ಉತ್ತರಾಖಂಡದ ಪಟ್ಟಣಗಳ ತಾಳಿಕೆ ಸಾಮರ್ಥ್ಯ ನಿರ್ಧರಿಸಲು ಸಮಿತಿ: ವ್ಯರ್ಥ ಕಸರತ್ತೇ

Update: 2023-09-05 06:46 GMT

ಇತ್ತೀಚಿನ ಪತ್ರಿಕೆಯ ವರದಿಯ ಪ್ರಕಾರ, ಉತ್ತರಾಖಂಡ ಸರಕಾರ, ರಾಜ್ಯದಲ್ಲಿನ ವಿವಿಧ ನಗರ ಕೇಂದ್ರಗಳ ತಾಳಿಕೆ ಸಾಮರ್ಥ್ಯವನ್ನು ಅಂದರೆ, ಜನಸಂಖ್ಯಾ ಗಾತ್ರ ಎಷ್ಟಿದ್ದರೆ ಸೂಕ್ತ ಎಂಬುದನ್ನು ನಿರ್ಧರಿಸಲು ಸಮಿತಿ ರಚನೆಗೆ ಮುಂದಾಗಿದೆ. ಮೇಲ್ನೋಟಕ್ಕೆ ಇದು ಸರಿಯಾದ ಮತ್ತು ಹೆಚ್ಚು ಅಗತ್ಯವಿರುವ ಕ್ರಮದಂತೆ ತೋರುತ್ತದೆ, ಏಕೆಂದರೆ ಅನೇಕ ಪರ್ವತ ಪ್ರದೇಶದ ಪಟ್ಟಣಗಳು ತಮ್ಮ ತಾಳಿಕೆ ಸಾಮರ್ಥ್ಯವನ್ನು ಮೀರಿ ಹೆಚ್ಚಿನ ಜನಸಂಖ್ಯೆ ಬೆಳವಣಿಗೆಯ ಸಮಸ್ಯೆ ಯನ್ನು ಎದುರಿಸುತ್ತಿವೆ. ಕೆಲವು ಪಟ್ಟಣಗಳು ಮತ್ತು ನಗರಗಳಂತೂ ಈಗಾಗಲೇ ತಮ್ಮ ಇಂಥ ಸಾಮರ್ಥ್ಯವನ್ನು ಮೀರಿರಬಹುದು ಎಂಬ ಆತಂಕವೂ ಇದೆ.

ಅವು ಎದುರಿಸುತ್ತಿರುವ ದೀರ್ಘಕಾಲಿಕ ಸಮಸ್ಯೆಗಳೇ ಇದನ್ನು ಸೂಚಿಸುತ್ತವೆ. ನೀರಿನ ಕೊರತೆ, ವಸತಿ ಮತ್ತು ಇತರ ಅಗತ್ಯಗಳಿಗಾಗಿ ಭೂಮಿ ಲಭ್ಯವಿಲ್ಲದಿರುವುದು, ಹೆಚ್ಚುತ್ತಿರುವ ತ್ಯಾಜ್ಯ ನಿರ್ವಹಣೆ ನಿಭಾಯಿಸುವಲ್ಲಿ ವೈಫಲ್ಯ, ಟ್ರಾಫಿಕ್ ಜಾಮ್ ಇತ್ಯಾದಿ ಹಲವು ತೊಂದರೆಗಳಿಗೆ ಸಿಲುಕಿ ಬಳಲುತ್ತಿರುವ ಪ್ರದೇಶಗಳಿವೆ.

