ಪ್ರಜಾಪ್ರಭುತ್ವವೋ ಶ್ರೀಮಂತರ ಪ್ರಭುತ್ವವೋ?

ಇಂದು ಸರಕಾರಗಳ ಬಡವರ ವಿರೋಧಿ ಮತ್ತು ಉಳ್ಳವರ ಪರವಾದ ನೀತಿಗಳು ಮತ್ತೆ ನಮ್ಮ ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದೊಡ್ಡುತ್ತಿವೆ. ಹಾಗಾಗಿ ಆದಷ್ಟು ಬೇಗ ಜನರು ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ತಮ್ಮದೇ ದೇಶದಲ್ಲಿ ತಮ್ಮದೇ ಜನರಿಂದ ಗುಲಾಮಗಿರಿಗೆ ನೂಕಲ್ಪಡುತ್ತೇವೆ. ಸರಕಾರಗಳಿಗೆ ದೇಶ ಅರ್ಥಾತ್ ಜನರ ಒಳಿತು ಮುಖ್ಯವಾದರೆ, ಒಂದಿಷ್ಟು ಸುಧಾರಣೆಗಳನ್ನು ತಂದರೆ ಎಲ್ಲರೂ ಬದುಕಬಹುದು. ಸರಕಾರವು ಬಡವರ ರಕ್ತ ಹೀರುವ ಬದಲು, ಶ್ರೀಮಂತರಿಂದ ಒಂದಿಷ್ಟುದುಡ್ಡು ವಸೂಲು ಮಾಡಿದರೆ ಇಬ್ಬರಿಗೂ ಒಳಿತಾಗುತ್ತದೆ.

Update: 2023-06-24 04:49 GMT
Editor : Althaf | Byline : ಹರಿರಾಮ್ ಎ

ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಅನೇಕ ಸಾಮಾಜಿಕ ಚಳವಳಿಗಳ ಜೊತೆಗೆ ಸ್ವಾತಂತ್ರ್ಯ ಚಳವಳಿಯು ನಡೆದು ಲಕ್ಷಾಂತರ ಜನರು ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಅನೇಕ ಸಮಸ್ಯೆಗಳಿಂದ ಕೂಡಿದ್ದು ದೇಶವು ಬಡತನ, ಅನಕ್ಷರತೆ, ರೋಗ-ರುಜಿನಗಳಿಂದ ನರಳುತಿತ್ತು. ಹಾಗೆಯೇ ಈ ಎಲ್ಲಾ ಸಮಸ್ಯೆಗಳಿಗೂ ನಾವು ಪರಕೀಯರನ್ನು ಹೊಣೆ ಮಾಡುತ್ತಿದ್ದೆವು ಹಾಗೂ ಇದಕ್ಕೆ ಪರಿಹಾರವು ಸ್ವಾತಂತ್ರ್ಯ ಮತ್ತು ಸ್ವಯಂ ಆಡಳಿತ ಮಾತ್ರ ಎಂದು ಪ್ರತೀ ಭಾರತೀಯನು ನಂಬಿದ್ದನು. ಅದರಂತೆಯೇ ಸ್ವಾತಂತ್ರ್ಯದ ನಂತರದಲ್ಲಿ ನಮ್ಮದೇ ಸರಕಾರಗಳು ಅಸ್ತಿತ್ವಕ್ಕೆ ಬಂದವು. ಆ ಸರಕಾರಗಳು ನಮ್ಮ ದೇಶದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿ ಪ್ರತಿಯೊಬ್ಬ ಭಾರತೀಯನನ್ನು ಸ್ವಾವಲಂಬಿಗಳನ್ನಾಗಿಸಿ ದೇಶವನ್ನು ಶ್ರೀಮಂತಗೊಳಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ದೇಶದ ಸುಧಾರಣೆಗೆ ಬೇಕಾದ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಮಾನವ ಸಂಪನ್ಮೂಲವೂ ನಮ್ಮ ದೇಶದಲ್ಲಿ ಯಥೇಚ್ಛವಾಗಿತ್ತು. ಹಾಗಾಗಿ ಅಧಿಕಾರಕ್ಕೆ ಬಂದ ಸರಕಾರಗಳು ಇವುಗಳನ್ನು ವ್ಯವಸ್ಥಿತವಾಗಿ ಬಳಸಿ ದೇಶದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಚಲನಶೀಲತೆಗೆ ಚಾಲನೆ ನೀಡಿ ಇದರ ಮುಖಾಂತರ ವ್ಯಕ್ತಿ, ಸಮಾಜ ಮತ್ತು ದೇಶದ ಪರಿವರ್ತನೆಗೆ ನಾಂದಿ ಹಾಡಬೇಕಿತ್ತು. ಆದರೆ ಈ ದೇಶದಲ್ಲಿ ನಡೆದದ್ದೇ ಬೇರೆ!

