು ಇಲ್ಲವೇ ಇಲ್ಲ" ಎಂದು ಹೇಳುತ್ತಾರೆ. ಬಿಜೆಪಿಗೆ ಈಶ್ವರಪ್ಪನವರಂತೆ ಇತರ ಧರ್ಮೀಯರನ್ನು ಕುಟುಕುವವರು, ಯತ್ನಾಳ್ ರೀತಿಯಲ್ಲಿ ಪ್ರಚೋದನಕಾರಿ ಮಾತನಾಡುವವರು ಬೇಕು. ಅನಂತಕುಮಾರ್ ಹೆಗಡೆ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯರಂಥವರನ್ನು ಇದೇ ದ್ವೇಷ ಹರಡುವ ಮಾತನಾಡಲು ಬಿಟ್ಟು ಆಟ ನೋಡುತ್ತದೆ ಬಿಜೆಪಿ.
ಆದಿತ್ಯನಾಥ್ ರಂತಹ ದ್ವೇಷ ಭಾಷಣ ಮಾಡಿಕೊಂಡೇ ಬೆಳೆದವರನ್ನು ತನ್ನ ಅಗ್ರ ನಾಯಕರಾಗಿ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತದೆ ಬಿಜೆಪಿ. ಬಿಜೆಪಿಯಲ್ಲಿ ಭಡ್ತಿ ಹಾಗೂ ಪ್ರೋತ್ಸಾಹಕ್ಕೆ ದ್ವೇಷವೇ ಮಾನದಂಡ ಎಂಬುದು ಈಗ ರಾಜಾ ಸಿಂಗ್ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಪಡೆದಿದ್ದ ಏಕೈಕ ಶಾಸಕ ಎಂಬ ಹೆಗ್ಗಳಿಕೆ ರಾಜಾ ಸಿಂಗ್ಗಿದೆ.
ಈಗ ಹೈಕಮಾಂಡ್ ಮತ್ತೊಂದು ಅವಕಾಶ ನೀಡುತ್ತಿದೆ. ಅಲ್ಲಿಗೆ, ಬಿಜೆಪಿಯ ಅಮಾನತು ಕ್ರಮ ಆ ಹೊತ್ತಿಗೆ ಕೂಡ ಒಂದು ತಂತ್ರವಾಗಿತ್ತು.
ಮತ್ತು ಈಗ ಅಮಾನತು ಹಿಂತೆಗೆದುಕೊಂಡಿರುವುದೂ ಚುನಾವಣಾ ರಣತಂತ್ರವಾಗಿದೆ.
ಇದರೊಂದಿಗೆ, ಪ್ರಧಾನಿ ಮೋದಿಯಾಗಲೀ ಬಿಜೆಪಿಯಾಗಲೀ ನೀಡುತ್ತಿರುವ ಸಂದೇಶ ಬಹಳ ಸ್ಪಷ್ಟವಾಗಿದೆ. ದ್ವೇಷ ರಾಜಕಾರಣವೇ ಬಿಜೆಪಿಯ ಮುಖ್ಯ ಬಂಡವಾಳ ಎಂಬುದು ರಹಸ್ಯವಲ್ಲ. ಅದನ್ನೇ ಇಟ್ಟುಕೊಂಡು ಗೆಲ್ಲಲು ಅದು ಬಯಸುತ್ತದೆ. ವಿಕಾಸ, ವಿಶ್ವಾಸ ಇವೆಲ್ಲವೂ ಬರೀ ಭಾಷಣದ ಜುಮ್ಲಾಗಳು ಅಷ್ಟೇ. ಹಿಂದೆಯೂ ಇದೇ ನಡೆದಿದೆ, ಈಗಲೂ ಅದೇ ನಡೆಯುತ್ತಿದೆ. ಇನ್ನು ಮುಂದೆಯೂ ಇದೇ ನಡೆಯುವುದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ ದ್ವೇಷದ ವಿಷ ಲೇಪಿಸಿದ ಅಸ್ತ್ರವಿಲ್ಲದೆ ಬಿಜೆಪಿಯ ರಾಜಕೀಯ ಆಟ ನಡೆದದ್ದೇ ಇಲ್ಲ.