ಕಾಂಗ್ರೆಸ್‌ನಲ್ಲಿ ‘ಭಿನ್ನ’ ಮಾತು

Update: 2023-07-29 05:22 GMT

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ ಕೇವಲ ಎರಡು ತಿಂಗಳು ಕಳೆದಿವೆ. ಸರಕಾರದ ಕಾರ್ಯವೈಖರಿ ಬಗ್ಗೆ ಟೀಕೆ-ಟಿಪ್ಪಣಿ ಮಾಡಲು ಇದು ಸಕಾಲವಲ್ಲ. ಕನಿಷ್ಠ ಆರೂ ತಿಂಗಳಾದರೂ ಕಾಲಾವಕಾಶ ನೀಡಬೇಕು. ಗ್ಯಾರಂಟಿಗಳಿಗೆ ಹಣ ಹೊಂದಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರಕಾರ ಗಂಭೀರವಾಗಿ ಯತ್ನಿಸುತ್ತಿದೆ. ದಾಖಲೆ ಬಜೆಟ್‌ಗಳನ್ನು ಮಂಡಿಸಿ ಅಪಾರ ಅನುಭವ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಸರಕಾರ ನೀಡಲು ಪ್ರಾಮಾಣಿಕವಾಗಿ ಯತ್ನಿಸುತ್ತಿರುವುದು ಎದ್ದು ಕಾಣುತ್ತಿದೆ. ಆದರೆ ಬಿಜೆಪಿ-ಜೆಡಿಎಸ್ ಮುಖಂಡರು ಕಾಂಗ್ರೆಸ್ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದಾರೆ. ಹಾಗೆ ನೋಡಿದರೆ, ಬಜೆಟ್ ಅಧಿವೇಶನದಲ್ಲಿ ಮತ್ತು ನಂತರವೂ ಉಭಯ ಸದನಗಳಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಸಾಧ್ಯವಾಗಿಲ್ಲ. ಅಧಿಕೃತ ವಿರೋಧ ಪಕ್ಷ ನಾಯಕ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ ಎಂಬ ಕಟು ಸತ್ಯ ಗೊತ್ತಿದ್ದರೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಮುಖಂಡರಿಗಿಂತಲೂ ಹೆಚ್ಚು ಸದ್ದು ಮಾಡಿದರು.

ಲೋಕಸಭಾ ಚುನಾವಣೆಗೆ ಕಡಿಮೆ ಕಾಲಾವಕಾಶ ಇರುವುದರಿಂದ, ದಕ್ಷಿಣ ಭಾರತದ ಏಕೈಕ ಕಾಂಗ್ರೆಸ್ ಸರಕಾರವನ್ನು ‘ಜನವಿರೋಧಿ’ ಎಂದು ಬಿಂಬಿಸಲು ಮತ್ತು ಅದರ ಲಾಭ ಪಡೆಯಲು ಬಿಜೆಪಿ-ಜೆಡಿಎಸ್ ಮುಖಂಡರು ತುದಿಗಾಲ ಮೇಲೆ ನಿಂತಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ‘ಮೋದಿ ಅಲೆ’ ಸೃಷ್ಟಿಸಲು ಹರಸಾಹಸ ಪಟ್ಟು ಹೀನಾಯವಾಗಿ ಸೋಲು ಕಂಡ ‘ಏಕಪಕ್ಷೀಯ’ ಮಾಧ್ಯಮಗಳು ಸಿದ್ದರಾಮಯ್ಯ ಸರಕಾರವನ್ನು ‘ವಿಲನ್’ ಮಾಡಲು ಅವಕಾಶಕ್ಕಾಗಿ ಕಾಯುತ್ತಿವೆ. 2023ರ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಬಿಜೆಪಿ-ಜೆಡಿಎಸ್ ಮುಖಂಡರಿಗಿಂತಲೂ ಹೆಚ್ಚು ಕಂಗೆಡಿಸಿದ್ದು ಸಂಘಪರಿವಾರದ ಮುಖಂಡರು ಮತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು. 