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಸರಕಾರ, ಅಬ್ರಾಹಂ ಲಿಂಕನ್ ಹೇಳುವಂತೆ ‘‘ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ರಚಿತವಾದ ಪ್ರಜೆಗಳ ಸರಕಾರವೇ ಪ್ರಜಾಪ್ರಭುತ್ವ’’. ಆದರೆ ಇಂದು ಅದು ಶ್ರೀಮಂತರಿಂದ ಶ್ರೀಮಂತರಿಗೋಸ್ಕರ ಪ್ರಜೆಗಳ ಮುಖಾಂತರ ಆಯ್ಕೆ ಮಾಡಿಕೊಂಡ ಸರಕಾರವಾಗಿದೆ. ಅಧಿಕಾರಕ್ಕೆ ಬಂದ ಪ್ರತೀ ಸರಕಾರವು ಸುಧಾರಣೆಗಳ ಹೆಸರಿನಲ್ಲಿ ದೇಶದ ಸಂಪತ್ತು ಮತ್ತು ಅವಕಾಶಗಳನ್ನು ಕೆಲವರಿಗೆ ಮಾತ್ರ ಸೀಮಿತಗೊಳಿಸುವ ಕೆಲಸವನ್ನು ಮಾಡುತ್ತ ಬರುತ್ತಿದೆ. ಅದರಲ್ಲೂ 1991-92ರ ನಂತರವಂತೂ ಅದು ಎಗ್ಗಿಲ್ಲದೆ ಸಾಗಿದೆ.

ದೇಶದ ಶೇ. 64 ಗ್ರಾಮೀಣ ಭಾಗದ ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಉದ್ಯೋಗದಲ್ಲಿ ತೊಡಗಿದ್ದಾರೆ. ಅಂದರೆ ದೇಶದ ಪ್ರತೀ ಹತ್ತು ಜನರ ಪೈಕಿ ಆರು ಜನರು ಕೃಷಿಯನ್ನು ಅವಲಂಬಿಸಿದ್ದಾರೆ ಹಾಗೂ ಶೇ. 40 ಮಹಿಳೆಯರು ಕೃಷಿ ಕಾರ್ಮಿಕರಾಗಿದ್ದಾರೆ. 1980ರ ದಶಕದಲ್ಲಿ ಕೃಷಿಯೇತರ ಕೆಲಸಗಳಲ್ಲಿ ತೊಡಗಿದ್ದವರ ಆದಾಯದಲ್ಲಿ ಶೇ. 34ರಷ್ಟು ಕೃಷಿಕರದ್ದಾಗಿತ್ತು. ಆದರೆ ಅದು 1993-94ರಲ್ಲಿ ಶೇ. 25ಕ್ಕೆ ಇಳಿಕೆಯಾಗಿದೆ. 1960ರ ದಶಕದಲ್ಲಿ ಭಾರತವು ಆಹಾರದ ಕೊರತೆಯಿಂದ ನರಳುತ್ತಿತ್ತು. ಆದರೆ ಈಗ ಸರಾಸರಿ ಪ್ರತಿವ್ಯಕ್ತಿಗೂ ಶೇ. 40ರಷ್ಟು ಹೆಚ್ಚು ಆಹಾರ ಉತ್ಪಾದನೆಯಾಗುತ್ತಿದೆ. ಆಶ್ಚರ್ಯ ಎಂದರೆ ನಾವು ಸ್ವ್ವತಂತ್ರ ಗೊಂಡು 75 ವರ್ಷಗಳು ಕಳೆದರೂ ನಮ್ಮ ದೇಶದಲ್ಲಿ ಸರಾಸರಿ ಭೂ ಹಿಡುವಳಿ ಕೇವಲ 1.08 ಹೆಕ್ಟೇರ್. ದೇಶದ ಶೇ. 86 ರೈತರು 0-2 ಹೆಕ್ಟೇರ್ ಭೂಮಿಯ ಒಡೆತನ ಮಾತ್ರ ಹೊಂದಿದ್ದಾರೆ. ಶೇ. 10ರಷ್ಟು ರೈತರಿಗೆ ಮಾತ್ರ ಸರಕಾರಿ ಹಣಕಾಸಿನ ಸಂಸ್ಥೆ ಮತ್ತು ಬ್ಯಾಂಕ್ ಗಳಿಂದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಣ ಸಹಾಯ ಅಥವಾ ಸಾಲ ದೊರೆಯುತ್ತಿದೆ.

