ವಸತಿ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲಿ
ಸರಕಾರ ರಾಜ್ಯದ ಎಲ್ಲಾ ವಸತಿ ಶಾಲೆಗಳ ಶೈಕ್ಷಣಿಕ ಬೆಳವಣಿಗೆಗಳ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಿವೃತ್ತ ಶಿಕ್ಷಣ ಸಂಯೋಜಕರು ಅಥವಾ ನಿವೃತ್ತ ಶಿಕ್ಷಕರ ವಿಷಯವಾರು ಒಂದು ತಂಡವನ್ನು ನೇಮಿಸಿಕೊಂಡು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲದೇ ಇದ್ದಲ್ಲಿ ವಸತಿ ಶಾಲೆಗಳಲ್ಲಿ ಅವರು ಮಾಡಿದ್ದೇ ಕೆಲಸ, ಅವರು ಆಡಿದ್ದೇ ಆಟ ಎನ್ನುವ ಸ್ಥಿತಿ ನಿರ್ಮಾಣವಾಗಿ ಬಡ ಮಕ್ಕಳು ಕಷ್ಟ ಅನುಭವಿಸಬೇಕಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳು, ಏಕಲವ್ಯ ಶಾಲೆಗಳು, ಸಾಮಾನ್ಯ ವಸತಿ ಶಾಲೆಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ನಿರ್ವಹಣೆ ಮಾಡಲು ಸರಕಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಂಘದ ಅಡಿಯಲ್ಲಿ ಒಟ್ಟು 833 ವಸತಿ ಶಾಲೆ/ಕಾಲೇಜುಗಳು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿವೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 134 ವಸತಿ ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 6ನೇ ತರಗತಿಯಿಂದ 10ನೇ ತರಗತಿಯವರೆಗೆ ಮತ್ತು ಕೆಲವೊಂದು ಶಾಲೆಗಳಲ್ಲಿ ಪಿಯುಸಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರತೀ ತರಗತಿಗೆ 50ರಿಂದ 60 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ರಾಜ್ಯದಲ್ಲಿ ಇರುವ ಸುಮಾರು ಒಂದು ಸಾವಿರ ವಸತಿ ಶಾಲೆ/ಕಾಲೇಜುಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ ಶಿಕ್ಷಣ ಪೂರೈಸುತ್ತಿದ್ದಾರೆ. ಪ್ರತಿಯೊಂದು ವಸತಿ ಶಾಲೆಗಳಿಗೆ ಸರಕಾರ ಪ್ರಾಂಶುಪಾಲರು, ಶಿಕ್ಷಕರು ಸೇರಿದಂತೆ ಇನ್ನಿತರ ಬೋಧಕೇತರ ಸಿಬ್ಬಂದಿಯನ್ನು ಮಂಜೂರು ಮಾಡಿದ್ದು, ಪೂರ್ಣ ಪ್ರಮಾಣದ ಖಾಯಂ ಸಿಬ್ಬಂದಿಯ ನೇಮಕಾತಿ ಇಲ್ಲದೆ ಅಲ್ಲಿಯೂ ಅತಿಥಿ ಶಿಕ್ಷಕರ ಮೇಲೆ ಅವಲಂಬಿತವಾಗಿ ಶಾಲೆಗಳು ನಡೆಯುತ್ತಿವೆ.