2004ರ ವಿಧಾನಸಭೆ ಚುನಾವಣೆಯವರೆಗೂ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರ ಸಂಖ್ಯಾಬಲ 50ರ ಗಡಿ ದಾಟಿರಲಿಲ್ಲ. ಯಡಿಯೂರಪ್ಪ-ಅನಂತಕುಮಾರ್ ಅವರು ರೂಪಿಸಿದ ಸಾಮಾಜಿಕ ಸಮೀಕರಣದ ಫಲವಾಗಿ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 79 ಶಾಸಕರು ಗೆದ್ದು ಬರುವಂತಾಯಿತು. ಜನತಾ ಪರಿವಾರದ ವಿಘಟನೆಯ ಪರಿಣಾಮವಾಗಿ ಜನತಾದಳದ ರಮೇಶ್ ಜಿಗಜಿಣಗಿ, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ ಸೇರಿದಂತೆ ಹಲವು ಹಿರಿಯ ಮುಖಂಡರು ಬಿಜೆಪಿ ಸೇರಿಕೊಂಡರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರೂ ಬಿಜೆಪಿಗೆ ಬಲ ನೀಡಿದ್ದರು. ಯಡಿಯೂರಪ್ಪನವರ ಹಸಿರು ಶಾಲು-ರೈತ ನಾಯಕನ ಇಮೇಜು ಹಾಗೂ ಅನಂತಕುಮಾರ್ ಅವರ ಸಾಮಾಜಿಕ ಸಮೀಕರಣದ ತಂತ್ರಗಾರಿಕೆಯಿಂದ ಬಿಜೆಪಿ ಶಾಸಕ, ಸಂಸದರ ಸಂಖ್ಯೆ ದ್ವಿಗುಣಗೊಂಡಿತು. ಯಡಿಯೂರಪ್ಪ-ಅನಂತಕುಮಾರ್ ರಾಜ್ಯದಲ್ಲಿ ಬಿಜೆಪಿಯನ್ನು ಒಂದು ರಾಜಕೀಯ ಪಕ್ಷವನ್ನಾಗಿ ಬೆಳೆಸಿದರು. ಹಿಂದುತ್ವದ ಅಜೆಂಡಾ ಒಳವಿದ್ಯುತ್ತಿನಂತೆ ಹರಿಯುತ್ತಿತ್ತು. ಆದರೆ ಮುನ್ನೆಲೆಗೆ ಬಂದಿರಲಿಲ್ಲ. ಆ ಕಾರಣಕ್ಕೆ ಕಮ್ಯುನಿಷ್ಟ್ ಪಕ್ಷದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಬಿ. ಶಾಣಪ್ಪ ಬಿಜೆಪಿ ಸೇರಿದ್ದರು. 2008ರ ಹೊತ್ತಿಗೆ ಎಚ್.ಡಿ. ಕುಮಾರಸ್ವಾಮಿಯವರ ಕಾರಣಕ್ಕೆ ದುರಂತ ನಾಯಕನಾಗಿ ಹೊರ ಹೊಮ್ಮಿದ ಯಡಿಯೂರಪ್ಪ ಲಿಂಗಾಯತ ನಾಯಕರಾಗಿ ಮನ್ನಣೆ ಪಡೆದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿಗೆ 110 ಸ್ಥಾನಗಳು ಲಭಿಸಿದವು. ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ನಾಯಕನ ಇಮೇಜಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಹಿಂದುತ್ವದ ಅಜೆಂಡಾ ಆಗಲೂ ಮುನ್ನೆಲೆಗೆ ಬರಲಿಲ್ಲ. ಅಷ್ಟೊತ್ತಿಗೆ ಯಡಿಯೂರಪ್ಪ-ಅನಂತಕುಮಾರ್ ಸಂಬಂಧ ಹಳಸಿದ್ದರಿಂದ ಪರಸ್ಪರ ಗಾಯ ಮಾಡಿಕೊಂಡರು. 2013ರ ವಿಧಾನಸಭೆಯಲ್ಲಿ ಖುದ್ದು ಯಡಿಯೂರಪ್ಪನವರೇ ಬಿಜೆಪಿ ವಿರುದ್ಧ ತೊಡೆ ತಟ್ಟಿ ಆ ಪಕ್ಷದ ಶಾಸಕರ ಬಲ 40ಕ್ಕೆ ಕುಸಿಯುವಂತೆ ಮಾಡಿದ್ದರು.