ಕೇಂದ್ರ ಸರಕಾರವು ಎಪ್ರಿಲ್ 2013 ಮತ್ತು ಮಾರ್ಚ್ 2021ರ ನಡುವೆ ರೂ. 10.83 ಲಕ್ಷ ಕೋಟಿಯಷ್ಟು ಕೃಷಿಯೇತರ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿತ್ತು. ಆದರೆ ರೈತರು ಕನಿಷ್ಠ ಬೆಲೆ ಮತ್ತು ಸಾಲ ಮನ್ನಾ ಕೇಳಿದರೆ ಲಾಠಿ ಚಾರ್ಜ್ ಮತ್ತು ಗೋಲಿಬಾರ್ ಆಗುತ್ತವೆ. ಇದು ನಾವು ಕೃಷಿ ಕ್ಷೇತ್ರದಲ್ಲಿ ಕಂಡ ಪರಿವರ್ತನೆ!. ಭೂ ಸುಧಾರಣೆ ಮತ್ತು ಮರುಹಂಚಿಕೆ, ಉಳುವವನಿಗೆ ಭೂಮಿಯ ಜೊತೆಗೆ ಅದರ ಮಾಲಕತ್ವ, ಕೃಷಿ ಕಾರ್ಮಿಕರಿಗೆ ಭೂ ಹಂಚಿಕೆ, ದಲ್ಲಾಳಿಗಳ ನಿರ್ಮೂಲನೆ, ಅಗ್ಗದ ದರದಲ್ಲಿ ಸಾಲ, ಬೀಜ ಮತ್ತು ಗೊಬ್ಬರ ವಿತರಣೆ ಹೀಗೆ ರೈತರ ಬದುಕಿನಲ್ಲಿ ಬದಲಾವಣೆ ತರಬಲ್ಲ ಕಾರ್ಯಕ್ರಮಗಳು ಇನ್ನೂ ಬೇಡಿಕೆಗಳಾಗಿಯೇ ಉಳಿದು ಹೋಗಿವೆ!.

