ನಿಯಮಕ್ಕೆ ವಿರುದ್ಧವಾಗಿ ಒಂದೇ ಜಡ್ಜ್ ಎದುರು ಆ 8 ಕೇಸುಗಳು!

ಹಿರಿಯ ವಕೀಲ ದುಷ್ಯಂತ್ ದವೆ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಬರೆದಿರುವ ಬಹಿರಂಗ ಪತ್ರ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ. ಹೇಗೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನೀಡುವ ನಿಯಮಗಳಿಗೆ ವ್ಯತಿರಿಕ್ತವಾಗಿ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳು ಒಂದೇ ನ್ಯಾಯಾಧೀಶರ ಮುಂದೆ ಹೋಗುತ್ತಿವೆ ಎಂಬ ವಿಚಾರದೆಡೆಗೆ ದವೆ ಅವರ ಪತ್ರ ಗಮನ ಸೆಳೆದಿದೆ.

Update: 2023-12-11 06:44 GMT

 ✍article-14.com

ಈ ದೇಶದ ಎಲ್ಲಾ ಸ್ವಾಯತ್ತ ಸಂಸ್ಥೆಗಳೂ ಬಲಹೀನವಾಗುತ್ತಿರುವ ಹೊತ್ತಲ್ಲಿ, ಸರಕಾರದ ಸೂತ್ರಕ್ಕೆ ಕುಣಿಯುತ್ತಿರುವ ಹೊತ್ತಲ್ಲಿ ಸಣ್ಣ ಭರವಸೆ ಇರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ.

ಆದರೆ ಅಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಜನತೆ ನಂಬಿಕೆ ಕಳೆದುಕೊಳ್ಳುವಂಥ ವಿದ್ಯಮಾನಗಳು ಕಾಣಿಸತೊಡಗಿರುವುದು ಆತಂಕಕಾರಿ.

ಇಂಥ ಆತಂಕ ಪ್ರಜಾಸತ್ತೆಯ ಮೇಲೆ ನಂಬಿಕೆಯುಳ್ಳ ಎಲ್ಲರನ್ನೂ ಕಾಡುತ್ತಿರುವಾಗಲೇ, ಹಿರಿಯ ವಕೀಲ ದುಷ್ಯಂತ್ ದವೆ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಬರೆದಿರುವ ಬಹಿರಂಗ ಪತ್ರ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.

ಹೇಗೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನೀಡುವ ನಿಯಮಗಳಿಗೆ ವ್ಯತಿರಿಕ್ತವಾಗಿ ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳು ಒಂದೇ ನ್ಯಾಯಾಧೀಶರ ಮುಂದೆ ಹೋಗುತ್ತಿವೆ ಎಂಬ ವಿಚಾರದೆಡೆಗೆ ದವೆ ಅವರ ಪತ್ರ ಗಮನ ಸೆಳೆದಿದೆ.

ಹಾಗೆ ಮತ್ತೆ ಮತ್ತೆ ಒಬ್ಬರೇ ನ್ಯಾಯಾಧೀಶರ ಮುಂದೆ ಹೋಗಿರುವ ಕೇಸುಗಳು ಯಾವುವು? ಅಲ್ಲಿ ಪಾಲನೆಯಾಗದ ನಿಯಮಗಳೇನು? ಎಂಬುದು ಯೋಚಿಸಬೇಕಿರುವ ಪ್ರಶ್ನೆಗಳಾಗಿವೆ.

ಈ ನಡೆ ಎತ್ತುವ ಪ್ರಶ್ನೆಗಳೇನು? ಒಟ್ಟು ನ್ಯಾಯಾಂಗ ವ್ಯವಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ವಿದ್ಯಮಾನಗಳು ಎಂಥವು?

ಜನರಲ್ಲಿ ಅಪಾರ ವಿಶ್ವಾಸ ಮೂಡಿಸಿರುವ ಈಗಿನ ಸಿಜೆಐ ಚಂದ್ರಚೂಡ್ ಅವರ ನಾಯಕತ್ವದಲ್ಲಿಯೂ ಹೀಗೇಕೆ ಆಗುತ್ತಿದೆ? ಮತ್ತು ಈ ಬೆಳವಣಿಗೆ ಏನನ್ನು ಸೂಚಿಸುತ್ತಿದೆ?

► ಮೊದಲು, ದುಷ್ಯಂತ್ ದವೆ ಬರೆದಿರುವ ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳೇನು ಎಂಬುದನ್ನು ನೋಡೋಣ.

1. ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ರೀತಿಯ ಬಗ್ಗೆ ದವೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2. ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ಉಲ್ಲಂಘಿಸಿ, ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂಬುದು ದವೆ ಅವರ ದೂರು.

3. ಒಂದು ಪೀಠ ವಿಚಾರಣೆಗೆ ಲಭ್ಯವಿದ್ದರೂ ಮತ್ತೊಂದು ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗುತ್ತಿದೆ. ನ್ಯಾಯಾಲಯ ಸಂಖ್ಯೆ 2, 4, 6, 7ರ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ನಿಯಮಾವಳಿ ಕಡೆಗಣಿಸಿ ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ.

4.ಹೀಗೆ ಮಾಡುವಾಗ ಮೊದಲ ಕೋರಂ ಹಿರಿತನವನ್ನೂ ಕಡೆಗಣಿಸಲಾಗುತ್ತಿದೆ.

5. ಒಂದು ಪೀಠದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವುದು ಸೂಕ್ತವಲ್ಲ.

6. ನಿಯಮಾವಳಿಗಳ ಪ್ರಕಾರ ಸಿಜೆಐ ಅವರು ಮಾತ್ರವೇ ಪ್ರಕರಣಗಳನ್ನು ವರ್ಗಾಯಿಸುವ ಅಧಿಕಾರ ಚಲಾಯಿಸಬಹುದು. ಪೀಠದ ಸದಸ್ಯರು ಲಭ್ಯವಿದ್ದರೆ ಮತ್ತೊಂದು ಪೀಠಕ್ಕೆ ವರ್ಗಾಯಿಸುವ ಅಧಿಕಾರ ಚಲಾಯಿಸುವಂತಿಲ್ಲ.

7. ಹೀಗೆ ವರ್ಗಾವಣೆಯಾದ ಪ್ರಕರಣಗಳು ಮಾನವ ಹಕ್ಕುಗಳು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಇತ್ಯಾದಿಗಳ ಬಗೆಗಿನ ಪ್ರಕರಣಗಳಾಗಿವೆ.

8. ಹೀಗೆ ಪ್ರಕರಣಗಳನ್ನು ವರ್ಗಾಯಿಸುವ ಅಭ್ಯಾಸ ಅತ್ಯಂತ ಗೌರವ ಹೊಂದಿರುವ ಸಂಸ್ಥೆಗೆ ಒಳ್ಳೆಯದಲ್ಲ. ಆದ್ದರಿಂದ, ಮಾಸ್ಟರ್ ಆಫ್ ರೋಸ್ಟರ್ ಆಗಿರುವ ಸಿಜೆಐ ಅವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದವೆ ಆಗ್ರಹಿಸಿದ್ದಾರೆ.

9. ನಿಮ್ಮ ನಾಯಕತ್ವದಲ್ಲಿ ಸುಪ್ರೀಂಕೋರ್ಟಿನಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ ಎಂದೂ ಅವರು ಸಿಜೆಐ ಡಿ.ವೈ. ಚಂದ್ರಚೂಡ್ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ನ್ಯಾ. ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠ ಈ ಹಿಂದೆ ವಿಚಾರಣೆ ನಡೆಸಿದ ಪ್ರಕರಣಗಳನ್ನು ಅವರಿಗಿಂತ ಕಿರಿಯರಾದ ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ನ್ಯಾಯಪೀಠಕ್ಕೆ ತಪ್ಪಾಗಿ ವರ್ಗಾಯಿಸಲಾಗುತ್ತಿದೆ ಎಂದು ಹಿರಿಯ ವಕೀಲರು ಹೇಳಿಕೆ ನೀಡಿದ ಬಳಿಕ ಈ ಪತ್ರ ಬರೆಯಲಾಗಿದೆ.

ಇದಲ್ಲದೆ, ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಹಾಗೂ ಅವರಿಗೆ ಸುಪ್ರೀಂ ಕೋರ್ಟ್ ಭಡ್ತಿ ನೀಡುವ ವಿಚಾರದಲ್ಲಿ ಕೊಲಿಜಿಯಂನ ಶಿಫಾರಸುಗಳಿಗೆ ಸಂಬಂಧಿಸಿ ಕೇಂದ್ರ ಸರಕಾರದ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣವನ್ನು ಈಗಾಗಲೇ ಅದರ ವಿಚಾರಣೆ ನಡೆಸುತ್ತಿದ್ದ ನ್ಯಾ.ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠದಿಂದ ಇದ್ದಕ್ಕಿದ್ದಂತೆ ತೆಗೆದುಹಾಕಲಾಗಿತ್ತು ಮತ್ತು ಅದರ ಬಗ್ಗೆ ನ್ಯಾ. ಕೌಲ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಕರಣವನ್ನು ತಮ್ಮ ಪೀಠದಿಂದ ತೆಗೆದುಹಾಕಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಸಿಜೆಐ ಅವರಿಗೆ ಮಾಹಿತಿ ಇರಬಹುದು. ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಹೇಳದೇ ಇರುವುದು ಉತ್ತಮ ಎಂದು ಹೇಳುವ ಮೂಲಕ ನ್ಯಾ.ಕೌಲ್ ತಮ್ಮ ಅಸಮಾಧಾನ ಹೊರಹಾಕಿದ್ದರು.

