ಬಿಜೆಪಿಗಿಂತ ಅಧಿಕ ಸಾಲ ಪಡೆದ ಕಾಂಗ್ರೆಸ್ ಸರಕಾರ

Update: 2023-12-05 04:41 GMT

Photo: twitter

ಬೆಂಗಳೂರು, ಡಿ.4: ಹಿಂದಿನ ಬಿಜೆಪಿ ಸರಕಾರವು ಎಪ್ರಿಲ್-ಅಕ್ಟೋಬರ್ (2022)ನಲ್ಲಿ ಪಡೆದಿದ್ದ ಸಾಲಕ್ಕಿಂತಲೂ ಈಗಿನ ಕಾಂಗ್ರೆಸ್ ಸರಕಾರವು ಏಳೇ ತಿಂಗಳಿನಲ್ಲಿ 2,576.82 ಕೋಟಿ ರೂ. ಹೆಚ್ಚು ಸಾಲ ಪಡೆದಿರುವುದು ಇದೀಗ ಬಹಿರಂಗವಾಗಿದೆ.

2023-24ನೇ ಸಾಲಿನ ಎಪ್ರಿಲ್-ಅಕ್ಟೋಬರ್ ಅಂತ್ಯಕ್ಕೆ ಒಟ್ಟಾರೆ 7,399.60 ಕೋಟಿ ರೂ. ಸಾಲವನ್ನು ಪಡೆದಿದೆ. ಹಿಂದಿನ ಬಿಜೆಪಿ ಸರಕಾರವು 2022ರ ಎಪ್ರಿಲ್-ಅಕ್ಟೋಬರ್ ಅಂತ್ಯಕ್ಕೆ ಒಟ್ಟಾರೆ 4,822.78 ಕೋಟಿ ರೂ. ಸಾಲ ಪಡೆದಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರ ಎಪ್ರಿಲ್-ಅಕ್ಟೋಬರ್‌ನಲ್ಲಿ 2,576.82 ಕೋಟಿ ರೂ. ಹೆಚ್ಚು ಸಾಲವನ್ನು ಪಡೆದಂತಾಗಿದೆ. ಸೆಪ್ಟಂಬರ್ 2023ರ ಅಂತ್ಯಕ್ಕೆ 1,191.10 ಕೋಟಿ ರೂ. ಸಾಲ ಪಡೆದಿದ್ದ ಸರಕಾರವು ಅಕ್ಟೋಬರ್ ಅಂತ್ಯಕ್ಕೆ 6,208.5 ಕೋಟಿ ರೂ. ಸಾಲ ಪಡೆದಿದೆ.

ರಾಜ್ಯದ ವಿತ್ತೀಯ ಪರಿಸ್ಥಿತಿ ಕುರಿತು ಆರ್ಥಿಕ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಈ ವಿವರಗಳಿವೆ. ಸಾರ್ವಜನಿಕ ಸಾಲವಾಗಿ ಎಪ್ರಿಲ್‌ನಲ್ಲಿ 262.40 ಕೋಟಿ ರೂ. ಸಾಲ ಮಾಡಿತ್ತು. ಮೇ ತಿಂಗಳಲ್ಲಿ 181.42 ಕೋಟಿ ರೂ. ಸಾಲ ಎತ್ತಿದ್ದರೇ ಜೂನ್‌ನಲ್ಲಿ 158.47 ಕೋಟಿ ರೂ. ಸಾಲ ಪಡೆದಿತ್ತು. ಜುಲೈನಲ್ಲಿ 40.73 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿತ್ತು. ಆಗಸ್ಟ್ ತಿಂಗಳಲ್ಲಿ 228.02 ಕೋಟಿ ರೂ. ಸಾಲ ಮಾಡಿದ್ದರೆ, ಸೆಪ್ಟಂಬರ್‌ನಲ್ಲಿ ಸುಮಾರು 235 ಕೋಟಿ ರೂ. ಸಾಲ ಮಾಡಿದೆ ಎಂಬುದು ಆರ್ಥಿಕ ಇಲಾಖೆಯ ಅಂಕಿ ಅಂಶದಿಂದ ತಿಳಿದು ಬಂದಿದೆ.