ಇಲ್ಲಿ ಗೊಂದಲವಿರುವುದು, ಈ ಬೆಳವಣಿಗೆಯನ್ನು ಹೇಗೆ ಎದುರಿಸುತ್ತೇವೆ? ಈ ಸ್ಥಳಗಳಿಂದ ಒಂದಿಷ್ಟು ಪ್ರಮಾಣದ ಜನರನ್ನು ಸ್ಥಳಾಂತರಿಸಬೇಕೇ ಅಥವಾ ಅದು ಆಗದ ವಿಷಯವೇ? ಈ ಸ್ಥಳಗಳಲ್ಲಿ ಹೆಚ್ಚಿನ ಜನರು ಬಂದು ನೆಲೆಸುವುದನ್ನು ತಡೆಯಬೇಕೆ ಬೇಡವೆ? ಅಂತಹ ಕಠಿಣ ಕ್ರಮವನ್ನು ಸಮರ್ಥಿಸಲು ಯಾವುದೇ ಕಾನೂನು ಅಧಿಕಾರ ಅಥವಾ ದಾರಿಗಳಿವೆಯೇ? ಎಂಬ ವಿಚಾರವಾಗಿ.

ಪಟ್ಟಣಗಳು ಮತ್ತು ನಗರಗಳಲ್ಲಿನ ಪರಿಸ್ಥಿತಿಯನ್ನು ವಿವರಿಸಲು ಅವುಗಳ ತಾಳಿಕೆ ಸಾಮರ್ಥ್ಯದ ಪರಿಕಲ್ಪನೆಯನ್ನು ಹೆಚ್ಚು ಬಳಸಲಾಗುತ್ತಿರುವಾಗ ಮತ್ತು ಭೂಮಿಯಲ್ಲಿ ಹೆಚ್ಚು ಸಾಮಾನ್ಯ ನೆಲೆಯಲ್ಲಿ ಅನ್ವಯಿಸುವುದಕ್ಕೆ ಇದು ಕಷ್ಟಕರ ಪರಿಕಲ್ಪನೆಯಾಗಿರುವಾಗ, ನಿಜವಾಗಿಯೂ ಇದು ಏನನ್ನು ಸೂಚಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಸಾಮಾನ್ಯವಾಗಿ ಬಳಸುವ ವ್ಯಾಖ್ಯಾನವನ್ನು ಉಲ್ಲೇಖಿಸುವುದಾದರೆ, ಪರಿಸರದ ತಾಳಿಕೆ ಸಾಮರ್ಥ್ಯ ಎಂಬುದು ಗರಿಷ್ಠ ಜನಸಂಖ್ಯೆಯ ಗಾತ್ರವಾಗಿದೆ. ಇದು ಆಹಾರ, ವಾಸಸ್ಥಾನ, ನೀರು ಮತ್ತು ಲಭ್ಯವಿರುವ ಇತರ ಸಂಪನ್ಮೂಲಗಳನ್ನು ನಿರ್ದಿಷ್ಟ ಪರಿಸರದಿಂದ ಉಳಿಸಿಕೊಳ್ಳಬಹುದು. ತಾಳಿಕೆ ಸಾಮರ್ಥ್ಯವನ್ನು ಪರಿಸರದ ಗರಿಷ್ಠ ಹೊರೆ ಎಂದು ವ್ಯಾಖ್ಯಾನಿಸಲಾಗುತ್ತದೆ.

ಪರಿಕಲ್ಪನೆಯ ಮೇಲ್ನೋಟದ ವಿಶ್ಲೇಷಣೆ ಕೂಡ ಅದನ್ನು ಮಾನವ ಮತ್ತು ಸಾಮಾಜಿಕ ವ್ಯವಸ್ಥೆಗಳಿಗೆ ಅನ್ವಯಿಸುವಲ್ಲಿ ಇರುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ.

