ಫೆಲಸ್ತೀನ್ ಪರ ಪ್ರತಿಭಟನಾಕಾರರ ವಿರುದ್ಧ ದೇಶಾದ್ಯಂತ ಪ್ರಕರಣಗಳು

ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದೆ ಮತ್ತು ಇಸ್ರೇಲ್-ಫೆಲಸ್ತೀನ್ ಸಂಘರ್ಷದ ಬಗ್ಗೆ ಆಯಾ ರಾಜಕೀಯ ಪಕ್ಷದ ನಿಲುವು ಏನೆಂಬುದರ ಹೊರತಾಗಿಯೂ, ಅನೇಕ ರಾಜ್ಯಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಕ್ರಿಮಿನಲ್ ಕ್ರಮವನ್ನು ಎದುರಿಸುತ್ತಿದ್ದಾರೆ.

Update: 2023-10-29 09:20 GMT

Photo: twitter.com/aimim_national

ಇಸ್ರೇಲ್-ಫೆಲಸ್ತೀನ್ ಯುದ್ಧ ನಡೆದಿರುವ ಹೊತ್ತಿನಲ್ಲಿ ಭಾರತದ ಅನೇಕ ದೊಡ್ಡ ಮತ್ತು ಸಣ್ಣ ನಗರಗಳಲ್ಲಿ ಕಳೆದೆರಡು ವಾರಗಳಿಂದ ಅಸಂಖ್ಯಾತ ಪ್ರತಿಭಟನೆಗಳು ನಡೆಯುತ್ತಿವೆ. ಗಾಝಾ ಪಟ್ಟಿಯ ಮೇಲಿನ ಇಸ್ರೇಲ್‌ನ ಸತತ ದಾಳಿಯನ್ನು ಖಂಡಿಸಿ ನಡೆಯುತ್ತಿರುವ ಈ ಪ್ರತಿಭಟನೆಗಳು ಬಹುಮಟ್ಟಿಗೆ ಶಾಂತಿಯುತ. ಹಾಗಿದ್ದರೂ, ಸರಕಾರದ ಕೆಂಗಣ್ಣಿಗೆ ಪ್ರತಿಭಟನಾಕಾರರು ಗುರಿಯಾಗುವುದು ತಪ್ಪಲಿಲ್ಲ.

ಯಾವ ಪಕ್ಷದ ಸರಕಾರ ಅಧಿಕಾರದಲ್ಲಿದೆ ಮತ್ತು ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಬಗ್ಗೆ ಆಯಾ ರಾಜಕೀಯ ಪಕ್ಷದ ನಿಲುವು ಏನೆಂಬುದರ ಹೊರತಾಗಿಯೂ, ಅನೇಕ ರಾಜ್ಯಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪ, ಕಾನೂನುಬಾಹಿರ ಸಭೆಯಂಥ ಕೃತ್ಯಗಳಿಗಾಗಿ ಕೈಗೊಳ್ಳಲಾಗುವ ಕ್ರಿಮಿನಲ್ ಕ್ರಮವನ್ನು ಎದುರಿಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಎಲ್ಲರೂ ಹೊಂದಿದ್ದಾರೆ. ಹಾಗಿದ್ದೂ, ಇಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ಅಂಥ ಕೆಲವು ನಿದರ್ಶನಗಳನ್ನು ಇಲ್ಲಿ ನೋಡಬಹುದು.