ಸರಕಾರ ಪ್ರತಿಯೊಂದು ವಸತಿ ಶಾಲೆಗಳಿಗೆ ಜಮೀನು, ಶಾಲಾ ಕಟ್ಟಡ, ವಸತಿ ನಿಲಯಗಳು, ಭೋಜನಾಲಯ, ಸಿಬ್ಬಂದಿ, ವಸತಿ ಸಮುಚ್ಚಯ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಲು 15ರಿಂದ 20 ಕೋಟಿ ರೂ. ಅನುದಾನ ಖರ್ಚು ಮಾಡಲಾಗುತ್ತಿದೆ. ಅಲ್ಲದೆ ಪ್ರತಿಯೊಂದು ಮಗುವಿಗೂ ಉಚಿತವಾಗಿ ಊಟ, ವಸತಿ, ಪುಸ್ತಕಗಳು, ಪೆನ್ನು-ಪೆನ್ಸಿಲ್, ಬಟ್ಟೆ, ಶೂ, ಸಾಕ್ಸ್, ಎಣ್ಣೆ, ಸಾಬೂನು ಸೇರಿದಂತೆ ಎಲ್ಲಾ ರೀತಿಯ ಅವಶ್ಯಕ ಸಾಮಗ್ರಿಗಳನ್ನು ಪ್ರತೀ ವರ್ಷ ನೂರಾರು ಕೋಟಿ ರೂ. ಅನುದಾನ ಖರ್ಚು ಮಾಡಿ ಸರಕಾರವೇ ಸರಬರಾಜು ಮಾಡುತ್ತದೆ. ಆದರೆ, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಒದಗಿಸದೇ ಇರುವುದು ಸದರಿ ಶಾಲೆಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದರಲ್ಲಿ ಸ್ವಚ್ಛತಾ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಯ ಕೊರತೆ ಇರುವುದರಿಂದ ಸಮರ್ಪಕ ಶುಚಿಕರವಾದ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲವೆನ್ನುವುದು ಅಲ್ಲಿಯ ಸಿಬ್ಬಂದಿಗಳ ಅನಿಸಿಕೆಯಾಗಿದೆ. ಇದರಿಂದ ಅಲ್ಲಿರುವ ಪ್ರಾಂಶುಪಾಲರು, ಶಿಕ್ಷಕರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಸರಕಾರದ ವಸತಿ ನಿಲಯಗಳಲ್ಲಿ 100 ಮಕ್ಕಳ ಪ್ರವೇಶಕ್ಕೆ ನೀಡುವಷ್ಟೇ ಅಡುಗೆ ಸಿಬ್ಬಂದಿಯನ್ನು 300 ಮಕ್ಕಳು ಇರುವ ವಸತಿ ಶಾಲೆಗಳಿಗೆ ಮಂಜೂರು ಮಾಡಿ, ಅವರಿಂದ ಕೆಲಸ ತೆಗೆದುಕೊಳ್ಳುವ ಮನಸ್ಥಿತಿ ಸರಕಾರಗಳಿಗೆ ಏಕೆ ಬಂದಿದೆಯೋ ತಿಳಿದಿಲ್ಲ.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳ ವ್ಯಾಪ್ತಿಯ ಕನಿಷ್ಠ 25 ರಿಂದ 35 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ವಸತಿ ಶಾಲೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಆಯಾ ಸಮುದಾಯದ ಕಲ್ಯಾಣ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಇಲಾಖೆಗಳೇ ನೋಡಿಕೊಳ್ಳುತ್ತಿವೆ. ಆದರೆ ಸದರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾತ್ರ ನೋಡಿಕೊಳ್ಳುತ್ತಿರುವುದರಿಂದ ಸದರಿ ವಸತಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳ ಪರಿಶೀಲನೆ ಮಾಡಲು ಒಂದು ವ್ಯವಸ್ಥೆಯೇ ಇಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಜಿಲ್ಲಾ ಉಪನಿರ್ದೇಶಕರು ಹಾಗೂ ಕೇತ್ರ ಶಿಕ್ಷಣಾಧಿಕಾರಿಗಳು ಆಡಳಿತಾತ್ಮಕ ವಿಷಯವನ್ನು ನೋಡಿಕೊಂಡರೆ, ಶಿಕ್ಷಣ ಸಂಯೋಜಕರು, ಬಿಆರ್‌ಸಿ, ಸಿಆರ್‌ಸಿಯವರು