ದಕ್ಷಿಣ ರಾಜ್ಯಗಳಲ್ಲಿ ಕಾಂಗ್ರೆಸ್-ಬಿಜೆಪಿ ಮುಂದಿರುವ ಸವಾಲುಗಳು

ವಿಧಾನಸಭೆ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆ ನಡುವಿನ ಸಮೀಕರಣಗಳು ಹಾಗೂ ನಿರ್ಣಾಯಕ ಅಂಶಗಳು ಬೇರೆ ಎನ್ನುವುದು ಸಾಮಾನ್ಯವಾಗಿ ಹೌದು. ಆದರೆ, ಮೊನ್ನೆ ನಡೆದ ಪಂಚರಾಜ್ಯ ಫಲಿತಾಂಶ 2024ರ ಚುನಾವಣೆ ಮೇಲೆ ತನ್ನದೇ ಆದ ಪರಿಣಾಮ ಬೀರಲಿದೆ ಎಂಬುದು ಸ್ಪಷ್ಟ. ಹಿಂದಿ ಭಾಷಿಕ ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಎದುರು ಈಗ ಮೈತ್ರಿಕೂಟದ ಭಾಗವಾಗಿ ಸೀಟು ಹಂಚಿಕೆ ಹೊತ್ತಲ್ಲಿ ಎದುರಾಗುವ ಸವಾಲುಗಳೇನು? ತನ್ನದೇ ಗಟ್ಟಿ ದಾರಿಯನ್ನು ಖಚಿತಪಡಿಸಿಕೊಂಡಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳಲ್ಲಿ ಇರಬಹುದಾದ ತೊಡಕುಗಳೇನು?

Update: 2023-12-31 05:26 GMT

Photo: PTI 

ಸರಣಿ- 4

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ, ಅದರ ಮೇಲೆ ಪಂಚರಾಜ್ಯ ಚುನಾವಣಾ ಫಲಿತಾಂಶದ ಪರಿಣಾಮಗಳನ್ನು ತಳ್ಳಿಹಾಕುವಂತಿಲ್ಲ. ಮುಖ್ಯವಾಗಿ ಈ ಫಲಿತಾಂಶ ಉತ್ತರ ಮತ್ತು ದಕ್ಷಿಣ ಎಂಬ ವಿಭಜನೆಯನ್ನು ಕೂಡ ಈ ಮೊದಲಿಗಿಂತಲೂ ಸ್ಪಷ್ಟವಾಗಿಸಿದೆ ಎಂಬಂತೆ ಕಾಣಿಸುತ್ತಿದ್ದರೂ, ಲೋಕಸಭೆ ಚುನಾವಣೆಯ ವಾಸ್ತವ ಇದನ್ನು ಮೀರಿದ್ದಾಗಿರಲೂಬಹುದು.

