ಛತ್ತೀಸ್‍ಗಡ: ಮತ್ತೆ ಅಧಿಕಾರ ಹಿಡಿಯುವತ್ತ ಕಾಂಗ್ರೆಸ್ ಚಿತ್ತ?

ಪಂಚರಾಜ್ಯ ಚುನಾವಣೆಗಳಲ್ಲಿ ಎರಡು ಹಂತದಲ್ಲಿ ಮತದಾನ ನಿಗದಿಯಾಗಿರುವ ಏಕೈಕ ರಾಜ್ಯ ಛತ್ತೀಸ್ಗಡ. ಒಂದೂವರೆ ದಶಕದ ಬಿಜೆಪಿ ಆಡಳಿತದ ಬಳಿಕ ಅಧಿಕಾರದಲ್ಲಿರುವ ಕಾಂಗ್ರೆಸ್ ಈ ಬಾರಿಯೂ ತನ್ನ ತೆಕ್ಕೆಯಲ್ಲಿಯೇ ಈ ರಾಜ್ಯವನ್ನು ಉಳಿಸಿಕೊಳ್ಳುವ ವಿಶ್ವಾಸ ಹೊಂದಿದೆ. ಬಿಜೆಪಿ ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಈ ಬಾರಿಯ ವಿಶೇಷವೆಂದರೆ, ನಕ್ಸಲ್ ಪೀಡಿತ 40 ಗ್ರಾಮಗಳ ಜನರು ಮತದಾನದಲ್ಲಿ ಭಾಗಿಯಾಗಲಿದ್ದಾರೆ.

Update: 2023-10-25 05:27 GMT

Photo : PTI 

ಛತ್ತೀಸ್ಗಡ ಮಧ್ಯಭಾರತದ ಒಂದು ರಾಜ್ಯ. ಇದು ರಚನೆಯಾದದ್ದು 2000ದಲ್ಲಿ.

ಮಧ್ಯಪ್ರದೇಶದ ಆಗ್ನೇಯ ಮೂಲೆಯ ಛತ್ತೀಸಗಡಿ ಮಾತನಾಡುವ ಜಿಲ್ಲೆಗಳನ್ನು ಒಂದುಗೂಡಿಸಿ ಈ ಹೊಸ ರಾಜ್ಯ ರಚಿಸಲಾಯಿತು. ಛತ್ತೀಸ್ಗಡ ಎಂದರೆ ಮೂವತ್ತಾರು ಕೋಟೆ ಎಂದು ಅರ್ಥ. ಈ ಭಾಗವನ್ನು ಹಿಂದೆ ಆಳಿದ್ದ 36 ರಾಜಮನೆತನಗಳ ಸಂಖ್ಯೆಯನ್ನು ಅದು ಸೂಚಿಸುತ್ತದೆ.

ರಚನೆಯಾಗುವಾಗ ಈ ಹೊಸ ರಾಜ್ಯದಲ್ಲಿ 16 ಜಿಲ್ಲೆಗಳಿದ್ದವು. ಈಗ ಹೊಸ ಜಿಲ್ಲೆಗಳ ರಚನೆಯಾಗುವುದರೊಂದಿಗೆ, ಒಟ್ಟು 33 ಜಿಲ್ಲೆಗಳಾಗಿವೆ.

ರಾಯ್ಪುರ ಈ ರಾಜ್ಯದ ರಾಜಧಾನಿ. ದೇಶದ 10ನೇ ಅತಿ ದೊಡ್ಡ ರಾಜ್ಯ ಇದು.

ವಾಯವ್ಯಕ್ಕೆ ಮಧ್ಯಪ್ರದೇಶ, ಪಶ್ಚಿಮಕ್ಕೆ ಮಹಾರಾಷ್ಟ್ರ, ದಕ್ಷಿಣಕ್ಕೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ, ಪೂರ್ವಕ್ಕೆ ಒಡಿಶಾ, ಈಶಾನ್ಯಕ್ಕೆ ಜಾರ್ಖಂಡ್ ಮತ್ತು ಉತ್ತರಕ್ಕೆ ಉತ್ತರ ಪ್ರದೇಶ-ಇವು ಛತ್ತೀಸ್ಗಡದ ಗಡಿ ರಾಜ್ಯಗಳಾಗಿವೆ.