ಇಸ್ರೇಲ್-ಗಾಝಾ ಯುದ್ಧಕ್ಕೆ ಮೊದಲ ಪ್ರತಿಕ್ರಿಯೆಗಳಲ್ಲಿ ಒಂದಾಗಿ, ಅಲಿಘಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಹಲವಾರು ವಿದ್ಯಾರ್ಥಿಗಳು ಅಕ್ಟೋಬರ್ 9ರಂದು ರ್ಯಾಲಿಯನ್ನು ನಡೆಸಿದರು. ಫೆಲೆಸ್ತೀನಿಯರ ಪರ ನಿಲ್ಲುವ ನಿಲುವಿನ ಅಭಿವ್ಯಕ್ತಿಯಾಗಿ ಆಯೋಜಿಸಲಾದ ಈ ಶಾಂತಿಯುತ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಯಿತು. ಪೊಲೀಸರು ಅವರ ಮೇಲೆ ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಘೋಷಿಸಲಾದ ಆದೇಶಕ್ಕೆ ಅಸಹಕಾರ ಮತ್ತು ಸಾರ್ವಜನಿಕ ಕಿಡಿಗೇಡಿತನವನ್ನು ಪ್ರಚೋದಿಸುವ ಹೇಳಿಕೆಗಳು ಮೊದಲಾದ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಲಿಘಡ ಮುಸ್ಲಿಮ್ ವಿವಿ ಪ್ರತಿಭಟನೆಯ ನಂತರ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್, ಫೆಲೆಸ್ತೀನ್‌ಗೆ ಬೆಂಬಲ ನೀಡುವ ನಡೆಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮುಸ್ಲಿಮ್ ಧರ್ಮಗುರುಗಳೊಂದಿಗೆ ಮಾತನಾಡಲು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾವೋದ್ರೇಕವನ್ನು ಪ್ರಚೋದಿಸುವ ಯಾವುದೇ ಪ್ರಯತ್ನವನ್ನು ಅಥವಾ ಧಾರ್ಮಿಕ ಸ್ಥಳಗಳು ಅಂಥದ್ದಕ್ಕೆ ಕರೆ ಕೊಡುವುದರ ವಿರುದ್ಧ ಕ್ರಮದ ಎಚ್ಚರಿಕೆ ನೀಡಲಾಯಿತು.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ಸಾಮಾಜಿಕ ಮಾಧ್ಯಮದಲ್ಲಿ ಫೆಲೆಸ್ತೀನ್ ಪರ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಅಮಾನತುಗೊಳಿಸಲಾಯಿತು. ಅಷ್ಟೇ ಅಲ್ಲ, ಕಾನ್‌ಸ್ಟೇಬಲ್ ಮತ್ತವರ ರಾಜಕೀಯ ನಿಲುವು ಕುರಿತು ವಿಚಾರಣೆ ನಡೆಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಯಿತು.

ಕಾನ್ಪುರದಲ್ಲಿಯೂ ಸಾಮಾಜಿಕ ಮಾಧ್ಯಮದಲ್ಲಿ ಫೆಲೆಸ್ತೀನ್ ಅನ್ನು ಬೆಂಬಲಿಸುವ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಯುವ ಮುಸ್ಲಿಮ್ ಧರ್ಮಗುರುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಧರ್ಮಗುರುವನ್ನು ಬಂಧಿಸಲಾಯಿತು ಮತ್ತು ಇನ್ನೊಬ್ಬರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದರು.

ಗಾಝಾದ ಮೇಲೆ ಇಸ್ರೇಲ್‌ನ ಆಕ್ರಮಣದ ವಿರುದ್ಧ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಕೂಡ ಪೊಲೀಸರು ಕ್ರಮ ಜುರಗಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನೂ ಬಳಸಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

ಯುದ್ಧ ಶುರುವಾದ ಬಳಿಕ ಕಳೆದೆರಡು ಶುಕ್ರವಾರಗಳಂದು ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನೆಯನ್ನು ತಡೆಯಲಾಗಿದೆ. ನಾಲ್ಕು ವರ್ಷಗಳ ಗೃಹಬಂಧನದ ನಂತರ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸರ್ವಪಕ್ಷಗಳ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಅಕ್ಟೋಬರ್ 15ರಂದು ಮತ್ತೊಮ್ಮೆ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಭಟನೆಗಳ ವಿರುದ್ಧದ ಪ್ರತಿಕ್ರಿಯೆ ಆಶ್ಚರ್ಯಕರವೇನಲ್ಲ. ಆದರೆ ಕಾಂಗ್ರೆಸ್ ಸರಕಾರಗಳಿರುವ ರಾಜ್ಯಗಳಲ್ಲಿಯೂ ಪೊಲೀಸರು ಫೆಲೆಸ್ತೀನ್ ಪರ ಪ್ರತಿಭಟನಾಕಾರರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಮಾತ್ರ ಅಚ್ಚರಿಯ ವಿಚಾರವಾಗಿದೆ.

ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಕಾಂಗ್ರೆಸ್ ಖಂಡಿಸಿತು. ಆದರೆ ಫೆಲೆಸ್ತೀನ್ ಜನರ ಹಕ್ಕುಗಳಿಗಾಗಿ ತನ್ನ ದೀರ್ಘಕಾಲದ ಬೆಂಬಲವನ್ನು ಅದು ಪುನರುಚ್ಚರಿಸಿತು. ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಫೆಲೆಸ್ತೀನಿಯರ ಹೋರಾಟವನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿತು. ರಾಹುಲ್ ಗಾಂಧಿ ಮತ್ತು ಜೈರಾಮ್ ರಮೇಶ್ ಅವರಂಥ ಕಾಂಗ್ರೆಸ್ ನಾಯಕರು ಫೆಲೆಸ್ತೀನ್ ಅನ್ನು ಬೆಂಬಲಿಸಿದರು.

ಆದರೆ ಕರ್ನಾಟಕದಲ್ಲಿ ಪೊಲೀಸರ ಕ್ರಮಗಳು ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿದ್ದವು.

