ಚಂದ್ರಯಾನ! ಏನು ಯಾಕೆ?

Update: 2023-08-28 17:57 GMT

ಚಂದ್ರಯಾನದ ‘ವಿಕ್ರಮ ಲ್ಯಾಂಡರ್’ ಆಗಸ್ಟ್ ೨೩ರ ಸಂಜೆ ಮುಖ್ಯಕೋಶದಿಂದ ಬೇರ್ಪಟ್ಟು ಚಂದ್ರದ ಮೇಲೆ ಸಾವಕಾಶವಾಗಿ ಸುರಕ್ಷಿತವಾಗಿ ಇಳಿಯಿತು! ಇಳಿದಿರುವ ಸ್ಥಳ ಇದುವರೆಗೆ ಚಂದ್ರದ ಮೇಲೆ ಇಳಿದಿರುವ ಪ್ರಪಂಚದ ಎಲ್ಲಾ ಯಾನಗಳ ಪೈಕಿ ಚಂದ್ರದ ದಕ್ಷಿಣ ಧ್ರುವಕ್ಕೆ ಅತೀ ಹತ್ತಿರದ್ದು. ಟಿವಿ ಚಾನೆಲ್‌ಗಳೆಲ್ಲ ಈ ಸುದ್ದಿಯಲ್ಲೇ ಮೆರೆದವು. ಚಂದ್ರಯಾನವು ಹಲವು ತಿಂಗಳುಗಳಿಂದ ಅನೇಕರ ಕುತೂಹಲ ಕೆರಳಿಸಿರುವುದು ಸಹಜ. ಜುಲೈ ೧೪ರಂದು ನಡೆದ ಉಡ್ಡಯನದಿಂದ ಆರಂಭವಾಗಿ, ಮೊದಲು ಭೂಮಿಯ ಸುತ್ತ, ನಂತರ ವೇಗೋತ್ಕರ್ಷಗೊಂಡು ಚಂದ್ರದತ್ತ, ಆನಂತರ ಪುನಃ ವೇಗೋತ್ಕರ್ಷಗೊಂಡು ಕಕ್ಷೆ ಬದಲಾಯಿಸಿ ಚಂದ್ರಯಾನವು ಚಂದ್ರವನ್ನು ಪ್ರದಕ್ಷಿಸಲಾರಂಭಿಸಿತು. ನಿರ್ದಿಷ್ಟ ವೇಳೆಗೆ ಅಪೇಕ್ಷೆಯಂತೆಯೇ ಚಂದ್ರದ ಮೇಲೆ ಇಳಿಯ ಬೇಕಾದ ವಿಕ್ರಮ ಲ್ಯಾಂಡರ್ ಚಂದ್ರಯಾನದ ಮುಖ್ಯ ಕೋಶವಾದ ನೋದನ ಕೋಶದಿಂದ (propulsion module) ಬೇರ್ಪಟ್ಟದ್ದು ಸೇರಿ, ಮಾಧ್ಯಮಗಳಲ್ಲಿ ಅದರ ಹಂತ ಹಂತದ ಪ್ರಗತಿಯ ಬಗ್ಗೆ ವರದಿಗಳು ಪ್ರಕಟವಾಗುತ್ತಲೇ ಇದ್ದವು. ಆಗಸ್ಟ್ ೨೩ರಂದಂತೂ ವರದಿಗಳು ಭೋರ್ಗರೆಯುತ್ತಾ ಬಂದವು. ಇವೆಲ್ಲದರ ಮಧ್ಯೆ ಚಂದ್ರಯಾನದ ನಿಜವಾದ ಮಹತ್ವ ಏನು ಎಂಬುದನ್ನು ಪರಾಂಬರಿಸಿ ನೋಡಬೇಕಾಗಿದೆ.