ಇನ್ನು ಶಿಕ್ಷಣದ ವಿಷಯಕ್ಕೆ ಬಂದರೆ, ಮೊದಲಿನಿಂದಲೂ ಭಾರತದಲ್ಲಿ ಶಿಕ್ಷಣಕ್ಕೆ ಮಹತ್ವ ಸಿಗದೆ ಇರುವುದು ವಾಸ್ತವ, 1947ರಲ್ಲಿ ಶೇ.12ರಷ್ಟಿದ್ದ ಸಾಕ್ಷರತೆ 2001ರಷ್ಟಿಗೆ ಶೇ. 65ಕ್ಕೆ ಜಿಗಿದರೆ, 2011ರ ಜನಗಣತಿಯ ಪ್ರಕಾರ ಅದು ಶೇ. 74ಕ್ಕೆ ಬಂದು ನಿಂತಿದೆ. 1951ರಲ್ಲಿ 6ರಿಂದ 11 ವರ್ಷಗಳ ನಡುವಿನ ಮಕ್ಕಳ ದಾಖಲಾತಿಯು ಶೇ. 43ರಷ್ಟಿತ್ತು. ಆದರೆ ಇದು ಇಂದಿಗೆ ಶೇ. 97ಕ್ಕೆ ಮುಟ್ಟಿದೆ ಆದರೆ ಒಂದು ವರದಿಯ ಪ್ರಕಾರ 5 ವರ್ಷಗಳ ಕಲಿಕೆಯ ನಂತರ 10 ರಿಂದ 11 ವರ್ಷಗಳ ನಡುವಿನ ಮಕ್ಕಳ ಪೈಕಿ ಶೇ. 51 ಮಕ್ಕಳಿಗೆ ಎರಡನೇ ತರಗತಿಯ ಪುಸ್ತಕವನ್ನು ಓದಲು ಬರುವುದಿಲ್ಲ. ಹಾಗೆಯೇ ಕೇವಲ ಶೇ. 28 ಮಕ್ಕಳಿಗೆ ಮಾತ್ರ ಸುಲಭವಾದ ಭಾಗಾಕಾರ ಮಾಡಲು ಬರುತ್ತದೆ. ಇದಕ್ಕೆ ಕಾರಣ ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ. ಇಂದಿಗೂ ಸರಿಯಾದ ಕಟ್ಟಡಗಳಿಲ್ಲದ, ಶೌಚಾಲಯವಿಲ್ಲದ, ಶಿಕ್ಷಕರಿಲ್ಲದ ಶಾಲೆಗಳು ನಮ್ಮ ದೇಶದಲ್ಲಿ ಇವೆ ಎಂದರೆ ನಾವು ನಂಬಲೇ ಬೇಕು. 1/5ರಷ್ಟು ಶಾಲೆಗಳಲ್ಲಿ ಕೇವಲ ಏಕ ಶಿಕ್ಷಕರಿದ್ದಾರೆ, ಶೇ. 21 ಶಿಕ್ಷಕರ ಗೈರು ಹಾಜರಾತಿ, ಶೇ. 33 ವಿದ್ಯಾರ್ಥಿಗಳ ಗೈರು ಹಾಜರಾತಿಯಿದೆ. ಓIಖಿI ಆಯೋಗವೇ ಹೇಳುವ ಹಾಗೆ ದೇಶದಲ್ಲಿ ಸುಮಾರು ಹತ್ತು ಲಕ್ಷ ಶಿಕ್ಷಕರ ಕೊರತೆಯಿದೆ. ಇವೆಲ್ಲಕ್ಕೂ ಮೂಲ ಕಾರಣ ಸರಕಾರದ ನಿರ್ಲಕ್ಷ್ಯ. ಪ್ರಧಾನಿ ಮೋದಿಯವರು ಶಿಕ್ಷಣದ ಮೇಲಿನ ಖರ್ಚನ್ನು 2030ರ ಹೊತ್ತಿಗೆ ದೇಶ ಜಿಡಿಪಿಯ ಶೇ. 20ರಷ್ಟು ಮಾಡಲಾಗುತ್ತದೆೆ ಎಂದು ಘೋಷಿಸಿದ್ದರು. ಆದರೂ ಸರಕಾರ ಇಂದು ಕೇವಲ ಜಿಡಿಪಿಯ ಶೇ. 3ರಷ್ಟು ಮಾತ್ರ ಶಿಕ್ಷಣದ ಮೇಲೆ ವ್ಯಯ ಮಾಡುತ್ತಿದೆ. ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದ ಒಟ್ಟು ಹಣದ ಪೈಕಿ ಶೇ. 56ರಷ್ಟನ್ನು ಮೋದಿಯವರ ಜಾಹೀರಾತಿಗೆ ಬಳಸಲಾಗಿದೆ ಎನ್ನಲಾಗಿದೆ.

