ಕೊಡಗಿನ ‘ಲಿಚ್ಚಿ’ಗೆ ಹೆಚ್ಚಿದ ಬೇಡಿಕೆ

Update: 2023-12-04 06:50 GMT

ಮಡಿಕೇರಿ: ಕೊಡಗಿನ ಲಿಚ್ಚಿ ಹಣ್ಣಿಗೆ ಬೆಂಗಳೂರು, ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪ್ರತೀ ಕೆ.ಜಿ.ಗೆ 250 ರಿಂದ 300 ರೂ.ವರೆಗೆ ಮಾರಾಟ ವಾಗುತ್ತಿವೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ ಕಳೆದ 20 ವರ್ಷಗಳಿಂದ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. 50 ಕ್ಕೂ ಹೆಚ್ಚು ಮರಗಳಲ್ಲಿ ಲಿಚ್ಚಿ ಹಣ್ಣು ಬೆಳೆದಿದ್ದು ಉತ್ತಮ ಫಸಲು ಕೂಡ ನೀಡುತ್ತಿವೆ.

► ಕೊಡಗಿನ ಲಿಚ್ಚಿಗೆ ಭಾರೀ ಬೇಡಿಕೆ: ಲಿಚ್ಚಿ ಹಣ್ಣಿನ ಮೂಲ ದಕ್ಷಿಣ ಚೀನಾದ ಓಮನ್ ಪ್ರಾಂತ್ಯವಾಗಿದೆ. ಮ್ಯಾನ್ಮಾರ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ,ಥಾಯ್ಲೆಂಡ್ ಹಾಗೂ ಹಾಂಕಾಂಗ್ ದೇಶಗಳಲ್ಲಿ ಲಿಚ್ಚಿ ಹಣ್ಣನ್ನು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಬೆಳೆಯಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ,ಅಸ್ಸಾಂ,ತ್ರಿಪುರ ಹಾಗೂ ಒಡಿಶಾದಲ್ಲಿ ಶೇ. 50ಕ್ಕೂ ಹೆಚ್ಚು ಭಾಗದಲ್ಲಿ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. ವಿಶೇಷವೇನೆಂದರೆ ಉತ್ತರ ಭಾರತದ ರಾಜ್ಯದಲ್ಲಿ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ, ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಆ ಸಮಯದಲ್ಲಿ ಲಿಚ್ಚಿಗೆ ಬೇಡಿಕೆ ಕಡಿಮೆಯಿರುವುದರಿಂದ ಕೆಜಿಗೆ ಬರೀ 60 ರೂ.ಗೆ ಮಾರಾಟವಾಗುತ್ತದೆ. ಆದರೆ ಕೊಡಗು ಜಿಲ್ಲೆಯಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ದೇಶದ ಯಾವ ಭಾಗದಲ್ಲಿಯೂ ಲಿಚ್ಚಿ ಫಸಲು ಇರುವುದಿಲ್ಲ. ಆದ್ದರಿಂದ ಕೊಡಗಿನ ಲಿಚ್ಚಿ ಬೆಳೆಯುವವರು ಹಾಗೂ ವ್ಯಾಪಾರಿಗಳು ಉತ್ತಮ ಲಾಭಗಳಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಲಿಚ್ಚಿ ಬೆಳೆಯುತ್ತಿರುವುದು, ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯಾಗಿದೆ. ಬೆಂಗಳೂರು ಹಾಗೂ ಕೊಡಗಿನ ವಿವಿಧ ಕಡೆಗಳಲ್ಲಿ ಲಿಚ್ಚಿ ಹಣ್ಣು ಕೆಜಿಗೆ 350ರೂ.ಗೆ ಮಾರಾಟವಾಗುತ್ತಿದೆ.

► ಬಾವಲಿ ಕಾಟ,ರಾತ್ರಿ ಕಾವಲು: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯ ಲಿಚ್ಚಿಹಣ್ಣನ್ನು ಟೆಂಡರ್ ಪಡೆದಿರುವ ಲಿಚ್ಚಿ ಹಣ್ಣಿನ ವ್ಯಾಪಾರಿಗಳು, ಲಿಚ್ಚಿ ಉಳಿಸಲು ಹರಸಾಹಸ ಪಡುವಂತಾಗಿದೆ.

ಲಿಚ್ಚಿಗೆ ಬಾವಲಿ ಕಾಟ ತಪ್ಪಿದ್ದಲ್ಲ. ಬಾವಲಿ ಕಾಟ ತಪ್ಪಿಸಲು ವ್ಯಾಪಾರಿಗಳು ಲಿಚ್ಚಿ ಮರಕ್ಕೆ ಬಲೆ ಹಾಕಿ ಹಣ್ಣನ್ನು ಬಾವಲಿಯಿಂದ ಸಂರಕ್ಷಿಸುತ್ತಿದ್ದಾರೆ.

