ಬದಲಾದ ಸ್ವರೂಪದಲ್ಲಿ ಜೀವಂತವಾಗಿರುವ ಕರಾವಳಿಯ ಜಾತಿ ವ್ಯವಸ್ಥೆ..!

Update: 2023-08-19 06:50 GMT

ಮಂಗಳನ ಅಂಗಳದಲ್ಲಿ ಮನೆ ಕಟ್ಟಲು ಸಿದ್ಧರಾಗುತ್ತಿದ್ದೇವೆ, ‘‘ಈಗ ಜಾತಿ ಎಲ್ಲ ಇಲ್ಲ, ಅದೆಲ್ಲ ಹಿಂದಿನ ಕಾಲದಲ್ಲಿ’’ ಎಂದು ಜನ ಹೇಳುತ್ತಾರೆ. ಆದರೆ ಜಾತಿ ಇನ್ನೂ ಜೀವಂತವಾಗಿದೆ ಎಂಬುವುದನ್ನು ಪ್ರತೀ ದಿನಾ ನಾವು ನೋಡುತ್ತಿದ್ದೇವೆ. ಅನೇಕರು ಅನುಭವಿಸುತ್ತಲೂ ಇದ್ದಾರೆ. ಆದರೆ ಕೆಲವರು ಗೊತ್ತಿದ್ದೂ, ಗೊತ್ತಿದ್ದೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಪ್ರತೀ ದಿನ ಹುಟ್ಟುವ ಸೂರ್ಯ ಮುಳುಗುವುದರೊಂದಿಗೆ ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೊಳಗಾದವರ ನೋವನ್ನು ಹೊತ್ತುಕೊಂಡು ಹೊರಡುತ್ತಾನೆ.

‘‘ಹುಟ್ಟುವ ಪ್ರತೀ ಮಗುವು ವಿಶ್ವ ಮಾನವನೇ, ನಂತರ ಆ ಮಗುವನ್ನು ಜಾತಿ, ಮತ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ’’ ಎನ್ನುವ ರಾಷ್ಟ್ರಕವಿ ಕುವೆಂಪುರವರ ಮಾತು ಅಕ್ಷರಶಃ ನಿಜ. ಒಂದೆಡೆ ದೇಶ ಸ್ವಾತಂತ್ರ್ಯದ ಅಮೃತೋತ್ಸವ ಆಚರಣೆಯ ಸಂಭ್ರಮ ಪಡುತ್ತಿದ್ದರೆ ಮತ್ತೊಂದೆಡೆ ಕುಡಿಯುವ ನೀರಿಗಾಗಿ ಜಾತಿಯ ಕಾರಣದಿಂದಾಗಿ ರಾಜಸ್ಥಾನದ ಇಂದ್ರಕುಮಾರ್ ಮೇಘ್ವಾಲ್ ಎಂಬ ಬಾಲಕನಂತಹವರು ಪ್ರಾಣ ಬಿಡುತ್ತಾರೆ. ಈ ನೀಚ ಜನರ ಜಾತಿರೋಗದ ಮನಸ್ಥಿತಿ ಅರ್ಥವಾಗದ ಬಾಲಕ ಇಂದ್ರಕುಮಾರ್ ಬಾಯಾರಿದ್ದಕ್ಕೆ ಮಣ್ಣಿನ ಕೊಡದ ನೀರು ಮುಟ್ಟಿದ ಒಂದು ಕಾರಣಕ್ಕಾಗಿ ಪ್ರಾಣವೇ ಹೋಗುವ ಹಾಗೆ ಏಟು ಕೊಟ್ಟಿರುವ ಆ ಶಿಕ್ಷಕ, ಶಿಕ್ಷಕನೆಂದು ಕರೆಸಿಕೊಳ್ಳಲು ನಾಲಾಯಕ್. ಪ್ರಕೃತಿಯ ಕೊಡುಗೆ, ಸಕಲ ಜೀವಗಳಿಗೂ ಉಚಿತವಾಗಿ ಸಿಗುವ ನೀರನ್ನು ಇಂದು ಸ್ವತಂತ್ರ ಭಾರತದಲ್ಲಿ ದಲಿತರು ಮುಟ್ಟಬಾರದೆಂದು ವಿರೋಧಿಸುವ ಶತಮೂರ್ಖರು ದೇಶದ ಸಂವಿಧಾನದತ್ತ ಹಕ್ಕುಗಳನ್ನು ನಿರಾಕರಿಸುತ್ತಿದ್ದಾರೆ.

