ಪದವಿಪೂರ್ವ ಶಿಕ್ಷಣ ಮಂಡಳಿ ಲ್ಯಾಪ್‌ಟಾಪ್ ಖರೀದಿ; 9.73 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವ

Update: 2024-02-02 03:22 GMT

Photo: freepik

ಬೆಂಗಳೂರು, ಫೆ.1: ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ 7,000 ಲ್ಯಾಪ್‌ಟಾಪ್ ಖರೀದಿಸಿರುವ ಬೆನ್ನಲ್ಲೇ ಇದೀಗ ಪದವಿಪೂರ್ವ ಶಿಕ್ಷಣ ಮಂಡಳಿ 768 ಲ್ಯಾಪ್‌ಟಾಪ್ ಖರೀದಿಸಲು ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರೂ. ದರ ನಿಗದಿಗೊಳಿಸಿ ಒಟ್ಟು 9.73 ಕೋಟಿ ರೂ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದು ಬಹಿರಂಗವಾಗಿದೆ.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮದಡಿಯಲ್ಲಿ ಪಿಯುಸಿ 2024ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆಯ ಭಾಗವಾಗಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಇದರಲ್ಲಿ ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರೂ. ಎಂದು ಪಿಯು ಮಂಡಳಿಯೇ ದರ ನಿಗದಿಪಡಿಸಿದೆ.

ಪದವಿಪೂರ್ವ ಶಿಕ್ಷಣ ಮಂಡಳಿಯ ಉಪನಿರ್ದೇಶಕರು (ಶೈಕ್ಷಣಿಕ) ಸರಕಾರದ ಪ್ರಧಾನ ಕಾರ್ಯದರ್ಶಿಗೆ 2024ರ ಜನವರಿ 16ರಂದು ಪ್ರಸ್ತಾವ ಸಲ್ಲಿಸಿದ್ದಾರೆ. ಇದರ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ ಹೆಸರಿನಲ್ಲಿ ಲ್ಯಾಪ್‌ಟಾಪ್ ವಿತರಣೆ ಯೋಜನೆ ಹಮ್ಮಿಕೊಂಡಿತ್ತು. ಪ.ಜಾತಿಯ ಪ್ರತೀ ವಿಭಾಗದ 5 ವಿದ್ಯಾರ್ಥಿಗಳಿಗೆ 15 ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಪ್ರತಿ ವಿಭಾಗದ 3 ವಿದ್ಯಾರ್ಥಿಗಳಿಗೆ ಒಟ್ಟು 9 ಲ್ಯಾಪ್‌ಟಾಪ್‌ಗಳನ್ನು ಬಹುಮಾನವಾಗಿ ನೀಡಲಿದೆ. ಇದಕ್ಕಾಗಿ ಪಿಯು ಮಂಡಳಿಯು ಕ್ರಿಯಾ ಯೋಜನೆ ರೂಪಿಸಿರುವುದು ಪ್ರಸ್ತಾವದಿಂದ ತಿಳಿದು ಬಂದಿದೆ.

ಒಟ್ಟು 32 ಶೈಕ್ಷಣಿಕ ಜಿಲ್ಲೆಗಳಲ್ಲಿ 2023-24ನೇ ಸಾಲಿಗೆ 768 ಲ್ಯಾಪ್‌ಟಾಪ್ ಖರೀದಿಸಲು ಪ್ರಸ್ತಾವಿಸಿದೆ. ಪ್ರತಿ ಲ್ಯಾಪ್‌ಟಾಪ್‌ಗೆ 60,000 ರೂ.ನಂತೆ ಎಸ್‌ಸಿಪಿ ಅಡಿಯಲ್ಲಿ 480 ಲ್ಯಾಪ್‌ಟಾಪ್‌ಗಳಿಗೆ 2.88 ಕೋಟಿ ರೂ., ಟಿಎಸ್ಪಿ ಅಡಿಯಲ್ಲಿ 288 ಲ್ಯಾಪ್‌ಟಾಪ್‌ಗಳಿಗೆ 1.72 ಕೋಟಿ ರೂ. ಒಟ್ಟು 4.60 ಕೋಟಿ ರೂ. ಅನುದಾನ ಕೋರಿದೆ.

ಅದೇ ರೀತಿ 2024-25ನೇ ಸಾಲಿಗೆ ‘ವಿಶ್ವಾಸ ಕಿರಣ’ ಯೋಜನೆಯಡಿಯಲ್ಲಿ 4.06 ಕೋಟಿ ರೂ., ಲ್ಯಾಪ್‌ಟಾಪ್ ಯೋಜನೆಯಡಿಯಲ್ಲಿ 2.88 ಕೋಟಿ ರೂ., ಸೇರಿ 6.98 ಕೋಟಿ ರೂ., (ಎಸ್ಸಿಪಿ), ಟಿಎಸ್ಪಿ ಅಡಿಯಲ್ಲಿ ವಿಶ್ವಾಸ ಕಿರಣ ಯೋಜನೆಯಡಿಯಲ್ಲಿ 1.08 ಕೋಟಿ ರೂ., ಲ್ಯಾಪ್‌ಟಾಪ್ ಯೋಜನೆಯಡಿಯಲ್ಲಿ 1.72 ಕೋಟಿ ರೂ. ಸೇರಿ ಒಟ್ಟು 9.76 ಕೋಟಿ ರೂ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವದ ಕುರಿತು ಸಚಿವ ಮಧು ಬಂಗಾರಪ್ಪ ಅವರು ಇನ್ನಷ್ಟೇ ಚರ್ಚಿಸಬೇಕಿದೆ ಎಂದು ಗೊತ್ತಾಗಿದೆ.