ಈ ಎಲ್ಲದರ ಹಿನ್ನೆಲೆಯಲ್ಲಿ ದುಷ್ಯಂತ್ ದವೆ ಅವರ ಪತ್ರ ಮುಖ್ಯವಾದುದಾಗಿದೆ.

ಏನಾಗುತ್ತಿದೆ ಹಾಗಾದರೆ? ಸುಪ್ರೀಂಕೋರ್ಟ್ ನಿಯಮಗಳಿಗೇ ವಿರುದ್ಧವಾಗಿ ಕಳೆದ ನಾಲ್ಕು ತಿಂಗಳಲ್ಲಿ ಕನಿಷ್ಠ 8 ರಾಜಕೀಯ ಸೂಕ್ಷ್ಮ ಪ್ರಕರಣಗಳು ಒಬ್ಬರೇ ನ್ಯಾಯಾಧೀಶರ ಮುಂದೆ ಹೋಗಿರುವುದರ ಅರ್ಥವೇನು?

ಇದಕ್ಕೆ ಸಂಬಂಧಿಸಿದಂತೆ article-14.comನಲ್ಲಿ ತನಿಖಾ ಪತ್ರಕರ್ತ ಸೌರವ್ ದಾಸ್ ವಿವರವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಮೊದಲನೆಯದಾಗಿ, ಕಳೆದ ನಾಲ್ಕು ತಿಂಗಳಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ 8 ಪ್ರಕರಣಗಳು ಹೋಗಿರುವುದು ನ್ಯಾ.ಬೇಲಾ ಎಂ ತ್ರಿವೇದಿ ಅವರ ನೇತೃತ್ವದ ಪೀಠದ ಮುಂದೆ.

2021ರ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 63 ವರ್ಷದ ನ್ಯಾ.ಬೇಲಾ ತ್ರಿವೇದಿ ಅವರು ಪ್ರಸ್ತುತ ಒಟ್ಟು 34 ನ್ಯಾಯಾಧೀಶರಲ್ಲಿ 16ನೇ ಅತಿ ಹಿರಿಯ ನ್ಯಾಯಾಧೀಶರು ಮತ್ತು ಪೀಠದ ನೇತೃತ್ವ ವಹಿಸುವ 17 ನ್ಯಾಯಾಧೀಶರಲ್ಲಿ ಒಬ್ಬರು.

ಅವರು ಗುಜರಾತ್ ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದ ಮೊದಲ ಮಹಿಳಾ ನ್ಯಾಯಾಧೀಶೆ.

2001ರಿಂದ 2014ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸರಕಾರದಲ್ಲಿ ಎರಡು ವರ್ಷ ಕಾನೂನು ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದರು.

► ಇನ್ನು, ನ್ಯಾ.ಬೇಲಾ ಎಂ. ತ್ರಿವೇದಿ ಅವರ ಮುಂದೆ ಬಂದ 8 ಪ್ರಕರಣಗಳು ಯಾವುವು?

► ಉಮರ್ ಖಾಲಿದ್ ಅವರ ಜಾಮೀನು ಅರ್ಜಿ,

► ಯುಎಪಿಎ ನಿಬಂಧನೆಗಳನ್ನು ಪ್ರಶ್ನಿಸುವ ಅರ್ಜಿಗಳು,

► ಹೆದ್ದಾರಿ ಟೆಂಡರ್ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧದ ಹೊಸ ತನಿಖೆಯನ್ನು ವಜಾಗೊಳಿಸುವುದನ್ನು ಪ್ರಶ್ನಿಸಿದ ಅರ್ಜಿಗಳು,

► ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹ ಆರೋಪಿಯಾಗಿರುವ ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಎರಡು ಅರ್ಜಿಗಳು,

► ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿ,

► ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸಲ್ಲಿಸಿದ ವೈದ್ಯಕೀಯ ಜಾಮೀನು ಅರ್ಜಿ,

► ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಸಹ ಆರೋಪಿ ಮಹೇಶ್ ರಾವುತ್ ಜಾಮೀನು ಅರ್ಜಿ.

