'ಮೈತ್ರಿಯಲ್ಲಿ ಕಲ್ಲು' ಹುಡುಕುತ್ತಿರುವ ಬಿಜೆಪಿ - ಜೆಡಿಎಸ್ ನಾಯಕರು
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಘೋಷಣೆ ಆದ ದಿನದಿಂದಲೂ ಮೈತ್ರಿ ಬಗ್ಗೆ ಎರಡೂ ಪಕ್ಷಗಳ ಒಳಗಿಂದ ಒಂದಲ್ಲ ಒಂದು ಬಗೆಯಲ್ಲಿ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ. ಮಾತ್ರವಲ್ಲ, ಎರಡೂ ಪಕ್ಷಗಳ ಕೆಲವು ನಾಯಕರು ಆ ಬಗ್ಗೆ ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಬಹಿರಂಗವಾಗಿಯೇ ಹೇಳಿಕೆಗಳನ್ನು ಕೊಡುತ್ತಿರೋದು ಎರಡೂ ಪಕ್ಷಗಳ ವರಿಷ್ಠರಿಗೆ ಮುಜುಗರವುಂಟು ಮಾಡಿದೆ. ಈಗಾಗಲೇ ಜೆಡಿಎಸ್ ನ ರಾಜ್ಯಾಧ್ಯಕ್ಷರ ಸಹಿತ ಕೆಲವು ನಾಯಕರು, ಶಾಸಕರು ಬಹಿರಂಗವಾಗಿಯೇ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, ಈಗ ಕೆಲ ಬಿಜೆಪಿ ನಾಯಕರೂ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ.
ಇತ್ತೀಚಿಗೆ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್‍ಟಿ ಸೋಮಶೇಖರ್ 'ನನಗೆ ಏನಿದ್ದರೂ ಯಡಿಯೂರಪ್ಪನವರೇ ಹೈಕಮಾಂಡ್, ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ" ಎಂದು ಬಹಿರಂಗವಾಗಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು. "ನಾನು ವೈಯುಕ್ತಿಕವಾಗಿ 20 ವರ್ಷದಿಂದ ಜೆಡಿಎಸ್ ಜೊತೆ ಸೆಣಸಾಟ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್ ಗೆ ಮೊದಲಿನಿಂದಲೂ ವಿರೋಧ ಇದೆ. ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ ಮಾನಸಿಕ ಕಿರುಕುಳ ಹತ್ತಿರದಿಂದ ನೋಡಿದ್ದೇನೆ. ಮೈತ್ರಿ ವಿಚಾರ ನನಗೂ ವೈಯಕ್ತಿಕವಾಗಿ ಅಸಮಾಧಾನ ಇದೆ. ವೈಯಕ್ತಿಕವಾಗಿ ನನಗೆ ಮೈತ್ರಿ ಬಗ್ಗೆ ವಿರೋಧ ಇದೆ" ಎಂದು ಅವರು ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಸೋಮಶೇಖರ್ ಹೇಳಿಕೆ ಬೆನ್ನಲ್ಲೇ , ಬಿಜೆಪಿಯ ಹಲವು ಹಿರಿಯ ನಾಯಕರು ಅವರ ಹೇಳಿಕೆ ವಿರುದ್ಧ ಕಿಡಿಕಾರಿದ್ರು. "ಸೋಮಶೇಖರ್ ಯಾವಾಗಲೂ ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಿರುತ್ತಾರೆ" ಎಂದು ಸಿ ಟಿ ರವಿ ಟೀಕಿಸಿದ್ದಾರೆ. "ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟುತ್ತೆ, ಎಸಿ ರೂಮ್‌ನಲ್ಲಿದ್ದರೆ ವಾತಾವರಣ ಚೆನ್ನಾಗಿರುತ್ತದೆ" ಎಂದು ತಿರುಗೇಟು ನೀಡಿದ್ದೂ ಆಯಿತು. “ನಾವು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು, ಸೋಮಶೇಖರ್ ಕೂಡ ಇದಕ್ಕೆ ಹೊರತಾಗಿಲ್ಲ. ಒಂದು ವೇಳೆ ಅವರು ಬಯಸಿದರೇ ಪಕ್ಷ ತೊರೆದು ಸಂತೋಷವಾಗಿರುವ ಪಕ್ಷಕ್ಕೆ ಸೇರಲಿ" ಎಂದು ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಜೆಡಿಎಸ್ ಜೊತೆ ಮೈತ್ರಿಗೆ ಸೋಮಶೇಖರ್ ಅಪಸ್ವರ ಎತ್ತಿದ ಬೆನ್ನಲ್ಲೇ, ಇನ್ನು ಮುಂದೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಸೋಮಶೇಖರ್ ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯ ಶಿಸ್ತು ಸಮಿತಿಯು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನೀಡಿದೆ ಎಂದು ವರದಿಯಾಗಿತ್ತು.