ಪದವಿಪೂರ್ವ ಶಿಕ್ಷಣ ಮಂಡಳಿಯು ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 60,000 ರೂ. ದರ ಎಂದು ನಿಗದಿಪಡಿಸಿರುವುದು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟಾಗಿದೆ. ಇದು ಸಾರ್ವಜನಿಕರ ಟೀಕೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಲ್ಯಾಪ್‌ಟಾಪ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಲವಾಗಿ ಆರೋಪಿಸುತ್ತಲೇ ಬಂದಿದ್ದ ಕಾಂಗ್ರೆಸ್ ಪಕ್ಷವು ಇದೀಗ ತನ್ನದೇ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಮುಕ್ತ ಮತ್ತು ಆನ್‌ಲೈನ್ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಲ್ಯಾಪ್‌ಟಾಪ್ ಖರೀದಿಸಿರುವುದು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿದೆ.

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಬೆಳಗಾವಿ, ಕಲಬುರಗಿ, ಹಾಸನ, ಬೆಂಗಳೂರು-1, ಬೆಂಗಳೂರು-2 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್‌ಟಾಪ್‌ಗಳಂತೆ ಒಟ್ಟು 7,000 ಲ್ಯಾಪ್‌ಟಾಪ್‌ಗಳನ್ನು 49.75 ಕೋಟಿ ರೂ. ದರದಲ್ಲಿ ಖರೀದಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಎಲ್-1 ಆಗಿ ಹೊರಹೊಮ್ಮಿದ್ದ ಕಂಪೆನಿಯು ನಮೂದಿಸಿದ್ದ ದುಪ್ಪಟ್ಟು ದರವನ್ನೇ ಅನುಮೋದಿಸುವ ಮೂಲಕ 23.15 ಕೋಟಿ ರೂ. ಹಗರಣಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಮಂಡಳಿಯು ನಿಗದಿಪಡಿಸಿದ್ದ ತಾಂತ್ರಿಕ ನಿರ್ದಿಷ್ಟತೆಗಳನ್ನೇ ಹೊಂದಿರುವ ಪ್ರತಿಷ್ಠಿತ ಕಂಪೆನಿಗಳು ತಲಾ ಲ್ಯಾಪ್‌ಟಾಪ್‌ಗೆ ಕನಿಷ್ಟ 27,999 ರೂ.ಗಳಿಂದ ಗರಿಷ್ಠ 35,999 ರೂ.ವರೆಗೆ ದರ ನಿಗದಿಪಡಿಸಿದೆ. ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪೆನಿಗಳು ತಲಾ ಲ್ಯಾಪ್‌ಟಾಪ್ ಬೆಲೆಯನ್ನು ನಮೂದಿಸಿಲ್ಲ. ನೈನ್ ರಿಚ್ ಇನ್ಫೋಟೆಕ್ ಕಂಪೆನಿಯು ಒಟ್ಟಾರೆ 1,400 ಲ್ಯಾಪ್‌ಟಾಪ್‌ಗಳಿಗೆ 9,94,64,499 ರೂ. ಎಂದು ನಮೂದಿಸಿದೆ. ಇದರ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 71,046 ರೂ.ನಂತೆ 1,400 ಲ್ಯಾಪ್‌ಟಾಪ್‌ಗಳಿಗೆೆ 9,94,64,499 ರೂ.ನಂತೆ 5 ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 49.75 ಕೋಟಿ ರೂ. ಆಗಲಿದೆ.

ಹನುಮಂತ ಪೂಜಾರಿ ಅವರು 2024ರ ಜನವರಿ 16ರಂದು ಖಾಸಗಿ ಕಂಪೆನಿಯೊಂದರಿಂದ ಪಡೆದಿರುವ ದರಪಟ್ಟಿ ಪ್ರಕಾರ ತಲಾ ಲ್ಯಾಪ್‌ಟಾಪ್‌ಗೆ 38,000 ರೂ. ಇದೆ. ಈ ದರದ ಪ್ರಕಾರ 1,400 ಲ್ಯಾಪ್‌ಟಾಪ್‌ಗಳಿಗೆ 5.32 ಕೋಟಿ ರೂ. ನಂತೆ 7,000 ಲ್ಯಾಪ್‌ಟಾಪ್‌ಗಳಿಗೆೆ 26.60 ಕೋಟಿ ರೂ. ಆಗಲಿದೆ. ತಲಾ ಲ್ಯಾಪ್‌ಟಾಪ್‌ವೊಂದಕ್ಕೆ 33,046 ರೂ.ನಂತೆ ಒಟ್ಟಾರೆ 23.15 ಕೋಟಿ ರೂ. ಅಧಿಕ ದರ ಪಾವತಿಸಿ ಖರೀದಿಸಿರುವುದು ದಾಖಲೆಯಿಂದ ತಿಳಿದುಬಂದಿದೆ. 9,94,64,499 ರೂ. ನಮೂದಿಸಿ ಎಲ್-1 ಆಗಿರುವ ನೈನ್‌ರಿಚ್ ಇನ್ಫೋಟೆಕ್ ಕಂಪೆನಿ ಜತೆ ಮಂಡಳಿಯು 2023ರ ಆಗಸ್ಟ್ 11ರಂದು ಕರಾರು ಮಾಡಿಕೊಂಡಿದೆ. ಆಗಸ್ಟ್ 17ರಂದು ಪೂರೈಕೆ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News