v/s ಈ ಹಿಂದೆ ನಡೆದ ರಾಜ್ಯದಲ್ಲಿನ ಎಲ್ಲ ಚುನಾವಣೆಗಳು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇತ್ಯಾದಿ ಪಕ್ಷ ಮತ್ತು ನಾಯಕರ ಇಮೇಜ್ ಆಧರಿಸಿ ನಡೆದಿದ್ದವು. ಆದರೆ 2023ರ ವಿಧಾನ ಸಭಾ ಚುನಾವಣೆಯನ್ನು ಕರ್ನಾಟಕದ ಸಂಘ ಪರಿವಾರದ ಮುಖಂಡರು ಮೋದಿ ಕೇಂದ್ರಿತ ಹಾಗೂ ಹಿಂದೂ-ಮುಸ್ಲಿಮ್ ಧ್ರುವೀಕರಣದ ಮೂಲಕ ಗೆಲ್ಲಲು ತಂತ್ರಗಾರಿಕೆ ಹೆಣೆದಿದ್ದರು. ಯಡಿಯೂರಪ್ಪ ಅವರ ನಾಯಕತ್ವದ ಭಾರದಿಂದ ಹಾಗೂ ಅತಿಯಾದ ಲಿಂಗಾಯತ ಸಮುದಾಯದ ಮೇಲಿನ ಅವಲಂಬನೆಯಿಂದ ಕಳಚಿಕೊಳ್ಳಬೇಕಾಗಿತ್ತು. ವಯಸ್ಸಿನ ನೆಪ ಮುಂದು ಮಾಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಸೂತ್ರದ ಗೊಂಬೆಯಂತಿರುವ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಹಿಂದುತ್ವದ ಅಜೆಂಡಾದಂತೆ ಸರಕಾರ ನಡೆಸಿದ ಸಂಘ ಪರಿವಾರದ ಮುಖಂಡರು ಜನತಂತ್ರವೇ ನಾಚುವಂತೆ ಕಾಯ್ದೆ ರೂಪಿಸಿದರು. ಏಕಕಾಲಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೂ, ನಾಡಿನ ಎಲ್ಲ ಸಮುದಾಯದ ಮತದಾರರಿಗೂ ಅಪಮಾನ ಮಾಡಿದರು. ಹಿಜಾಬ್, ಹಲಾಲ್, ಜಟ್ಕಾ, ಟಿಪ್ಪು, ಉರಿಗೌಡ-ನಂಜೇಗೌಡ, ಲವ್ ಜಿಹಾದ್, ಹಿಂದುತ್ವ ಚುನಾವಣಾ ವಿಷಯಗಳಾದವು. 2023ರ ವಿಧಾನ ಸಭಾ ಚುನಾವಣೆ ಅಕ್ಷರಶಃ ಕರ್ನಾಟಕ ಆರೆಸ್ಸೆಸ್ ಎನ್ನುವಂತಾಯಿತು. ಆರೆಸ್ಸೆಸ್ ಸಿದ್ಧಾಂತ ಗೆಲ್ಲಿಸಿಕೊಳ್ಳಲು ಮೋದಿ ಮುಖ ತೋರಿಸಿದರು.