ಕ್ರಿಕೆಟ್ ಆಡುತ್ತಿದ್ದಾಗ ದಲಿತ ಬಾಲಕ ಚೆಂಡನ್ನು ಮುಟ್ಟಿದ ವಿಚಾರವಾಗಿ ಜಗಳವಾಗಿ ದಲಿತ ವ್ಯಕ್ತಿಯೊಬ್ಬರ ಹೆಬ್ಬೆರಳನ್ನೇ ಕತ್ತರಿಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೂಲಿಂಗ್ ಗ್ಲಾಸ್, ಒಳ್ಳೆಯ ಬಟ್ಟೆ, ಕುದುರೆ ಮೇಲೆ, ಕುರ್ಚಿ ಮೇಲೆ ಕೂತಿದ್ದಕ್ಕೆ, ದೇವಸ್ಥಾನ ಪ್ರವೇಶಿಸಿದ್ದಕ್ಕೆ, ಹೆಚ್ಚು ಶಿಕ್ಷಣ ಪಡೆದಿದ್ದಕ್ಕೆ, ಇವಿಷ್ಟೇ ಅಲ್ಲ ದೇಶದ ತ್ರಿವರ್ಣ ಧ್ವಜ ಮುಟ್ಟಿದ್ದಕ್ಕೂ ದಲಿತ ಸಮುದಾಯದ ಮೇಲೆ ಹಲ್ಲೆ, ದೌರ್ಜನ್ಯ ನಡೆದಿದೆ.

ಇದು ಬೇರೆ-ಬೇರೆ ರಾಜ್ಯದಲ್ಲಿ ಇರುವ ಜಾತಿ ವ್ಯವಸ್ಥೆಯಾದರೆ ನಮ್ಮ ಕರಾವಳಿಯಲ್ಲೂ ಇನ್ನೂ ಜೀವಂತ ಇರುವ ಜಾತಿ ವ್ಯವಸ್ಥೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ ಅಷ್ಟೇ. ಇತ್ತೀಚೆಗೆ ಸ್ನೇಹಿತೆಯೊಬ್ಬಳು ಉದ್ಯೋಗಕ್ಕಾಗಿ ಅಲ್ಲಿ-ಇಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದಳು. ಆಕೆ ಸಂದರ್ಶನದಲ್ಲಿ ಶೇ.ನೂರಕ್ಕೆ ನೂರರಷ್ಟು ಪಾಸಾಗಿದ್ದಳು. ಆದರೆ ಅವಳ ಕೈಗೆ ಉದ್ಯೋಗ ಕೊಡುವ ಮುಂಚೆ ಸಂಸ್ಥೆ ಮಾಲಕರು ಕೇಳಿದ ಕೊನೆಯ ಪ್ರಶ್ನೆ ‘‘ಮೇಡಂ ನಿಮ್ಮ ಜಾತಿ ಯಾವುದು...?’’. ಒಬ್ಬಳು ವಿದ್ಯಾವಂತೆ , ಸಮಾಜದ ಆಗು, ಹೋಗುಗಳ ಪರಿಜ್ಞಾನ ಇರುವ ಯುವತಿ ತನ್ನ ಜಾತಿಯನ್ನು ಅಲ್ಲಿ ಹೇಳಿಕೊಳ್ಳದೆ ಆ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾಳೆ. ಅಂದರೆ ಯುವಕ-ಯುವತಿಯರು ಉದ್ಯೋಗಕ್ಕೆ ಹೋದಾಗ ಅವರ ಕೆಲಸದ ಸಾಮರ್ಥ್ಯವನ್ನು ನೋಡಿ ಉದ್ಯೋಗ ನೀಡುವುದು ಬಿಟ್ಟು ಜಾತಿ ಮೇಲೆ ಉದ್ಯೋಗ ಕೊಡುವ ಅವಿವೇಕಿಗಳು ಕೆಲ ಸಂಸ್ಥೆಯ ಮಾಲಕರು. ಕೆಲವೆಡೆ ಜಾಬ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ಜಾತಿ ಕೇಳಿ ಕಾಲಂ ಬಿಟ್ಟಿರುತ್ತಾರೆ..!