ಚಂದ್ರ ನಮಗೆ ಅತಿ ಸಮೀಪವಿರುವ ಆಕಾಶ ಕಾಯ. ಭೂಮಿಯಿಂದ ಸುಮಾರು ೪,೦೦,೦೦೦ ಕಿ.ಮೀ.ಗಳಷ್ಟು ದೂರವಿದೆ. ಬೆಳಕು ಚಂದ್ರದಿಂದ ಭೂಮಿಗೆ ತಲುಪಲು ೧ ಸೆಕೆಂಡಿಗಿಂತ ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಳ್ಳುತ್ತದೆ. ಬರಿಗಣ್ಣಿಗೆ ನಿಖರವಾಗಿ ಗೋಚರಿಸಲ್ಪಡುವ ಆಕಾಶ ಕಾಯವಿದು. ಆದ್ದರಿಂದ ಚಂದ್ರ ತಲೆತಲಾಂತರಗಳಿಂದ ಅನೇಕ ಸಂಸ್ಕೃತಿಗಳಲ್ಲಿ ವೈವಿಧ್ಯಮಯ ದಂತಕಥೆಗಳನ್ನು ಹುಟ್ಟು ಹಾಕಿದೆ. ಕವಿಗಳನ್ನು ಪ್ರೇರೇಪಿಸಿದೆ. ಮನುಕುಲದ ಕುತೂಹಲ ಕೆರಳಿಸಿದೆ.

ಹದಿನೇಳನೇ ಶತಮಾನದಲ್ಲಿ ಗೆಲಿಲಿಯೋ ಗೆಲಿಲೇಯಿ ಮೊದಲಬಾರಿಗೆ ದೂರದರ್ಶಕವನ್ನು ಬಾನಿನತ್ತ ತಿರುಗಿಸಿದಾಗ ಲಭಿಸಿದ ದೃಶ್ಯಗಳು ನಮ್ಮ ಅರಿವಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ನಾಂದಿಯಾಯಿತು. ಚಂದ್ರ ಪರಿಪೂರ್ಣ ಗೋಲಾಕಾರ ಹೊಂದಿರುವುದೆಂಬ ಅರಿವನ್ನು ತಳ್ಳಿಹಾಕಲಾಯಿತು. ಚಂದ್ರ ಭೂಮಿಯಂತೆಯೇ ಏರು ತಗ್ಗುಗಳುಳ್ಳ, ಬೆಟ್ಟ ಗುಂಡಿ ಕಂದರಗಳುಳ್ಳ ಕಾಯವೆಂದು ಗೆಲಿಲಿಯೋ ಗೆಲಿಲೇಯಿ ದೂರದರ್ಶಕದ ಮೂಲಕ ತೋರಿಸಿಕೊಟ್ಟರು. ತಮ್ಮ ಈ ಹೊಸ ಅನ್ವೇಷಣೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪಂಡಿತರ ಲ್ಯಾಟಿನ್ ಭಾಷೆಯಲ್ಲಿ ಬರೆಯುವ ಬದಲು ಆಡುಭಾಷೆಯಾದ ಇಟಾಲಿಯನ್‌ನಲ್ಲಿ ಬರೆದರು. ದೂರದರ್ಶಕವನ್ನು ಮಾರುಕಟ್ಟೆಗೆ ಕೊಂಡೊಯ್ದು ಅದರ ಮೂಲಕ ಕಂಡುಬಂದ ದೃಶ್ಯಗಳನ್ನು ನೆರೆದಿದ್ದವರೊಡನೆ ಹಂಚಿದರು. ಮುಂದೆ ಹೋಗುತ್ತಾ, ಚಂದ್ರದ ಹಂತಗಳು ಯಾಕೆ, ಶುಕ್ರದ ಹಂತಗಳು ಯಾಕೆ, ಸೂರ್ಯ ಹಾಗೂ ಚಂದ್ರ ಗ್ರಹಣಗಳು ಯಾಕೆ ನಡೆಯುತ್ತವೆ, ಸಂಪೂರ್ಣ ಚಂದ್ರಗ್ರಹಣ ಆದಾಗ ಅದು ತಾಮ್ರ ಬಣ್ಣವನ್ನು ಯಾಕೆ ತಾಳುತ್ತದೆ, ಇತ್ಯಾದಿ ಸಾಮಾನ್ಯ ತಿಳುವಳಿಕೆಗೆ ಸೇರಿದವು.