ಈ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು, ಮಧ್ಯಭಾಗ ಫಲವತ್ತಾದ ಸಮತಟ್ಟು ಪ್ರದೇಶವಾಗಿದೆ. ರಾಜ್ಯದ ಶೇ.44ರಷ್ಟು ಭಾಗ ಕಾಡುಗಳಿಂದ ಆವೃತ.

ರಾಜ್ಯದ ಉತ್ತರಭಾಗ ಸಿಂಧು-ಗಂಗಾ ಸಮತಟ್ಟು ಪ್ರದೇಶದ ತುದಿಯಲ್ಲಿದೆ. ರಿಹಾಂದ್ ಎಂಬ ಗಂಗಾ ನದಿಯ ಉಪನದಿ ಇಲ್ಲಿ ಹರಿಯುತ್ತದೆ.

ಸತ್ಪುರ್ ಬೆಟ್ಟಗಳ ಪೂರ್ವದ ತುದಿ ಮತ್ತು ಛೋಟಾ ನಾಗ್ಪುರ್ ಪ್ರಸ್ಥಭೂಮಿಯ ಪಶ್ಚಿಮ ತುದಿಗಳು ಪೂರ್ವ- ಪಶ್ಚಿಮ ಭಾಗದಲ್ಲಿ ಬೆಟ್ಟಗಳ ಶ್ರೇಣಿಯನ್ನೇ ಉಂಟುಮಾಡಿ ಮಹಾನದಿ ನದಿಯ ಪ್ರಾಂತ ಮತ್ತು ಸಿಂಧು-ಗಂಗಾ ಸಮತಟ್ಟು ಪ್ರದೇಶಗಳೆರಡನ್ನೂ ಪ್ರತ್ಯೇಕಿಸಿವೆ.

ರಾಜ್ಯದ ಮಧ್ಯಭಾಗ ಮಹಾನದಿ ಮತ್ತು ಅದರ ಉಪನದಿಗಳ ಮೇಲ್ದಂಡೆಯಲ್ಲಿದೆ. ಬಹು ಫಲವತ್ತಾದ ಈ ಪ್ರದೇಶ ಭತ್ತದ ಕೃಷಿಗೆ ಪ್ರಸಿದ್ಧ. ಮಹಾನದಿಯ ಮೇಲ್ದಂಡೆ ನರ್ಮದಾ ನದಿಯ ಮೇಲ್ದಂಡೆಯಿಂದ ಪಶ್ಚಿಮದ ಭಾಗದಲ್ಲಿ ಮೇಕಲ್ ಬೆಟ್ಟಗಳಿಂದ ಬೇರ್ಪಡಿಸಲ್ಪಟ್ಟಿದೆ.

ರಾಜ್ಯದ ದಕ್ಷಿಣ ಭಾಗ ಡೆಕನ್ ಪ್ರಸ್ಥಭೂಮಿಯಲ್ಲಿದ್ದು, ಗೋದಾವರಿ ನದಿ ಮತ್ತು ಅದರ ಉಪನದಿಯಾದ ಇಂದ್ರಾವತಿ ನದಿಗಳು ಈ ಪ್ರದೇಶಕ್ಕೆ ನೀರೆರೆಯುತ್ತವೆ.

ಮಹಾನದಿ ಛತ್ತೀಸ್ಗಡದ ಪ್ರಮುಖ ನದಿಯಾಗಿದೆ. ಇತರ ಮುಖ್ಯ ನದಿಗಳೆಂದರೆ, ಮಹಾನದಿಯ ಉಪನದಿಯಾದ ಹಸ್ದೋ, ರಿಹಾಂದ್, ಇಂದ್ರಾವತಿ, ಜೋಂಕ್ ಮತ್ತು ಅರ್ಪಾ.