ಮಿಜೋರಾಂ ಹೊರತುಪಡಿಸಿ, ಮುಖ್ಯವಾಗಿ ನಾಲ್ಕು ರಾಜ್ಯಗಳ ವಿಚಾರದಲ್ಲಿ ಒಂದರಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಕಾಂಗ್ರೆಸ್ ತನ್ನ ಬಳಿಯಿದ್ದ ಎರಡು ರಾಜ್ಯಗಳನ್ನು ಬಿಜೆಪಿಯೆದುರು ಕಳೆದುಕೊಂಡಿದೆ. ಈ ಹಿಂದಿ ಭಾಷಿಕ ಮೂರೂ ರಾಜ್ಯಗಳು ಬಿಜೆಪಿ ಪಾಲಾಗಿರುವಾಗ, ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿರುವುದು ದಕ್ಷಿಣದ ತೆಲಂಗಾಣದಲ್ಲಿ ಮಾತ್ರ. ದಕ್ಷಿಣದಲ್ಲಿ ಗೆಲುವು ತಂದ ಅದರ ಗ್ಯಾರಂಟಿಗಳು ಉತ್ತರದಲ್ಲಿ ಮಂಕಾದವು ಎಂಬುದು ಗಮನಿಸಬೇಕಾದ ಸಂಗತಿ, ಇದಕ್ಕೆ ಕಾರಣ, ಸ್ಪಷ್ಟವಾಗಿ ಮೋದಿ ಮತ್ತು ಹಿಂದುತ್ವದ ಪ್ರಭಾವ.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಸೋತ ಕೆಲವೇ ತಿಂಗಳುಗಳಲ್ಲಿ ಬಿಜೆಪಿಗೆ ಉತ್ತರದ ಈ ಮೂರು ರಾಜ್ಯಗಳಲ್ಲಿ ದೊಡ್ಡ ಗೆಲುವು ಸಿಕ್ಕಿದೆ ಮತ್ತು ಮೋದಿ ಮೂರನೇ ಅವಧಿಗೆ ಗ್ಯಾರಂಟಿ ಎಂದು ಬಿಜೆಪಿ ಈ ಗೆಲುವನ್ನು ಬಣ್ಣಿಸುತ್ತಿದೆ, ಬಿಂಬಿಸುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್ ಕಂಡ ಸೋಲು ಇಂಡಿಯಾ ಮೈತ್ರಿಕೂಟದಲ್ಲಿ ಅದರ ಸ್ಥಾನಮಾನವನ್ನು ದುರ್ಬಲಗೊಳಿಸಿದೆ. ಉತ್ತರದಲ್ಲಿ ಒಂದು ರಾಜ್ಯ ಮತ್ತು ದಕ್ಷಿಣದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರವೇ ಈಗ ಕಾಂಗ್ರೆಸ್‌ನ ಸ್ವಂತ ಬಲದ ಸರಕಾರವಿರುವುದು.

ಮೂರೂ ರಾಜ್ಯಗಳ ಸೋಲಿನ ಹಿನ್ನೆಲೆಯಲ್ಲಿ ಅದು ಈಗ ಲೋಕಸಭೆ ಚುನಾವಣೆಗೆ ತನ್ನ ಸ್ಟ್ರಾಟರ್ಜಿ ರೂಪಿಸಿಕೊಳ್ಳಬೇಕಾಗಿದೆ. ಇದರ ಭಾಗವಾಗಿ ಅದು ಮೈತ್ರಿಕೂಟದ ಭಾಗವಾಗಿರುವ ಪಕ್ಷಗಳು ಸೀಟು ಹಂಚಿಕೆ ವೇಳೆ ಮಾಡಬಹುದಾದ ಚೌಕಾಸಿಗೆ ಮಣಿಯಬೇಕಾಗಿ ಬರಬಹುದು.

ಮಧ್ಯಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಎಸ್‌ಪಿ ಜೊತೆ ಸೀಟು ಹಂಚಿಕೆಗೆ ಕಾಂಗ್ರೆಸ್ ಒಪ್ಪದೇ ಇದ್ದುದು ಎರಡೂ ಪಕ್ಷಗಳ ನಡುವಿನ ಅಸಮಾಧಾನಕ್ಕೆ ಕಾರಣವಾಯಿತು. ಅಂತಿಮವಾಗಿ ಎಸ್ಪಿ ಒಂದೇ ಒಂದು ಸೀಟು ಗೆಲ್ಲದಿದ್ದರೂ, ಹಲವೆಡೆ ಅದು ಕಾಂಗ್ರೆಸ್‌ಗೆ ಹಾನಿಯುಂಟು ಮಾಡಿತು.