ಬೆಂಗಳೂರಿನಲ್ಲಿ ಫೆಲೆಸ್ತೀನ್‌ಗೆ ಬೆಂಬಲವಾಗಿ ಒಗ್ಗಟ್ಟಿನ ಸಮಾವೇಶ ನಡೆಸಿದ್ದಕ್ಕಾಗಿ ಬಹುತ್ವ ಕರ್ನಾಟಕ ಹೆಸರಿನ ನಾಗರಿಕರ ಗುಂಪಿನ ಸದಸ್ಯರು ಮತ್ತಿತರ 11 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದ್ವೇಷ ಉತ್ತೇಜನ ಆರೋಪದಲ್ಲಿ ಪ್ರಕರಣ ದಾಖಲಿಸಿಲ್ಲವಾದರೂ, ಸಾರ್ವಜನಿಕ ಉಪದ್ರವ, ಅನುಮತಿಯಿಲ್ಲದೆ ಸಭೆ ಸೇರುವುದು ಮೊದಲಾದ ಆರೋಪಗಳನ್ನು ಹೊರಿಸಿದ್ದಾರೆ.

ಇನ್ನು, ಫೆಲೆಸ್ತೀನ್ ಪರ ಪ್ರತಿಭಟನೆಗಳನ್ನು ಯೋಜಿಸುವ ಬಹುತೇಕ ಎಲ್ಲಾ ಗುಂಪುಗಳಿಗೆ ಅನುಮತಿಗಳನ್ನು ದೇಶಾದ್ಯಂತ ನಿರಾಕರಿಸಲಾಗಿದೆ.

ಮಹಾರಾಷ್ಟ್ರದ ಮುಂಬೈ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದು ಮಾತ್ರವಲ್ಲ, ಅವರನ್ನು ಥಳಿಸುವ ಮೂಲಕವೂ ಒಂದು ಹೆಜ್ಜೆ ಮುಂದಿಟ್ಟರು. ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾದ (ಆರ್‌ಡಬ್ಲ್ಯುಪಿಐ) ಇಬ್ಬರು ಯುವ ಕಾರ್ಯಕರ್ತರನ್ನು ಬಂಧಿಸಲಾಯಿತು. ಮುಂಬೈ ಪೊಲೀಸರ ಪ್ರಕಾರ, ಆರ್‌ಡಬ್ಲ್ಯುಪಿಐ ಇಸ್ರೇಲ್-ಫೆಲೆಸ್ತೀನ್ ವಿಚಾರವಾಗಿ ಮಾಟುಂಗಾ-ದಾದರ್ ಪ್ರದೇಶದಲ್ಲಿ ಪ್ರತಿಭಟನೆಯನ್ನು ಆಯೋಜಿಸಲು ಯೋಜಿಸಿತ್ತು. ಪೊಲೀಸರು ಅನುಮತಿ ನಿರಾಕರಿಸಿದರು. ಇದನ್ನು ಮೀರಿ ಆ ಇಬ್ಬರು ಯುವಕರು ಇಸ್ರೇಲ್ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದಾಗ ಇತರ ಯುವಕರು ಜೊತೆಗೂಡಿದರು ಎಂಬುದು ಪೊಲೀಸರ ಆರೋಪ. ಅವರಿಬ್ಬರಿಗೂ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆಯಾದರೂ, ಜೈಲಿನಿಂದ ಬಿಡುಗಡೆಯಾಗಿಲ್ಲ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡುವುದರೊಂದಿಗೆ ಶುರುವಾದ ಸಂಘರ್ಷದಲ್ಲಿ ಈವರೆಗೆ 1,400 ಇಸ್ರೇಲಿಗಳು ಮತ್ತು 7,000ಕ್ಕೂ ಹೆಚ್ಚು ಫೆಲೆಸ್ತೀನಿಯರು ಬಲಿಯಾಗಿದ್ದಾರೆ. ಗಾಝಾ ಪಟ್ಟಿಯಲ್ಲಿ ಸಾವಿಗೀಡಾದ ಫೆಲೆಸ್ತೀನಿಯರಲ್ಲಿ ಶೇ.40ರಷ್ಟು ಮಕ್ಕಳು.

(ಕೃಪೆ:theಯಾವ ಪಕ್ಷದ ಸರಕಾರ ಅಧಿಕಾರದಲ್ಲಿದೆ ಮತ್ತು ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಬಗ್ಗೆ ಆಯಾ ರಾಜಕೀಯ ಪಕ್ಷದ ನಿಲುವು ಏನೆಂಬುದರ ಹೊರತಾಗಿಯೂ, ಅನೇಕ ರಾಜ್ಯಗಳಲ್ಲಿ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಕ್ರಿಮಿನಲ್ ಕ್ರಮವನ್ನು ಎದುರಿಸುತ್ತಿದ್ದಾರೆ.

wire.in)

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸುಕನ್ಯಾ ಶಾಂತಾ

contributor

Similar News