INDIA ಕರ್ನಾಟಕದ ಪ್ರಜ್ಞಾವಂತ ಮತದಾರ; ಬೀದರ್‌ನಿಂದ-ಚಾಮರಾಜ ನಗರದವರೆಗೆ ಒಂದೇ ತೀರ್ಪು ನೀಡಿದರು. ಆರೆಸ್ಸೆಸ್ ಪ್ರಣೀತ ಹಿಂದುತ್ವ ಮತ್ತದರ ಸೂತ್ರದ ಗೊಂಬೆಯಂತಿರುವ ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಿದರು. ಕರ್ನಾಟಕವನ್ನು ಗೆಲ್ಲಿಸಿದರು. ಈ ಚುನಾವಣೆಯಲ್ಲಿ ಗೆದ್ದಿದ್ದು ಕಾಂಗ್ರೆಸ್ ಮಾತ್ರವಲ್ಲ ಕರ್ನಾಟಕ ಗೆದ್ದಿದೆ. ಸೋತಿದ್ದು ಬಿಜೆಪಿಯಲ್ಲ ಸಂಘ ಪರಿವಾರದ ಮತೀಯವಾದಿ ಸಿದ್ಧಾಂತ. ಮೋದಿ ಅಲೆ ಸೃಷ್ಟಿಯಾಗುತ್ತದೆ, ಹಿಂದೂ-ಮುಸ್ಲಿಮ್ ಧ್ರುವೀಕರಣ ಆಗುತ್ತದೆ ಎಂದು ಬಲವಾಗಿ ನಂಬಿದ ಬಿ.ಎಲ್. ಸಂತೋಷ್ ಅವರು ‘ಮುಖ್ಯಮಂತ್ರಿಗಳನ್ನು ಮತ್ತೆ ಮತ್ತೆ ಬದಲಾಯಿಸುವುದೇ ಬಿಜೆಪಿಯ ಶಕ್ತಿ’ ಎಂದು ಜನತಂತ್ರಕ್ಕೆ ಅಪಮಾನ ಮಾಡುವ ಬಗೆಯಲ್ಲಿ ಅತ್ಯಂತ ದಾರ್ಷ್ಟದಿಂದ ಹೇಳುತ್ತಿದ್ದರು. ಕರ್ನಾಟಕದ ಮತದಾರರು ಭಾರತೀಯ ಜನತಾ ಪಕ್ಷವನ್ನು ಬದಲಾಯಿಸಿದರು. ಇಷ್ಟೆಲ್ಲ ಇತಿಹಾಸ ಕೆದಕಲು ಕಾಂಗ್ರೆಸ್‌ನ ಹಿರಿಯ ಮುಖಂಡ ಗೌರವಾನ್ವಿತ ಬಿ.ಕೆ. ಹರಿಪ್ರಸಾದ್ ಅವರ ಮಾತುಗಳು ಪ್ರೇರಣೆಯೊದಗಿಸಿದವು. ಬಿ.ಕೆ. ಹರಿಪ್ರಸಾದ್ ಅವರನ್ನು ನಾವೆಲ್ಲ ಅಪಾರವಾಗಿ ಗೌರವಿಸುತ್ತೇವೆ. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಅವರು ಇರಬೇಕಿತ್ತು ಎಂದು ಹಲವು ಜನ ಹಂಬಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ಹರಿಪ್ರಸಾದ್ ಅವರಿಗೆ ರಾಜಕೀಯ ಸಮೀಕರಣದ ತರ್ಕ ಚೆನ್ನಾಗಿಯೇ ಗೊತ್ತಿರುತ್ತದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯದಂತೆ ತತ್ವಾದರ್ಶಗಳು ಜನತಂತ್ರ ವ್ಯವಸ್ಥೆಯಲ್ಲಿ ಅಗತ್ಯವಾಗಿ ಪಾಲಿಸಬೇಕಾಗುತ್ತದೆ. ಇಂತಹ ತತ್ವಾದರ್ಶಗಳು ಕೆಲವೊಮ್ಮೆ ಪ್ರತಿಭಾವಂತರನ್ನು, ಸಮರ್ಥರನ್ನು ಬಲಿ ಪಡೆಯಲೂ ಬಳಸಲಾಗುತ್ತದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇಂತಹ ಬಲಿಯ ಹತ್ತಾರು ನಿದರ್ಶನಗಳು ಕರ್ನಾಟಕವನ್ನು ಕೋಮುವಾದಿ ಪ್ರಯೋಗ ಶಾಲೆಯನ್ನಾಗಿಸಲು ಪ್ರಯತ್ನಿಸ್ತುತಿರುವ ಇಂತಹ ವಿಷಮಗಳಿಗೆಯಲ್ಲಿ ಹರಿಪ್ರ್ರಸಾದ್ ಅವರಂತಹ ಮುತ್ಸದ್ದಿ ರಾಜಕಾರಣಿಯ ಬಾಯಲ್ಲಿ ‘ಭಿನ್ನ’ ಮಾತು ಬರಬಾರದಿತ್ತು. ಕರ್ನಾಟಕದ ಮತದಾರರು ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸೌಹಾರ್ದ ಪರಂಪರೆ ಉಳಿಸಲು ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳನ್ನು ನೀಡಿ ಸರಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆ ಮತ್ತು ಪಕ್ಷದ ಹೈಕಮಾಂಡ್ ಅಳೆದು ತೂಗಿ ಅನುಭವಿ ನಾಯಕ ಸಿದ್ದರಾಮಯ್ಯನವರನ್ನು ‘ಮುಖ್ಯಮಂತ್ರಿ’ ಸ್ಥಾನದಲ್ಲಿ ಕೂರಿಸಿದೆ. ಸಿದ್ದರಾಮಯ್ಯನವರೂ ಶಕ್ತಿ ಮೀರಿ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದಾರೆ. ಪ್ರತಿ ಪಕ್ಷಗಳ ರಚನಾತ್ಮಕವಲ್ಲದ ಟೀಕೆಗಳನ್ನು ಎದುರಿಸಿ ಮುನ್ನಡೆಯುತ್ತಿದ್ದಾರೆ ಅಷ್ಟಕ್ಕೂ ಸಿದ್ದರಾಮಯ್ಯನವರು ಜನನಾಯಕ. ಜನನಾಯಕರನ್ನು ಬೇಕಾದಾಗ ಪ್ರತಿಷ್ಠಾಪಿಸುವುದು ಬೇಡವಾದಾಗ ಕಿತ್ತೆಸೆಯುವುದು ರಾಷ್ಟ್ರೀಯ ಪಕ್ಷಗಳು ಸಹಜ ನಡೆ ಎಂದು ಕೊಂಡಿರಬಹುದು. ಆದರೆ ಪರಿಣಾಮದ ದೃಷ್ಟಿಯಿಂದ ಆ ನಡೆ ಒಳ್ಳೆಯದಲ್ಲ ಎಂಬ ಮಾತಿಗೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ.