೧೯೫೮ ಇಸವಿಯು ಅಂತರಿಕ್ಷ ನೌಕೆಗಳ ಉಡ್ಡಯನದೊಂದಿಗೆ ವೈಜ್ಞಾನಿಕ ತಂತ್ರಜ್ಞಾನಿಕ ಸಾಧನೆಗಳು ಇನ್ನೊಂದು ಮಹತ್ತರ ಹೆಜ್ಜೆಯನ್ನು ಕಂಡವು. ಮೊತ್ತ ಮೊದಲು ಚಿಕ್ಕದೊಂದು ಸ್ಪುಟ್ನಿಕ್ ನೌಕೆ, ಆನಂತರ ಯೂರಿ ಗಗರಿನ್, ವಾಲೆಂತೀನ ತೆರೆಶ್ಕವಾ ಸೇರಿ ಹಲವಾರು ಅಂತರಿಕ್ಷಯಾನಿಗಳು. ೧೯೬೬ರಲ್ಲಿ ಚಂದ್ರದ ಮೇಲೆ ವೈಜ್ಞಾನಿಕ ಉಪಕರಣಗಳೊಂದಿಗೆ ಲೂನಾ-೯ ನೌಕೆಯ ಸುರಕ್ಷಿತ ಇಳಿಯುವಿಕೆಯನ್ನು ಸೋವಿಯತ್ ಒಕ್ಕೂಟ ನಡೆಸಿತು. ಚಂದ್ರದ ನಿಖರ ಸಂಶೋಧನೆ ಪ್ರಾರಂಭವಾಯಿತು. ಚಂದ್ರಕ್ಕೆ ಯಾನಿಗಳನ್ನು ಅಪೊಲೊ ಯಾನಗಳು ಕೊಂಡೊಯ್ದಾಗ ಚಂದ್ರದ ನೆಲದ ಕಲ್ಲು ಧೂಳುಗಳ ಸ್ಯಾಂಪಲ್‌ಗಳನ್ನು ಭೂಮಿಗೆ ತಂದು ಇಲ್ಲಿನ ಪ್ರಯೋಗಶಾಲೆಗಳಲ್ಲಿ ವಿಶ್ಲೇಷಿಸಿದ್ದು ನಮ್ಮ ತಿಳುವಳಿಕೆಯಲ್ಲಿ ಇನ್ನೊಂದು ಮಹತ್ತರ ಹೆಜ್ಜೆಗೆ ಕಾರಣವಾಯಿತು. ಚಂದ್ರದ ಹುಟ್ಟು ಹೇಗಾಯಿತು ಎಂಬುದು ಕ್ರಮೇಣ ಸ್ಪಷ್ಟವಾಗತೋಡಗಿತು.