ಸಂವಿಧಾನದ ಅನುಚ್ಛೇದ 21ಎ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದೆ. ಆದರೆ ಅದು ಇನ್ನೂ ಸರಕಾರದ ಕರ್ತವ್ಯವಾಗದೆ ಉಳಿದಿದೆ. ಆಕ್ಸ್ಸ್ಫಾಮ್ ಪ್ರಕಾರ ಶಾಲೆಯಿಂದ ದೂರ ಉಳಿದಿರುವ 60 ಲಕ್ಷ ಮಕ್ಕಳ ಪೈಕಿ ಶೇ. 75 ಮಕ್ಕಳು ದಲಿತ (ಶೇ. 32.4), ಮುಸ್ಲಿಮ್ (ಶೇ. 25.7), ಆದಿವಾಸಿ(ಶೇ. 16.6) ಮಕ್ಕಳಾಗಿದ್ದಾರೆ. ಇನ್ನು ಶಿಕ್ಷಣದ ಜವಾಬ್ದಾರಿ ಹೊರಬೇಕಿದ್ದ ಸರಕಾರವು ಸುಮಾರು ಶೇ. 40 ವಿಶ್ವವಿದ್ಯಾನಿಲಯಗಳು ಹಾಗೂ ಶೇ. 78 ಕಾಲೇಜುಗಳನ್ನು ಖಾಸಗಿಯವರ ಹಿಡಿತಕ್ಕೆ ನೀಡಿದೆ! ಇದರ ಪರಿಣಾಮ ಇಂದು ಕಾಲೇಜಿಗೆ ಹೋಗುವ ಯುವಕರ ಪೈಕಿ ಕೇವಲ ಶೇ. 12 ದಲಿತ, ಶೇ. 4 ಆದಿವಾಸಿ ಯುವಕರಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖಾಂತರವೇ ಸರಕಾರದೊಳಗೆ ಪ್ರಜಾಪ್ರಭುತ್ವ ವಿರೋಧಿಗಳು ಪ್ರವೇಶಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಧ್ವಂಸದ ಕೆಲಸವನ್ನು ಪ್ರಾರಂಭಿಸಿದ್ದಾರೆ. ‘ಇಕನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್’ನ 2019ರ ವರದಿಯು ಭಾರತವನ್ನು ‘‘ದೋಷಪೂರಿತ ಪ್ರಜಾಪ್ರಭುತ್ವ’’ ಎಂದು ವರದಿ ಮಾಡಿದೆ, ಹಾಗೆಯೇ ‘ಫ್ರೀಡಮ್ ಇನ್ದಿ ವರ್ಲ್ಡ್’ನ 2020ರ ವರದಿಯು ಜಗತ್ತಿನ 195 ದೇಶಗಳ ಪೈಕಿ ಭಾರತಕ್ಕೆ 83ನೇ ರ್ಯಾಂಕ್ ನೀಡಿ ‘ಐeಚಿsಣ ಈಡಿee ಜemoಛಿಡಿಚಿಛಿies’ ಪಟ್ಟಿಯಲ್ಲಿ ಸೇರಿಸಿದೆ! ಒಟ್ಟು ಭಾರತವು ಇಂದು ಎಲ್ಲಾ ಕ್ಷೇತ್ರದಲ್ಲೂ ತೀವ್ರ ಕುಸಿತವನ್ನು ಕಾಣುತ್ತಿದೆ.

ಆಕ್ಸ್ಫಾಮ್ 2023ರ ‘ಸರ್ವೈವೆಲ್ ಆಫ್ ದಿ ರಿಚೆಸ್ಟ್’’ ಎಂಬ ಶೀರ್ಷಿಕೆಯಿಂದ ಹೊರಬಂದ ವರದಿಯ ಪ್ರಕಾರ ದೇಶದ ಶೇ. 10 ಜನಸಂಖ್ಯೆಯು ದೇಶದ ಶೇ. 70 ಆಸ್ತಿಯನ್ನು ಹೊಂದಿದೆ. 2017ರಲ್ಲಿ ದೇಶದಲ್ಲಿ ಸೃಷ್ಟಿಯಾದ ಆಸ್ತಿಯ ಶೇ. 73 ಆಸ್ತಿಯು ಕೇವಲ ಶೇ. 1 ಇರುವ ಶ್ರೀಮಂತರ ಪಾಲಾದರೆ, ದೇಶದ 67 ಕೋಟಿ ಬಡ ಜನರ ಆಸ್ತಿಯಲ್ಲಿ ಕೇವಲ ಶೇ. 1ರಷ್ಟು ಏರಿಕೆಯಾಗಿದೆ.

ಭಾರತದಲ್ಲಿ 2000 ಇಸವಿಯಲ್ಲಿ ಕೇವಲ 9 ಜನ ಬಿಲಿಯಾಧೀಶ ಶ್ರೀಮಂತರಿದ್ದರು. ಆದರೆ ಅದು 2017ರ ಹೊತ್ತಿಗೆ 101ಕ್ಕೆ ಏರಿಕೆಯಾದರೆ ಅದು 2023 ಕ್ಕೆ 166ಕ್ಕೆ ಬಂದು ನಿಂತಿದೆ. ಕಳೆದ ಒಂದು ದಶಕದಲ್ಲಿ ದೇಶದ 100 ಶ್ರೀಮಂತರ ಆಸ್ತಿಯು ರೂ. 54.12 ಲಕ್ಷ ಕೋಟಿಯಷ್ಟಾಗಿದೆ. ಅದು ಕೇಂದ್ರ ಸರಕಾರದ ಬಜೆಟ್ನಷ್ಟು ಹಣವೆಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇ ವರದಿಯ ಪ್ರಕಾರ ಒಬ್ಬ ಸಾಧಾರಣ ಗ್ರಾಮೀಣ ಭಾರತೀಯನು ದೇಶದ ಪ್ರತಿಷ್ಠಿತ ಕಂಪೆನಿಯ ಉನ್ನತ ಹುದ್ದೆಯ ಉದ್ಯೋಗಿಯ ವೇತನದಷ್ಟು ದುಡಿಯಲು ಅವನಿಗೆ 941 ವರ್ಷಗಳು ಬೇಕಾಗುವುದಂತೆ ! ಇದರ ಪರಿಣಾಮ ದೇಶದ ಬಹುಸಂಖ್ಯಾತ ಜನರ ಅಪೌಷ್ಟಿಕತೆ, ಸಾಲ, ಬಡತನ, ಅನಕ್ಷರತೆ, ಸಾವು ಮತ್ತು ಇನ್ನಿತರ ಸಮಸ್ಯೆಗಳು ಹೆಚ್ಚಾಗಿವೆ.

