ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ವಿಶ್ರಾಂತ ಉಪ ಕುಲಪತಿ, ಕುಲಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಸಿದ್ಧತೆ
ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಎಚ್ ಮಹೇಶಪ್ಪ, ಕುಲಸಚಿವ ಡಾ.ಕೆ.ಇ. ಪ್ರಕಾಶ್ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮೋದನೆ ಕೋರಲು ಉನ್ನತ ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದೆ.
ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರು ನೀಡಿದ್ದ ವರದಿ ಆಧರಿಸಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ಅವರು ರಾಜ್ಯಪಾಲರ ಅನುಮೋದನೆಗೆ ಕೋರಲು ಮುಂದಾಗಿದ್ದಾರೆ.
ಈ ಕುರಿತು ಶ್ರೀಕರ್ ಅವರು ರಾಜ್ಯಪಾಲರಿಗೆ ಸಲ್ಲಿಕೆ ಮಾಡಲು ಸಿದ್ಧಪಡಿಸಿರುವ ವಿಸ್ತೃತ ಟಿಪ್ಪಣಿಯು(ED 03 TGL 2024) ‘the-file.in’ಗೆ ಲಭ್ಯವಾಗಿದೆ.
ಕರ್ನಾಟಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಚ್.ಬಿ. ವಾಲೀಕಾರ್ ಅವರ ವಿರುದ್ಧದ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಸಂಬಂಧದ ಕಾರ್ಯನಿರ್ವಹಣೆ ವರದಿಯನ್ನು ರಾಜ್ಯಪಾಲರು ಇತ್ತೀಚೆಗಷ್ಟೇ ಕೇಳಿದ್ದರು. ಇದರ ಬೆನ್ನಲ್ಲೇ ಇದೀಗ ವಿಟಿಯುನಲ್ಲಿ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಎಚ್. ಮಹೇಶಪ್ಪ ಮತ್ತು ಕುಲಸಚಿವ ಡಾ.ಕೆ.ಇ. ಪ್ರಕಾಶ್ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮೋದನೆ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಟಿಯುನಲ್ಲಿ ನಡೆದಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವಾರು ಏಕ ಸದಸ್ಯ ಸಮಿತಿಗಳು ಸರಕಾರಕ್ಕೆ ವರದಿ ಸಲ್ಲಿಸಿದ್ದವು. ಈ ಪೈಕಿ ಅಶೋಕ್ ಬಿ. ಹಿಂಚಿಗೇರಿ ಅವರು ಸಲ್ಲಿಸಿದ್ದ ವರದಿ ಆಧರಿಸಿ ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲರ ಅನುಮೋದನೆ ಕೋರಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.
ಆಶೋಕ್ ಬಿ. ಹಿಂಚಿಗೇರಿ ಅವರ ನೇತೃತ್ವದ ಏಕ ಸದಸ್ಯ ಸಮಿತಿಯಲ್ಲಿ ಹಿಂದಿನ ಉಪ ಕುಲಪತಿ ಡಾ.ಎಚ್. ಮಹೇಶಪ್ಪ ಮತ್ತು ಹಿಂದಿನ ಕುಲಸಚಿವ ಡಾ.ಕೆ.ಇ. ಪ್ರಕಾಶ್ ಅವರ ವಿರುದ್ಧ ಸಿವಿಲ್ ದಾವೆ ಹೂಡಲು ಮತ್ತು ನಷ್ಟವನ್ನು ವಸೂಲು ಮಾಡಲು 156ನೇ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.
ಅದರಂತೆ 1994ರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧಿನಿಯಮ ಅಧ್ಯಾಯ -II 3(3)ರ ನಿಯಮಗಳಂತೆ ಸದರಿಯವರ ಮೇಲೆ ಸಿವಿಲ್ ದಾವೆ ಹೂಡಿ ವಿಶ್ವವಿದ್ಯಾಲಯಕ್ಕೆ ಆಗಿರುವ ನಷ್ಟವನ್ನು ವಸೂಲು ಮಾಡಲು ಮತ್ತು ಇಂತಹ ಅವ್ಯವಹಾರಗಳಲ್ಲಿ ತೊಡಗಿರುವ ಉಪ ಕುಲಪತಿಗಳು ಹಾಗೂ ರಿಜಿಸ್ಟ್ರಾರ್‌ಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮೋದನೆ ಕೋರಿದೆ ಎಂದು ಶ್ರೀಕರ್ ಎಂ.ಎಸ್. ಅವರು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ. ಮಹೇಶಪ್ಪ ಅವರ ವಿರುದ್ಧ ಕೇಳಿ ಬಂದಿದ್ದ 24 ಆರೋಪಗಳ ತನಿಖೆ ನಡೆಸಲು ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅವರ ನೇತೃತ್ವದಲ್ಲಿ ತನಿಖೆ ತಂಡ ರಚಿಸಿದ್ದರು.