ಸಂಸ್ಕೃತ ಕಾಲೇಜನ್ನು ತುಳು ಭಾಷಾ ಅಲ್ಪಸಂಖ್ಯಾತ ಸಂಸ್ಥೆಯೆಂದು ಪರಿಗಣಿಸಿ

Update: 2023-09-16 03:15 GMT
Editor : Safwan | Byline : ಜಿ.ಮಹಾಂತೇಶ್

ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠ ವೇದಾಂತ ಗುರುಕುಲಂ ಸಂಸ್ಕೃತ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತ ಸಂಸ್ಥೆಯೆಂದು ಪರಿಗಣಿಸಿ ಮಾನ್ಯತೆ, ಸ್ಥಾನಮಾನ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.

ಸಾಂವಿಧಾನಿಕ ಮಾನ್ಯತೆ ಇಲ್ಲದೆ, ಸರಕಾರದ ಪ್ರೋತ್ಸಾಹವಿಲ್ಲದೆ, ಅಲ್ಪಸಂಖ್ಯಾತರ ಭಾಷೆಯಾಗಿ ಉಳಿದು ತುಳು ಭಾಷೆ ನಲುಗಿದೆ. ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ತುಳು ಭಾಷಿಕರು ಒತ್ತಾಯ ಮಾಡುತ್ತಿರುವ ನಡುವೆಯೇ ಪೂರ್ಣ ಪ್ರಜ್ಞ ವಿದ್ಯಾಪೀಠದ ಸಂಸ್ಕೃತ ಕಾಲೇಜು ಪ್ರಾಂಶುಪಾಲರು ಬರೆದಿರುವ ಈ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಸಂಸ್ಕೃತ ವಿಷಯವನ್ನು ಬೋಧಿಸುತ್ತಿರುವ ಈ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ಕೋರಿರುವುದು ಸಹ ಉನ್ನತ ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೂರ್ಣ ಪ್ರಜ್ಞ ವಿದ್ಯಾಪೀಠದ ವೇದಾಂತ ಗುರುಕುಲಂ ಸಂಸ್ಕೃತ ವಿಷಯವನ್ನು ಬೋಧಿಸುತ್ತಿದೆ. ಈ ಕಾಲೇಜನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಟ್ರಸ್ಟಿಯಾಗಿರುವ ಪೇಜಾವರ ಅದೋಕ್ಷಜ ಟ್ರಸ್ಟ್ ಮುನ್ನಡೆಸುತ್ತಿದೆ. ಅಲ್ಲದೇ ಈ ಕಾಲೇಜಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯವು ಮಾನ್ಯತೆ ನೀಡಿದೆ. ಸಂಸ್ಕೃತದ ವಿವಿಧ ವಿಷಯಗಳಲ್ಲಿ ಬಿಎ ಮತ್ತು ಎಂಎ ಕೋರ್ಸ್ಗಳನ್ನು ನಡೆಸುತ್ತಿದೆ.

ಈ ಕಾಲೇಜಿಗೆ ತುಳು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯನ್ನಾಗಿ ಚಾಲ್ತಿಯಲ್ಲಿರುವ ಕಾಯ್ದೆ, ನಿಯಮಗಳ ಅಡಿಯಲ್ಲಿ ಪರಿಗಣಿಸಿ ಮಾನ್ಯತೆ ನೀಡಬೇಕು ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನೇತೃತ್ವದ ತಂಡವು ಈಗಾಗಲೇ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.

ಮೋಹನ್ ಆಳ್ವ ವರದಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ಈಗಾಗಲೇ ಸರಕಾರವು ಸೂಚಿಸಿದೆ. ಸುಮಾರು ಒಂದು ಕೋಟಿ ಜನ ತುಳು ಭಾಷಿಕರಿದ್ದಾರೆ. ೧೯೯೪ರಲ್ಲಿ ವೀರಪ್ಪಮೊಯ್ಲಿ ತುಳು ಅಕಾಡಮಿ ಆರಂಭಿಸಿದ್ದರು. ೨೦೦೭ರಲ್ಲಿ ಕೇರಳ ಸರಕಾರ ತುಳು ಅಕಾಡಮಿ ಆರಂಭಿಸಿತು. ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ೧೩೩ ಜಾಗತಿಕ ಭಾಷೆಗಳ ಪೈಕಿ ೧೭ ಭಾರತೀಯ ಭಾಷೆಗಳಿವೆ. ಅದರಲ್ಲಿ ತುಳು ಭಾಷೆ ಇದೆ ಎಂದು ವಿಧಾನ ಮಂಡಲದ ಅಧಿವೇಶನದಲ್ಲಿ ಅಶೋಕ್ ಕುಮಾರ್ ರೈ ಅವರು ವಿವರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಜಿ.ಮಹಾಂತೇಶ್

contributor

Similar News