ಇದೆಲ್ಲದರ ನಡುವೆಯೂ, ಎಸ್‌ಪಿಗೆ 5 ಸೀಟು ಬಿಟ್ಟುಕೊಟ್ಟಿದ್ದರೆ ಏನಾಗುತ್ತಿತ್ತು? ಹೇಗೂ ಈಗಲೂ ಕಳೆದುಕೊಂಡಿಲ್ಲವೆ? ಎಂಬ ಪ್ರಶ್ನೆಗಳನ್ನು ಮೈತ್ರಿಕೂಟದ ಪಕ್ಷಗಳೇ ಕೇಳಿವೆ. ಇಂಥ ವಿಚಾರವನ್ನು ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಗಂಭೀರವಾಗಿ ಪರಿಶೀಲಿಸಬೇಕಾಗಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದರ ಕುರಿತ ಇತಿಹಾಸವನ್ನು ಗಮನಿಸಿದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್ 2018ರ ವಿಧಾನಸಭೆ ಚುನಾವಣೆಯನ್ನು ಗೆದ್ದಿತ್ತು. ಆದರೆ ಆರೇ ತಿಂಗಳ ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಅಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು.

ಮಧ್ಯಪ್ರದೇಶದಲ್ಲಿ, ಕಾಂಗ್ರೆಸ್ 2018ರಲ್ಲಿ ಸರಕಾರ ರಚಿಸಿತ್ತು. ಆದರೆ 2019ರ ಲೋಕಸಭೆಯಲ್ಲಿ ಅಲ್ಲಿ ಅದು ಗೆದ್ದಿದ್ದು ಒಂದು ಸ್ಥಾನ ಮಾತ್ರ.

ಇನ್ನು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಲೋಕಸಭೆ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆದದ್ದು ಬಿಜೆಪಿ.

ಹಾಗೆಯೇ ಕಾಂಗ್ರೆಸ್ ವಾದ ಏನೆಂದರೆ, 2003ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಡಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಮೈತ್ರಿಕೂಟ ಗೆದ್ದಿತು.

2024ರಲ್ಲಿ ಬಿಜೆಪಿ ಗೆಲುವು ಖಚಿತವೇ? ಎಂದು ಕೇಳಿಕೊಂಡರೆ, ಅದು ಊಹಿಸುವಷ್ಟು ಸರಳವಾಗಿಲ್ಲ. ಬಿಜೆಪಿಗೆ ಪ್ರತಿಪಕ್ಷಗಳಿಂದ ಇರುವ ವಿರೋಧಕ್ಕಿಂತಲೂ ದೊಡ್ಡ ಬೆದರಿಕೆಯೆಂದರೆ ಪಕ್ಷದೊಳಗಿನ ಅಸಮಾಧಾನ ಎಂದು ಹೇಳಲಾಗುತ್ತಿದೆ.

ಆದರೆ ಲೋಕಸಭೆ ಚುನಾವಣೆಯಲ್ಲಿ ಮೋದಿ ವರ್ಚಸ್ಸಿನಿಂದ ಮತಗಳು ಬಿಜೆಪಿಗೆ ಬರಲಿವೆ, ಸ್ಥಳೀಯ ಸಮಸ್ಯೆಗಳು ಗೌಣವಾಗಲಿವೆ ಎಂಬ ಮಾತೂ ಇದೆ. ಇದರ ನಡುವೆ ಕಾಂಗ್ರೆಸ್ ನಿಜವಾಗಿಯೂ ಬಿಜೆಪಿಗೆ ಸವಾಲೊಡ್ಡುವ ಮಟ್ಟದಲ್ಲಿದೆಯೇ ಎಂಬ ಪ್ರಶ್ನೆಯೂ ಏಳುತ್ತದೆ.

ಇನ್ನು, 2024ರ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜಕೀಯ ಉಂಟು ಮಾಡಬಹುದಾದ ಪರಿಣಾಮಗಳೇನು?

ಕರ್ನಾಟಕದಲ್ಲಿ ಗೆದ್ದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವಾಗಲೇ ಉತ್ತರದ ಮೂರು ರಾಜ್ಯಗಳಲ್ಲಿ ಸೋತಿದೆ. ಉತ್ತರದ ಸೋಲುಗಳು ದಕ್ಷಿಣದಲ್ಲಿಯೂ ಕಾಂಗ್ರೆಸ್‌ಗೆ ಹಾನಿಯುಂಟು ಮಾಡಬಹುದೇ ಎಂಬ ನಿಟ್ಟಿನಲ್ಲಿ ಅದು ಈಗ ಚಿಂತಿಸುವ ಅವಶ್ಯಕತೆಯಿದೆ.