ನ್ಯಾ.ಬೇಲಾ ಎಂ.ತ್ರಿವೇದಿ ಅವರ ನೇತೃತ್ವದ ಪೀಠದ ಮುಂದೆ ಬಂದ 8 ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯ ಉಲ್ಲಂಘನೆಯಾಗಿದೆ.

ನ್ಯಾ.ಬೇಲಾ ಎಂ.ತ್ರಿವೇದಿ ಅವರ ಪೀಠದ ಎದುರು ಬಂದ ಮೂರು ರಾಜಕೀಯ ಆರೋಪದ ಪ್ರಕರಣಗಳಲ್ಲಿ ಮೊದಲನೆಯದು ಪಳನಿಸ್ವಾಮಿ ಕೇಸ್. ಪಳನಿಸ್ವಾಮಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದ ಎಐಎಡಿಎಂಕೆ ನಾಯಕ.

ಇನ್ನು ಅವರ ವಿರುದ್ಧ ತಮಿಳುನಾಡು ಸರಕಾರ ಅರ್ಜಿ ಸಲ್ಲಿಸಿದ್ದು, ಆಡಳಿತಾರೂಢ ಡಿಎಂಕೆ ಈ ಎರಡೂ ಪಕ್ಷಗಳ ವಿರೋಧಿಯಾಗಿದೆ.

ಎರಡನೆಯ ಪ್ರಕರಣ, 2020ರ ಫೆಬ್ರವರಿಯಲ್ಲಿ ದಿಲ್ಲಿ ಗಲಭೆಯಲ್ಲಿ ಪಾತ್ರವಿತ್ತೆಂಬ ಆರೋಪದ ಮೇಲೆ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವ

ರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ್ದ ದಿಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿ.

ಮೂರನೆಯದು, ಖಾಲಿದ್ ಅವರ ಅರ್ಜಿಗೆ ಹೊಂದಿಕೊಂಡಂತೆಯೇ, ಪತ್ರಕರ್ತರು, ಹೋರಾಟಗಾರರು ಮತ್ತು ಸರಕಾರದ ಟೀಕಾಕಾರರ ವಿರುದ್ಧದ ದುರುಪಯೋಗಕ್ಕಾಗಿ ಕುಖ್ಯಾತವಾಗಿರುವ ಯುಎಪಿಎ ವಿವಿಧ ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳು.

ಈ ಮೂರು ಪ್ರಕರಣಗಳ ವಿಚಾರಣೆಯ ಉದ್ದಕ್ಕೂ ಕಂಡ ಸಾಮಾನ್ಯ ಅಂಶವೆಂದರೆ, ಅವನ್ನು ನ್ಯಾ.ಬೇಲಾ ಎಂ.ತ್ರಿವೇದಿ ಪೀಠದ ಎದುರು ಲಿಸ್ಟಿಂಗ್ ಮಾಡಿದ್ದು. ಇದು ಅರ್ಜಿದಾರರ ಅಚ್ಚರಿಗೂ ಆಕ್ಷೇಪಕ್ಕೂ ಕಾರಣವಾಗಿತ್ತು.

ಈ ಪ್ರಕರಣಗಳನ್ನು ಈ ಹಿಂದೆ ಇತರ ಹಿರಿಯ ನ್ಯಾಯಾಧೀಶರ ನೇತೃತ್ವದ ಪೀಠವು ವಿಚಾರಣೆ ನಡೆಸುತ್ತಿತ್ತು ಮತ್ತು ಕೆಲವೊಮ್ಮೆ ನ್ಯಾ.ಬೇಲಾ ಎಂ.ತ್ರಿವೇದಿ ಅವರೂ ಆ ಪೀಠದಲ್ಲಿದ್ದರು.

ನ್ಯಾ. ಅನಿರುದ್ಧ ಬೋಸ್ ಅವರ ಮುಂದಿರುವ ಪ್ರಕರಣಗಳನ್ನು ಇಲ್ಲಿ ಪಟ್ಟಿ ಮಾಡಿರುವುದು ತಪ್ಪು ಎಂದು ತಮಿಳುನಾಡು ಸರಕಾರವನ್ನು ಪ್ರತಿನಿಧಿಸಿದ್ದ ದುಷ್ಯಂತ್ ದವೆ, ನ್ಯಾ.ಬೇಲಾ ಎಂ.ತ್ರಿವೇದಿ ಅವರಿಗೆ ಹೇಳಿದ್ದರು.

► ನ್ಯಾ.ಬೇಲಾ ಎಂ.ತ್ರಿವೇದಿ ಅವರ ಪೀಠಕ್ಕೆ ಈ ಪ್ರಕರಣಗಳು ವರ್ಗಾವಣೆಯಾಗುವಲ್ಲಿನ ನಿಯಮಗಳ ಉಲ್ಲಂಘನೆ ಏನು?

ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯಲ್ಲಿನ ‘‘ಪ್ರಕರಣಗಳು, ಕೋರಂ ಮತ್ತು ಲಿಸ್ಟಿಂಗ್’’ ನಿಯಮ 6ರ ಅಡಿಯಲ್ಲಿ ಹೇಳಿರುವ ಪ್ರಕಾರ,

ಮೊದಲ ಕೋರಂ ಅಂದರೆ, ಪೀಠದ ನೇತೃತ್ವ ವಹಿಸಿರುವ ನ್ಯಾಯಾಧೀಶರು ನಿವೃತ್ತಿಯ ಕಾರಣದಿಂದಾಗಿ ನಿರ್ದಿಷ್ಟ ದಿನ ಲಭ್ಯವಿಲ್ಲದಿದ್ದರೆ, ಎರಡನೇ ಕೋರಂ ಅಂದರೆ ಪೀಠದಲ್ಲಿರುವ ಅತಿ ಹಿರಿಯ ನ್ಯಾಯಾಧೀಶರ ನೇತೃತ್ವದ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಬೇಕು. ಎರಡನೇ ಕೋರಂ ಸಹ ಲಭ್ಯವಿಲ್ಲದಿದ್ದರೆ ಆ ದಿನದಲ್ಲಿ ಪ್ರಕರಣವನ್ನು ಪಟ್ಟಿ ಮಾಡಲಾಗುವುದಿಲ್ಲ.

ಇದನ್ನೇ ದವೆ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದಲ್ಲಿ ಹೇಳಿರುವುದು.

2, 4, 6, 7 ಸಂಖ್ಯೆ ಕೋರ್ಟುಗಳ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳನ್ನು, ನಿಯಮಗಳನ್ನು ಸ್ಪಷ್ಟವಾಗಿ ಕಡೆಗಣಿಸಿ ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ದವೆ ಹೇಳಿದ್ದಾರೆ.

1. ಪಳನಿಸ್ವಾಮಿ ಪ್ರಕರಣದಲ್ಲಿ ತಮಿಳುನಾಡು ಸರಕಾರದ ಅರ್ಜಿಯನ್ನು ನ್ಯಾ.ಅನಿರುದ್ಧ್ ಬೋಸ್ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿತ್ತು. ನ್ಯಾ.ಬೇಲಾ ಎಂ.ತ್ರಿವೇದಿ ಅವರೂ ಆ ಪೀಠದಲ್ಲಿದ್ದರು.

ಸಂಪ್ರದಾಯ ಮತ್ತು ನಿಯಮದಂತೆ ಈ ಪ್ರಕರಣ ನ್ಯಾ.ಬೋಸ್ ಅವರ ಪೀಠದಲ್ಲೇ ಮುಂದುವರಿಯಬೇಕಿತ್ತು.

ಆದರೆ, ಪ್ರಕರಣವನ್ನು ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಯಿತು.

ಆಗ, ನಿಯಮದ ಬಗ್ಗೆ ನೆನಪಿಸಿ, ಲಿಸ್ಟಿಂಗ್ ಬಗ್ಗೆ ಆಕ್ಷೇಪವೆತ್ತಿ ತಮಿಳುನಾಡು ಸರಕಾರದ ವಕೀಲರು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಪತ್ರ ಬರೆದಿದ್ದರು.

2. ಯುಎಪಿಎ ಅಡಿಯಲ್ಲಿ ಪತ್ರಕರ್ತರು ಮತ್ತು ವಕೀಲರ ವಿರುದ್ಧ 2021ರ ಅಕ್ಟೋಬರ್ ಹಿಂಸಾಚಾರದ ವರದಿಗಳು ಮತ್ತು ಸೋಷಿಯಲ್ ಮೀಡಿಯಾ

ಪೋಸ್ಟ್‌ಗಳಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿದ ತ್ರಿಪುರಾ ಪೊಲೀಸರ ಕ್ರಮವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಾಧೀಶರ ನೇತೃತ್ವದ ಪೀಠದಲ್ಲಿ ನಡೆಯುತ್ತಿತ್ತು.

