ಉರಿಯುತ್ತಿರುವ ಮಣಿಪುರ ಮತ್ತು ಹಿಂಸಾಚಾರದ ಭಾಗವೇ ಆದವರ ತೀವ್ರ ನಿರ್ಲಕ್ಷ್ಯ

ಮೋದಿ ನಿರಾಕರಿಸುವುದರಲ್ಲಿ ಪಳಗಿದವರು. ಆದರೆ ಅದು ಅತ್ಯಂತ ಆತಂಕಕಾರಿ, ಈ ಮೂಲಕ ಅವರು ಹಿಂಸಾತ್ಮಕ ಗುಂಪನ್ನು ಸಜ್ಜಾಗಿಸುವ ಮತ್ತು ಪ್ರಚೋದಿಸುವ ಕೆಲಸವನ್ನೇ ಮಾಡುತ್ತಿದ್ದಾರೆ. ನ್ಯಾಯ ಕೇಳುವವರ ಮೇಲೆ ದಾಳಿ ನಡೆಯುತ್ತದೆ. ಅಧಿಕಾರದಲ್ಲಿ ಅವರ ಮುಂದುವರಿಕೆ, ಜನರನ್ನು ನಿಜವಾದ ಮನುಷ್ಯರನ್ನಾಗಿಸುವ ಎಲ್ಲದರ ಸಾವು ಎಂದೇ ಅರ್ಥ.

Update: 2023-07-24 09:24 GMT

ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಬಹುಸಂಖ್ಯಾಕ ಹಿಂಸಾಚಾರದ ಬಗ್ಗೆ ಮೌನ ಮುರಿದರು ಎಂದು ಹೇಳುವುದು ಸರಿಯಲ್ಲ. ವಾಸ್ತವವಾಗಿ, ತಮ್ಮದೇ ಸಂಕೇತ ಭಾಷೆಯಲ್ಲಿ ಅವರು ವಿರೋಧಪಕ್ಷದ ಸರಕಾರವಿರುವ ರಾಜ್ಯಗಳನ್ನು ಗುರಿಯಾಗಿಸಲು ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ್ದಾರೆ, ಆ ರಾಜ್ಯಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಕೆಲಸ ಮಾಡುತ್ತಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ಮಣಿಪುರದ ಜನರು ಎದುರಿಸುತ್ತಿರುವ ಹಿಂಸಾಚಾರ, ಅಲ್ಲಿನ ತಲ್ಲಣದ ಸ್ಥಿತಿ ದೊಡ್ಡ ವಿಚಾರವಲ್ಲ ಎಂಬ ರೀತಿಯಲ್ಲಿದ್ದ ಮಾತಿನ ಮೂಲಕ ಅವರು, ಪ್ರತಿಪಕ್ಷದ ವಿರುದ್ಧ ದಾಳಿಗೆ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ.

ಅವರ ಹೇಳಿಕೆಯ ನಂತರ, ಬಿಜೆಪಿ ನಾಯಕರು ಮತ್ತು ಅವರ ಸಾಮಾಜಿಕ ಮಾಧ್ಯಮ ದಂಡು ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಲಾಯಿತು. ಕುಕಿ ಮಹಿಳೆಯರ ಮೇಲಿನ ಅತ್ಯಂತ ಹೀನ ದೌರ್ಜನ್ಯದ, ಸಾಮೂಹಿಕ ಕ್ರೌರ್ಯದ ಚಿತ್ರಗಳಿಂದ ಜಗತ್ತು ಆಘಾತಕ್ಕೊಳಗಾದ ಹೊತ್ತಲ್ಲಿ ಇಂಥ ರಾಜಕೀಯ ನಡೆಯಿತು.