ನಮ್ಮ ಹಳ್ಳಿಯ ಕಡೆಗೆ ನೋಡುವುದಾದರೆ ಈ ಜಾತಿ ವ್ಯವಸ್ಥೆಯ ನೋವನ್ನು ಅತಿಯಾಗಿ ಅನುಭವಿಸುವವರು ಪೈಂಟಿಂಗ್ ಕೆಲಸಗಾರರು. ಹಳೆ ಮನೆಗೆ ಮತ್ತೆ ಪೈಟಿಂಗ್ ಮಾಡುವ ಸಂದರ್ಭದಲ್ಲಿ ಕೆಲಸಗಾರರ ಜಾತಿ ಕೆಲವು ಮನೆಯವರಿಗೆ ತುಂಬಾ ಮುಖ್ಯವಾಗುತ್ತದೆ. ಕಾಫಿ, ತಿಂಡಿ, ಊಟಕ್ಕೆ ಕೂತಾಗ ಮೆತ್ತಗೆ ‘‘ಅಣ್ಣಾ ನಿಮ್ಮ ಜಾತಿ ಯಾವುದು..?’’ ಎಂದು ಕೇಳುವವರೂ ಇದ್ದಾರೆ. ಕೆಲಸದಲ್ಲಿ ದಲಿತರು ಯಾರಾದರೂ ಇದ್ದರೆ ‘‘ನೀವು ಹೊರಗಿನ ಕೆಲಸ ಮಾಡಿ, ಒಳಗಿದ್ದು ಬೇರೆಯವರು ಮಾಡುತ್ತಾರೆ’’ ಎಂದು ಹೇಳಿ ನೀವು ಒಳಗೆ ಬರುವುದು ಬೇಡ ಎಂದು ಪರೋಕ್ಷವಾಗಿ ಹೇಳಿ ಮುಗಿಸುತ್ತಾರೆ. ಇಲ್ಲಿರುವ ನಿದರ್ಶನಗಳು ಯಾವುದೂ ಕಾಲ್ಪನಿಕ ಅಲ್ಲ. ಕೆಲಸದ ಜಾಗದಲ್ಲಿ ನೋವುಂಡವರು ಹಂಚಿಕೊಂಡ ಅನುಭವಗಳಿವು. ಜಾತಿ ಕೇಳುವ ಜನ ಹೇಗೆ ಅಂದರೆ ಮೊದಲು ಜಾತಿ ಕೇಳಿ ಆನಂತರ ‘‘ಬೇಜಾರು ಮಾಡಿಕೊಳ್ಳಬೇಡಿ, ತಪ್ಪು ತಿಳಿದುಕೊಳ್ಳಬೇಡಿ’’ ಅನ್ನುತ್ತಾರೆ. ತಪ್ಪಾದ ಪ್ರಶ್ನೇ ಕೇಳಿ ತಪ್ಪು ತಿಳಿದುಕೊಳ್ಳಬೇಡಿ ಅನ್ನುವ ಜನ, ಬೇಜಾರಾಗುವ ಪ್ರಶ್ನೆ ಕೇಳಿ ಬೇಜಾರು ಮಾಡುವ ಜನ, ಗೊತ್ತಿದ್ದು ಗೊತ್ತಿದ್ದು ಹೀಗೆಲ್ಲಾ ಮಾಡುತ್ತಿದ್ದಾರೆ ಅಂದರೆ ಇವರೆಲ್ಲ ಜಾತಿ ವ್ಯವಸ್ಥೆಯನ್ನು ಎಷ್ಟು ಪೋಷಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕೆಲವು ಸಂಸ್ಥೆಗಳಲ್ಲಿ ಉದ್ಯೋಗಿಗಳ ಮಧ್ಯೆ ಜಾತಿ ಪ್ರಶ್ನೆ ಉದ್ಭವಿಸುತ್ತದೆ. ‘‘ನಿನ್ನ ಜಾತಿ ಯಾವುದು..?’’ ಎಂದು ಕೇಳುವ ವಿದ್ಯಾವಂತ ಅವಿವೇಕಿಗಳೂ ಇದ್ದಾರೆ. ಒಮ್ಮೊಮ್ಮೆ ಅನ್ನಿಸಿ ಬಿಡುವುದುಂಟು, ಇಂತವರೆಲ್ಲ ಶಿಕ್ಷಣ ಪಡೆದಿರುವುದು ಬದಲಾವಣೆ ಬಯಸಿ ಅಲ್ಲವೇ ಎಂದು..? ಒಮ್ಮೆ ಹೂವಿನ ಅಂಗಡಿ ವ್ಯಾಪಾರಿ ಬಳಿ ಹೂ ತೆಗೆದುಕೊಳ್ಳಲು ಹೋಗಿದ್ದೆ. ಹೂ ಕೊಟ್ಟ ಆತ ನನ್ನ ಉದ್ಯೋಗ, ನನ್ನೂರಿನ ಬಗ್ಗೆ ವಿಚಾರಿಸಿ ನೇರವಾಗಿ ‘‘ನಿಮ್ಮದು ಯಾವ ಜಾತಿ?’’ ಎಂದು ಕೇಳಿ ಬಿಟ್ಟ. ಕಣ್ಣು ಕೆಂಪಾಗಿಸಿ ಆತನ ಮುಖವನ್ನೇ ದಿಟ್ಟಿಸಿದೆ. ‘‘ಅಯ್ಯೋ ಬೇಜಾರು ಮಾಡ್ಕೊಬೇಡಿ. ನಿಮ್ಮನ್ನು ನೋಡಿದ್ರೆ ನನ್ನ ತಂಗಿ ಅಂತಾನೇ ಅನ್ನಿಸ್ತು ಅದಕ್ಕೆ ಕೇಳ್ದೆ’’ ಅಂದರು. ‘‘ಸರ್ ನಾನು ನಿಮ್ಮ ತಂಗಿ ತಾನೆ..? ನಿಮ್ಮದೇ ಜಾತಿ ಅಂದ್ಕೊಳ್ಳಿ’’ ಅಂದೆ. ಇಲ್ಲ, ‘‘ಇಲ್ಲ ಹೇಳಿ, ಹೇಳಿ’’ ಎಂದು ಮತ್ತೆ ಒತ್ತಾಯಿಸಿದ. ಅವನ ಒತ್ತಾಯ ನೋಡಿ ‘‘ಸರ್ ನಾನು ಹಿಂದೂನೇ ಅಲ್ಲ’’ ಎಂದೆ. ಹಣೆ ಮೇಲೆ ಕರಿಗಂಧ ಪ್ರಸಾದ ನೋಡಿ ಆಶ್ಚರ್ಯ ಪಟ್ಟ.