ಚಂದ್ರದ ಈ ವೈಜ್ಞಾನಿಕ ಸಂಶೋಧನೆಯಲ್ಲಿ ಚಂದ್ರಯಾನವೂ ಒಂದು ಹೆಜ್ಜೆ. ೧೯೬೬ರ ಲೂನಾ-೯ ಯಾನಕ್ಕೆ ಚಂದ್ರಯಾನ ಕೆಲವು ಅಂಶಗಳಲ್ಲಿ ಸಮರೂಪದ್ದು. ಆದರೆ ಅಂದಿನಿಂದ ತಂತ್ರಜ್ಞಾನ ಬಹಳಷ್ಟು ಮುನ್ನಡೆದಿ ರುವುದರಿಂದ ಲೂನಾ-೯ ಯಾನದಂತಿರುವ ಪ್ರಸಕ್ತ ಕಾಲಘಟ್ಟದಲ್ಲಿನ ಯಾನಗಳು ಚಂದ್ರದಲ್ಲಿನ ಪದಾರ್ಥಗಳನ್ನು ವಿಶ್ಲೇಷಿಸಲು ಉಪಕರಣಗಳನ್ನು ನೌಕೆಯಲ್ಲಿ ಚಂದ್ರಕ್ಕೆ ಸಾಗಿಸಬಹುದು. ರೊಬೊಟಿಕ್ಸ್ ಕ್ಷೇತ್ರದಲ್ಲಿನ ಸಾಧನೆಗಳನ್ನು ಬಳಸಿದಾಗ ಅಂತಹ ಉಪಕರಣಗಳು ಇನ್ನೂ ಫಲಪ್ರದವಾಗುತ್ತವೆ. ಅಂತೆಯೇ ಚಂದ್ರಯಾನ-೩ರಲ್ಲಿ ಹಲವಾರು ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಯಿತು.

ಚಂದ್ರಯಾನದ ಮುಖ್ಯಕೋಶದಲ್ಲಿ SHAPE (Spectro-polarimetry of Habitable Planet Earth) ಎಂಬ ಉಪಕರಣವಿದೆ. ಮುಖ್ಯ ಕೋಶವು ಚಂದ್ರವನ್ನು ಸುತ್ತುತ್ತಾ ಇರುವಾಗ, ಅದರಲ್ಲಿ ಇಂಧನವು ಇರುವವರೆಗೆ SHAPE ಭೂಮಿಯ ವಾತಾವರಣ ವನ್ನು ವೀಕ್ಷಿಸುವುದು. ಇದರ ಉದ್ದೇಶ ಭೂಮಿಯ ವಾತಾವರಣದ ಬಗ್ಗೆ ಹೊಸ ಅರಿವಿಗೋಸ್ಕರ ಅಲ್ಲ, ಆದರೆ ಬೇರೆ ನಕ್ಷತ್ರಗಳ ಸುತ್ತ ಇರುವ ಗ್ರಹಗಳನ್ನು ಸಂಶೋಧಿಸಲು SHAPEನ ಫಲಿತಾಂಶಗಳು ನೆರವಾಗಲಿವೆ. ಭೂಮಿಯ ವಾತಾವರಣದಿಂದ ದೊರಕುವ ಬೆಳಕಿನ ರೋಹಿತ (ಸ್ಪೆಕ್ಟ್ರಂ) ಮತ್ತು ಧ್ರುವೀಕರಣಗಳನ್ನು ಹಾಗೂ ವಿವಿಧ ಸಂದರ್ಭಗಳಲ್ಲಿ ಅವುಗಳ ಬದಲಾವಣೆಗಳನ್ನು SHAPE ಪಡೆಯುವುದು. ನಮ್ಮ ಸೂರ್ಯಮಂಡಲದ ಹೊರಗಿರುವ ಇತರ ನಕ್ಷತ್ರ ಮಂಡಲಗಳ (ಎಗ್ಸೋಪ್ಲಾನೆಟ್ಸ್ ಎಂದು ಕರೆಯಲ್ಪಡುವ) ಗ್ರಹಗಳ ಅಧ್ಯಯನ ಈಗ ಹಲವು ದಶಕಗಳಿಂದ ಭರದಿಂದ ಸಾಗುತ್ತಿದೆ. ಅಂತಹ ಸಂಶೋಧನೆಗಳು ಮುಖ್ಯವಾಗಿ ಆ ಗ್ರಹಗಳ ವಾತಾವರಣದ ಮೂಲಕ ಬರುವ ಬೆಳಕಿನ ರೋಹಿತಗಳನ್ನು ಹಾಗೂ ಧ್ರುವೀಕರಣವನ್ನು ಪಡೆದು ನಡೆಯತ್ತವೆ. ಅವನ್ನು ಭೂಮಿಯ ವಾತಾವರಣದ ರೋಹಿತ ಧ್ರುವೀಕರಣಗಳಿಗೆ ಹೋಲಿಸಿದಾಗ ವಿಶ್ಲೇಷಣೆಗೆ ಸಹಾಯವಾಗುವುದು.