ಎಪ್ರಿಲ್ 2023ರಲ್ಲಿ 262.40 ಕೋಟಿ ರೂ., ಮೇ ತಿಂಗಳಿನಲ್ಲಿ 443.82 ಕೋಟಿ ರೂ., ಜೂನ್‌ನಲ್ಲಿ 602.29 ಕೋಟಿ ರೂ., ಜುಲೈನಲ್ಲಿ 643.02 ಕೋಟಿ ರೂ., ಆಗಸ್ಟ್‌ನಲ್ಲಿ 871.04 ಕೋಟಿ ರೂ., ಸೆಪ್ಟಂಬರ್‌ನಲ್ಲಿ 1,191.10 ಕೋಟಿ ರೂ. ಮತ್ತು ಅಕ್ಟೋಬರ್ ಅಂತ್ಯಕ್ಕೆ 7,399.60 ಕೋಟಿ ರೂ. ಸಾಲ ಪಡೆದಿರುವುದು ಗೊತ್ತಾಗಿದೆ.

ಎಪ್ರಿಲ್ 2023ರಲ್ಲಿ 262.40 ಕೋಟಿ ರೂ. ಸಾಲ ಪಡೆದಿದ್ದ ಸರಕಾರವು ಮೇ ನಲ್ಲಿ 443.82 ಕೋಟಿ ರೂ. ಸಾಲ ಎತ್ತಿದೆ. ಅಂದರೆ, ಒಂದೇ ತಿಂಗಳಲ್ಲಿ 181.42 ಕೋಟಿ ರೂ. ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡಿದೆ. ಅದೇ ರೀತಿ ಜೂನ್‌ನಲ್ಲಿ 158.82 ಕೋಟಿ ರೂ., ಜುಲೈನಲ್ಲಿ 40.73 ಕೋಟಿ ರೂ., ಆಗಸ್ಟ್‌ನಲ್ಲಿ 228.01 ಕೋಟಿ ರೂ., ಸೆಪ್ಟಂಬರ್‌ನಲ್ಲಿ 320.09 ಕೋಟಿ ರೂ., ಅಕ್ಟೋಬರ್‌ನಲ್ಲಿ 6,208.5 ಕೋಟಿ ರೂ. ಸಾಲ ಪಡೆದಿರುವುದು ತಿಳಿದು ಬಂದಿದೆ.

ಸ್ವಂತ ತೆರಿಗೆ ರಾಜಸ್ವವು 2023ರ ಎಪ್ರಿಲ್-

ಅಕ್ಟೋಬರ್‌ವರೆಗೆ 900,235.10 ಕೋಟಿ ರೂ. ಇದೆ. 2022-23ರ ಎಪ್ರಿಲ್-ಅಕ್ಟೋಬರ್‌ವರೆಗೆ 79,515.82 ಕೋಟಿ ರೂ. ಸಂಗ್ರಹಿಸಿದೆ. ವಾಣಿಜ್ಯ ತೆರಿಗೆ 52,768.17 ಕೋಟಿ ರೂ. ಸಂಗ್ರಹಿಸಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಇದೇ ಅವಧಿಯಲ್ಲಿ 47,053.70 ಕೋಟಿ ರೂ. ಸಂಗ್ರಹಿಸಿತ್ತು.