ಮಣಿಪುರದ ಕುಕಿ ಜನರು ಎದುರಿಸಿದ ಸುಮಾರು ಮೂರು ತಿಂಗಳ ಬಹುಸಂಖ್ಯಾಕ ಹಿಂಸಾಚಾರದ ವಿಚಾರವನ್ನು ಪೂರ್ತಿಯಾಗಿ ಮುಚ್ಚಿಹಾಕಲಾಯಿತು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯಕ್ಕೆ ಅದನ್ನು ತಂದು ನಿಲ್ಲಿಸಲಾಯಿತು. ಇಂತಹ ದೌರ್ಜನ್ಯ ಭಾರತದ ಎಲ್ಲಾ ರಾಜ್ಯಗಳಾದ್ಯಂತ ಮತ್ತು ಜಾಗತಿಕವಾಗಿ ಮಹಿಳೆಯರ ಪಾಲಿನ ದೈನಂದಿನ ವಾಸ್ತವವಾಗಿದೆ, ಹಲವು ಸಲ ಇದು ಅತ್ಯಂತ ಭಯಾನಕ ರೀತಿಯಲ್ಲಿರುತ್ತದೆ.

ಘಟನೆಯ ಸುಮಾರು ಮೂರು ತಿಂಗಳ ನಂತರ, ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿಸಿ ಮತ್ತು ಅವರನ್ನು ಮೆರವಣಿಗೆ ಮಾಡಿದ ಜನರ ಗುಂಪು ಲೈಂಗಿಕವಾಗಿ ದೌರ್ಜನ್ಯ ಎಸಗಿರುವ ವೀಡಿಯೊ ಬಯಲಿಗೆ ಬಂದಿದೆ. ಘಟನೆಯಲ್ಲಿ ಕ್ರೌರ್ಯಕ್ಕೆ ತುತ್ತಾದ ಮೂವರೂ ಮಹಿಳೆಯರು ಪಾರಾಗಿ ಉಳಿದಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ. ಈ ವೀಡಿಯೊ ಜನರನ್ನು ಗಾಬರಿಗೊಳಿಸಿತು. ದೇಶಾದ್ಯಂತ ಇದರ ವಿರುದ್ಧ ಜನರ ಆಕ್ರೋಶದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಆದರೆ, ಇದೇ ಮಾತನ್ನು ದೇಶದ ಪ್ರಧಾನಿಯ ಬಗ್ಗೆಯೂ ಹೇಳಬಹುದೇ? ಅಥವಾ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಹೇಳಬಹುದೆ? ಅವರು, ಸಾಮಾನ್ಯ ಜನರಂತೆ ಈ ಘಟನೆಯ ಬಗ್ಗೆ ವೀಡಿಯೊ ಮೂಲಕವೇ ತಿಳಿದುಕೊಂಡರೆ? ಕುಕಿ ಸಮುದಾಯದವರ ಮೇಲೆ ನಡೆದ ಹಿಂಸಾಚಾರ ತಿಳಿದಿರಲೇ ಇಲ್ಲ ಎಂದು ನಾವು ಭಾವಿಸಬೇಕೆ?

ಒಂದು ವೇಳೆ ಅದೇ ಹೌದಾಗಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಉದ್ದೇಶವೇನು ಎಂದು ಪ್ರಶ್ನಿಸಬೇಕು. ಮಣಿಪುರದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ ದೂರುಗಳ ಬಗ್ಗೆ ಈ ಅಧಿಕಾರಸ್ಥರು ಚೆನ್ನಾಗಿ ತಿಳಿದಿದ್ದರು ಎಂಬುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಕುಕಿ ಸಮುದಾಯದ ವಿರುದ್ಧ ಬಹುಸಂಖ್ಯಾಕ ಹಿಂಸಾಚಾರವನ್ನು ಸಕ್ರಿಯವಾಗಿ ಪ್ರಚೋದಿಸಿದರು, ಹಿಂಸಾತ್ಮಕ ಮೈತೈ ಗುಂಪುಗಳಿಂದ ಅವರಿಗೆ ಬೆಂಬಲವೂ ವ್ಯಕ್ತವಾಯಿತು. ಇದು ಎಲ್ಲರಿಗೂ ತಿಳಿದಿರುವ ಸತ್ಯ. ಹಿಂಸಾಚಾರಕ್ಕೆ ಸರಕಾರವೇ ಅವಕಾಶ ನೀಡಿದ್ದನ್ನು ಇದು ಸೂಚಿಸುತ್ತದೆ.