ದಿನನಿತ್ಯದ ಶಾಲಾ ಶಿಕ್ಷಣ ನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ. ಅಲ್ಲದೆ ಶಿಕ್ಷಕರಿಗೆ ಕಾಲಕಾಲಕ್ಕೆ ಬದಲಾದ ಶೈಕ್ಷಣಿಕ ಚಟುವಟಿಕೆಗಳ ಕುರಿತು ತರಬೇತಿ ನೀಡುವ ವ್ಯವಸ್ಥೆ ಇದೆ. ಆದರೆ ವಸತಿ ಶಾಲೆಗಳ ಶಿಕ್ಷಕರಿಗೆ ಇಂತಹ ಯಾವುದೇ ತರಬೇತಿ ನೀಡುವುದಿಲ್ಲ, ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಬೆಳವಣಿಗೆಗಳ ಪರಿಶೀಲನೆ ಮಾಡಲು ಒಂದು ವ್ಯವಸ್ಥೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಸರಕಾರದ ನೀತಿಯೇನೆಂದರೆ, ವಸತಿ ಶಾಲೆಗಳ ಫಲಿತಾಂಶ ಉತ್ತಮವಾಗಿರುವುದರಿಂದ ಅಲ್ಲಿ ಎಲ್ಲವೂ ಸರಿಯಿದೆ ಎನ್ನುವ ಮನೋಭಾವನೆ, ಆದರೆ ವಾಸ್ತವವಾಗಿ ಅಲ್ಲಿ ಎಲ್ಲವೂ ಸರಿಯಿಲ್ಲ. ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಮಕ್ಕಳ ಇಚ್ಛಾಶಕ್ತಿಯಿಂದ ಬರುತ್ತಲಿದೆ ವಿನಹ ಅಲ್ಲಿರುವ ಶೈಕ್ಷಣಿಕ ಚಟುವಟಿಕೆ ಸರಿಯಿದೆ ಎನ್ನುವ ಕಾರಣಕ್ಕೆ ಅಲ್ಲ ಎನ್ನುವುದು ಸರಕಾರ ಮನವರಿಕೆ ಮಾಡಿಕೊಳ್ಳಬೇಕು. ಬಹುತೇಕ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರು, ಶಿಕ್ಷಕರು ಒಳಒಪ್ಪಂದ ಮಾಡಿಕೊಂಡರೆ ಅಲ್ಲಿ ಯಾವುದೇ ತರಗತಿಗಳು ನಡೆಯುವುದೇ ಇಲ್ಲ, ಯಾಕೆಂದರೆ ಅಲ್ಲಿ ಇದನ್ನು ಪರಿಶೀಲಿಸುವ ವ್ಯವಸ್ಥೆಯೇ ಇಲ್ಲ. ಎಂದಾದರೂ ಒಂದು ದಿನ ಶಾಲೆಗಳಿಗೆ ಭೇಟಿ ನೀಡುವ ಜಿಲ್ಲಾ ಮಟ್ಟದ ಅಧಿಕಾರಿಗಳ ಮುಂದೆ ಮಕ್ಕಳು ತಮ್ಮ ಅಳಲು ತೋಡಿಕೊಳ್ಳದಂತೆ ಹೆದರಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡ ಮಕ್ಕಳು ಎಷ್ಟೇ ಕಷ್ಟವಾದರೂ ಯಾರ ಮುಂದೆಯೂ ಬಾಯಿ ಬಿಡದಂತಹ ಸ್ಥಿತಿ ಇದೆ.
ಕೋಲಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿ, ದೇಶದಲ್ಲಿಯೇ ನಿಷೇಧಕ್ಕೊಳಗಾದ ಪದ್ಧತಿಯನ್ನು ಮಕ್ಕಳಿಂದ ಅನುಸರಿಸಿದ ಶಿಕ್ಷಕರ ಮನಸ್ಥಿತಿ ಎಂತಹದ್ದು ಇರಬಹುದು ಎನ್ನುವುದನ್ನು ಕೇಳಿಯೇ ಆಶ್ಚರ್ಯವಾಗಿದೆ. ಇಂತಹ ಶಿಕ್ಷಕರು ಮಕ್ಕಳಿಗೆ ಯಾವ ನೀತಿ ಹೇಳಲು ಸಾಧ್ಯವಾಗಿದೆ.
ಹಾಗಾಗಿ ಸರಕಾರ ರಾಜ್ಯದ ಎಲ್ಲಾ ವಸತಿ ಶಾಲೆಗಳ ಶೈಕ್ಷಣಿಕ ಬೆಳವಣಿಗೆಗಳ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಿವೃತ್ತ ಶಿಕ್ಷಣ ಸಂಯೋಜಕರು ಅಥವಾ ನಿವೃತ್ತ ಶಿಕ್ಷಕರ ವಿಷಯವಾರು ಒಂದು ತಂಡವನ್ನು ನೇಮಿಸಿಕೊಂಡು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲದೇ ಇದ್ದಲ್ಲಿ ವಸತಿ ಶಾಲೆಗಳಲ್ಲಿ ಅವರು ಮಾಡಿದ್ದೇ ಕೆಲಸ, ಅವರು ಆಡಿದ್ದೇ ಆಟ ಎನ್ನುವ ಸ್ಥಿತಿ ನಿರ್ಮಾಣವಾಗಿ ಬಡ ಮಕ್ಕಳು