► ಉತ್ತಮ ವಾತಾವರಣ: ಸಮಶೀತೋಷ್ಣ ವಲಯದಲ್ಲಿ ಉತ್ತಮ ಫಲ ನೀಡುವುದರಿಂದ, ಕೊಡಗಿನ ವಾತಾವರಣವು ಲಿಚ್ಚಿ ಬೆಳೆಗೆ ಪೂರಕವಾಗಿದೆ. ಕಸಿ ಮಾಡಿ ಗಿಡಗಳನ್ನು ಬೆಳೆಸಿದರೆ, ಮೂರ್ನಾಲ್ಕು ವರ್ಷಗಳಲ್ಲಿ ಲಿಚ್ಚಿ ಹಣ್ಣು ಫಸಲಿಗೆ ಬರುತ್ತದೆ. ಕೊಡಗಿನಲ್ಲಿ ಲಿಚ್ಚಿ ಹಣ್ಣಿನ ಫಸಲು ಕೊಯ್ಲಿಗೆ ಬರುವುದು ಚಳಿಗಾಲದಲ್ಲಿ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಿಂದ ಚಳಿಗಾಲ ಪ್ರಾರಂಭವಾಗುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಲಿಚ್ಚಿ ಹಣ್ಣು ಡಿಸೆಂಬರ್ ತಿಂಗಳ 15ರ ನಂತರ ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತದೆ.

ಇದೀಗ ಹಣ್ಣಾಗಿರುವ ಲಿಚ್ಚಿಯನ್ನು ಮಾತ್ರ ಕೊಯ್ಲು ಮಾಡಿ ಮಾರಾಟ ಮಾಡುತ್ತಿದ್ದೇವೆ. ಡಿಸೆಂಬರ್ ತಿಂಗಳಲ್ಲಿ ಲಿಚ್ಚಿ ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತದೆ. ಇದೀಗ ಕೊಡಗಿನಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದೇವೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಲಿಚ್ಚಿ ಹಣ್ಣು ಖರೀದಿಸಲು ಬರುತ್ತಿದ್ದಾರೆ.

► ಮಜೀದ್ ಪೊನ್ನತ್ಮೊಟ್ಟೆ, ಲಿಚ್ಚಿ ಹಣ್ಣು ವ್ಯಾಪಾರಿ

ರಸ್ತೆ ಬದಿ ಹಾಗೂ ಅಂಗಡಿಗಳಲ್ಲಿ ಮಾರಾಟ

ಕೇಂದ್ರೀಯ ತೋಟಗಾರಿಕಾ ಇಲಾಖೆಯಿಂದ ಲಿಚ್ಚಿ ಹಣ್ಣು ಟೆಂಡರ್ ಪಡೆದು,ವ್ಯಾಪಾರ ನಡೆಸುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳ ಹಣ್ಣಿನ ವ್ಯಾಪಾರಿಗಳು ಲಿಚ್ಚಿ ಹಣ್ಣನ್ನು ಖರೀದಿಸಿ,ರಸ್ತೆ ಬದಿಗಳಲ್ಲಿ ಹಾಗೂ ಅಂಗಡಿಗಳಲ್ಲಿ 300 ರಿಂದ 350 ರೂ.ವರೆಗೆ ಪ್ರತಿ ಕೆಜಿಗೆ ಮಾರಾಟ ಮಾಡುತ್ತಿದ್ದಾರೆ. ಕೊಡಗಿಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಕೊಡಗಿನ ರುಚಿಕರವಾದ ಲಿಚ್ಚಿ ಹಣ್ಣನ್ನು ಖರೀದಿಸುತ್ತಿದ್ದಾರೆ.