ಚಂದ್ರಯಾನದಿಂದ ಬೇರ್ಪಟ್ಟು ಚಂದ್ರದ ದಕ್ಷಿಣ ಧ್ರುವದಿಂದ ಸುಮಾರು ೬೦೦ ಕಿ.ಮೀ.ಗಳಷ್ಟು ದೂರದಲ್ಲಿ, ಅಪೇಕ್ಷೆಯ ಸ್ಥಳದಲ್ಲೇ ಇಳಿದಿರುವ ವಿಕ್ರಮ ಲ್ಯಾಂಡರ್‌ನಲ್ಲಿ ನಾಲ್ಕು ಉಪಕರಣಗಳಿವೆ. ಒಂದು ಚಂದ್ರನ ಮೇಲ್ಮೈಯಲ್ಲಿ ಉಷ್ಣವಹನ ಹೇಗಾಗುವುದು ಎಂದು ತಿಳಿಯಲು; ಎರಡನೆಯದು ಚಂದ್ರಕಂಪನದ ಗುಣಗಳನ್ನು ತಿಳಿಯಲು. ಮೂರನೆಯದು ಚಂದ್ರದ ಮೇಲ್ಮೈಯ ಹತ್ತಿರದ ವಾತಾವರಣದಲ್ಲಿರುವ ಕಣಗಳ ಗುಣಗಳನ್ನು ತಿಳಿಯಲು. ನಾಲ್ಕನೆಯದು ಚಂದ್ರ ಮತ್ತು ಭೂಮಿಯ ನಡುವಿನ ಅಂತರವನ್ನು (ಮತ್ತು ಅದರ ಬದಲಾವಣೆಗಳನ್ನು) ಅಳತೆ ಮಾಡಲು.

ಅಲ್ಲದೆ, ವಿಕ್ರಮ ಲ್ಯಾಂಡರಿನಲ್ಲಿ ಸುಮಾರು ಒಂದು ಸೂಟ್‌ಕೇಸ್ ಗಾತ್ರದ ೨೬ ಕಿ.ಗ್ರಾಮ್ ತೂಕವುಳ್ಳ ‘ಪ್ರಜ್ಞಾನ್’ ಎಂಬ ವಾಹನವೂ ಇದೆ. ಇದು ಲ್ಯಾಂಡರ್‌ನಿಂದ ಅಪೇಕ್ಷೆಯಂತೆ ಬೇರ್ಪಟ್ಟಿದೆ. ಚಂದ್ರದ ಮೇಲೆ ಸುಮಾರು ೫೦೦ ಮೀಟರ್‌ಗಳ ಅಂತರದಷ್ಟು ಓಡಾಡಲಿದೆ. ಲ್ಯಾಂಡರ್ ಇರುವ ಸ್ಥಳದ ರೆಗೊಲಿತ್ ಎಂದು ಕರೆಯಲ್ಪಡುವ ಧೂಳಿನ ಸ್ಯಾಂಪಲ್‌ಗಳನ್ನು ತೆಗೆದು ಕ್ಷ-ಕಿರಣಗಳನ್ನೂ ಲೇಸರ್ ಮತ್ತು ರೋಹಿತಗಳನ್ನೂ ಬಳಸಿ, ರೆಗೊಲಿತ್‌ನ ಸಂಯೋಜನೆ ಏನು, ಯಾವ ಧಾತುಗಳಿಂದ ಮಾಡಲ್ಪಟ್ಟದ್ದು ಎಂಬುದನ್ನು ವಿಶ್ಲೇಷಿಸಲಾಗುವುದು.