ಕೋವಿಡ್- 19ರ ಪೂರ್ವದಲ್ಲಿ ಕೇಂದ್ರ ಸರಕಾರವು ಶೇ. 30 ಇದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆೆ ಇಳಿಸಿತು. ಜೊತೆಗೆ ಹೊಸದಾಗಿ ಪ್ರಾರಂಭಗೊಂಡ ಕಂಪೆನಿಗಳಿಗೆ ಶೇ. 15 ತೆರಿಗೆಯನ್ನು ವಿಧಿಸಿದ ಪರಿಣಾಮ ದೇಶಕ್ಕೆ ರೂ. 1.84 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ತಮ್ಮ ಆದಾಯದ ಮೇಲೆ ದೇಶದ ಕೆಳ ಹಂತದ ಶೇ. 50 ಜನರು ಮೇಲಿನ ಹಂತದ ಶೇ. 10 ಜನರಿಗಿಂತ ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಯನ್ನು ಪಾವತಿಸುತ್ತಾರೆ. ಆದರೆ ವಾಟ್ಸ್ಆ್ಯಪ್ ಯುನಿವರ್ಸಿಟಿಯ ಆರ್ಥಿಕ ತಜ್ಞರ ಪ್ರಕಾರ ಇವರು ಯಾರೂ ತೆರಿಗೆ ಕಟ್ಟುವುದಿಲ್ಲ!

ಸರಕಾರಗಳು ಹೊಸದಾಗಿ ಉದ್ಯೋಗ ಸೃಷ್ಟಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಆದರೆ ಇರುವ ಉದ್ಯೋಗಗಳನ್ನು ನಾಶ ಮಾಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ. ಸರಕಾರಿ ಕ್ಷೇತ್ರದಲ್ಲಿ ಇರುವ ಉದ್ಯೋಗಗಳನ್ನು ಕಡಿತಗೊಳಿಸಿ ಜನರ ಬದುಕಿಗೆ ಕೊಳ್ಳಿ ಇಡಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲೇ 2020-21ರ ನಡುವೆ ಸುಮಾರು 754 ಕೈಗಾರಿಕೆಗಳನ್ನು ಮುಚ್ಚಿದ ಪರಿಣಾಮ ಸುಮಾರು 46,000 ಜನ ಉದ್ಯೋಗವನ್ನು ಕಳೆದು ಕೊಂಡಿದ್ದಾರೆ. ಕೇಂದ್ರ ಸರಕಾರದ ನೋಟು ಅಮಾನ್ಯದ ಪರಿಣಾಮ ದೇಶದಲ್ಲಿ ಸುಮಾರು 50 ಲಕ್ಷ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ!. ಇದು ‘ಅಚ್ಛೇ ದಿನ್’.

