ಖಾಸಗಿ ಕೈಗಾರಿಕೆಗಳಲ್ಲಿಯೂ ಕನ್ನಡಿಗರ ನೇಮಕಾತಿ ಕಡ್ಡಾಯ
ಬೆಂಗಳೂರು: ಸರಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳಲು ನಿಯಮಗಳಿಗೆ ತಿದ್ದುಪಡಿ ತಂದಲ್ಲಿ ಸಂವಿಧಾನದ ಅನುಚ್ಛೇಧ 19ರ (1) (ಜಿ) ಉಪಬಂಧಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಕಾನೂನು ಇಲಾಖೆಯು ಎಚ್ಚರಿಸಿದೆ.
ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಕೈಗಾರಿಕೆಗಳು ಆರಂಭಿಸುವ ಮುನ್ನವೇ ಮಾಡಿಕೊಳ್ಳುವ ಮೂಲ ಒಪ್ಪಂದದಲ್ಲಿ ಕನ್ನಡಿಗರು ಮತ್ತು ವಿಶೇಷಚೇತನರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂಬ ಆದೇಶ ಜಾರಿಯಲ್ಲಿದೆ. ಈ ಆದೇಶಕ್ಕೆ ಬದಲಾವಣೆ ತರಲು ಕಾಂಗ್ರೆಸ್ ಸರಕಾರವು ಮುಂದಾಗಿದೆ.
ಈ ಕುರಿತು ಕಾರ್ಮಿಕ ಇಲಾಖೆಯು ಸಲ್ಲಿಸಿದ್ದ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961ಕ್ಕೆ ತಿದ್ದುಪಡಿ ಪ್ರಸ್ತಾವವನ್ನು ಪರಿಶೀಲಿಸಿರುವ ಕಾನೂನು ಇಲಾಖೆಯು ಸಂವಿಧಾನ ಉಲ್ಲಂಘನೆ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ‘The-file.in’ಗೆ ಟಿಪ್ಪಣಿ ಹಾಳೆಯೊಂದು (ಸಂ ವ್ಯಾ ಶಾ ಇ 16 ಅಶಾರ 2024) ಲಭ್ಯವಾಗಿದೆ.
‘ಈಗ ಪ್ರಸ್ತಾಪಿಸಲಾಗಿರುವ ತಿದ್ದುಪಡಿಯಲ್ಲಿ ಸರಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳುವ ಉಪಬಂಧವು ಭಾರತ ಸಂವಿಧಾನದ ಅನುಚ್ಛೇಧ 19ರ (1) (ಜಿ) ಉಪಬಂಧಗಳನ್ನು ಉಲ್ಲಂಘಿಸುತ್ತದೆ,’ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡಿಗ ಪದದ ಪರಿಭಾಷೆ ಹಾಗೂ ಸರಕಾರದಿಂದ ಯಾವುದೇ ರಿಯಾಯಿತಿ, ಪ್ರಯೋಜನ, ವಿನಾಯಿತಿ ಪಡೆಯದ ಖಾಸಗಿ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನೇ ನೇಮಕಾತಿ ಮಾಡಿಕೊಳ್ಳುವ ಉಪಬಂಧದ ಕಾನೂನಾತ್ಮಕತೆ ಪ್ರಶ್ನೆ ಎದುರಾಗಲಿದೆ ಎಂದೂ ಹೇಳಿರುವುದು ತಿಳಿದು ಬಂದಿದೆ.
ಈ ಸಂಬಂಧ ಕಾನೂನು ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ನಂತರ ಕಡತವನ್ನು ಇಲಾಖೆಗೆ ಸಲ್ಲಿಸಬಹುದು ಎಂದು ಅಭಿಪ್ರಾಯಿಸಿದೆ.