ವೇದಿಕೆ ಮೇಲೆ ಭಾಷಣ ಮಾಡುವಾಗ ‘ನಾವೆಲ್ಲ ಒಂದೇ’ ಅನ್ನುತಾರೆ. ಆದರೆ ಹಾಗೆ ಹೇಳುವವರ ಮನೆ ಅಂಗಳದಲ್ಲೇ ಎಷ್ಟೋ ಜನ ನಿಲ್ಲುವ ಪರಿಸ್ಥಿತಿ ಇದೆ. ದೇವಸ್ಥಾನ, ಆಸ್ಪತ್ರೆ, ಬಸ್, ಎಲ್ಲೇ ಹೋದರೂ ಜಾತಿ ಕೇಳುವ ರೋಗಗ್ರಸ್ಥ ಜನ ಇದ್ದೇ ಇರುತ್ತಾರೆ. ಅಂತರ್ಜಾತಿ ಮದುವೆ ಆದ ಯುವಕರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಓದಿದ ಹುಡುಗ-ಹುಡುಗಿಯರು ಜಾತಿಯ ಬೇಲಿ ದಾಟಿ ಪ್ರೀತಿಸಿ ಮದುವೆಯಾಗಿ ಬದುಕು ಕಟ್ಟಿಕೊಳ್ಳೋಣ ಎನ್ನುವಷ್ಟರಲ್ಲಿ ಹುಡುಗ ಮಚ್ಚು, ಲಾಂಗುಗಳ ದಾಳಿಗೆ ಸಿಕ್ಕಿ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ಹುಡುಗಿಯನ್ನು ಹೆತ್ತವರೇ ವಿಷ ಕೊಟ್ಟೋ, ಕುತ್ತಿಗೆ ಹಿಸುಕಿಯೋ ಸಾಯಿಸಿ ಬಿಡುತ್ತಾರೆ. ಮತ್ತೆ ಇದು ‘ಮರ್ಯಾದೆ ಹತ್ಯೆ’ ಅನ್ನಿಸಿಕೊಳ್ಳುತ್ತದೆ.

ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಇರುವ ಪ್ರತಿಯೊಬ್ಬರೂ ಮನುಷ್ಯರು. ಜಾತಿಯನ್ನು ಮೆಟ್ಟಿನಿಂತ ದಾರ್ಶನಿಕರ, ಸಮಾಜ ಸುಧಾರಕರ ಮೂರ್ತಿ ಸ್ಥಾಪಿಸಿ, ಮೆರವಣಿಗೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಇವರು ನಮ್ಮ ಮನದಲ್ಲಿ ನೆಲೆಯಾಗಬೇಕು. ಇವರ ತತ್ವ, ಸಿದ್ಧಾಂತಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದರೆ ಮಾತ್ರ ಇವರನ್ನು ನಾವು ಆರಾಧಿಸುವುದಕ್ಕೂ ಒಂದು ಅರ್ಥ ಬರುವುದು. ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮಹಾನ್ ವ್ಯಕ್ತಿಗಳನ್ನು ನಾವು ಗೌರವಿಸುತ್ತೇವೆ, ಆರಾಧಿಸುತ್ತೇವೆ ಎಂದಾದರೆ ಜಾತಿ ವ್ಯವಸ್ಥೆಯಿಂದ ನಾವು ಹೊರ ಬರಲೇಬೇಕು. ಬೇರೆಯವರ ಜೊತೆ ಜಾತಿ ಕೇಳುವ ಕೆಟ್ಟ ಚಟವನ್ನು ಪ್ರತಿಯೊಬ್ಬರು ಮೊದಲು ಬಿಡಬೇಕು. ನೀವು ಬದಲಾಗಬೇಕು ಎಂದು ಬಯಸಿದರೆ ನಿಮ್ಮೊಳಗಿರುವ ಜಾತಿಯ ಪೀಡೆಯನ್ನು ಹೊರದಬ್ಬಬೇಕು. ಶಿಕ್ಷಣ ಬರೀ ಅಂಕಪಟ್ಟಿಗಳಿಗೆ ಸೀಮಿತ ಅಲ್ಲ. ಶಿಕ್ಷಣ ಪಡೆದಿದ್ದಿದ್ದೇವೆ ಎಂದ ಮೇಲೆ ಈ ಜಾತಿ-ಧರ್ಮಗಳ ಉರುಳಿನಿಂದ ಹೊರಬರಲೇ ಬೇಕು. ವಿಶ್ವಮಾನವರಾಗಲು ಪ್ರಯತ್ನಿಸಬೇಕು. ದೇಶವೆಂದರೆ ಭಾರತದ ನಕ್ಷೆಯಲ್ಲ ಅಥವಾ ಗಡಿಯೂ ಅಲ್ಲ. ದೇಶ ಎಂದರೆ ಜನ. ದೇಶಪ್ರೇಮವೆಂದರೆ ಜನರನ್ನು ಪ್ರೀತಿಸು, ಗೌರವಿಸು, ಸಮಾನತೆಯಿಂದ ಕಾಣು ಎಂದರ್ಥ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಯೋಗಿನಿ ಮಚ್ಚಿನ

contributor

Similar News