ಇಂದು ಸರಕಾರಗಳ ಬಡವರ ವಿರೋಧಿ ಮತ್ತು ಉಳ್ಳವರ ಪರವಾದ ನೀತಿಗಳು ಮತ್ತೆ ನಮ್ಮ ದೇಶಕ್ಕೆ ದೊಡ್ಡ ಗಂಡಾಂತರವನ್ನು ತಂದೊಡ್ಡುತ್ತಿವೆ. ಹಾಗಾಗಿ ಆದಷ್ಟು ಬೇಗ ಜನರು ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ತಮ್ಮದೇ ದೇಶದಲ್ಲಿ ತಮ್ಮದೇ ಜನರಿಂದ ಗುಲಾಮಗಿರಿಗೆ ನೂಕಲ್ಪಡುತ್ತೇವೆ. ಸರಕಾರಗಳಿಗೆ ದೇಶ ಅರ್ಥಾತ್ ಜನರ ಒಳಿತು ಮುಖ್ಯವಾದರೆ, ಒಂದಿಷ್ಟು ಸುಧಾರಣೆಗಳನ್ನು ತಂದರೆ ಎಲ್ಲರೂ ಬದುಕಬಹುದು. ಸರಕಾರವು ಬಡವರ ರಕ್ತ ಹೀರುವ ಬದಲು, ಶ್ರೀಮಂತರಿಂದ ಒಂದಿಷ್ಟುದುಡ್ಡು ವಸೂಲು ಮಾಡಿದರೆ ಇಬ್ಬರಿಗೂ ಒಳಿತಾಗುತ್ತದೆ.

1. ಭಾರತದ ಬಿಲಿಯಾಧೀಶ ಶ್ರೀಮಂತರ ಮೇಲೆ ಶೇ. 1 ಆಸ್ತಿ ತೆರಿಗೆಯನ್ನು ವಿಧಿಸಿದರೆ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ಮೂರು ವರ್ಷಗಳ ಕಾಲ ರೂ. 36,960 ನೀಡಬಹುದು.

2. ದೇಶದ ಹತ್ತು ಟಾಪ್ ಬಿಲಿಯಾಧೀಶರಿಗೆ ಶೇ. 5 ತೆರಿಗೆ ವಿಧಿಸಿದರೆ ಬುಡಕಟ್ಟು ಪ್ರದೇಶದ ಎಲ್ಲಾ ಆದಿವಾಸಿಗಳಿಗೂ 5 ವರ್ಷಗಳ ಕಾಲ ಆರೋಗ್ಯ ಸೇವೆಗಳನ್ನು ನೀಡಬಹುದು.

3. ದೇಶದ ಬಿಲಿಯಾಧೀಶರಿಗೆ ಶ್ರೀಮಂತರ ಮೇಲೆ ಶೇ. 2 ತೆರಿಗೆ ವಿಧಿಸಿದರೆ ದೇಶದಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಮೂರು ವರ್ಷಗಳ ಕಾಲ ತಡೆಯಬಹುದು.

4. ದೇಶದ 100 ಬಿಲಿಯಾಧೀಶ ಶ್ರೀಮಂತರ ಮೇಲೆ ಶೇ. 2.5 ಅಥವಾ ಟಾಪ್ 10 ಬಿಲಿಯಾಧೀಶ ಶ್ರೀಮಂತರ ಮೇಲೆ ಶೇ. 5 ತೆರಿಗೆ ವಿಧಿಸಿದರೆ ಸುಮಾರು ರೂ. 1.4 ಲಕ್ಷ ಕೋಟಿ ಸಹಾಯದಿಂದ ಶಾಲೆಯಿಂದ ದೂರ ಉಳಿದಿರುವ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಬಹುದು

ಆಕ್ಸ್ಫಾಮ್ ಪ್ರಕಾರ ಮೇಲಿನ ರೀತಿಯಲ್ಲಿ ಸರಕಾರವು ಬಿಲಿಯಾಧೀಶ ಶ್ರೀಮಂತರ ಮೇಲೆ ಸಣ್ಣ ಪ್ರಮಾಣದ ತೆರಿಗೆ ಹೇರಿದರೆ ದೊಡ್ಡ ಪ್ರಮಾಣದ ಬದಲಾವಣೆ ತರಬಹುದು. ಆದರೆ ನಾವು ಆಯ್ಕೆ ಮಾಡಿರುವ ಸರಕಾರವು ಇದನ್ನು ಮಾಡಲು ಸಾಧ್ಯವೇ? ಯಾಕೆಂದರೆ ಅವರು ಶ್ರೀಮಂತರಿಂದ ಶ್ರೀಮಂತರಿಗೋಸ್ಕರ ಪ್ರಜೆಗಳ ಮುಖಾಂತರ ಆಯ್ಕೆಯಾದವರು ಅಲ್ಲವೇ? ಇದು ಪ್ರಜಾಪ್ರಭುತ್ವವೋ ಶ್ರೀಮಂತರ ಪ್ರಭುತ್ವವೋ? ಒಮ್ಮೆ ಯೋಚಿಸಿ?

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ಹರಿರಾಮ್ ಎ

contributor

Similar News