ಅಬಕಾರಿ ಆದಾಯದಲ್ಲಿ 19,302.25 ಕೋಟಿ ರೂ. ಸಂಗ್ರಹಿಸಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯ ಎಪ್ರಿಲ್-ಅಕ್ಟೋಬರ್‌ನಲ್ಲಿ 17,090.62 ಕೋಟಿ ರೂ. ಸಂಗ್ರಹಿಸಿತ್ತು. ಮೋಟರ್ ವಾಹನ ತೆರಿಗೆಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್ ಅಂತ್ಯಕ್ಕೆ 6,301.48 ಕೋಟಿ ರೂ. ಇದ್ದರೆ 2022-23ರ ಎಪ್ರಿಲ್-ಅಕ್ಟೋಬರ್ ಅಂತ್ಯಕ್ಕೆ 5,373.01 ಕೋಟಿ ರೂ. ಇತ್ತು. ಮುದ್ರಾಂಕ ಮತ್ತು ನೋಂದಣಿ ತೆರಿಗೆಯಲ್ಲಿ 10,940.06 ಕೋಟಿ ರೂ. ಇತ್ತು. 2022ರ 23ರ ಎಪ್ರಿಲ್-ಅಕ್ಟೋಬರ್‌ನಲ್ಲಿ 9,558.51 ಕೋಟಿ ರೂ. ಇತ್ತು.

ಕೇಂದ್ರ ಸರಕಾರದಿಂದ ಸಹಾಯಾನುದಾನಕ್ಕೆ ಸಂಬಂಧಿಸಿದಂತೆ 2023ರ ಎಪ್ರಿಲ್ ಅಕ್ಟೋಬರ್ ಅವಧಿಯಲ್ಲಿ 6,785.08 ಕೋಟಿ ರೂ. ಇದೆ. 2022-23ರ ಎಪ್ರಿಲ್-ಅಕ್ಟೋಬರ್ ಅವಧಿಯಲ್ಲಿ 14,872.35 ಕೋಟಿ ರೂ. ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 8,087.27 ಕೋಟಿ ರೂ. ಕಡಿಮೆಯಾಗಿದೆ.

ಕೇಂದ್ರ ಸರಕಾರದ ತೆರಿಗೆಗೆ ಸಂಬಂಧಿಸಿದಂತೆ 20234 ಎಪ್ರಿಲ್-ಅಕ್ಟೋಬರ್‌ನಲ್ಲಿ 19,270.86 ಕೋಟಿ ರೂ. ಇದ್ದರೆ 2022-23ರ ಎಪ್ರಿಲ್ ಅಕ್ಟೋಬರ್‌ನಲ್ಲಿ 15,844.09 ಕೋಟಿ ರೂ. ಇತ್ತು. ಈ ಬಾರಿಯ ಹಣಕಾಸು ನಿರ್ವಹಣೆಗಾಗಿ ಕಾಂಗ್ರೆಸ್ ಸರಕಾರ ಸಾಲವನ್ನು ಬಹುವಾಗಿ ನೆಚ್ಚಿ ಕೊಂಡಿದೆ. ಇದಕ್ಕೆ ಪುಷ್ಠಿ ಎಂಬಂತೆ ಈ ಬಾರಿ ಬಜೆಟ್ ಮಂಡನೆ ವೇಳೆಯಲ್ಲೇ ಹೆಚ್ಚಿನ ಸಾಲದ ಮೊರೆ ಹೋಗುವುದಾಗಿ ಹೇಳಿತ್ತು.

ಇದಕ್ಕಾಗಿ 2023-24ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಚಿನ ಸಾಲದ ಮೊರೆ ಹೋಗಿದ್ದರು. ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ 2023-24ರ ಸಾಲಿನಲ್ಲಿ ಒಟ್ಟು ಅಂದಾಜು 85,818 ಕೋಟಿ ಸಾಲ ಮಾಡಲು ನಿರ್ಧರಿಸಿತ್ತು.

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ 2023-24ರಲ್ಲಿ ಅಂದಾಜು 77,750 ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್ ಸರಕಾರ ಹೊಸ ಬಜೆಟ್‌ನಲ್ಲಿ ಒಟ್ಟು ಸಾಲದ ಮೊತ್ತವನ್ನು 85,818 ಕೋಟಿ ರೂ.ಗೆ ಏರಿಕೆ ಮಾಡಿರುವುದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News