ಅದರ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿಯ ಇಬ್ಬರು ಹಿರಿಯ ನಾಯಕರಾದ ವಿ.ಸೋಮಣ್ಣ ಹಾಗು ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡ ತಮ್ಮ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ವರುಣಾ - ಎರಡೂ ಕ್ಷೇತ್ರಗಳಲ್ಲೂ ಹೀನಾಯವಾಗಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಹತಾಶರಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು, ಮತ್ತೊಮ್ಮೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
" ಬಿಜೆಪಿಗೆ ಬರುವವರೆಗೆ ನಾನು ಸೋತೇ ಇರಲಿಲ್ಲ. ಬಿಜೆಪಿಗೆ ಬಂದು ನಾನು 4 ಬಾರಿ ಸೋತೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯೇ ತನ್ನ ಸೋಲಿಗೆ ಕಾರಣ ಎಂದು ವಿ. ಸೋಮಣ್ಣ ಹೇಳಿರುವುದು ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಇನ್ನೊಂದೆಡೆ , ಸಂಸದ ಡಿವಿ ಸದಾನಂದ ಗೌಡ ಕೂಡಾ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದು, "ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ" ಅಂತ ಹೇಳಿದ್ದಾರೆ.
"ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಈ ಬಗ್ಗೆ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ಹೈಕಮಾಂಡ್ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟು ಕೇಂದ್ರದ ನಾಯಕರೇ ಈ ತೀರ್ಮಾನವನ್ನು ಮಾಡಿದ್ದಾರೆ" ಎಂದು ಮಾಜಿ ಸಿಎಂ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ನಿಜ. ಆದರೆ, ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸದೆ, ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ, ಯಾವುದೇ ರೀತಿಯ ಪ್ರಯೋಜನವಿಲ್ಲ. ಇತ್ತೀಚೆಗಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿತ್ತು. ಇದೀಗ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗುತ್ತದೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೂ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ" ಎಂದು ಡಿ ವಿ ಹೇಳಿದ್ದಾರೆ .
ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಪಕ್ಷಕ್ಕೆ ಈ ಸ್ಥಿತಿ ಬಂದಿರುವುದರ ಬಗ್ಗೆ ನೋವಿದೆ. ಅದನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹ. ನಾನಿನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಾಸ್ತವ ವಿಚಾರಗಳನ್ನು ಮಾತನಾಡಲು ನನಗೆ ಯಾವ ರೀತಿಯ ಭಯವೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಜೆಡಿಎಸ್ ನಲ್ಲೇನೂ ತೀರಾ ಭಿನ್ನ ವಾತಾವರಣವೇನಿಲ್ಲ. ಅಲ್ಲಿ ಮೊದಲು ಅಸಮಾಧಾನ ಹೊರಹಾಕಿರುವುದೇ ಆ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ. ಮೈತ್ರಿ ವಿಚಾರವಾಗಿ ಜೆಡಿಎಸ್ ಪಕ್ಷದ ನಾಯಕರೇ ಬಿಜೆಪಿಯ ಬಳಿ ಹೋಗಿದ್ದು, ತಪ್ಪು, ಅವರೇ ನಮ್ಮ ಬಳಿ ಬರಬೇಕಿತ್ತು. ಮೈತ್ರಿ ಮಾಡೋಕೆ ಆತುರಪಟ್ಟು ದೆಹಲಿಗೆ ಹೋಗೋ ಮುನ್ನ ನಮ್ಮನ್ನು ಭೇಟಿ ಮಾಡಿ ಚರ್ಚಿಸಿಲ್ಲ. ಕೋರ್ ಕಮಿಟಿ ಸಭೆಯೂ ನಡೆದಿಲ್ಲ. ನಾಲ್ಕು ಮಂದಿ ಹೋಗಿ ತಾಳಿ ಕಟ್ಟಿಸಿ ಬಂದಂತಾಗಿದೆ ಮೈತ್ರಿ ಅವಸ್ಥೆ ಅಂತ ನೇರವಾಗಿಯೇ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷದ 19 ಶಾಸಕರ ಪೈಕಿ 11 ಶಾಸಕರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಿರುವ ಸಿ ಎಂ ಇಬ್ರಾಹಿಂ ಮುಂದಿನ ನಿರ್ಧಾರ ಅಕ್ಟೊಬರ್ 16 ರಂದು ಹೇಳುತ್ತೇನೆಂದು ಹೇಳಿದ್ದಾರೆ. ಇಬ್ಬರು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಆದರೆ ಕುಮಾರಸ್ವಾಮಿ ಈಗಾಗಲೇ ಮೈತ್ರಿ ಕುರಿತ ಅಪಸ್ವರಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸೂಚನೆ ಕೊಟ್ಟು ಹೋಗುವವರು ಹೋಗಲಿ ಎಂದೇ ಹೇಳಿಬಿಟ್ಟಿದ್ದಾರೆ. ಅವರಿಗೆ ಇನ್ನು ಕಳಕೊಳ್ಳುವುದು ಏನೂ ಇಲ್ಲ ಎಂಬಂತಾಗಿದೆ. ಆದರೆ ರಾಜ್ಯ ಬಿಜೆಪಿಯೊಳಗಿನ ತಳಮಳ ಹಾಗು ಜೆಡಿಎಸ್ ನ ನಾಯಕರು ಹಾಗು ಕಾರ್ಯಕರ್ತರ ಅಸಮಾಧಾನ ಮಾತ್ರ ಬಿಜೆಪಿ ವರಿಷ್ಠರಿಗೆ ತಲೆನೋವಾಗಲಿದೆ. ಎರಡು ಪಕ್ಷಗಳು ಹೆಸರಿಗೆ ಮಾತ್ರ ಮೈತ್ರಿಯಾಗಿ ದ್ವಿತೀಯ ಹಂತದ ನಾಯಕರು ಹಾಗು ತಳಮಟ್ಟದ ಕಾರ್ಯಕರ್ತರ ಹಂತದಲ್ಲಿ ಅಂತರ ಹಾಗೇ ಉಳಿದುಬಿಟ್ಟರೆ ಎಂತಹ ಅಪಾಯ ಎದುರಾಗಲಿದೆ ಎಂಬುದು ಕರ್ನಾಟಕದಲ್ಲೇ 2019 ರ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಜೆಡಿಎಸ್ ಗಳು ಮೈತ್ರಿ ಮಾಡಿಕೊಂಡಿದ್ದರೂ ಆ ಪಕ್ಷಗಳ ಓಟುಗಳು ವರ್ಗಾವಣೆಯಾಗಲಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿ ದುಡಿಯಲಿಲ್ಲ. ಪರಿಣಾಮವಾಗಿ ಎರಡೂ ಪಕ್ಷಗಳು ಧೂಳಿಪಟವಾದವು. ಬಿಜೆಪಿ 28 ರಲ್ಲಿ 25 ಸ್ಥಾನ ಗಳಿಸಿತು.
ಈಗ ಅದೇ ಅಗ್ನಿ ಪರೀಕ್ಷೆ ಬಿಜೆಪಿ ಜೆಡಿಎಸ್ ಮೈತ್ರಿ ಎದುರಿದೆ. ಎದುರಿಗೆ ಪೂರ್ಣ ಆತ್ಮವಿಶ್ವಾಸ ತೋರಿಸಿಕೊಂಡರೂ ಬಿಜೆಪಿ ಹಾಗು ಕುಮಾರಸ್ವಾಮಿಗೆ ಒಳಗೊಳಗೇ ಆ ಭಯ ಇದ್ದೇ ಇದೆ. ಈಗ ರಾಜ್ಯ ನಾಯಕರೂ ಅಪಸ್ವರ ಎತ್ತುತ್ತಿರುವುದು ಎರಡೂ ಪಕ್ಷಕ್ಕೆ ಒಳ್ಳೆಯ ಲಕ್ಷಣವಂತೂ ಅಲ್ಲ. ವಿಧಾನ ಸಭಾ ಚುನಾವಣೆಯ ಸೋಲಿನ ಪೆಟ್ಟಿನಿಂದ ಸುಧಾರಿಸಿಕೊಳ್ಳಲು ಬಿಜೆಪಿ ಚಡಪಡಿಸುತ್ತಿತ್ತು. ಮೈತ್ರಿಗೆ ತನ್ನನ್ನು ಯಾವಾಗ ಕತೀತಾರೋ ಅಂತ ಕುಮಾರಸ್ವಾಮಿ ತುದಿಗಾಲಲ್ಲಿ ನಿಂತಿದ್ದರು. ಮೈತ್ರಿಯೂ ಆಯಿತು. ಆದರೆ ಎರಡೂ ಪಕ್ಷಗಳಿಗೆ ಈಗ ತಮ್ಮ ಹಿರಿಯ ನಾಯಕರ ಹೇಳಿಕೆಗಳಿಂದಲೇ ಇರಿಸುಮುರಿಸು ಎದುರಿಸುವಂತಾಗಿದೆ. ಇದನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.