ಮೊದಲನೆಯದಾಗಿ, ಮಾನವ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಸಂಪನ್ಮೂಲಗಳು ಸ್ಥಿರವಾಗಿಲ್ಲ. ಅವು ಸಾಕಷ್ಟು ಮಟ್ಟಿಗೆ ಬದಲಾಗುತ್ತಲೇ ಇರುತ್ತವೆ. ಉದಾಹರಣೆಗೆ, ಸ್ಥಳೀಯ ಆಹಾರ ಉತ್ಪಾದನೆಯಲ್ಲಿನ ಕೊರತೆಯನ್ನು ಸಹಸ್ರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ವ್ಯಾಪಾರ ಮತ್ತು ವಾಣಿಜ್ಯ ವ್ಯವಸ್ಥೆಯ ಮೂಲಕ ಹೊರಗಿನಿಂದ ಆಮದು ಮಾಡಿಕೊಂಡು ಬಗೆಹರಿಸಬಹುದು. ವಾಸ್ತವವಾಗಿ ನಗರೀಕರಣ ಪ್ರಕ್ರಿಯೆ ಗ್ರಾಮಾಂತರದಲ್ಲಿ ಹೆಚ್ಚುವರಿ ಆಹಾರ ಉತ್ಪಾದನೆ ಮತ್ತು ವ್ಯಾಪಾರ ವ್ಯವಸ್ಥೆಗಳ ಮೂಲಕ ನಗರ ಪ್ರದೇಶಗಳಿಗೆ ಅದು ಲಭ್ಯವಾಗುವಂತೆ ಮಾಡಿರುವ ಮೂಲಕ ಸುಗಮವಾಗಿದೆ. ಎಲ್ಲಿ ಸಂಪನ್ಮೂಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲಿ ತಂತ್ರಜ್ಞಾನ ಪರಿಹಾರವನ್ನು ಒದಗಿಸುತ್ತದೆ. ಉದಾಹರಣೆಗೆ, ಗುರುತ್ವಾಕರ್ಷಣೆಯ ಹರಿವನ್ನು ಬಳಸಿಕೊಂಡು ಕಾಲುವೆಗಳು ಮತ್ತು ಪೈಪ್‌ಲೈನ್‌ಗಳ ಮೂಲಕ ಅಥವಾ ಭೂಪ್ರದೇಶದ ಸನ್ನಿವೇಶಕ್ಕೆ ಅನುಗುಣವಾಗಿ ಪಂಪ್‌ಗಳ ಬಳಕೆಯಿಂದ ಕಡಿಮೆ ಮತ್ತು ದೂರದವರೆಗೆ ಕೊಂಡೊಯ್ಯುವ ಮೂಲಕ ನೀರಿನ ಕೊರತೆ ನೀಗಿಸಬಹುದು.

ಸಂಪನ್ಮೂಲಗಳನ್ನು ಹೆಚ್ಚಿಸಲು ಮತ್ತು ಹೊಸ ಸಂಪನ್ಮೂಲಗಳನ್ನು ಸೃಷ್ಟಿಸಲು ಕೂಡ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಕಳೆದ ಶತಮಾನದಲ್ಲಿ ಎಪ್ಪತ್ತರ ದಶಕದಲ್ಲಿ ಆಹಾರ ಧಾನ್ಯ ಉತ್ಪಾದನೆಯನ್ನು ಬಹುಪಟ್ಟು ಹೆಚ್ಚಿಸಲು ಮತ್ತು ವ್ಯಾಪಕವಾದ ಆಹಾರದ ಕೊರತೆಯನ್ನು ತಡೆಗಟ್ಟಲು ಸಹಾಯ ಮಾಡಿದ ‘ಹಸಿರು ಕ್ರಾಂತಿ’ ಎಂದು ಕರೆಯಲ್ಪಡುವ ಬೀಜ ಗೊಬ್ಬರ ಪ್ಯಾಕೇಜ್ ಇದಕ್ಕೆ ಉತ್ತಮ ಉದಾಹರಣೆ.