ತಮ್ಮ ಭಾಷಣದ ಸಮಯದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸುವ ಮೊದಲು ಮೋದಿ ಮುಂಗಾರಿನ ಬಗ್ಗೆ ಮಾತನಾಡುತ್ತಾರೆ. ಡಿಜಿಟಲ್ ಇಂಡಿಯಾದೊಂದಿಗಿನ ಯುವಕರ ಸಂಪರ್ಕದ ಬಗ್ಗೆ ಬಹಳ ಸಂಭ್ರಮದಿಂದ ಹೇಳುತ್ತಾರೆ. ದೇಶವನ್ನೇ ತಲ್ಲಣಗೊಳಿಸಿರುವ ಘೋರ ಸನ್ನಿವೇಶ ಸಂಪೂರ್ಣವಾಗಿ ಕಡೆಗಣಿತವಾಗಿರು ವುದರ ಬಗ್ಗೆ ಅಷ್ಟೇ ಉದಾಸೀನತೆಯನ್ನು ತೋರಿಸುತ್ತಾರೆ. ಮೋದಿ ಹೇಳಿಕೆ ಮಣಿಪುರದ ಸಂತ್ರಸ್ತರ ವಿಚಾರದಲ್ಲಿ ಸರಕಾರ ಎಷ್ಟು ಸಂವೇದನಾರಹಿತವಾಗಿದೆ ಎಂಬುದನ್ನೇ ಬಹಿರಂಗಪಡಿಸಿತು ಮತ್ತು ಅವರನ್ನು ಬೆಂಬಲಿಸುವ ಮಂದಿಯ ಭಾವನೆಯನ್ನೂ ಅದೇ ಮಟ್ಟಕ್ಕೆ ಇಳಿಸಿತು.

ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳು ಹಿಂಸಾಚಾರದ ರೂಪ ಗಳಾಗಿದ್ದರೂ, ಅವರು ಬುಡಕಟ್ಟಿನವರೆಂಬ ಕಾರಣದಿಂದಾಗಿ ಇಡೀ ಸಮುದಾಯದ ವಿರುದ್ಧ ನಡೆಸಲಾದ ಹಿಂಸಾಚಾರ ವಿಭಿನ್ನವಾದ, ಹೆಚ್ಚು ತೀವ್ರವಾದ ಬಗೆಯದ್ದಾಗಿದೆ. ಮಣಿಪುರದಲ್ಲಿ ದೌರ್ಜನ್ಯಕ್ಕೊಳ ಗಾದ ಮಹಿಳೆಯರು ಕುಕಿ ಸಮುದಾಯದವರು. ದಾಳಿಕೋರರು ಮೈತೈ ಸಮುದಾಯಕ್ಕೆ ಸೇರಿದವರು. ಲೈಂಗಿಕ ಆಕ್ರಮಣ ರಾಜ್ಯ ಸರಕಾರದ ಮೌನ ಬೆಂಬಲದೊಂದಿಗೆ ಮೈತೈ ಗುಂಪುಗಳು ಪ್ರಚೋದಿಸಿದ ಬಹುಸಂಖ್ಯಾಕ ಹಿಂಸಾಚಾರದ ಭಾಗವಾಗಿದೆ.