ಇವುಗಳೊಂದಿಗೆ ಟ್ಯಾಗ್ ಮಾಡಲಾದ ಯುಎಪಿಎ ಕೆಲವು ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳು ನ್ಯಾ. ಸಂಜೀವ್ ಖನ್ನಾ ಮತ್ತು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಾಕಿ ಇದ್ದವು.

ಹಾಗಿದ್ದೂ, ಈ ಎಲ್ಲಾ ಪ್ರಕರಣಗಳನ್ನು ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ಪೀಠದ ಮುಂದೆ 15 ಹಿರಿಯ ನ್ಯಾಯಾಧೀಶರನ್ನು ಬೈಪಾಸ್ ಮಾಡಿ ಲಿಸ್ಟಿಂಗ್ ಮಾಡಲಾಯಿತು.

ಈ ವಿಚಾರವನ್ನು ಎತ್ತಿಹೇಳಿದ, ಈ ಪ್ರಕರಣದ ವಕೀಲರಲ್ಲಿ ಒಬ್ಬರಾಗಿದ್ದ ಪ್ರಶಾಂತ್ ಭೂಷಣ್ ಅವರು, ಸ್ಪಷ್ಟೀಕರಣಕ್ಕಾಗಿ ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುವಂತೆ ಕೇಳಿದ್ದಕ್ಕೆ ನ್ಯಾ.ಬೇಲಾ ಎಂ.ತ್ರಿವೇದಿ ನಿರಾಕರಿಸಿದ್ದರು.

3. ರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಜಾಮೀನು ಪ್ರಕರಣ ನಡೆದ ರೀತಿ ಕೂಡ ಸುಪ್ರೀಂ ಕೋರ್ಟ್‌ನ ನಿಯಮಗಳು ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿತ್ತು.

ಆರಂಭದಲ್ಲಿ, ಖಾಲಿದ್ ಅವರ ಮನವಿಯನ್ನು ನ್ಯಾ.ಎ.ಎಸ್.ಬೋಪಣ್ಣ ಅವರ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ಅವರು ಹಿರಿತನದಲ್ಲಿ 7 ನೆಯವರು. ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಾಧೀಶ ನ್ಯಾ.ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕರಣದಿಂದ ಹಿಂದೆ ಸರಿದಿದ್ದರು.

ಕಡೆಗೆ, ಈ ಪ್ರಕರಣವನ್ನು ನ್ಯಾ.ಬೋಪಣ್ಣ ಅವರ ಪೀಠದಿಂದ, ಅವರು ಪ್ರಕರಣವನ್ನು ವರ್ಗಾಯಿಸಲು ಕೇಳದೇ ಇದ್ಧಾಗಲೂ ನ್ಯಾ.ಬೋಸ್ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಯಿತು. ನ್ಯಾ.ಬೇಲಾ ಎಂ.ತ್ರಿವೇದಿ ಕೂಡ ಪೀಠದಲ್ಲಿದ್ದರು.

ಬಳಿಕ ಖಾಲಿದ್ ಪ್ರಕರಣವನ್ನು ನ್ಯಾ.ಬೋಸ್ ಅವರ ಪೀಠದಿಂದ ಸ್ಥಳಾಂತರಿಸಿ, ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಯಿತು.

ಖಾಲಿದ್ ಪರ ವಕೀಲರು ಅಂದು ನ್ಯಾ.ಬೇಲಾ ಎಂ.ತ್ರಿವೇದಿ ಅವರ ಮುಂದೆ ವಾದ ಮಂಡಿಸಲು ಬಯಸಿದ್ದರೂ, ಪೀಠ ಪ್ರಕರಣವನ್ನು ಮುಂದೂಡಿತು. ಪ್ರಕರಣ ಈಗ ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ಪೀಠದ ಮುಂದೆಯೇ ಉಳಿದಿದೆ.

ಖಾಲಿದ್ ಅವರು ತ್ರಿಪುರಾ ಪ್ರಕರಣದಲ್ಲಿ ಸಲ್ಲಿಸಲಾದ ಬಾಕಿ ಇರುವ ಅರ್ಜಿಗಳಂತೆಯೇ ಕೆಲವು ಯುಎಪಿಎ ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಿದ್ದರು.

ಇದೇ ರೀತಿಯ ಪ್ರಕರಣಗಳು ನ್ಯಾ. ಖನ್ನಾ ಮತ್ತು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬಾಕಿಯಿರುವುದರಿಂದ, ಖಾಲಿದ್ ಅವರ ಅರ್ಜಿ ಕೂಡ ಹಳೆಯ ಬಾಕಿ ಇರುವ ಅರ್ಜಿಗಳೊಂದಿಗೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದ ಮುಂದೆ ಹೋಗಬೇಕಿತ್ತು.