ತಾಳಿಕೆ ಸಾಮರ್ಥ್ಯದ ಪರಿಕಲ್ಪನೆ ಪ್ರಾಣಿ ಸಂರಕ್ಷಣೆ ಮತ್ತು ರಾಷ್ಟ್ರೀಯ ಉದ್ಯಾನವನಗಳಂಥ ಆವೃತ್ತ ವ್ಯವಸ್ಥೆಗಳಲ್ಲಿ ಬಳಸಲು ಸೂಕ್ತವಾಗಿರುತ್ತದೆ. ಇಲ್ಲಿ ಪರಭಕ್ಷಕ ಜಾತಿಯ ಗರಿಷ್ಠ ಸಂಖ್ಯೆ (ತಾಳಿಕೆ ಸಾಮರ್ಥ್ಯ) ಬೇಟೆಯ ನೆಲೆಯನ್ನು ಆಧರಿಸಿದೆ. ಸೈದ್ಧಾಂತಿಕವಾಗಿ, ತಾಳಿಕೆ ಸಾಮರ್ಥ್ಯ ವಿವಿಧ ರೀತಿಯ ಸಂಪನ್ಮೂಲಗಳ - ಆಹಾರ, ನೀರು, ಭೂಮಿ, ಶುದ್ಧ ಗಾಳಿ ಇತ್ಯಾದಿ - ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇದು ಅಂತಿಮವಾಗಿ ಕನಿಷ್ಠ ಪೂರೈಕೆಯಲ್ಲಿರುವ ಸಂಪನ್ಮೂಲದಿಂದ ನಿರ್ಧರಿಸಲ್ಪಡುತ್ತದೆ.

ಉದಾಹರಣೆಗೆ, ಆವರಣದೊಳಗಿನ ವ್ಯವಸ್ಥೆ ಸಾಕಷ್ಟು ಆಹಾರ, ಭೂಮಿ ಮತ್ತು ಶುದ್ಧ ಗಾಳಿಯನ್ನು ಹೊಂದಿರಬಹುದು, ಆದರೆ ನೀರಿನ ಪೂರೈಕೆ ಮಾತ್ರ ಸೀಮಿತವಾಗಿರಬಹುದು. ಆದ್ದರಿಂದ ಸ್ಥಳದ ತಾಳಿಕೆ ಸಾಮರ್ಥ್ಯವನ್ನು ನೀರಿನ ಲಭ್ಯತೆಯಿಂದ ನಿರ್ಧರಿಸಲಾಗುತ್ತದೆ. ತೆರೆದ ವ್ಯವಸ್ಥೆಗಳಿಗೆ ಈ ಪರಿಕಲ್ಪನೆಯನ್ನು ಅನ್ವಯಿಸುವುದು ಸಾಕಷ್ಟು ಸಮಸ್ಯಾತ್ಮಕವಾಗಿದೆ, ಏಕೆಂದರೆ ಮೇಲೆ ವಾದಿಸಿದಂತೆ, ತಂತ್ರಜ್ಞಾನದ ಹಸ್ತಕ್ಷೇಪ ಮತ್ತು ಮಾರುಕಟ್ಟೆಯಂತಹ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳು ಅದನ್ನು ಗಮನಾರ್ಹ ರೀತಿಯಲ್ಲಿ ಮಾರ್ಪಡಿಸಬಹುದು.

ಸಾಮಾಜಿಕ ಮತ್ತು ಮಾನವ ವ್ಯವಸ್ಥೆಗಳಿಗೆ ತಾಳಿಕೆ ಸಾಮರ್ಥ್ಯದ ಪ್ರಾಯೋಗಿಕ ಅನ್ವಯಿಸುವಿಕೆಗೆ ಬರುವುದಾದರೆ, ಉತ್ತರಾಖಂಡದಲ್ಲಿನ ಎರಡು ಪ್ರಯತ್ನಗಳ ಬಗ್ಗೆ ನನಗೆ ತಿಳಿದಿದೆ.