ಕಷ್ಟ ಅನುಭವಿಸಬೇಕಾಗುತ್ತದೆ. ಹೇಗೋ ಎಲ್ಲಾ ಇಲಾಖೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಅವರ ಅಡಿಯಲ್ಲಿಯೇ ವಸತಿ ಶಾಲೆಗಳ ಶೈಕ್ಷಣಿಕ ಬೆಳವಣಿಗೆಗಳ ಪರಿಶೀಲನಾ ವ್ಯವಸ್ಥೆ ಇದ್ದಲ್ಲಿ ಆ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬಹುದು, ಇದರ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಸರಕಾರ ಈ ವಸತಿ ಶಾಲೆಗಳ ಮಕ್ಕಳಿಗೆ ಪುಸ್ತಕ, ಪೆನ್ನು-ಪೆನ್ಸಿಲ್, ಬಟ್ಟೆ, ಶೂ, ಸಾಕ್ಸ್, ಎಣ್ಣೆ, ಸಾಬೂನು, ಬೆಡ್, ಕಾಟ್, ಬೆಡ್‌ಶೀಟ್ ಸೇರಿದಂತೆ ಎಲ್ಲಾ ರೀತಿಯ ಅವಶ್ಯಕ ಸಾಮಗ್ರಿಗಳನ್ನು ಪ್ರತೀ ವರ್ಷ ಸರಬರಾಜು ಮಾಡುತ್ತಿದೆ, ಆದರೆ ಕೇಂದ್ರೀಕೃತ ವ್ಯವಸ್ಥೆಯಿಂದ ಖರೀದಿಸಿ ಸರಬರಾಜು ಮಾಡುವುದರಿಂದ ಶಾಲೆ ಪ್ರಾರಂಭವಾಗಿ ನಾಲ್ಕೈದು ತಿಂಗಳಾದರೂ ಮಕ್ಕಳಿಗೆ ಅವಶ್ಯಕ ಸಾಮಗ್ರಿ ತಲುಪುವುದಿಲ್ಲ, ಇದರಿಂದ ಬಡಮಕ್ಕಳು ತಂದೆ-ತಾಯಿಯವರನ್ನು ಬಿಟ್ಟು ಶಾಲೆಗೆ ಬಂದು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಬದಲಾಗಿ ಸರಕಾರ ಪ್ರತೀ ವರ್ಷ ಈ ಶಾಲೆಗಳಿಗೆ ಶಾಲೆ ಪ್ರಾರಂಭವಾಗುವ ಮೊದಲೇ ಎಲ್ಲಾ ಅವಶ್ಯಕ ಸಾಮಗ್ರಿಗಳನ್ನು ಸರಬರಾಜು ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ ಈ ವಸತಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಲು ಒಬ್ಬ ಸ್ಟಾಫ್ ನರ್ಸ್ ನೇಮಕ ಮಾಡಿಕೊಳ್ಳಲಾಗಿದೆ. ಈ ಶಾಲೆಗಳಲ್ಲಿರುವ ಮಕ್ಕಳಿಗೆ ಬೇಕಾಗುವ ಕನಿಷ್ಠ ಔಷಧಿ ಖರೀದಿಸಲು ಸರಕಾರ ಕಡಿಮೆ ಅನುದಾನ ಒದಗಿಸಲಾಗುತ್ತಿರುವುದರಿಂದ ಮಕ್ಕಳಿಗೆ ಸೂಕ್ತ ಔಷಧಿ ಸಿಗದೆ ಪರದಾಡುವಂತಹ ಸ್ಥಿತಿಯೂ ಬರುತ್ತಿದೆ, ಇದರ ಬದಲಾಗಿ ಎಲ್ಲಾ ವಸತಿ ಶಾಲೆಗಳಿಗೆ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗಳಿಂದ ಉಚಿತ ಔಷಧಿ ಒದಗಿಸುವಂತಹ ಕೆಲಸ ಸರಕಾರ ಮಾಡಬಹುದಾಗಿದೆ. ವಸತಿ ಶಾಲೆಗಳ ಒಳಚರಂಡಿ ವ್ಯವಸ್ಥೆ ಸ್ವಚ್ಛಗೊಳಿಸಲು ಮತ್ತು ಅಗತ್ಯ ರಿಪೇರಿ ಮಾಡಲು, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಹಾಗೂ ವಿದ್ಯುತ್ ದೀಪ ನಿರ್ವಹಣೆ ಮಾಡಲು ಆಯಾ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಬಹುದಾಗಿದೆ.
ಸರಕಾರ ರಾಜ್ಯದ ವಸತಿ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು, ಅಲ್ಲಿಯ ವಿದ್ಯಾರ್ಥಿಗಳಿಗೆ ಧೈರ್ಯದಿಂದ ಓದುವಂತಹ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ, ಬೆಟ್ಟದಷ್ಟು ಮಾಡಿ, ಇಲಿಯಷ್ಟು ಮಾಡಲು ಮೀನಾಮೇಷ ಏತಕ್ಕೆ.