ಹೇರಳ ಖನಿಜ ಸಂಪತ್ತಿಗೂ ಈ ರಾಜ್ಯ ಹೆಸರಾಗಿದೆ.ಕೊರ್ಬಾ ಮತ್ತು ಬಿಲಾಸಪುರ್ ಈ ರಾಜ್ಯದ ಶಕ್ತಿಕೇಂದ್ರಗಳಾಗಿದ್ದು, ಭಾರತದ ಇತರ ರಾಜ್ಯಗಳಿಗೆ ವಿದ್ಯುತ್ ಸರಬರಾಜಾಗುವುದು ಇಲ್ಲಿಂದಲೇ.

ಹೈನುಗಾರಿಕೆ ಕೂಡ ಈ ರಾಜ್ಯದ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ. ಸ್ಟೀಲ್ ತಯಾರಿಕೆಗೂ ಛತ್ತೀಸ್ಗಡ ಹೆಸರುವಾಸಿ.

ರಾಜ್ಯದ ಶೇ.80 ಶ್ರಮಿಕ ವರ್ಗ ಕೃಷಿ ಕ್ಷೇತ್ರದಲ್ಲಿ ಕಾರ್ಯನಿರತವಾಗಿದ್ದು, ಭಾರೀ ಪ್ರಮಾಣದ ಅಕ್ಕಿ ಉತ್ಪಾದನೆಯಿಂದಾಗಿ ಛತ್ತೀಸ್ಗಡಕ್ಕೆ ದೇಶದ ಅನ್ನದ ಪಾತ್ರೆ ಎಂಬ ಹೆಸರೂ ಇದೆ.

ಈ ರಾಜ್ಯದಲ್ಲಿ ಅಸ್ಥಿರತೆ ತಲೆದೋರುವುದು ಮಾವೋವಾದಿಗಳ ದಂಗೆಯಿಂದಾಗಿ. ಮಾವೋವಾದಿಗಳ ಕಾರಣದಿಂದಾಗಿ ಈ ರಾಜ್ಯ ಮತ್ತೆ ಮತ್ತೆ ಸುದ್ದಿಯಲ್ಲಿರುತ್ತದೆ.

ಈ ರಾಜ್ಯದಲ್ಲಿ ನಗರಪ್ರದೇಶಗಳಲ್ಲಿ ವಾಸಿಸುವವರು ಶೇ. 23ರಷ್ಟು ಜನರು ಮಾತ್ರ. ಛತ್ತೀಸ್ಗಡಿ ರಾಜ್ಯದ ಮುಖ್ಯ ಭಾಷೆಯಾದರೂ ಹಿಂದಿ ಇಲ್ಲಿ ಚಾಲ್ತಿಯಲ್ಲಿರುವ ಭಾಷೆ. ಹಲವು ಬುಡಕಟ್ಟು ಭಾಷೆಗಳನ್ನೂ ರಾಜ್ಯದ ವಿವಿಧೆಡೆ ಮಾತನಾಡಲಾಗುತ್ತದೆ.

ಛತ್ತೀಸ್ಗಡ ಹಲವಾರು ಧಾರ್ಮಿಕ ಪಂಗಡಗಳಿಗೆ ನೆಲೆ. ಸತ್ನಾಮೀ ಪಂಥ್, ಕಬೀರ್ ಪಂಥ್, ರಾಮ್ ನಾಮೀ ಸಮಾಜ್ ಅಂಥ ಪ್ರಮುಖ ಪಂಗಡಗಳಾಗಿವೆ.

ಸಂತ ವಲ್ಲಭಾಚಾರ್ಯರ ಜನ್ಮಸ್ಥಳವಾದ ಚಂಪಾರಣ್, ಗುಜರಾತಿ ಪಂಗಡದವರಿಗೆ ಪುಣ್ಯಕ್ಷೇತ್ರವಾಗಿ ಬಹಳ ಪ್ರಸಿದ್ಧಿ ಪಡೆದಿರುವ ಪಟ್ಟಣ.