ಹಲವಾರು ಸಂಸ್ಥೆಗಳ ಜೊತೆ ಸೇರಿ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟ್ಟಿಟ್ಯೂಟ್ (NEERI) ನಡೆಸಿದ ಡೂನ್ ಕಣಿವೆಯ ತಾಳಿಕೆ ಸಾಮರ್ಥ್ಯದ ಸಮಗ್ರ ಅಧ್ಯಯನ ಅವುಗಳಲ್ಲಿ ಒಂದು. ವರದಿಯನ್ನು 1996ರಲ್ಲಿ ಅಥವಾ ಅದರ ನಂತರ ಅಧ್ಯಯನವನ್ನು ಪ್ರಾಯೋಜಿಸಿದ ಪರಿಸರ ಸಚಿವಾಲಯಕ್ಕೆ ಸಲ್ಲಿಸಲಾಯಿತು.

ಎರಡನೆಯದು, 1997-98ರಲ್ಲಿ ಡೂನ್ ಕಣಿವೆಗಾಗಿ ಸುಪ್ರೀಂ ಕೋರ್ಟ್ ಮಾನಿಟರಿಂಗ್ ಕಮಿಟಿಯ ಆದೇಶದ ಮೇರೆಗೆ ಎಲ್‌ಬಿಎಸ್ ನ್ಯಾಷನಲ್ ಅಕಾಡಮಿ ಆಫ್ ಅಡ್ಮಿನಿಸ್ಟ್ರೇಷನ್ ಕೈಗೊಂಡ ಮಸ್ಸೂರಿಯ ತಾಳಿಕೆ ಸಾಮರ್ಥ್ಯದ ಅಧ್ಯಯನ. ಅದು 2001ರಲ್ಲಿ ಪ್ರಕಟವಾಯಿತು. ಆಶ್ಚರ್ಯಕರವಾಗಿ, ಮಸ್ಸೂರಿ ಅಧ್ಯಯನ ಯಾವುದೇ ಉಲ್ಲೇಖವನ್ನು ಹೊಂದಿಲ್ಲ. NEERI ಅಧ್ಯಯನ ಅದರ ವರದಿಯಲ್ಲಿ ಮಸ್ಸೂರಿಯ ಡೇಟಾವನ್ನು ಸೇರಿಸಿದೆ. NEERI ಅಧ್ಯಯನ ವಿವಿಧ ಪರಿಸರ ಡೊಮೇನ್‌ಗಳು ಮತ್ತು ಸಮಸ್ಯೆಗಳ ಕುರಿತು ಪರಿಮಾಣಾತ್ಮಕ ಮಾಹಿತಿಯ ಸಂಪತ್ತನ್ನು ಹೊಂದಿದೆ; ಆದರೂ ಇದು ಡೂನ್ ಕಣಿವೆಯ ತಾಳಿಕೆ ಸಾಮರ್ಥ್ಯಕ್ಕೆ ಒಂದು ಮಿತಿಯನ್ನು ಹಾಕುವುದನ್ನು ತಡೆಯುತ್ತದೆ.