ಮೈತೈ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಕುರಿತ ಸುಳ್ಳು ಸುದ್ದಿ ಈ ಕುಕಿ ಮಹಿಳೆಯರ ಮೇಲೆ ದಾಳಿ ಮಾಡುವ ಮೂಲಕ ಸೇಡು ತೀರಿಸಿಕೊಳ್ಳಲು ಮೈತೈ ಜನರನ್ನು ಪ್ರಚೋದಿಸಿತು ಎಂದು ಹೇಳುವುದು ಕೂಡ ಸರಿಯಲ್ಲ. ಕುಕಿ ಮಹಿಳೆ ಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕುವ ಮತ್ತು ಸಮರ್ಥಿಸುವ ಉದ್ದೇಶದಿಂದಲೇ ಇಂಥ ಸುಳ್ಳು ಸುದ್ದಿಗಳ ಆಶ್ರಯ ಪಡೆಯಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹರಡಿದವರು ಮತ್ತು ಕುಕಿ ಮಹಿಳೆಯರ ಮೇಲೆ ದಾಳಿ ಮಾಡಿದವರು ಇಬ್ಬರೂ ಒಂದೇ. ಅವು ಹಿಂಸಾತ್ಮಕ ಮೈತೈ ಗುಂಪುಗಳು. ಕುಕಿ ಸಮುದಾಯದ ವಿರುದ್ಧ ಹಿಂಸಾಚಾರದಲ್ಲಿ ಪಾಲ್ಗೊಳ್ಳಲು ತಮ್ಮ ಸಮುದಾಯದ ಜನಸಾಮಾನ್ಯರನ್ನೂ ಪ್ರಚೋದಿಸುತ್ತಿರುವ ಗುಂಪುಗಳು ಅವು.

ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಹಿಂಸಾಚಾರ ನಡೆಸಿದ್ದು ಮೈತೈ ಗುಂಪು ಮಾತ್ರವಲ್ಲ, ರಾಜ್ಯ ಪೊಲೀಸರೂ ಮಹಿಳೆಯರನ್ನು ಆ ಗುಂಪಿಗೆ ಒಪ್ಪಿಸುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಪ್ರಧಾನಿ ಅವರು ಈ ವಿಚಾರವಾಗಿ ಮಾತನಾಡುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು. ಅವರ ರಾಜಕೀಯದ ರೀತಿ ಇದಕ್ಕೆ ಕಾರಣವಾಗಿದೆ. ಈಗ ಬಿರೇನ್ ಸಿಂಗ್ ಏನಾಗಿದ್ದಾರೊ ಅದೇ ಸ್ಥಾನದಲ್ಲಿ ಎರಡು ದಶಕಗಳ ಹಿಂದೆ ಗುಜರಾತಿನಲ್ಲಿ ಮುಸ್ಲಿಮರ ವಿರುದ್ಧ ಹತ್ಯಾಕಾಂಡ ನಡೆದ ಹೊತ್ತಿನಲ್ಲಿ ಮೋದಿ ಇದ್ದರು.

ಮೋದಿ ನಿರಾಕರಿಸುವುದರಲ್ಲಿ ಪಳಗಿದವರು. ಆದರೆ ಅದು ಅತ್ಯಂತ ಆತಂಕಕಾರಿ, ಈ ಮೂಲಕ ಅವರು ಹಿಂಸಾತ್ಮಕ ಗುಂಪನ್ನು ಸಜ್ಜಾಗಿಸುವ ಮತ್ತು ಪ್ರಚೋದಿಸುವ ಕೆಲಸವನ್ನೇ ಮಾಡುತ್ತಿದ್ದಾರೆ. ನ್ಯಾಯ ಕೇಳುವವರ ಮೇಲೆ ದಾಳಿ ನಡೆಯುತ್ತದೆ. ಅಧಿಕಾರದಲ್ಲಿ ಅವರ ಮುಂದು ವರಿಕೆ, ಜನರನ್ನು ನಿಜವಾದ ಮನುಷ್ಯರ ನ್ನಾಗಿಸುವ ಎಲ್ಲದರ ಸಾವು ಎಂದೇ ಅರ್ಥ.

(ಕೃಪೆ: thewire)

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಅಪೂರ್ವಾನಂದ್

contributor

Similar News