1978ರಲ್ಲಿ ಮತ್ತೆ ಜನಾದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಅವರು 1983ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ನೆಲ ಕಚ್ಚುತ್ತಿರಲಿಲ್ಲವೇನೋ? 1989ರಲ್ಲಿ ಕರ್ನಾಟಕದ ಮತದಾರ ಕಾಂಗ್ರೆಸ್ ಪಕ್ಷಕ್ಕೆ 178ಸ್ಥಾನಗಳನ್ನು ನೀಡಿ ಐತಿಹಾಸಿಕ ಬೆಂಬಲ ವ್ಯಕ್ತಪಡಿಸಿದ್ದ. 1989ರಿಂದ 1994ರ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದರ ಫಲವಾಗಿ ಕಾಂಗ್ರೆಸ್ ಪಕ್ಷದ ಶಾಸಕರ ಬಲ 34ಕ್ಕೆ ಇಳಿದಿತ್ತು. ಇತ್ತೀಚಿನ ನಿದರ್ಶನ; ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲಾಯಿತು. ನಂತರದ ಚುನಾವಣೆಯಲ್ಲಿನ ಫಲಿತಾಂಶ ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ‘‘ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸುವುದೂ ಗೊತ್ತು, ಕೆಳಗಿಳಿಸುವುದೂ ಗೊತ್ತು’’ ಎಂಬಂತಹ ಮಾತುಗಳನ್ನು ಬಿ.ಕೆ.ಹರಿಪ್ರಸಾದ್ ಮಾತ್ರವಲ್ಲ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿಯವರ ಬಾಯಿಂದಲೂ ಬರಬಾರದು. ಇಂತಹ ವಿಷಯಗಳಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಕ್ತ ಕಂಠದಿಂದ ಶ್ಲಾಘಿಸಬೇಕು. ‘ಭಿನ್ನ’ ಮಾತು ಅವರ ಬಾಯಿಯಿಂದ ಬರುವುದೇ ಇಲ್ಲ. ಪತ್ರಕರ್ತರ ಚಿತಾವಣೆ ಎಷ್ಟೇ ಇದ್ದರೂ ಮಲ್ಲಿಕಾರ್ಜುನ ಖರ್ಗೆಯವರು ಒಡಕಿನ ಮಾತು ಆಡಿದ ನಿದರ್ಶನ ಸಿಗುವುದೇ ಇಲ್ಲ. ಕರ್ನಾಟಕದ ಮತದಾರರು ಸಿದ್ದರಾಮಯ್ಯನವರ ಸರಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ, ಸಚಿವರು ಸೇರಿದಂತೆ ಸರಕಾರದ ಭಾಗವಾಗಿರುವ ಯಾರೇ ಹಾದಿ ತಪ್ಪಿದರೆ, ಸ್ವಜನ ಪಕ್ಷಪಾತ, ದುರಹಂಕಾರದ ನಡವಳಿಕೆ ಕಂಡುಬಂದರೆ ಪ್ರಶ್ನಿಸಲು, ಸರಿಪಡಿಸಲು ಹತ್ತಾರು ವೇದಿಕೆಗಳಿವೆ. ಮತೀಯ ಶಕ್ತಿಗಳು ಹೊಂಚುಹಾಕಿ ಕಾಯುತ್ತಿರುವಾಗ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರ ನಡೆನುಡಿಯಲ್ಲಿ ಘನತೆ ಇರುವುದು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರಿಂದ ರಾಜ್ಯದ ಕಾಂಗ್ರೆಸ್‌ನ ಎಲ್ಲರೂ ತ್ಯಾಗದ ಪಾಠ ಕಲಿಯಬೇಕಾಗಿದೆ. ಕೂಟವನ್ನು ಬಲವಾದ ಪರ್ಯಾಯ ಶಕ್ತಿಯಾಗಿ ರೂಪಿಸುತ್ತಿರುವ ಈ ಹೊತ್ತಿನಲ್ಲಿ ‘ಭಿನ್ನ’ ಮಾತಿಗೆ ಅವಕಾಶವೇ ಇರಬಾರದು. ಕರ್ನಾಟಕವನ್ನು ಮೊದಲು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳಿ. ಸಮೃದ್ಧ ಕರ್ನಾಟಕದ ಕನಸು ಸಾಕಾರಗೊಳಿಸಿ. ‘ಭಿನ್ನ’ ಮಾತಿನಿಂದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗುತ್ತದೆ. ಕರ್ನಾಟಕದ ಮತದಾರರು ಪ್ರಜ್ಞಾವಂತರು ಎಂಬುದು ಕಾಂಗ್ರೆಸ್‌ನ ಪ್ರತಿಯೊಬ್ಬರೂ ನೆನಪಿಡಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News