ಪರಿಕಲ್ಪನೆಯ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳನ್ನು ಗುರುತಿಸುವ ಮತ್ತು ವಿಶ್ಲೇಷಿಸುವುದರೊಂದಿಗೆ ಮಸ್ಸೂರಿ ಅಧ್ಯಯನ ತಾಳಿಕೆ ಸಾಮರ್ಥ್ಯವನ್ನು ಪ್ರಮಾಣೀಕರಿಸುವಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಜನಸಂಖ್ಯೆ, ಪ್ರವಾಸಿಗರ ಆಗಮನ, ನೀರಿನ ಲಭ್ಯತೆ, ಭೂಪ್ರದೇಶದ ಡೇಟಾವನ್ನು ವಿಶ್ಲೇಷಿಸಿದ ನಂತರ, ನೀರಿನ ಲಭ್ಯತೆಯ ಆಧಾರದ ಮೇಲೆ ಪಟ್ಟಣದ ತಾಳಿಕೆ ಸಾಮರ್ಥ್ಯ 46,666 ವ್ಯಕ್ತಿಗಳಿಗೆ ಮತ್ತು 9,844 ರಾತ್ರಿಯ ಪ್ರವಾಸಿಗರಿಗೆ 1997ರಲ್ಲಿ ಸೂಕ್ತವಾಗಿತ್ತು ಎಂದು ತೀರ್ಮಾನಿಸಿದೆ. 1997ರಲ್ಲಿ ಜನಸಂಖ್ಯೆಯನ್ನು 40,892 ಎಂದು ಅಂದಾಜಿಸಿದೆ. ಈಗ ಅದು 55,735 ಅಥವಾ 2021ರಲ್ಲಿ 62,757 (ಶೇ.2.05 ಅಥವಾ ಶೇ.2.6ರಷ್ಟು ವಾರ್ಷಿಕ ಬೆಳವಣಿಗೆ ದರವನ್ನು ಅವಲಂಬಿಸಿ) ಏರಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ನೀರಿನ ಲಭ್ಯತೆಯ ವಿಷಯದಲ್ಲಿ ಮಸ್ಸೂರಿಯ ಜನಸಂಖ್ಯೆ 1997ರಲ್ಲಿನ ತಾಳಿಕೆ ಸಾಮರ್ಥ್ಯವನ್ನು ಮೀರುವುದಿಲ್ಲ, ಆದರೆ ಅದು 2021ರಲ್ಲಿ, ಪಟ್ಟಣಕ್ಕೆ ಪ್ರವಾಸಿಗರ ಒಳಹರಿವು ಗಣನೆಗೆ ತೆಗೆದುಕೊಂಡರೆ, ವಿಶೇಷವಾಗಿ ಗರಿಷ್ಠ ಪ್ರವಾಸಿ ಸಮಯವಾದ ಎಪ್ರಿಲ್‌ನಿಂದ ಜುಲೈ ಅವಧಿಯಲ್ಲಿ ಅದರ ತಾಳಿಕೆ ಸಾಮರ್ಥ್ಯವನ್ನು ಮೀರಿರುತ್ತದೆ.

ಈ ಪರಿಸ್ಥಿತಿಯನ್ನು ಎದುರಿಸುವಾಗ ಉದ್ಭವಿಸುವ ಪ್ರಶ್ನೆಯೆಂದರೆ, ಪರಿಸ್ಥಿತಿಯನ್ನು ಹೇಗೆ ಎದುರಿಸುವುದು ಎಂಬುದು. ತಾಳಿಕೆ ಸಾಮರ್ಥ್ಯದ ಅಧ್ಯಯನ ಕೈಗೊಳ್ಳಲು ಸರಕಾರ ಪ್ರಸ್ತಾಪಿಸುವ ರಾಜ್ಯದ ಹೆಚ್ಚಿನ ಪಟ್ಟಣಗಳಲ್ಲಿ ಇರುವುದು ಇದೇ ಪರಿಸ್ಥಿತಿ.

ಈ ಸ್ಥಳಗಳನ್ನು ನಿರ್ಜನಗೊಳಿಸುವುದು, ಆದಷ್ಟೂ ಪ್ರವಾಸೋದ್ಯಮದ ಹೆಸರಲ್ಲಿ ಜನರ ಬರುವಿಕೆ ಹೆಚ್ಚದಂತೆ ನಿರ್ಬಂಧಿಸುವುದು ಸರಕಾರ ಕೈಗೊಳ್ಳಬಹುದಾದ ಒಂದು ಕ್ರಮವಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ ಸರಕಾರ ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಜನರು ಬರುವಂತೆ ಪ್ರೋತ್ಸಾಹಿಸುತ್ತಿದೆ ಮತ್ತು ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಶಾಲವಾದ ರಸ್ತೆಗಳು ಮತ್ತು ರೋಪ್‌ವೇಗಳಂತಹ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಇತರ ಯಾವುದೇ ಕ್ರಮಗಳೂ ಸಂಪೂರ್ಣ ನಿರರ್ಥಕ ಎಂಬುದು ಸಾಕಷ್ಟು ಸ್ಪಷ್ಟವಾಗಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಬಿ.ಕೆ. ಜೋಶಿ

contributor

Similar News