ಇಲ್ಲಿಯೂ ಸುಪ್ರೀಂ ಕೋರ್ಟ್ ನಿಯಮ ಉಲ್ಲಂಘನೆಯಾಯಿತು. ಖಾಲಿದ್ ಅವರ ಅರ್ಜಿ ಅದೇ ಕೋರಂಗೆ ಬರಲಿಲ್ಲ. ಬದಲಾಗಿ ಅದನ್ನು ನ್ಯಾ.ಬೋಸ್ ನೇತೃತ್ವದ ಮತ್ತು ನ್ಯಾ.ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಪೀಠ ಖಾಲಿದ್ ಅವರ ಅರ್ಜಿಯನ್ನು ಬಾಕಿ ಉಳಿದಿರುವ ಪ್ರಕರಣಗಳ ಜೊತೆ ಟ್ಯಾಗ್ ಮಾಡಲು ಆದೇಶಿಸಿತು.

ಕಡೆಗೆ, ಅವೆಲ್ಲವೂ ನ್ಯಾ.ಬೇಲಾ ಎಂ.ತ್ರಿವೇದಿ ಅವರ ಪೀಠದ ಮುಂದೆಯೇ ಬಂದಿದ್ದವು.

4. ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸಿಬಿಐ ಪ್ರಶ್ನಿಸಿತ್ತು.

ಮೊದಲು ಇದು ನ್ಯಾ.ಬೋಸ್ ಅವರ ಪೀಠದ ಮುಂದೆ ಲಿಸ್ಟಿಂಗ್ ಆಗಿದ್ದರೂ, ನಂತರ ಆ ಪೀಠದಿಂದ ತೆಗೆದು, ನ್ಯಾ.ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ನ್ಯಾ.ಬೋಸ್ ಅವರು ನಿವೃತ್ತರಾಗದಿದ್ದರೂ ಅಥವಾ ಹಿಂದೆ ಸರಿಯಲು ಬಯಸಿರದಿದ್ದರೂ ಹೀಗೆ ಮಾಡಲಾಯಿತು.

ನ್ಯಾ.ಬೇಲಾ ಎಂ ತ್ರಿವೇದಿ ಅವರ ಪೀಠ ಶಿವಕುಮಾರ್ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪಿನಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿತಾದರೂ, ಸಿಬಿಐ ಅರ್ಜಿಯ ಬಗ್ಗೆ ಎರಡು ವಾರಗಳಲ್ಲಿ ನಿರ್ಧರಿಸುವಂತೆ ಹೈಕೋರ್ಟ್‌ಗೆ ಕೇಳಿತು.

5. ಜೈಲಿನಲ್ಲಿರುವ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಮಹೇಶ್ ರಾವುತ್ ಜಾಮೀನು ಅರ್ಜಿಯಲ್ಲಿ ಕೂಡ ಇದೇ ನಡೆ ಇತ್ತು.

ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಬಂದಾಗ, ಮೊದಲು ನ್ಯಾ.ಬೋಸ್ ಅವರ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಕಡೆಗೆ, ನ್ಯಾ.ಬೋಸ್ ಅವರು ಯಾವುದೇ ಆದೇಶವನ್ನು ನೀಡದೆ ಇರುವಾಗಲೂ, ಪ್ರಕರಣವನ್ನು ನ್ಯಾ.ಬೇಲಾ ಎಂ.ತ್ರಿವೇದಿ ಅವರ ಪೀಠಕ್ಕೆ ವರ್ಗಾಯಿಸಿರುವುದನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್ ಈಗ ತೋರಿಸುತ್ತಿದೆ.

ನ್ಯಾ.ಬೋಸ್ ಈ ವರ್ಷದ ಜುಲೈನಲ್ಲಿ, ಇದೇ ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಾದ ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರಿಗೆ ಜಾಮೀನು ನೀಡಿದ್ದರು. ಮತ್ತೊಬ್ಬ ಆರೋಪಿ ಶೋಮಾ ಸೇನ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನೂ ಅವರ ಪೀಠ ಪರಿಗಣಿಸುತ್ತಿದೆ.