ಈ ಸೋಲಿನ ನಂತರ, ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಸೀಟು ಹಂಚಿಕೆಯಲ್ಲಿ ತನ್ನದೇ ಆದ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚು. ಚುನಾವಣೋತ್ತರ ರಾಜಕೀಯ ಉದ್ದೇಶಕ್ಕಾಗಿ ಹೆಚ್ಚು ಸ್ಥಾನಗಳನ್ನು ಸ್ವಂತ ಬಲದ ಮೇಲೆ ಗೆಲ್ಲಬೇಕೆಂದು ಡಿಎಂಕೆ ಚುನಾವಣಾ ನಿಪುಣರು ಪ್ರತಿಪಾದಿಸುತ್ತಿದ್ದು, ಅದು ಏನೇ ಹೇಳಿದರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕಾಂಗ್ರೆಸ್‌ಗೆ ಎದುರಾಗಬಹುದು.

2019ರಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ತಮಿಳುನಾಡಿನ 39 ಸ್ಥಾನಗಳಲ್ಲಿ 38 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ ತಾನು ಸ್ಪರ್ಧಿಸಿದ್ದ ಎಲ್ಲ 20 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಕಾಂಗ್ರೆಸ್ ತನಗೆ ಹಂಚಿಕೆಯಾದ ಒಂಭತ್ತು ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಪಡೆದಿತ್ತು.

ಕಾಂಗ್ರೆಸ್ 15 ಸ್ಥಾನಗಳನ್ನು ಕೇಳುವ ಇರಾದೆ ಹೊಂದಿದ್ದರೂ, ಡಿಎಂಕೆ ಅದನ್ನು ಒಪ್ಪಲು ತಯಾರಿಲ್ಲ ಮತ್ತು ಈಗ ಮೂರು ರಾಜ್ಯಗಳ ಸೋಲಿನ ನಂತರವಂತೂ ಕಾಂಗ್ರೆಸ್ ಎದುರು ಅಂಥ ಆಯ್ಕೆ ಸಾಧ್ಯತೆ ಕಡಿಮೆಯಾಗಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ತನ್ನ ರಾಷ್ಟ್ರೀಯ ಬಲದ ಆಧಾರದ ಮೇಲೆ ಡಿಎಂಕೆಯೊಂದಿಗೆ ಚೌಕಾಸಿ ಮಾಡಲು ಸಾಧ್ಯವಿಲ್ಲ.

ಕೇರಳದಲ್ಲಿ ಎಡಪಕ್ಷಗಳು ಸಾಧ್ಯವಾದಷ್ಟು ಲೋಕಸಭೆ ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸುವುದಕ್ಕೆ ಬದ್ಧವಾಗಿದೆ. 2019ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 20ರಲ್ಲಿ 19 ಸ್ಥಾನಗಳನ್ನು ಗೆದ್ದಿತ್ತು. ಅಂಥ ಫಲಿತಾಂಶ ಮತ್ತೆ ಬರದಂತೆ ತಡೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಯತ್ನಿಸಲಿದ್ದಾರೆ.

ಸಿಪಿಐ(ಎಂ)ಗೆ ನಿಜವಾದ ಅವಕಾಶವಿರುವುದು ಕೇರಳದಲ್ಲಿ ಮಾತ್ರ. ಯಾಕೆಂದರೆ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಕ್ರಮವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಬಿಜೆಪಿ ದೊಡ್ಡ ಸವಾಲಾಗಿವೆ.

ಇದೆಲ್ಲದರ ನಡುವೆಯೇ, ದಕ್ಷಿಣದಲ್ಲಿ ಬಿಜೆಪಿ ಯಶಸ್ಸು ಸಾಧ್ಯವೇ ಇಲ್ಲ ಎಂದು ಹೇಳಿಬಿಡುವಂತಿಲ್ಲ.