ರಾಜ್ಯದಲ್ಲಿ ಶೇ. 93ಕ್ಕಿಂತಲೂ ಹೆಚ್ಚು ಹಿಂದೂಗಳು ಇದ್ದಾರೆ. ಹಲವಾರು ಬುಡಕಟ್ಟು ಜನಾಂಗಗಳಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು ಇದ್ದಾರಾದರೂ, ಅವರ ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿಗಳಿಲ್ಲ ಎನ್ನಲಾಗುತ್ತದೆ.ಸರಕಾರದ ವರದಿಯ ಪ್ರಕಾರ, ಪರಿಶಿಷ್ಟ ಪಂಗಡದವರು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.34ರಷ್ಟಿದ್ದಾರೆ. ಪರಿಶಿಷ್ಟ ಜಾತಿಯವರು ಶೇ.12ರಷ್ಟು. ಇತರ ಹಿಂದುಳಿದ ವರ್ಗದವರು ಶೇ.50ಕ್ಕೂ ಹೆಚ್ಚು. ಸಮತಟ್ಟು ಪ್ರದೇಶಗಳಲ್ಲಿ ತೇಲಿ, ಸತ್ನಾಮಿ ಮತ್ತು ಕುರ್ಮಿ ಸಮುದಾಯಗಳಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಅರಣ್ಯ ಪ್ರದೇಶಗಳಲ್ಲಿನ ಬುಡಕಟ್ಟು ಜನಾಂಗಗಳೆಂದರೆ ಗೊಂಡ, ಹಲ್ಬಾ, ಕಮಾರ್ ಅಥವಾ ಬುಜ್ಜ ಮತ್ತು ಒರಯಾನ್.

2011ರ ಜನಗಣತಿ ಪ್ರಕಾರ ರಾಜ್ಯದ ಸಾಕ್ಷರತೆ ಶೇ. 71.04. ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಎನ್ಐಟಿ ರಾಯ್ಪುರ್, ಹಿದಾಯತುಲ್ಲಾಹ್ ನ್ಯಾಷನಲ್ ಲಾ ಯುನಿವರ್ಸಿಟಿ, ರಾಯ್ಪುರ್ ಹಾಗೂ ಆರ್ಸಿಇಟಿ, ಭಿಲಾಯ್ ಈ ರಾಜ್ಯದಲ್ಲಿವೆ.

ಒಟ್ಟು 33 ಜಿಲ್ಲೆಗಳನ್ನು 5 ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ಆ ವಿಭಾಗಗಳೆಂದರೆ, ಸುರ್ಗುಜಾ, ದುರ್ಗ್, ಬಿಲಾಸ್ಪುರ್, ರಾಯ್ಪುರ ಮತ್ತು ಬಸ್ತಾರ್.

ಛತ್ತೀಸ್ಗಡ ವಿಧಾನಸಭೆ 90 ಸದಸ್ಯಬಲದ್ದಾಗಿದೆ. ರಾಜ್ಯದ ಒಟ್ಟು ಮತದಾರರು 2 ಕೋಟಿ 3 ಲಕ್ಷ.

2003ರಿಂದ 2018ರವರೆಗೆ ಛತ್ತೀಸ್ಗಡವನ್ನು 15 ವರ್ಷಗಳ ಕಾಲ ಆಳಿದ್ದು ಬಿಜೆಪಿ. ರಮಣ್ ಸಿಂಗ್ ಸತತ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

2018ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್ ಭರ್ಜರಿ ಗೆಲುವು ಕಂಡಿತು. ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾದರು.