ಚಂದ್ರಯಾನದ ಇದುವರೆಗಿನ ಸಫಲತೆಗಳಲ್ಲಿ ಮೆರೆಯುತ್ತಾ, ಅದರ ರಚನೆ, ಪರೀಕ್ಷೆ ಇತ್ಯಾದಿಗಳಲ್ಲಿ ತೊಡಗಿದ ಸಾವಿರಾರು ಇಂಜಿನಿಯರ್ ಗಳ, ವಿಜ್ಞಾನಿಗಳ ಮತ್ತು ಅದಕ್ಕೆಲ್ಲ ತಳಹದಿಯಾಗಿ ನಿರಂತರ ವರ್ಷಗಳ ಕಾಲ ಬೆಂಬಲವಾಗಿ ನಿಂತಿರುವ ಇಸ್ರೋದ ನೂರಾರು ಇತರ ಸಿಬಂದಿಯ ದಕ್ಷತೆ, ಬದ್ಧತೆ, ಏಕಾಗ್ರತೆ, ಶ್ರಮವನ್ನು ನೆನಪಿಸಿ ಶ್ಲಾಘಿಸುವುದು ಅತಿ ಮುಖ್ಯ ವಾಗಿರುತ್ತದೆ. ಹೆಚ್ಚಾಗಿ ಅವರ ಹೆಸರು, ಮುಖಗಳು ನಮಗೆ ಟಿವಿ ಚಾನೆಲ್‌ಗಳಲ್ಲಾಗಲೀ ಸಾಮಾಜಿಕ ಜಾಲತಾಣಗಳಲ್ಲಾಗಲೀ ತೋರಲಿಲ್ಲ.

ಚಂದ್ರಯಾನ ನೌಕೆಯ ಸಫಲ ಇಳಿಯುವಿಕೆ ಸೇರಿ ಉಪಕರಣಗಳ ರಚನೆ, ಉಡ್ಡಯನ, ಹಂತ ಹಂತಕ್ಕೆ ಕಕ್ಷೆ ಬದಲಾವಣೆ, ಇವೆಲ್ಲವೂ ಚಂದ್ರಯಾನದ ಮುಖ್ಯ ವೈಜ್ಞಾನಿಕ ಉದ್ದೇಶಗಳನ್ನು ನೆರವೇರಿಸಲು ಅತ್ಯಗತ್ಯ ಹೆಜ್ಜೆಗಳು. ವೈಜ್ಞಾನಿಕ ಫಲಿತಾಂಶಗಳು ಮುಂದೆ ಬರಬೇಕಾಗಿದೆ. ಚಂದ್ರದ ದಕ್ಷಿಣ ಭಾಗದ ಧೂಳಿನ ರಾಸಾಯನಿಕ ವಿಶ್ಲೇಷಣೆ, ಈ ಹಿಂದೆ ದೊರಕಿದ ಫಲಿತಾಂಶಗಳನ್ನು ಸಮರ್ಥಿಸುವುದೇ ಇಲ್ಲವೇ? ಅದೊಂದು ಕುತೂಹಲಕಾರಿ ಪ್ರಶ್ನೆ.