543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳು ದಕ್ಷಿಣದವಾಗಿವೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ 40, ಕರ್ನಾಟಕದಲ್ಲಿ 28, ಆಂಧ್ರಪ್ರದೇಶದಲ್ಲಿ 25, ಕೇರಳದಲ್ಲಿ 20, ತೆಲಂಗಾಣದಲ್ಲಿ 17 ಮತ್ತು ಲಕ್ಷದ್ವೀಪದಲ್ಲಿ ಒಂದು ಸಂಸದೀಯ ಸ್ಥಾನಗಳಿವೆ.

ಮೊನ್ನೆಯ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಮತಗಳನ್ನು ಶೇ.7 ರಿಂದ 14ಕ್ಕೆ ಹೆಚ್ಚಿಸಿಕೊಂಡಿದೆ.

ಕರ್ನಾಟಕದಲ್ಲಿ 2019ರಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಇನ್ನೊಂದರಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ಈ ವರ್ಷದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುವುದರೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಸಭೆಯಲ್ಲಿ ರಾಜ್ಯದ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕಾದ ಒತ್ತಡದಲ್ಲಿದ್ದಾರೆ.

ತೆಲಂಗಾಣದ ಯಶಸ್ಸಿನ ನಂತರ ಕಾಂಗ್ರೆಸ್ ಪಾಲಿಗೆ ಆಶಾದಾಯಕವಾಗಿರುವ ಒಂದು ರಾಜ್ಯ ಆಂಧ್ರಪ್ರದೇಶ. ಅಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆ ಒಟ್ಟಿಗೇ ನಡೆಯಲಿದೆ. ಆಂಧ್ರದಲ್ಲಿ ಬಿಜೆಪಿ ಐದು ಲೋಕಸಭೆ ಮತ್ತು 25 ವಿಧಾನಸಭಾ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಬಿಜೆಪಿ 10 ಲೋಕಸಭಾ ಕ್ಷೇತ್ರಗಳನ್ನು ಗುರುತಿಸಿದೆ. ಈ ಪಟ್ಟಿಯಲ್ಲಿ ವಿಶಾಖಪಟ್ಟಣಂ, ಅರಕು, ಕಾಕಿನಾಡ, ರಾಜಂಪೇಟೆ, ತಿರುಪತಿ, ನರಸ್‌ಪುರ, ಅನಕಾಪಲ್ಲಿ, ರಾಜಮಹೇಂದ್ರವರಂ, ಕರ್ನೂಲ್ ಮತ್ತು ಹಿಂದೂಪುರ ಸೇರಿವೆ. ವಿಶಾಖಪಟ್ಟಣಂ, ಅರಕು, ಕಾಕಿನಾಡ, ರಾಜಂಪೇಟೆ ಮತ್ತು ತಿರುಪತಿಯತ್ತ ಅದು ಹೆಚ್ಚು ಗಮನ ಕೊಡಲಿದೆ.

ಬಿಜೆಪಿ ಈ ಭಾಗಗಳಿಂದ ಈ ಹಿಂದೆ ಗೆದ್ದಿದೆ ಅಥವಾ ಮತ ಹಂಚಿಕೆಯನ್ನು ಹೊಂದಿದೆ. ಇದಲ್ಲದೆ, ಆರೆಸ್ಸೆಸ್‌ನ ವನವಾಸಿ ಕಲ್ಯಾಣ ಆಶ್ರಮ ಇಲ್ಲಿನ ಆದಿವಾಸಿಗಳ ನಡುವೆ ಸಕ್ರಿಯವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಸೀಟುಗಳನ್ನು ಗೆಲ್ಲುವುದು ದಕ್ಷಿಣ ಭಾರತದ ರಾಜಕೀಯದಲ್ಲಿ ಪ್ರಯಾಸಕರವಾಗಲಿದೆ ಎಂಬುದಂತೂ ನಿಜ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಹರೀಶ್ ಎಚ್.ಕೆ.

contributor

Similar News