ಕಳೆದ ಚುನಾವಣೆಯಲ್ಲಿನ ಬಲಾಬಲ ಹೀಗಿತ್ತು:

ಕಾಂಗ್ರೆಸ್ 68, ಬಿಜೆಪಿ 15, ಜೆಸಿಸಿ 5, ಬಿಎಸ್ಪಿ 2

ಕಾಂಗ್ರೆಸ್ ಈ ಬಾರಿಯೂ ಅಧಿಕಾರಕ್ಕೆ ಬರುವ ಅಪಾರ ವಿಶ್ವಾಸವನ್ನು ಹೊಂದಿದೆ.

ಒಬಿಸಿ ಮತ್ತು ಗ್ರಾಮೀಣ ಮತದಾರರ ಮೇಲೆ ಗಮನಾರ್ಹ ಹಿಡಿತ ಹೊಂದಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಜನಪ್ರಿಯತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪಾಲಿನ ಬಲ. ಬಘೇಲ್ ಬಗ್ಗೆ ರಾಜ್ಯದಲ್ಲಿ ಉತ್ತಮ ಅಭಿಪ್ರಾಯ ಇದೆಯೆಂದು ಹೇಳಲಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲ ಉಪಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿದೆ. ಬೂತ್ ಮಟ್ಟದವರೆಗೂ ಪಕ್ಷ ಸಂಘಟನೆ ಬಲಪಡಿಸಿದೆ ಎಂಬ ವರದಿಗಳಿವೆ. ಜೊತೆಗೆ, ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ.

ಆದರೆ, ಪಕ್ಷದಲ್ಲಿ ಆಂತರಿಕವಾಗಿ ನಾಯಕತ್ವದ ವಿಚಾರವಾಗಿ ಇರುವ ಸಂಘರ್ಷ ಕಾಂಗ್ರೆಸ್ ಪಾಲಿನ ಆತಂಕವಾಗಿದೆ. ಅದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ನಡುವೆ ಹಲವು ವರ್ಷಗಳಿಂದ ಇರುವ ಭಿನ್ನಮತ.

2018ರ ಚುನಾವಣೆ ಗೆಲುವಿನ ಬಳಿಕ ಇಬ್ಬರೂ ನಾಯಕರ ಮಧ್ಯೆ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ಎದ್ದಿತ್ತು. ಕಡೆಗೆ ಬಘೇಲ್ ಅವರಿಗೆ ಹೈಕಮಾಂಡ್ ಮಣೆಹಾಕಿತ್ತು.

ಎರಡೂವರೆ ವರ್ಷಗಳ ಬಳಿಕ ಅಧಿಕಾರ ಹಸ್ತಾಂತರದ ಮಾತಾಗಿತ್ತಾದರೂ, ಬಘೇಲ್ ಹುದ್ದೆ ಬಿಡದಿರುವ ಹಿನ್ನೆಲೆಯಲ್ಲಿ ದೇವ್ ಮುನಿಸು ಇನ್ನೂ ಹೆಚ್ಚಾಗಿತ್ತು. ಆದರೂ ಹೈಕಮಾಂಡ್ ಮಧ್ಯಸ್ಥಿಕೆಯಿಂದಾಗಿ ಇಬ್ಬರ ನಡುವಿನ ವೈಮನಸ್ಯ ಸದ್ಯಕ್ಕೆ ಬಗೆಹರಿದಿದೆ ಎಂದು ಹೇಳಲಾಗುತ್ತಿದೆ.

ರಾಹುಲ್ ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆ ಪರಿಣಾಮಗಳು ಕೂಡ ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲಾಭ ತಂದುಕೊಡಲಿವೆ ಎನ್ನಲಾಗುತ್ತಿದೆ.

ಇನ್ನು ಬಿಜೆಪಿಯ ಎದುರಿನ ಸವಾಲುಗಳ ವಿಚಾರ.