ಒಟ್ಟಿನಲ್ಲಿ ೬೦ರ ದಶಕದಲ್ಲಿ ಆರಂಭವಾದ ಚಂದ್ರದ ನಿಖರವಾದ ಅನ್ವೇಷಣೆಗೆ ಚಂದ್ರಯಾನ ಕೂಡ ಹೊಸ ಫಲಿತಾಂಶಗಳನ್ನು ಒದಗಿಸಲಿವೆ. ಮಾಧ್ಯಮಗಳೆಲ್ಲ ಅತಿಪೈಪೋಟಿಯಿಂದ ಚಂದ್ರದ ಮೇಲೆ ಚಂದ್ರಯಾನದ ಇಳಿಯುವಿಕೆಯನ್ನು ಕೇಂದ್ರೀಕರಿಸಿದವು. ಯಾನದ ವೈಜ್ಞಾನಿಕ ಧ್ಯೇಯೋದ್ದೇಶಗಳನ್ನು ಬದಿಗಿಟ್ಟಂತೆ ಮಾಡಿವೆ. ಆದರೆ ಶೀಘ್ರವಾಗಿ ನಮ್ಮ ಮುಂದೆ ಬರಲಿರುವ ವೈಜ್ಞಾನಿಕ ಫಲಿತಾಂಶಗಳು ವ್ಯಾಖ್ಯಾನವನ್ನು ವಿಜ್ಞಾನದೆಡೆಗೆ ತಿರುಗಿಸಿದರೆ ಚಂದ್ರಯಾನ ಸಾರ್ಥಕವಾದಂತೆ. ಇನ್ನು ಮುಂದೆ ಭಾರತದ ಜನತೆ ಈ ಪ್ರಕ್ರಿಯೆಯಿಂದ ಸ್ಫೂರ್ತಿಗೊಂಡು ಚಂದ್ರದ ಬಗ್ಗೆ ಇರುವ ಮೂಢನಂಬಿಕೆಗಳನ್ನೆಲ್ಲಾ ತ್ಯಜಿಸಿ ಚಂದ್ರದ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸಿದರೆ ಭಾರತದ ಯುವಜನರಲ್ಲಿ ವೈಜ್ಞಾನಿಕತೆ ವೈಚಾರಿಕತೆಗಳು ಹೆಚ್ಚವುದರಲ್ಲಿ ಸಂದೇಹವಿಲ್ಲ.

ಅಂತರಿಕ್ಷವೆಂದರೆ ಯಾರದೂ ವೈಯಕ್ತಿಕ ಆಸ್ತಿಯಲ್ಲ, ಯಾವ ದೇಶದ ಆಸ್ತಿಯೂ ಅಲ್ಲ. ಜ್ಞಾನ ಮತ್ತು ವೈಜ್ಞಾನಿಕ ತಿಳುವಳಿಕೆಗೆ ಕೃತಿಸ್ವಾಮ್ಯ ಸಮಂಜಸವಲ್ಲ-ಅದು ಇಡಿಯ ಮನುಕುಲಕ್ಕೆ ಸೇರಿರುವುದು. ಆದ್ದರಿಂದ ಇದೊಂದು ಚರಿತ್ರಾರ್ಹ ಘಳಿಗೆ. ಅಂತರಿಕ್ಷಯಾನದ ಸಾಮರ್ಥ್ಯವುಳ್ಳ ದೇಶಗಳ ಸಮೂಹದಲ್ಲಿ ಭಾರತಕ್ಕೆ ಪ್ರಬಲವಾದ ಧ್ವನಿ ದಕ್ಕಿದೆ ಎನ್ನಬಹುದು. ಇದೊಂದು ಮಹತ್ವದ ಜವಾಬ್ದಾರಿ. ಈ ಜವಾಬ್ದಾರಿಯ ಸದುಪಯೋಗ ಮಾಡಿ ಮನುಕುಲದ ಅಂತರಿಕ್ಷಾನ್ವೇಷಣೆಯ ಚೌಕಟ್ಟನ್ನು ಸದ್ಯದ ಪೈಪೋಟಿಯ, ಲಾಭದಾಯಕ ಉದ್ದಿಮೆಯಾಗಿಸುವ ಬದಲು ಇಡಿಯ ಮನುಕುಲದ ಒಳಿತಿಗೋಸ್ಕರ ಸಹಕಾರಿ ಚೌಕಟ್ಟಾಗಿ ಪರಿವರ್ತಿಸಿದರೆ ಚಂದ್ರಯಾನ ನಿಜವಾಗಿಯೂ ಸಾರ್ಥಕವಾಗುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಪ್ರಜ್ವಲ್ ಶಾಸ್ತ್ರಿ

contributor

Similar News