ಇನ್ನು ಚಂದ್ರಬಾಬು ನಾಯ್ಡು ಪ್ರಕರಣ. 370 ಕೋಟಿ ರೂ. ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ಆಂಧ್ರಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬಂಧನಕ್ಕೊಳಗಾದ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಸಿದಾಗ, ನ್ಯಾ.ಅಭಯ್ ಎಸ್. ಓಕಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದಲ್ಲಿ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಗಂಟಿ ವೆಂಕಟ ಸತ್ಯ ಭಾಸ್ಕರ್ ಪ್ರಸಾದ್ ಸಲ್ಲಿಸಿದ ಅರ್ಜಿ ಬಾಕಿಯಿತ್ತು. ಕಡೆಗೆ ಅವರಿಗೆ ಜಾಮೀನು ಸಿಕ್ಕಿತು.

ಆದರೆ ನಾಯ್ಡು ಅವರ ಮನವಿ ನ್ಯಾ.ಓಕಾ ಅವರ ಪೀಠಕ್ಕೆ ಬರಲಿಲ್ಲ. ಬದಲಾಗಿ, ನ್ಯಾ.ಅನಿರುದ್ಧ ಬೋಸ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಪೀಠವು ನಾಯ್ಡು ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಅದಾದ ಒಂದು ತಿಂಗಳ ನಂತರ, ಆಂಧ್ರಪ್ರದೇಶ ಹೈಕೋರ್ಟ್ ನಾಯ್ಡು ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ಅಂಗೀಕರಿಸಿತು. ಅದನ್ನು ಎಪಿಸಿಐಡಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು.

ಮೊದಲು ನ್ಯಾ.ಬೋಸ್ ನೇತೃತ್ವದ ಪೀಠ ನಾಯ್ಡು ಅವರ ಪ್ರಕರಣ ಸೇರಿದಂತೆ ಕೌಶಲ್ಯ-ಅಭಿವೃದ್ಧಿ- ಹಗರಣದ ಪ್ರಕರಣವನ್ನು ವ್ಯಾಪಕವಾಗಿ ಆಲಿಸಿದ್ದರೂ, ಎಪಿಸಿಐಡಿಯ ಸವಾಲನ್ನು ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ಮುಂದೆ ಪಟ್ಟಿ ಮಾಡಲಾಯಿತು.

ಏಳನೇ ಹಿರಿಯ ನ್ಯಾಯಾಧೀಶರಾದ ನ್ಯಾ.ಬೋಪಣ್ಣ ನೇತೃತ್ವದ ಪೀಠ ಈ ಹಿಂದೆ ಜೈಲುವಾಸದಲ್ಲಿರುವ ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸಿದ್ದರೂ, 2023ರ ಅಕ್ಟೋಬರ್ ಮಧ್ಯದಲ್ಲಿ ಅವರು ಸಲ್ಲಿಸಿದ ಹೊಸ ವೈದ್ಯಕೀಯ ಜಾಮೀನು ಅರ್ಜಿಯನ್ನು ನ್ಯಾ.ಬೋಸ್ ಅವರ ಪೀಠದ ಮುಂದೆ ಪಟ್ಟಿ ಮಾಡಲಾಯಿತು. ಪೀಠ ನ್ಯಾ.ತ್ರಿವೇದಿ ಅವರನ್ನು ಒಳಗೊಂಡಿದೆ.

ಬಾಲಾಜಿಯ ಜಾಮೀನು ಅರ್ಜಿಯು ಅಂತಿಮವಾಗಿ ಯಾವುದೇ ವಿವರಣೆಯಿಲ್ಲದೆ ನ್ಯಾ.ಬೋಸ್ ಅವರ ಪೀಠದಿಂದ ನ್ಯಾ.ಬೇಲಾ ಎಂ.ತ್ರಿವೇದಿಯವರ ಪೀಠಕ್ಕೆ ಯಾವುದೇ ವಿವರಣೆಯಿಲ್ಲದೆ ವರ್ಗಾವಣೆಗೊಂಡಿತು. ಪೀಠ, ಬಾಲಾಜಿ ಅವರ ಅನಾರೋಗ್ಯವು ಗಂಭೀರವಾಗಿಲ್ಲ ಎಂದು ಗಮನಿಸಿತು.

ಬಾಲಾಜಿ ಅವರ ವಕೀಲರು ವೈದ್ಯಕೀಯ ಜಾಮೀನು ಅರ್ಜಿಯನ್ನು ಹಿಂಪಡೆಯಲು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರು. ಅದಕ್ಕೆ ಪೀಠ ಸಮ್ಮತಿಸಿತು. ಸುಪ್ರೀಂ ಕೋರ್ಟ್‌ನ ಈ ಕಾರ್ಯವೈಖರಿ ಈಗ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News