ನಾಯಕತ್ವದ ಬಿಕ್ಕಟ್ಟು ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 2018ರ ಚುನಾವಣೆಯ ನಂತರ ಮೂರು ಬಾರಿ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಿಸಲಾಗಿದೆ. ಕಳೆದ ವರ್ಷ ವಿರೋಧ ಪಕ್ಷದ ನಾಯಕರನ್ನೂ ಬದಲಿಸಲಾಯಿತು. ರಮಣ್ ಸಿಂಗ್ ಮೇಲೆಯೂ ವರಿಷ್ಠರಿಗೆ ವಿಶ್ವಾಸ ಇಲ್ಲ ಎನ್ನಲಾಗುತ್ತಿದೆ. ಹೊಸ ಮುಖಗಳ ಹುಡುಕಾಟ ನಡೆಯುತ್ತಿದೆ. ಇಲ್ಲಿಯೂ ಮೋದಿ ಮುಖವನ್ನೇ ಇಟ್ಟುಕೊಂಡು ಚುನಾವಣೆ ಎದುರಿಸುವ ಸ್ಥಿತಿ ಬಿಜೆಪಿಯದ್ದಾಗಿದೆ.

ಇನ್ನೊಂದು ಬಹುಮುಖ್ಯ ವಿಚಾರ ಈ ಚುನಾವಣೆಯಲ್ಲಿ ವಿಶೇಷವಾಗಿ ಗಮನಿಸಬೇಕಾದದ್ದಿದೆ. ಅದೆಂದರೆ ನಕ್ಸಲ್ ಪೀಡಿತ ಹಳ್ಳಿಗಳು ಈ ಸಲದ ಚುನಾವಣೆಯಲ್ಲಿ ಭಾಗಿಯಾಗುತ್ತಿರುವುದು.

ಬಸ್ತರ್ ಜಿಲ್ಲೆಯ ನಕ್ಸಲ್ ಪೀಡಿತ 40 ಗ್ರಾಮಗಳ ಜನರು 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತದಾನ ಮಾಡುವ ಅವಕಾಶ ಪಡೆಯಲಿದ್ದಾರೆ. ಈ ಚುನಾವಣೆ ಬಸ್ತರ್ ಜಿಲ್ಲೆಯ ಜನರ ಪಾಲಿಗೆ ವಿಶೇಷವಾಗಲಿದೆ.

ಈ ನಕ್ಸಲ್ ಪೀಡಿತ ಗ್ರಾಮಗಳು ಸುರಕ್ಷಿತ ಮತದಾನ ಮಾಡಲು ಸಾಧ್ಯವಾಗದಷ್ಟು ಅಪಾಯಕಾರಿಯಾಗಿದ್ದವು. ಈ ಬಾರಿ ಈ ಗ್ರಾಮಗಳಲ್ಲಿ ಕನಿಷ್ಠ 120 ಮತಗಟ್ಟೆಗಳನ್ನು ಮರುಸ್ಥಾಪಿಸಲಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಈ ಹೆಚ್ಚು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 60ಕ್ಕೂ ಹೆಚ್ಚು ಭದ್ರತಾ ಪಡೆ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈಗ ಪೊಲೀಸರ ಪ್ರಕಾರ, ಈ ಪ್ರದೇಶಗಳು ಚುನಾವಣಾ ಪ್ರಕ್ರಿಯೆಗೆ ಸುರಕ್ಷಿತವಾಗಿವೆ. ಇದಕ್ಕಾಗಿ ಚುನಾವಣಾ ಆಯೋಗ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಿದೆ.

ಛತ್ತೀಸ್ಗಡದಲ್ಲಿ 2 ಹಂತದಲ್ಲಿ ಮತದಾನ ನಡೆಯುತ್ತಿದೆ.

ನವೆಂಬರ್ 7ರಂದು ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಮತ್ತು ನವೆಂಬರ್ 17ರಂದು ಎರಡನೇ ಹಂತದಲ್ಲಿ 70 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ನಡೆದಿರುವ ಎಲ್ಲ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್ ವಿಶ್ವಾಸವೂ ಅದೇ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಹರೀಶ್ ಎಚ್.ಕೆ.

contributor

Similar News