ಲಾಭದಾಯಕ ಬೆಲೆ, ಆಸಕ್ತಿ ತೋರದ ಜಿಲ್ಲೆಯ ಬೆಳೆಗಾರರು

ಲಿಚ್ಚಿ ಲಾಭದಾಯಕ ಬೆಳೆಯಾಗಿದೆ. ಲಿಚ್ಚಿ ಮರವನ್ನು ನೆಟ್ಟು ಸಂರಕ್ಷಿಸಿದರೆ,4 ರಿಂದ 5 ವರ್ಷದೊಳಗೆ ಲಿಚ್ಚಿ ಹಣ್ಣು ಫಸಲು ನೀಡುತ್ತದೆ. ಮೊದಲಿಗೆ ಒಂದು ಮರದಲ್ಲಿ 20 ರಿಂದ 40 ಕೆಜಿ ಹಾಗೂ ಏಳೆಂಟು ವರ್ಷದಲ್ಲಿ ಕೇವಲ ಒಂದೇ ಮರದಲ್ಲಿ 100 ಕೆಜಿಗೂ ಅಧಿಕ ಲಿಚ್ಚಿ ಹಣ್ಣು ಬೆಳೆಯಬಹುದು. ಆದರೆ ಜಿಲ್ಲೆಯ ಬೆಳೆಗಾರರಿಗೆ ಲಿಚ್ಚಿ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗೂ ಯಾರೂ ಕೂಡ ಇದುವರೆಗೆ ಲಿಚ್ಚಿ ಬೆಳೆಯತ್ತ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಕಾಫಿ,ಕರಿಮೆಣಸಿನ ಬೆಲೆ ಕುಸಿತ ನಿರ್ವಹಣೆ ಸಮಸ್ಯೆಯಿಂದ ತೊಂದರೆಗೀಡಾಗಿರುವ ಜಿಲ್ಲೆಯ ಬೆಳೆಗಾರರು ಲಾಭದಾಯಕ ಬೆಳೆಯಾದ ಲಿಚ್ಚಿ ಬೆಳೆಯತ್ತ ಮುಖಮಾಡಿದರೆ,ಖಂಡಿತ ಲಾಭಗಳಿಸಬಹುದಾಗಿದೆ.

► ಟೆಂಡರ್‌ಗಾಗಿ ಬಿಗ್ ಫೈಟ್: ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಭಾರತ ದೇಶದಲ್ಲಿ ಲಿಚ್ಚಿ ಹಣ್ಣು ಲಭ್ಯವಾಗುವ ಏಕೈಕ ಜಿಲ್ಲೆ ಕೊಡಗು ಮಾತ್ರ. ಜಿಲ್ಲೆಯಲ್ಲಿ ಅತೀ ಹೆಚ್ಚು ಲಿಚ್ಚಿ ಬೆಳೆಯುವ ಸ್ಥಳ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯಾಗಿದೆ. ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೇಂದ್ರೀಯ ತೋಟಗಾರಿಕಾ ಇಲಾಖೆ ಬಹಿರಂಗವಾಗಿ ಟೆಂಡರ್ ಮುಖಾಂತರ ಲಿಚ್ಚಿ ಹಣ್ಣನ್ನು ಮಾರಾಟ ಮಾಡುತ್ತದೆ. ಲಿಚ್ಚಿ ಹಣ್ಣಿನ ಹಾಗೂ ಬೇರೆ ವ್ಯಾಪಾರಿಗಳು ಲಿಚ್ಚಿ ಹಣ್ಣು ಟೆಂಡರ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಬಾರಿ 20ಕ್ಕೂ ಅಧಿಕ ಮಂದಿ ಲಿಚ್ಚಿ ಹಣ್ಣು ಟೆಂಡರ್ ಪಡೆಯಲು ಪೈಪೋಟಿ ನಡೆಸಿದ್ದರು. ಕೊನೆಗೆ ಚೀಟಿ ಮುಖಾಂತರ ಲಿಚ್ಚಿ ಹಣ್ಣು ಟೆಂಡರ್ ಮುಕ್ತಾಯಗೊಂಡಿದ್ದು. ಈ ಬಾರಿ 5 ಲಕ್ಷ ರೂ.ಗೆ ಲಿಚ್ಚಿ ಹಣ್ಣು ಟೆಂಡರ್ ಪಡೆದಿದ್ದಾರೆ ಎನ್ನಲಾಗಿದೆ.

ಲಿಚ್ಚಿ ಬೆಳೆ ಲಾಭದಾಯಕವಾಗಿದೆ. ಜಿಲ್ಲೆಯಲ್ಲಿ ಚಳಿಗಾಲದ ವಾತಾವರಣದಲ್ಲಿ ಕೊಯ್ಲಿಗೆ ಬರುವುದರಿಂದ ಕೊಡಗಿನ ಲಿಚ್ಚಿ ಹಣ್ಣಿಗೆ ಉತ್ತಮ ಬೇಡಿಕೆಯಿದೆ. ಕಳೆದ 20 ವರ್ಷಗಳಿಂದ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. ಲಿಚ್ಚಿ ಹಣ್ಣಿನ ಮರಗಳು ಸರಿಯಾದ ಸಮಯಕ್ಕೆ ಹೂ ಬಿಡುತ್ತಿಲ್ಲ. ಹೂ ಬಿಡಲು ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಕೊಡಗಿನಲ್ಲಿ ಲಿಚ್ಚಿ ಹಣ್ಣು ಬೆಳೆಯಲು ಉತ್ತಮ ವಾತಾವರಣವಿದೆ.

► ಮುರಳೀಧರ್, ವಿಜ್ಞಾನಿ ಕೇಂದ್ರೀಯ

ತೋಟಗಾರಿಕಾ ಇಲಾಖೆ ಚೆಟ್ಟಳ್ಳಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News